ಬಡವರ ಮಕ್ಕಳ ʻಕೋಟಿʼ ಧನಂಜಯನಾಗುವ ಹಾದಿಯಲ್ಲಿ ಈಗ ʻಡಾಲಿʼ
x

ಬಡವರ ಮಕ್ಕಳ ʻಕೋಟಿʼ ಧನಂಜಯನಾಗುವ ಹಾದಿಯಲ್ಲಿ ಈಗ ʻಡಾಲಿʼ


“ಕನ್ನಡ ಚಿತ್ರರಂಗ ಇಂದು ಉಳಿಯಬೇಕಾದರೆ, ʻತಾರಾʼ ನಟರು ಹೆಚ್ಚು ಚಿತ್ರಗಳಲ್ಲಿ ನಟಿಸಬೇಕು” ಎಂಬುದು ನಿರ್ಮಾಪಕರ ಬೇಡಿಕೆ. ಆದರೆ, ಕನ್ನಡ ಚಿತ್ರರಂಗದಲ್ಲಿರುವ ʻತಾರಾʼ ನಟರಿಗೆ ಕೈ ತುಂಬಾ ಕೆಲಸವಿರುವುದರಿಂದ ಅವರು ವರ್ಷಕ್ಕೆ ಒಂದು ಚಿತ್ರ ಮಾಡುವುದೇ ಕಷ್ಟವಾಗಿರುವಂಥ ಸ್ಥಿತಿ. “ಹಾವು ಸಾಯಬಾರದು, ಕೋಲೂ ಮುರಿಯಬಾರದು” ಎನ್ನುವಂಥ ಸ್ಥಿತಿಯಲ್ಲಿ ಇರುವ ಕನ್ನಡ ಚಿತ್ರರಂಗಕ್ಕೆ ಈಗ ನೆರವಾಗಿ ನಿಂತವರು. ಧನಂಜಯ. ಕೇವಲ ಧನಂಜಯ ಎಂದರೆ ಇಂದು ಪ್ರೇಕ್ಷಕರಿಗೆ ಗೊಂದಲವಾಗಬಹುದು. ಇವರು 2018ರಲ್ಲಿ ತೆರೆಕಂಡ ದುನಿಯಾ ಸೂರಿ ನಿರ್ದೇಶನದ ʻಟಗರುʼ ಚಿತ್ರದಲ್ಲಿ ʻಡಾಲಿʼ ಎಂಬ ಪ್ರತಿನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಛಾಪು ಮೂಡಿಸಿದ ನಂತರ ಪ್ರೇಕ್ಷಕರು ಅವರನ್ನು ಗುರುತಿಸುತ್ತಿರುವುದು ಡಾಲಿ ಧನಂಜಯ ಎಂದೇ.

ಡಾಲಿ ಧನಂಜಯ ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕೆ ಅನಿವಾರ್ಯ ಎಂದು ಹೇಳಲು ಕಾರಣವಿದೆ. ಇತ್ತೀಚೆಗೆ ಒಬ್ಬಿಬ್ಬ ನಿರ್ದೇಶಕರೊಂದಿಗೆ ಮಾತನಾಡುತ್ತಿದ್ದಾಗ, ಅವರು “ಶಿವಣ್ಣನಿಗೊಂದು ಕಥೆ ಇದೆ, ಸುದೀಪ್ ಗೆ ಒಂದು ಕಥೆ ಇದೆ, ದರ್ಶನ್‌ ಗೆ ಒಂದು ಕಥೆ ಇದೆ ಎಂದು ಹೇಳಿದಂತೆ ಕೇಳಿಸಲಿಲ್ಲ. ಡಾಲಿ ಧನಂಜಯ್ ಗೆ ಒಂದು ಕಥೆ ಇದೆ. ಅವರು ವಿಪರೀತ busy. ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ಕೂಡ ನಟಿಸುತ್ತಿರುವುದರಿಂದ ಅವರ call sheet ಸಿಗುವುದು ಕಷ್ಟವಾಗಿದೆ. ಅವರ ಸ್ನೇಹಿತ ನಿರ್ದೇಶಕರಿಗೇ ಅವರು ಸಿಕ್ಕುವುದು ಕಷ್ಟವಾಗಿದೆ" ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆಗ ಅರ್ಥವಾಗಿದ್ದು, ಡಾಲಿ ಧಜಂಜಯ ಈಗ ಕನ್ನಡ ಚಿತ್ರರಂಗಕ್ಕೆ ಎಷ್ಟು ಅನಿವಾರ್ಯ ಎಂಬುದು.

