
ಸಾವಿರಾರು ಜನರ ಬದುಕನ್ನೇ ಬದಲಿಸಿದ ಅಂಗಾಂಗ ದಾನ: ದೇಶಕ್ಕೇ ಮಾದರಿಯಾದ ತೆಲಂಗಾಣ
ಜಿಲ್ಲಾ ಮಟ್ಟದ ಅಂಗಾಂಗ ಕಸಿ ಕೇಂದ್ರ ಮತ್ತು ರಾಜ್ಯಮಟ್ಟದ ಸಂಪೂರ್ಣ ಅಂಗಾಂಗ ಕಸಿಗಾಗಿಯೇ ಇರುವ ಸಂಸ್ಥೆಯ ತನಕ ತೆಲಂಗಾಣವು ಭಾರತದಲ್ಲಿಯೇ ಅಂಗಾಂಗ ದಾನದ ಜೀವನಾಡಿಯಾಗಿ ಹೊರಹೊಮ್ಮಿದೆ.
ಇದು ಅಸಾಧಾರಣ ಔದಾರ್ಯದ ಕಥೆ. ಇದನ್ನು ಬರೆದಿರುವ ರಾಜ್ಯ ತೆಲಂಗಾಣ. ಪ್ರೀತಿಪಾತ್ರರೊಬ್ಬರ ‘ಬ್ರೇನ್ ಡೆಡ್’ ಎಂದು ವೈದ್ಯರು ಘೋಷಿಸಿದ ಒಂದು ನಿರ್ಣಾಯಕ ಕ್ಷಣದಿಂದ ಇದು ಆರಂಭವಾಗುತ್ತದೆ ಮತ್ತು ಅಪರಿಚಿತರ ಜೀವ ಉಳಿಸುವ ಕಡೆಗೆ ದಿಟ್ಟ ಹೆಜ್ಜೆ ಇಡುತ್ತದೆ...
ಇದು ರಾಜ್ಯದ ‘ಜೀವದಾನ’ ಎಂಬ ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಅಂಗಾಂಗಗಳನ್ನು ದಾನ ಮಾಡುವ ಮೂಲಕ ತೆಲಂಗಾಣದ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿರುವ ಕುಟುಂಬಗಳು ದುರಂತವನ್ನು ಭರವಸೆಯ ಕಿರಣವನ್ನಾಗಿ ಪರಿವರ್ತಿಸಿದ ಘಳಿಗೆ. ಕೆಲವೊಮ್ಮೆ ಅತ್ಯಂತ ನೋವಿನ ಅಸಹನೀಯ ಕ್ಷಣದಲ್ಲಿಯೂ ಕೈಗೊಂಡ ದಿಟ್ಟ ನಿಲುವು...
ಅದು ಈ ವರ್ಷದ ಆಗಸ್ಟ್ ತಿಂಗಳ ಒಂದು ತೇವಭರಿತ ಸಂಜೆ. 37 ವರ್ಷ ವಯಸ್ಸಿನ ಕೃಷ್ಣ ಸುಮಂತ್ ಭುವನಗಿರಿ ಅವರು ಹೈದರಾಬಾದಿನ ಮಿಯಾಪುರದ ಮೂಲಕ ತಮ್ಮ ಮನೆ ಕಡೆಗೆ ಹೊರಟಿದ್ದರು. ಆಗ ಅವರ ಬೈಕ್ ಸ್ಕಿಡ್ ಆಗಿ ನೆಲಕ್ಕುರುಳಿದರು. ಆಸ್ಪತ್ರೆಗೆ ಕರೆತಂದ ಅವರನ್ನು ‘ಬ್ರೇನ್ ಡೆಡ್’ (ಮಿದುಳು ನಿಷ್ಕ್ರಿಯ) ಎಂದು ವೈದ್ಯರು ಘೋಷಿಸಿದರು. ಅಂತಹ ನಿರ್ಣಾಯಕ ಹಂತದಲ್ಲಿ ಆತನ ಪಾಲಕರು ಕೈಗೊಂಡ ಬಹಳ ದೊಡ್ಡ ನಿರ್ಧಾರವೆಂದರೆ ಮಗನ ಹೃದಯ, ಕಿಡ್ನಿ, ಲಿವರ್ ಮತ್ತು ಶ್ವಾಶಕೋಶವನ್ನು ದಾನಮಾಡಬೇಕು ಎಂದು. ಆ ನಿರ್ಧಾರವೇ ಏಳು ಮಂದಿಗೆ ಮರುಜೀವ ನೀಡುತ್ತದೆ.
