KSRTC ಬಸ್, ಸಿಬ್ಬಂದಿ ಕೊರತೆ: ಶಕ್ತಿ ಯೋಜನೆಗೆ ಪೆಟ್ಟು
ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಯಶಸ್ಸು ಗಳಿಸಿದೆ. ಆದರೆ ಈ ಯೋಜನೆ ಜಾರಿಯಾಗುವ ಮೊದಲು ಶಿಸ್ತುಬದ್ಧ ತಯಾರಿ ಮಾಡಿಕೊಂಡಿರಲಿಲ್ಲ. ಹಾಗಾಗಿಯೇ ದಿನಂಪ್ರತಿ ಸರ್ಕಾರಿ ಸಾರಿಗೆ ವಾಹನಗಳಲ್ಲಿ ಓಡಾಡುತ್ತಿದ್ದ ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ.
ಶಕ್ತಿಯೋಜನೆಯಿಂದ ರಾಜ್ಯದ ಎಲ್ಲ ವರ್ಗದ ಮಹಿಳೆಯರಿಗೆ ಅನಕೂಲವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅದು ಸರ್ಕಾರದ ಇಮೇಜ್‌ನ್ನು ಹೆಚ್ಚಿಸಿದೆ. ಆದರೆ ಈ ಶಕ್ತಿ ಯೋಜನೆಯನ್ನು ನಿರ್ವಹಿಸುವ ಮಟ್ಟಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ನಾಲ್ಕೂ ನಿಗಮಗಳು)ಗಳು ಶಕ್ತವಾಗಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಯೋಜನೆ ಜಾರಿ ಮಾಡುವ ಮುನ್ನ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ 7 ವರ್ಷಗಳಿಂದ ಸಿಬ್ಬಂದಿ ನೇಮಕಾತಿ ನಡೆದಿರಲಿಲ್ಲ. ಇನ್ನು 4ವರ್ಷಗಳಿಂದ ವಾಹನ ಖರೀದಿಸಿರಲಿಲ್ಲ. ಆದರೆ, ಶಕ್ತಿ ಯೋಜನೆ ಅನುಷ್ಠಾನದ ನಂತರ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ 92 ಲಕ್ಷದಿಂದ 1.14 ಕೋಟಿ ದಾಟಿದೆ. ಹೀಗಾಗಿ ಇರುವ 23 ಸಾವಿರ ಬಸ್‌ಗಳಲ್ಲಿ ಪ್ರತಿ ದಿನ ಪ್ರತಿ ಬಸ್‌ನಲ್ಲಿ ಸರಾಸರಿ 500ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಹಳೆಯ ಡಕೋಟಾ ಬಸ್ ಗಳಲ್ಲಿಯೇ ಜನರು ಪ್ರಯಾಣ ನಡೆಸಬೇಕಾಗಿತ್ತು. ಇದು ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಂಚಕಾರ ತಂದಿದ್ದಂತು ಸುಳ್ಳಲ್ಲ.
ಶಕ್ತಿ ಯೋಜನೆ ಅನುಷ್ಠಾನದ ನಂತರ ಸಾರಿಗೆ ಸಂಸ್ಥೆಗಳು ಇರುವ ಬಸ್‌ನ ಸಂಚಾರದ ಸರಿತಿಯನ್ನು ಹೆಚ್ಚಿಸಿವೆ. ಆದರೆ ಇಲ್ಲಿ ಸಾಮರ್ಥ್ಯ ಮೀರಿ ಡಕೋಟಾ ಬಸ್ ಗಳನ್ನು ಓಡಿಸಲಾಗುತ್ತಿವೆ, ಇದು ಸುರಕ್ಷಿತವೇ ಎನ್ನುವ ಪ್ರಶ್ನೆ ಮೂಡಿದೆ. ಶಾಲೆ ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಅನಕೂಲಕ್ಕೆ ಹೆಚ್ಚುವರಿ ಬಸ್ ನೀಡಲು ವಾಹನ ಇಲ್ಲದ್ದರಿಂದ ದೊಡ್ಡಿಯೊಳಗೆ ಕುರಿಗಳನ್ನು ತುಂಬಿದಂತೆ ಬಸ್ ಗಳಲ್ಲಿ ಜನರನ್ನು ತುಂಬಲಾಗುತ್ತಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 124 ಅಂತರ್ ರಾಜ್ಯ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿ ಜಿಲ್ಲಾ, ರಾಜ್ಯದೊಳಗಿನ ಕಾರ್ಯಾಚರಣೆಗೆ ಬಳಸಿಕೊಳ್ಳುವ ಅನಿವಾರ್ಯತೆ ಬಂದಿದೆ. ಹಬ್ಬದ ಸಂದರ್ಭ ಪ್ರಯಾಣಿಕರ ಸ್ಥಿತಿ ಹೇಳತೀರದು.