ʻಕೋಟಿʼ ವಿದ್ಯೇಯೇ ಮೇಲು

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮಗೊಂದು ಸ್ಥಾನ ಗಿಟ್ಟಿಸಿಕೊಂಡಿರುವ ಡಾಲಿ ಧನಂಜಯ ಅವರ ಬಗ್ಗೆ ಪ್ರಸ್ತಾಪಿಸಲು ಕಾರಣ; ಅವರು ʻವಿಭಿನ್ನʻ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼಕೋಟಿʼ ಚಿತ್ರ 14 ರಂದು (ಬರಲಿರುವ ಶುಕ್ರವಾರ) ತೆರೆ ಕಾಣಲಿದೆ.

ʼಕೋಟಿʼ ಚಿತ್ರವನ್ನು ಒಂದು ಕಾಲಕ್ಕೆ ಪತ್ರಕರ್ತರಾಗಿದ್ದು, ಉದಯೋನ್ಮುಖ ಕಥೆಗಾರರಾಗಿ ಈಗ ದೃಶ್ಯಮಾಧ್ಯಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ಪರಮೇಶ್ವರ ಗುಂಡ್ಕಲ್‌, ಗೆಳೆಯರು ಪ್ರೀತಿಯಿಂದ ಕರೆಯುವ ʼಪರಮ್‌ʼʼ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಈ ಚಿತ್ರದ ಟ್ರೈಲರ್‌ ಬಿಡಗಡೆಯಾಗಿದೆ. ಈ ಟ್ರೈಲರ್‌ ನೀರಸ ಸಿನಿ ಕನಸುಗಳಿಂದ ರೋಸಿಟ್ಟು ಹೋಗಿರುವ ಕನ್ನಡದ ಪ್ರೇಕ್ಷಕರಿಗೆ ಹೊಸ ಕನಸೊಂದನ್ನು ಕಟ್ಟಿಕೊಟ್ಟಿದೆ. ಇದು, ʻಕೋಟಿʼʼ-ಕನಸನ್ನು ಬೆನ್ನುಹತ್ತಿ ಹೊರಟ ಶ್ರೀಸಾಮನ್ಯನೊಬ್ಬನ ಕಥೆಯಂತೆ ತೋರಿತು. ಟ್ರೈಲರ್‌ ಬಿಡುಗಡೆಯಾದ ಒಂದೇ ದಿನದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ನೋಡಿದರೆಂದರೆ ಸಾಮಾನ್ಯವೇ?

