INDIA ಒಕ್ಕೂಟ ಸಕ್ರಿಯ | ಎನ್ ಡಿ ಎ ವಿರುದ್ಧ ಮತವಿಭಜನೆ ತಡೆಗೆ ಒಗ್ಗಟ್ಟಿನ ಮಂತ್ರ
ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ವಿಚಾರದ ನೆಪದಲ್ಲಿ ತನ್ನ ಬಂಧ ಸಡಿಲಿಸಿಕೊಂಡು, ದೇಶದ ಮತದಾರರ ಮುಂದೆ ಹಾಗೂ ಆಡಳಿತರೂಢ ಎನ್ ಡಿ ಎ ನೇತೃತ್ವದ ಬಿಜೆಪಿ ಸರ್ಕಾರದ ಮುಂದೆ ಒಗ್ಗಟ್ಟಿನ ಪ್ರದರ್ಶನ ಮಾಡಲಾರದೆ ಸೋತುಸುಣ್ಣವಾಗಿದ್ದ ವಿರೋಧ ಪಕ್ಷಗಳ INDIA ಒಕ್ಕೂಟ, ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ಬಂಧನದಿಂದ ಮತ್ತೆ ಒಟ್ಟಾದಂತೆ ತೋರುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ INDIA ಬ್ಲಾಕ್ ನಾಯಕರು, ದೆಹಲಿಯಲ್ಲಿ ಕೇಜ್ರೀವಾಲ್ ಪ್ರತಿಭಟನೆಯನ್ನು ಪ್ರತಿಭಟಿಸಿ ನಡೆಸಿದ ಹೋರಾಟವೇ ಇದಕ್ಕೆ ಸಾಕ್ಷಿ.
ಕರ್ನಾಟಕದಲ್ಲಿ ತಮ್ಮ ನಾಯಕರ ಹಾದಿಯನ್ನು ತುಳಿದಿರುವ INDIA ಒಕ್ಕೂಟದ ರಾಜ್ಯ ನಾಯಕರು ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಚುನಾವಣೆಯಲ್ಲಿ ಮಣಿಸಲು ಒಂದಾಗಿವೆ. ಧರ್ಮ ನಿರಪೇಕ್ಷ ರಾಜಕಾರಣ, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು, ವಿವಿಧತೆಯಲ್ಲಿ ಏಕತೆಯ ಸಿದ್ಧಾಂತದಲ್ಲಿ ನಂಬಿಕೆ ಇರುವ ಎಲ್ಲ ಪಕ್ಷಗಳು ಒಂದಾಗಿ, ಇಂಥ ಘನವಾಗ ಮಾನವೀಯ ಮೌಲ್ಯಗಳನ್ನು ನಂಬುವ ಮತಗಳು ಅನಾವಶ್ಯಕವಾಗಿ ವಿಭಜನೆಯಾಗದಂತೆ ಎಚ್ಚರವಹಿಸಿ, ಒಟ್ಟಾಗಿ ಮತಯಾಚಿಸಲು INDIA ಬ್ಲಾಕ್ ನಾಯಕರು ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ.
