Loksabha Election 2024: ಬಿಜೆಪಿಯ ತ್ರಿಮೂರ್ತಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿ...
x
ತ್ರಿಶಂಕು ಸ್ಥಿತಿಯಲ್ಲಿರುವ ಬಿಜೆಪಿಯ ತ್ರಿಮೂರ್ತಿಗಳು- ಸದಾನಂದ ಗೌಡ, ಸುಮಲತಾ ಅಂಬರೀಶ್‌, ಜಗದೀಶ್‌ ಶೆಟ್ಟರ್

Loksabha Election 2024: ಬಿಜೆಪಿಯ ತ್ರಿಮೂರ್ತಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿ...


ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ನಾಯಕರ ಅಸಮಾಧಾನ ಭುಗಿಲೆದ್ದಿರುವುದು ಗುಟ್ಟಾಗಿ ಉಳಿದಿಲ್ಲ. ಈ ಮಧ್ಯೆ ಪ್ರಭಾವಿ ನಾಯಕರು ಎನಿಸಿಕೊಂಡಿರುವ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ಸುಮಲತಾ ಅವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಸದಾನಂದ ಗೌಡ:

ಸದಾನಂದ ಗೌಡ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅತ್ಯಾಪ್ತರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಯಿತು. ಇದು ಯಡಿಯೂರಪ್ಪ ಅವರ ಮೇಲೆ ಸದಾನಂದಗೌಡರಿಗೆ ಸಿಟ್ಟು ಹೆಚ್ಚಾಗಲು ಕಾರಣವಾಗಿದೆ.

ಸದಾನಂದ ಗೌಡ ಮಾಜಿ ಮುಖ್ಯಮಂತ್ರಿಯಾಗಿದ್ದು, ಈಗಾಗಲೇ ಮತ್ತೋರ್ವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಮತ್ತೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೂ ಬೆಳಗಾವಿ ಟಿಕೆಟ್ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಟಿಕೆಟ್ ಕೈತಪ್ಪಿಸಿರುವುದು ಡಿವಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿಯ ರಾಜ್ಯಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ವಿರುದ್ಧ ಸದಾನಂದ ಗೌಡ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ʼʼನನ್ನನ್ನು ಆರತಿ ಎತ್ತಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದವರು ಕೊನೆಗೆ ಟಿಕೆಟ್ ನೀಡದೆ ಮಂಗಳಾರತಿ ಎತ್ತಿದರು. ಯಾರು ನನ್ನನ್ನು ಅಪಮಾನ ಮಾಡಿದರೋ ಅವರು ಮುಂದೆ ಪಶ್ಚಾತ್ತಾಪಡುತ್ತಾರೆ. ಕೆಲವರು ನನಗೆ ನೋವು ಕೊಟ್ಟಿರಬಹುದು. ಆದರೆ, ನಾನು ಒಂದು ಮಾತು ಹೇಳುತ್ತೇನೆ. ಯಾರೇ ನೋವು ಕೊಟ್ಟಿದ್ದರೂ ಅದನ್ನು ಸಹಿಸಿಕೊಳ್ಳಲು ತಾಳ್ಮೆ ಇದ್ದರೆ ದುಃಖ ನೀಡಿದವರು ಇದ್ದೂ ಸತ್ತಂತೆʼʼ ಎಂದು ಡಿ.ವಿ.ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸದಾನಂದ ಗೌಡರು, ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಶುದ್ಧೀಕರಣ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ.