5 ವರ್ಷಗಳಲ್ಲಿ 14 ಸಾವಿರ ಸಿಬ್ಬಂದಿ ನಿವೃತ್ತಿ
ನಿಗಮಗಳು | 2018-19ರಲ್ಲಿದ್ದ ಸಿಬ್ಬಂದಿ | 2023ರ ಅಕ್ಟೋಬರ್ ಅಂತ್ಯಕ್ಕೆ | 5 ವರ್ಷದಲ್ಲಿ ಕೊರತೆ |
ಕ.ರಾ.ರ.ಸಾ. | 38,654 | 33,670 | 4,984 |
ಬೆಂ.ಮ.ಸಾ | 33,878 | 28,795 | 5,083 |
ವಾ.ಕ.ರ.ಸಾ. | 23,423 | 21,059 | 2,364 |
ಕ.ಕ.ರ.ಸಾ | 20,574 | 18,803 | 1,771 |
ಒಟ್ಟು | 1,16,529 | 1,02,327 | 14,202 |
2,184 ಹಳ್ಳಿಗಳಿಗೆ ಬಸ್ ಸೌಲಭ್ಯವೇ ಇಲ್ಲ!
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 17 ಜಿಲ್ಲೆಗಳಲ್ಲಿ 2,139 ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ 45 ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಒಟ್ಟಾರೆ 23 ಜಿಲ್ಲೆಗಳಲ್ಲಿ 2,184 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸಿನ ಸೌಲಭ್ಯವೇ ಇಲ್ಲ.
ಕೋವಿಡ್ ಪೂರ್ವದಲ್ಲಿ ಒಡುತ್ತಿದ್ದ ಎಲ್ಲ ಅನುಸೂಚಿ(ಷೆಡ್ಯೂಲ್) ಗಳಲ್ಲಿ ಈಗ ಬಸ್ಸುಗಳು ಸಂಚರಿಸುತ್ತಿಲ್ಲ. ಬಸ್, ಸಿಬ್ಬಂದಿ ಕೊರೆತೆ 2020 ರಿಂದ 1,248 ಷೆಡ್ಯೂಲ್ (ಮಾರ್ಗ)ಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಅಂತಹ ಊರುಗಳಿಗೆ ಪಕ್ಕದ ಊರಿನಿಂದ ಯಾವಾಗಲೋ ಒಂದೊಂದು ಬಸ್ ಓಡಿಸಲಾಗುತ್ತಿದೆ. ಬೆಳಿಗ್ಗೆ 9ರಿಂದ 10 ಹಾಗೂ ಸಂಜೆ 4:30 ಯಿಂದ 5:30ರವರೆಗೆ ಬಸ್ ಗಳಿಗೆ ಬೇಡಿಕೆ ಹೆಚ್ಚಿದ್ದು, ಜನರಿಗೆ ತೊಂದರೆ ಹೆಚ್ಚಾಗಿದೆ.
