ಕರಡಿಗೆ ಸವದಿ ಬಲೆ | ಕಾಂಗ್ರೆಸ್‌ನತ್ತ ಹೆಜ್ಜೆ ಇಟ್ಟಿರುವ ಕೊಪ್ಪಳದ ಬಿಜೆಪಿ ಸಂಸದ
x

ಕರಡಿಗೆ ಸವದಿ ಬಲೆ | ಕಾಂಗ್ರೆಸ್‌ನತ್ತ ಹೆಜ್ಜೆ ಇಟ್ಟಿರುವ ಕೊಪ್ಪಳದ ಬಿಜೆಪಿ ಸಂಸದ

ಸಂಗಣ್ಣ ಕರಡಿ ಅವರು ಟಿಕೆಟ್ ತಪ್ಪಿದ ಬಳಿಕ ಕೊಪ್ಪಳದಲ್ಲಿ ನಾನಾ ಬೆಳವಣಿಗೆಗಳು ಆಗುತ್ತಿವೆ. ದಿನಕ್ಕೊಬ್ಬರಂತೆ ಕರಡಿ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇನ್ನು ಸಂಗಣ್ಣ ಕರಡಿ 14 ವರ್ಷದ ತಮ್ಮ ಕಮಲ ಪಾಳೆಯದ ನಂಟು ಕಡಿದುಕೊಂಡು, ಕಾಂಗ್ರೆಸ್ ಸೇರಲು ಕೊನೆಯ ಹೆಜ್ಜೆ ಇಟ್ಟಿದ್ದಾರೆ.


ಲೋಕಸಭಾ ಚುನಾವಣಾ ಕಣ ಕಾವೇರಿರುವಾಗಲೇ ಕಾಂಗ್ರೆಸ್ ನಾಯಕರು ಭರ್ಜರಿ ಬೇಟೆಗೆ ಮುಂದಾಗಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದು, ಇದೀಗ ಕೊಪ್ಪಳ ಸಂಸದರಿಗೂ ಗಾಳ ಹಾಕಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರು ಸಂಗಣ್ಣ ಕರಡಿ ಅವರಿಗೆ ಬಲೆ ಬೀಸಿದ್ದಾರೆ.

ಸಂಗಣ್ಣ ಕರಡಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಬಿಜೆಪಿಯ ಸಂಸದರಾಗಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡದೆ ಬಿಜೆಪಿ, ಹೊಸಮುಖಕ್ಕೆ ಮಣೆ ಹಾಕಿದೆ. ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದ ಕರಡಿಯವರಿಗೆ ಇದು ನಿರಾಸೆ ತಂದಿದೆ.

ಹೊಸಮುಖ ಡಾ ಬಸವರಾಜ್ ಕ್ಯಾವಟರ್‌ಗೆ ಕಮಲ ಪಡೆ ಮಣೆ ಹಾಕುತ್ತಿದ್ದಂತೆಯೇ ಸಂಗಣ್ಣ ಕರಡಿ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಈ ವೇಳೆ ಬಿಜೆಪಿಯ ರಾಜ್ಯಮಟ್ಟದ ನಾಯಕರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರು. ಆದರೆ, ಕರಡಿಯವರು ಟಿಕೆಟ್ ತಪ್ಪಲು ಕಾರಣ ಏನು? ತಪ್ಪಿಸಿದವರು ಯಾರು? ಎಂದು ಪ್ರಶ್ನಿಸಿದ್ದಲ್ಲದೆ, ವಿಧಾನ ಪರಿಷತ್ ಸದಸ್ಯ ಸ್ಥಾನ, ಇಲ್ಲವೆ ರಾಜ್ಯಸಭಾ ಸ್ಥಾನದ ಬೇಡಿಕೆಯಿಟ್ಟಿದ್ದರು.

ಆದರೆ ಕರಡಿ ಅವರ ಈ ಬೇಡಿಕೆಗೆ ಬಿಜೆಪಿ ಮನ್ನಣೆ ನೀಡಲೇ ಇಲ್ಲ. ಹಾಗಾಗಿ ಮತ್ತಷ್ಟು ಕುಪಿತಗೊಂಡ ಅವರು ಬಿಜೆಪಿಯಲ್ಲಿ ತಮಗೆ ಅವಮಾನ ಮಾಡಲಾಗುತ್ತಿದೆ ಎಂದು ಬೆಂಬಲಿಗರ ಎದುರು ನೋವು ತೋಡಿಕೊಂಡಿದ್ದರು.

ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷವು ಬಿಜೆಪಿಯಲ್ಲಿನ ಅಸಮಾಧಾನಿತ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಜಾಲ ರಚಿಸಿದ್ದರು. ಅದರ ಭಾಗವಾಗಿ ಲಕ್ಷ್ಮಣ ಸವದಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ವಿಶೇಷ ಟಾಸ್ಕ್‌ವೊಂದನ್ನು ನೀಡಿದ್ದರು. ಅದರಂತೆ ಸವದಿ ಅವರು ಸೋಮವಾರ ಸಂಗಣ್ಣ ಕರಡಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸವದಿ ಬಲೆಗೆ ಕರಡಿ ಬಿದ್ದಂತಾಗಿದೆ.