ಈ ಪ್ರಕ್ರಿಯೆ ನಾಯಕತ್ವ ವಹಿಸಿಕೊಂಡಿರುವವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್. INDIA ಒಕ್ಕೂಟದ ಹತ್ತು ಮಿತ್ರ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ಸಮನ್ವಯ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಚುನಾವಣೆ ಮುಗಿಯುವವರೆಗೆ, ಪ್ರತಿ ಮೂರು ದಿನಕ್ಕೊಮ್ಮೆ ಅಥವ ವಾರಕ್ಕೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಎಲ್ಲ ಇಪ್ಪತ್ತೆಂಟು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಅವರ ಪರವಾಗಿ ಪ್ರಚಾರ ನಡೆಸುವುದಾಗಿ ಎಲ್ಲ ಹತ್ತು ಪಕ್ಷಗಳ ನಾಯಕರೂ ಒಪ್ಪಿಕೊಂಡಿದ್ದಾರೆ, ಎಂದು ಕಾಂಗ್ರೆಸ್ ಪಕ್ಷದ ವಾಕ್ತಾರ ರಮೇಶ್ ಬಾಬು ಅವರು ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ʼಭಾರತ್ ಜೋಡೋʼ ಭವನದಲ್ಲಿ ನಡೆದ ಈ INDIA ಒಕ್ಕೂಟದ ಸಭೆಯಲ್ಲಿ, ಎನ್ ಸಿ ಪಿ ಮುಖಂಡರಾದ ಸಿ ಎಸ್ ಇನಾಂದಾರ್, ಡಿಎಂಕೆ ಕಾರ್ಯದರ್ಶಿ ರಾಮಸ್ವಾಮಿ ನಟೇಸನ್, ಫಾರ್ವರ್ಡ್ ಬ್ಲಾಕ್ ಕಾರ್ಯದರ್ಶಿ ಜಿ. ಆರ್. ಶಿವಶಂಕರ್, ಸಿಪಿಎಂ ಕಾರ್ಯದರ್ಶಿ ಬಸವರಾಜು, ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಯಾಕೂಬ್ ಗುಲ್ವಾಡಿ, ಸಿಪಿಐ (ಎಂಎಲ್) ಅಧ್ಯಕ್ಷ ಕ್ಲಿಫ್ಟನ್ ರೊಸೇರಿಯೊ, ಸಮಾಜವಾದಿ ಪಕ್ಷದ ಅಧ್ಯಕ್ಷ ಮಂಜಯ್ಯ ಯಾದವ್ ಹಾಜರಿದ್ದರು.
ಈ ಸಮನ್ವಯ ಸಮಿತಿಯ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದರೆ, “ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜನತಾದಳ (ಎಸ್) ಜತೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿದಿತ್ತು. ಈ ಮೈತ್ರಿಕೂಟದ ಅಭ್ಯರ್ಥಿಯಾದ ಜನತಾ ದಳದ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತುಮಕೂರಿನಲ್ಲಿ ಕೇವಲ 12,೦೦೦ ಮತಗಳಿಂದ ಸೋಲನ್ನು ಕಂಡಿದ್ದರು. ಆಶ್ಚರ್ಯವೆಂದರೆ. ಇದೇ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ 17೦೦೦ ಮತಗಳನ್ನು ಗಳಿಸಿದ್ದರು” ಎಂದು ರಮೇಶ್ ಬಾಬು ನೆನಪಿಸಿಕೊಳ್ಳುತ್ತಾರೆ. ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಸೋತ ನಿದರ್ಶನವೂ ನಮ್ಮ ಮುಂದಿದೆ ಎನ್ನುವ ರಮೇಶ್ ಬಾಬು ಅವರು 2004ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಬಿ. ರಾಚಯ್ಯನವರ ಮಗ ಎ. ಆರ್ ಕೃಷ್ಣಮೂರ್ತಿ ಕಾಂಗ್ರೆಸ್ ಅಭ್ಯರ್ಥಿ ಧೃವನಾರಾಯಣ್ ಅವರೆದುರು ʼಒಂದು ʼ ಮತದಿಂದ ಸೋತು ದಾಖಲೆ ಸ್ಥಾಪಿಸಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಕಳೆದ ಚುನಾವಣೆಯಲ್ಲಿ ದಿನೇಶ್ ಗುಂಡೂರಾವ್ (105) ಅಲ್ಪಮತಗಳಿಂದ ಜಯಗಳಿಸಿದ್ದನ್ನು, ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಅವರು ಅತಿಕಡಿಮೆ ಎನ್ನುವ ಹದಿನಾರು ಮತಗಳಿಂದ ಪರಾಜಿತಗೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಒಂದೊಂದು ಮತವೂ ಅಪೂರ್ವ ಎನ್ನುವುದು ಅವರ ಅನಿಸಿಕೆ.
ಕರ್ನಾಟಕದ 28 ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನವನ್ನಾದರೂ ಗೆಲ್ಲಲು, ಈ ಸಮನ್ವಯ ಸಮಿತಿ ಸಕ್ರಿಯವಾಗಿ ಕೆಲಸಮಾಡುವುದು ಅತ್ಯಗತ್ಯ ಎನ್ನುವುದು ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ.