ನುಡಿನಮನ| ಪಶ್ಚಿಮಘಟ್ಟಗಳ ಇಂಚಿಂಚೂ ಅಧ್ಯಯನ ಮಾಡಿದ, ʼಮರೆಯಲಾಗದ, ಮರೆಯಬಾರದʼ ಮಾಧವ ಗಾಡ್ಗೀಳ್!
x
ಮಾಧವ ಗಾಡ್ಗೀಳ್

ನುಡಿನಮನ| ಪಶ್ಚಿಮಘಟ್ಟಗಳ ಇಂಚಿಂಚೂ ಅಧ್ಯಯನ ಮಾಡಿದ, ʼಮರೆಯಲಾಗದ, ಮರೆಯಬಾರದʼ ಮಾಧವ ಗಾಡ್ಗೀಳ್!

ಅನೇಕ ನಿರಾಶೆಗಳನ್ನೆದುರಿಸಿಯೂ ತಮ್ಮ ನಿಷ್ಠೆ ಬದಲಿಸದೆ ವಿಜ್ಞಾನವನ್ನೇ ನಂಬಿ ಸತ್ಯ ಹೇಳುತ್ತ ನಡೆದವರು ಪ್ರೊ. ಮಾಧವ ಗಾಡ್ಗೀಳರು. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯನ್ಕೂ ಗಾಡ್ಗೀಳರು ಕೈಗೊಂಡಿದ್ದರು.


Click the Play button to hear this message in audio format

ಎರಡು ವರ್ಷಗಳ ಹಿಂದೆ ʻಪ್ರೊ. ಗಾಡ್ಗೀಳರ ಜೀವನಚರಿತ್ರೆ ಬಂದಿದೆ, ಕನ್ನಡಕ್ಕೆ ಮಾಡೋಣವೇ?ʼ ಅಣ್ಣ (ಖ್ಯಾತ ವಿಜ್ಞಾನ ಹಾಗೂ ಪರಿಸರ ಲೇಖಕ ಮತ್ತು ಹಿರಿಯ ಪತ್ರಕರ್ತ ನಾಗೇಶ ಹೆಗಡೆ) ಕೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಇನ್ನೂ ಮೂಲ ಇಂಗ್ಲಿಷ್ ಪುಸ್ತಕವನ್ನೂ ನೋಡದಿದ್ದ ನಾನು ಕಣ್ಮುಚ್ಚಿಕೊಂಡು ಒಪ್ಪಿಬಿಟ್ಟೆ. ಪುಸ್ತಕದ ಡಿಜಿಟಲ್ ಪ್ರತಿಯೂ ಬಂದು ಭಾಷಾಂತರವನ್ನು ಆರಂಭಿಸಿಯೇಬಿಟ್ಟೆ. ಕೆಲವೇ ದಿನಗಳಲ್ಲಿ ಪ್ರೊಫೆಸರರ ಸಹಿಯೊಂದಿಗೆ ಅವರ ಮೂಲ ಪುಸ್ತಕವೂ ಕೈಸೇರಿದಾಗ ಪುಳಕಗೊಂಡೆ.

ಡಾ. ಮಾಧವ ಗಾಡ್ಗೀಳರ ಪುಸ್ತಕವನ್ನು ಕನ್ನಡೀಕರಿಸಲು ಅಷ್ಟು ಉತ್ಸಾಹದಲ್ಲಿ ಒಪ್ಪಿಕೊಂಡಿದ್ದಕ್ಕೊಂದು ಹಿನ್ನೆಲೆ ಇತ್ತು. ಕೆಲ ವರ್ಷಗಳ ಹಿಂದೆ ಅವರು ಮತ್ತು ರಾಮಚಂದ್ರ ಗುಹಾ ರಚಿಸಿದ ʻಇಕಾಲಜಿ ಎಂಡ್ ಇಕ್ವಿಟಿʼ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾಗ ಪ್ರೊಫೆಸರರ ವಿಚಾರಗಳು ಅದೆಷ್ಟು ನೆಲಕ್ಕೆ ಹತ್ತಿರವಾಗಿದ್ದವು ಎಂಬುದನ್ನು ಕಂಡುಕೊಂಡಿದ್ದೆ. ದೊಡ್ಡ ದೊಡ್ಡ ವಿಜ್ಞಾನಿಗಳೆಲ್ಲ ಇವರಂತೆಯೇ ಮಣ್ಣಿಗೆ, ಜನರಿಗೆ ಹತ್ತಿರವಾಗಿದ್ದರೆ ನಮ್ಮ ಅಭಿವೃದ್ಧಿಯ ದಿಕ್ಕೇ ಬದಲಾಗುತ್ತಿತ್ತೇನೋ ಎಂದು ಅನಿಸಿದ್ದು ಅದೆಷ್ಟು ಬಾರಿಯೋ.