ಡಾಲಿಗೆ ಈ ಚಿತ್ರ ಹೇಳಿಮಾಡಿಸಿದಂಥ ಚಿತ್ರವಾಗುವ ಸಾಧ್ಯತೆಗಳಂತೂ ದಟ್ಟವಾಗಿದೆ. ಏಕೆಂದರೆ ಸ್ವಭಾವತಃ ಡಾಲಿ ಕೂಡ ಕನಸುಗಾರ. ಅಂಥ ಕನಸುಗಳಿಲ್ಲದೆ, ಕೇವಲ ಧನಂಜಯನಾಗಿದ್ದ ಡಾಲಿ-ʻಡಾಲಿʼ ಧನಂಜಯನಾಗಲು ಸಾಧ್ಯವೇ ಇರಲಿಲ್ಲ. ಅಸಮಾನ್ಯ ಕನಸುಗಳನ್ನು ಹೊತ್ತ ಸಾಮಾನ್ಯ ಚಾಲಕನಾದ ʻಕೋಟಿʼ ಧನಂಜಯನ, ಕ್ಷಮಿಸಿ ʻಡಾಲಿʻ ಧನಂಜಯನ ಹೋರಾಟಗಳ ಸರಮಾಲೆಯನ್ನೇ ಈ ಟ್ರೈಲರ್‌ ಕಟ್ಟಿಕೊಡುತ್ತದೆ. ಈ ಚಿತ್ರ ಬಿಡುಗಡೆಯಾದ ಮೇಲೆ ಡಾಲಿ ಧನಂಜಯನನ್ನು ಪ್ರೇಕ್ಷಕರು ʻಕೋಟಿʼ ಧನಂಜಯ ಎಂದು ಒಪ್ಪಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ.

ಚಿತ್ರದ ನಾಯಕ ʻಕೋಟಿʼ ಉದಾತ್ತ ಮನಸ್ಸಿನ, ಆದರೆ, ಮಹತ್ವಾಕಾಂಕ್ಷೆಯವನು. ಒಂದು ಕೋಟಿ ರೂಪಾಯಿಯನ್ನು ಪ್ರಾಮಾಣಿಕ ಹಾದಿಯಲ್ಲಿ, ಯಾರನ್ನೂ ವಂಚಿಸದೆ, ಯಾರಿಗೂ ಹಾನಿ ಮಾಡದೆ ಸಂಪಾದಿಸಿ, ತನ್ನ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸುವ ಯುವಕನ ಪಾತ್ರವಿದು. ಇದೊಂದು ರೀತಿಯಲ್ಲಿ ಸಾಮಾನ್ಯ ಮನುಷ್ಯ, ಮನುಷ್ಯನಾಗಿಯೇ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಹಾಗೂ ಆ ಹಾದಿಯಲ್ಲಿರುವ ಕಲ್ಲು ಮುಳ್ಳುಗಳ ನಡುವಿನ ಹೋರಾಟದಂತೆ ಕಾಣಿಸುತ್ತದೆ.


ಕಂಟೆಂಟ್‌ ಮುಖ್ಯ ಕಣ್ರಿ

“ಒಂದು ರೀತಿಯಲ್ಲಿ ಮಧ್ಯಮ ವರ್ಗದ ಬಣ್ಣಬಣ್ಣದ ಕನಸುಗಳ ಕಥೆ. ಸಮಾಜದ ಎಲ್ಲ ವರ್ಗಗಳಿಗೂ ಚಿತ್ರದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುವ ಸಿನಿಮಾ ಇದು” ಎಂದು ಸ್ವತಃ ಪರಮ್‌ ಅವರೇ ಹೇಳಿಕೊಂಡಿದ್ದಾರೆ. ಪರಮ್‌ ಪ್ರಕಾರ “ಇದೊಂದು ಗಟ್ಟಿ ವಸ್ತುವನ್ನು (content) ಹೊಂದಿರುವ ವಾಣಿಜ್ಯೋದ್ದೇಶದ ಚಿತ್ರ. ಚಿತ್ರ ನೋಡಿದವರಿಗೆ ಒಂದೊಳ್ಳೆ ಕಥೆ ದಕ್ಕುವುದು ಖಂಡಿತ. ಜೊತೆಗೆ ಮನರಂಜನೆ ಉಚಿತ. ಒಟ್ಟಾರೆಯಾಗಿ ಇದು “ಅಪ್ಪಟ ಕನ್ನಡ ಮಣ್ಣಿನ ಕತೆ”. “ಕನ್ನಡ ಮಣ್ಣನು ಮರಿಬೇಡ ಅಭಿಮಾನಿ” ಎನ್ನುವಂತಿರಬಹುದು. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಖಾಲಿ ಬಿಟ್ಟ ಜಾಗವನ್ನು ಭರ್ತಿ ಮಾಡಿ

