ಭಾರತದ ಜಲ ಬಿಕ್ಕಟ್ಟು Part-1: ನಿರ್ಲಕ್ಷ್ಯ, ನಿರ್ಲಜ್ಜತನದ ಫಲ- ಕಾಲ ಮಿಂಚಿಹೋಗುತ್ತಿದೆ!
ನೀರಿನ ಕುರಿತಾದ ಚರ್ಚೆಗಳು ನೀರನ್ನು ಒಂದು ಸಾರ್ವಜನಿಕ ಆಸ್ತಿ ಮತ್ತು ಮಾನವ ಹಕ್ಕು ಎಂದು ಗುರುತಿಸುವ, ಎಲ್ಲರನ್ನೂ ಒಳಗೊಳ್ಳುವ ಆಡಳಿತಾತ್ಮಕ ಚಿಂತನೆಯನ್ನು ಅದು ಒಳಗೊಂಡಿಲ್ಲ…

ಇಂದೋರ್ ದುರಂತವು ನನಗೆ ಅಲ್ಬರ್ಟ್ ಕಮೂ ಅವರ ʼದ ಪ್ಲೇಗ್ʼ ಕಾದಂಬರಿಯನ್ನು ನೆನಪಿಸುತ್ತದೆ. ನಾವು ನಂಬಿರುವ ದೈನಂದಿನ ವ್ಯವಸ್ಥೆಗಳು ನಮ್ಮ ಜೀವ ರಕ್ಷಣೆ ಮಾಡುವಲ್ಲಿ ವಿಫಲವಾದಾಗ ಮಹಾ ದುರಂತಗಳು ಸಂಭಿಸುತ್ತದೆ ಎಂಬುದನ್ನು ಈ ಕಾದಂಬರಿ ಶ್ರುತಪಡಿಸುತ್ತದೆ.
1940ರ ಕಾಲಘಟ್ಟದ ಹಿನ್ನೆಲೆಯನ್ನು ಹೊಂದಿರುವ ಈ ಕಾದಂಬರಿಯಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ವ್ಯಾಪಕ ಪ್ರಮಾಣದಲ್ಲಿ ಹರಡಲು ಅಧಿಕಾರಶಾಹಿಯ ಉದಾಸೀನತೆ, ಸಕಾಲಕ್ಕೆ ಕೈಗೊಳ್ಳದ ಕ್ರಮಗಳು ಮತ್ತು ನಗರದ ಸಂಸ್ಥೆಗಳ ದೈನಂದಿನ ಕಾರ್ಯವೈಖರಿಯಲ್ಲಿನ ಲೋಪದೋಷಗಳೇ ಕಾರಣವಾಗಿರುತ್ತದೆ. ಆದರೆ ಅದೆಲ್ಲವೂ ನಮ್ಮ ಅರಿವಿಗೆ ಬರುವ ಹೊತ್ತಿಗೆ ಕಾಲ ಮಿಂಚಿಹೋಗಿರುತ್ತದೆ.
ಇಂದೋರ್-ನಲ್ಲಿ ಸಂಭವಿಸಿದ ಸಾವುಗಳಿಗೆ ಬರಗಾಲವಾಗಲಿ, ಪ್ರಕೃತಿ ವಿಕೋಪವಾಗಲಿ ಕಾರಣವಲ್ಲ. ಬದಲಾಗಿ ನಿವಾಸಿಗಳ ದೂರಿಗೆ ತಿಂಗಳುಗಳಿಂದ ತೋರಿದ ನಿರ್ಲಕ್ಷ್ಯ, ಒಳಚರಂಡಿ ಪಕ್ಕದಲ್ಲೇ ಹಾದುಹೋಗಿದ್ದ ನೀರಿನ ಕೊಳವೆಮಾರ್ಗಗಳು ಮತ್ತು ಅರ್ಧದಲ್ಲೇ ಕುಂಠಿತಗೊಂಡ ಟೆಂಡರ್ ಪ್ರಕ್ರಿಯೆಗಳು ದುರಂತಕ್ಕೆ ಕಾರಣವಾಗಿವೆ. ಕಮೂ ಅವರ ಕಾದಂಬರಿಯ ʼಒರಾನ್ʼ ಎಂಬ ಅಲ್ಜೀರಿಯಾದ ಕರಾವಳಿ ನಗರದಲ್ಲಿ ಪ್ಲೇಗ್ ರೋಗವು ದೈನಂದಿನ ಜೀವನದ ವಾಹಿನಿಗಳ ಮೂಲಕವೇ ಹರಡಿರುವಂತೆ ಇಂದೋರ್ ನಲ್ಲಿ ಕೂಡ ಜನರಿಗೆ ನೀರು ತಲುಪಿಸಬೇಕಿದ್ದ ಅದೇ ಜಾಲ ಜೀವಗಳನ್ನು ಬಲಿತೆಗೆದುಕೊಂಡಿದೆ. ಇದು ಭಾರತದಲ್ಲಿರುವ ನೀರಿನ ಬಿಕ್ಕಟ್ಟು ಕೇವಲ ಹವಾಮಾನ ವೈಪರೀತ್ಯ ಮತ್ತು ನೀರಿನ ಕೊರತೆಯನ್ನು ಮಾತ್ರವಲ್ಲದೆ ಇಡೀ ಆಡಳಿತ ವ್ಯವಸ್ಥೆಯ ವೈಫಲ್ಯದ ಕಡೆಗೆ ಬೊಟ್ಟು ಮಾಡುತ್ತದೆ.
ಭಾರತ ಇಂದು ಬಹಳ ದೊಡ್ಡ ಜಲ ಬಿಕ್ಕಟ್ಟಿನ ಅಂಚಿನಲ್ಲಿ ನಿಂತಿದೆ ಎಂಬುದು ಎಲ್ಲರೂ ಒಪ್ಪತಕ್ಕ ಸಂಗತಿ. ಇದು ದೇಶದ ಆರ್ಥಿಕತೆ, ಆರೋಗ್ಯ, ಪರಿಸರ ಮತ್ತು ಇಡೀ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನೀರಿನ ಲಭ್ಯತೆಯ ಮಾನದಂಡಗಳ ವಿಚಾರದಲ್ಲಿ ಭಾರತವು ವಿಶ್ವದಲ್ಲಿಯೇ ಅತಿ ಕಳಪೆ ನಿರ್ವಹಣೆ ನೀಡುವ ದೇಶಗಳಲ್ಲಿ ಒಂದಾಗಿದೆ. ತಲಾವಾರು ನೀರಿನ ಲಭ್ಯತೆಯಲ್ಲಿ 180 ದೇಶಗಳ ಪೈಕಿ ಭಾರತ 133ನೇ ಸ್ಥಾನದಲ್ಲಿದೆ. ಅದೇ ರೀತಿ ನೀರಿನ ಗುಣಮಟ್ಟದಲ್ಲಿ 122 ದೇಶಗಳ ಪೈಕಿ ಕೊನೆಯ (120) ಸಾಲಿನಲ್ಲಿ ನಿಂತಿದೆ. ಇದು ನಮ್ಮ ದೇಶದ ಜಲ ಆಡಳಿತದ ಬಿಕ್ಕಟ್ಟು ಎಷ್ಟು ಗಂಭೀರ ಸ್ವರೂಪದಲ್ಲಿದೆ ಎಂಬುದರ ಪ್ರತೀಕವಾಗಿದೆ.
ಹಳ್ಳ ಹಿಡಿದ ಸ್ಮಾರ್ಟ್ ಸಿಟಿ ಯೋಜನೆ
2025ರಲ್ಲಿ ಕೇಂದ್ರ ಸರ್ಕಾರದ ʼಸ್ಮಾರ್ಟ್ ಸಿಟಿಗಳ ಅಭಿಯಾನʼವನ್ನು ಅತ್ಯಂತ ಸಡಗರ ಸಂಭ್ರಮದಿಂದ ಪ್ರಾರಂಭಿಸಲಾಯಿತು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವನ್ನು ಪಡೆದು ನೀರು, ವಿದ್ಯುತ್, ಸಾರಿಗೆ, ವಸತಿ ಮುಂತಾದ ಮೂಲಸೌಕರ್ಯ ಮತ್ತು ಆಡಳಿತವನ್ನು ಸುಧಾರಿಸುವ ಮೂಲಕ ನೂರು ಸುಸ್ಥಿರ ಹಾಗೂ ಎಲ್ಲರನ್ನೂ ಒಳಗೊಳ್ಳುವ ನಗರಗಳನ್ನು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಆದರೆ 2024ರ ಮಾರ್ಚ್ ತಿಂಗಳ ಹೊತ್ತಿಗೆ ಆಗಿದ್ದಾದರೂ ಏನು? ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಯಾವುದೇ ವಿಶೇಷ ಅಬ್ಬರವಿಲ್ಲದೆ ಮುಕ್ತಾಯಗೊಳಿಸಲಾಯಿತು.
