Work Hour Extension Part- 2:  ಮಾನಸಿಕ ಒತ್ತಡದ ಆತಂಕ; ಸರ್ಕಾರದ ಪ್ರಸ್ತಾಪಕ್ಕೆ ಕೆರಳಿದ ಐಟಿ ಉದ್ಯೋಗಿಗಳು
x

ಸಾಂದರ್ಭಿಕ ಚಿತ್ರ

Work Hour Extension Part- 2: ಮಾನಸಿಕ ಒತ್ತಡದ ಆತಂಕ; ಸರ್ಕಾರದ ಪ್ರಸ್ತಾಪಕ್ಕೆ ಕೆರಳಿದ ಐಟಿ ಉದ್ಯೋಗಿಗಳು

ಈ ಮಸೂದೆ ಜಾರಿಗೆ ಬಂದರೆ 10 ಗಂಟೆ ಕೆಲಸ ಹಾಗೂ 12 ಗಂಟೆಗಳ ಹೆಚ್ಚುವರಿ ಕೆಲಸವನ್ನು ಮಾಡಬೇಕಾಗುತ್ತದೆ. ಇದು ವಿಶೇಷವಾಗಿ ಐಟಿ/ಐಟಿಇಎಸ್ ವಲಯದ ಉದ್ಯೋಗಿಗಳಿಗೆ ಹೊರೆಯಾಗುವ ಸಾಧ್ಯತೆ ಇದೆ.


ರಾಜ್ಯ ಸರ್ಕಾರವು 1961 ರ `ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ'ಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ದೈನಂದಿನ ಕೆಲಸದ ಸಮಯವನ್ನು ಈಗಿರುವ ಒಂಬತ್ತು ಗಂಟೆಗಳಿಂದ ಹತ್ತು ಗಂಟೆಗಳಿಗೆ ಹೆಚ್ಚಿಸಲು ಸೂಚಿಸಿದೆ. ಇದು ಕಾರ್ಮಿಕ ವರ್ಗದವರನ್ನು ಮುಖ್ಯವಾಗಿ ಅವಧಿ ಮೀರಿ ಕೆಲಸ ಮಾಡುವ ಐಟಿ ಉದ್ಯೋಗಿಗಳನ್ನು ಕೆರಳಿಸಿದೆ.

ಈ ಮಸೂದೆ ಜಾರಿಗೆ ಬಂದರೆ 10 ಗಂಟೆ ಕೆಲಸ ಹಾಗೂ 12 ಗಂಟೆಗಳ ಹೆಚ್ಚುವರಿ ಕೆಲಸವನ್ನು ಮಾಡಬೇಕಾಗುತ್ತದೆ. ಇದು ವಿಶೇಷವಾಗಿ ಐಟಿ/ಐಟಿಇಎಸ್ ವಲಯದ ಉದ್ಯೋಗಿಗಳಿಗೆ ಹೊರೆಯಾಗುವ ಸಾಧ್ಯತೆ ಇದೆ. 10 ಗಂಟೆಗಳ ಕೆಲಸ-ಜೀವನ ಸಮತೋಲನ ಮತ್ತು ಉದ್ಯೋಗ ಶೋಷಣೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.

ಆಧುನಿಕ ಗುಲಾಮಗಿರಿ ಎಂದು ಕರೆದ ಐಟಿ ನೌಕರರು

ಕರ್ನಾಟಕದಲ್ಲಿ ಸರ್ಕಾರದ ಈ ಪ್ರಸ್ತಾವನೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಕರ್ನಾಟಕ ಐಟಿ ಯೂನಿಯನ್ ಈ ಪ್ರಸ್ತಾವನೆಯನ್ನು ಆಧುನಿಕ ಗುಲಾಮಗಿರಿ ಎಂದು ಕರೆದಿದೆ. ದೀರ್ಘ ಸಮಯ ಕೆಲಸ ಮಾಡುವುದರಿಂದ ನೌಕರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಐಟಿ ಒಕ್ಕೂಟಗಳು ಹೇಳುತ್ತವೆ. ಇದರ ಹೊರತಾಗಿ, ಕಂಪನಿಗಳು ಎರಡು ಪಾಳಿ ವ್ಯವಸ್ಥೆಯನ್ನು ಜಾರಿಗೆ ತರಬಹುದು, ಇದು ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳ ಉದ್ಯೋಗಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕಾರ್ಮಿಕ ಒಕ್ಕೂಟಗಳು ಕಿಡಿಕಾರಿವೆ.

