ಕನ್ನಡ ಚಿತ್ರರಂಗದ ಬೇವು-ಬೆಲ್ಲ | ಅʻಶುಭʼ ದರ್ಶನದ ನಂತರ ನಾಲ್ಕು ವಿಭಿನ್ನ ಹಾದಿಯ ಚಿತ್ರ ತೆರೆಗೆ
x

ಕನ್ನಡ ಚಿತ್ರರಂಗದ ಬೇವು-ಬೆಲ್ಲ | ಅʻಶುಭʼ ದರ್ಶನದ ನಂತರ ನಾಲ್ಕು ವಿಭಿನ್ನ ಹಾದಿಯ ಚಿತ್ರ ತೆರೆಗೆ


2024ರಲ್ಲಿ ಅರ್ಧ ವರ್ಷ ಕಳೆದರೂ ʼತಾರಾʼ ಚಿತ್ರಗಳ ʼನೆರವಿಲ್ಲದೆʼ, ಮಂಕಾಗಿದ್ದ ಕನ್ನಡ ಚಿತ್ರರಂಗದ ಸ್ಥಿತಿ; ಬೇವು-ಬೆಲ್ಲ ಬಾಯಲ್ಲಿ ತುಂಬಿಕೊಂಡು ಮೆಲುಕಾಡಿಸಿದಂಥದ್ದು. ಕಳೆದ ಐದು ದಿನಗಳಿಂದ ʼತಾರಾʼ ನಟ ದರ್ಶನ್‌ ಅಥವಾ ಅವರೇ ಕಲ್ಪಿಸಿಕೊಂಡಂಥ ʻಡಿʼ ಬಾಸ್‌- ತಮ್ಮ ʻಅಭಿಮಾನಿʼ ಎನ್ನಿಸಿಕೊಂಡಿದ್ದ ವ್ಯಕ್ತಿಯೊಬ್ಬರ ಅಮಾನವೀಯ ರೀತಿಯ ಕೊಲೆಯ ಹಿನ್ನೆಲೆಯಲ್ಲಿ ಪೊಲೀಸ್‌ ಆತಿಥ್ಯ ಸ್ವೀಕರಿಸಿ, ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಘಟನೆಯಿಂದ ಕನ್ನಡ ಚಿತ್ರರಂಗ ದಿಕ್ಕುತೋಚದ ಸ್ಥಿತಿಯಲ್ಲಿದೆ. ಅಂದರೆ ಅದು ದರ್ಶನ್‌ ಮೇಲಿನ ಅನುಕಂಪದಿಂದಲ್ಲ. ಅವರ ಚಿತ್ರಗಳ ಮೇಲೆ ಹೂಡಿರುವ ಬಂಡವಾಳದ ಭವಿಷ್ಯದ ಆತಂಕದಿಂದ ಮಾತ್ರ.

ದರ್ಶನ್‌ ಅವರ ದುರ್ನಡತೆಯ ದಾಷ್ಟೀಕತೆಯ ಹಿನ್ನೆಲೆಯಲ್ಲಿ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ರಾಜ್ಯದಾದ್ಯಂತ ಅವರ ವಿರುದ್ಧ ತೀವ್ರ ಕಾನೂನು ಕ್ರಮಕ್ಕೆ ಒತ್ತಾಯ ಹೆಚ್ಚುತ್ತಿದೆ. ಆದರೆ. ಅವರ ಚಿತ್ರಗಳ ಮೇಲೆ ಹೂಡಿರುವ ಬಂಡವಾಳದ ಭವಿಷ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಕೂಡ ನಿಸ್ಸಹಾಯಕವಾಗಿದೆ.

ದರ್ಶನ್‌ ಅವರನ್ನು ಚಿತ್ರರಂಗದಿಂದ ನಿಷೇಧಿಸುವುದು ಅಥವಾ ಅಸಹಕಾರ ನಿಲುವು ತೆಗೆದುಕೊಳ್ಳುವುದರ ಬಗ್ಗೆ ತೀರ್ಮಾನಿಸುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಷ್ಟಕರವಾಗಿದೆ. “ಆರೋಪಿ ನಟ ದರ್ಶನ್‌ ಅವರನ್ನು ಚಿತ್ರರಂಗದಿಂದ ನಿಷೇಧಿಸುವ ಬಗ್ಗೆ ಆರೋಪ ಸಾಬೀತಾದರೆ ಮಾತ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ಎನ್‌ ಸುರೇಶ್‌ ಮಂಡಳಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಹೇಳಿದ್ದಾರೆ.

