
ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಬಿಗಿ ನಿಯಮ ಜಾರಿಗೆ ಕರ್ನಾಟಕ ಸರ್ಕಾರ ಸಿದ್ಧತೆ
ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಿರಂತರವಾಗಿ ನಡೆಯುತ್ತಿರುವುದನ್ನು ತೀವ್ರವಾಗಿ ಪರಿಗಣಿಸಿರುವ ಸರ್ಕಾರ ಈ ಹೇಯ ಕೃತ್ಯ ತಡೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಲ್ಟ್ರಾಸೌಂಡ್ ಕೊಠಡಿಯೊಳಗೆ ಗರ್ಭಿಣಿಯನ್ನು ಹೊರತುಪಡಿಸಿ ಇತರ ಸಂಬಂಧಿಕರ ಪ್ರವೇಶ ನಿರ್ಬಂಧಿಸಲು ಹಾಗೂ ಹೆಚ್ಚುವರಿ ಮಾನಿಟರ್ ಇರುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ (PC & PNDT) ರಾಜ್ಯ ಉಪನಿರ್ದೇಶಕ ಡಾ. ವಿವೇಕ್ ದೊರೆ ತಿಳಿಸಿದ್ದಾರೆ. ಈ ಕುರಿತು ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ.
ಲಿಂಗಾನುಪಾತದಲ್ಲಿ ಸಮಾನತೆ ಸಾಧಿಸುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಸರ್ಕಾರ ಕಟಿಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.
ಹದಿನೈದು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ಆಸ್ಪತ್ರೆ ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಪೊಲೀಸರು ಇತ್ತೀಚೆಗೆ ನಾಲ್ಕು ಮಂದಿಯನ್ನು ಬಂಧಿಸಿದ್ದರು.
ಆಲೆಮನೆಯೇ ಭ್ರೂಣ ಲಿಂಗ ಪತ್ತೆ ಕಾರ್ಯಸ್ಥಾನ
೨೦೨೩ರ ನವೆಂಬರ್ ಕೊನೆವಾರದಲ್ಲಿ ಮಂಡ್ಯ ತಾಲ್ಲೂಕಿನ ಹಾಡ್ಯ-ಹುಳ್ಳೇನಹಳ್ಳಿ ನಡುವಿನ ಆಲೆಮನೆಯೊಂದರ ಕೊಠಡಿಯಲ್ಲಿ ಅಕ್ರಮವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾರ್ಯ ಅಕ್ರಮವಾಗೆ ನಡೆಯುತ್ತಿರುವುದು ಪತ್ತೆಯಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹತ್ತಾರು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವು ಕೇವಲ ಕರ್ನಾಟಕವನ್ನಷ್ಟೇ ಅಲ್ಲ. ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಎಂಪಿಟಿ ಕಿಟ್‌ಗಳ ದುರ್ಬಳಕೆ
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹದಿನೇಳು ಮಂದಿಯನ್ನು ಬಂಧಿಸಲಾಗಿತ್ತು. ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಜಾಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿರದೆ, ಬೆಂಗಳೂರು, ಮೈಸೂರು, ರಾಮನಗರ, ಜಿಲ್ಲೆಗಳಲ್ಲೂ ಸಕ್ರಿಯವಾಗಿರುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟವಾಗಿ ಗೊತ್ತಾಗಿತ್ತು. ಮಂಡ್ಯ ಜಿಲ್ಲೆಯ ೩೨ಕ್ಕೂ ಹೆಚ್ಚು ಸಗಟು ಔಷಧಿ ಮಳಿಗೆಗಳಲ್ಲಿ ಗರ್ಭಪಾತಕ್ಕೆ ಬಳಸುವ ಸಾವಿರಾರು ʻಎಂಪಿಟಿ ಕಿಟ್ʼ ಗಳನ್ನು ಒಂದು ವರ್ಷದ ಅವಧಿಯಲ್ಲಿ ಮಾರಾಟ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ ಈ ಕಿಟ್ ಗಳ ಮಾರಾಟಕ್ಕೆ ಜಿಲ್ಲೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಹೊರ ಜಿಲ್ಲೆಗಳ ಔಷಧಿ ಅಂಗಡಿಗಳಿಂದ ಕಿಟ್ ಖರೀದಿಸಿ ತಂದು ಭ್ರೂಣ ಹತ್ಯೆ ನಡೆಸುವ ಜಾಲವೇ ಹರಡಿಕೊಂಡಿತು. ಕಿಟ್ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಏಕರೂಪ ನೀತಿ ಸಂಹಿತೆ ಇಲ್ಲದಿರುವುದರ ಲಾಭವನ್ನು ಕೆಲವರು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿದ್ದರು.