ಆಂಧ್ರಪ್ರದೇಶದಿಂದ ಆರಂಭ

ಕರ್ನಾಟಕಕ್ಕೂ ಮುನ್ನ, ಆಂಧ್ರಪ್ರದೇಶ ಸರ್ಕಾರವು ಕಂಪನಿಗಳಿಗೆ ದಿನಕ್ಕೆ 9 ಗಂಟೆಗಳ ಬದಲು 10 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡಿತ್ತು. ಭದ್ರತೆ, ಸಾರಿಗೆ ಮತ್ತು ಬೆಳಕಿನ ವ್ಯವಸ್ಥೆಗಳಿದ್ದರೆ ಇಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಹ ಅವಕಾಶವಿದೆ. ಇದು ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎಂದು ಆಂಧ್ರ ಸರ್ಕಾರ ವಾದಿಸುತ್ತದೆ, ಆದರೆ ಅಲ್ಲಿಯೂ ಸಹ ಕಾರ್ಮಿಕ ಸಂಘಗಳು ಇದನ್ನು ವಿರೋಧಿಸಿತ್ತು.

70 ಗಂಟೆಗಳ ಕಾಲ ಕೆಲಸ ಮಾಡಲು ಸಲಹೆ ನೀಡಿದ್ದ ನಾರಾಯಣ ಮೂರ್ತಿ

ಈ ಹಿಂದೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಲಹೆ ನೀಡಿದ್ದರು. ಯುವಜನರು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಭಾರತವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು ಎಂಬ ಅರ್ಥದಲ್ಲಿ ಅವರು ತಮ್ಮ ಹೇಳಿಕೆ ನೀಡಿದ್ದರು.

'ನಾವು ನಮ್ಮ ಆಕಾಂಕ್ಷೆಗಳನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ 800 ಮಿಲಿಯನ್ (80 ಕೋಟಿ) ಭಾರತೀಯರು ಉಚಿತ ಪಡಿತರವನ್ನು ಪಡೆಯುತ್ತಾರೆ. ಇದರರ್ಥ 800 ಮಿಲಿಯನ್ ಭಾರತೀಯರು ಬಡತನದಲ್ಲಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ ಯಾರು ಕಷ್ಟಪಟ್ಟು ಕೆಲಸ ಮಾಡುತ್ತಾರೆ' ಎಂದು ಅವರು ತಿಳಿಸಿದ್ದರು.

'ಇನ್ಫೋಸಿಸ್‌ನಲ್ಲಿ ನಾವು ಅತ್ಯುತ್ತಮ ಕಂಪನಿಗಳಿಗೆ ಹೋಗಿ ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ ಎಂದು ನಾನು ಹೇಳಿದ್ದೆ. ನಾವು ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡ ಬಳಿಕ ನಾವು ಭಾರತೀಯರು ಮಾಡಲು ಬಹಳಷ್ಟು ಇದೆ ಎಂದು ನಾನು ನಿಮಗೆ ಹೇಳಬಲ್ಲೆ' ಎಂದು ಮೂರ್ತಿ ಹೇಳಿದ್ದರು.

ನೀವು ಎಷ್ಟು ಸಮಯ ನಿಮ್ಮ ಹೆಂಡತಿ ಮುಖ ನೋಡುತ್ತೀರಿ?

ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ತಮ್ಮ ಉದ್ಯೋಗಿಗಳೊಂದಿಗೆ ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಲು ಸಲಹೆ ನೀಡಿದ್ದರು. ಸಾಧ್ಯವಾದರೆ, ಕಂಪನಿಯು ಭಾನುವಾರದಂದು ಸಹ ನಿಮ್ಮನ್ನು ಕೆಲಸ ಮಾಡುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಈ ಬಿಲಿಯನ್ ಡಾಲರ್ ಕಂಪನಿಯು ತನ್ನ ಉದ್ಯೋಗಿಗಳನ್ನು ಶನಿವಾರದಂದು ಸಹ ಏಕೆ ಕರೆಯುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅವರು, 'ಭಾನುವಾರಗಳಂದು ನಿಮ್ಮನ್ನು ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನನಗೆ ವಿಷಾದವಿದೆ. ಭಾನುವಾರ ನಿಮ್ಮನ್ನು ಕೆಲಸ ಮಾಡಲು ನಾನು ನಿಮಗೆ ಅವಕಾಶ ನೀಡಿದರೆ, ನಾನು ಹೆಚ್ಚು ಸಂತೋಷವಾಗಿರುತ್ತೇನೆ, ಏಕೆಂದರೆ ನಾನು ಭಾನುವಾರದಂದು ಕೆಲಸ ಮಾಡುತ್ತೇನೆ. ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿಯನ್ನು ದಿಟ್ಟಿಸಿ ನೋಡಬಹುದು? ನಿಮ್ಮ ಹೆಂಡತಿ ಎಷ್ಟು ಹೊತ್ತು ನಿಮ್ಮನ್ನು ದಿಟ್ಟಿಸಿ ನೋಡಬಹುದು? ಬನ್ನಿ, ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ ಎಂಬ ಹೇಳಿಕೆ ನೀಡಿದ್ದರು. ಇದು ಐಟಿ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿತ್ತು.

