ಮಂಡ್ಯ ಲೋಕಸಭಾ ಕಣ: ಕಾಂಗ್ರೆಸ್‌ ಅಭ್ಯರ್ಥಿ ʼಸ್ಟಾರ್‌ʼ ಚಂದ್ರು ಪರ ಸ್ಟಾರ್‌ ನಟ ʼದರ್ಶನ್‌ ಬಿರುಸಿನ ಪ್ರಚಾರ
x

ಮಂಡ್ಯ ಲೋಕಸಭಾ ಕಣ: ಕಾಂಗ್ರೆಸ್‌ ಅಭ್ಯರ್ಥಿ ʼಸ್ಟಾರ್‌ʼ ಚಂದ್ರು ಪರ ಸ್ಟಾರ್‌ ನಟ ʼದರ್ಶನ್‌ ಬಿರುಸಿನ ಪ್ರಚಾರ

ದರ್ಶನ್‌ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದ ಮಾಜಿ ಸಂಸದೆ, ಕನ್ನಡ ಚಲನಚಿತ್ರ ತಾರೆ ಹಾಗೂ ನಿರ್ಮಾಪಕಿ ರಮ್ಯ-ದಿವ್ಯಸ್ಪಂದನ ಅವರನ್ನು ಈ ಬಾರಿಯ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ̤


ಕರ್ನಾಟಕದ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಇನ್ನು ಕೇವಲ ವಾರವಷ್ಟೇ ಬಾಕಿ ಉಳಿದಿರುವಾಗ, ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಣಿಸಲು ಆಡಳಿತರೂಢ ಕಾಂಗ್ರೆಸ್‌ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕಾಂಗ್ರೆಸ್ ನ ರಾಜಕೀಯ ತಂತ್ರದ ಭಾಗವಾಗಿ ಕಾಂಗ್ರೆಸ್‌ ಅಭ್ಯರ್ಥಿ ʼಸ್ಟಾರ್‌ʼ ಚಂದ್ರು ಪರವಾಗಿ ಕನ್ನಡ ಚಿತ್ರರಂಗದ ಸ್ಟಾರ್‌ ನಟ ದರ್ಶನ್‌ ತೂಗುದೀಪ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ʼ ಸ್ಟಾರ್‌ʼ ಚಂದ್ರುʼ ಎಂದೇ ಜನಪ್ರಿಯರಾಗಿರುವ ವೆಂಕಟರಮಣೇ ಗೌಡ ಒದರ್ಥದಲ್ಲಿ ಚಿತ್ರರಂಗಕ್ಕೂ ಬೇಕಾಗಿರುವ ವ್ಯಕ್ತಿ. ಅವರಿಗಾಗಿ ಇಂದು ಮಳವಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ದರ್ಶನ ಪ್ರಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ʼದ ಫೆಡರಲ್-ಕರ್ನಾಟಕಕ್ಕೆ ತಿಳಿಸಿದ್ದಾರೆ.

“ದರ್ಶನ್‌ ಅವರು ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವತ್ತು ಪಂಚಾಯತ್‌ಗಳಲ್ಲಿ ಪ್ರಚಾರ ಮಾಡುತ್ತಾರೆ. ಆ ಕ್ಷೇತ್ರದ ಕಾಂಗ್ರೆಸ್‌ ವಿಧಾನ ಸಭಾ ಸದಸ್ಯ ನರೆಂದ್ರಸ್ವಾಮಿ ಅವರ ಪರವಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಅವರು ಮತ ಕೇಳುತ್ತಿದ್ದಾರೆ" ಎಂದು ದಿನೇಶ್‌ ಹೇಳಿದರು.

ಹಾಗಾದರೆ ದರ್ಶನ್‌ ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಸಹಜವಾಗಿ ರಾಜಕೀಯ ಪಕ್ಷಗಳ, ಮತದಾರರ ಮನಸ್ಸಿನಲ್ಲಿದೆ. ಇದಕ್ಕೆ ಸ್ವತಃ ದರ್ಶನ್‌ ಅವರೇ ಉತ್ತರ ನೀಡಿದ್ದಾರೆ.

