ರಂಗೇರಿದ ಬಾಗಲಕೋಟೆ ಚುನಾವಣಾ ರಣಕಣ: ಸಂಯುಕ್ತಾ ʻಕೈʼ ಬಲಪಡಿಸಲು ಅಖಾಡಕ್ಕೆ ಧುಮುಕಿದ ವೀಣಾ
x

ರಂಗೇರಿದ ಬಾಗಲಕೋಟೆ ಚುನಾವಣಾ ರಣಕಣ: ಸಂಯುಕ್ತಾ ʻಕೈʼ ಬಲಪಡಿಸಲು ಅಖಾಡಕ್ಕೆ ಧುಮುಕಿದ ವೀಣಾ


ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಕೈ ನಾಯಕಿ ವೀಣಾ ಕಾಶಪ್ಪನವರ ಮುನಿಸಿಕೊಂಡಿದ್ದರು. ಆದರೆ ಇಂದು ವೀಣಾ ಕಾಶಪ್ಪನವರ್ ಅವರಲ್ಲಿ ಮಡುಗಟ್ಟಿದ್ದ ಕೋಪ-ತಾಪ-ಹತಾಷ-ಬೇಸರ-ಮುನಿಸು ಮಾಯವಾದಂತಿದೆ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

ರೋಡ್ ಶೋ ವೇಳೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭರ್ಜರಿ ಡ್ಯಾನ್ಸ್ ಮಾಡಿದ್ದು, ಅವರನ್ನು ಕೈ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ವೀಣಾ ಕಾಶಪ್ಪನವರಗೆ ಜೈಕಾರ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು, ಅಕ್ಕನಿಗೆ ಟಿಕೆಟ್ ಸಿಕ್ಕಿಲ್ಲ ಎಂಬುದನ್ನು ಮರೆತು ಇದೀಗ ಪ್ರಚಾರದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.‌

ಸಂಯುಕ್ತಾ ಭರವಸೆ ಹುಸಿಗೊಳಿಸದ ಅಕ್ಕ ವೀಣಾ

ಸಂಯುಕ್ತಾ ಪಾಟೀಲ್‌ ಅವರು ʻಅಕ್ಕಾ ವೀಣಾ ಕಾಶಪ್ಪನವರ್‌ ನನ್ನ ಜೊತೆ ಪ್ರಚಾರಕ್ಕೆ ಬರುತ್ತಾರೆ, ನನ್ನ ಗೆಲುವಿಗೆ ಸಾಥ್‌ ನೀಡುತ್ತಾರೆ ಎಂದು ಭರವಸೆಯ ಮಾತುಗಳನ್ನು ಆಡಿದ್ದರು. ಇದೀಗ ಅವರ ಭರವಸೆ ಹುಸಿಯಾಗಲಿಲ್ಲ. ಸಂಯುಕ್ತಾ ಪಾಟೀಲ್‌ ಜೊತೆಯಲ್ಲಿ ವೀಣಾ ಕಾಶಪ್ಪನವರ್‌ ಅವರು ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ ಕೈ ಅಭ್ಯರ್ಥಿ ಗೆಲ್ಲಿಸುವ ಹೊಣೆ ಹೊತ್ತಿದ್ದಾರೆ.

ವೀಣಾ ಕಾಶಪ್ಪನವರ್‌ ರಾಜಕೀಯ ಜೀವನ:

ವೀಣಾ ಕಾಶಪ್ಪನವರ್‌ ಅವರು ಅನಿರೀಕ್ಷಿತವಾಗಿ 2016ರ ಮೇ 7ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಆ ಬಳಿಕ ಜಿಲ್ಲೆಯಲ್ಲಿ ಅವರ ಮಾವ ಎಸ್‌ಆರ್‌ ಕಾಶಪ್ಪನವರ್ ಮತ್ತು ಪತಿ‌ ವಿಜಯಾನಂದ ಕಾಶಪ್ಪನವರ್ ಅವರ ವರ್ಚಸ್‌ನ್ನು ಮೀರಿ ಬೆಳೆದರು.

ಕ್ಷೇತ್ರದಲ್ಲಿನ ಅವರ ವರ್ಚಸ್ಸು ಮತ್ತು ಜಾತಿ ಲೆಕ್ಕಾಚಾರ ನೋಡಿಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿತು. ಆದರೆ, ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಎದುರು 1,68,187 ಮತಗಳ ಅಂತರದಿಂದ ವೀಣಾ ಕಾಶಪ್ಪನವರ್ ಸೋಲು‌ ಕಂಡರು. ಆ ಬಳಿಕವೂ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿದ್ದರು.