“ಬಡವರ ಮಕ್ಕಳೂ ಬೆಳೀಬೇಕು ಕಣ್ರಯ್ಯ” ಎಂಬ ʻಘೋಷ ವಾಕ್ಯʼದ ಧನಂಜಯರ ಮಾತು ಅವರ ಹೃದಯದ ಮಾತು ಎಂಬುದು ಅವರ ಬೆಳೆದ ರೀತಿಯಲ್ಲಿಯೇ ವ್ಯಕ್ತ. ಸಿನಿಮಾದಲ್ಲಿ ನಾಯಕರಾಗಬೇಕೆಂಬ ಕನಸು ಹೊತ್ತ ʻಕೋಟಿʼ ಯುವಕರು ಚಿತ್ರರಂಗದ ಬಾಗಿಲು ತಟ್ಟುತ್ತಾರೆ. ಆದರೆ ಚಿತ್ರರಂಗ ಯಾರಿಗೆ ಬಾಗಿಲು ತೆರೆಯುತ್ತದೆ ಎಂಬುದು “ಬಾಗಿಲು ತೆಗೆಯೇ ಸೇಸಮ್ಮ” ಎಂಬಂತೆಯೇ ನಿಗೂಢ. ಸಿನಿಮಾ ರಂಗದ ಈ ನಿಗೂಢವನ್ನು ಬೇಧಿಸಿ, ಬಾಗಿಲ ದಾಟಿ ಒಳಗೆ ಬಂದಿದ್ದೇ ಅಲ್ಲದೆ, ʻಪಡಿಯಪ್ಪನ್‌ʼ ಚಿತ್ರದ ರಜನೀಕಾಂತ್‌ ರಂತೆ ಸ್ಥಾನ ವಿಲ್ಲದ ಖಾಲಿ ನೆಲದಲ್ಲಿ ಸರಪಳಿಗೆ ಕಟ್ಟಿದ ತೂಗು ಮಣೆಯನ್ನು ಕೆಡವಿ ತನಗೆಂದೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡವರು ಧನಂಜಯ ಎಂಬಂತೆ ಕಾಣುತ್ತಿದೆ.

ಅರಸೀಕೆರೆಯಿಂದ ಅರಮನೆ ನಗರಿಗೆ

ಅರಸೀಕೆರೆಯ ಕಲ್ಲೇನಹಳ್ಳಿಯ ಧನಂಜಯ ನಮ್ಮ ನಿಮ್ಮಂತೆ ಸಾಮಾನ್ಯ ಹುಡುಗನೇ. ಆದರೆ ಸಾಧಾರಣ ಕನಸುಗಳನ್ನು ಕಂಡವನಲ್ಲ. ಕಂಡಿದ್ದು ಜನಜಂಗುಳಿಯ ನಡುವೆ ಎದ್ದು ಕಾಣಬೇಕು. “ಬಡವರ ಮಕ್ಕಳೂ ಬೆಳಿಬೇಕು” ಎಂಬ ಚಿಂತನೆಯಿಂದ. ಈ ಹಳ್ಳಿ ಹುಡುಗ ಓದಿನಲ್ಲಿ ಚುರುಕು. ಎಸ್ ಎಸ್‌ ಎಲ್‌ ಸಿಯಲ್ಲಿ ಶೇ 90 ಅಂಕ ಗಳಿಸಿದನೆಂದರೆ ಅದೇನು ಸಾಮಾನ್ಯ ಸಂಗತಿಯೇ. ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಕಲಿತು, ಪ್ರತಿಷ್ಠಿತ ಇನ್ಫೋಸಿಸ್‌ನಲ್ಲಿ ಸಿಕ್ಕ ಕೆಲಸ ಬಿಟ್ಟು, ಮುಂದೆ ಕೋಟ್ಯಾಧೀಶನಾಗುವ ಸಾಧ್ಯತೆಯನ್ನು ಕಾಲಿಂದ ಒದ್ದು, ರಂಗಭೂಮಿಯತ್ತ ತಕತಕ ಕುಣಿಯುತ್ತಾ ನಡೆದ. ಚಿಕ್ಕ ವಯಸ್ಸಿನಲ್ಲೇ ತಮ್ಮಂತೆಯೇ ರಂಗಭೂಮಿ ಕಲಾವಿದರಾದ ಡಾ. ರಾಜ್ಕುಮಾರ್ ಅವರನ್ನು ನೋಡಿ ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡಿದ್ದ ಧನಂಜಯ್, ಮೈಸೂರಿನ ರಂಗಾಯಣ ಸೇರಿಕೊಂಡಾಗ ದಡ ಮುಟ್ಟಿದೆ ಎಂದು ಕೊಂಡರು. ನಂತರ ನಟನೆಯನ್ನು ಕಲಿಯಲು ಮೈಸೂರಿನ ಮೈಮ್ ರಮೇಶ್ ಅವರ ನಾಟಕ ಗುಂಪನ್ನು ಸೇರಿಕೊಂಡು ನಟರಾದರು, ಎಂಬಲ್ಲಿಗೆ ಅವರ ಬಾಲಲೀಲೆಗಳು ಅಂತ್ಯ.