ಇದಕ್ಕೂ ಕೆಲವು ವಾರಗಳಿಗೂ ಮೊದಲು ಮೆಹಬೂಬ್ ನಗರ ಜಿಲ್ಲೆಯ 22 ವರ್ಷದ ಕಾವಲಿ ಶಿವಪ್ರಸಾದ್ ಅವರ ಮೇಲೆ ಹಿಂಸಾತ್ಮಕ ದಾಳಿ ಸಂಭವಿಸುತ್ತದೆ. ಹಾಗೆ ಮೃತಪಟ್ಟ ಆತನ ಮಿದುಳು ನಿಷ್ಕ್ರಿಯ ಎಂದು ಘೋಷಿಸುತ್ತಾರೆ ಡಾಕ್ಟರು. ಮಗನನ್ನು ಕಳೆದುಕೊಂಡ ದುಃಖದಲ್ಲಿಯೇ ಆತನ ತಂದೆ ಅಂಗಾಂಗ ದಾನ ಮಾಡಲು ತೀರ್ಮಾನಿಸುತ್ತಾರೆ. ಅದರಿಂದ ಬದುಕುಳಿದಿದ್ದು ಮೂರು ಮಂದಿಯ ಅಮೂಲ್ಯ ಜೀವ.
ಇಂತಹ ಹತ್ತಾರು ವೈಯಕ್ತಿಕ ಕಥೆಗಳು ತೆಲಂಗಾಣದ ಆಸ್ಪತ್ರೆಗಳಲ್ಲಿ ಕೇಳಬರುತ್ತವೆ. ಈ ಕಥೆಗಳು ಕರುಣೆ ಮತ್ತು ದುಃಖವನ್ನು ಪರಸ್ಪರ ಬೆಸೆದುಕೊಂಡಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ತೆಲಂಗಾಣ ಇಡೀ ದೇಶಕ್ಕೆ ಮಾದರಿ
ತೆಲಂಗಾಣದ ದಾಖಲೆಯನ್ನು ಯಾರೂ ಸರಿಗಟ್ಟುವಂತಿಲ್ಲ. ಅಂಗಾಂಗ ದಾನದಲ್ಲಿ ಈ ರಾಜ್ಯ ಭಾರತದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸರಾಸರಿ 4,88 ಅಂಗಾಂಗ ದಾನದ ದತ್ತಾಂಶವನ್ನು ಅದು ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ 0.8ಕ್ಕಿಂತ ಹೆಚ್ಚಾಗಿದೆ. 2013ರಿಂದ 1691 ಮಿದುಳು ನಿಷ್ಕ್ರಿಯ ವ್ಯಕ್ತಿಗಳ ಕುಟುಂಬಗಳು ದಾನ ಮಾಡಿವೆ. ಇದರಿಂದ ಹೊಸ ಜೀವನ ಪಡೆದವರು 6372 ಮಂದಿ. ಸರ್ಜನ್ ಗಳು 2538 ಮೂತ್ರಪಿಂಡಗಳು, 1550 ಯಕೃತ್ತುಗಳು, 230 ಹೃದಯಗಳು, 403 ಶ್ವಾಸಕೋಶಗಳು, 14 ಮೇದೋಜೀರಕ ಗ್ರಂಥಿಗಳು, 170 ಹೃದಯ ಕವಾಟಗಳು ಮತ್ತು 1467 ಕಣ್ಣುಗಳನ್ನು ಯಶಸ್ವಿಯಾಗಿ ದಾನ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಹಸಿರು ಕಾರಿಡಾರ್ (ವಾಹನ ದಟ್ಟಣೆ ಇಲ್ಲದ ವಿಶೇಷ ಮಾರ್ಗಗಳು)ಮೂಲಕ ಅಂಗಾಂಗ ದಾನಕ್ಕಾಗಿ ಕಾದು ಕುಳಿತವರಿಗೆ ತುರ್ತಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಇದೀಗ ತೆಲಂಗಾಣ ಆರೋಗ್ಯ ಇಲಾಖೆ ಈ ಯಶಸ್ಸನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಇತ್ತೀಚಿನ ವಿದ್ಯಮಾನಗಳಲ್ಲಿ ಹೈದರಾಬಾದ್ ನಲ್ಲಿ ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲಿಯೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಅನುಮೋದನೆ ನೀಡಲಾಗಿದೆ. ವಾರಂಗಲ್ಲಿನ ಎಂಜಿಎಂ ಆಸ್ಪತ್ರೆ, ಅದಿಲಾಬಾದಿನ ರಿಮ್ಸ್ ಮತ್ತು ಇತರ ಸರ್ಕಾರಿ ಆಸ್ಪತ್ರೆಗಳಲ್ಲೂ ಇಂತಹ ಸೇವೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಹಾಗೆ ಮಾಡುವುದರಿಂದ ರೋಗಿಗಳು ಜೀವ ಉಳಿಸಿಕೊಳ್ಳಲು ದೂರ ಪ್ರಯಾಣ ಮಾಡಬೇಕಾದ ಅಗತ್ಯವಿರುವುದಿಲ್ಲ.
