ʼಗರ್ವಭಂಗʼದ ರಾಜಕಾರಣಕ್ಕೆ ಮೋದಿ ದಾಳ ಉರುಳಿಸಿದ ಜೆಡಿಎಸ್
x

ʼಗರ್ವಭಂಗʼದ ರಾಜಕಾರಣಕ್ಕೆ ಮೋದಿ ದಾಳ ಉರುಳಿಸಿದ ಜೆಡಿಎಸ್

ಮೋದಿ ಅವರ ಮೈಸೂರು ಕಾರ್ಯಕ್ರಮದ ಬಗ್ಗೆ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಮೋದಿ ಭೇಟಿಯ ನಂತರ ಹಳೇ ಮೈಸೂರು ಪ್ರಾಂತದ ಮತಗಳಿಕೆಯ ಲೆಕ್ಕಾಚಾರದಲ್ಲಿ ಬದಲಾವಣೆಯಾಗುವುದೇ ಎಂಬುದಕ್ಕೆ ಇನ್ನೂ ಹದಿನೈದು ದಿನಗಳು ಕಾಯಬೇಕಿದೆ.


ತೊಂಭತ್ತರ ಹರೆಯದಲ್ಲಿಯೂ ದೇವೇಗೌಡರು, ಸಿದ್ದರಾಮಯ್ಯನವರ ನೆಲದಲ್ಲೇ ಅವರನ್ನು ಸೋಲಿಸಿ, ಅವರ ಗರ್ವಭಂಗ ಮಾಡುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಬರಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ದೌಡಾಯಿಸುತ್ತಿದ್ದಾರೆ. ಈ ಮೂಲಕ, ಮಂಡ್ಯ, ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಗೆದ್ದು, ಸಿದ್ದರಾಮಯ್ಯನವರ ಗರ್ವಭಂಗ ಮಾಡಿ ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವ ಛಲ ದೇವೇಗೌಡರದು.

ರಾಜಕೀಯ ಮತ್ತು ತಮ್ಮತಮ್ಮ ಅಸ್ತಿತ್ವದ ಉಳಿವಿಗಾಗಿ ಮೈತ್ರಿ ಮಾಡಿಕೊಂಡಿರುವ ಜಾತ್ಯಾತೀತ ಜನತಾ ದಳ ಮತ್ತು ಭಾರತೀಯ ಜನತಾ ಪಕ್ಷಗಳು, ಈ ಹೊಂದಾಣಿಕೆಯ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವುದು ಸ್ವಷ್ಟವಾಗಿ ಕಾಣಿಸುತ್ತಿದೆ. ಉಭಯ ಪಕ್ಷಗಳ ನಾಯಕರ ಮತ್ತು ಕಾರ್ಯಕರ್ತರ ನಡುವಿನ ಹೊಂದಾಣಿಕೆಯ ಕಾರಣದಿಂದ. ಹೊಂದಾಣಿಕೆಯ ಉದ್ದೇಶವೇ ವಿಫಲವಾಗುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ, ಉಭಯ ಪಕ್ಷಗಳು ತಮ್ಮ ಉಳಿವಿಗಾಗಿ ಬಿಜೆಪಿಯ ಸರ್ವೋಚ್ಛ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಮೊರೆ ಹೋಗಲೇ ಬೇಕಾದ ರಾಜಕೀಯ ಅವಶ್ಯಕತೆ ಎದುರಾಗಿದೆ.

ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಭೇಟಿಯನ್ನು ಸದುಪಯಯೋಗಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಸಜ್ಜಾಗಿದೆ. ಈ ಮೊದಲು ಮೋದಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೇ ಭೇಟಿ ನೀಡಿ, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಇಪ್ಪತ್ತೊಂದು ಕಿ.ಮೀ. ರಸ್ತೆ ಪ್ರದರ್ಶನ ಅರ್ಥಾತ್ ರೋಡ್ ಷೋ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಬದಲಾದ ಸಂದರ್ಭದಲ್ಲಿ, ಮೈತ್ರಿ ಪಕ್ಷಗಳ ಕಾರ್ಯಕರ್ತರ ಮತ್ತು ನಾಯಕರ ನಡುವೆ ʼಸ್ನೇಹʼ ದ ಬೆಸುಗೆ ಹಾಕಲು ಮೋದಿ ಅವರ ಕಾರ್ಯಕ್ರಮವನ್ನು ಹಳೇ ಮೈಸೂರು ಪ್ರಾಂತದ ರಾಜಧಾನಿ-ಮೈಸೂರಿಗೆ ವರ್ಗಾಯಿಸಲಾಗಿದೆ.