ಈ ಬೆಳವಣಿಗೆ ಬೇವಿನ ಕಹಿಯ ಭಾಗವಾದರೆ, ಬೆಲ್ಲದ ಭಾಗ; ಕನ್ನಡ ಚಿತ್ರರಂಗ ಚೇತರಿಸಿಕೊಂಡಿರುವುದು. ಐಪಿಎಲ್‌ ಉನ್ಮಾದ, ಲೋಕಸಭಾ ಚುನಾವಣೆಯ ಭರಾಟೆಯ ನಂತರ ಚೇತರಿಸಿಕೊಂಡಂತೆ ಕಾಣುತ್ತಿರುವ ಕನ್ನಡ ಚಿತ್ರರಂಗ ಮೊನ್ನೆ ಶುಕ್ರವಾರ ಶಿವಮ್ಮ, ಕೋಟಿ, ಷೆಫ್‌ ಚಿದಂಬರ, ಲವ್‌ ಲಿ ಚಿತ್ರಗಳ ಬಿಡುಗಡೆಗೆ ಸಾಕ್ಷಿಯಾಗಿದೆ.

ಬೂಸಾನ್‌ ಚಿತ್ರೋತ್ಸವದಲ್ಲಿ ಮೆಚ್ಚಿಗೆ ಪಡೆದ ಶಿವಮ್ಮ

ಈ ಪೈಕಿ ಶಿವಮ್ಮ ಚಿತ್ರ ಇತ್ತೀಚೆಗೆ ವಿಶ್ವದಾದ್ಯಂತ ಸದ್ದು ಮಾಡಿದ ಚಿತ್ರ. Busan International Film Festival (ಬೂಸಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ) ದಲ್ಲಿ ʻNew Currents ́ ವಿಭಾಗದಲ್ಲಿ ಪ್ರಶಸ್ತಿ ಪಡೆದ ರಿಷಭ್‌ ಶೆಟ್ಟಿ ನಿರ್ಮಾಣದ ಶಿವಮ್ಮ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರ Three Continents Festival ಹಾಗೂ, ಟೆಹರಾನ್‌ ನಲ್ಲಿ ನಡೆಯುವ Fajr International Film Festival ನಲ್ಲಿ ಕೂಡ ಈ ಚಿತ್ರ ಬಿಡುಗಡೆಯಾಗಿದೆ. ಜೈಶಂಕರ್‌ ಆರ್ಯರ್‌ ನಿರ್ದೇಶನದ ಈ ಚಿತ್ರದಲ್ಲಿ ಯರೇಹಂಚಿನಹಾಳದ ಶರಣಮ್ಮ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಯರೇಹಂಚಿನಹಾಳದಲ್ಲೇ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಇಲ್ಲಿನ ಗ್ರಾಮಸ್ತರೇ ಈ ಚಿತ್ರದಲ್ಲಿ ಬಣ್ಣ ಹಚ್ಚಿಕೊಂಡು ಆಭಿನಯಿಸಿರುವುದು ಈ ಚಿತ್ರದ ವಿಶೇಷ.

