ಲೋಕ ಸ್ವಾರಸ್ಯ | ಈ ಬಾರಿಯ ಚುನಾವಣೆಯಲ್ಲಿ ʼಬಾಂಬೆ ಬಾಯ್ಸ್ʼ ಚಿತ್ತ ಎತ್ತ?
x

ಲೋಕ ಸ್ವಾರಸ್ಯ | ಈ ಬಾರಿಯ ಚುನಾವಣೆಯಲ್ಲಿ ʼಬಾಂಬೆ ಬಾಯ್ಸ್ʼ ಚಿತ್ತ ಎತ್ತ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಳಿದ ಹಲವು ಕುತೂಹಲಕಾರಿ ಸಂಗತಿಗಳಂತೆಯೇ ಹದಿನೇಳು ಮಂದಿ ʼಬಾಂಬೆ ಬಾಯ್ಸ್‌ʼಗಳ ನಡೆ ಏನು ಎಂಬುದು ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.


ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ರಾಜ್ಯದಲ್ಲಿ ಕಳೆದ 2019ರ ಜುಲೈ ತಿಂಗಳಲ್ಲಿ, ಆಡಳಿತ ನಡೆಸಿದ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಿತು. ತಮ್ಮ ಸರ್ಕಾರ ಪತನಕ್ಕೆ ಕಾರಣವಾದವರ ಜೊತೆಗೆ ಜೆಡಿಎಸ್‌ ಕೈ ಜೋಡಿಸಿರುವುದು ರಾಜಕಾರಣದಲ್ಲಿ ಯಾರೂ ಶತ್ರವೂ ಅಲ್ಲ. ಯಾರೂ ಮಿತ್ರರೂ ಅಲ್ಲ ಎಂಬ ನಂಬಿಕೆಯನ್ನು ಮತ್ತಷ್ಟು ಗಟ್ಟಿ ಮಾಡಿದೆ.

“ಜೆಡಿಎಸ್‌ ಸಮರ್ಥಿಸಿಕೊಳ್ಳುವಂತೆ ತಮ್ಮ ಪಕ್ಷದ ಉಳಿವಿಗಾಗಿ ಜೆಡಿಎಸ್‌-ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಬಹುದು. ಆದರೆ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು, ಮಂಡ್ಯ ಜಿಲ್ಲೆಯಲ್ಲಿ ತಮ್ಮ ಗೆಲುವಿಗಾಗಿ, ತಮ್ಮ ಸರ್ಕಾರದ ಪತನದ ಸೂತ್ರದಾರರಂತೆ ವರ್ತಿಸಿ, ತಮ್ಮನ್ನು ತೀಕ್ಷ್ಣ ಮಾತುಗಳಿಂದ ಕೆಣಕಿದ, ತಿವಿದ ವ್ಯಕ್ತಿಯೊಂದಿಗೆ ಕೈ ಜೋಡಿಸಿರುವುದು ರಾಜಕೀಯ ಮೌಲ್ಯಗಳ ಅಧಃಪತನದ ದಿಕ್ಸೂಚಿಯಾಗಿದೆ” ಎನ್ನುವುದು ರಾಜಕೀಯ ವಿಶ್ಲೇಷಕರ ಅನಿಸಿಕೆ.

ಅಡಗೂರು ಎಚ್. ‌ವಿಶ್ವನಾಥ್ ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದು, ನಂತರ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷ ಸೇರಿ, ಅದರ ರಾಜ್ಯ ಅಧ್ಯಕ್ಷರಾಗಿದ್ದು, ನಂತರ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಕೆಡುವುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕಿಳಿಸುವಲ್ಲಿ ವಿಶ್ವನಾಥ್‌ ಅವರ ಜೊತೆಗೆ ಕೈ ಜೋಡಿಸಿ, ವಿಶ್ವಾಸ ಮತದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಹಾಕಲಿಕ್ಕಾಗಿ ಮುಂಬೈಗೆ ತೆರಳಿ, ಆಪರೇಷನ್‌ ಕಮಲಕ್ಕೆ ಬಲಿಯಾದವರು 17 ಮಂದಿ. ಮುಂಬೈಗೆ ತೆರಳಿ, ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಈ ಗುಂಪಿಗೆ ಮಾಧ್ಯಮ ನಾಮಕರಣ ಮಾಡಿರುವುದು ʻಬಾಂಬೆ ಬಾಯ್ಸ್‌ʼ ಎಂದೇ.