ಐಟಿ ಉದ್ಯೋಗಿಗಳು ಹೇಳುವುದು ಏನು?

ರಾಜ್ಯ ಸರ್ಕಾರದ ಈ ಪ್ರಸ್ತಾವನೆಗೆ ಐಟಿ ಉದ್ಯೋಗಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಂತಹ ದೀರ್ಘ ಕೆಲಸದ ದಿನಗಳು ಒತ್ತಡವನ್ನು ಹೆಚ್ಚಿಸುತ್ತವೆ, ಉತ್ಪಾದಕತೆಯನ್ನು ಕಡಿಮೆ ಮಾಡುತ್ತವೆ ಮತ್ತು ಉದ್ಯೋಗಿಗಳ ಚೈತನ್ಯವನ್ನು ಕುಗ್ಗಿಸುತ್ತವೆ ಎನ್ನುವುದು ಐಟಿ ಉದ್ಯೋಗಿಗಳ ವಾದ.

"ನಾನು ಈಗಲೂ ದಿನಕ್ಕೆ 9 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತೇನೆ. ಅದರಲ್ಲೂ ಸಾಕಷ್ಟು ದಬ್ಬಾಳಿಕೆಯನ್ನು ಸಹಿಸಬೇಕು. ಈಗ 10 ಗಂಟೆ ಕೆಲಸ ಮಾಡಿದ ಮೇಲೆ, ನನ್ನ ವೈಯಕ್ತಿಕ ಜೀವನಕ್ಕೆ, ಹವ್ಯಾಸಗಳಿಗೆ ಅಥವಾ ಕುಟುಂಬಕ್ಕೆ ಮೀಸಲಿಡಲು ಸಮಯವೇ ಇಲ್ಲ. ಸಾಫ್ಟ್‌ವೇರ್ ಉದ್ಯಮದಲ್ಲಿ ಕ್ರೀಯಾಶೀಲತೆ ಬೇಕಾಗುತ್ತದೆ. ಆದರೆ ಹೆಚ್ಚಿನ ಕೆಲಸ ದೈಹಿಕ-ಮಾನಸಿಕವಾಗಿ ಆಯಾಸ ಉಂಟಾಗುತ್ತದೆ. ಹಾಗಾಗಿ ಕೆಲಸದ ಗುಣಮಟ್ಟ ಕುಸಿಯುತ್ತದೆ." ಎಂದು ಹೇಳುತ್ತಾರೆ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹರ್ಷ ಅವರು.

``ಕೆಲಸದ ಸಮಯವನ್ನು ವಿಸ್ತರಿಸುವ ಸರ್ಕಾರದ ನೀತಿ ಸರಿಯಾದದು ಅಲ್ಲ. ಬದಲಾಗಿ, ಪ್ರಸ್ತುತ ಕೆಲಸದ ಸಮಯವನ್ನು ಕಡಿಮೆ ಮಾಡುವಂತೆ ಮತ್ತು ನಿಷ್ಠುರವಾಗಿ ಎಂಟು ಗಂಟೆಗಿಂತ ಹೆಚ್ಚಿನ ಕೆಲಸ ಅಥವಾ ವಾರಾಂತ್ಯದಲ್ಲಿ ಕೆಲಸ ಮಾಡುವುದನ್ನು ನಿರ್ಬಂಧಿಸುವಂತೆ ಸರ್ಕಾರ ನಿರ್ಬಂಧ ಹೇರಬೇಕು. ಕೆಲಸದ ಸಮಯ ವಿಸ್ತರಣೆ ಕಾರ್ಮಿಕರಿಗೆ ಹೆಚ್ಚಿನ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಉತ್ಪಾದಕತೆ ಗಮನಾರ್ಹವಾಗಿ ಕುಗ್ಗುತ್ತದೆ'' ಎಂದು ʼದ ಫೆಡರಲ್‌ ಕರ್ನಾಟಕʼ ಕ್ಕೆ ತಿಳಿಸುತ್ತಾರೆ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಫಣೀಶ್ ನಾರಾಯಣ್.