ಟಿಕೆಟ್ ಕೈ ತಪ್ಪಿದ ಬಳಿಕ ಸದಾನಂದ ಗೌಡರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಸಂದರ್ಭದಲ್ಲಿ ಟಿಕೆಟ್ ಆಮಿಷವೊಡ್ಡಿ ಕಾಂಗ್ರೆಸ್ ಗಾಳ ಹಾಕಿತ್ತು ಎನ್ನುವ ವರದಿಗಳು ಬಿತ್ತರವಾಗಿದ್ದವು. ಈ ಬಗ್ಗೆ ಸ್ವತಃ ಸದಾನಂದರೇ ಒಪ್ಪಿಕೊಂಡಿದ್ದರು. ಆಗ ಅವರು ಕಾಂಗ್ರೆಸ್ ಸೇರಿಯೇ ಬಿಡುತ್ತಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಆಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಡಿವಿಎಸ್ಗೆ ರಾಜ್ಯಪಾಲ ಹುದ್ದೆ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದೀಗ ಸದಾನಂದ ಗೌಡರು ಅತಂತ್ರ ಸ್ಥಿತಿಯಲ್ಲಿ ಇರುವಂತೆ ಕಂಡುಬರುತ್ತಿದ್ದು, ಧೃಡ ನಿರ್ಧಾರ ತೆಗೆದುಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ. ಕಾಂಗ್ರೆಸ್ಗೆ ಹೋಗಿ ಚುನಾವಣೆಯಲ್ಲಿ ಗೆದ್ದರೇ ಮಾತ್ರ ಬೆಲೆ, ಸೋತರೆ ಶೆಟ್ಟರ್ ಪರಿಸ್ಥಿತಿ ಬರಬಹುದು ಎನ್ನುವ ಆಲೋಚನೆಯಲ್ಲಿ ಗೌಡರಿದ್ದಂತೆ ಕಾಣುತ್ತಿದೆ. ತಟಸ್ಥವಾಗಿದ್ದರೆ ಉತ್ತಮ ಎನ್ನುವ ಆಲೋಚನೆ ಇರಬಹುದೇನೋ, ಕೊನೆಗೆ ಬಿಜೆಪಿಯಲ್ಲಿ ಇದ್ದು ರಾಜ್ಯಪಾಲರ ಹುದ್ದೆಗೆ ಸಮಾಧಾನಪಟ್ಟುಕೊಳ್ಳುತ್ತಾರೋ ಕಾದುನೋಡಬೇಕು.

ಸುಮಲತಾ:

ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಜೆಡಿಎಸ್-ಬಿಜೆಪಿ ನಡುವಿನ ಸೀಟು ಹಂಚಿಕೆಗೆ ಶನಿವಾರ ತೆರೆಬಿದ್ದಿದೆ. ದಳಪತಿಗಳಿಗೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಅಂತಿಮವಾಗಿದ ಬಳಿಕ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಕೊನೆ ಕ್ಷಣದವರೆಗೂ ಮಂಡ್ಯ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ದೆಹಲಿ ಮಟ್ಟದಲ್ಲಿ ರೆಬಲ್ ಲೇಡಿ ಸುಮಲತಾ ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ.

ಮಂಡ್ಯ ಜೆಡಿಎಸ್ ಪಾಲಾಗಿದ್ದು, ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ಇಲ್ಲವೇ ಸಕ್ರಿಯ ರಾಜಕಾರಣದಿಂದ ದೂರ ಇರುತ್ತಾರೆಯೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಭೇಟಿಯಾಗಿ ಮಂಡ್ಯ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.

ಆದರೆ ಈ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಕಾರಣ ಮಂಡ್ಯ ಕ್ಷೇತ್ರವು ದಳಪತಿಗಳ ಪಾಲಾಗಿದೆ. ಇದೇ ರೀತಿ ಕೋಲಾರದಿಂದ ಬಿಜೆಪಿ ಅಭ್ಯರ್ಥಿಯಾಗಿ 2ನೇ ಬಾರಿಗೆ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದ ಸಂಸದ ಮುನಿಸ್ವಾಮಿ ರಾಜಕೀಯ ಭವಿಷ್ಯವೂ ಕೂಡ ಅಡಕತ್ತರಿಗೆ ಸಿಲುಕಿದೆ.

