ʼಧಾತು ಅಂತಾರಾಷ್ಟ್ರೀಯ ಗೊಂಬೆಯಾಟದ ಉತ್ಸವʼದ ಮೂಲಕ ಅನುಪಮಾ ಹೊಸಕೆರೆ ಅವರು ಶತಮಾನಗಳ ಕರ್ನಾಟಕದ ಗೊಂಬೆಯಾಟ ಪರಂಪರೆಯನ್ನು ಎರಡು ದಶಕಗಳಿಂದ ಉಳಿಸುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ.
ಗೊಂಬೆಗಳು ಕುಣಿಯುತ್ತಿವೆ. ತಾಳಕ್ಕೆ ತಕ್ಕಂತೆ, ಸೂತ್ರಧಾರನ ಆಣತಿಗೆ ತಕ್ಕಂತೆ. ತರಾವರಿ ವೇಷಗಳೊಂದಿಗೆ ಮಿರಿಮಿರಿ ಮಿನುಗುತ್ತಿವೆ. ನಮ್ಮ ಸುತ್ತ ಹೊಸ ಹೊಸ ತಂತ್ರಜ್ಞಾನಗಳು ಬಂದವು. ತಲೆಮಾರುಗಳು ಬದಲಾದವು. ಅವರ ಆಸಕ್ತಿಗಳು ಬದಲಾದವು. ಆದರೆ ಸೂತ್ರದ ಗೊಂಬೆಗಳು ಈಗಲೂ ಲಗಾಟಿ ಹೊಡೆಯುತ್ತಲೇ ಇವೆ. ನಮ್ಮ ಮನಸ್ಸನ್ನು ಮುದಗೊಳಿಸುತ್ತಲೇ ಇವೆ….
ಹೌದು, ಶತಮಾನಗಳಷ್ಟು ಹಳೆಯದಾದ ಮತ್ತು ವೈವಿಧ್ಯಮಯವೂ ಆದ ಕರ್ನಾಟಕದ ಸೂತ್ರದ ಗೊಂಬೆಯಾಟ ಈಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಸೂತ್ರಧಾರ ಹಿಡಿದ ತಂತಿಗಳಿನ್ನೂ ಸೋತಿಲ್ಲ. ತಂತಿ ತಂತಿಗೆ ತಾಕಿ ಜೀವಚೈತನ್ಯವನ್ನು ಹೊರಹೊಮ್ಮುತ್ತಲೇ ವೆ. ಹೊಸ ಹೊಸ ಗೊಂಬೆಯಾಟದ ಪ್ರಸಂಗಗಳು ಜನರನ್ನು ಸೆಳೆಯುತ್ತಲೇ ಇವೆ.
ಇದಕ್ಕೆ ಮುಖ್ಯ ಕಾರಣ ಇಂತಹುದೊಂದು ಅಪರೂಪದ ಪ್ರಾಚೀನ ಕಲೆಯೊಂದಿಗೆ ಬೆಸೆದುಕೊಂಡಿರುವ ಕಲಾವಿದರ ಜೀವನ. ಗೊಂಬೆಗಳ ಮಟ್ಟಿಗೆ ಅವರು ನಿಜದ ಜೀವತಂತು ಆಗಿದ್ದಾರೆ. ಶತಾಯಗತಾಯ ಈ ಕಲೆಯನ್ನು ಜೀವಂತ ಇಡಬೇಕು, ಅದನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಅದನ್ನು ಮುಂದಿನ ತಲೆಮಾರುಗಳಿಗೂ ತಲುಪಿಸಬೇಕು ಎಂಬ ಕಳಕಳಿ ಹೊತ್ತವರು ಬೆಂಗಳೂರಿನ ಖ್ಯಾತ ಗೊಂಬೆಯಾಟ ಕಲಾವಿದೆ, ಧಾತು ಪಪೆಟ್ ಥಿಯೇಟರ್ ಸಂಸ್ಥಾಪಕ ನಿರ್ದೇಶಕಿ ಮತ್ತು ಪದ್ಮಶ್ರೀ ಪುರಸ್ಕೃತೆ ಅನುಪಮಾ ಹೊಸಕೆರೆ ಅವರು.