“ನಾನು ಯಾವುದೇ ರಾಜಕೀಯ ಪಕ್ಷದ ಪರವಲ್ಲ. ನಾನು ವ್ಯಕ್ತಿ ಪರ. ಐದು ವರ್ಷದ ಹಿಂದೆ ನಾನು ನರೇಂದ್ರಣ್ಣ ಮಾಡಿದ ಸಹಾಯ ನನ್ನ ನೆನಪಿನಲ್ಲಿದೆ” ಎಂದು ದರ್ಶನ್‌ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಕುತೂಹಲಕ್ಕೆ ತೆರೆ ಎಳೆದ ದರ್ಶನ್‌; “ಮಾಧ್ಯಮದವರು, ನನ್ನ ಈ ಪ್ರಚಾರಕ್ಕೆ ಬೇರೆಬೇರೆ ಅರ್ಥಗಳನ್ನು ಕಲ್ಪಿಸಿದರೆ ಕಷ್ಟವಾಗುತ್ತದೆ. ಹಾಗಾಗಿ ನಾನು ಈ ಸ್ಫಷ್ಟನೆ ಕೊಡುತ್ತಿದ್ದೇನೆ. ʼಸುಮಲತಾ ಅವರಿಗೆ ಮಂಡ್ಯದ ಟಿಕೆಟ್‌ ಸಿಕ್ಕಲಿಲ್ಲವೆಂದರೆ, ನೀವು ನಮಗೆ ಸಹಾಯ ಮಾಡಬೇಕು. ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಬೇಕುʼ ಎಂದು ಉದಯ್‌ ಗೌಡರು ನನ್ನನ್ನು ಕೇಳಿದರು. ಮೊದಲು ಅವರು ಪ್ರಚಾರಕ್ಕೆ ಕರೆದ ಕಾರಣ, ನಾನು ಅವರಿಗಾಗಿ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್‌ ನಿಂದ ಸ್ಟಾರ್‌ ಚಂದ್ರು ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಮತನೀಡಿ, ನರೇಂದ್ರ ಸ್ವಾಮಿ ಹಾಗೂ ಉದಯ್‌ ಗೌಡರ ಕೈ ಭದ್ರ ಪಡಿಸಿ ಎಂದು ನಾನು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೇನೆ” ಎಂದು ದರ್ಶನ್‌ ಹೇಳಿದ್ದಾರೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ, ದರ್ಶನ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರು ʼಜೋಡೆತ್ತುʼ ಗಳಂತೆ ಪ್ರಚಾರ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿದ್ದರು. ಸುಮಲತಾ ಅವರು ಬಿಜೆಪಿಯ ಮೈತ್ರಿ ಧರ್ಮ ಪಾಲನೆಗೆ ಕಟ್ಟು ಬಿದ್ದು, ತಮ್ಮ ಸ್ಥಾನವನ್ನು ಜೆಡಿಎಸ್‌ ನ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಡುವ ನಿರ್ಧಾರ ತೆಗೆದುಕೊಂಡಾಗ, ಅವರ ಜೊತೆಯಲ್ಲಿ ನಿಂತಿದ್ದ ದರ್ಶನ್‌; “ಅಮ್ಮನ (ಸುಮಲತಾ) ತೀರ್ಮಾನವೇ ನನ್ನ ತೀರ್ಮಾನ. ಅವರು ಹೇಳಿದಂತೆ ಕೇಳುತ್ತೇನೆ” ಎಂದು ಹೇಳಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಈ ಹಿಂದೆ ದರ್ಶನವ ಅವರು ಬಿಜೆಪಿಯ ಸತೀಶ್‌ ರೆಡ್ಡಿ ಪರವಾಗಿ ಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸುಮಲತಾ ಅವರು ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪ್ರಚಾರ ಮಾಡುತ್ತಾರೆಯೇ ಇಲ್ಲವೇ ಎಂಬುದು, ಇನ್ನೂ ನಿಗೂಢವಾಗಿಯೇ ಉಳಿದಿರುವ ಹೊತ್ತಿನಲ್ಲಿ ದರ್ಶನ್‌ ಕಾಂಗ್ರೆಸ್‌ ಅಭ್ಯರ್ಥಿಗೆ ಪ್ರಚಾರ ಮಾಡುತ್ತಿರುವುದು, ಅಷ್ಟೇ ನಿಗೂಢ ನಡೆ ಎಂದು ಮತದಾರರಿಗೆ ತೋರುತ್ತಿದೆ. “ಸುಮಲತಾ ಕಳೆದ ಚುನಾವಣೆಯಲ್ಲಿ, ಕುಮಾರಸ್ವಾಮಿ ಮತ್ತು ಜೆಡಿಎಸ್‌ ಪಕ್ಷದ ನಾಯಕರು ತಮ್ಮ ಬಗ್ಗೆ ಆಡಿದ ಮಾತುಗಳು, ಹೀನಾಯ ನುಡಿಗಳನ್ನು ಸುಮಲತಾ ಅವರು ಮರೆತಂತೆ ಕಾಣುತ್ತಿಲ್ಲ. ಹಾಗಾಗಿ ದರ್ಶನ್‌ ಅವರಿಗೆ ಇದರಿಂದ ಸೂಚನೆ ಸಿಕ್ಕಂತಾಗಿ ಅವರು ಕಾಂಗ್ರೆಸ್ ಗೆ ಪ್ರಚಾರ ಮಾಡುತ್ತಿರಬಹುದು” ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಂಡ್ಯದ ಬಿಜೆಪಿ ನಾಯಕಿಯೊಬ್ಬರು ಹೇಳುತಾರೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮಣಿಸುವುದೆಂದರೆ, ಸುಲಭದ ಮಾತಲ್ಲ. ಹಾಗಾಗಿ ಕಾಂಗ್ರೆಸ್‌ ಯಾವುದೇ ಸಣ್ಣ ತಪ್ಪೂ ಮಾಡದಂತೆ ಎಚ್ಚರವಹಿಸಿ ಪ್ರಚಾರ ಮಾಡುತ್ತಿದೆ. “ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಸೋಲಿಸಿದರೆ, ಒಂದರ್ಥದಲ್ಲಿ ರಾಜ್ಯದಲ್ಲಿ ಜೆಡಿಎಸ್‌ ನೆಲಕಚ್ಚಿದಂತೆ ಎಂದು ಕಾಂಗ್ರೆಸ್‌ ಬಲವಾಗಿ ನಂಬಿದೆ. ಹಾಗಾಗಿ ಕುಮಾರಸ್ವಾಮಿಯನ್ನು ಮಣಿಸುವು ಯಾವುದೇ ಸಣ್ಣ ಪ್ರಯತ್ನವನ್ನೂ ಕಾಂಗ್ರೆಸ್‌ ಮಾಡದೇ ಬಿಡುವುದಿಲ್ಲ” ಎಂದು ಮಂಡ್ಯದ ಕಾಂಗ್ರೆಸ್‌ ನಾಯಕ- ಸಿ ಡಿ ಗಂಗಾಧರ್‌ ಹೇಳುತ್ತಾರೆ.