ಈ ಯೋಜನೆಯ ಮೌಲ್ಯಮಾಪನದ ಸಾಲುಗಳು ಹೀಗೆ ಹೇಳುತ್ತವೆ: “ಭಾರತದ ಶೇ.೮೦ರಷ್ಟು ಮೇಲ್ಮೈ ನೀರು ಕಲುಷಿತಗೊಂಡಿದೆ. ಇದರ ಪರಿಣಾಮವಾಗಿ ನೀರಿಗೆ ಸಂಬಂಧಿಸಿದ ಕಾಯಿಲೆಗಳು ಮಿತಿಮೀರಿವೆ. ಇದರಿಂದಾಗಿ ಭಾರತವು ಪ್ರತಿವರ್ಷ ಅನುಭವಿಸುತ್ತಿರುವ ನಷ್ಟ ಆರು ಬಿಲಿಯನ್ ಅಮೆರಿಕನ್ ಡಾಲರ್."”
ನಮ್ಮ ದೇಶದ ಜಲ ವಲಯವು ಎದುರಿಸುತ್ತಿರುವ ಸವಾಲುಗಳ ವಿಚಾರದಲ್ಲಿಯೂ ಅದರ ವಿಶ್ಲೇಷಣೆ ಹೀಗಿದೆ; “ನಗರ ಪ್ರದೇಶಗಳಲ್ಲಿ ನೀರಿನ ಬಳಕೆಯಲ್ಲಿ ಆಗುತ್ತಿರುವ ಹೆಚ್ಚಳ, ಪೋಲಾಗುತ್ತಿರುವ ಪ್ರಮಾಣ, ನೀರಿನಿಂದ ಹರಡುತ್ತಿರುವ ರೋಗಗಳು, ಕೈಗಾರಿಕಾ ಬೆಳವಣಿಗೆ, ರಾಜಕೀಯ ಮತ್ತು ನಿಯಂತ್ರಕ ವಿವಾದಗಳು, ಜಲಚಕ್ರದಲ್ಲಿ ಆಗುತ್ತಿರುವ ಅಸಮತೋಲನ, ಹೆಚ್ಚುತ್ತಿರುವ ನೀರಾವರಿ ಮತ್ತು ಕೃಷಿ ಚಟುವಟಿಕೆ, ತಂತ್ರಜ್ಞಾನದ ಕೊರತೆ ಮುಂತಾದ ಅಂಶಗಳು ಬಿಕ್ಕಟ್ಟಿಗೆ ದಾರಿಮಾಡಿಕೊಟ್ಟಿವೆ. ಒಂದು ಅಂದಾಜಿನ ಪ್ರಕಾರ ಭಾರತದ ಜಲ ವಲಯಕ್ಕೆ 13 ಶತಕೋಟಿ ಡಾಲರ್ ಅಮೆರಿಕನ್ ಡಾಲರ್ ಹೂಡಿಕೆಯ ಅಗತ್ಯವಿದೆ,"
ನಮ್ಮ ನೀತಿ, ಸಂಸ್ಕೃತಿ ಮತ್ತು ನಿರ್ವಹಣೆಯಲ್ಲಿ ಯಾವುದೇ ಮೂಲಭೂತ ಬದಲಾವಣೆಗಳು ಆಗದೇ ಹೋದರೆ ೨೦೩೦ರ ವೇಳೆಗೆ ಭಾರತವು ತನ್ನ ನೀರಿನ ಬೇಡಿಕೆಯ ಅರ್ಧದಷ್ಟನ್ನೂ ಪೂರೈಸಲು ವಿಫಲವಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಎಚ್ಚರಿಕೆಯ ಗಂಟೆ: ಕೃತಿಗಳ ಅವಲೋಕನ
ಈಗ ಪ್ರಸ್ತಾಪ ಮಾಡಿರುವ ಬಿಕ್ಕಟ್ಟು ಆಕಸ್ಮಿಕವೂ ಅಲ್ಲ ಅಥವಾ ಏಕಾಏಕಿ ಸಂಭವಿಸಿದ್ದೂ ಅಲ್ಲ. ಇದು ದಶಕಗಳ ಕಾಲದ ವಿವೇಕ-ವಿವೇಚನೆಯೇ ಇಲ್ಲದ ನೀತಿಗಳು, ಜನಸಂಖ್ಯೆಯ ಒತ್ತಡ ಮತ್ತು ಹವಾಮಾನ ವೈಪರೀತ್ಯದ ವೇಗವರ್ಧಿತ ಪರಿಣಾಮಗಳ ಪರಾಕಾಷ್ಠೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ನೀರಿನ ಸಮಸ್ಯೆಗಳನ್ನು ಐತಿಹಾಸಿಕ, ಪರಿಸರ ಮತ್ತು ಸಾಮಾಜಿಕ ದೃಷ್ಟಿಕೋನದಲ್ಲಿ ಮಂಡಿಸುವ ಮೂಲಕ ಅನೇಕ ಕೃತಿಗಳು ಕೂಡ ತುರ್ತು ಎಚ್ಚರಿಕೆಯ ಗಂಟೆಯನ್ನು ಬಾರಿಸಿವೆ.