ಡಾಲಿ-ಜಯನಗರದಿಂದ ಬಹುಭಾಷಾ ನಟನಾದ ಹಾದಿ

ರಾಮಾ ರಾಮಾರೇʼ ಚಿತ್ರದ ಡಿ. ಸತ್ಯಪ್ರಕಾಶ್‌ ನಿರ್ದೇಶನಕ Jayanagar Fourth Block ಕಿರುಚಿತ್ರ ಇವರನ್ನು ನಟ ಧನಂಜಯನಾಗಿಸಿತು. ಇದೊಬ್ಬ ಶ್ರೀಸಾಮನ್ಯ ಕಲಾವಿದನ ಸಣ್ಣ ಚಿತ್ರ. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಧನಂಜಯನನ್ನು ಗುರುತಿಸಿದವರು ನಿರ್ದೇಶಕ ಗುರುಪ್ರಸಾದ್‌ ೨೦೧೩ರಲ್ಲಿ ಇವರು ನಿರ್ದೇಶಿಸಿದ ʻಡೈರೆಕ್ಟರ್‌ ಸ್ಪೆಷಲ್‌ʼ ಚಿತ್ರದಲ್ಲಿನ ಧನಂಜಯರ ಅಭಿನಯ, ಭವಿಷ್ಯದ ಭರವಸೆಯ ನಟ ಎಂಬುದನ್ನು ಮನದಟ್ಟು ಮಾಡಿಸಿತು. ಈ ಚಿತ್ರಕ್ಕೆ Best Actor in Debut Saima Award ಪಡೆದದ್ದು, ಭರವಸೆಯನ್ನು ಖಚಿತಪಡಿಸಿತು. ನಂತರ ʻರಾಟೆʼ, ʻಬಾಕ್ಸರ್‌ʼ, ʻಜೆಸ್ಸಿʼ, ನಾಗಾಭರಣ ನಿರ್ದೇಶನದ ʻಅಲ್ಲಮʼ ಹಾಗೂ ʻಹ್ಯಾಪಿ ನ್ಯೂ ಇಯರ್‌ʼ ಚಿತ್ರಗಳಲ್ಲಿ ನಟಿಸಿದರು. ʻಅಲ್ಲಮʼ ಚಿತ್ರಕ್ಕೆ ಫಿಲಂ ಫೇರ್‌ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತು. ೨೦೧೮ರಲ್ಲಿ ತೆರೆಕಂಡ ದುನಿಯಾಸೂರಿ ನಿರ್ದೇಶನದ ʻಟಗರುʼ ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ತಮ್ಮ ಹೆಸರಿನ ಹಿಂದೆ ʻಡಾಲಿʼ ಎಂಬ ಉಪನಾಮ ಸೇರಿಸಿಕೊಂಡರು. ಡಾಲಿ ಪಾತ್ರ ಧನಂಜಯ ಅವರನ್ನು ದಕ್ಷಿಣ ಭಾರತದ ಇತರ ಭಾಷಾ ಚಿತ್ರಗಳತ್ತ ಕರೆದುಕೊಂಡು ಹೋಯಿತು. ರಾಮ್‌ ಗೋಪಾಲ್‌ ವರ್ಮ ಅವರ ʻಭೈರವ ಗೀತಾʼ ಚಿತ್ರದಲ್ಲಿ ಅಭಿನಯಿಸಿ, ಅಲ್ಲಿಯೂ ತಮಗೊಂದು ಸ್ಥಾನ ಕಲ್ಪಿಸಿಕೊಂಡರು. ದರ್ಶನ್‌ ಜೊತೆಯಲ್ಲಿ ʻಯಜಮಾನʼ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ಮಿಂಚಿದರು. ತೆಲುಗಿನ ಪುಷ್ಪ-1, ಪುಷ್ಪ-2, ತಮಿಳಿನ ಪಾಯುಮ್‌ ಒಲಿ ನೀ ಎನಕ್ಕೂ, ಮಲೆಯಾಳಂನ 21 ಅವರ್ಸ್‌ ಚಿತ್ರಗಳಲ್ಲಿ ಅಭಿನಯಿಸಿ, ಬಹುಭಾಷಾ ನಟ ಎನ್ನಿಸಿಕೊಂಡರು.