ಸಂಗಣ್ಣ ಕರಡಿ ಅವರು ಟಿಕೆಟ್ ತಪ್ಪಿದ ಬಳಿಕ ಕೊಪ್ಪಳದಲ್ಲಿ ನಾನಾ ಬೆಳವಣಿಗೆಗಳು ಆಗುತ್ತಿವೆ. ದಿನಕ್ಕೊಬ್ಬರಂತೆ ಕರಡಿ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇನ್ನು ಸಂಗಣ್ಣ ಕರಡಿ 14 ವರ್ಷದ ತಮ್ಮ ಕಮಲ ಪಾಳೆಯದ ನಂಟು ಕಡಿದುಕೊಂಡು, ಕಾಂಗ್ರೆಸ್ ಸೇರಲು ಕೊನೆಯ ಹೆಜ್ಜೆ ಇಟ್ಟಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಸೋಮವಾರ ರಾತ್ರಿ ಲಕ್ಷ್ಮಣ ಸವದಿ ಅವರು, ಸಂಗಣ್ಣ ಅವರ ಮನೆಗೆ ಭೇಟಿ ನೀಡಿ ಒಂದು ತಾಸಿಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದ್ದರು. ರಾತ್ರಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಸಂಗಣ್ಣ ಮತ್ತು ಸವದಿ ಕಾಂಗ್ರೆಸ್ ಸೇರ್ಪಡೆಯ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದರ ಬೆನ್ನಲ್ಲೇ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಮಂಗಳವಾರ ಸಂಸದ ಸಂಗಣ್ಣ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದ್ದಾರೆ.

ʻʻನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಸಂಗಣ್ಣ ಕರಡಿ ಅವರು ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅವರು ಪಕ್ಷ ಸೇರಿದರೆ ದೊಡ್ಡ ಬಲ ಬರಲಿದೆʼʼ ಎಂದು ಹಿಟ್ನಾಳ ಹೇಳಿದ್ದಾರೆ.

ಮತ್ತೊಂದು ಕಡೆ ಕರಡಿ ಅವರು, ಪಕ್ಷದ ಅಧಿಕೃತ ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೂ ಆಗಮಿಸದೆ ತಟಸ್ಥರಾಗಿ ಉಳಿದಿರುವುದು ಅವರ ಪ್ರತಿರೋಧವನ್ನು ತೋರಿಸುತ್ತದೆ. ಇದನ್ನೇ ಲಾಭವಾಗಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಕರಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ ಹಾಗೂ ಕರಡಿ ಪರಮಾಪ್ತರಾಗಿದ್ದಾರೆ. ಇದೀಗ ಅಮರೇಗೌಡ ಕೂಡ ಕರಡಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಶೀಘ್ರವೇ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅಮರೇಗೌಡ ಭಯ್ಯಾಪೂರ ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಗಣ್ಣ ಕರಡಿ ಮಾತನಾಡಿದ್ದು, ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಬುಧವಾರ (ಏ.17) ಸಮಯ ನಿಗದಿಯಾಗಿದ್ದು ಅವರ ಭೇಟಿ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳುವೆʼʼ ಎಂದು ಹೇಳಿದ್ದಾರೆ.

ʻʻಸಿಎಂ ಹಾಗೂ ಡಿಸಿಎಂ ಭೇಟಿಗೆ ನನ್ನ ಆತ್ಮೀಯ ಮಿತ್ರರೂ ಆದ ಶಾಸಕ ಲಕ್ಷ್ಮಣ ಸವದಿ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಕೂಡ ಮಾತನಾಡಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಿಎಂ, ಡಿಸಿಎಂ ಜೊತೆ ಚರ್ಚಿಸಿ ನಾನೂ ನನ್ನ ನಿರ್ಣಯ ಹೇಳುತ್ತೇನೆ. ನನ್ನ ಬೇಡಿಕೆ ಎನೆಂಬುದನ್ನು ನಾನು ಬಹಿರಂಗಪಡಿಸುವುದಿಲ್ಲʼʼ ಎಂದಿದ್ದಾರೆ.

ಸದ್ಯ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಡಿಎಸಿಂ ಭೇಟಿಯ ವೇಳೆ ತಮ್ಮ ಬೇಡಿಕೆ ಕಾಂಗ್ರೆಸ್ ಮುಂದೆ ಇಡಲಿದ್ದಾರೆ.

ʻʻಕಾಂಗ್ರೆಸ್ ಸೇರ್ಪಡೆ ತೀರ್ಮಾನದ ಬಳಿಕ ಯಾರೆಲ್ಲ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆʼʼ ಎಂದು ಹೇಳುವ ಮೂಲಕ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಫಿಕ್ಸ್ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Read More
Next Story