ಇಂಥ ಪ್ರಯತ್ನವೊಂದು 2018ರಲ್ಲಿ ತೆಲುಗು ಚಿತ್ರರಂಗದಲ್ಲಿ ನಡೆದಿತ್ತು. C/O Kancharapalem ಎಂಬ ಇದು, ವೆಂಕಟೇಶ್‌ ಮಹಾ ಎಂಬ ನಿರ್ದೇಶಕನ ಚೊಚ್ಚಲ ಚಿತ್ರ. ಈ ಚಿತ್ರವನ್ನು ನಿರ್ಮಿಸಿದ್ದು, ಅಮೆರಿಕಾದಲ್ಲಿ ನೆಲೆಸಿರುವ ಪ್ರವೀಣ್‌ ಪರುಚೂರಿ ಎಂಬುವವರು. ಈ ಚಿತ್ರವನ್ನು ಹಂಚಿಕೆ ಮಾಡಿದವರು ರಾಣಾ ದಗ್ಗುಬಾಟಿ. ಈ ಚಿತ್ರವನ್ನು ಕಂಚೇರಪಾಲೆಮ್‌ ಊರಿನಲ್ಲಿಯೇ ಚಿತ್ರೀಕರಿಸಲಾಗಿತ್ತು. ಈ ಚಿತ್ರದಲ್ಲಿ ಅಭಿನಯಿಸಿದ ಶೇ. 80 ರಷ್ಟು ಕಲಾವಿದರು ಸ್ಥಳೀಯರೇ. ಈ ಚಿತ್ರ New York Indian Film Festivalನಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ವಿಮರ್ಶಕರ ಮೆಚ್ಚಿಗೆ ಗಳಿಸಿತ್ತು. ಈ ಚಿತ್ರ ಕನ್ನಡದಲ್ಲಿ Monsoon Raga ಎಂಬ ಹೆಸರಿನಲ್ಲಿ ರೀಮೇಕ್‌ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗ ಅಂಥದ್ದೇ ಪ್ರಯತ್ನವಾದ ಕನ್ನಡದ ಶಿವಮ್ಮ ಚಿತ್ರ.

ಯರೇಹಂಚಿನಹಾಳ ಎಂಬ ಚಿತ್ರನಗರಿ


ಯರೇಹಂಚಿನಹಾಳ ಉತ್ತರ ಕರ್ನಾಟಕದ ಪುಟ್ಟ ಹಳ್ಳಿ. ಇಡೀ ಊರಿನ ಮನೆಗಳು ಒಂದೇ ಮಟ್ಟದಲ್ಲಿವೆ. ಒಂದು ಮನೆಗೂ ಮಹಡಿ ಇಲ್ಲ. ಊರಿನ ಸಣ್ಣಸಣ್ಣ ಓಣಿಗಳು ಗಮನಸೆಳೆಯುತ್ತವೆ. ಜೈಶಂಕರ್‌ ಅವರು ತಮ್ಮ ತಂದೆಯ ಈ ಊರನ್ನು ಗಮನದಲ್ಲಿಟ್ಟುಕೊಂಡಿದ್ದರು. ಅವರಿಗೆ ಈ ಊರು ಅಪರೂಪದ್ದು ಎನ್ನಿಸಿತ್ತು. ಅದರ ಮೂಲಕವೇ ಒಂದು ಕಥೆಯನ್ನು ಹೇಳಬೇಕೆಂದು ಅವರು ತೀರ್ಮಾನಿಸಿದರು. ಊರಿನವರ ಮನೆಗಳಲ್ಲಿ ಕ್ಯಾಮರಾ ನಿಲ್ಲಿಸಿದರು. ಶಿವಮ್ಮನ ಮನೆ ರೂಪಿಸುವಾಗ ಎಲ್ಲರ ಮನೆಯಿಂದಲೂ ಒಂದೊಂದು ವಸ್ತುವನ್ನು ತಂದು ಜೋಡಿಸಿದರು. ಊರಿನವರಿಗೆ ತಮ್ಮದೇ ಊರಿನ ಚಿತ್ರವೆನ್ನುವ ಭಾವ ಮೂಡಿಸಿದರು. ಹಾಗೆ ನೋಡಿದರೆ ಈ ಜೈಶಂಕರ್‌ ಚಿತ್ರರಂಗಕ್ಕೆ ತೀರಾ ಹೊಸಬರೇನಲ್ಲ. ʻನರಸಿಂಹಯ್ಯನ ಫಿಲಂʼ ಎಂಬ ಕಿರುಚಿತ್ರ ಮಾಡಿದ್ದರು. ಅಲ್ಲಿಂದ ಅವರಿಗೆ ರಿಷಭ್‌ ಶೆಟ್ಟಿ ಅವರ ಸಂಪರ್ಕ ಬೆಳೆಯಿತು. ರಿಷಭ್‌ ಶೆಟ್ಟಿಯವರ ಕಥಾ ಸಂಗಮದಲ್ಲಿ ಲಚ್ಚವ್ವನ ಕಥೆ ಹೇಳಿರುವ ಜೈ ಶಂಕರ್‌ ಈತ ಶಿವಮ್ಮನ ಕಥೆ ಹೇಳಿದ್ದಾರೆ. ಇದು ಫಿಟ್ನೆಸ್‌ ಹೆಸರಿನಲ್ಲಿ ಪೌಡರ್‌ ಮಾರುವ ಶಿವಮ್ಮನ ಕತೆ. ಇಷ್ಟು ಸಾಕು. ಚಿತ್ರ ನೋಡಿದರೆ ಶಿವಮ್ಮ ದಕ್ಕುತ್ತಾರೆ.