ಅವುಗಳಲ್ಲಿ ಪ್ರಮುಖವಾದ ಎರಡು ಕೃತಿಗಳನ್ನು ನಾವು ಇಲ್ಲಿ ಗಮನಿಸಬಹುದು: ಮೃದುಲಾ ರಮೇಶ್ ಅವರ 'ವಾಟರ್ಶೆಡ್: ದ ಸ್ಟೋರಿ ಆಫ್ ಇಂಡಿಯಾಸ್ ವಾಟರ್ ಇನ್ ದ ಏಜ್ ಆಫ್ ಕ್ಲೈಮೇಟ್ ಚೇಂಜ್' (2023) ಮತ್ತು ಹರಿಣಿ ನಾಗೇಂದ್ರ ಹಾಗೂ ಸೀಮಾ ಮುಂಡೋಲಿ ಅವರ 'ಶೇಡ್ಸ್ ಆಫ್ ಬ್ಲೂ: ಕನೆಕ್ಟಿಂಗ್ ದ ಡ್ರಾಪ್ಸ್ ಇನ್ ಇಂಡಿಯಾಸ್ ಸಿಟೀಸ್' (2023).
ಒಂದಾನೊಂದು ಕಾಲದಲ್ಲಿ ಭಾರತದ ಜಲ ಚರಿತ್ರೆಯು ಸ್ಥಳೀಯರ ಜಾಣ್ಮೆ, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಕಲೆ ಮತ್ತು ತರಾವರಿ ನೀರು ಸಂಗ್ರಹಣಾ ವ್ಯವಸ್ಥೆಗಳಿಂದ ಕೂಡಿತ್ತು. ಐತಿಹಾಸಿಕವಾಗಿ, ಸಾಂಪ್ರದಾಯಿಕ ಕೆರೆಗಳು, ಕಲ್ಯಾಣಿಗಳು ಮತ್ತು ಸಮುದಾಯದಿಂದ ನಿರ್ವಹಿಸಲ್ಪಡುವ ಸಂಪನ್ಮೂಲಗಳು ಕಾಲಕಾಲಕ್ಕೂ ವ್ಯತ್ಯಾಸಗಳನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಕಾಲಾನಂತರದಲ್ಲಿ, ವಸಾಹತುಶಾಹಿ ನೀತಿಗಳು ಮತ್ತು ಸ್ವಾತಂತ್ರ್ಯೋತ್ತರ ಅಭಿವೃದ್ಧಿ ಮಾದರಿಗಳು ನೀರನ್ನು ಸಮುದಾಯದ ಸಂಪನ್ಮೂಲದಿಂದ ಕಿತ್ತು ಕೇಂದ್ರೀಕೃತ ಅಧಿಕಾರಶಾಹಿ ಮತ್ತು ತಾಂತ್ರಿಕ ಮಾದರಿಗಳಿಂದ ನಿಯಂತ್ರಿಸಲ್ಪಡುವ ಒಂದು 'ಸರಕ'ನ್ನಾಗಿ ಬದಲಿಸಿದವು. ಭಾರತದ ನೀರಿನೊಂದಿಗಿರುವ ಒಡನಾಟವು ಕಳೆದ 4,000 ವರ್ಷಗಳಲ್ಲಿ ಹೇಗೆ ಸ್ಥಳೀಯ ನಿರ್ವಹಣೆಯಿಂದ ಸಂಪೂರ್ಣ ಅಸಮಾನತೆಯಿಂದ ಕೂಡಿದ ವ್ಯವಸ್ಥೆಯಾಗಿ ನಾಟಕೀಯವಾಗಿ ಬದಲಾಗಿದೆ ಎಂಬುದನ್ನು ಮೃದುಲಾ ರಮೇಶ್ ಅವರ ಪುಸ್ತಕವು ಅನಾವರಣಗೊಳಿಸುತ್ತದೆ.