ಸುಮಲತಾ ಹೊಸ ಲೆಕ್ಕಾಚಾರ

ಮಂಡ್ಯದಿಂದ ಸುಮಲತಾ ಪಕ್ಷೇತರರಾಗಿ ಮತ್ತೆ ನಿಲ್ತಾರ ಎನ್ನುವುದು ಸಧ್ಯ ಎಲ್ಲರ ಮುಂದಿರುವ ಪ್ರಶ್ನೆ. ಒಂದು ವೇಳೆ ಪಕ್ಷೇತರರಾಗಿ ಮತ್ತೆ ನಿಂತರೆ ಕಳೆದ ಸಲ ಸಿಕ್ಕಂತೆ ಸ್ವಾಭಿಮಾನದ ಮತಗಳು ಈ ಬಾರಿ ಸಿಗಲ್ ಎನ್ನುವ ಮಾತುಗಳು ಕ್ಷೇತ್ರದ ಜನರಿಂದಲೇ ಬರಲಾರಂಭಿಸಿವೆ. ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ..

ಎರಡನೇ ಆಯ್ಕೆ ಇರೋದು ಚಿಕ್ಕಬಳ್ಳಾಪುರ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಬಿಜೆಪಿ ಸೂಚಿಸಿದ್ರೂ ಸುಮಲತಾ ಒಪ್ಪಿಲ್ಲ ಎನ್ನಲಾಗಿದೆ. ಈಗ ಒಪ್ಪಿದ್ರೂ ಟಿಕೆಟ್ ಸಿಗಬಹುದು ಎನ್ನುವ ಮಾತುಗಳಿವೆ. ಆದರೆ, ಹೊಸ ಕ್ಷೇತ್ರ, ಹೊಸ ಜನ ಗೆಲ್ಲೋದು ಸಾಧ್ಯನಾ ಅನ್ನೋ ಆತಂಕನೂ ಸುಮಲತಾರಲ್ಲಿದೆ.

ಮೂಲಗಳ ಪ್ರಕಾರ ಸುಮಲತಾರಿಗೆ ರಾಜ್ಯಸಬೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿಸ್ಥಾನ ಕೊಡುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಬಿಜೆಪಿಯವರಾಗಲಿ, ಸುಮಲತಾ ಅವರಾಗಲಿ ಸ್ಪಷ್ಟನೆ ಕೊಟ್ಟಿಲ್ಲ. ಸಧ್ಯದಮಟ್ಟಿಗೆ ಎಲ್ಲವೂ ನಿಗೂಢವಾಗಿದೆ.

ಮಂಡ್ಯ ಕ್ಷೇತ್ರ ತಪ್ಪಿಪ್ಪಲು ಕಾರಣವೇನು?

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಸ್ವಾಭಿಮಾನದ ಸಂಕೇತದಲ್ಲಿ ಗೆದ್ದಿದ್ದರು. ಆಮೇಲೆ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಹತ್ತಿರವಾದರು. ಆದರೆ ರಾಜ್ಯ ಬಿಜೆಪಿ ನಾಯಕರನ್ನ ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದೂ ಕೂಡ ಟಿಕೆಟ್ ಕೈತಪ್ಪಲು ಕಾರಣ ಎಂದು ಹೇಳಲಾಗುತ್ತಿದೆ.

ಇನ್ನು, ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಹನಕೆರೆ ಶಶಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʼʼಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ಟಿಕೆಟ್ ಸಿಕ್ಕಿಲ್ಲವೋ ಗೊತ್ತಿಲ್ಲ. ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು. ಈ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಸಭೆ ಮಾಡುತ್ತೇವೆ. ಅಲ್ಲಿಯೇ ಸುಮಲತಾ ಅವರೇ ತೀರ್ಮಾನ ಮಾಡುತ್ತಾರೆʼʼ ಎಂದು ಹೇಳಿದರು.