ಈಗ ಮತ್ತೆ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಬಾಂಬೆ ಬಾಯ್ಸ್ ತಂಡದ ಹಲವು ಸದಸ್ಯರ ನಡೆ ತೀವ್ರ ಕುತೂಹಲ ಮೂಡಿಸಿದೆ.

2018ರಲ್ಲಿ ರಚನೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಳಕ್ಕಿಳಿಸಲು ಎರಡೂ ಪಕ್ಷದ ಶಾಸಕರು ಹಾಗೂ ಪಕ್ಷೇತರ ಶಾಸಕರು ರಾಜೀನಾಮೆ ನೀಡಿ ಮುಂಬೈನ ಹೋಟೆಲ್ ಒಂದರಲ್ಲಿ ಬರೋಬ್ಬರಿ ಒಂದು ತಿಂಗಳು ಠಿಕಾಣಿ ಹೂಡಿದ್ದರು. ಈ ತಂಡದಲ್ಲಿ ಒಟ್ಟು 17 ಮಂದಿ ಶಾಸಕರಿದ್ದರು. ಆ ಪೈಕಿ 12 ಮಂದಿ ಕಾಂಗ್ರೆಸ್‌ನಿಂದ ಬಂದವರಾಗಿದ್ದರು. ಮೂವರು ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರಾಗಿದ್ದರು.

ಮೈತ್ರಿ ಸರ್ಕಾರ ಉರುಳಿಸಿದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಪಟ್ಟ, ನಿಗಮ ಮಂಡಳಿ ಪಟ್ಟ ಅನುಭವಿಸಿದ ಈ ತಂಡದ ಸದಸ್ಯರು, ತಮ್ಮ ಕ್ಷೇತ್ರಾಭಿವೃದ್ದಿಗೆ ಭರಪೂರ ಅನುದಾನವನ್ನೂ ಪಡೆದಿದ್ದರು. ಕೆಲವರು ಉಪ ಚುನಾವಣೆಗಳಲ್ಲಿ ಸೋತರೂ ಮೇಲ್ಮನೆ ಸದಸ್ಯರಾಗಿದ್ದರು. ಆದರೆ, 2023ರ ಚುನಾವಣೆಯಲ್ಲಿ ಬಹುತೇಕರಿಗೆ ಅದೃಷ್ಟ ಕೈಕೊಟ್ಟಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಂಬೆ ಬಾಯ್ಸ್‌ ಸದಸ್ಯರಲ್ಲಿ ರಮೇಶ್ ಜಾರಕಿಹೊಳಿ, ಎಸ್‌.ಟಿ. ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್, ಕೆ. ಗೋಪಾಲಯ್ಯ ಹಾಗೂ ಶಿವರಾಮ್ ಹೆಬ್ಬಾರ್ ಗೆಲುವು ಕಂಡರೆ, ಡಾ. ಕೆ. ಸುಧಾಕರ್, ಕೆ.ಸಿ. ನಾರಾಯಣ ಗೌಡ, ಬಿ.ಸಿ. ಪಾಟೀಲ್, ಆನಂದ್ ಸಿಂಗ್‌, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ಪ್ರತಾಪ್ ಗೌಡ ಪಾಟೀಲ್, ಎಚ್. ನಾಗೇಶ್, ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್ ಸೋಲು ಕಂಡರು.

ಎಂಟಿಬಿ ನಾಗರಾಜ್‌ ಚುನಾವಣೆಯಲ್ಲಿ ಸೋತರೂ ಮೇಲ್ಮನೆ ಸದಸ್ಯರಾದರು. ಎಚ್. ವಿಶ್ವನಾಥ್ ಮೇಲ್ಮನೆ ಸದಸ್ಯರಾಗಿಯೇ ಉಳಿದಿದ್ದಾರೆ. ಉಪ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧಿಸಿ ಸೋತರೂ್ ವಿಶ್ವನಾಥ್‌ ಅವರಿಗೆ ಬಿಜೆಪಿ ಸರ್ಕಾರ ಗೌರವಾಗಿಯೇ ನಡೆಸಿಕೊಂಡು, ವಿಧಾನ ಪರಿಷತ್ತಿಗೆ ಸಾಂಸ್ಕೃತಿಕ ಲೋಕದ ಪ್ರತಿನಿಧಿಯಾಗಿ ಆಯ್ಕೆಯಾದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್, ಬಿಜೆಪಿಯ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದರು. ಮತ್ತೊಂದೆಡೆ ಶಿವರಾಮ್ ಹೆಬ್ಬಾರ್ ಅವರು ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣರಾದರು.

ಈ ವೇಳೆ ಎಸ್‌ ಟಿ ಸೋಮಶೇಖರ್ ಅವರು, ʻಆತ್ಮಸಾಕ್ಷಿಗೆ ಮತ ನೀಡಿದ್ದೇನೆʼ ಎಂದು ಹೇಳುವ ಮೂಲಕ ಕಾಂಗ್ರೆಸ್ ಪರ ಮತ ಚಲಾಯಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಇತ್ತೀಚೆಗೆ ಕೆಂಗೇರಿ ಉಪನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವಂತೆ ಸೋಮಶೇಖರ್ ಅವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ʻʻಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ವಲಸಿಗರನ್ನು ಹಾಗೂ ಕ್ಷೇತ್ರದಿಂದಲೇ ತಿರಸ್ಕೃತರಾದ ಅಭ್ಯರ್ಥಿಗಳನ್ನು ಒಪ್ಪಿಕೊಳ್ಳಲು ಯಶವಂತಪುರ ಕ್ಷೇತ್ರ ಪುಕ್ಸಟ್ಟೆ ಬಿದ್ದಿದೆಯೇʼʼ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಶಿವರಾಮ್ ಹೆಬ್ಬಾರ ಅವರು ಬಿಜೆಪಿಯಲ್ಲಿ ಇದ್ದರೂ, ಅವರ ಮನಸ್ಸು ಮಾತ್ರ ಕಾಂಗ್ರೆಸ್ ಕಡೆಗೆ ಹೊಯ್ದಾಡುತ್ತಿದೆ. ಹಾಗಾಗಿಯೇ ರಾಜ್ಯಸಭಾ ಚುನಾವಣೆಯಲ್ಲಿ ಗೈರಾಗುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣರಾದರು. ಇತ್ತೀಚೆಗೆ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ ಮಾಧ್ಯಮದ ಎದುರು ʻʻಬಿಜೆಪಿಯ ಕೆಲ ಮುಖಂಡರ ಮೇಲೆ ನನಗೆ ಅಸಮಾಧಾನವಿದೆʼʼ ಎಂದು ಹೇಳಿಕೊಂಡಿದ್ದರು. ಇದೀಗ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಂಜಲಿ ನಿಂಬಾಳ್ಕರ್‌ ಅವರ ಪರ ನಿಲ್ಲಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಎಂಎಲ್‌ಸಿ ಅಡಗೂರು ಎಚ್ ವಿಶ್ವನಾಥ್ ಅವರು ಬಿಜೆಪಿ ವಿರುದ್ಧವೇ ಬಹಿರಂಗವಾಗಿ ಟೀಕೆ ಮಾಡುತ್ತಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ದಿನಾಂಕವನ್ನೂ ನಿಗದಿ ಮಾಡಿಕೊಂಡಿದ್ದರು. ಹಳ್ಳಿಹಕ್ಕಿ ಮತ್ತೆ ಕಾಂಗ್ರೆಸ್ ಗೂಡು ಸೇರಿದರೆ ಲೋಕಸಭಾ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿತ್ತು. ಆದರೆ ಅದು ಆಗಲ್ಲ ಎನ್ನುವುದು ತಿಳಿದ ಬಳಿಕ ಮತ್ತೊಂದು ಬೇಡಿಕೆಯನ್ನು ಕಾಂಗ್ರೆಸ್ ನಾಯಕರ ಬಳಿ ಹೇಳಿಕೊಂಡಿದ್ದರು. ತಮ್ಮ ಕುಟುಂಬದವರೊಬ್ಬರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಕೇಳಿಕೊಂಡಿದ್ದರು‌. ಆದರೆ ಕಾಂಗ್ರೆಸ್ ನಾಯಕರು ಒಪ್ಪದೇ ಇದ್ದಾಗ ಅವರು ಬಿಜೆಪಿ ಬಿಡುವ ತೀರ್ಮಾನದಿಂದ ಹಿಂದೆ ಸರಿದರು ಎಂದು ವಿಶ್ವನಾಥ್ ಅವರ ಅಪ್ತವಲಯದವರೊಬ್ಬರು ʻದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆ ಮಾಡುತ್ತಿದ್ದಾರೆ. ಹೆಬ್ಬಾಳ್ಕರ್ ಮೇಲಿನ ದ್ವೇಷದಿಂದ ರಮೇಶ್ ಜಾರಕಿಹೊಳಿ ಇಲ್ಲಿ ತಮ್ಮ ಪಕ್ಷದ ಶೆಟ್ಟರ್‌ ಪರ ನಿಂತಿದ್ದಾರೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಯಾವ ರೀತಿ ಕೆಲಸ ಮಾಡುತ್ತಾರೆ ಎನ್ನುವುದು ನಿಗೂಢ.

