ಈಶ್ವರಪ್ಪ ಬಂಡಾಯ ಹುಸಿಯೇ? ಅಥವಾ ಪ್ರಾಮಾಣಿಕವೇ?
ಕಳೆದ ಕೆಲವು ದಿನಗಳ ಹಿಂದಿನವರೆಗೂ, ಗೀತಾ ಶಿವರಾಜ್ ಕುಮಾರ್ ಮತ್ತು ಬಿ ವೈ ರಾಘವೇಂದ್ರ ನಡುವಿನ ನೇರ ಸೆಣಸಾಟದಂತೆ ತೋರುತ್ತಿದ್ದ ಶಿವಮೊಗ್ಗ ಲೋಕಸಭಾ ಚುನಾವಣಾ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವಂತೆ ಕಾಣುತ್ತಿದೆ. ಇದಕ್ಕೆ ಬಿಜೆಪಿಯ ಹಿರಿಯ ನಾಯಕ, ರಾಜ್ಯದ ಹಿರಿಯ ನಾಯಕ ಯಡಿಯೂರಪ್ಪನವರ ವಿರುದ್ಧ ಮಲೆತು ನಿಂತಿರುವುದು. ತಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಎಂದಿರುವ ಈಶ್ವರಪ್ಪ ತಮ್ಮ ಕುಟುಂಬದ ಕುಡಿಯ ರಾಜಕೀಯ ಭವಿಷ್ಯಕ್ಕಾಗಿ ಬಂಡೆದ್ದಿರುವುದು ಮಾತ್ರ ಕಾಲದ ದುರಂತ.
ಹೊಸ ಆಯಾಮ
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ʼಲೋಕʼದ ಗಮನ ಸೆಳೆದದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಮಂಡ್ಯ ಜೆಡಿಎಸ್ ಪಾಲಾಗುತ್ತಿದ್ದಂತೆ, ಎಲ್ಲರ ಗಮನ ಈಗ ಮಲೆನಾಡಿನ ಕೇಂದ್ರವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದತ್ತ ಹರಿದಿದೆ. ಕಾರಣವಿಷ್ಟೇ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿಂದುತ್ವ, ಮೋದಿ ಮತ್ತು ಧರ್ಮ ನಿರಪೇಕ್ಷ ನಂಬಿಕೆ ಹಾಗೂ ಒಕ್ಕೂಟ ವ್ಯವಸ್ಥೆಯ ನಡುವಿನ ಸೆಣಸಾಟ ಎಂದು ಭಾವಿಸಲಾಗಿತ್ತು. ಹಿಂದುತ್ವ, ಮೋದಿ ವರ್ಚಸ್ಸನ್ನು ಬಿಜೆಪಿಯ ಬಿ ವೈ ರಾಘವೇಂದ್ರ ಪ್ರತಿನಿಧಿಸಿದರೆ, ಧರ್ಮ ನಿರಪೇಕ್ಷತೆ ಹಾಗೂ ಒಕ್ಕೂಟ ವ್ಯವಸ್ಥೆಯ ಪ್ರತಿನಿಧಿಯಾಗಿ ಗೀತಾ ಶಿವರಾಜ್ ಕುಮಾರ್ ನಿಂತಿದ್ದರು. ಈಗ ಇದ್ದಕ್ಕಿದ್ದಂತೆ ಬಿಜೆಪಿ ನಾಯಕತ್ವದ ಮೇಲೆ ಮಲೆತು ನಿಂತು ರಾಜ್ಯ ಬಿಜೆಪಿಯ ಶುದ್ಧಿಕರಣದ ಕಮಂಡಲ ಹಿಡಿದು ಈಶ್ವರಪ್ಪ ಕಣಕ್ಕಿಳಿದು ಯಕ್ಷಗಾನದ ವೇಷಧಾರಿಯಂತೆ ರಂಗ ಪ್ರವೇಶ ಮಾಡಿರುವುದು ಶಿವಮೊಗ್ಗ ಲೊಕಸಭಾ ಚುನಾವಣಾ ಕಣಕ್ಕೊಂದು ಹೊಸ ಆಯಾಮ ದೊರಕಿದಂತಾಗಿದೆ.