ಇಲ್ಲಿ ಮತ್ತೊಂದು ವಿಷಯ ಹೇಳಲೇ ಬೇಕು. ಧನಂಜಯ ಗೀತ ರಚನಾಕಾರರು ಹೌದು. ʻಬಡವ ರಾಸ್ಕಲ್‌ʼ, ʻಹೆಡ್‌ ಬುಷ್‌ʼ, ʼಆರ್ಕೆಸ್ಟ್ರಾ ಮೈಸೂರುʼ, ʻಟಗರು ಪಲ್ಯʼ, ಹಾಗೂ ʻಅಬ್ಬಬ್ಬʼ ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದಾರೆ. , ʼಆರ್ಕೆಸ್ಟ್ರಾ ಮೈಸೂರುʼ, ʻಡೇರ್ ಡೆವಿಲ್‌ ಮುಸ್ತಫಾʼ ಚಿತ್ರಗಳಿಗೆ ಆರಂಭದಲ್ಲಿ ಕಥೆ ಪರಿಚಯಿಸುವ ಭಾಗವತರೂ ಆಗಿದ್ದಾರೆ. ಧನಂಜಯ ಅವರದು ಬಹುಮುಖ ಪ್ರತಿಭೆ.

ತಮ್ಮದೇ ನಿರ್ಮಾಣ ಸಂಸ್ಥೆ

“ಬಡವರ ಮಕ್ಕಳೂ ಬೆಳಿಬೇಕು” ಎಂಬ ಕನಸಿಗೆ ರೆಕ್ಕೆಪುಕ್ಕ ಕಟ್ಟಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಹುಟ್ಟುಹಾಕಿದರು. ಈ ಮೂಲಕ ವರ್ಷಕ್ಕೆ ಎರಡು ಚಿತ್ರ ನಿರ್ಮಾಣ ಮಾಡುವ ಪ್ರಯತ್ನ ಅವರದು. ಈ ವೇದಿಕೆ ಹೊಸ ಪ್ರತಿಭೆಗಳಿಗೆ ಮೀಸಲು ಎಂದುಕೊಳ್ಳಿ ಎಂದರು. ʻಬಡವಾ ರಾಸ್ಕಲ್‌ʼ ಹಾಗೂ ʻಹೆಡ್‌ ಬುಷ್‌ʼ ಚಿತ್ರಗಳನ್ನು ನಿರ್ಮಿಸುವ ಮೂಲಕ ನಿರ್ಮಾಪಕರೂ ಆದರೆಂಬುದು ಈಗ ಹಳೆಯ ಸಂಗತಿ. ಸಾಮಾಜಿಕ ಕಳಕಳಿಯುಳ್ಳ ಧನಂಜಯ್‌ ಡಾ. ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕಾ ಆಭಿವೃದ್ಧಿ ನಿಗಮದ (ಲಿಡ್ಕರ್‌) ಉತ್ಪನ್ನಗಳಿಗೆ ರಾಯಭಾರಿ ಕೂಡ ಆಗಿದ್ದು, ಅವರ ಅರ್ಥಪೂರ್ಣ ಕನಸುಗಳಿಗೆ ಸಾಕ್ಷಿ.

