Loksabha Election 2024 | ವಿಜಯಪುರ: ಜಿಗಜಿಣಗಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕ್ತಾರಾ ಆಲಗೂರ?
x

Loksabha Election 2024 | ವಿಜಯಪುರ: ಜಿಗಜಿಣಗಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕ್ತಾರಾ ಆಲಗೂರ?


ಒಂದು ಕಾಲದಲ್ಲಿ ಸೂಫಿ ಸಂತರ ನಾಡಾಗಿದ್ದ ವಿಜಯಪುರ ಆ ನಂತರ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪರಿಣಾಮದಿಂದ ಶರಣರ ನಾಡಾಯಿತು. ಕಾಲಾನಂತರದಲ್ಲಿ ರಾಜಕೀಯವಾಗಿಯೂ ಹೆಚ್ಚು ಸದ್ದು ಮಾಡುವ ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದು ಅಸ್ತಿತ್ತದಲ್ಲಿರುವ ಕ್ಷೇತ್ರವಾಗಿದ್ದು, ಈ ಮೊದಲು ಇದನ್ನು ಬಿಜಾಪುರ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು. ಇದೀಗ ವಿಜಯಪುರ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿದೆ.

ವಿಜಯಪುರ (ಎಸ್ಸಿ ಮೀಸಲು) ಕ್ಷೇತ್ರವು ಹೊಂದಾಣಿಕೆ ರಾಜಕೀಯಕ್ಕೆ ಹೆಸರುವಾಸಿಯಾಗಿದೆ. ಪ್ರತಿಬಾರಿಯೂ ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಲೇ ಇರುತ್ತದೆ. ಈ ಬಾರಿ ಮೇಲ್ನೋಟಕ್ಕೆ ಹೊಂದಾಣಿಕೆ ತಂತ್ರಗಳು ನಡೆಯುತ್ತಿಲ್ಲ ಎಂದು ಕಂಡುಬಂದರೂ, ಒಳನೋಟ ಬೇರೆಯೇ ಹೇಳುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿಯಿಂದ ಹಳೆ ಹುರಿಯಾಳು ರಮೇಶ ಜಿಗಜಿಣಗಿ ಇದ್ದರೆ, ಕಾಂಗ್ರೆಸ್ನಿಂದ ಹಣಮಂತರಾವ ಆಲಗೂರ (ರಾಜು ಆಲಗೂರ) ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಈ ಇಬ್ಬರ ನಡುವೆ ನೇರಾ ಹಣಾಹಣಿ ನಡೆದಿದೆ. 12ನೇ ಶತಮಾನದಲ್ಲೇ ಸಮಾನತೆ ಸಂದೇಶ ಸಾರಿದ ಬಸವಣ್ಣನ ಜನ್ಮಭೂಮಿಯಲ್ಲಿ ಜಾತಿ ರಾಜಕಾರಣವೇ ಪ್ರಧಾನವಾಗಿದೆ.

ಜಾತಿ ಲೆಕ್ಕಾಚಾರ

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ (ಪಂಚಮಸಾಲಿ, ರೆಡ್ಡಿ, ಗಾಣಿಗ, ಬಣಜಿಗ, ಕೂಡ ಒಕ್ಕಲಿಗ) ಮತಗಳು- 7 ಲಕ್ಷ, ಪರಿಶಿಷ್ಟ ಜಾತಿ ಬಲಗೈ- 2 ಲಕ್ಷ, ಎಡಗೈ-70 ಸಾವಿರ, ಲಂಬಾಣಿ-1 ಲಕ್ಷ, ಕುರುಬ- 5 ಲಕ್ಷ, ಮುಸ್ಲಿಂ- 3 ಲಕ್ಷ, ಭೋವಿ- 30 ಸಾವಿರ ಮತದಾರರಿದ್ದಾರೆ. ಇವರಲ್ಲಿ ಲಿಂಗಾಯತ ಸಮುದಾಯ ಫಲಿತಾಂಶವನ್ನೇ ನಿರ್ಧರಿಸುವ ಮಟ್ಟಿಗೆ ಪ್ರಾಭಲ್ಯವನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 19,30,342 ಮತದಾರರಿದ್ದಾರೆ.

ಕ್ಷೇತ್ರದ ಬಲಾಬಲ

ಈ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್‌ನಿಂದ 6 ಶಾಸಕರು, ಉಳಿದಂತೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಒಬ್ಬ ಒಬ್ಬ ಶಾಸಕರು ಇದ್ದಾರೆ.

ವಿಜಯಪುರ ನಗರ (ಬಿಜೆಪಿ), ಬಬಲೇಶ್ವರ (ಕಾಂಗ್ರೆಸ್), ಇಂಡಿ (ಕಾಂಗ್ರೆಸ್), ಮುದ್ದೇಬಿಹಾಳ (ಕಾಂಗ್ರೆಸ್), ದೇವರ ಹಿಪ್ಪರಗಿ (ಜೆಡಿಎಸ್), ಬಸವನ ಬಾಗೇವಾಡಿ (ಕಾಂಗ್ರೆಸ್), ಸಿಂದಗಿ (ಕಾಂಗ್ರೆಸ್), ನಾಗಠಾಣಾ (ಕಾಂಗ್ರೆಸ್).