ಆದರೆ, ಈಶ್ವರಪ್ಪನವರ ಈ ಹೊಸ ʼರೂಪʼದ ಪ್ರತಿಭಟನೆ, ಬಂಡಾಯ ಹುಸಿಯೇ ಅಥವಾ ಪ್ರಾಮಾಣಿಕವಾದ ನಡೆಯೇ ಎಂಬ ಪ್ರಶ್ನೆ ರಾಜಕೀಯ ವಲಯಲ್ಲಿ ಚರ್ಚೆಗೊಳಗಾಗಿದೆ. ಏಕೆಂದರೆ, ಬಿಜೆಪಿಯಲ್ಲಿದ್ದೂ ಬಿಜೆಪಿಯವರಂತಾಗದೆ, ಬಿಜೆಪಿಯಿಂದ ಜೆಡಿಎಸ್ ಗೆ ನೆಗೆದು, ಅಲ್ಲಿಂದ ಕಾಂಗ್ರೆಸ್ ಗೆ ಬಂದು ಕೂತು ಈಗ ವಿಧಾನ ಪರಿಷತ್ತಿಗೆ ಜೂನ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನೈರುತ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಯನೂರು ಮಂಜುನಾಥ್ ಈಶ್ವರಪ್ಪನವರ ಬಂಡಾಯ ʼಹುಸಿ ನಾಟಕʼ, ಹಿಂದುಳಿದ ವರ್ಗಗಳ ಮತಗಳಿಕೆಗಾಗಿ ಯಡಿಯೂರಪ್ಪನವರು ಈಶ್ವರಪ್ಪನವರೊಂದಿಗೆ ಮಾಡಿಕೊಂಡಿರುವ ಒಳ ಒಪ್ಪಂದದ ಪರಿಣಾಮವಾಗಿ ಆರಂಭವಾಗಿರುವ ನಾಟಕ ಇದು ಎಂದು ಹೇಳಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಕುರಿತು ಆಯನೂರು ಮಂಜುನಾಥ್ ಅವರನ್ನು ದ ಫೆಡರಲ್-ಕರ್ನಾಟಕ ಪ್ರಶ್ನಿಸಿದಾಗ ಅವರು ನೀಡಿದ ಉತ್ತರವಿದು: “ಈಶ್ವರಪ್ಪನವರದು ನಿಜವಾದ ಪ್ರತಿಭಟನೆಯೇ ಆಗಿದ್ದರೆ, ತಮ್ಮನ್ನು ರಾಜ್ಯಪಾಲರನ್ನಾಗಿಸುವ ಭರವಸೆ ನೀಡಿದ್ದರು. ತಮ್ಮ ಪುತ್ರನಿಗೆ ವಿಧಾನ ಪರಿಷತ್ತಿನ ಸದಸ್ಯನಾಗಿ ಮಾಡುವ ಮಾತೇಕೆ ಹುಟ್ಟುತ್ತಿತ್ತು? ಅವರ ಬಂಡಾಯ ತಣಿಸಲು ಅಮಿತ್ ಷಾ ಅವರ ಜಾರಿ ನಿರ್ದೇಶನಾಲಯದ ದಾಳಿಯ ಒಂದು ಬೆದರಿಕೆ ಸಾಕಿತ್ತು. ಆದರೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಹಾಜರಾಗದಿರುವಷ್ಟು ಎದೆಗಾರಿಕೆ ಇರುವ ನಾಯಕರಲ್ಲ ಈ ಈಶ್ವರಪ್ಪ “. ಮೇಲ್ನೋಟಕ್ಕೆ ಅವರ ವಾದದಲ್ಲಿ ತಥ್ಯವಿದೆ ಎನ್ನಿಸುತ್ತದೆ.
ಇದೇ ಮಾತನ್ನು ಶಿವಮೊಗ್ಗೆಯ ಮತ್ತೊಬ್ಬ ಹಿರಿಯ ನಾಯಕರೂ ಹೇಳುತ್ತಾರೆ. ಆದರೆ ಸ್ಪಲ್ಪ ಮೃದುವಾಗಿ ಅಷ್ಟೇ. “ನಿಜ. ಈಶ್ವರಪ್ಪನವರ ನೋವಿಗೆ ಮತ್ತು ಕಾರಣಕ್ಕೂ ಅರ್ಥವಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುವ ಅವರ ನಿಲುವಿನಲ್ಲಿ ಶಕ್ತಿ ಇದೆ. ಆದರೆ ಮಗನಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಬಂಡೆದ್ದಿರುವುದು ಸಮಂಜಸ ಅನ್ನಿಸುವುದಿಲ್ಲ. ಹಾಗೆ ನೋಡಿದರೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರದೂ ಒಂದು ರೀತಿಯಲ್ಲಿ ಧೃತರಾಷ್ಟ್ರ ಪುತ್ರ ಪ್ರೀತಿಯೇ. ಅದರಲ್ಲೇನೂ ವಿಶೇಷವಿಲ್ಲ. ಇಬ್ಬರೂ ಮಕ್ಕಳಿಗಾಗಿಯೇ ಶಿವಮೊಗ್ಗದಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ” ಎನ್ನುವ ಈ ನಾಯಕ, ಯಡಿಯೂರಪ್ಪ ಮತ್ತು ಈಶ್ವರಪ್ಪನವರೊಂದಿಗೆ ಶಿವಮೊಗ್ಗೆಯಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು.