ಅನುಪಮಾ ಅವರು ತಮ್ಮ ವೃತ್ತಿ ಜೀವನವನ್ನು ಗೊಂಬೆಯಾಟದ ಸಂಶೋಧನೆ, ಸಂರಕ್ಷಣೆ ಮತ್ತು ಅಭ್ಯಾಸಕ್ಕಾಗಿ ಮೀಸಲಿಟ್ಟಿದ್ದಾರೆ. ಈ ಪರಂಪರೆಯ ನಿರಂತರ ಬೆಳವಣಿಗೆಗೆ ಅವರು ನಿರಂತರ ಶ್ರಮಿಸುತ್ತಿದ್ದಾರೆ. ʼಗೊಂಬೆಯಾಟ ಇಂದಿಗೂ ಸಕ್ರಿಯವಾಗಿದೆ, ಆದರೆ ನಾವು ಮಾತ್ರ ಅಂತಹ ಕಲೆಯ ಬಗ್ಗೆ ಜಾಗೃತರಾಗಿಲ್ಲ. ಅದರ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ,” ಎನ್ನುತ್ತಾರೆ ಅವರು.
ಗೊಂಬೆಯಾಟದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ ಅವರು ಕಳೆದ ಸುಮಾರು ಹದಿನೇಳು ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರತಿ ವರ್ಷ ʼಧಾತು ಅಂತಾರಾಷ್ಟ್ರೀಯ ಗೊಂಬೆಯಾಟದ ಉತ್ಸವʼವನ್ನು ಆಯೋಜಿಸುತ್ತ ಬಂದಿದ್ದಾರೆ.
ಭಾಗವತದ ಕಾಲದಿಂದಲೇ…
“ನಾನು ಸಂಶೋಧನೆ ನಡೆಸುವ ಸಂದರ್ಭದಲ್ಲಿ ಭಾಗವತ ಪುರಾಣದ ಒಂದು ವಾಕ್ಯ ನನ್ನ ಗಮನ ಸೆಳೆಯಿತು. ಮರದ ಗೊಂಬೆಯನ್ನು ಸೂತ್ರಧಾರ ತನಗೆ ಇಷ್ಟ ಬಂದಂತೆ ಆಡಿಸುವ ಹಾಗೆ ನಾವೆಲ್ಲರೂ ಆ ಭಗವಂತನ ಕೈಗೊಂಬೆಗಳು ಎಂದು ಹೇಳಲಾಗಿದೆ. ಅಂದರೆ ಭಾಗವತದ ಕಾಲದಲ್ಲಿಯೇ ಮರದ ಗೊಂಬೆಯಾಟವು ಪ್ರಸಿದ್ಧವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ,” ಎಂದು ಹೇಳುವ ಅನುಪಮಾ ಅವರು ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿ[ ಸಮಯದಲ್ಲಿ ಭಾರತದ ಸಮಗ್ರ ಗೊಂಬೆಯಾದ ಬಗ್ಗೆ ತಾವು ಕಂಡುಕೊಂಡ ಕುತೂಹಲಕಾರಿ ಅಂಶವನ್ನು ವಿವರಿಸುತ್ತಾರೆ.
ಅನುಪಮಾ ಅವರು ಗುರು ಎಂ.ಆರ್.ರಂಗನಾಥ್ ರಾವ್ ಅವರ ಬಳಿ ತರಬೇತಿಯನ್ನು ಪಡೆದ ಬಳಿಕ ಜೆಕ್ ಗಣರಾಜ್ಯದ ಮಿರೋಸ್ಲಾವ್ ಟ್ರೆಜ್ನರ್ ಅವರ ಬಳಿ ಮಾರಿಯೋನೆಟ್ (ತಂತಿ ಗೊಂಬೆ) ನಿರ್ಮಾಣ ಮತ್ತು ವಿನ್ಯಾಸವನ್ನೂ ಕರಗತ ಮಾಡಿಕೊಂಡರು.