ಬಿಜೆಪಿಯ ರಾಜ್ಯ ಲೋಕಸಭಾ ಚುನಾವಣಾ ನಿರ್ವಹಣೆಯ ನಿರ್ವಾಹಕ ಸುನಿಲ್ ಕುಮಾರ್ ಅವರ ಪ್ರಕಾರ; ಮೈಸೂರಿನ ಮಹಾರಾಜಾ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ಚುನಾವಣಾ ಸಮಾವೇಶವನ್ನು ಸಂಘಟಿಸಲಾಗಿದ್ದು, ಈ ಸಮಾವೇಶದಲ್ಲಿ, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಕ್ಷೇತ್ರಗಳ ನಾಯಕರು, ಕಾರ್ಯಕರ್ತರು, ಹಾಗೆಯೇ ಜೆಡಿಎಸ್ ಪಕ್ಷದ ನಾಯಕರು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. “ಈ ಮೂಲಕ ಬಿಜೆಪಿ ಮತ್ತು ಮೋದಿ ನಾಲ್ಕು ಕ್ಷೇತ್ರಗಳ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ” ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಮೋದಿ ಅವರ ಮೂರನೇ ರಾಜ್ಯ ಭೇಟಿ ಇದು. ಇದಕ್ಕೆ ಮುನ್ನ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ನಂತರ ಯಡಿಯೂರಪ್ಪ ಅವರ ಪುತ್ರ ಬಿ. ವೈ. ರಾಘವೇಂದ್ರ ಅವರ ಗೆಲುವಿಗಾಗಿ ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ್ದರು. ಆದರೆ ಅವರಿಗೆ ಮುಜುಗರವಾಗುವಂತೆ ಅಲ್ಲಿನ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ, ಈ ಸಭೆಯಲ್ಲಿ ಭಾಗವಹಿಸದೆ ಇದ್ದದ್ದು ಪಕ್ಷದ ಇರುಸು-ಮುರಿಸಿಗೆ ಕಾರಣವಾಗಿತ್ತು.

ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಹದಿನೈದು ದಿನಗಳು ಬಾಕಿ ಉಳಿದಿದ್ದು, ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರ ಬಂಡಾಯದ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಈ ಬಂಡಾಯ ಉಳಿದ ಇಪ್ಪತ್ತೆಂಟು ಸ್ಥಾನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಬಿಜೆಪಿ ನಾಯಕರೇನೂ ಅಲ್ಲಗೆಳೆಯುತ್ತಿಲ್ಲ. ಕಳೆದ ಬಾರಿ ಇಪ್ಪತ್ತಾರು ಸ್ಥಾನಗಳನ್ನು ಗೆದ್ದು, ಮೋದಿ ಅವರನ್ನು ಪ್ರಧಾನಿಯಾಗಿಸಲು ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಈ ಬಾರಿ ಇಪ್ಪತ್ತೆಂಟು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿರುವಾಗಲೇ ಬಂಡಾಯದ ಬಿಸಿ ಕೇವಲ ಕರ್ನಾಟಕದ ಬಿಜೆಪಿಗಷ್ಟೇ ಅಲ್ಲ. ಬಿಜೆಪಿ ಹೈಕಮಾಂಡ್ ಗೆ ಕೂಡ ತಾಗಿದ್ದು, ಈಗ ಸುಟ್ಟ ಗಾಯಕ್ಕೆ ಮುಲಾಮು ಹಚ್ಚಲು ಮೋದೀಜಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಪ್ರಚಾರದ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳುವುದು ಕರ್ನಾಟಕದ ಬಿಜೆಪಿಗೆ ಅದರಲ್ಲೂ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸವಾಲಾಗಿದೆ.

ತನ್ನ ಏಕೈಕ ದಕ್ಷಿಣ ಭದ್ರಕೋಟೆಯಾದ ಕರ್ನಾಟಕದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ತನ್ನ ಕನಸನ್ನು ಇಂತಹ ಬಂಡಾಯಗಳು ಹಳಿತಪ್ಪಿಸುತ್ತವೆ ಎಂದು ತಿಳಿದ ಬಿಜೆಪಿ ನಿಜಕ್ಕೂ ಆತಂಕದಲ್ಲಿದೆ. ಕರ್ನಾಟಕದ ಕನಿಷ್ಠ ಏಳು ಕ್ಷೇತ್ರಗಳಲ್ಲಿ ಪಕ್ಷದಲ್ಲಿ ವ್ಯಾಪಕ ಅತೃಪ್ತಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಬಂಡಾಯವನ್ನು ತಾನಾಗಿಯೇ ನಿಭಾಯಿಸುವುದು ರಾಜ್ಯ ನಾಯಕತ್ವಕ್ಕೆ ಕಷ್ಟವಾಗುತ್ತಿದೆ. ಮೋದಿ ಅವರ ಭೇಟಿ ಈ ಬಂಡಾಯವನ್ನು ತಣಿಸುವುದು ಎಂಬ ಆಶಾ ಭಾವನೆಯಲ್ಲಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ.

ಆದರೆ ಮೋದೀಜಿ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರದಿಂದ ಮೈಸೂರಿಗೆ ವರ್ಗಾಯಿಸಲು ಕಾರಣವಾದದ್ದು; “ತಮ್ಮ ಶಿಷ್ಯ ಸಿದ್ದರಾಮಯ್ಯನವರ ಗರ್ವಭಂಗ ಮಾಡುವೆನೆಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ನ ಸರ್ವೋಚ್ಛ ನಾಯಕ ಎಚ್.ಡಿ. ದೇವೇಗೌಡರು ಘೋಷಿಸಿದ ಶಪಥ” ಎನ್ನುವುದು ಕಾಂಗ್ರೆಸ್ ನಾಯಕರ ವಾದ.

ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ಸಿದ್ದರಾಮಯ್ಯ, ತಮ್ಮ ಗುರು ದೇವೇಗೌಡರ ಜಾತ್ಯಾತೀತ ನಿಲುವನ್ನು ಪ್ರಶ್ನಿಸಿದ್ದು, ಅಲ್ಪಸಂಖ್ಯಾತರನ್ನು ಕುರಿತಾದ ಅವರ ʼಹುಸಿʼತನವನ್ನು ಕೆಣಕ್ಕಿದ್ದು ದೇವೇಗೌಡರ ಸಾಕ್ಷಿ ಪ್ರಜ್ಞೆಯನ್ನು ಅಲುಗಾಡಿಸಿದಂತೆ ಕಾಣುತ್ತದೆ. ತೊಂಭತ್ತರ ಹರೆಯದಲ್ಲಿಯೂ ದೇವೇಗೌಡರು, ಸಿದ್ದರಾಮಯ್ಯನವರ ನೆಲದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿ ಸಿದ್ದರಾಮಯ್ಯನವರ ಗರ್ವಭಂಗ ಮಾಡುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ. “ಆದರೆ ಈ ಪ್ರತಿಜ್ಞೆ ಸಾಕಾರವಾಗಲು ಅವರಿಂದಾಗಲೀ, ಅಥವಾ ರಾಜ್ಯ ಬಿಜೆಪಿ ನಾಯಕರಿಂದಾಗಲೀ ಸಾಧ್ಯವಾಗುವುದಿಲ್ಲ" ಎಂಬುದನ್ನು ಮನಗಂಡಿರುವ ಗೌಡರು, ನರೇಂದ್ರ ಮೋದಿ ಅವರನ್ನು ಮೊರೆ ಹೊಕ್ಕಿದ್ದಾರೆ.