ಆಯನೂರು ಮಂಜುನಾಥ್ ಅವರ ಕಲ್ಪನೆ
ಈ ನಡುವೆ ಆಯನೂರು ಮಂಜುನಾಥ್ ಅವರ ಹೇಳಿಕೆಯನ್ನು “ಇದು ಆಯನೂರು ಅವರ ಕಲ್ಪನೆಯಷ್ಟೇ. ಅಂಥದ್ದೇನೂ ನನ್ನ ಮತ್ತು ಯಡಿಯೂರಪ್ಪ ನಡುವೆ ನಡೆದಿಲ್ಲ. ನಡೆಯಲು ಸಾಧ್ಯವೂ ಇಲ್ಲ”ಎಂದು ಈಶ್ವರಪ್ಪ ಸಮರ್ಥಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ. ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಏಪ್ರಿಲ್ 22 ರಂದು ತಮ್ಮ ಇಪ್ಪತ್ತೈದು ಸಾವಿರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವಾಗದಾಗಿ ಸ್ಪಷ್ಟಪಡಿಸುತ್ತಾರೆ. ಆದರೆ ಅವರು ಯಾವ ಚಿನ್ಹೆಯ ಮೇಲೆ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಷ್ಟೇ ಅಲ್ಲ. ತಮ್ಮನ್ನು ಬೆಂಬಲಿಸುತ್ತಿರುವ ಮಂದಿಗೆ ಪ್ರಾಣ ಬೆದರಿಕೆಯ ಕರೆಗಳು ಬರುತ್ತಿವೆ. ಆದರೂ ಅವರು ಜೀವ ಒತ್ತಿ ಇಟ್ಟು ತಮ್ಮೋಂದಿಗೆ ನಿಂತಿದ್ದಾರೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನವರನ್ನು ಕಂಗೆಡಿಸಲು, ಕೆಲವು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮೊಂದಿಗೆ ನಿಂತಿರುವುದಾಗಿ ಹೇಳಿದ್ದಾರೆ. ಅದು ಸತ್ಯವೋ, ಸುಳ್ಳೋ, ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
“ಆದರೆ ಒಂದು ಸಂಗತಿಯಂತೂ ಸತ್ಯ. ಬಿಜೆಪಿ ಇಂದಿನ ಸ್ಥಿತಿಗೆ ತಲುಪಲು ಯಡಿಯೂರಪ್ಪನವರಷ್ಟೇ ಈಶ್ವರಪ್ಪ ಕೂಡ ಜೀವ ತೇಯ್ದಿದ್ದಾರೆ” ಎಂಬುದು ಬಿಜೆಪಿಯ ಬೆಳವಣಿಗೆಯನ್ನು ಹತ್ತಿರದಿಂದ ಕಂಡಿರುವವರ ಅಭಿಪ್ರಾಯ.
ಆರ್ ಎಸ್ ಎಸ್ ಹಿನ್ನೆಲೆ
ಈಶ್ವರಪ್ಪ ಬಾಲ್ಯದಿಂದಲೂ ಆರ್ ಎಸ್ ಎಸ್ ಕಾರ್ಯಕರ್ತರು. ತುರ್ತುಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದವರು. ತುರ್ತುಸ್ಥಿತಿಯೋತ್ತರ ಕಾಲದಲ್ಲಿ ಬಿಜೆಪಿಯ ಜಿಲ್ಲಾ, ರಾಜ್ಯ ನಾಯಕರಾದವರು. ಐದು ಬಾರಿ ಶಿವಮೊಗ್ಗ ಜಿಲ್ಲೆಯನು ವಿಧಾನ ಸಭೆಯಲ್ಲಿ ಪ್ರತಿನಿಧಿಸಿದವರು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು. ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದವರು. ದೇವೇಗೌಡರ ವಿರುದ್ಧ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ, ಅದು ಸೋಲಲ್ಲ ಎಂದು ಎದ್ದು ನಿಂತವರು.
ವಿವಾದದ ಸುಳಿಯಲ್ಲಿ ಈಶ್ವರಪ್ಪ
ಈ ಈಶ್ವರಪ್ಪನವರು ತಮ್ಮ ʼಹರಿತʼ ನಾಲಿಗೆಯಿಂದಾಗಿ ಹಲವು ಬಾರಿ ವಿವಾದಕ್ಕೊಳಗಾದವರು. ಅವರ ಮನೆಯಲ್ಲಿ ಹಣ ಎಣಿಸುವ ಯಂತ್ರವಿದೆ ಎಂದೇ ಖ್ಯಾತರಾದವರು. ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪರಿಣಾವವಾಗಿ ಅಧಿಕಾರ ಕಳೆದುಕೊಂಡವರು. ತಮಗೆ ೭೫ ವರ್ಷವಾಗುತ್ತಿರುವುದರಿಂದ ತಾವು ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಪಕ್ಷದ ಹಿರಿಯರಿಗೆ ಮನವಿ ಪತ್ರ ಬರೆದವರು. ಅಷ್ಟೇ ಅಲ್ಲಿ 2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಹಿಂದುಳಿದವರು.
ಮತ್ತೆ ಚುನಾವಣಾ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದ ಈಶ್ವರಪ್ಪ ಮತ್ತೆ ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ಪ್ರವೇಶಿಸಿರುವುದು ವಿರೋಧಾಭಾಸದಂತೆ ತೋರುತ್ತಿದೆ. ಆದರೆ ಈ ತಮ್ಮ ಹೋರಾಟ ಪಕ್ಷದ ನೊಂದ ಕಾರ್ಯಕರ್ತರ ಪರವಾದದ್ದು ಎಂದು ಈಶ್ವರಪ್ಪ ಸಮರ್ಥಿಸಿಕೊಳ್ಳುತ್ತಾರೆ. ಅಷ್ಟೇ ರಾಜ್ಯ ಬಿಜೆಪಿಯ ಮೇಲಿನ ಒಂದು ಕುಟುಂಬದ ಹಿಡಿತವನ್ನು ತಪ್ಪಿಸುವುದು ತಮ್ಮ ಗುರಿ ಎಂದೂ ವಾದಿಸುತ್ತಿದ್ದಾರೆ.
ಹನ್ನೆರಡು ವರ್ಷದ ನಂತರ ಬಂಡಾಯ
ಶಿವಮೊಗ್ಗ ಪಕ್ಷದ ವಿರುದ್ಧದ ಬಂಡಾಯಕ್ಕೆ ಎರಡನೇ ಬಾರಿಗೆ ಸಾಕ್ಷಿಯಾಗುತ್ತಿದೆ. ಹನ್ನೆರಡು ವರ್ಷದ ಹಿಂದೆ ಯಡಿಯೂಪ್ಪ ಪಕ್ಷದ ವಿರುದ್ಧ ಬಂಡೆದ್ದು ೨೦೧೨ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಎಂಬ ಸ್ವತಂತ್ರ ಪಕ್ಷ ಹುಟ್ಟುಹಾಕಿದ್ದರು. ರಾಜ್ಯದ 224 ಸ್ಥಾನಗಳ ಪೈಕಿ ೨೦೩ ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ 40 ಸ್ಥಾನಗಳಿಸಿ, ಹೀನಾಯ ಸ್ಥಿತಿಗೆ ತಲುಪಿತ್ತು. ಕೆಜೆಪಿ ಆರು ಸ್ಥಾನಗಳನ್ನು ಗಳಿಸಿ ಬೀಗಿತ್ತು. ಶಿಕಾರಿಪುರದಲ್ಲಿ ಎಂದಿನಂತೆ ಯಡಿಯೂರಪ್ಪ ಗೆದ್ದಿದ್ದರು. ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಯಡಿಯೂರಪ್ಪನವರನ್ನು ಎದುರು ಹಾಕಿಕೊಳ್ಳುವ ಅಪಾಯವನ್ನು ಮನಗಂಡ ಬಿಜೆಪಿ ಅವರ ಮನವೊಲಿಸಿದಾಗ 2014 ರ ಲೋಕಸಭಾ ಚುನಾವಣೆಗೂ ಮುನ್ನ ಕೆಜೆಪಿಯನ್ನು ವಿಸರ್ಜೀಸಿ, ಆನಂತರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಯಡಿಯೂಪ್ಪ ವಿಜಯ ಸಾಧಿಸಿದ್ದರು. ಹತ್ತು ವರ್ಷಗಳ ನಂತರದ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಈಗ ಪಕ್ಷದ ವಿರುದ್ಧ ಬಂಡೆದ್ದಿದ್ದಾರೆ.
ಪಕ್ಷದ ವಿರುದ್ಧ ಬಂಡೆದ್ದಿರುವ ಈಶ್ವರಪ್ಪ ಬಂಡಾಯಕ್ಕೆ ನೀಡುತ್ತಿರುವ ಕಾರಣ ಅಥವ ವಾದದಲ್ಲಿ ಸತ್ಯವಿದೆಯೇ? ಅಥವ ಇದು ಕೇವಲ ಸಮಯಸಾಧಕ ಸಾಧನವೇ ಎಂಬುದು ಅವರು ನಾಮಪತ್ರ ಸಲ್ಲಿಸಿ, ಹಿಂತೆಗೆದುಕೊಳ್ಳದಿದ್ದರೆ ತಿಳಿದುಬರಲಿದೆ. ಅಲ್ಲಿಯವರೆಗೆ ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರು ಕಾಯುವುದು ಅನಿವಾರ್ಯ.