ʼಧಾತು ಅಂತಾರಾಷ್ಟ್ರೀಯ ಗೊಂಬೆಯಾಟದ ಉತ್ಸವʼದಲ್ಲಿ ಕರ್ನಾಟಕದ ಎಂಟು ವಿಶಿಷ್ಟ ಶೈಲಿಯ ಮರದ ಗೊಂಬೆಯಾಟದ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಅವುಗಳಲ್ಲಿ ಮೂಡಲಪಾಯದ ಸಲಾಕಿ ಗೊಂಬೆಗಳು, ಪಡುವಲಪಾಯದ ಯಕ್ಷಗಾನ ಗೊಂಬೆಗಳು, ರಾಣೆಬೆನ್ನೂರಿನ ದೊಡ್ಡಾಟ, ಮೂಡಲಪಾಯದ ಸೂತ್ರದ ಗೊಂಬೆ, ಈಚನೂರು ಭಾಗವತ ಶೈಲಿಯ ಗೊಂಬೆಯಾಟ, ಚಿನ್ನಿಯಾಟ (ಕೈಗೊಂಬೆ), ಕೀಲು ಗೊಂಬೆ (ಯಾಂತ್ರಿಕ ಗೊಂಬೆ) ಮತ್ತು ತಾರಮಯ್ಯ ಗೊಂಬೆ (ಬೆರಳು ಗೊಂಬೆ).
ಈ ಎಲ್ಲ ಗೊಂಬೆಯಾಟದ ಪ್ರಕಾರಗಳ ಬಗ್ಗೆ ವಿವರಣೆ ನೀಡುವ ಅವರು, "ತಾರಮಯ್ಯ ಬೊಂಬೆಯು ಮುಖ್ಯವಾಗಿ ಮಕ್ಕಳಿಗಾಗಿ ಇರುವ ಬೆರಳು ಗೊಂಬೆಯಾಟವಾಗಿದೆ. ಕೀಲು ಬೊಂಬೆಗಳು ಕೀಲುಗಳನ್ನು ಹೊಂದಿರುವ ಗೊಂಬೆಗಳಾಗಿದ್ದು, ಇವು ಕಥಾವಾಚನದ ಕೇಂದ್ರಬಿಂದುವಾಗಿರುತ್ತವೆ. ಇವು ಗಂಭೀರ ವಿಷಯಗಳಿಂದ ಹಿಡಿದು ಹಾಸ್ಯದವರೆಗೆ ವಿವಿಧ ಕಥೆಗಳನ್ನು ಹೇಳಬಲ್ಲವು. ಚಿನ್ನಿ ಆಟವು ಸಂವಹನ ಮತ್ತು ವ್ಯಂಗ್ಯಕ್ಕಾಗಿ ಬಳಕೆಯಾಗುತ್ತದೆ. ನಂತರ ಜನಪ್ರಿಯ ಸಲಾಕಿ ಗೊಂಬೆಯಾಟದ ಪರಂಪರೆಯಿದೆ. ಮೂಡಲಪಾಯ ಯಕ್ಷಗಾನವು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಉಗಮಿಸಿದ ಒಂದು ಶಾಸ್ತ್ರೀಯ ಕಲಾಪ್ರಕಾರವಾಗಿದೆ. ಮೂಡಲಪಾಯ ಯಕ್ಷಗಾನವು ಸಲಾಕಿ ಬೊಂಬೆ, ಸೂತ್ರದ ಬೊಂಬೆ, ಸ್ವಲ್ಪಮಟ್ಟಿಗೆ ಅಲಂಕೃತಗೊಂಡಿರುವ ಭಾಗವತ ಶೈಲಿಯ ಬೊಂಬೆ ಮತ್ತು ವಿಶಿಷ್ಟ ಶೈಲಿಯ ಸಲಾಕಿ ಬೊಂಬೆಯಾದ ದೊಡ್ಡಾಟ ಸೇರಿದಂತೆ ಹಲವಾರು ರೂಪಗಳನ್ನು ಒಳಗೊಂಡಿದೆ. ಮೂಡಲಪಾಯ ಯಕ್ಷಗಾನದಲ್ಲಿ ಬಡಗುತಿಟ್ಟು ಮತ್ತು ತೆಂಕುತಿಟ್ಟು ಎಂಬ ಎರಡು ಪ್ರಭೇದಗಳಿದ್ದು, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಗೊಂಬೆಯಾಟದ ಶೈಲಿಯನ್ನು ಹೊಂದಿವೆ."