ಜಿಲ್ಲಾ ಮಟ್ಟದಲ್ಲಿ ವಿಸ್ತರಣೆ
ಈ ಪ್ರಯತ್ನದ ಜೀವನಾಡಿಯಾಗಿರುವುದು ಜೀವನದಾನ ಕಾರ್ಯಕ್ರಮ. ಅಭೂತಪೂರ್ವ ದಾಖಲೆಗಳಿಂದ ಉತ್ತೇಜಿತರಾಗಿರುವ ರಾಜ್ಯ ಸರ್ಕಾರ ರಾಜಧಾನಿಯಿಂದ ಹೊರಗಡೆ ಹೆಚ್ಚು ಅಂಗಾಂಗ ಕಸಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಪ್ರತಿಯೊಂದು ಸಂಯೋಜಿತ ಜಿಲ್ಲಾ ಕೇಂದ್ರಗಳಲ್ಲಿ ಹೊಸ ಅಂಗಾಂಗ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಈ ಜಿಲ್ಲೆಗಳ ಅಕ್ಕ-ಪಕ್ಕದಲ್ಲಿರುವ ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಯನ್ನು ಸರ್ಕಾರ ಇನ್ನಷ್ಟು ಸರಳಗೊಳಿಸುತ್ತಿದೆ. ರಾಜ್ಯದ ಕಾವಲಿನೊಂದಿಗೆ ಮತ್ತಷ್ಟು ಶಸ್ತ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ಹೊಂದಲಾಗಿದೆ.
ವಾರಂಗಲ್ಲಿನ ಎಂಜಿಎಂ ಮತ್ತು ಅದಿಲಾಬಾದಿನ ರಿಮ್ಸ್ ನಲ್ಲಿ ಶೀಘ್ರವೇ ನಿಯಮಿತ ಅಂಗಾಂಗ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಇಂತಹ ಅಂಗಾಂಗ ದಾನ ಮಾಡುವ ಕುಟುಂಬಗಳಿಗೆ ಸರ್ಕಾರದಿಂದ ಹೆಚ್ಚಿನ ಬೆಂಬಲ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ದಾಮೋದರ್ ರಾಜ್ ನರಸಿಂಹ ಅವರು ತಿಳಿಸಿದ್ದಾರೆ. ಹೊಸದಾಗಿ ರಚಿಸಲಾಗಿರುವ ರಾಜ್ಯ ಅಂಗಾಂಗ ಮತ್ತು ಜೀವಕೋಶ ಕಸಿ ಸಂಸ್ಥೆ ರಾಜ್ಯದಾದ್ಯಂತ ನಡೆಯುವ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ಅವರು ಪ್ರಕಟಿಸಿದ್ದಾರೆ.
ದಾನ ಮಾಡಿದ ಪ್ರತಿಯೊಂದು ಅಂಗಾಂಗಕ್ಕೂ ಒಂದು ನಿರ್ದಿಷ್ಟ ಸರ್ಜಿಕಲ್ ತಂಡವನ್ನು ರಚಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಹಿರಿಯ ವೈದ್ಯರು ಆಪರೇಷನ್ ಗಳ ಉಸ್ತುವಾರಿ ಕೈಗೊಳ್ಳುತ್ತಾರೆ.