ನೀರು ಕೇವಲ ಸೇವೆ ಮಾತ್ರ!
ಇದೇ ವೇಳೆ, ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆ ನಗರಗಳಲ್ಲಿ ನೀರಿನ ಬೇಡಿಕೆಯನ್ನು ತೀವ್ರಗೊಳಿಸುವಂತೆ ಮಾಡಿದೆ. ಇನ್ನೊಂದು ಕಡೆ ಮಲಿನಗೊಂಡ ನದಿಗಳಿಂದ ಹಿಡಿದು ಒತ್ತುವರಿಯಾದ ಜೌಗು ಪ್ರದೇಶಗಳ ವರೆಗಿನ ಪರಿಸರದ ಮೇಲಿನ ಒತ್ತಡವು ಈ ಹಿಂದೆ ಜನವಸತಿಗಳನ್ನು ಸಲಹುತ್ತಿದ್ದ ವ್ಯವಸ್ಥೆಗಳನ್ನೇ ಇಂದು ನಾಶಪಡಿಸುತ್ತ ಸಾಗಿದೆ. ಸೀಮಾ ಮುಂಡೋಲಿ ಅವರ 'ಶೇಡ್ಸ್ ಆಫ್ ಬ್ಲೂʼ ಕೃತಿಯು ಭಾರತದ ನಗರಗಳ ವೈವಿಧ್ಯಮಯ ಚಿತ್ರಣವನ್ನು ಪ್ರಸ್ತುತಪಡಿಸುತ್ತ ನಾವು ಕೈಗೊಳ್ಳುವ ಯೋಜನಾ ತೀರ್ಮಾನಗಳು ಜಲಮೂಲಗಳ ಜೊತೆಗಿನ ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಹೇಗೆ ಮರೆಮಾಚಿವೆ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಈ ನಿರ್ಧಾರಗಳು ನೀರನ್ನು ಒಂದು ಜೀವಂತ ಸಾಮಾಜಿಕ-ಪರಿಸರ ವ್ಯವಸ್ಥೆ ಎಂದು ನೋಡುವುದಕ್ಕೆ ಬದಲಾಗಿ ಅದನ್ನೊಂದು ʼಸೇವೆʼಯಾಗಿ ಮಾತ್ರ ಪರಿಗಣಿಸಿವೆ.
ಒಂದು ರೀತಿಯಲ್ಲಿ ಈ ಕೃತಿಗಳು ಒಂದು ಮೂಲಭೂತ ಸತ್ಯವನ್ನು ಬಯಲಿಗೆಳೆಯುವ ಪ್ರಯತ್ನ ಮಾಡುತ್ತವೆ; ಭಾರತದ ಜಲ ಬಿಕ್ಕಟ್ಟು ಕೇವಲ ನೀರಿನ ಅಭಾವದ ಸಮಸ್ಯೆಯಲ್ಲ, ಬದಲಾಗಿ ಅದು ಆಡಳಿತ, ಇತಿಹಾಸ, ಸಂಸ್ಕೃತಿ, ಹವಾಮಾನ ಮತ್ತು ಅಸಮಾನತೆಯ ಸಮಸ್ಯೆಯನ್ನು ಕೂಡ ತಳಕುಹಾಕಿಕೊಂಡಿದೆ.