ನೆಲಕ್ಕೆ ಅಷ್ಟು ಹತ್ತಿರವಾಗಿದ್ದ ಪ್ರೊಫೆಸರ್ ಮಾಧವ ಧನಂಜಯ ಗಾಡ್ಗೀಳರು ಮೊನ್ನೆ ರಾತ್ರಿ 7-1-2026 ರಂದು ಭೂಮಿಯನ್ನು, ತಮ್ಮ ದೇಹವನ್ನು ತ್ಯಜಿಸಿದರು. ಇತ್ತೀಚೆಗಷ್ಟೇ ಪತ್ನಿ ಪ್ರೊ. ಸುಲೋಚನಾರನ್ನು ಕಳೆದುಕೊಂಡಿದ್ದ ಅವರನ್ನೊಮ್ಮೆ ಭೇಟಿ ಆಗಿಬರಬೇಕೆಂದು ಅಂದುಕೊಳ್ಳುತ್ತಿದ್ದಂತೆಯೇ ಪ್ರೊಫೆಸರರ ಸಾವಿನ ಸುದ್ದಿ ಬಡಿದು ಅಘಾತವೇ ಉಂಟಾಯಿತು. ನಮ್ಮ ಪಶ್ಚಿಮಘಟ್ಟಗಳ ಇಂಚಿಂಚನ್ನೂ ಅಧ್ಯಯನ ಮಾಡಿ ಅದನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ರಾಜಿಯಿಲ್ಲದ ನಿಷ್ಠೆ ತೋರಿಸಿದ್ದ ಮನುಷ್ಯನನ್ನು ಕಾಣುವ ಅವಕಾಶ ಇಲ್ಲದೇ ಹೋಯಿತೇ ಎಂದು ಹಳಹಳಿಸಿತು ಮನಸ್ಸು.

ಹಿಂದೊಮ್ಮೆ ನೋಡಿದ್ದೆ ಅವರನ್ನು. ನಿಮ್ಮ ಸುತ್ತಲಿನ ಜೀವವೈವಿಧ್ಯವನ್ನು ದಾಖಲಿಸಿ ಎಂದು ಶಿಕ್ಷಕರಿಗೆ, ಆಸಕ್ತರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿರುವಾಗ ನಾನೂ ಭಾಗವಹಿಸಿದ್ದೆ. ಒಂದೊಂದು ಹಳ್ಳಿಯ ಪರಿಸರದಲ್ಲಿ ಇರುವ ಪ್ರತಿಯೊಂದು ಜೀವಿಯನ್ನೂ ದಾಖಲಿಸಿಡಬೇಕು. ಅಪರೂಪದ ಯಾವುದೇ ಜೀವಿ ಇದ್ದರೆ ಅದು ಆ ಹಳ್ಳಿಗೆ, ಅಲ್ಲಿನ ಸಮುದಾಯಕ್ಕೆ, ಅಲ್ಲಿನ ಜೀವಿ ಪರಿಸರಕ್ಕೆ ಸೇರಿದ ಜೀವಿ, ಹೊರಗಿನವರು ಬಂದು ಮನಸೋ ಇಚ್ಛೆ ಅದರ ಮೇಲೆ ಅಧ್ಯಯನ ಮಾಡಿ ತಮ್ಮದೇನೋ ಎಂದು ಪೇಟೆಂಟ್ ಮಾಡಿಕೊಳ್ಳಬಾರದೆಂದು ಇಂತಹ ಒಂದು ಯೋಜನೆಯನ್ನು ಹಾಕಿ ತರಬೇತಿಗಳನ್ನು ನೀಡಿದ್ದರವರು. ಸ್ಥಳೀಯ ಪರಿಸರದ ಜೀವಿ, ಜನರು ಮತ್ತು ಜ್ಞಾನವನ್ನು ಒಟ್ಟಿಗೆ ನೋಡಿದ್ದ ಅವರು ಮೂರನ್ನೂ ಉಳಿಸಿಕೊಳ್ಳುವುದಕ್ಕಾಗಿ ಬಹುವಾಗಿ ಪರಿಶ್ರಮಿಸಿದ್ದರು.

ದೇಶದ ಸಾವಿರಾರು ಶಿಕ್ಷಕರಿಗೆ ತರಬೇತಿ ನೀಡಿ, ಪ್ರತಿ ಪಂಚಾಯತಿಯಲ್ಲೀ ಜೀವವೈವಿಧ್ಯ ದಾಖಲಾತಿ ಆಗಬೇಕೆಂದು ಪಂಚಾಯತಿ ರಾಜ್ ಕಾನೂನಿನಲ್ಲಿ ಅದನ್ನು ತಂದು ಪಂಚಾಯತಿಗಳಲ್ಲಿ ಜೀವವೈವಿಧ್ಯದ ರಜಿಸ್ಟರ್ ಇರಬೇಕೆಂದು ದೇಶಾದ್ಯಂತ ಕಾನೂನು ಮಾಡಿಸುವಲ್ಲಿ ಸಫಲರಾಗಿದ್ದರು.


ಮುಂದೆ ನಡೆದದ್ದು ಇತಿಹಾಸದ ಚೋದ್ಯ. ಸರಕಾರ, ಸರಕಾರಿ ಅಧಿಕಾರಿಗಳ ಕೈಗೆ ಸಿಕ್ಕ ಮೇಲೆ ಏನಾಗಬೇಕೋ ಅದೇ ಆಯಿತು. ಸ್ಥಳೀಯ ಜನರಿಂದ ಆಗಬೇಕಾಗಿದ್ದ ದಾಖಲಾತಿ ಪ್ರಕ್ರಿಯೆ ಯಾರ್ಯಾರಿಂದಲೋ ಆಗಿ, ಒಂದು ಪಂಚಾಯತಿಯಲ್ಲಿ ಮಾಡಿದ್ದು ನೂರಾರು ಕಡೆ ಕಾಪಿ ಪೇಸ್ಟ್ ಆಗಿ, ಇವೆಲ್ಲ ಗೊತ್ತಾಗಿ ಮಾಧವರು ಬಹುವಾಗಿ ನೊಂದಿದ್ದನ್ನು ಅವರ ʻಏರು ಘಟ್ಟದ ನಡಿಗೆʼಯಲ್ಲಿ ದಾಖಲಿಸಿದ್ದಾರೆ.