ನ್ಯಾಯಾಂಗ ವ್ಯವಸ್ಥೆ ಮತ್ತು ದಾನಿಗಳ ಬೆಂಬಲ
ತೆಲಂಗಾಣವು ರಾಷ್ಟ್ರೀಯ ಮಾನವ ಅಂಗಾಂಗ ಕಾಯ್ದೆಗೆ ಅನುಗುಣವಾಗಿ ಹೊಸ ರಾಜ್ಯ ನಿರ್ದಿಷ್ಟವಾದ ನಿಯಮಗಳನ್ನು ರೂಪಿಸುತ್ತಿದೆ. ಪರಿಷ್ಕೃತ ನಿಯಮಗಳ ಅಡಿಯಲ್ಲಿ, ಕೇವಲ ಹತ್ತಿರದ ಕುಟುಂಬ ಸದಸ್ಯರು ಮಾತ್ರವಲ್ಲದೆ ಅಜ್ಜ-ಅಜ್ಜಿಯರು ಕೂಡ ಅಂಗಗಳನ್ನು ದಾನ ಮಾಡಲು ಅಥವಾ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಈ ಕಾನೂನು 'ಅಂಗಾಂಗ ಬದಲಾವಣೆ'ಗೆ ಸಹ ಅವಕಾಶ ನೀಡುತ್ತದೆ, ಇದು ಎರಡು ಹೊಂದಾಣಿಕೆಯ ಕುಟುಂಬಗಳು ನೇರ ಹೊಂದಾಣಿಕೆ ಸಾಧ್ಯವಿಲ್ಲದಿದ್ದಾಗ ದಾನಿಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಅಂಗಾಂಗ ದಾನಿಗಳ ಅಂತ್ಯಕ್ರಿಯೆಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡುವುದಾಗಿ ಪ್ರತಿಜ್ಞೆ ಮಾಡಿದೆ ಮತ್ತು ಖಾಸಗಿ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳು ಕಸಿ ಮಾರ್ಗಸೂಚಿಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುತ್ತದೆ. ಈ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಸಂಸ್ಥೆಗಳು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಕಾನೂನು ಸುಧಾರಣೆ ಮತ್ತು ಸಹಾನುಭೂತಿಯ ನೀತಿಯ ಈ ಸಂಯೋಜನೆಯು ದಾನಿಗಳು ಮತ್ತು ಅಂಗಾಂಗ ಸ್ವೀಕರಿಸುವವರು ಇಬ್ಬರನ್ನೂ ರಕ್ಷಿಸುವ ಗುರಿ ಹೊಂದಿದೆ.
ಜಾಗೃತಿ ಮತ್ತು ಸಾರ್ವಜನಿಕ ಸಹಭಾಗಿತ್ವ
ಈ ಯೋಜನೆಯು ತನ್ನ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಜನರಲ್ಲಿ ಅರಿವು ಮೂಡಿಸುವುದು ಮುಖ್ಯ ಎಂದು ಜೀವದಾನ ಯೋಜನೆಯ ಸಂಯೋಜಕರಾದ ಡಾ. ಶ್ರೀ ಭೂಷಣ್ ರಾಜು ಅವರು ಹೇಳುತ್ತಾರೆ. ಈ ಸಂಬಂಧ ವ್ಯಾಪಕವಾದ ಪ್ರಚಾರವನ್ನು ಯೋಜಿಸಲಾಗಿದೆ. ಕುಟುಂಬಗಳನ್ನು ಅಂಗಾಂಗ ದಾನಿಗಳಾಗಿ ನೋಂದಣಿ ಮಾಡಿಕೊಳ್ಳುವುದಕ್ಕೆ ಉತ್ತೆಜನ ನೀಡಲು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರನ್ನು ತೊಡಗಿಸಿಕೊಳ್ಳಲಾಗುತ್ತದೆ.
ಮಿದುಳಿನ ನಿಷ್ಕ್ರಿಯತೆ ನಂತರ ದಾನಕ್ಕೆ ಒಪ್ಪಿಗೆ ನೀಡಿದ ಅವರ ಧೈರ್ಯಕ್ಕಾಗಿ ದಾನಿಗಳ ಕುಟುಂಬಗಳನ್ನು ಸಾರ್ವಜನಿಕವಾಗಿ ಗೌರವಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಮ್ಮೇಳನ, ವಿಚಾರಗೋಷ್ಠಿಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಮೂಲಕ ಸಂದೇಶವನ್ನು ಹರಡುವಂತೆ ಮಾಡಲು ಮತ್ತು ಅಂಗಾಂಗ ದಾನದ ಕಲ್ಪನೆಯನ್ನು ಸರಳಗೊಳಿಸಲು ಯೋಜನೆ ರೂಪಿಸಲಾಗಿದೆ.