ಭಾರತದ ಜಲ ಪರಂಪರೆಯು ಅತ್ಯಂತ ಸಮೃದ್ಧವೂ, ಪರಿಸರಕ್ಕೆ ಪೂರಕವೂ ಆಗಿತ್ತು. ಸಿಂಧೂ ನಾಗರಿಕತೆಯ ವಿಶಾಲ ನಗರ ಯೋಜನೆಗಳಿಂದ ಆರಂಭಿಸಿ ದಖನ್ ಮತ್ತು ರಾಜಸ್ತಾನದ ಕೆರೆಗಳು ಮತ್ತು ಕಲ್ಯಾಣಿಗಳ ವರೆಗೆ ಸ್ಥಳೀಯ ಜಲ ವ್ಯವಸ್ಥೆಗಳನ್ನು ಋತುಮಾನದ ಬದಲಾವಣೆ ಮತ್ತು ವೈವಿಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡೇ ವಿನ್ಯಾಸಗೊಳಿಸಲಾಗಿತ್ತು. ಈ ಎಲ್ಲ ವ್ಯವಸ್ಥೆಗಳು ಸಮುದಾಯದ ಸ್ಥಿರಕಾರಕಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಹವಾಮಾನ ಎಷ್ಟೇ ಸವಾಲಿನದ್ದಾಗಿದ್ದರೂ ಕೃಷಿ ಮತ್ತು ವಸತಿಗೆ ಆಸರೆಯಾಗಿದ್ದವು.
ಆದರೆ ಕಾಲಕ್ರಮೇಣ, ಅದರಲ್ಲೂ ವಿಶೇಷವಾಗಿ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಸ್ಥಳೀಯ ಪರಿಸರ ಸೂಕ್ಷ್ಮತೆಗಳನ್ನು ನಿರ್ಲಕ್ಷಿಸುವ ದೊಡ್ಡ ದೊಡ್ಡ ಅಣೆಕಟ್ಟುಗಳು ಮತ್ತು ಕಾಲುವೆಗಳಂತಹ ಕೇಂದ್ರೀಕೃತ ಎಂಜಿನಿಯರಿಂಗ್ ಮಾದರಿಗಳ ಮುಂದೆ ಈ ಸಾಂಪ್ರದಾಯಿಕ ವ್ಯವಸ್ಥೆಗಳು ಮೂಲೆಗುಂಪಾಗಿ ಹೋದವು.
ಬ್ರಿಟಿಷ್ ಆಡಳಿತವು ಲಾಭ ಮತ್ತು ಕೇಂದ್ರೀಕೃತ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತ ಹೋದ ಹಾಗೆ ಹೇಗೆ ಸಮುದಾಯ ಆಧಾರಿತ ಜಲ ನಿರ್ವಹಣೆ ದುರ್ಬಲಗೊಂಡಿತು ಮತ್ತು ಅದರ ಸ್ಥಾನದಲ್ಲಿ ಶೋಷಣೆಗೆ ಕುಮ್ಮುಕ್ಕು ನೀಡುವ ಮತ್ತು ಕಟ್ಟುನಿಟ್ಟಿನ ರಚನೆಗಳನ್ನು ಜಾರಿಗೆ ತಂದಿತು ಎಂಬುದನ್ನು ಮೃದುಲ ರಮೇಶ್ ಅವರು ಐತಿಹಾಸಿಕ ವಿವರಣೆಯ ಮೂಲಕ ತಿಳಿಸುತ್ತಾರೆ.