ಗ್ರಾಮೀಣ-ನಗರದ ನಡುವಿನ ಜೀವತಂತು
ಧಾತು ಉತ್ಸವವು ಅಷ್ಟೇನೂ ಪರಿಚಿತವಲ್ಲದ ಗೊಂಬೆಯಾಟದ ಪ್ರಕಾರಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ಇವು ತಮ್ಮ ಸ್ಥಳೀಯ ವಲಯಗಳನ್ನು ಮೀರಿ ಬೆಳೆದಿಲ್ಲ. ಪ್ರತಿಯೊಂದು ಪ್ರಾಂತ್ಯದ ವಿಶಿಷ್ಟ ಚಲನವಲನಗಳು, ನಿರೂಪಣಾ ಶೈಲಿಗಳು ಮತ್ತು ಗೊಂಬೆಗಳ ವಿನ್ಯಾಸದಲ್ಲಿ ಎಷ್ಟೆಲ್ಲ ವೈವಿಧ್ಯತೆಗಳಿವೆ ಎಂಬುದನ್ನು ವೀಕ್ಷಕರಿಗೆ ಪರಿಚಯಿಸಲು ಈ ಉತ್ಸವ ಉತ್ತಮ ಅವಕಾಶವಾಗಿದೆ. ಹೀಗಾಗಿ ಇದು ಕಲಾವಿದರು ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆಮಾಡುವ ಜೀವತಂತುವಾಗಿದೆ.
ಕರ್ನಾಟಕದ ತಂತಿ ಗೊಂಬೆಯಾಟದ ಪ್ರವೀಣರಾದ ಎನ್.ಟಿ. ಮೂರ್ತಾಚಾರ್ಯ ಅವರು ತಮ್ಮ ಗೊಂಬೆಗಳೊಂದಿಗೆ.
ತಮ್ಮ ಎರಡು ದಶಕಗಳಿಗೂ ಹೆಚ್ಚಿನ ಸಂಶೋಧನೆ ಮತ್ತು ಅನುಭವವನ್ನು ಅನುಪಮಾ ಅವರು ಈ ಉತ್ಸವಕ್ಕೆ ಧಾರೆ ಎರೆಯುತ್ತಾರೆ. ಇಷ್ಟೊಂದು ವೈವಿಧ್ಯಮಯ ಹಾಗೂ ವಿಭಿನ್ನ ಗಾತ್ರದ ಗೊಂಬೆಗಳನ್ನು ಹೊಂದಿರುವವರು ಅಪರೂಪದಲ್ಲಿ ಅಪರೂಪ ಎಂಬುದು ತಮ್ಮ ಅಷ್ಟೂ ಪ್ರವಾಸಗಳ ಸಮಯದಲ್ಲಿ ಅವರು ಕಂಡುಕೊಂಡ ಸತ್ಯವಾಗಿದೆ.
ಆದರೆ ಇಂತಹ ಪ್ರಾಚೀನ ಕಲಾಪ್ರಕಾರವನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಅವರು ವಿಷಾದದಿಂದ ನುಡಿಯುತ್ತಾರೆ. ಅತ್ತ ಪ್ರವಾಸೋದ್ಯಮದ ಬೆಂಬಲವಿಲ್ಲ ಮತ್ತು ಇತ್ತ ಹೆಚ್ಚಿನ ಪೋಷಕರೂ ಇಲ್ಲ. ಹೆಚ್ಚಾಗಿ ಸ್ಥಳೀಯ ಸಮುದಾಯಗಳೇ ಈ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿವೆ ಎಂದು ಅವರು ಹೇಳುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ ಗೊಂಬೆಯಾಟದ ಕಲಾವಿದರ ತಿಂಗಳ ಸಂಭಾವನೆ ರೂ.೫೦೦೦ದಿಂದ ೧೦೦೦೦ ರೂ. ವರೆಗೆ ಮಾತ್ರ, ಆದರೆ ಕಲಾವಿದರ ಆದಾಯದ ಬಗ್ಗೆ ಮತ್ತು ಗೊಂಬೆಯಾಟಕ್ಕಾಗಿ ಸರ್ಕಾರದ ಬಜೆಟ್ ಹಂಚಿಕೆಯ ಬಗ್ಗೆ ಯಾವುದೇ ಅಧಿಕೃತ ದತ್ತಾಂಶ ಲಭ್ಯವಿಲ್ಲದ ಕಾರಣ, ಈ ಕಲೆಯ ಆರ್ಥಿಕ ಸುಸ್ಥಿರತೆಯನ್ನು ನಿಖರವಾಗಿ ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ.