ಪುಣ್ಯ ʼಕೋಟಿʼ

ಹಾಗೆಯೇ ಡಾಲಿ ಧನಂಜಯ ಅಭಿನಯಿಸಿದ ಪರಮೇಶ್ವರ ಗುಂಡ್ಕಲ್‌ ನಿರ್ದೇಶನದ ಕೋಟಿ ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ. ಚಿತ್ರದ ನಾಯಕ ʻಕೋಟಿʼ ಉದಾತ್ತ ಮನಸ್ಸಿನ, ಆದರೆ, ಮಹತ್ವಾಕಾಂಕ್ಷೆಯವನು. ಒಂದು ಕೋಟಿ ರೂಪಾಯಿಯನ್ನು ಪ್ರಾಮಾಣಿಕ ಹಾದಿಯಲ್ಲಿ, ಯಾರನ್ನೂ ವಂಚಿಸದೆ, ಯಾರಿಗೂ ಹಾನಿ ಮಾಡದೆ ಸಂಪಾದಿಸಿ, ತನ್ನ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸುವ ಯುವಕನ ಪಾತ್ರವಿದು. ಇದೊಂದು ರೀತಿಯಲ್ಲಿ ಸಾಮಾನ್ಯ ಮನುಷ್ಯ, ಮನುಷ್ಯನಾಗಿಯೇ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಹಾಗೂ ಆ ಹಾದಿಯಲ್ಲಿರುವ ಕಲ್ಲು ಮುಳ್ಳುಗಳ ನಡುವಿನ ಹೋರಾಟದಂತೆ ಕಾಣಿಸುತ್ತದೆ. “ಒಂದು ರೀತಿಯಲ್ಲಿ ಮಧ್ಯಮ ವರ್ಗದ ಬಣ್ಣಬಣ್ಣದ ಕನಸುಗಳ ಕಥೆ. ಸಮಾಜದ ಎಲ್ಲ ವರ್ಗಗಳಿಗೂ ಚಿತ್ರದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುವ ಸಿನಿಮಾ ಇದು..