ರಾಜ್ಯದ ಗಮನ ಸೆಳೆದ ಈ ಪ್ರಕರಣವನ್ನು ಸರ್ಕಾರ ಆಗ ಸಿಐಡಿ ಗೆ ವಹಿಸಿತ್ತು. ಸಿಐಡಿ ವರದಿಯ ನಂತರವೂ ಸಕ್ಷಮ ಪ್ರಾಧಿಕಾರ ದೂರು ಸಲ್ಲಿಸುವಲ್ಲಿ ವಿಳಂಬ ಮಾಡಿತು. ಆರೋಗ್ಯ ಇಲಾಖೆಯ ಅಧಿಕಾರಿಗಳೂ ಈ ಪ್ರಕರಣವನ್ನು ತಮ್ಮ ಚುನಾವಣಾ ಭರಾಟೆಯಲ್ಲಿ ಮರೆತುಬಿಟ್ಟರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂವಹನದ ಕೊರತೆಯಿಂದಾಗಿ ಗಂಭೀರ ಪ್ರಕರಣದ ದೂರು ದಾಖಲಾತಿ ಪ್ರಕ್ರಿಯೆ ದೀರ್ಘಕಾಲ ನೆನೆಗುದಿಗೆ ಬಿತ್ತು. ಇವೆಲ್ಲದರಿಂದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೇ ಸಾಕಷ್ಟು ಅಸಮಾಧಾನವಾಗಿತ್ತು. ಈ ಕುರಿತು ʻ ದ ಫೆಡರಲ್-ಕರ್ನಾಟಕ ಈ ಬಗ್ಗೆ ವಿವರವಾದ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನವನ್ನು ಸೆಳೆದಿತ್ತು. ಈ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಇರುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ Pre Conception Pre Natal Diagnostic techniques Act ೧೯೯೪ ಕಾರ್ಯಾಗಾರದಲ್ಲಿ ಹಾಜರಿದ್ದ ರೇಡಿಯಾಲಜಿಸ್ಟ್, ಸೋನಾಲಜಿಸ್ಟ್ ಮತ್ತು ಸ್ತ್ರೀ ರೋಗ ತಜ್ಞರು ಅಲ್ಟ್ರಾಸೌಂಡ್ ಕೊಠಡಿಯೊಳಗೆ ಗರ್ಭಿಣಿಯರ ಜೊತೆಗೆ ಬರುವ ಸಂಬಂಧಿಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. “ಗರ್ಭಿಣಿಯ ಸಂಬಂಧಿಕರು ಅಲ್ಟ್ರಾಸೌಂಡ್ ಕಾರ್ಯವಿಧಾನ ವಿಡಿಯೋ ಛಾಯಾಚಿತ್ರಗಳನ್ನು ಕಾನೂನು ವಿರೋಧವಾಗಿ ತೆಗೆದುಕೊಳ್ಳುತ್ತಿದ್ದರು.