ಆದರೆ, ಅನುಪಮಾ ಅವರಿಗೆ ಈ ಕಲಾಪ್ರಕಾರವು ಹೇಗೆ "ಅಸ್ತಿತ್ವ ಉಳಿಸಿಕೊಂಡಿದೆ" ಎಂಬ ಪ್ರಶ್ನೆಯೇ ಅಪ್ರಸ್ತುತ ಎನಿಸುತ್ತದೆ. ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಯಾವುದೇ ಕಲೆ ಸುಸ್ಥಿರವಾಗಿರುತ್ತದೆ ಎಂಬುದು ಅವರ ನಂಬಿಕೆ. ಅಲ್ಲದೆ, ನಗರ ಪ್ರದೇಶದ ಪ್ರೇಕ್ಷಕರು ಅಳೆಯುವ ಮಾನದಂಡಗಳು ಭಾರತೀಯ ಪರಂಪರೆಗೆ ಅನುಗುಣವಾಗಿ ಇಲ್ಲದಿರುವುದರಿಂದ ಅವರು ಕಲೆಯ ಬಗ್ಗೆ ಪೂರ್ವ ನಿರ್ಧರಿತ ಅಭಿಪ್ರಾಯಗಳನ್ನು ಹೊಂದಿರುತ್ತಾರೆ ಎಂಬ ಅಂಶವನ್ನೂ ಅವರು ಸೇರಿಸುತ್ತಾರೆ. “ನೀವು ಇದನ್ನು ಭಾರತೀಯ ಸಂದರ್ಭದಲ್ಲಿ ನೋಡಬೇಕು," ಎಂದು ಅವರು ಪ್ರತಿಪಾದಿಸುತ್ತಾರೆ.
“ಈ ಸಂಪೂರ್ಣ ಉತ್ಸವದ ಉದ್ದೇಶವೇ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಕರ್ನಾಟಕದ ಗೊಂಬೆಯಾಟ ಪ್ರಕಾರವನ್ನು ಎಲ್ಲರೂ ನೋಡುವಂತೆ ಮಾಡುವುದು. ನಾವು ಜಗತ್ತಿಗೆ ಏನನ್ನಾದರೂ ನೀಡಲು ಸಾಧ್ಯವಿದ್ದರೆ ಅದು ಈ ಕಲೆ. ಈ ಉತ್ಸವದ ಮೂಲಕ ನಾವು ನಗರ ಮತ್ತು ಗ್ರಾಮೀಣ ಕರ್ನಾಟಕದ ನಡುವೆ ಒಂದು ಕೊಂಡಿಯನ್ನು ನಿರ್ಮಿಸಿದ್ದೇವೆ. ಇದು ಕಲಾವಿದರು ಮತ್ತು ಪ್ರೇಕ್ಷಕರು ಪರಸ್ಪರ ಸಂವಹನ ನಡೆಸುವ ಒಂದು ವಿನಿಮಯ ವೇದಿಕೆಯಾಗಿದೆ,” ಎಂದು ಅವರು ವಿವರಿಸುತ್ತಾರೆ.
