Artificial Intelligence | ಎಐನಲ್ಲಿ ಕನ್ನಡ:  ಟೆಸ್ಲಾದಲ್ಲಿ ಕನ್ನಡಿಗ ಸುಜಯ್ ಕುಮಾರ್ ಸಂಶೋಧನೆ !
x
ಎಐನಲ್ಲಿ ಕನ್ನಡ

Artificial Intelligence | ಎಐನಲ್ಲಿ ಕನ್ನಡ: ಟೆಸ್ಲಾದಲ್ಲಿ ಕನ್ನಡಿಗ ಸುಜಯ್ ಕುಮಾರ್ ಸಂಶೋಧನೆ !

ಕನ್ನಡಿಗರು ಕನ್ನಡದಲ್ಲೇ ಎಐ ಬಳಸುವುದಕ್ಕೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಚಾಟ್‌ ಜಿಪಿಟಿಯಲ್ಲೂ ಕನ್ನಡದ ಬಳಕೆ ಸುಧಾರಿಸಬೇಕಿದೆ. ಈಗ ಕನ್ನಡಿಗರು ಸಂಭ್ರಮಿಸುವ ಸಂಶೋಧನೆ ನಡೆದಿದೆ...


ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ, ಕನ್ನಡಿಗರು ಕನ್ನಡದಲ್ಲೇ ಕೃತಕ ಬುದ್ಧಿಮತ್ತೆ ಬಳಸುವುದಕ್ಕೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಚಾಟ್‌ ಜಿಪಿಟಿಯಲ್ಲೂ ಕನ್ನಡದ ಬಳಕೆ ಸುಧಾರಿಸಬೇಕಿದೆ. ಚಾಟ್‌ ಜಿಪಿಟಿಯಲ್ಲಿ ಒಂದು ವಿಷಯದ ಬಗ್ಗೆ ಹುಡುಕಿದರೆ ಇಂಗ್ಲಿಷ್‌ನಲ್ಲಿ ವಿಸ್ತಾರವಾದ ಮಾಹಿತಿ ಸಿಗುತ್ತದೆ. ಆದರೆ, ಕನ್ನಡದಲ್ಲಿ ಈ ಎಐ ತಂತ್ರಜ್ಞಾನ ಬಳಸಬೇಕಾದರೆ ತನ್ನದೇ ಮಿತಿಗಳಿವೆ. ಇದನ್ನು ಸರಿಪಡಿಸಲು ಕನ್ನಡಿಗರೊಬ್ಬರು ಮುಂದಾಗಿದ್ದಾರೆ.

ಈಗಾಗಲೇ ಎಐ ತಂತ್ರಜ್ಞಾನ ಕಾರ್ಯ ನಿರ್ವಹಿಸುವ ಗೂಗಲ್ ಹೋಮ್, ಅಲೆಕ್ಸಾದಂತಹ ವರ್ಚುವಲ್ ಅಸಿಸ್ಟೆಂಟ್‌ಗಳು ಹಾಗೂ ಸ್ವಯಂಚಾಲಿತ ಐಷಾರಾಮಿ ಕಾರುಗಳು ಜನಪ್ರಿಯವಾಗಿವೆ. ಎಐ ಬಹಳ ಸುಲಭವಾಗಿ ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗುವ ದಿನಗಳು ದೂರವಿಲ್ಲ.ಆದರೆ, ಈ ತಂತ್ರಜ್ಞಾನ ಕ್ರಾಂತಿಯಲ್ಲಿ ಕನ್ನಡದ ಪಾತ್ರವೇನು ಎಂಬ ಪ್ರಶ್ನೆ ಬಂದಾಗ, ನಾವು ಸಾಗಬೇಕಾದ ಹಾದಿ ಬಹುದೂರವಿದೆ ಎನ್ನುತ್ತಾರೆ ಕನ್ನಡಿಗ, ಟೆಸ್ಲಾ ಸಂಸ್ಥೆಯ ಹಿರಿಯ ಎಂಜಿನಿಯರ್ ಸುಜಯ್ ಕುಮಾರ್ ಎಸ್‌.