ಆದ್ದರಿಂದ, ಸರ್ಕಾರ ಮತ್ತು ಉದ್ಯೋಗದಾತರು ಒಟ್ಟಾಗಿ ಉತ್ತಮ ಕೆಲಸದ ಸಂಸ್ಕೃತಿಯನ್ನು ರೂಪಿಸಲು ಶ್ರಮಿಸಬೇಕು – ಅದು ಉದ್ಯೋಗಿಗಳನ್ನು ಪ್ರೇರೇಪಿಸಬಲ್ಲದು. ಈಗಾಗಲೇ ಮೆಟ್ರೋ ಟಿಕೆಟ್ ದರ ಹೆಚ್ಚಳ, ಭಾರೀ ಸಂಚಾರದ ಸಮಸ್ಯೆಗಳು ಕೆಲಸಗಾರರ ಮನೋಭಾವನೆ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇದಕ್ಕೆ ಈಗ ಕೆಲಸದ ಸಮಯ ವಿಸ್ತರಣೆ ಎಂಬ ಹೊಸ ಒತ್ತಡವೂ ಸೇರುತ್ತಿದೆ. ಹೀಗಾಗಿ, ಇದು ವೈಜ್ಞಾನಿಕತೆವಿಲ್ಲದ, ಎತ್ತಹಾಗೂ ಸಮರ್ಥನೀಯವಲ್ಲದ ನಿರ್ಧಾರವಾಗಿದೆ ಎನ್ನುತ್ತಾರೆ ಫಣೀಶ್.

ಬೆಂಗಳೂರಿನಲ್ಲಿರುವ ಕಂಪೆನಿಗಳೆಷ್ಟು?

ಭಾರತದಲ್ಲಿ ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರದ ಹೃದಯಭಾಗವೆನಿಸಿಕೊಂಡಿರುವ ಬೆಂಗಳೂರಿನಲ್ಲಿ ಐಟಿ ಕಂಪನಿಗಳ ಸಂಖ್ಯೆ 10,000 ಕ್ಕೂ ಮೀರಿದೆ. ಸಮೀಕ್ಷೆವೊಂದರ ಪ್ರಕಾರ ನಗರದಲ್ಲಿ ಸಕ್ರಿಯವಾಗಿರುವ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ ಆಧಾರಿತ ಸಂಸ್ಥೆಗಳ ಸಂಖ್ಯೆ ಸುಮಾರು 9,000 ರಿಂದ 12,000 ರವರೆಗೆ ಏರಿಕೆಯಾಗಿವೆ ಎಂದು ಅಂದಾಜಿಸಲಾಗಿದೆ.

ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಐಬಿಎಂ, ಗೂಗಲ್, ಅಮೆಜಾನ್‌ ಮುಂತಾದವುದಗಳ ಶಾಖೆಗಳನ್ನು ಹೊರತುಪಡಿಸಿ, ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಇವೆ. ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಅಗ್ರಗಣ್ಯ ಸ್ಥಾನದಲ್ಲಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಸುಮಾರು 67,000 ಕಂಪನಿಗಳು ಕರ್ನಾಟಕ ಸರ್ಕಾರದ ಕೈಗಾರಿಕಾ ನೋಂದಣಿಯಲ್ಲಿ ದಾಖಲಾಗಿವೆ. ಇದರಲ್ಲಿ ಬೃಹತ್ ಎಸ್ಎಂಇಗಳು, ಸ್ಟಾರ್ಟ್‌ ಅಪ್‌ಗಳು, ಮಲ್ಟಿನ್ಯಾಷನಲ್ ಸಂಸ್ಥೆಗಳು ಸೇರಿವೆ.