ಉತ್ಸವದಲ್ಲಿ ಭಾಗವಹಿಸುವ ಕಲಾವಿದರು ತಮ್ಮ ಪಯಣವನ್ನು ಮೆಲುಕು ಹಾಕುತ್ತಾ, ಈ ಕಲಾಪ್ರಕಾರವನ್ನು ಉತ್ತೇಜಿಸಬೇಕಾದ ಅಗತ್ಯವನ್ನು ಒತ್ತಿಹೇಳುತ್ತಾರೆ. ವೀರನಾಯಕನ ಹಳ್ಳಿಯ ಮೂಡಲಪಾಯ ಗೊಂಬೆಯಾಟದ ಕಲಾವಿದರು ವಿವರಿಸುವಂತೆ, ಅವರು ಜಾತಿ ಆಧಾರಿತ ಕಲಾವಿದರಲ್ಲ; ಬದಲಿಗೆ ಗೊಂಬೆಯಾಟದ ಮೇಲಿನ ಪ್ರೀತಿಯಿಂದ ಒಂದಾದ ಸಮಾನ ಮನಸ್ಕ ವ್ಯಕ್ತಿಗಳ ಒಕ್ಕೂಟವಾಗಿದೆ. ಇಲ್ಲಿನ ಕೆಲವು ಮರದ ಗೊಂಬೆಗಳು 150 ವರ್ಷಗಳಿಗಿಂತಲೂ ಹಳೆಯವು. “ನಾನು ನನ್ನ ಮುತ್ತಜ್ಜ ಸೇರಿದಂತೆ ನನ್ನ ಪೂರ್ವಜರಿಂದ ಈ ಕಲೆಯನ್ನು ಕಲಿತಿದ್ದೇನೆ,” ಎನ್ನುತ್ತಾರೆ ತುಮಕೂರು ಜಿಲ್ಲೆಯ ವಿಘ್ನೇಶ್ವರ ಯಕ್ಷಗಾನ ಮಂಡಳಿಯನ್ನು ತಮ್ಮ ಸಹೋದರನೊಂದಿಗೆ ಮುನ್ನಡೆಸುತ್ತಿರುವ ಗಂಗರಾಜು. ಅವರು ತಮ್ಮ ಮುಂದಿನ ಪ್ರದರ್ಶನಗಳಲ್ಲಿ ಅಭಿನಯದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಭರವಸೆ ಹೊಂದಿದ್ದಾರೆ.
ಇಂದಿನ ಕಾಲದಲ್ಲಿ, ತಾವು ಪ್ರದರ್ಶಿಸುವ ಮಾರ್ಕಂಡೇಯನ ಕಥೆಯಂತಹ ಪುರಾಣಗಳ ಮೂಲಕ ನೈತಿಕ ಪಾಠಗಳನ್ನು ಬೋಧಿಸಲು ಮತ್ತು ಜನರು ಸನ್ಮಾರ್ಗದಲ್ಲಿ ನಡೆಯುವಂತೆ ಸಹಾಯ ಮಾಡಲು ಗೊಂಬೆಯಾಟವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ನಂಬಿದ್ದಾರೆ. "ಬೆಂಗಳೂರಿಗರು ಮಾಲ್ಗಳಲ್ಲಿ ಸಮಯ ಕಳೆಯುವ ಬದಲು ಗೊಂಬೆಯಾಟವನ್ನು ಬೆಂಬಲಿಸಬೇಕೆಂದು ನಾವು ಬಯಸುತ್ತೇವೆ," ಎಂದು ಗಂಗರಾಜು ಒತ್ತಿಹೇಳುತ್ತಾರೆ.
ಕರ್ನಾಟಕದ ಮೂಡಲಪಾಯ ಶೈಲಿಯ ಸೂತ್ರದ ಬೊಂಬೆಯಾಟದ ಪ್ರವೀಣರಾದ ಎನ್.ಟಿ. ಮೂರ್ತಾಚಾರ್ಯ ಅವರು ಹೀಗೆನ್ನುತ್ತಾರೆ: "ಈ ಕಲಾಪ್ರಕಾರವನ್ನು ಶಾಲೆಗಳಿಗೆ ಕೊಂಡೊಯ್ಯುವುದು ನನ್ನ ಮುಖ್ಯ ಗುರಿಯಾಗಿದೆ. ಇತ್ತೀಚೆಗಷ್ಟೇ ನಾನು ಮಂಡ್ಯ ಜಿಲ್ಲೆಯ ಐದು ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ." ಇದನ್ನು ಇನ್ನಷ್ಟು ವಿಸ್ತರಿಸಲು, ನಮ್ಮ ಮುಂದಿನ ತಲೆಮಾರುಗಳಿಗೂ ಕಲಾ ಪ್ರಕಾರದ ಪರಿಚಯ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಬೆಂಬಲಕ್ಕೆ ನಿಲ್ಲಬೇಕು ಎಂಬುದು ಅವರ ಆಶಯವಾಗಿದೆ.