ಸುಜಯ್ ಕುಮಾರ್ ಅವರು ಕರ್ನಾಟಕದ ಬೆಂಗಳೂರಿನವರು. ಅಮೆರಿಕಾದ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯ (Carnegie Mellon University)ದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳನ್ನು ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿ (ChatGPT) ಮಾಡೆಲ್‌ನಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಮುಖ್ಯವಾಗಿ ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡವನ್ನು ಅಳವಡಿಸುವ ನಿಟ್ಟಿನಲ್ಲಿ ಇವರ ಸಂಶೋಧನೆ ನಡೆದಿದ್ದು, ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡ ಅಳವಡಿಕೆಗೆ ಮಾಡಿರುವ ಸಂಶೋಧನೆಯು ಟೆಸ್ಲಾ ಸಂಸ್ಥೆಯ (Tesla Optimus robot) “ಟೆಸ್ಲಾ ಆಪ್ಟಿಮಸ್ ರೋಬೋ” ಗೂ ಅನ್ವಯವಾಗಲಿದೆ. ಈ ಸಂಶೋಧನೆಗೆ “ಕಡಿಮೆ ದತ್ತಾಂಶಕ್ಕಾಗಿ ಸಮರ್ಥ ಎಐ”(Efficient AI for low resource data) ಎಂದು ಹೆಸರಿಡಲಾಗಿದೆ. ಈ ಸಂಶೋಧನೆ ಈಗಾಗಲೇ ಪ್ರಗತಿಯಲ್ಲಿದ್ದು, ಮುಂದಿನ ಎರಡು ವರ್ಷದಲ್ಲಿ ಈ ಪ್ರಾಜೆಕ್ಟ್ ಮುಗಿಯುವ ಸಾಧ್ಯತೆ ಇದೆ” ಎಂದು ಸುಜಯ್ ತಿಳಿಸಿದ್ದಾರೆ.

ದ ಫೆರಡಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, “ಕಾಲೇಜು ದಿನಗಳಿಂದಲೂ ಕನ್ನಡದಲ್ಲಿ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು ಎನ್ನುವ ಆಸಕ್ತಿ ಇತ್ತು. ಈಗ ಅದು ಕೈಗೂಡಿದೆ. ಇನ್ನು ಕೃತಕ ಬುದ್ಧಿಮತ್ತೆಯಲ್ಲಿ ಇಂಗ್ಲಿಷ್ ಸೇರಿದಂತೆ ಕೆಲವು ನಿರ್ದಿಷ್ಟ ಭಾಷೆಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಇಂಗ್ಲಿಷ್‌ನಲ್ಲಿ ಹೆಚ್ಚು ದತ್ತಾಂಶ ಇರುವುದರಿಂದ ಕೃತಕ ಬುದ್ಧಿಮತ್ತೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಸರಳವಾಗಿ ಅಳವಡಿಸಿಕೊಳ್ಳಬಹುದು. ಆದರೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕನ್ನಡದ ದತ್ತಾಂಶ ವಿರಳವಾಗಿದ್ದು, ಮಾಡೆಲ್ ಟ್ರೈನ್ ಮಾಡುವುದು ಸವಾಲಿನ ಕೆಲಸ. ಒಂದು ಮಾದರಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೆ ಹೆಚ್ಚೆಚ್ಚು ಡೇಟಾ ಅವಶ್ಯಕತೆ ಇರುತ್ತದೆ. ಇಂಗ್ಲಿಷ್‌ನಲ್ಲಿ ಲಭ್ಯವಿರುವಷ್ಟು ಡೇಟಾ ಕನ್ನಡದಲ್ಲಿ ಲಭ್ಯವಿಲ್ಲ. ಆದರೆ, ಬೃಹತ್ ಪ್ರಮಾಣದ ಡೇಟಾವನ್ನು ಕನ್ನಡದಲ್ಲಿ ಸೃಷ್ಟಿಸಲು ಸಹ ಸಾಧ್ಯವಿಲ್ಲ. ಹೀಗಾಗಿ, ನಾವು ಮಾಡೆಲ್‌ಗಳನ್ನು (ಕೃತಕ ಬುದ್ಧಿಮತ್ತೆ ಮಾದರಿ) ಬದಲಾಯಿಸಬೇಕಾಗುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಡೆಲ್‌ಗಳನ್ನು ಬದಲಾಯಿಸಿ, ಕನ್ನಡದಲ್ಲಿ ಇರುವ ಡೇಟಾಗೆ ಹೊಂದಾಣಿಕೆಯಾಗುವ ಪ್ರಮಾಣದಲ್ಲಿ ಮಾಡೆಲ್‌ಗಳನ್ನು ಸೃಷ್ಟಿಸಬೇಕಾಗುತ್ತದೆ. ಈ ರೀತಿ ಮಾಡೆಲ್ ಸೃಷ್ಟಿ ಮಾಡಿದ ನಂತರ ಅದಕ್ಕೆ ಕನ್ನಡ ಭಾಷೆಯ ಪದಗಳನ್ನು ಜೋಡಿಸಬೇಕಾಗುತ್ತದೆ” ಎಂದು ವಿವರಿಸಿದರು.


