
ನಿಮ್ಮ ಪಾದಗಳಿಗಿನ್ನು ರಾಜವೈಭವ: ಲಿಡ್ಕರ್‌ನಿಂದ 'ಮಹಾರಾಜ-ಮಹಾರಾಣಿ' ಪಾದʼರಕ್ಷೆʼ
ಮಹಾರಾಜ - ಮಹಾರಾಣಿ ಎರಡೂ ಮಾದರಿಯ ಪಾದರಕ್ಷೆಗಳಿಗೆ ಬಹು ಬೇಡಿಕೆ ಬಂದಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ಪಾದರಕ್ಷೆಗಳನ್ನು ತಯಾರಿಸಲಾಗುವುದು ಎಂದು ಲಿಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ತಿಳಿಸಿದ್ದಾರೆ.
ಎಲ್ಲರಿಗೂ ತಾವು ರಾಜ - ರಾಣಿಯರಂತೆ ಜೀವನ ನಡೆಸಬೇಕು ಎಂಬ ಆಸೆ ಇರುತ್ತದೆ. ಆದರೆ ಇದೀಗ ನೀವು ರಾಜ ರಾಣಿಯಾಗಬೇಕೆಂದರೆ ಮೈಸೂರಿನ ಅರಮನೆಗೆ ಹೋಗಬೇಕೆಂದಿಲ್ಲ. ರಾಜ್ಯ ಸರ್ಕಾರದ ಲಿಡ್ಕರ್ ಸಂಸ್ಥೆಯು ನೂತನವಾಗಿ ವಿನ್ಯಾಸಗೊಳಿಸಿರುವ ಪಾದರಕ್ಷೆಯನ್ನು ಧರಿಸಿದರೆ ಸಾಕು!
ಚರ್ಮದ ಉತ್ಪನ್ನಗಳಗೆ ಹೆಸರುವಾಸಿಯಾಗಿರುವ ಲಿಡ್ಕರ್ (ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ) ಇದೀಗ ಗ್ರಾಹಕರಿಗೆ ಉತ್ಕೃಷ್ಟ ಹಾಗೂ ವಿಭಿನ್ನವಾದ ʼಮಹಾರಾಜಾ- ಮಹಾರಾಣಿʼ ಚಪ್ಪಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸಂತೋಷದಾಯಕ ವಿಷಯವೆಂದರೆ ಬಿಡುಗಡೆಗೂ ಮುನ್ನವೇ ಈ ಪಾದರಕ್ಷೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಈ ಹಿಂದೆ ರಾಜ - ಮಹಾರಾಜರು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಇಂತಹ ಪಾದರಕ್ಷೆಗಳು ರಾಜರಿಗೆ ಭೂಷಣದ ಜತೆಗೆ ಹೊಸ ಮೆರಗು ನೀಡುತ್ತಿದ್ದವು. ಈಗ ಅದೇ ಮಾದರಿಯ ಮಹಾರಾಜ-ಮಹಾರಾಣಿ ಪಾದರಕ್ಷೆಗಳು ಮೈಸೂರಿನಲ್ಲಿ ತಯಾರಾಗುತ್ತಿದ್ದು, ಶೀಘ್ರವೇ ಎಲ್ಲಾ ಲಿಡ್ಕರ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.
ವಿನ್ಯಾಸಕ್ಕೆ ಅನುಗುಣವಾಗಿ ಬೆಲೆ
ಮಹಾರಾಜ-ಮಹಾರಾಣಿಯರು ಧರಿಸುತ್ತಿದ್ದ ಪಾದರಕ್ಷೆಗಳ ಮಾದರಿಯಲ್ಲೇ ತಯಾರಿಸಲಾಗಿದೆ. ಈ ಪಾದರಕ್ಷೆಗಳು ಅವುಗಳ ವಿನ್ಯಾಸಕ್ಕೆ ಅನುಗುಣವಾಗಿ ಬೆಲೆ ಹೊಂದಿದ್ದು, 3,000 ರೂ.ನಿಂದ ಆರಂಭವಾಗಿ 30 ಸಾವಿರ ರೂ.ವರೆಗೂ ಬೆಲೆಬಾಳುತ್ತದೆ.
"ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ಕೆ.ಎಂ. ವಸುಂಧರಾ ಅಧಿಕಾರ ವಹಿಸಿಕೊಂಡ ನಂತರ ಹೊಸ ವಿನ್ಯಾಸದ ಪಾದರಕ್ಷೆಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಲಿಡ್ಕರ್ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ," ಎಂದು ಈ ವಿನೂತನ ಪಾದರಕ್ಷೆ ತಯಾರಕ ಮೈಸೂರಿನ ರಾಜು ತಿಳಿಸಿದರು.
ಕೊಲ್ಲಾಪುರಿಗಿಂತ ವಿಭಿನ್ನ
ನೂತನ ಪಾದರಕ್ಷೆಗಳನ್ನು ಕೊಲ್ಲಾಪುರಿ ಪಾದರಕ್ಷೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗಿದ್ದು, ಇವು ಆರೋಗ್ಯಕ್ಕೂ ಉತ್ತಮ. ವಿದೇಶಗಳಿಗೂ ರಫ್ತು ಮಾಡುವಷ್ಟು ಗುಣಮಟ್ಟ ಹೊಂದಿರುವ ಲೆದರ್ ಪಾದರಕ್ಷೆಗಳಾಗಿವೆ. ನಿಗಮದ ಸೂಚನೆಯಂತೆ ಮೂರು ದಿನದಲ್ಲಿ ತಯಾರಿಸಿ ಪಾದರಕ್ಷೆ ತಲುಪಿಸುತ್ತೇನೆ. ಕೊಲ್ಲಾಪುರಿ ಪಾದರಕ್ಷೆಗಳು ಎಲ್ಲಿ ಬೇಕಾದರೂ ಸಿಗುತ್ತವೆ. ಆದರೆ, ಇದು ಸಿಗುವುದಿಲ್ಲ. ಈಗಾಗಲೇ 11 ವಿನ್ಯಾಸಗಳ ಪಾದರಕ್ಷೆಗಳನ್ನು ತಯಾರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ತಲಾ 10 ವಿನ್ಯಾಸಗಳ ಪಾದರಕ್ಷೆ ತಯಾರಿಸುವ ಗುರಿ ಹೊಂದಲಾಗಿದೆ ಎಂದು ಲಿಡ್ಕರ್ ಹೇಳಿದೆ.
ಮಹಾರಾಜ ಮಹಾರಾಣಿ ಪಾದರಕ್ಷೆ ಮಾದರಿ
ಕೇರಳ, ದೆಹಲಿಯಿಂದ ರಬ್ಬರ್, ಅಂಟು ಖರೀದಿ
ಪಾದರಕ್ಷೆಗೆ ಬೇಕಾಗುವ ಅಂಟು, ರಬ್ಬರ್ ಹಾಗೂ ಇನ್ನಿತರ ಉಪ ಉತ್ಪನ್ನಗಳಿಗೆ ರಾಜ್ಯದಲ್ಲಿ ಕೊರತೆ ಇರುವ ಕಾರಣ ಕೇರಳ, ಆಗ್ರಾ ಹಾಗೂ ದೆಹಲಿಗೆ ತೆರಳಿ ಖರೀದಿಸಿ ಮಾಹಾರಾಜ ಹಾಗೂ ಮಹಾರಾಣಿ ಪಾದರಕ್ಷೆ ತಯಾರಿಸಲಾಗುತ್ತದೆ. ಇದರಿಂದ ಪಾದಕ್ಷೆಗಳ ವಿನ್ಯಾಸ ಹಾಗೂ ಶೈಲಿ ವಿಭಿನ್ನವಾಗಿ ಕಾಣಿಸುತ್ತವೆ. ಇದೇ ಕಾರಣಕ್ಕೆ ದರವೂ ಹೆಚ್ಚಾಗಿದೆ!
ವಿಮಾನ ನಿಲ್ದಾಣದಲ್ಲಿ ಲಭ್ಯ
ಮಹಾರಾಜ - ಮಹಾರಾಣಿ ಎರಡೂ ಮಾದರಿಯ ಪಾದರಕ್ಷೆಗಳಿಗೆ ಬಹು ಬೇಡಿಕೆ ಬಂದಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ಪಾದರಕ್ಷೆಗಳನ್ನು ತಯಾರಿಸುತ್ತಿದ್ದೇವೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕಲಾಲೋಕದಲ್ಲಿ ಮಾತ್ರ ಈ ಪಾದರಕ್ಷೆಗಳು ಸಿಗುತ್ತಿದ್ದು, ನೈಜ ಚರ್ಮದಿಂದ ತಯಾರಿಸಿದ್ದ ಪಾದರಕ್ಷೆಯಾಗಿರುವುದರಿಂದ ದರವು ಸ್ವಲ್ಪ ದುಬಾರಿಯಾಗಿವೆ.