ಮೋದಿ ಮೈಸೂರಿಗೆ ಬಂದರೆ, ಸಿದ್ದರಾಮಯ್ಯನರ ಕರ್ಮಭೂಮಿಯಾಗಿರುವ ಮೈಸೂರು, ಮಂಡ್ಯ, ಚಾಮರಾಜನಗರಗಳಲ್ಲಿ ಅವರನು ಮಣಿಸುವುದೇ ಅಲ್ಲದೆ, ಹಳೇ ಮೈಸೂರು ಪ್ರಾಂತ್ಯದ ಮೇಲೆ ಹಿಡಿತ ಸಾಧಿಸಬಹುದು ಎಂಬ ಲೆಕ್ಕಾಚಾರ ದೇವೇಗೌಡರದು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಅಷ್ಟೇ ಅಲ್ಲ, ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ದಿನದಿಂದ ದಿನಕ್ಕೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಕಾಂಗ್ರೆಸ್‌ಗೆ ಸೋಲಿನ ಅನುಭವ ಮಾಡಿಸುವುದೂ ಕೂಡ ದೇವೇಗೌಡರು ಲೆಕ್ಕಚಾರ. ಏಕೆಂದರೆ, ಅಕಸ್ಮಿಕವಾಗಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ ಅವರು ಸೋಲು ಅನುಭವಿಸಿದಲ್ಲಿ, ಅದು ಜೆಡಿಎಸ್ ಪಕ್ಷದ ಅಂತ್ಯದ ಸೂಚನೆ ಎಂಬುದು ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಅವರಿಗೂ ಮನವರಿಕೆಯಾಗಿದೆ. “ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಹಿರಿಯ ನಾಯಕ ಅಮಿತ್ ಶಾ ಬಂದು ಹೋದರೂ ಯಾವುದೇ ಪರಿಣಾಮವಾಗದ ಕಾರಣ ಕುಮಾರಸ್ವಾಮಿ-ದೇವೇಗೌಡರು ಮೋದಿಯ ಮೊರೆ ಹೋಗಿದ್ದಾರೆ,” ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಹಾಗಾಗೇ ಕೊನೆಯ ಪ್ರಯತ್ನವಾಗಿ ಮೋದಿ ಕಾರ್ಯಕ್ರಮದ ನಕ್ಷೆಯನ್ನೇ ಬದಲಿಸಿ, ಅವರನ್ನು ಮೈಸೂರಿಗೆ ಕರೆತರಲಾಗುತ್ತಿದೆ. ಅಂದಿನ ಸಭೆಯಲ್ಲಿ, ಮೋದಿ ಪಕ್ಕದಲ್ಲಿ ಆಸೀನರಾಗುವ ಮೂಲಕ ದೇವೇಗೌಡರು ಕಾಂಗ್ರೆಸ್ ಗಷ್ಟೇ ಅಲ್ಲದೆ ಬಿಜೆಪಿಯ ಹಿರಿಯ ನಾಯಕರು ಮತ್ತು ನೆಲಮೂಲದ ಕಾರ್ಯಕರ್ತರಿಗೆ ಸಂದೇಶವೊಂದನ್ನು ರವಾನಿಸಲಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ.

ಹಾಗಾಗಿ ಮೋದಿ ಅವರ ಮೈಸೂರು ಕಾರ್ಯಕ್ರಮದ ಬಗ್ಗೆ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಮೋದಿ ಭೇಟಿಯ ನಂತರ ಹಳೇ ಮೈಸೂರು ಪ್ರಾಂತದ ಮತಗಳಿಕೆಯ ಲೆಕ್ಕಾಚಾರದಲ್ಲಿ ಬದಲಾವಣೆಯಾಗುವುದೇ ಎಂಬುದಕ್ಕೆ ಇನ್ನೂ ಹದಿನೈದು ದಿನಗಳು ಕಾಯಬೇಕಿದೆ. “ಚುನಾವಣೆಯ ಸಂದರ್ಭದಲ್ಲಿ ಕಾಯುವುದೆನ್ನುವುದು, ಕ್ಷಣವೊಂದು ಯುಗವಾಗಿ ಎನ್ನುವಂತಿರುತ್ತದೆ”, ಎಂದು ಬಿಜೆಪಿ ನಾಯಕರು ಅರ್ಥಪೂರ್ಣವಾಗಿ ಹೇಳುತ್ತಾರೆ.

Read More
Next Story