ಅಂತರ್ಜಲದ ಮೇಲೆ ಮಿತಿಮೀರಿದ ಒತ್ತಡ
ಸ್ವಾತಂತ್ರೋತ್ತರ ಭಾರತವು ಇದೇ ಪರಂಪರೆಯನ್ನು ಬಳವಳಿಯಾಗಿ ಪಡೆಯಿತು. ೧೯೫೦ರ ಬಳಿಕ ಆಹಾರ ಭದ್ರತೆ ಮೇಲಿನ ಹೆಚ್ಚಿನ ಗಮನ, ಅದರಲ್ಲೂ ವಿಶೇಷವಾಗಿ ಹಸಿರು ಕ್ರಾಂತಿಯ ನಂತರ ಪಂಜಾಬ್ ಮತ್ತು ಹರ್ಯಾಣದಂತಹ ಪರಿಸರಕ್ಕೆ ಸೂಕ್ತವಲ್ಲದ ಪ್ರದೇಶಗಳಲ್ಲಿ ಅಕ್ಕಿ ಮತ್ತು ಗೋಧಿಯಂತಹ ಹೆಚ್ಚುವರಿ ಇಳುವರಿ ನೀಡುವ ಧಾನ್ಯದ ಬೆಳೆಗಳಿಗೆ ಆದ್ಯತೆ ನೀಡಿತು. ಇದು ನೀರಾವರಿ ಬೇಡಿಕೆಯನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿತು. ಅಲ್ವಾವಧಿಯಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಈ ಬದಲಾವಣೆ ನಿರ್ಣಾಯಕವಾಗಿದ್ದರೂ ಇದು ಅಂತರ್ಜಲ ಮತ್ತು ಮೇಲ್ಮೈ ನೀಡಿನ ಮೇಲೆ ಮಿತಿಮೀರಿದ ಒತ್ತಡವನ್ನು ಹೇರಿತು ಎಂಬುದೂ ದಿಟ. ಇದೇ ಹೊತ್ತಿನಲ್ಲಿ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದ ಮಳೆ ಮತ್ತು ಇನ್ನು ಕೆಲವು ಕಡೆ ಬರಗಾಲವನ್ನು ಹೊಂದಿರುವ ಮುಂಗಾರನ್ನು ನಂಬಿಕೊಂಡಿರುವ ಭಾರತದ ಜಲವಿಜ್ಞಾನಕ್ಕೆ ನೀರಿನ ಸಮಾನ ವಿತರಣೆಯನ್ನು ಕಷ್ಟಕರವಾಗಿಸಿತು.
ಹವಾಮಾನ ವೈಪರೀತ್ಯವು ಈ ವಿರೋಧಾಭಾಸವನ್ನು ಇನ್ನಷ್ಟು ಹದಗೆಡುವಂತೆ ಮಾಡಿತು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿದ್ದರೆ ಒಣ ಪ್ರದೇಶಗಳು ಮತ್ತಷ್ಟು ಬರಡಾಗುತ್ತಿವೆ. ಇದರಿಂದಾಗಿ ಭಾರತದ ಕೆಲವು ಭಾಗಗಳು ಏಕಕಾಲದಲ್ಲಿ ಭೀಕರ ಬರಗಾಲ ಮತ್ತು ವಿನಾಶಕಾರಿ ಪ್ರವಾಹವನ್ನು ಎದುರಿಸಬೇಕಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಭಾರತದ ನೀರಿನ ಈ ವೈವಿಧ್ಯಮಯ ಮತ್ತು ಪುರಾತನ ಮಾದರಿಯನ್ನು ಆಧುನಿಕ ಯೋಜನಾ ನಿರೂಪಣೆಯಲ್ಲಿ ತಪ್ಪಾಗಿ ವಾಖ್ಯಾನಿಸಲಾಗುತ್ತಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕಾರಿಯಾಗಿ ಮಾಡಿದೆ ಎಂದು ಮೃದುಲಾ ರಮೇಶ್ ಅವರು ಪ್ರತಿಪಾದಿಸುತ್ತಾರೆ.