ಲಿಡ್ಕರ್ ವಸ್ಥಾಪಕ ನಿರ್ದೇಶಕಿ ಕೆ.ಎಂ. ವಸುಂಧರಾ ಅವರಿಂದ ಪಾದರಕ್ಷೆ ವೀಕ್ಷಣೆ
"ಈ ಪಾದರಕ್ಷೆಗಳ ಒಂದು ಜೊತೆಗೆ 5 ಸಾವಿರ ರೂ. ಗಳನ್ನು ನಿಗದಿಪಡಿಸಲಾಗಿದೆ. ಇವು ಲಿಡ್ಕರ್ ಅಡಿಯಲ್ಲೇ ತಯಾರಿಸಲಾಗುತ್ತಿದ್ದು, ಮಹಾರಾಜ ಹಾಗೂ ಮಹಾರಾಣಿ ಎಂಬ ಹೆಸರನ್ನು ನಾವೇ ಇಟ್ಟಿದ್ದೇವೆ. ನೋಡಲು ಸುಂದರ ಹಾಗೂ ಆರಾಮದಾಯಕ ಆಗಿರುವ ಕಾರಣಕ್ಕಾಗಿ ಮಹಾರಾಣಿ ಪಾದರಕ್ಷೆಗೆ ಬೇಡಿಕೆ ಹೆಚ್ಚಾಗಿದೆ. ವಿದೇಶಿ ಮಹಿಳೆಯರು ಕೂಡ ಮಹಾರಾಣಿ ಮಾದರಿಯ ಪಾದರಕ್ಷೆಗೆ ಮಾರುಹೋಗಿದ್ದಾರೆ. ಒಂದು ಜೊತೆ ಮಹಾರಾಜ ಪಾದರಕ್ಷೆ ತಯಾರಿಸಲು ಒಂದುವರೆ ದಿನ ಹಾಗೂ ಮಹಾರಾಣಿ ಪಾದರಕ್ಷೆಗೆ ಒಂದು ದಿನ ಸಮಯ ಬೇಕಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ವಸುಂಧರಾ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಲಿಡ್ಕರ್ ಮಳಿಗೆಯಲ್ಲಿರುವ ವಿವಿಧ ಶೈಲಿಯ ಪಾದರಕ್ಷೆಗಳು
ಲಿಡ್ಕರ್‌ನ ಉತ್ಪನ್ನಗಳು ಯಾವುವು ?
ಲಿಡ್ಕರ್ ಸಂಸ್ಥೆಯು ಪ್ರಮುಖವಾಗಿ ಉತ್ತಮ ಗುಣಮಟ್ಟದ ಚರ್ಮದ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಇವುಗಳಲ್ಲಿ ಚರ್ಮದ ಪಾದರಕ್ಷೆಗಳು, ಬೆಲ್ಟ್‌ಗಳು, ಪರ್ಸ್‌ಗಳು, ಬ್ಯಾಗ್‌ಗಳು ಮತ್ತು ಇತರ ಚರ್ಮದ ಪರಿಕರಗಳು ಸೇರಿವೆ. ಈ ಉತ್ಪನ್ನಗಳು ಬಾಳಿಕೆಗೆ ಮತ್ತು ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.
ಇಟಲಿಯ ಪ್ರಾಡಾದೊಂದಿಗೆ ಒಪ್ಪಂದ
ಕರ್ನಾಟಕದ ಲಿಡ್ಕರ್ ಸಂಸ್ಥೆಯು 2025 ಡಿಸೆಂಬರ್‌ನಲ್ಲಿ ಇಟಲಿ ದೇಶದ ಪ್ರಸಿದ್ಧ ಫ್ಯಾಷನ್ ಬ್ರಾಂಡ್ ಆದ ಪ್ರಾಡಾ (Prada) ದೊಂದಿಗೆ ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿದೆ. ಜಿಐ ಟ್ಯಾಗ್ ಹೊಂದಿರುವ ಸಾಂಪ್ರದಾಯಿಕ 'ಕೊಲ್ಹಾಪುರಿ ಚಪ್ಪಲಿ'ಗಳನ್ನು ಮತ್ತು ಚರ್ಮದ ಕುಶಲಕರ್ಮಿಗಳ ಕಲೆಗೆ ಜಾಗತಿಕ ವೇದಿಕೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶೇಷ ಪಾದರಕ್ಷೆಗಳ ಸಂಗ್ರಹವನ್ನು ಫೆಬ್ರವರಿ 2026 ರಿಂದ ಪ್ರಾಡಾ ಸಂಸ್ಥೆಯ 40 ಜಾಗತಿಕ ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತದೆ. ಈ ಯೋಜನೆಯು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ಕುಶಲಕರ್ಮಿಗಳಿಗೆ ತರಬೇತಿ ಮತ್ತು ಆರ್ಥಿಕ ಸಬಲೀಕರಣವನ್ನು ನೀಡಲಿದೆ.