ಈ ಕಾರ್ಯ ಕೆಲವು ವೃತ್ತಿಯಲ್ಲಿ ನೈತಿಕತೆ ಮರೆತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ನಡೆಯುತ್ತಿತ್ತು. ಈ ರೀತಿ ತೆಗೆದ ವಿಡಿಯೋ, ಫೋಟೋಗಳನ್ನು ಬೇರೆ ಬೇರೆ ಆಸ್ಪತ್ರೆಗಳ ಸ್ತ್ರೀರೋಗ ತಜ್ಞರಿಗೆ, ರೇಡಿಯೋಲಜಿಸ್ಟ್, ಸೊನಾಲಜಿಸ್ಟ್ ಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಈ ವಿವರಗಳನ್ನು ನಾವು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದೆವು ಮತ್ತು ಈ ಕುರಿತು ಕಠಿಣ ಕ್ರಮಗಳನ್ನೂ ಕೈಗೊಳ್ಳಲು ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದೆವು” ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರು ʼದ ಫೆಡರಲ್-ಕರ್ನಾಟಕಕ್ಕೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅಲ್ಟ್ರಾಸೌಂಡ್ ಕೊಠಡಿಯಲ್ಲಿ ಹೆಚ್ಚುವರಿ ಮಾನಿಟರ್ ಹಾಕಿ ಸ್ಕ್ಯಾನಿಂಗ್ ವಿಧಾನವನ್ನು ಗರ್ಭಿಣಿ ಮತ್ತು ಅವರ ಸಂಬಂಧಿಕರಿಗೆ ತೋರಿಸುತ್ತಿದ್ದರು. ಕೆಲವರು ಅವುಗಳನ್ನು ರೆಕಾರ್ಡಿಂಗ್ ಮಾಡಿಕೊಂಡು ವಿದೇಶಗಳಿಗೆ ಕಳುಹಿಸಿ ಭ್ರೂಣದ ಲಿಂಗ ಯಾವುದೆಂದು ತಿಳಿದುಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟಲು ಅಲ್ಟ್ರಾಸೌಂಡ್ ಕೊಠಡಿಯೊಳಗೆ ಗರ್ಭಿಣಿಯನ್ನು ಹೊರತುಪಡಿಸಿ ಇತರ ಸಂಬಂಧಿಕರ ಪ್ರವೇಶ ನಿರ್ಬಂಧಿಸಲು ಹಾಗೂ ಹೆಚ್ಚುವರಿ ಮಾನಿಟರ್ ಇರುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಚ ರಾಜ್ಯ ಉಪನಿರ್ದೇಶಕ ಡಾ. ವಿವೇಕ್ ದೊರೆ ತಿಳಿಸಿದ್ದಾರೆ.
ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ (PC & PNDT) ಕಾಯ್ದೆಯಡಿ ನೊಂದಾಯಿತ ಎಲ್ಲ ಆಸ್ಪತ್ರೆ, ಕ್ಲಿನಿಕ್‌ಗಳ ಅಲ್ಟ್ರಾಸೌಂಡ್ ಕೊಠಡಿಯೊಳಗೆ ಹೆಚ್ಚುವರಿ ಮಾನಿಟರ್ ಗಳನ್ನು ಅಳವಡಿಸುವಂತಿಲ್ಲ. ಅಲ್ಟ್ರಾಸೌಂಡ್ ಕೊಠಡಿ ಹೊರಭಾಗದಲ್ಲಿ ಗರ್ಭಿಣಿ ಹೊರತುಪಡಿಸಿ ಇತರೆ ಸಂಬಂಧಿಕರು ಪ್ರವೇಶಿಸಲು ಅನುಮತಿ ಇಲ್ಲ ಎಂಬ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಒಂದು ವೇಳೆ ಹೆಚ್ಚುವರಿ ಮಾನಿಟರ್ ಅಳವಡಿಸಿದ್ದು ಗಮನಕ್ಕೆ ಬಂದರೆ, ಸಂಬಂಧಪಟ್ಟವರಿಗೆ ದೂರು ನೀಡಬೇಕು. ಅಂಥ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ವಿವೇಕ್ ದೊರೆ ತಿಳಿಸಿದ್ದಾರೆ.