'ಪ್ರೆಶರ್ ಕುಕ್ಕರ್'ಗಳಾದ ನಗರ ಪ್ರದೇಶಗಳು
ಗ್ರಾಮೀಣ ಪ್ರದೇಶಗಳು ಅಂತರ್ಜಲ ಕುಸಿತ ಮತ್ತು ಬರಗಾಲದ ಅಪಾಯವನ್ನು ಎದುರಿಸುತ್ತಿದ್ದರೆ, ಭಾರತದ ನಗರಗಳು ನೀರಿನ ಅಭಾವ, ಮಾಲಿನ್ಯ ಮತ್ತು ಅಸಮಾನತೆಯ ಪರಿಣಾಮದಿಂದಾಗಿ ಪರಿಸರ ಸಂಬಂಧಿತ 'ಪ್ರೆಶರ್ ಕುಕ್ಕರ್'ಗಳಾಗಿ ಪರಿಣಮಿಸಿವೆ. 'ಶೇಡ್ಸ್ ಆಫ್ ಬ್ಲೂ' ಕೃತಿಯಲ್ಲಿ ನಾಗೇಂದ್ರ ಮತ್ತು ಮುಂಡೋಲಿ ಅವರು ದೆಹಲಿಯ ಯಮುನಾ ನದಿಯಿಂದ ಆರಂಭಿಸಿ ಉದಯಪುರದ ಪಿಚೋಲಾ ಸರೋವರದವರೆಗೆ ಭಾರತದ ನಗರಗಳ ಜಲದೃಶ್ಯಗಳನ್ನು ಪರಿಶೀಲಿಸಿದ್ದಾರೆ. ನಗರೀಕರಣವು ನೀರನ್ನು ಜೀವನದಿಂದ ಹೇಗೆ ಬೇರ್ಪಡಿಸಿದೆ ಎಂಬುದನ್ನು ಅವರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ.
ನಗರಗಳು ಸಾಮಾನ್ಯವಾಗಿ ನೀರನ್ನು ಕೇವಲ ಒಂದು ಇಂಜಿನಿಯರಿಂಗ್ ಸವಾಲು ಎನ್ನುವ ರೀತಿಯಲ್ಲಿ ನೋಡುತ್ತಿವೆ. ಜಲಾಶಯಗಳನ್ನು ನಿರ್ಮಿಸುವುದು, ದೂರದ ಪ್ರದೇಶಗಳಿಂದ ದುಬಾರಿ ವೆಚ್ಚದಲ್ಲಿ ನೀರು ತರಿಸುವುದು ಮತ್ತು ಅದನ್ನು ಕೇವಲ ಒಂದು 'ಬಳಕೆಯ ವಸ್ತು'ವನ್ನಾಗಿ ನೋಡುವುದು. ಇಂತಹ ತಾಂತ್ರಿಕ-ಕೇಂದ್ರಿತ ಮನಸ್ಥಿತಿಯು ಜಲಮೂಲಗಳು ಸಮುದಾಯದ ಆಚರಣೆಗಳಲ್ಲಿ, ಸ್ಥಳೀಯ ಹವಾಮಾನ ನಿಯಂತ್ರಣದಲ್ಲಿ ಮತ್ತು ಜೀವವೈವಿಧ್ಯತೆಯಲ್ಲಿ ವಹಿಸುತ್ತಿದ್ದ ಜೀವಂತ ಸಾಂಸ್ಕೃತಿಕ ಮತ್ತು ಪರಿಸರ ಪಾತ್ರಗಳನ್ನು ನಿರ್ಲಕ್ಷಿಸಿದೆ. ಸಂಸ್ಕರಿಸದ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಉಂಟಾಗುವ ಮಾಲಿನ್ಯವು ಒಮ್ಮೆ ಜೀವನಾಡಿಯಾಗಿದ್ದ ನದಿ ಮತ್ತು ಸರೋವರಗಳನ್ನು ಹೇಗೆ ವಿಷಕಾರಿಯಾಗಿ ಮಾಡಿದೆ ಮತ್ತು ಆ ಮೂಲಕ ಪರಿಸರದ ಆರೋಗ್ಯ ಹಾಗೂ ಸಮುದಾಯದ ನಂಬಿಕೆಯನ್ನು ಹೇಗೆ ನಾಶಪಡಿಸಿದೆ ಎಂಬುದನ್ನು ಲೇಖಕರು ಎತ್ತಿ ತೋರಿಸಿದ್ದಾರೆ.
(ಮುಂದುವರಿದ ಭಾಗ- 'ಭಾರತದ ಜಲ ಬಿಕ್ಕಟ್ಟು Part-2:ನೀರಿನ ಲಭ್ಯತೆಯಿಂದ ಅಸಮಾನತೆ ಸೃಷ್ಟಿ!' ಪ್ರಕಟವಾಗಲಿದೆ.)