ಒಂದು ಸಾಮನ್ಯ ಕುಟುಂಬದಲ್ಲಿ ನಡೆಯುವ ಅಸಾಮಾನ್ಯ ಕಥೆಯನ್ನು ಹೇಳಲು ಪರಕ್‌ ಪರಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಚಿತ್ರದ ನಾಯಕ ಪ್ರಾಮಾಣಿಕವಾಗಿ ಬದುಕಿ ಕೋಟಿ ಹಣ ಗಳಿಸಿ, ತನ್ನ ಕುಟುಂಬದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಒಂದು ರೀತಿಯ ಪುಣ್ಯಕೋಟಿಯ ಕಥೆ ಇದು. ಅವನು ನಿಯತ್ತಾಗಿ ಒಂದು ಕೋಟಿ ಸಂಪಾದಿಸಲು ಅಪ್ರಾಮಾಣಿಕವಾಗುತ್ತಲೇ ಸಾಗುತ್ತಿರುವ ಈ ಸಮಾಜದಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾನೆ. ಪ್ರೇಕ್ಷಕನಿಗೆ ಕೋಟಿಯ ಹಾಗೆ ಬದುಕಬೇಕೆನ್ನಿಸುವ ಚಿತ್ರವಿದು. ಆದರೆ ಕೋಟಿ ಎದುರಿಸುವಂತೆ ಸಮಸ್ಯೆಗಳನ್ನು ಎದುರುಹಾಕಿಕೊಳ್ಳಲು ಸಾಧ್ಯವೇ ಎಂದು ಅವನು ಯೋಚಿಸಬೇಕಷ್ಟೇ. ಆದರೆ ಅದೇಕೋ ಚಿತ್ರ ಮುಗಿದಾಗ, ಕೋಟಿ ಮನಸ್ಸಿನಲ್ಲಿ ಉಳಿಯುವ ಬದಲು, ಶ್ರವಣ ಶಕ್ತಿಯನ್ನು ಕಳೆದುಕೊಂಡು “ಬೆಣ್ಣೆ ಕದ್ದ ನಮ್ಮ ಕೃಷ್ಣ” ಹಾಡನ್ನು ಕೇಳಲಾಗದೆ, ಕೊನೆಗೆ ಶ್ರವಣ ಯಂತ್ರದಿಂದ “ಬೆಣ್ಣೆ ಕದ್ದನಮ್ಮ ಹಾಡು” ಹಾಡನ್ನು ಕೇಳುವ ಕೋಟಿಯ ತಾಯಿಯ ಪಾತ್ರದಲ್ಲಿ ನಟಿಸುವ ತಾರಾ ಹಾಗೂ ಕೋಟಿ ಸೋದರಿಯ ಪಾತ್ರದಲ್ಲಿ ಅಭಿನಯಿಸಿದ ತಂಗಿ ಪಾತ್ರಧಾರಿ ತನುಜ, ಕೋಟಿಯ ಕೋಟಿ ಕನಸಿಗೆ ನೂರಾರು ತಡೆಯೊಡ್ಡುವ ಸಾವಕಾರ್‌ ಪಾತ್ರಧಾರಿ ಇಂದಿರಾ ರಮೇಶ್‌ ಮನಸ್ಸಿನಲ್ಲಿ ಉಳಿಯುತ್ತಾರೆ.

ಕ್ಲೆಪ್ಟೋಮೇನಿಯಾ ಹೆಣಿಗೆ

ಕೋಟಿ ಹಣ ಗಳಿಸಲು ಕೋಟಿ ತಪ್ಪು ಹಾದಿ ಹಿಡಿಯುತ್ತಾನೆಯೇ? ಹಿಡಿದರೆ ಯಾಕೆ ಹಿಡಿದ, ಆ ಮಾರ್ಗದಲ್ಲಿ ಅದೆಷ್ಟು ಕಷ್ಟವಾಯಿತು? ಎಂಬುದನ್ನೆಲ್ಲ ಅರ್ಥ ಮಾಡಿಕೊಳ್ಳಲು, 160ಕ್ಕೂ ಹೆಚ್ಚು ನಿಮಿಷ ಕಾಯಬೇಕು. ಆದರೆ ಇದು ಇತರ ಚಿತ್ರಗಳಂತಲ್ಲ, ಮನೆಯವರೆಲ್ಲ ಕೂತು ನೋಡಬಹುದಾದ ಚಿತ್ರ. ಇದರ ಹಿಂಸಾತ್ಮಕ ಚಿತ್ರದಲ್ಲಿ ರಕ್ತದ ಕಲೆ ಇಲ್ಲ. ಮೆದುಳಿಗಿಂತ ಹೆಚ್ಚಾಗಿ ಮನಸ್ಸಿಗೆ ತಾಕುವ ಮಧ್ಯಮ ವರ್ಗದ ನೋವು ನಲಿವಿನ ಕಥೆ ಇದು. ಆದರೆ ಚಿತ್ರ ಕೋಟಿ ಬಾಯಲ್ಲಿನ ಐಸ್‌ ಕ್ಯಾಂಡಿಯಂತೆ ಕರಗುವುದಿಲ್ಲ. ಸ್ವಲ್ಪ ಕಚ್ಚಿ ತಿನ್ನಬೇಕಾಗುತ್ತದೆ. ಕಿವಿಯ ಕಾಯಿಲೆಯ ಜೊತೆಯಲ್ಲಿ ಕ್ಲೆಪ್ಟೋಮೇನಿಯಾ ಎಂಬ ಒಂದು ಉದ್ವೇಗ ನಿಯಂತ್ರಣ ಅಸ್ವಸ್ಥ ಸ್ಥಿತಿಯನ್ನೂ, ಕಥೆಯ ಓಟಕ್ಕೆ ಪರಮ್‌ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಈ ಕಾಯಿಲೆ ಇರುವ ನಾಯಕಿಗೆ ಬಿಕ್ಕಳಿಕೆ ಬಂದು ಯಾವುದಾದರೂ ವಸ್ತುವನ್ನು ಕದಿಯುವ ಬಯಕೆ. ಅದೇ ಆಕೆಯ ಬದುಕಿಗೆ ಮಾರಕವಾಗುವ ಪರಿಯನ್ನು ಪರಮ್‌ ಕಷ್ಟಪಟ್ಟು ಹೆಣೆದಿದ್ದಾರೆ.