ಈವರೆಗಿನ 17 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ, ಬಿಜೆಪಿ 5 ಬಾರಿ, ಜನತಾ ಪಾರ್ಟಿ ಹಾಗೂ ಜೆಡಿಎಸ್ ತಲಾ 1 ಬಾರಿ ಗೆಲುವು ಕಂಡಿವೆ. ಪಕ್ಷೇತರರು 2 ಬಾರಿ ಜಯ ಸಾಧಿಸಿದ್ದಾರೆ. 1998ರಿಂದ ಎಂ.ಬಿ.ಪಾಟೀಲರ ನಂತರ ಕಾಂಗ್ರೆಸ್ ಗೆಲುವಿನ ಸಿಹಿ ಅನುಭವಿಸಿಲ್ಲ. 1999ರಲ್ಲಿ ಬಸನಗೌಡ ಪಾಟೀಲ ಮೂಲಕ ಅರಳಿದ ಕಮಲವನ್ನು ಮುದುಡಲು ಈವರೆಗೂ ಕ್ಷೇತ್ರದ ಮತದಾರರು ಬಿಟ್ಟಿಲ್ಲ.

ಅಖಾಡದಲ್ಲಿರುವ ಹುರಿಯಾಳುಗಳ ಬಲಾಬಲ

ದಲಿತ ಎಡಗೈ ಸಮುದಾಯದ ರಮೇಶ್ ಜಿಗಜಿಣಗಿ ಅವರು ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ಮತ್ತೆ ಏಳನೇ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರಮೇಶ್ ಜಿಗಜಿಣಗಿ ಅವರು ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ಅವರ ತಂದೆ ಬಿ ಎಂ ಪಾಟೀಲರ ರಾಜಕಾರಣದ ಗರಡಿಯಲ್ಲಿ ಬೆಳೆದವರು. ಅವರು ಲಿಂಗಾಯತ ಸಮುದಾಯದ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ಕೊನೆಯ ಚುನಾವಣೆಯಾಗಿರುವುದರಿಂದ ಮತ್ತೆ ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಈ ಹಿಂದೆ ವಿಜಯಪುರ ಲೋಕಸಭಾ ಚುನಾವಣೆಗಳಲ್ಲಿ ಜಿಗಜಿಣಗಿ ವಿರುದ್ಧ ಲಂಬಾಣಿ ಸಮುದಾಯದ ಅಭ್ಯರ್ಥಿ ಎದುರಾಳಿಯಾಗಿರುತ್ತಿದ್ದರು. ಹಾಗಾಗಿ ಜಿಗಜಿಣಗಿ ಅವರಿಗೆ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಮತದಾರರ ಮತಗಳು ಬರುತ್ತಿದ್ದವು, ಲಿಂಗಾಯತ ಮತಗಳನ್ನು ಹೊಂದಾಣಿಕೆ ಮೂಲಕ ಪಡೆಯುತ್ತಿದ್ದರು. ಹಾಗಾಗಿ ಸುಲಭವಾಗಿ ಗೆಲುವು ಕಾಣುತ್ತಿದ್ದರು. ಆದರೆ ಈ ಬಾರಿಯ ಚಿತ್ರಣ ಬೇರೆಯೇ ಇದೆ ಎಂದು ಹೇಳಲಾಗುತ್ತಿದೆ.

ಕ್ಷೇತ್ರದ ಅಭಿವೃದ್ಧಿ ಹೇಳಿಕೊಳ್ಳುವಂತಿಲ್ಲ, ತಮ್ಮ ಸ್ವಂತ ಆಸ್ತಿಯ ಅಭಿವೃದ್ಧಿ ಹೆಚ್ಚಾಗಿದೆ ಎನ್ನುವುದು ಅವರ ಮೇಲಿರುವ ಆರೋಪ. ಮೋದಿ ವರ್ಚಸ್ಸಿನ ಜೊತೆಗೆ ಹೊಂದಾಣಿಕೆ ತಂತ್ರ ಫಲ ನೀಡಿದರೆ ಮಾತ್ರ ರಮೇಶ್ ಜಿಗಜಿಣಗಿ ಅವರಿಗೆ ಲಾಭವಾಗುತ್ತದೆ. ಇನ್ನೂ ಯತ್ನಾಳ-ಜಿಗಜಿಣಗಿ ನಡುವಿನ ದ್ವೇಷ ಅಳಿದುಹೋಗಿದೆ ಎಂದು ಹೇಳಲಾಗುತ್ತಿದೆ. ಇದು ಕೂಡ ಜಿಗಜಿಣಗಿ ಅವರಿಗೆ ವರವಾಗಬಹುದು.