ಈ ಬಗ್ಗೆ ʻದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿರುವ ಹಿರಿಯ ಪತ್ರಕರ್ತ ಅಶೋಕ್ ಚಂದರಗಿ ಅವರು, ʻʻಚುನಾವಣೆ ಸಂದರ್ಭದಲ್ಲಿ ಜಾರಕಿಹೊಳಿ ಬ್ರದರ್ಸ್ ಪಕ್ಷಭೇದವಿಲ್ಲದೇ ಒಂದಾಗುತ್ತಾರೆ. ಈಗ ರಮೇಶ್ ಜಾರಕಿಹೊಳಿ ಅವರ ಸಹೋದರ ಸತೀಶ್ ಜಾರಕಿಹೊಳಿ ಅವರ ಮಗಳು ಚಿಕ್ಕೋಡಿಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಸಹಜವಾಗಿ ಇಡೀ ಕುಟುಂಬ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರʼʼ ಎಂದು ಹೇಳಿದರು.

ಇನ್ನು ಮತ್ತೋರ್ವ ಬಾಂಬೆ ಬಾಯ್ಸ್ ತಂಡದ ಸದಸ್ಯ ಆರ್. ಶಂಕರ್ ಅವರು ಕಳೆದ ವಾರ (ಶುಕ್ರವಾರ) ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರು 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ನಾಯಕತ್ವದ ʻಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷʼದಿಂದ ಗೆಲುವು ಕಂಡಿದ್ದರು. ಆ ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿ, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಉಪ ಚುನಾವಣೆ ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ ಬಳಿಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಸೇರಿದ್ದರು. NCPಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕೆ. ಆರ್. ಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ಕೆ.ಸಿ. ನಾರಾಯಣ ಗೌಡ, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಆನಂತರ ಉಪಚುನಾವಣೆಯಲ್ಲಿ ಗೆಲುವು ಕಂಡು ಮಂತ್ರಿಗಿರಿಯನ್ನೂ ಗಿಟ್ಟಿಸಿಕೊಳ್ಳುತ್ತಾರೆ. ಆದರೆ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಕ್ಕೆ ನಾರಾಯಣ ಗೌಡ ಮುಂದಾಗಿದ್ದರು. ಕ್ಷೇತ್ರದ ಸ್ಥಳೀಯ ಕೆಲ ಮುಖಂಡರ ವಿರೋಧದ ನಡುವೆಯೂ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದರು. ಕೊನೆಯ ಹಂತದಲ್ಲಿ ಬಿಜೆಪಿ ವರಿಷ್ಠರ ಒತ್ತಡಕ್ಕೆ ಮಣಿದು ಬಿಜೆಪಿಯಲ್ಲೇ ಉಳಿದಿದ್ದರು. ಕೊನೆಗೆ ಚುನಾವಣೆಯಲ್ಲಿ ಕೆ. ಆರ್. ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣ ಗೌಡ ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು ವಿರುದ್ಧ ಪರಾಭವಗೊಂಡಿದ್ದರು. ಈ ಲೋಕಸಭಾ ಚುನಾವಣೆ ಸಮಯದಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಹೆಸರು ಘೋಷಣೆಯಾದ ಬೆನ್ನಲ್ಲೇ ಮತ್ತೆ ನಾರಾಯಣ ಗೌಡ ಸಿಡಿದೆದ್ದಿದ್ದರು. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡದೆ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ನಾರಾಯಣ ಗೌಡ ಮತ್ತೆ ಕಾಂಗ್ರೆಸ್ ಹೊಸ್ತಿಲಲ್ಲಿ ಬಂದು ನಿಂತಿದ್ದರು. ಆದರೆ ಇದೀಗ ಮತ್ತೆ ನಾರಾಯಣಗೌಡರನ್ನು ಸಂತೈಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಒಳ ಏಟು ಕೊಡುವರೇ ಎನ್ನುವ ಅನುಮಾನವಂತೂ ಜೆಡಿಎಸ್ ನಾಯಕರಲ್ಲಿ ಇದ್ದೇ ಇದೆ.