ಕಾರ್ನೆಗೀ ಮೆಲನ್ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ ಮಾಡುವಾಗ ಎಐ ತಂತ್ರಜ್ಞಾನದಲ್ಲಿ ಕನ್ನಡದ ಮೇಲೆ ಹೆಚ್ಚಿನ ಗಮನಹರಿಸುವ ಅವಶ್ಯಕತೆ ಇದೆ ಎಂದು ಮನವರಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶ ಇದೆ. ಕನ್ನಡ ಭಾಷೆ ತನ್ನದೇ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಚಾಪನ್ನು ಮೂಡಿಸಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ತಂತ್ರಜ್ಞಾನದಲ್ಲಿಯೂ ಕನ್ನಡ ಭಾಷೆ ಮುಂಚೂಣಿಯಲ್ಲಿರಬೇಕು. ಅಂತರರಾಷ್ಟ್ರೀಯ ಎಐ (AI) ಕ್ರಾಂತಿಯಲ್ಲಿ ಕನ್ನಡ ಹಿಂದುಳಿಯದಂತೆ ಖಚಿತಪಡಿಸುವುದು ನಮ್ಮ ಕರ್ತವ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಎಐನಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ಹೂಡಿಕೆದಾರರ ಅವಶ್ಯಕತೆಯ ಜೊತೆಗೆ ಕನ್ನಡಿಗರೂ ಮತ್ತಷ್ಟು ಆಸಕ್ತಿ ತೋರಿಸಬೇಕು ಎನ್ನುತ್ತಾರೆ ಸುಜಯ್.

ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡ ಬಳಕೆ

ಸುಜಯ್ ಅವರು ಚಾಟ್‌ಜಿಪಿಟಿ, ಟೆಸ್ಲಾದ ರೋಬೋ ಹಾಗೂ ಧ್ವನಿ ಗುರುತಿಸುವ (Speech recognition model) ಮಾದರಿ ಸೇರಿದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಆವಿಷ್ಕಾರಗಳಲ್ಲಿ ಕನ್ನಡ ಬಳಕೆಗೆ ಇರುವ ಸವಾಲು ಹಾಗೂ ಸಾಧ್ಯತೆಗಳ ಮೇಲೆ ಸಂಶೋಧನೆ ಮಾಡುತ್ತಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕನ್ನಡ ಭಾಷೆಯನ್ನು ಸಹ ಒಂದು ಆಯ್ಕೆಯಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ದಕ್ಷಿಣ ಭಾರತದ ಭಾಷೆಗಳಲ್ಲಿ ಆಟೋಮ್ಯಾಟಿಕ್ ಸ್ಪೀಚ್ ರೆಕಗ್ನಿಷನ್ ತಂತ್ರಜ್ಞಾನ (Automatic speech recognition technology) ವನ್ನು ರಚಿಸಿದ್ದಾರೆ. ಕನ್ನಡಿಗ ಸುಜಯ್ ಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿ, ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯ (CMU), ಸುಜಯ್ ಅವರಿಗೆ ಭಾಷಾ ತಂತ್ರಜ್ಞಾನಗಳ ಸಂಸ್ಥೆಗೆ (LTI) ಮಾಸ್ಟರ್ಸ್ ಮಾಡಲು ಅಂಗೀಕರಿಸಿತ್ತು. ಕಾರ್ನೆಗೀ ಮೆಲನ್‌ನಲ್ಲಿ ಸುಜಯ್ ಅವರು ಕನ್ನಡದಲ್ಲಿ ಸ್ಪೀಚ್ ರೆಕಾಗ್ನಿಷನ್ ಮತ್ತು ಆಟೋಮ್ಯಾಟಿಕ್ ನ್ಯೂರಲ್ ಮಷೀನ್ ಟ್ರಾನ್ಸ್‌ಲೇಷನ್ (Automatic Neural Machine Translation) ಅಭಿವೃದ್ಧಿಪಡಿಸಿದ್ದಾರೆ.


ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡಕ್ಕಿರುವ ಸವಾಲು

ಅಂತರರಾಷ್ಟ್ರೀಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಂಗದಲ್ಲಿ ಭಾರತೀಯ ಭಾಷೆಗಳಾದ ಹಿಂದಿ, ತೆಲುಗು ಅಥವಾ ತಮಿಳು ಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎನ್ನುತ್ತಾರೆ ಸುಜಯ್. ಕನ್ನಡಿಗರು ನಮ್ಮ ಭಾಷೆಯ ಮೇಲೆ ರಿಸರ್ಚ್ ಮಾಡುವುದು ಕಡಿಮೆಯಾಗಿದ್ದು, ಈ ಕ್ಷೇತ್ರಕ್ಕೆ ಆರ್ಥಿಕ ನೆರವು ನೀಡುವವರು ವಿರಳ. ಹೀಗಾಗಿ, ಕನ್ನಡಿಗರು ಕನ್ನಡದಲ್ಲಿ ಸಂಶೋಧನೆ ನಡೆಸಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ರಚಿಸುವುದಕ್ಕೆ ದುಬಾರಿ ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ಸ್ (GPU) ಗಳ ಅವಶ್ಯಕತೆ ಇದೆ. ಹೀಗಾಗಿ ಯಾವುದೇ ಮಾಡೆಲ್ ರಚಿಸಿ ಟ್ರೈನ್ ಮಾಡುವುದಕ್ಕೆ ಲಕ್ಷಾಂತರ ಡಾಲರ್ ಖರ್ಚಾಗುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಡೆಲ್ಸ್ ಗಳು ವ್ಯಾಪಕವಾಗಿ ಬಳಸುವ ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಷ್, ಜರ್ಮನ್, ಮ್ಯಾಂಡರಿನ್ ಹಾಗೂ ಹಿಂದಿ ಭಾಷೆಗಳಿಗೆ ಆದ್ಯತೆ ಸಿಗುತ್ತಿದೆ. ಕನ್ನಡ ಮತ್ತು ಕಡಿಮೆ (ಡೇಟಾ) ಸಂಪನ್ಮೂಲಗಳಿರುವ ಭಾಷೆಗಳು ಹಿಂದುಳಿಯುತ್ತವೆ. ಕನ್ನಡ ಬಳಕೆಗೆ ಅನುದಾನದ ಸಮಸ್ಯೆ ಇರುವುದರಿಂದ ಕಡಿಮೆ ವೆಚ್ಚದಲ್ಲಿ ಮಾಡೆಲ್ಸ್ ಟ್ರೈನ್ (ಮಾದರಿ ಅಳವಡಿಕೆ) ಮಾಡಬೇಕಾಗುತ್ತದೆ ಎಂದರು.