“ಈ ಪ್ರಯತ್ನದ ಒಂದು ಭಾಗವಾಗಿ ಮಂಡ್ಯದ ಮಾಜಿ ಸಂಸದೆ, ಕನ್ನಡ ಚಲನಚಿತ್ರ ತಾರೆ ಹಾಗೂ ನಿರ್ಮಾಪಕಿ ರಮ್ಯ-ದಿವ್ಯಸ್ಪಂದನ ಅವರನ್ನು ಈ ಬಾರಿಯ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ” ಎಂದು ಮಂಡ್ಯ ವಿಧಾನ ಸಭಾ ಸದಸ್ಯ ಗಾಣಿಗ ರವಿಕುಮಾರ್‌ ಅವರು – ದ ಫೆಡರಲ್‌ -ಕರ್ನಾಟಕʼ ಕ್ಕೆ ತಿಳಿಸಿದ್ದಾರೆ.

“ಮಂಡ್ಯದಲ್ಲಿ ಅಂಬರೀಶ್‌ ಕಾಲಿ ಮಾಡಿದ ಜಾಗವನ್ನು ತುಂಬಿದವರು ತಾರೆ-ರಮ್ಯ ದಿವ್ಯಸ್ಪಂದನ. ೨೦೧೨ರಲ್ಲಿ ಯುವ ಕಾಂಗ್ರೆಸ್‌ ಸೇರಿದ ರಮ್ಯ ೨೦೧೩ರಲ್ಲಿ ಲೋಕಸಭೆಗೆ ಮಂಡ್ಯ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಗೆದ್ದು, ಮಂಡ್ಯಕ್ಕೆ ಹೆಸರು ತಂದುಕೊಟ್ಟವರು. ನಂತರ ೨೦೧೪ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡವರು. ರಮ್ಯ ೨೦೧೭ರಲ್ಲಿ ಕಾಂಗ್ರೆಸ್‌ ಜಾಲತಾಣಕ್ಕೆ ಜೀವತುಂಬಿದ್ದೇ ಅಲ್ಲದೆ, ರಾಹುಲ್‌ ಗಾಂಧಿ ಅವರ ಸಮೀಪವರ್ತಿಗಳಲ್ಲಿ ಒಬ್ಬರೆನ್ನಿಸಿಕೊಂಡವರು. ಸಾಮಾಜಿಕ ಜಾಲತಾಣ ಜಗತ್ತಿನಲ್ಲಿ ಕಾಂಗ್ರೆಸ್‌ ಗೆ ಹಾಗೂ ರಾಹುಲ್‌ ಗಾಂಧಿ ಅವರಿಗೆ ಹೊಸ ವರ್ಚಸ್ಸನ್ನು ತಂದುಕೊಟ್ಟವರು. ಇಂದಿಗೂ ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತಿರುವವರು ಮತ್ತು ಅವರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಮಲೆತು ನಿಂತವರು. ಅಂಥವರು ಪ್ರಚಾರಕ್ಕಿಳಿದರೆ, ಮಹಿಳೆಯರ ಮತಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ನಂಬಿರುವ ಕಾಂಗ್ರೆಸ್‌, ರಮ್ಯರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಸ್ಟಾರ್‌ ಪ್ರಚಾರಕ್ಕಾಗಿ ಕರೆತರಲು ಎಲ್ಲ ಪ್ರಯತ್ನ ಮಾಡುತ್ತಿದೆ” ಎಂದು ರವಿಕುಮಾರ್‌ ಹೇಳುತ್ತಾರೆ.

ಕನ್ನಡ ಚಿತ್ರರಂಗಕ್ಕೂ ಕರ್ನಾಟಕ ರಾಜಕಾರಣಕ್ಕೂ ಅವಿನಾಭಾವ ಸಂಬಂಧವಿದೆ. ಕೆಲವರು ರಾಜಕೀಯವಾಗಿ ನೇರವಾಗಿ ಪಕ್ಷಗಳೊಂದಿಗೆ ಗುರುತಿಸಿಕೊಂಡರೆ, ಮತ್ತೆ ಕೆಲವರು ತಟಸ್ಥರಾಗಿ ಉಳಿದು, ಪಕ್ಷದ ಹಂಗಿಲ್ಲದೆ, ತಮ್ಮ ಗೆಳೆಯರಿಗೆ ಪ್ರಚಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಇದೇ ಸಮರ್ಥನೆ ನೀಡಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಿಚ್ಚ ಸುದೀಪ್‌ ಅವರು ಚಿತ್ರದುರ್ಗದ ಮೊಳಕಾಲ್ಮುರುವಿನಲ್ಲಿ ಬಿಜೆಪಿಯ ತಿಪ್ಪೇಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಟಾರ್‌ ನಟ ಶಿವರಾಜ್‌ ಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಕಾರಣ ಏನೇ ಇರಲಿ; ದರ್ಶನ್‌ ಅವರು ಪ್ರತಿಷ್ಠಿತ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಮತ ಕೇಳುತ್ತಿರುವುದು ಮಾತ್ರ, ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

Read More
Next Story