2016 ರಲ್ಲಿ ನಗರದಲ್ಲಿ ಸುಮಾರು 2,000 ಕಂಪನಿಗಳು ಸಕ್ರಿಯವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ನೂರು ಪಟ್ಟುಗಿಂತಲೂ ಹೆಚ್ಚಿನ ಏರಿಕೆ ಕಂಡುಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಹೂಡಿಕೆದಾರರ ನಂಬಿಕೆಯು ನಗರದಲ್ಲಿ ಹೊಸ ಕಂಪನಿಗಳ ಸ್ಥಾಪನೆಯನ್ನು ಉತ್ತೇಜಿಸಿದೆ. ಭದ್ರ ತಂತ್ರಜ್ಞಾನ, ಸಾಮರ್ಥ್ಯವಂತ ಉದ್ಯೋಗಿ ವರ್ಗ, ಹಾಗೂ ಉತ್ತಮ ಮೂಲಸೌಕರ್ಯ ಬೆಂಗಳೂರನ್ನು ದೇಶದ ಪ್ರಮುಖ ಐಟಿ ಕೇಂದ್ರವಾಗಿ ರೂಪಿಸಿದೆ.

ಸ್ಟಾರ್ಟ್‌ ಅಪ್‌ ಸಂಸ್ಥೆಗಳೆಷ್ಟು?

ಬೆಂಗಳೂರಿನಲ್ಲಿ ಸದ್ಯಕ್ಕೆ 3,000 ರಿಂದ 4,000 ರಷ್ಟು ಸಕ್ರಿಯ ಸ್ಟಾರ್ಟ್‌ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಈ ಅಂಕಿಗಳು ನಿಖರವಾಗಿ ಸರ್ಕಾರದ ಲೆಕ್ಕಪತ್ರಗಳಲ್ಲಿ ಸ್ಪಷ್ಟವಾಗದಿದ್ದರೂ, ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ಸಂಸ್ಥೆಗಳ ವರದಿಗಳ ಪ್ರಕಾರ, ಬೆಂಗಳೂರು ದೇಶದ ಪ್ರಮುಖ ಸ್ಟಾರ್ಟ್‌ಅಪ್ ನೆಲೆ ಆಗಿದೆ.

Manworklife ಎಂಬ ಆರ್ಥಿಕ ವಿಶ್ಲೇಷಣಾ ಸಂಸ್ಥೆಯು ಬೆಂಗಳೂರಿನಲ್ಲಿ ಮಾತ್ರವೇ 3,500 ಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್‌ಅಪ್‌ಗಳು ಇವೆ ಎಂದು ವರದಿ ಮಾಡಿದೆ. ಇನ್ನು StartupBlink ಎಂಬ ಜಾಗತಿಕ ಡೇಟಾಬೇಸ್ ಪ್ರಕಾರ, ಬೆಂಗಳೂರಿನಲ್ಲಿ 2,400 ಕ್ಕಿಂತ ಹೆಚ್ಚು ತಂತ್ರಜ್ಞಾನ ಆಧಾರಿತ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ಮಾಡಿತ್ತು.

ಇದೇ ವೇಳೆ, 2023 ರಲ್ಲಿ ಕರ್ನಾಟಕ ಸರ್ಕಾರದ ಡೇಟಾ ಪ್ರಕಾರ ರಾಜ್ಯದಲ್ಲಿ ಸುಮಾರು 3,036 ಸ್ಟಾರ್ಟ್‌ಅಪ್‌ಗಳು ನೋಂದಾಯವಾಗಿದ್ದು, ಅವುಗಳಲ್ಲಿ ಬಹುತೇಕ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಸಿರುವ ಸಾಧ್ಯತೆ ಇದೆ. Startup Genome ಸಂಸ್ಥೆಯ ಪ್ರಕಾರ ಬೆಂಗಳೂರು ಈವರೆಗೆ 32 ಯುನಿಕೋರ್ಣ್‌ ಕಂಪನಿಗಳನ್ನು ನೀಡಿದ ತಂತ್ರನಗರಿಯಾಗಿದೆ ಎಂದು ತಿಳಿಸಿದೆ.

ಇವುಗಳಲ್ಲಿ ಹೆಚ್ಚಿನವು ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಎಐ, ಹೆಲ್ತ್‌ಟೆಕ್, ಎಡ್ಟೆಕ್ ಮತ್ತು ಫಿನ್‌ಟೆಕ್ ಕ್ಷೇತ್ರಗಳ ಕಂಪನಿಗಳಾಗಿವೆ. ಇದರಿಂದಾಗಿ, ನಗರವು ಉದ್ದಿಮೆಶೀಲತೆಯ ಹೊಸ ತಲೆಮಾರಿಗೆ ಆಶಾವಾದದ ತಾಣವಾಗುತ್ತಿದೆ.