ವಿಶ್ವದಲ್ಲಿ ಬಹಳಷ್ಟು ಕಂಪನಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಡೆಲ್‌ಗಳನ್ನು ಆಧಾರವಾಗಿಟ್ಟುಕೊಂಡು ಪರ್ಸನಲ್ ಅಸಿಸ್ಟೆಂಟ್ ರೋಬೋಗಳು ಹಾಗೂ ಸ್ವಯಂ ಚಾಲಿತ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಲ್ಲಿ ಪ್ರಗತಿ ಸಾಧಿಸಿರುವ ಟೆಸ್ಲಾ ಕಂಪನಿಯಲ್ಲಿ ಸಂಶೋಧನಾ ಕೌಶಲ್ಯಗಳನ್ನು ಮಾಡೆಲ್ ಟ್ರೈನ್ ಮಾಡುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಉಪಯೋಗಿಸುತ್ತಿದ್ದೇನೆ ಎಂದು ತಿಳಿಸಿದರು.

ಶ್ರೀಮಂತರಿಗಷ್ಟೇ ಸೀಮಿತವಾಗಬಾರದು

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗಳನ್ನು ಕನ್ನಡ ಸೇರಿದಂತೆ ಡೇಟಾ (ದತ್ತಾಂಶ) ಕಡಿಮೆ ಇರುವ ಭಾಷೆಯಲ್ಲೂ ಅಳವಡಿಸಿಕೊಳ್ಳಬೇಕಿದೆ. ಇದರೊಂದಿಗೆ ಕಡಿಮೆ ವೆಚ್ಚದಲ್ಲಿ ಮಾಡೆಲ್ಸ್ ಟ್ರೈನ್ ಮಾಡುವುದು ಸಹ ಅತ್ಯಗತ್ಯ. ಇಲ್ಲದಿದ್ದರೆ ಈ ತಂತ್ರಜ್ಞಾನಗಳು ಕೇವಲ ಶ್ರೀಮಂತ ದೇಶಗಳಿಗೆ ಮಾತ್ರ ಸೀಮಿತವಾಗುತ್ತವೆ. ನಮ್ಮ ಕನ್ನಡ ಹಾಗೂ ಇತರೆ ಭಾಷೆಗಳು ಹಿಂದುಳಿಯುತ್ತವೆ ಎನ್ನುವುದು ಸುಜಯ್ ಮಾತು.

ಎಐನಲ್ಲಿ ಕನ್ನಡ: ಕನ್ನಡಿಗರಿಗೇನು ಲಾಭ ?

“ಈಗ ಕಂಪ್ಯೂಟರ್‌ಗಳಲ್ಲಿ ಟೈಪ್ ಮಾಡುವ ಮೂಲಕ ಸಂವಹನ (Interact) ನಡೆಸುತ್ತಿದ್ದೇವೆ. ಎಐನಲ್ಲಿ ಕನ್ನಡ ಅಭಿವೃದ್ಧಿ ಮಾಡುವುದರಿಂದ ಧ್ವನಿಯ ಮೂಲಕವೂ ಸಂವಹನ ಸಾಧ್ಯವಾಗಲಿದೆ. ಅಲ್ಲದೇ ಅಲೆಕ್ಸಾ ಮಾದರಿಯ ಸಾಧನಗಳೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವ ರೀತಿಯಲ್ಲಿ ಕನ್ನಡಿಗರು ಕನ್ನಡದಲ್ಲೇ ಮಾತನಾಡಲು ಸಾಧ್ಯವಾಗಲಿದೆ. ಹೊಸ ಆವಿಷ್ಕಾರಗಳು ನಡೆದು ಕನ್ನಡ ಹಾಗೂ ಕನ್ನಡಿಗರಿಗೆ ಹೆಚ್ಚು ಅವಕಾಶ ಸಿಗುತ್ತದೆ” ಎಂದು ಸುಜಯ್ ಅವರು ಮಾಹಿತಿ ನೀಡಿದರು.

Read More
Next Story