ಲವ್‌ ಲಿಯಾದ ಷೆಫ್‌ ಚಿದಂಬರ

ಲವ್‌ ಲಿ ಕಂಚಿನ ಕಂಠಸಿರಿಯ ವಸಿಷ್ಠ ಸಿಂಹ, ಸ್ಟೆಫಿ ಪಟೇಲ್‌ ಅಭಿನಯಿಸಿದ ಅಪ್ಪಟ ಮನರಂಜನೆಯ ಚಿತ್ರ. ಇದರ ನಿರ್ದೇಶಕ ಚೇತನ್‌ ಕೇಶವ್. ‌ ಒಂದೇ ಸಿನಿಮಾದಲ್ಲಿ ಕನ್ನಡ ಚಿತ್ರದ ಮೂಲ ವಸ್ತುವೆಂದೇ ಪರಿಗಣಿಸಲಾಗಿರುವ ರೌಡಿಸಂ, ಲವ್‌, ಆಕ್ಷನ್‌, ಸೆಂಟಿಮೆಂಟ್‌ ಎಲ್ಲವೂ ಮಿಶ್ರಣಗೊಂಡಿದೆ. ಹಾಗಾಗಿ ಇದು ಮಾಸ್‌ ಎಂಟರ್ಟೈನರ್. ‌ ಹಾಗೆಯೇ ಷೆಫ್‌ ಚಿದಂಬರ ಎಂಬ ಆನಂದರಾಜ್‌ ನಿರ್ದೇಶನದ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಎಲ್ಲರೂ ಹೇಳುವಂತೆ ʻಭಿನ್ನವಾದʼ ಚಿತ್ರ. ಏಕೆಂದರೆ, ನಿರ್ದೇಶಕರೇ ಈ ಚಿತ್ರದ ಕಥೆಯನ್ನು ಬರೆದಿದ್ದಾರೆ. Dark Comedy Crime Thriller ಚಿತ್ರವಾದರೂ ಹಾಸ್ಯದ್ದೇ ಮೇಲುಗೈ. ಈ ಹಾಸ್ಯವನ್ನು ಚಿತ್ರ ನೋಡಿಯೇ ಆನಂದಿಸಿ ನಗಬೇಕು. ಏಕೆಂದರೆ ನಿರ್ದೇಶಕರು ಹೇಗಾದರೂ ಮಾಡಿ ಪ್ರೇಕ್ಷಕರನ್ನು ನಗಿಸಿ, ಸುದ್ದಿಯಾಗಿಸಿ, ಚಿತ್ರಮಂದಿರಗಳಿಗೆ ಕರೆತರಬೇಕೆಂದು ನಿರ್ಧರಿಸಿದ್ದಾರೆ. ಇದರಲ್ಲಿ, ಅನಿರುದ್ಧರಿಗೆ ಜೋಡಿಯಾಗಿ ನಿಧಿ ಸುಬ್ಬಯ್ಯ ಎಂಬ ನಗುಮೊಗದ ಚೆಲುವೆ ಇದ್ದಾರೆ.

Read More
Next Story