ಬೆಂಗಳೂರು ಐಟಿ ಉದ್ಯೋಗಿಗಳ ಸಂಖ್ಯೆಯಲ್ಲಿ ಮೈಲುಗಲ್ಲು ಮುಟ್ಟಿದ್ದು, ನಗರದಲ್ಲಿ ತಂತ್ರಜ್ಞಾನ ವೃತ್ತಿಪರರ ಸಂಖ್ಯೆ 10 ಲಕ್ಷ ದಾಟಿದೆಯೆಂದು CBRE ಸಂಸ್ಥೆಯ 2025ರ “Global Tech Talent Guidebook” ವರದಿ ಬಹಿರಂಗಪಡಿಸಿದೆ. ಈ ಅಂಕಿಅಂಶಗಳೊಂದಿಗೆ ಬೆಂಗಳೂರು ಏಷ್ಯಾ–ಪ್ಯಾಸಿಫಿಕ್ ಭಾಗದಲ್ಲಿ ಸರ್ವೋತ್ತಮ ತಂತ್ರಜ್ಞಾನ ಉದ್ಯೋಗಿಗಳಿರುವ ನಗರ ಎಂಬ ಸ್ಥಾನವನ್ನು ಪಡೆದುಕೊಂಡಿದ್ದು, ವಿಶ್ವದ 12 ಪ್ರಮುಖ ‘ಟೆಕ್ ಪವರ್‌ಹೌಸ್’ ನಗರಗಳ ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ನ್ಯೂಯಾರ್ಕ್, ಲಂಡನ್, ಸ್ಯಾನ್‌ಫ್ರಾನ್ಸಿಸ್ಕೋ, ಟೊರಾಂಟೋ ಮುಂತಾದ ನಗರಗಳೂ ಸೇರಿವೆ.

ಈ ವರದಿ ಪ್ರಕಾರ ಬೆಂಗಳೂರಿನಲ್ಲಿ ಕೇವಲ ಸಾಮಾನ್ಯ ಐಟಿ ಉದ್ಯೋಗಿಗಳಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿಯೂ ಸುಮಾರು 94,000 ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. 2018 ರಿಂದ 2023ರವರೆಗೆ ಐಟಿ ಉದ್ಯೋಗದಲ್ಲಿ ಸತತವಾಗಿ ಶೇ.12ರಷ್ಟು ವೃದ್ಧಿಯಾಗಿದೆ. ಭಾರತದ ಒಟ್ಟಾರೆ 5.4 ಮಿಲಿಯನ್ (54 ಲಕ್ಷ) ಐಟಿ–BPM ವೃತ್ತಿಪರರಲ್ಲಿ ಸುಮಾರು 15 ಲಕ್ಷ ಮಂದಿ ಬೆಂಗಳೂರಿನವರೇ ಆಗಿರುವ ಸಾಧ್ಯತೆ ಇದೆ ಎಂದು ವರದಿ ಸೂಚಿಸುತ್ತದೆ.

ಸಾಫ್ಟ್‌ವೇರ್ ಉತ್ಪಾದಕತೆಯಲ್ಲಿ ಜಾಗತಿಕ ಮಟ್ಟದಲ್ಲೇ ಮುಂಚೂಣಿ

ಬೆಂಗಳೂರು ನಗರ ಸಾಫ್ಟ್‌ವೇರ್ ಉತ್ಪಾದಕತೆಯಲ್ಲಿ ರಾಷ್ಟ್ರದ ಮತ್ತು ಜಾಗತಿಕ ಮಟ್ಟದಲ್ಲಿಯೇ ಮುಂಚೂಣಿಯಲ್ಲಿ ಇದೆ. ಇತ್ತೀಚಿನ ವರದಿಗಳ ಪ್ರಕಾರ, ನಗರವು 2025ರ ವೇಳೆಗೆ ಸುಮಾರು 53 ಬಿಲಿಯನ್ ಡಾಲರ್‌ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡುತ್ತಿದೆ. ರಾಜ್ಯದಾದ್ಯಂತ ಇದು ಸಾಮೂಹಿಕ 65 ಡಾಲರ್‌ ಬಿಲಿಯನ್ ಗೆ ತಲುಪಿದೆ.

Read More
Next Story