ಇನ್ನು ಬಾಂಬೆ ಬಾಯ್ಸ್ ತಂಡದ ಎಂಟು ಸದಸ್ಯರು ಬಿಜೆಪಿಯಲ್ಲಿಯೇ ಭದ್ರವಾಗಿ ಉಳಿದುಕೊಂಡಿದ್ದಾರೆ. ಈ ಎಂಟರಲ್ಲಿ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಲಯ್ಯ ಮಾತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆನಂತರ 2023ರಲ್ಲೂ ಅವರು ಗೆಲುವು ಕಂಡರು. ಸದ್ಯ ಬಿಜೆಪಿಯಲ್ಲಿಯೇ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಡಾ. ಕೆ ಸುಧಾಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಮಿಂಚಿದರು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮುಗ್ಗರಿಸಿ, ಮನೆ ಸೇರಿದರು. ಆದರೆ ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇನ್ನು ಆಪರೇಷನ್‌ಗೆ ಬಲಿಯಾದವರಲ್ಲಿ ಬಿ. ಸಿ. ಪಾಟೀಲ್ ಕೂಡ ಒಬ್ಬರು. ಇವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸಿದರು. ಆದರೆ ಹೈಮಾಂಡ್‌ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಿತು. ಹಾಗಾಗಿ ಕೌರವ ಮುನಿಸಿಕೊಂಡಿದ್ದಾರೆ. ಅವರು ತಟಸ್ಥರಾಗಿ ಉಳಿದು ಕಾಂಗ್ರೆಸ್‌ ಅಭ್ಯರ್ಥಿಗೆ ಸಹಾಯಮಾಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಆದರೆ ಆನಂದ್ ಸಿಂಗ್, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ಪ್ರತಾಪ್ ಗೌಡ ಪಾಟೀಲ್, ಎಚ್. ನಾಗೇಶ್ ಅವರು ಸೋತು ಮನೆ ಸೇರಿದ್ದಾರೆ. ಸದ್ಯ ರಾಜಕಾರಣದಲ್ಲಿ ಇದ್ದರೂ ಇಲ್ಲದಂತಹ ಪರಿಸ್ಥಿತಿಯಲ್ಲಿದ್ದಾರೆ. ಸಹಜವಾಗಿಯೇ ಇವರು ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲವಾಗಿ ನಿಲ್ಲುವರೆಂದು ನಂಬಲಾಗಿದೆ. ಆದರೆ ಈ ನಾಯಕರಿಗಿರುವ ಅಲ್ಪ ಸ್ವಲ್ಪ ಮತಗಳನ್ನೂ ಕಾಂಗ್ರೆಸ್ ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

Read More
Next Story