ಟಿಕೆಟ್‌ ವಂಚಿತೆ ವೀಣಾ ಮುನಿಸು

ಈ ಬಾರಿಯ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು ಆದರೆ, ಕಾಂಗ್ರೆಸ್‌ ನಾಯಕರು ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅವರಿಗೆ ಟಿಕೇಟ್‌ ನೀಡಿದರು. ಟಿಕೆಟ್‌ ಕೈತಪ್ಪಿದ ಹಿನ್ನೆಲೆ ವೀಣಾ ಕಾಶಪ್ಪನವರ್‌ ಅವರು ತೀವ್ರ ಹತಾಷರಾಗಿದ್ದರು ಮತ್ತು ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಸಂಯುಕ್ತಾ ಪರ ಪ್ರಚಾರ ಮಾಡಲು ಹೋಗುವುದಿಲ್ಲ ಎಂದು ಹಟ ಕೂಡ ಹಿಡಿದು ಕೆಲದಿನಗಳ ಕಾಲ ಬೆಂಗಳೂರಲ್ಲೇ ಉಳಿದುಬಿಟ್ಟಿದ್ದರು.

ಸಂಯುಕ್ತಾ ಕೈ ಬಲಪಡಿಸಿದ ವೀಣಾ

ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದ ವೀಣಾ ಕಾಶಪ್ಪನವರ್ ಇದೀಗ ಮುನಿಸನ್ನು ಬದಿಗಿಟ್ಟು, ಇಂದು ನಡೆದ ಕಾಂಗ್ರೆಸ್ ರೋಡ್ ಶೋನಲ್ಲಿ ಭಾಗಿಯಾಗಿದರು. ಇಂದು ಸಂಯಕ್ತ ಪಾಟೀಲ್‌ ಅವರು ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಾಳೆಯಲ್ಲಿ ಹರ್ಷ ಮೂಡಿಸಿದ್ದಾರೆ. ವೀಣಾ ಕಾಶಪ್ಪನವರ್‌ ಅವರ ಬೆಂಬಲದಿಂದ ಸಂಯುಕ್ತಾ ಪಾಟೀಲ್ ಅವರಿಗೆ ಅರ್ಧ ಗೆಲುವು ಸಿಕ್ಕಂತಾಗಿದೆ. ಏಕೆಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ವೀಣಾ ಕಾಶಪ್ಪನವರ್ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರಾಗಿದ್ದಾರೆ.

ಸಂಯುಕ್ತಾ ಜತೆ ಜತೆಯಲ್ಲೇ ನಡೆದ ವೀಣಾ ಇಬ್ಬರು ಒಟ್ಟಿಗೆ ಕೈ ಮೇಲಕೆತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ದಂಪತಿ ಸಮೇತರಾಗಿ ರೋಡ್ ಶೋನಲ್ಲಿ ಆಗಮಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವೀಣಾ ಕಾಶಪ್ಪನವರ್ ನಾವು ಪಕ್ಷದ ನಿಲುವಿಗೆ ಬದ್ಧರಾಗಿದ್ದೇವೆ ಎಂಬುದನ್ನು ಕಡೆಗೂ ಸಾಬೀತುಪಡಿಸಿದ್ದಾರೆ.


ಈ ದಿನದವರೆಗೂ ಸಂಯುಕ್ತಾ ಪಾಟೀಲ್‌ ಅವರಿಗೆ ಒಂದು ರೀತಿಯ ಭಯ ಇದ್ದದ್ದು ಸುಳ್ಳಲ್ಲ. ಏಕೆಂದರೆ ವೀಣಾ ಕಾಶಪ್ಪನವರ್ ಹಾಗೂ ವಿಜಯಾನಂದ್‌ ಕಾಶಪ್ಪನವರ್‌ ಅವರು ಬಹಿರಂಗವಾಗಿಯೇ ಸಂಯುಕ್ತಾ ಪಟೀಲ್‌ ವಿರುದ್ಧ ಅಸಮಧಾನ ಹೊರಹಾಕಿದ್ದರು. ಆ ಬಳಿಕ ಸಂಯುಕ್ತಾ ಪಟೀಲ್‌ ಅವರ ತಂದೆ ಶಿವಾನಂದ್‌ ಪಾಟೀಲ್‌ ಅವರು ಪಕ್ಷದ ನಾಯಕರ ಮೂಲಕ ವಿಜಯಾನಂದ್‌ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ ವೀಣಾ ಕಾಶಪ್ಪನವರ್‌ ಅವರು ಯಾವುದೇ ಕಾರಣಕ್ಕೂ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಲು ಒಪ್ಪಲಿಲ್ಲ.

ಈ ನಡುವೆ ವೀಣಾ ಕಾಶಪ್ಪನವರ್‌ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದಕ್ಕೆ ಅವರ ಪತಿ ವಿಜಯಾನಂದ್‌ ಕಾಶಪ್ಪನವರ್‌ ಪ್ರತಿಕ್ರಿಯಿಸಿ, ನಮ್ಮ ಕುಟುಂಬವೆಂದರೆ ಕಾಂಗ್ರೆಸ್‌, ಕಾಂಗ್ರೆಸ್‌ ಎಂದರೆ ನಮ್ಮ ಕುಟುಂಬ ಎಂದು ಹೇಳುವ ಮೂಲಕ ಆ ಊಹಾಪೋಹಕ್ಕೆ ಬ್ರೇಕ್‌ ಹಾಕಿದ್ದರು. ಆ ಬಳಿಕ ವೀಣಾ ಕಾಶಪ್ಪನವರ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಯನ್ನೂ ಮಾಡಿದರು. ಆದರೆ ಚಾಣಾಕ್ಷ ರಾಜಕಾರಣಿ ಎನಿಸಿಕೊಂಡಿರುವ ಶಿವಾನಂದ್‌ ಪಾಟೀಲ್‌ ಅವರು ವಿಜಯಾನಂದ್‌ ಕಾಶಪ್ಪನವರ್‌ ಅವರ ಮೂಲಕ ವೀಣಾ ಕಾಶಪ್ಪನವರ್‌ ಮನವೊಲಿಸುವಲ್ಲಿ ಯಶಸ್ವಿಯಾದರು.


ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ‌ ಹಿರಿಯ ಪತ್ರಕರ್ತ ವೀರೇಶ್ ಎನ್‌ ಅವರು, ʻʻಅನುಭವಿ ರಾಜಕಾರಣಿ ಶಿವಾನಂದ್‌ ಪಾಟೀಲ್‌ ಅವರು ಚುನಾವಣಾ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡವರು. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿಯೇ ಭಿನ್ನಮತ ಇತ್ತು. ಆ ಭಿನ್ನಮತವನ್ನ ಶಮನಮಾಡುವಲ್ಲಿ ಶಿವಾನಂದ ಪಾಟೀಲ್‌ ಅವರು ಯಶಸ್ಸು ಕಂಡಿದ್ದಾರೆ. ಬಿಜೆಪಿಯಿಂದ ಕೆಲವರನ್ನು ಕಾಂಗ್ರೆಸ್‌ಗೆ ಸೆಳೆದಿದ್ದಾರೆ. ಹಾಗಾಗಿ ಅವರ ಪುತ್ರಿ ಉತ್ತಮ ಪ್ರತಿಸ್ಪರ್ಧಿಯಾಗಿದ್ದಾರೆ'' ಎಂದು ತಿಳಿಸಿದರು.

ʻʻಬಿಜೆಪಿ ಅಭ್ಯರ್ಥಿ ಗದ್ದಿಗೌಡರ್‌ ಅವರು ಸೋಲಿಲ್ಲದ ಸರದಾರನಾಗಿ ಐದನೇ ಬಾರಿ ಅಖಾಡದಲ್ಲಿದ್ದಾರೆ. ಆದರೆ ಈ ಬಾರಿ ಅವರಿಗೆ ಅಷ್ಟು ಸುಲಭದ ಜಯ ಸಿಗುವುದಿಲ್ಲ. ಏಕೆಂದರೆ ಈ ಬಾರಿ ಅವರಿಗೆ ಪಕ್ಷದೊಳಗೆ ಭನ್ನಮತ ಇದೆ. ಈ ಹಿಂದೆ ಮಾಜಿ ಸಚಿವ ಮುರಗೇಶ್‌ ನಿರಾಣಿ ಅವರು ಗದ್ದಿಗೌಡರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ವಿಧಾನಸಭಾ ಚುನಾವಣೆ ಸಮಯದಲ್ಲಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷೇತ್ರದ ಅಭ್ಯರ್ಥಿ ಪರವಾಗಿಯೂ ಗದ್ದಿಗೌಡರ್‌ ಪ್ರಚಾರ ಮಾಡಲ್ಲ ಎನ್ನುವ ಆರೋಪ ಇದೆ. ಈ ಬಾರಿ ಅವರಿಗೆ ಅದು ಮುಳುವಾಗು ಸಾಧ್ಯತೆ ಇದೆʼʼ ಎಂದು ವೀರೇಶ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Read More
Next Story