ಹೀಗೆ ಇದ್ದಿದ್ದನ್ನು ಸತ್ಯ ನಿಷ್ಠರಾಗಿ ಇದ್ದಂತೆ ಹೇಳಿದ ವಿಜ್ಞಾನಿಗೆ ಆದದ್ದು ಬಹುತೇಕ ಭ್ರಮನಿರಸನವೇ. ಆದರೆ ತಾವು ಮಾಡುತ್ತಿದ್ದ ಕೆಲಸದಲ್ಲೇ ನೆಮ್ಮದಿ, ಪ್ರೀತಿಯನ್ನು ಕಂಡಿದ್ದ ಮನುಷ್ಯ ಆತ ಒಂದು ಪ್ರತಿಷ್ಠಿತ ಸಂಸ್ಥೆಯ ಉನ್ನತ ಪ್ರೊಫೆಸರೆನಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ತಮ್ಮ ಅಧ್ಯಯನಗಳ ಸಮಯದಲ್ಲಿಯೇ ಅಭಿವೃದ್ಧಿ ಎನ್ನುವುದು ಸ್ಥಳೀಯ ಜನರನ್ನೊಳಗೊಂಡಿರಬೇಕು ಎನ್ನುವುದನ್ನು ಅರ್ಥಮಾಡಿಕೊಂಡರು. ಸ್ಥಳೀಯರನ್ನು ಸೇರಿಸಿಕೊಂಡಾಗ ಸ್ಥಳೀಯ ಇತರ ಜೀವಿಗಳ ಬಗೆಗೂ ಅವರು ಕಾಳಜಿ ತೋರಿಸುತ್ತಾರೆ, ಅದೇ ಜೀವವೈವಿಧ್ಯ ಸಂರಕ್ಷಣೆಗೆ ದಾರಿ ಎಂದು ನಂಬಿದ್ದರವರು. ಆ ಕಾರಣಕ್ಕಾಗಿಯೇ ಓಡಿಶಾದ ಚಿಲಿಕಾ ಸರೋವರದ ಅಧ್ಯಯನ ಮಾಡಿದ ಅವರು ಚಿಲಿಕಾದ ರಕ್ಷಣೆ ಆಗಬೇಕೆಂದರೆ ಸ್ಥಳೀಯರನ್ನು ಸೇರಿಸಿಕೊಂಡು ಏನೇನು ಆಗಬೇಕೆಂದು ಸಲಹೆಗಳನ್ನು ಸರಕಾರಕ್ಕೆ ನೀಡಿದ್ದರು. ಹೊರಗಿನವರು ಬಂದರೆ ಇದ್ದುದನ್ನು ದೋಚಿಕೊಂಡು ಹೋಗುತ್ತಾರೆಯೇ ಹೊರತು ಸ್ಥಳೀಯ ಜನರ ಉದ್ಧಾರ ಮಾಡುವುದಿಲ್ಲ ಎಂದು ದೃಢವಾಗಿ ನಂಬಿದ್ದರವರು.

ಪರಿಸರವೆಂದರೆ ಬರಿಯ ಕಾಡುಮೇಡು, ನೀರು, ಪಕ್ಷಿಗಳಷ್ಟೇ ಅಲ್ಲ, ಅಲ್ಲಿ ವಾಸಿಸುವ ಮನುಷ್ಯರೂ ಪರಿಸರದ ಭಾಗ ಅವರ ರಕ್ಷಣೆಯೂ ಆಗಬೇಕಿದೆ ಎಂದ ಈ ಮೆಥೆಮ್ಯಾಟಿಕಲ್ ಬಯೋಲಾಜಿಸ್ಟ್ ಕಾಡಿನಲ್ಲಿ ವಾಸಿಸುವ ಕುಣಬಿ, ಗೌಳಿ ಜನಾಂಗಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಅವರನ್ನು ಹುಡುಕಿಕೊಂಡು ಕಾಡುಗಳನ್ನು ಅಲೆದಿದ್ದಾರೆ, ಪರ್ವತವೇರಿದ್ದಾರೆ. ಕಾಡಿನೊಳಗಣ ಮನುಷ್ಯರು ಕಾಡಿನ ಒಂದು ಭಾಗವೇ, ಅವರನ್ನು ಕಾಡಿನೊಳಗಿನಿಂದ ಹೊರತೆಗೆಯಬಾರದು ಎಂದು ಪ್ರತಿಪಾದಿಸಿ ನಮ್ಮ ಪಶ್ಚಿಮಘಟ್ಟಗಳ ಬಗೆಗೂ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದರು. ಆದರೆ ಬೃಹತ್ ಯೋಜನೆಗಳ ಹಿತಾಸಕ್ತ ಗುಂಪು ಆ ವರದಿಯನ್ನು ಜನರಿಗೆ ತಲುಪಗೊಟ್ಟಿಲ್ಲ.