ʼʼಮುಂದಿನ ರಾಜಕೀಯ ಜೀವನ ಮಂಡ್ಯದಲ್ಲಿ. ಹೀಗಾಗಿ ಮಂಡ್ಯದಿಂದ ಸ್ವರ್ಧೆ ಮಾಡಬೇಕು. ಅವರನ್ನೇ ನಂಬಿರುವ ಮತದಾರರ ನಿರ್ಧಾರ ತೆಗೆದುಕೊಳ್ಳಬೇಕು. ಅವರಿಗಾಗಿ ಅಲ್ಲದೆ ಇದ್ದರು ಮಂಡ್ಯದ ಜನರಿಗಾಗಿ ಸ್ವರ್ಧೆ ಮಾಡಬೇಕುʼʼ ಎಂದಿದ್ದಾರೆ.

ಹಾವು-ಮುಂಗುಸಿ ತರ ಕಿತ್ತಾಡುತ್ತಿದ್ದ ಸುಮಲತಾ ಮತ್ತು ಜೆಡಿಎಸ್ ಪಕ್ಷದವರು ಮುಂದೆ ಒಂದಾಗುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರು ನನ್ನ ಅಕ್ಕನಹಾಗೆ ಎಂದು ಮೂಲಕ ಸುಮಲತಾರನ್ನ ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ ಸುಮಲತಾ ಅವರು ಈವರೆಗೂ ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿಲ್ಲ. ಸಧ್ಯ ಅವರ ರಾಜಕೀಯ ಸ್ಥಿತಿ ಅತಂತ್ರವಾಗಿದೆ.

ಜಗದೀಶ್ ಶೆಟ್ಟರ್

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಧಾರವಾಡ ಅಥವಾ ಹಾವೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಸಧ್ಯ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ ಮಿಸ್ ಆಗಿದೆ. ಅದರಿಂದ ಅಸಮಧಾನಗೊಂಡಿದ್ದ ಶೆಟ್ಟರ್, ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದರು. ತತಕ್ಷಣದಲ್ಲೇ ಬಿಜೆಪಿ ವರಿಷ್ಠರು ಅವರಿಗೆ ಬೆಳಗಾವಿಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ತಾವು ಬಯಸಿದ ಟಿಕೆಟ್ ಸಿಗಲಿಲ್ಲ ಎನ್ನುವ ಬೇಸರ ಇದ್ದೇ ಇದೆ.

ಜಗದೀಶ್ ಶೆಟ್ಟರ್ ಅವರಿಗೆ ಬಿಸಿ ತುಪ್ಪ ಬಾಯಿಯಲ್ಲಿ ಹಾಕಿಕೊಂಡಂತಾಗಿದೆ. ಈ ಮೊದಲೇ ಶೆಟ್ಟರ್ ಅವರ ರಾಜಕೀಯ ಸ್ಥಿತಿ ಅತಂತ್ರವಾಗಿತ್ತು. ಅವರು ರಾಜಕೀಯವಾಗಿ ಮತ್ತೆ ಮೇಲೇಳಲು ಹಾವೇರಿ ಸುರಕ್ಷಿತ ಸ್ಥಾನವಾಗುತ್ತಿತ್ತು. ಅವಿಭಜಿತ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯ ರಾಜಕೀಯ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಈಗಾಗಲೇ ಮೂರ್ನಾಲ್ಕು ಮನೆತನಗಳ ಪಾರುಪತ್ಯ ಇದೆ. ಇದೀಗ ಶೆಟ್ಟರ್ ಅವರು ಅಲ್ಲಿ ಸ್ಪರ್ಧಿಸಿ ಗೆಲುವು ಕಾಣುತ್ತಾರೆ ಎನ್ನುವುದು ಕನಸಿನ ಮಾತು ಎನ್ನುತ್ತಾರೆ ಬೆಳಗಾವಿ ರಾಜಕೀಯ ಬಲ್ಲವರು..