ಕೆಲ ಊರುಗಳಿಂದ 140-160 ಪ್ರಯಾಣಿಕರು ಬಸ್ ನಲ್ಲಿ ಕಿಕ್ಕಿರಿದು ಪ್ರಯಾಣಿಸುತ್ತಿದ್ದಾರೆ. ಅಗತ್ಯ ಸಿಬ್ಬಂದಿ ಹಾಗೂ ವಾಹನಗಳ ಅಲಭ್ಯತೆಯಿಂದ ಅದೆಷ್ಟೋ ಹಳ್ಳಿಗಳಿಗೆ ಈವರೆಗೂ ಬಸ್ ಸಂಚಾರವೇ ನಿಂತು ಹೋಗಿದೆ. ಇದಕ್ಕೆ ಪರಿಹಾರ ಎಂಬಂತೆ ಈಗ ಸಾರಿಗೆ ಇಲಾಖೆ 4,657 ಬಸ್ ಗಳ ಖರೀದಿ ಹಾಗೂ 9,544 ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಆದರೆ ಇಲ್ಲಿ ಖರೀದಿಸುವ ಬಸ್ ಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು.
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ʼʼಶಕ್ತಿ ಯೋಜನೆ ಆರಂಭವಾದ ಬಳಿಕ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಸಾರಿಗೆ ಸಿಬ್ಬಂದಿ ನೇಮಕಾತಿ ನಡೆದಿಲ್ಲ ಹಾಗೂ ನಾಲ್ಕು ವರ್ಷಗಳಿಂದ ಬಸ್ ಖರೀದಿಯಾಗಿರಲಿಲ್ಲ ಇದರಿಂದ ಸಂಸ್ಥೆ ಮೇಲೆ ಸಾಕಷ್ಟು ಹೊರೆಯಾಗಿದೆʼʼ ಎಂದು ಸಚಿವರು ಒಪ್ಪಿಕೊಂಡರು.
ʼʼನಾವು ಅಧಿಕಾರಕ್ಕೆ ಬಂದ ಬಳಿಕ 644 ಬಸ್‌ಗಳ ಖರೀದಿ ಹಾಗೂ 1,619 ಸಿಬ್ಬಂದಿ ನೇಮಕ ಮಾಡಿದ್ದೇವೆ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ 485 ಬಸ್‌ಗಳು ಸೇರ್ಪಡೆಯಾಗಲಿವೆʼʼ ಎಂದು ತಿಳಿಸಿದ್ದಾರೆ.
ಬಸ್‌ಗಳ ಕೊರತೆಯಿಂದ ದಿನನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾಟ ಮಾಡುವವರಿಗೆ ತೊಂದರೆ ಉಂಟಾಗುತ್ತಿದೆ ಎನ್ನುವ ವಿಚಾರ ತಿಳಿಸಿದಾಗ, ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ʼʼಹೌದು ಆ ರೀತಿಯ ಸಮಸ್ಯ ಉಂಟಾಗಿರಬಹುದು ಆದರೆ ಮುಂದಿನ ದಿನಗಳಲ್ಲಿ ಸಮಸ್ಯ ಉಂಟಾಗುವುದಿಲ್ಲ ಎನ್ನುವ ಭರವಸೆ ಇದೆʼʼ ಎಂದರು.
ಇದೀಗ ಬಸ್‌ಗಳ ಸಂಖ್ಯೆ ಹೆಚ್ಚು ಮಾಡುವ ಜೊತೆಗೆ ಸಿಬ್ಬಂದಿ ನೇಮಕಾತಿಯನ್ನು ಮಾಡಿಕೊಳ್ಳಲಾಗಿದೆ, ಇನ್ನೂ ಕೆಲವು ಬಸ್‌ಗಳು ಮತ್ತು ಸಿಬ್ಬಂದಿ ವರ್ಗ ವಿಸ್ತರಣೆ ಮಾಡಬೇಕಿದೆ. ಆಗ ಶಾಲಾ ಮಕ್ಕಳಿಗೆ ಹಾಗೂ ದಿನನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೇ ಓಡಾಡುವವರಿಗೆ ಯಾವುದೇ ಸಮಸ್ಯೆ ಇಲ್ಲದಂತಾಗುತ್ತದೆ, ಶಕ್ತಿ ಯೋಜನೆಗೆ ಸಾರ್ಥಕತೆ ಬರುತ್ತದೆ.