ಕಾಂಗ್ರೆಸ್‌ನಿಂದ ಅಖಾಡದಲ್ಲಿರುವ ರಾಜು ಆಲಗೂರ ಅವರು ದಲಿತ ಬಲಗೈ ಸಮುದಾಯದ ನಾಯಕರಾಗಿದ್ದಾರೆ. ಅವರು ಎರಡು ಬಾರಿ ಶಾಸಕರಾಗಿದ್ದರು. ಪ್ರತಿ ಬಾರಿ ಬಂಜಾರ ಸಮುದಾಯದವರನ್ನು ಅಭ್ಯರ್ಥಿಯಾಗಿಸುತ್ತಿದ್ದ ಕಾಂಗ್ರೆಸ್ ಈ ಬಾರಿ ಜಾತಿ ಕಾರ್ಡ್ ಬದಲಾಯಿಸಿ ಬಲಗೈ ಸಮುದಾಯದ ಆಲಗೂರ ಅವರಿಗೆ ಟಿಕೆಟ್ ನೀಡುವ ಮೂಲಕ ಜಿಗಜಿಣಗಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

ಸದ್ಯ ಕ್ಷೇತ್ರದ ಬಲಾಬಲ ನೋಡಿದರೆ, ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಗಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಏಕೆಂದರೆ, ಆರು ಜನ ಕಾಂಗ್ರೆಸ್ ಶಾಸಕರು, ಅವರಲ್ಲಿ ಇಬ್ಬರು ಮಂತ್ರಿಗಳು ಇದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರ ಬೆಂಬಲವೂ ಆಲಗೂರರಿಗಿದೆ. ಕಾಂಗ್ರೆಸ್ನಿಂದ ಗೆಲುವು ಕಂಡಿರುವ ಬಹುತೇಕರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹಾಗಾಗಿ ಈ ಲೆಕ್ಕಾಚಾರದ ಪ್ರಕಾರ ಆಲಗೂರರ ಗೆಲುವು ಸುಲಭ ಎನಿಸುತ್ತದೆ. ಆದರೆ, ಈ ವಿಜಯಪುರ ಜಿಲ್ಲೆಯು ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಈ ಬಾರಿಯೂ ಅದೇ ಮುಂದುವರೆದರೆ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಕನಸು ನುಚ್ಚುನೂರಾಗುವುದು ನಿಶ್ಚಿತ ಎಂದು ʻದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿದ ರಾಜಕೀಯ ವಿಶ್ಲೇಷಕ ಡಾ. ಜಿಎಸ್ ಪಾಟೀಲ್ ಅವರು ಅಭಿಪ್ರಾಯಪಡುತ್ತಾರೆ.

ಮುಂದುವರೆದು, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ, ರಾಜ್ಯದಿಂದ ಹೆಚ್ಚು ಸ್ಥಾನಗಳ ಗೆಲುವು ಸಾಧಿಸಲು ರೂಪುರೇಷ ಸಿದ್ದಪಡಿಸಿಕೊಂಡಿದೆ. ಎಲ್ಲ ಮಂತ್ರಿಗಳಿಗೂ ವಿಶೇಷ ಟಾಸ್ಕ್ ನೀಡಿರುವುದರಿಂದ ವಿಜಯಪುರದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಬೀಳುವ ಸಾಧ್ಯತೆಯೇ ಹೆಚ್ಚು ಎಂದು ಪಾಟೀಲ್ ಅವರು ಹೇಳಿದರು.

ಆಲಗೂರರಿಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ನೆರವಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ ಸ್ಥಳೀಯ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬೆಂಬಲಿಸಿದರೆ ಗೆಲುವು ನಿಶ್ಚಿತ ಎನ್ನುವ ವಾತಾವರಣ ಕ್ಷೇತ್ರದಲ್ಲಿದೆ.

ಈಗಿನ ಕಣ ಚಿತ್ರಣ

2009ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾದ ನಂತರ ನಡೆದ 3 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಲಂಬಾಣಿ ಸಮಾಜದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 2009 ಹಾಗೂ 2014ರಲ್ಲಿ ಪ್ರಕಾಶ್ ರಾಠೋಡ್ ಅವರನ್ನು ಕಣಕ್ಕಿಳಿಸಿತ್ತಾದರೂ ಬಿಜೆಪಿಯ ರಮೇಶ ಜಿಗಜಿಣಗಿ ಅವರಿಗೆ ಗೆಲುವಾಗಿತ್ತು. 2019ರಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಜೆಡಿಎಸ್ನ ಸುನೀತಾ ಚವ್ಹಾಣ ಅವರನ್ನು ಅಖಾಡಕ್ಕಿಳಿಸಿದರೂ ಬಿಜೆಪಿಯ ರಮೇಶ ಜಿಗಜಿಣಗಿ 2.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಬಂಜಾರ ಸಮುದಾಯದ ಬದಲು, ದಲಿತ ಬಲಗೈ ಸಮುದಾಯದ ನಾಯಕನಿಗೆ ಟಿಕೆಟ್ ನೀಡುವ ಮೂಲಕ ಜಿಗಜಿಣಗಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಸಜ್ಜಾಗಿದೆ.

Read More
Next Story