ಇಂಥದ್ದೊಂದು ಅಧ್ಯಯನ ವರದಿಯನ್ನು ತಯಾರಿಸಿಕೊಡಿ ಎಂದು ಜವಾಬ್ದಾರಿ ವಹಿಸಿಕೊಟ್ಟಿದ್ದ ಕೇಂದ್ರ ಮಂತ್ರಿಗಳೇ ಆ ಸ್ಥಾನದಿಂದ ವರ್ಗಾಯಿಸಲ್ಪಟ್ಟರೆಂದರೆ ಆ ಹಿತಾಸಕ್ತ ಗುಂಪುಗಳ ಜಾಲ ಎಷ್ಟು ದೊಡ್ಡದ್ದಿರಬಹುದು, ಅವರ ಕೈಗಳು ಅದೆಷ್ಟು ಉದ್ದವಿರಬಹುದು ಅಂದಾಜಾಗುತ್ತದೆ.

ಇಂತಹ ಅನೇಕ ನಿರಾಶೆಗಳನ್ನೆದುರಿಸಿಯೂ ತಮ್ಮ ನಿಷ್ಠೆಯನ್ನು ಬದಲಿಸದೆ ವಿಜ್ಞಾನವನ್ನೇ ನಂಬಿ ಸತ್ಯವನ್ನು ಹೇಳುತ್ತ ನಡೆದವರು ಪ್ರೊ. ಮಾಧವ ಗಾಡ್ಗೀಳರು. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಗೆ ಇವರ ಅಧ್ಯಯನಗಳೇ ದೊಡ್ಡ ಬಲವಾಗಿತ್ತಲ್ಲದೇ ಪಾದಯಾತ್ರೆಯಲ್ಲಿ ಕೂಡ ಮಾಧವ ಗಾಡ್ಗೀಳರು ಭಾಗವಹಿಸಿದ್ದರು. ಇಂದು ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆ, ರಸ್ತೆ ಅಗಲೀಕರಣ, ನದಿಗಳನ್ನು ತಿರುಗಿಸುವುದು, ಪಂಪ್ಡ್ ಸ್ಟೋರೇಜ್ ಎಂದು ನೂರೆಂಟು ಯೋಜನೆಗಳು ಘಟ್ಟಕ್ಕೆ ಕುತ್ತಾಗಿ ಬರುತ್ತಿವೆ. ಮತ್ತೊಮ್ಮೆ ʻಪಶ್ಚಿಮ ಘಟ್ಟ ಉಳಿಸಿʼ ಪಾದಯಾತ್ರೆಯೋ, ವಾಹನಯಾತ್ರೆಯೋ ಮಾಡಬೇಕಾದ ಅವಶ್ಯಕತೆ ಎದ್ದು ಕಾಣುತ್ತಿರುವಾಗ ದಾರಿದೀಪವೇ ಆರಿಹೋಗಿದೆ. ಆದರೂ ಅವರು ದಾಖಲಿಸಿಟ್ಟಿರುವ ಅನೇಕ ಅಧ್ಯಯನಗಳು ನಮಗೆ ಬೆಳಕಾಗಿ ನಿಲ್ಲಬಲ್ಲವು. ಆ ಬೆಳಕಿನಲ್ಲಿಯೇ ಸಾಗಿ ಪಶ್ಚಿಮ ಘಟ್ಟಗಳ ಮೇಲಾಗುತ್ತಿರುವ ಹೊಡೆತಗಳನ್ನು ತಪ್ಪಿಸಲು ನಾವು ಸಮರ್ಥವಾದೆವೆಂದರೆ ಅದೇ ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿ.


(ಲೇಖಕರು ಮಾಧವ್ ಗ್ಯಾಡ್ಗಿಲ್ ಅವರ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರುಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರ ಬರಹಗಳು ಪರಿಸರ, ವೈದ್ಯಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ.)


Read More
Next Story