ರಾಜಕಾರಣದಿಂದ ದೂರ

ಈ ನಡುವೆ ಲೋಕಸಭಾ ಚುನಾವಣೆ ಬಂದು, ಡಾಲಿ ಮೈಸೂರಿನಿಂದ ಪ್ರತಾಪ್‌ ಸಿಂಹ ಅವರನ್ನು ಎದುರಿಸಲಿದ್ದಾರೆ ಎಂಬ ಗುಲ್ಲೂ ಹರಡಿತು. ವಾಸನೆ ಗ್ರಹಿಸಿದ ಧನಂಜಯ ಕೂಡಲೇ; “ನನಗೆ ರಾಜಕಾರಣ ಗೊತ್ತಿಲ್ಲ. ಸದ್ಯಕ್ಕೆ ನಾನು ರಾಜಕಾರಣಕ್ಕೆ ಬರೊಲ್ಲ. ರಾಜಕಾರಣ ಬೇರೆ, ಚಿತ್ರಗಳಲ್ಲಿ ರಾಜಕೀಯ ನಾಯಕರಾಗುವುದು ಬೇರೆ” ಎಂದು ನಯವಾಗಿ ರಾಜಕಾರಣದ ಸುಳಿಯಿಂದ ಬಿಡುಗಡೆ ಪಡೆದರು.

ಮತ್ತೆ ʻಕೋಟಿʼ ಚಿತ್ರಕ್ಕೆ ತಿರುಗಿಬಂದರೆ; “ನಾನು ಸದಾ ಹೊಸ ಕಥೆ, ಹೊಸ ಪಾತ್ರಕ್ಕಾಗಿ ಹುಡುಕುತ್ತಾ ಇರುತ್ತೇನೆ. ಅಂಥಾ ಹೊತ್ತಲ್ಲಿ, ಪರಮ್‌ ಹೇಳಿದ ಕಥೆ ನನಗೆ ಇಷ್ಟವಾಯಿತು. ನನ್ನನ್ನು ತೀವ್ರವಾಗಿ ಕಾಡಿತು. ಕೋಟಿ ನನ್ನ ಪಾತ್ರ ಮಾತ್ರವಲ್ಲ. ಈ ಕೋಟಿ ಮಧ್ಯಮ ವರ್ಗದ ಯಾವ ಹುಡುಗನಲ್ಲೂ ಸಿಗಬಹುದು. ಇದು ಎಲ್ಲರಿಗೂ ತಟ್ಟುವ ಚಿತ್ರ. ಒಂದು ತೀವ್ರವಾದ ಅನುಭವವನ್ನು ಕಟ್ಟಿಕೊಡುವ ಚಿತ್ರ” ಎನ್ನುತ್ತಾರೆ ಧನಂಜಯ. ʻಕೋಟಿʼ ಚಿತ್ರ ʻನಟ ರಾಕ್ಷಸʼ ಎಂದು ಪ್ರೇಕ್ಷಕರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಧನಂಜಯ ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯವುದೇ ಎಂಬುದು ಶುಕ್ರವಾರ ತಿಳಿಯಲಿದೆ.

Read More
Next Story