ಹೆಸರು ಹೇಳಲಿಚ್ಚಿಸದ ಬಿಜೆಪಿ ನಾಯಕರೊಬ್ಬರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಹೆಚ್ಚಿನ ಬೆಂಬಲ ಇಲ್ಲದಿರುವುದರಿಂದ ಮತ ಪಡೆಯುವುದು ಕಷ್ಟ. ಮಾಜಿ ಸಿಎಂಗೆ ಟಿಕೆಟ್ ಸಿಕ್ಕರೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತರುವ ಮತಗಳ ಮೇಲೆ ಇಲ್ಲಿ ಜಗದೀಶ್ ಶೆಟ್ಟರ್ ಭವಿಷ್ಯ ನಿಂತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಶೆಟ್ಟರ್ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಬಿಜೆಪಿಯೊಳಗಿನವರಿಗೆ ತುಂಬಾ ಚೆನ್ನಾಗಿ ಗೊತ್ತಿರುವ ಸತ್ಯ. ಇದು ಶೆಟ್ಟರ್ ಗೆ ತಿಳಿಯದ ವಿಚಾರವೇನಲ್ಲ, ಹಾಗಾಗಿಯೇ ಬಿಜೆಪಿಯವರು ಶೆಟ್ಟರ್ ಅವರ ರಾಜಕೀಯ ಜೀವನವನ್ನೇ ಮುಗಿಸಲು ಹೊರಟಿದ್ದಾರೆಯೇ? ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.

ಈ ಕಾರಣದಿಂದಲೇ ಇತ್ತೀಚೆಗೆ ಡಿಕೆ ಶಿವಕುಮಾರ್‌ ಜೊತೆ ಮಾತನಾಡುವ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಅವರು, ʼಮತ್ತೆ ಬಿಜೆಪಿ ಸೇರಿ ತಪ್ಪು ಮಾಡಿದೆʼ ಎನ್ನುವ ಮಾತುಗಳನ್ನು ಆಡಿದ್ದಾರೆ. ಇದು ರಾಜಕೀಯ ವಲಯದಿಂದ ಕೇಳಿಬಂದಿರುವ ಪಿಸುಪಿಸು ಮಾತು..

ವರಿಷ್ಠರ ಮಾತಿನಂತೆ ಜಗದೀಶ್‌ ಶೆಟ್ಟರ್‌ ಅವರು ಬೆಳಗಾವಿಯಿಂದ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ದರಾಗಿದ್ದಾರೆ. ಈ ನಡುವೆ ಆ ಕ್ಷೇತ್ರದಿಂದ ಗೋಬ್ಯಾಕ್‌ ಶೆಟ್ಟರ್‌ ಎನ್ನುವ ಅಭಿಯಾನ ನಡೆಯುತ್ತಿದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್‌ ಶೆಟ್ಟರ್‌ ಪೋಸ್ಟ್‌ ಮಾಡುತ್ತಿದ್ದರು. ಇದೀಗ ಕ್ಷೇತ್ರದಲ್ಲಿ ಅಭಿಯಾನದ ಬ್ಯಾನರ್‌ಗಳನ್ನೇ ಪ್ರದರ್ಶನ ಮಾಡುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಿಂದ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ ನೀಡುತ್ತಾ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಒಂದುವೇಳೆ ಟಿಕೆಟ್‌ ನೀಡಿದರೂ ಈ ಎಲ್ಲ ಸವಾಲುಗಳನ್ನು ದಾಟಿ ಗೆಲುವು ಸಾಧಿಸುತ್ತಾರಾ ಶೆಟ್ಟರ್‌ ಎನ್ನುವುದು ಅವರ ಆಪ್ತರಲ್ಲಿ ಮೂಡಿದೆ. ಹಾಗಾಗಿ ಶೆಟ್ಟರ್‌ ರಾಜಕೀಯ ಬದುಕೇ ಅತಂತ್ರವಾಗಿ ಎಂದು ಹೇಳಲಾಗುತ್ತಿದೆ.

Read More
Next Story