ಕುಮಾರಸ್ವಾಮಿ ಪ್ರವೇಶ: ಸಿನಿಮಾ ಜೊತೆ ಮಂಡ್ಯ ಸಂಬಂಧ ಮತ್ತಷ್ಟು ಗಟ್ಟಿ
x

ಕುಮಾರಸ್ವಾಮಿ ಪ್ರವೇಶ: ಸಿನಿಮಾ ಜೊತೆ ಮಂಡ್ಯ ಸಂಬಂಧ ಮತ್ತಷ್ಟು ಗಟ್ಟಿ


ಮಂಡ್ಯದ ಲೋಕಸಭಾ ಕಣ ಈಗ ನಿಚ್ಛಳವಾಗಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನ ಲೆಫ್ಟಿನೆಂಟ್‌ ಎಚ್‌ ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯ ಬೆಂಬಲದ ಜೊತೆಗೆ, ಚಿತ್ರ ತಾರೆ, ಸಂಸದೆ ಸುಮಲತಾ ಬೆಂಬಲ ಆಯಾಚಿತವಾಗಿ ಸಿಕ್ಕಿದೆ. ಇದರ ಜೊತೆಗೆ, ಸುಮಲತಾ ಬೆಂಗಾವಲಾಗಿ ನಿಂತಿರುವ ಸ್ಟಾರ್‌ ನಟ ದರ್ಶನ್‌ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಬೆಂಬಲವೂ ದೊರೆಯುತ್ತದೆ.

ಕುಮಾರಸ್ವಾಮಿ ಅವರು ಚುನಾವಣಾ ಕಣಕ್ಕಿಳಿಯುವ ಮೂಲಕ ಕನ್ನಡ ಚಿತ್ರರಂಗಕ್ಕೂ, ಕನ್ನಡ ಸಿನಿಮಾರಂಗಕ್ಕೂ ಇರುವ ಸಂಬಂಧ ಮತ್ತೊಮ್ಮೆ ಸಾಬೀತಾದಂತಾಗಿದೆ.

ʼಮಂಡ್ಯದ ಗಂಡುʼ ಎಂದೇ ಜನಮನ್ನಣೆ ಗಳಿಸಿದ ಖ್ಯಾತ ನಟ ಮತ್ತು ಕನ್ನಡ ಚಿತ್ರರಂಗದ ಅಘೋಷಿತ ನಾಯಕರಾಗಿದ್ದ ಅಂಬರೀಶ್‌ ಅವರು ಮಂಡ್ಯಕ್ಕೆ ಚಿತ್ರರಂಗದ ಬೆಸುಗೆ ಹಾಕಿದವರು. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಮೂರು ಬಾರಿ (೧೯೯೮ ರಿಂದ ೨೦೦೯ರವರೆಗೆ) ಸತತವಾಗಿ ಸಂಸದರಾದವರು. ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದವರು. ಕಾವೇರಿ ನೀರು ಹಂಚಿಕೆಯಲ್ಲಿ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮುನಿದು, ಅಧಿಕಾರಕ್ಕಿಂತ, ಮಂಡ್ಯದ, ಕರ್ನಾಟಕದ ಅಸ್ಮಿತೆ ಮುಖ್ಯವೆಂದು ಹೇಳಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರು. ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಕರ್ನಾಟಕ ರಾಜ್ಯದ ವಸತಿ ಸಚಿವರಾಗಿದ್ದವರು. ತಮ್ಮ ಅಂತ್ಯ ಕಾಲದವರೆಗೂ ಮಂಡ್ಯ ಎಂದರೆ ಇಂಡಿಯಾ ಎಂದೇ ನಂಬಿದ್ದವರು.

ಮಂಡ್ಯದಲ್ಲಿ ಅಂಬರೀಶ್‌ ಕಾಲಿ ಮಾಡಿದ ಜಾಗವನ್ನು ತುಂಬಿದವರು ತಾರೆ-ರಮ್ಯ ದಿವ್ಯಸ್ಪಂದನ. ೨೦೧೨ರಲ್ಲಿ ಯುವ ಕಾಂಗ್ರೆಸ್‌ ಸೇರಿದ ರಮ್ಯ ೨೦೧೩ರಲ್ಲಿ ಲೋಕಸಭೆಗೆ ಮಂಡ್ಯ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಗೆದ್ದು, ಮಂಡ್ಯಕ್ಕೆ ಹೆಸರು ತಂದುಕೊಟ್ಟವರು. ನಂತರ ೨೦೧೪ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡವರು. ರಮ್ಯ ೨೦೧೭ರಲ್ಲಿ ಕಾಂಗ್ರೆಸ್‌ ಜಾಲತಾಣಕ್ಕೆ ಜೀವತುಂಬಿದ್ದೇ ಅಲ್ಲದೆ, ರಾಹುಲ್‌ ಗಾಂಧಿ ಅವರ ಸಮೀಪವರ್ತಿಗಳಲ್ಲಿ ಒಬ್ಬರೆನ್ನಿಸಿಕೊಂಡವರು. ಸಾಮಾಜಿಕ ಜಾಲತಾಣ ಜಗತ್ತಿನಲ್ಲಿ ಕಾಂಗ್ರೆಸ್‌ ಗೆ ಹಾಗೂ ರಾಹುಲ್‌ ಗಾಂಧಿ ಅವರಿಗೆ ಹೊಸ ವರ್ಚಸ್ಸನ್ನು ತಂದುಕೊಟ್ಟವರು. ಇಂದಿಗೂ ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತಿರುವವರು ಮತ್ತು ಅವರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಮಲೆತು ನಿಂತವರು. ಚಂಡಿಗಢದಲ್ಲಿ ನಡೆದ ವರ್ಣಿಕಾ ಕುಂಡು ಅವರಿಗಾದ ಅನ್ಯಾಯವನ್ನು ಖಂಡಿಸಿದವರು.

೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್‌ ಕರ್ಮಭೂಮಿ ಮಂಡ್ಯದಿಂದ ಆತ್ಮಗೌರವದ ಫಲಕ ಹಿಡಿದು ಚುನಾವಣೆಗೆ ಸ್ಪರ್ಧಿಸಿದವರು ಅವರ ಪತ್ನಿ ಹಾಗೂ ಪಂಚಭಾಷಾ ತಾರೆ ಸುಮಲತಾ. ಪ್ರತಿಸ್ಪರ್ಧಿ, ಸಿನಿನಟ ಜೆಡಿಎಸ್‌ ನ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ, ಹಣಾಹಣಿ ಹೋರಾಟ ನಡೆಸಿ ಮಂಡ್ಯವನ್ನು ತಮ್ಮ ಸೆರಗಿಗೆ ಕಟ್ಟಿಕೊಂಡವರು ಸುಮಲತಾ. ಈ ಚುನಾವಣೆಯಲ್ಲಿ ಅವರ ಬೆನ್ನಿಗೆ ನಿಂತವರು ಸ್ಟಾರ್‌ ನಟರಾದ ದರ್ಶನ್‌ ಮತ್ತು ಯಶ್. ‌ ಜೊತೆಗೆ ಅವರ ಪುತ್ರ ಮತ್ತು ನಟ ಅಭಿಷೇಕ್‌ ಅಂಬರೀಶ್‌.

ಮಂಡ್ಯ ನನ್ನ ಆತ್ಮಗೌರವ. ಇಲ್ಲಿಂದಲ್ಲದೇ ಇನ್ನೆಲ್ಲಿಂದಲೂ ಸ್ಪರ್ಧಿಸಲಾರೆ ಎನ್ನುತ್ತಿದ್ದ, ಸುಮಲತಾ, ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ರಚನೆಯಿಂದಾಗಿ, ಆತ್ಮ ಗೌರವ ಉಳಿಸಿಕೊಂಡು ಮಂಡ್ಯದ ಸಮಗ್ರ ಏಳಿಗೆಗಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು, ಮೈತ್ರಿಕೂಟದ ಅಭ್ಯರ್ಥಿ ಎಚ್‌‌ ಡಿ ಕುಮಾರಸ್ವಾಮಿ ಅವರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟಿದ್ದಾರೆ.

ಸಿನಿಮಾ ಜಗತ್ತಿನ ಜೊತೆ ಗಾಢವಾದ ಸಂಬಂಧ ಬೆಳೆಸಿಕೊಂಡಿದ್ದ ಕುಮಾರಸ್ವಾಮಿ ತಮ್ಮ ತಾಯಿ ಹೆಸರಿನಲ್ಲಿ ಚೆನ್ನಾಂಬಿಕಾ ಫಿಲಮ್ಸ್‌ ಸಂಸ್ಥೆ, ಸ್ಥಾಪಿಸಿದವರು. ಈ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದ ʼಚಂದ್ರ ಚಕೋರʼ ಸಾಕಷ್ಟು ಹೆಸರು ಮಾಡಿತು. ಇದೇ ರೀತಿ ಅವರು ನಿರ್ಮಿಸಿದ ʼಸೂರ್ಯವಂಶʼ (ವಿಷ್ಣುವರ್ಧನ್- ನಿರ್ದೇಶನ ಎಸ್. ‌ ನಾರಾಯಣ್) ‌ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹೆಸರು ಮಾಡಿತು. ಖ್ಯಾತ ಲೇಖಕ ವ್ಯಸರಾಯ ಬಲ್ಲಾಳ ಅವರ ʼಹೆಜ್ಜೆ ʼ ಕಾದಂಬರಿಯನ್ನು ಚಿತ್ರ ಮಾಡಬೇಕೆಂದು ಯೋಚಿಸಿದ ಕುಮಾರಸ್ವಾಮಿ ಅದರ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕ ನಾಗಾಭರಣ ಅವರಿಗೆ ನೀಡಿದರು. ಆದರೆ, ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡ ಕಾರಣ, ʼಹೆಜ್ಜೆʼ ಚಿತ್ರೀಕರಣ ಸಾಧ್ಯವಾಗಲಿಲ್ಲ.

ಒಟ್ಟಿನಲ್ಲಿ ಅಂಬರೀಶ್‌ ಜೊತೆಯಲ್ಲಿ ಆರಂಭವಾದ ಮಂಡ್ಯ ಜಿಲ್ಲೆಯ ಸಿನಿಮಾರಂಗದ ಸಂಬಂಧ, ಕುಮಾರಸ್ವಾಮಿ ಅವರ ಪ್ರವೇಶದಿಂದ ಮತ್ತಷ್ಟು ಗಟ್ಟಿಯಾಗಿದೆ.

Read More
Next Story