ಅಂಗಾಂಗ ದಾನವು ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂಬುದು ಅಖಿಲ ಭಾರತ ಅಂಗಾಂಗ ದಾನಿಗಳ ಸಂಘದ ಸಂಸ್ಥಾಪಕರಾದ ಗುಡೂರು ಸೀತಾಮಹಾಲಕ್ಷ್ಮಿ ಅವರ ಆಶಯ. ಸರ್ಕಾರವು ದಾನಿಗಳಿಗೆ ರಾಜ್ಯ ಸರ್ಕಾರದ ಗೌರವಗಳೊಂದಿಗೆ ಅಂತ್ಯಕ್ರಿಯೆಗಳನ್ನು ನಡೆಸಲು, ಶಾಲಾ ಪ್ರವೇಶ ಮತ್ತು ಚಾಲನಾ ಪರವಾನಗಿ ನಮೂನೆಗಳಲ್ಲಿ ಅಂಗಾಂಗ ದಾನದ ಕಾಲಂ ಸೇರಿಸಲು ಮತ್ತು ಜನಗಣತಿ ಸಮೀಕ್ಷೆಗಳಿಗೆ ಅಂಗಾಂಗ ದಾನದ ಬಗ್ಗೆ ಪ್ರಶ್ನೆಗಳನ್ನು ಸೇರಿಸಬೇಕು ಎಂಬುದು ಅವರ ಒತ್ತಾಯ.
ಈ ಸಂಬಂಧ ಆನ್ಲೈನ್ ನೋಂದಣಿ ವೇದಿಕೆ ರಚಿಸಬೇಕು ಮತ್ತು ಅಂಗಾಂಗ ದಾನವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಮನವಿ ಮಾಡುವ ಅವರು, ಸರ್ಕಾರಿ ಕಚೇರಿಗಳು ಹಾಗೂ ಆಸ್ಪತ್ರೆಗಳಲ್ಲಿ ಈ ಬಗ್ಗೆ ಫಲಕಗಳನ್ನು ಹಾಕಿ ಪ್ರಚಾರ ಮಾಡಬೇಕು ಎಂಬ ಸಲಹೆಯನ್ನೂ ಮುಂದಿಡುತ್ತಾರೆ.
ಇನ್ನೂ ಕಾಯುತ್ತಿರುವ ಸಾವಿರಾರು ಜೀವಗಳು
ರಾಜ್ಯ ಸರ್ಕಾರ ಇಷ್ಟೆಲ್ಲ ಪ್ರಯತ್ನಗಳ ಹೊರತಾಗಿಯೂ, ಬೇಡಿಕೆ ಪಟ್ಟಿಯೇ ದೊಡ್ಡದಿದೆ. ಪ್ರಮುಖ ಅಂಗಾಂಗಗಳು ವಿಫಲವಾದ ಕಾರಣ ಮತ್ತು ಸಮಯಕ್ಕೆ ಸರಿಯಾರಿ ಕಸಿ ಲಭ್ಯವಾಗದ ಕಾರಣ ಪ್ರತಿ ವರ್ಷ 500,000 ಭಾರತೀಯರು ಸಾಯುತ್ತಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು. ತೆಲಂಗಾಣವೊಂದರಲ್ಲೇ 3835 ರೋಗಿಗಳು ಈಗಲೂ ಸೂಕ್ತ ಅಂಗಾಂಗ ದಾನಕ್ಕಾಗಿ ಕಾಯುತ್ತಿದ್ದಾರೆ. ಅವರಲ್ಲಿ 2715 ಜನರಿಗೆ ಮೂತ್ರಕೋಶ, 926 ಮಂದಿಗೆ ಪಿತ್ಥಕೋಶ, ನೂರು ಮಂದಿಗೆ ಹೃದಯ, 79 ರೋಗಿಗಳಿಗೆ ಶ್ವಾಸಕೋಶ ಮತ್ತು 15 ಮಂದಿಗೆ ಮೇದೋಜೀರಕ ಗ್ರಂಥಿಗಳ ಅಗತ್ಯವಿದೆ. ಈ ಅಷ್ಟೂ ಮಂದಿ ಜೀವನ್ಮರಣದ ಹೋರಾಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಒಬ್ಬ ಮಿದುಳು ನಿಷ್ಕ್ರಿಯ ವ್ಯಕ್ತಿ ತನ್ನ ಅಂಗಾಂಗಗಳ ದಾನದಿಂದ ಏಳು ಮಂದಿಯ ಜೀವಗಳನ್ನು ಉಳಿಸಬಲ್ಲ. ಅಂದರೆ ಆತ ತನ್ನ ಕಣ್ಣು, ಹೃದಯ, ಮೂತ್ರಕೋಶ, ಪಿತ್ಥಕೋಶ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಸಣ್ಣಕರಳು, ಮೂಳೆಗಳು ಮತ್ತು ಚರ್ಮವನ್ನೂ ದಾನಮಾಡಬಹುದಾಗಿದೆ. ರೋಗಿಗಳು ಜೀವದಾನ ಅಥವಾ ಮೋಹನ್ ಪ್ರತಿಷ್ಠಾನದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನಿಮ್ಸ್ ಮತ್ತು ಓಸ್ಮಾನಿಯಾದಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಅಂಗ ಕಸಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ರಾಜ್ಯದ 23 ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ಮರಣಾನಂತರದ ಜೀವನ ಕೇವಲ ರೂಪಕವಲ್ಲ
ತೆಲಂಗಾಣದಲ್ಲಿ ಪ್ರತಿ ವರ್ಷ ಅಂಗಾಂಗ ಕಸಿಗೆ ಒಳಗಾಗುತ್ತಿರುವವರ ಸಂಖ್ಯೆ ಏರುಗತಿಯಲ್ಲಿದೆ. 2013ರಲ್ಲಿ ಅಂಗಾಂಗ ಅಳವಡಿಸಿಕೊಂಡವರ ಸಂಖ್ಯೆ ಕೇವಲ 189 ಆಗಿತ್ತು. ಕಳೆದ ವರ್ಷ ಅದು 725ಕ್ಕೇರಿದೆ, ಈ ವರ್ಷ ವೈದ್ಯರು ಈಗಾಗಲೇ 527 ಅಂಗ ಕಸಿ ಮಾಡಿ ಮುಗಿಸಿದ್ದಾರೆ. ಜೀವನದಾನ ಕಾರ್ಯಕ್ರಮ ಹಾಗೂ ವೈದ್ಯಕೀಯ ತಂಡದ ನಿರಂತರ ಶ್ರಮದಿಂದ ಸಾವಿರಾರು ಮಂದಿ ತಮ್ಮ ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ. ಇದರಿಂದ ಸಾವಿರಾರು ರೋಗಿಗಳು ಭರವಸೆಯ ಕಣ್ಣುಗಳಿಂದ ಕಾಯುವಂತಾಗಿದೆ.
ಸರ್ಕಾರದ ನೀತಿ, ವೈದ್ಯಕೀಯ ಮೂಲಸೌಲಭ್ಯ ಮತ್ತು ಮನುಷ್ಯನ ಸಹಾನುಭೂತಿ ಜೊತೆಯಲ್ಲಿ ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತೆಲಂಗಾಣ ಸ್ಪಷ್ಟ ಉದಾಹರಣೆಯಾಗಿದೆ. ಹೈದರಾಬಾದ್ ನಿಂದ ಅದಿಲಾಬಾದ್ ವರೆಗಿನ ಆಸ್ಪತ್ರೆಗಳಲ್ಲಿ ಕುಟುಂಬಗಳು ಕಣ್ಣೀರು ಒರೆಸಿಕೊಳ್ಳುತ್ತ, ದುಃಖವನ್ನು ಭರಿಸುತ್ತ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
ರಾಜ್ಯದ ಆಸ್ಪತ್ರೆಯ ನಿಶ್ಯಬ್ಧ ಕಾರಿಡಾರ್-ಗಳಲ್ಲಿ ಮರಣಾನಂತರದ ಜೀವನ ಕೇವಲ ರೂಪಕ ಮಾತ್ರವಲ್ಲ ಅದೊಂದು ದೈನಂದಿನ ವಾಸ್ತವ ಎಂಬುದನ್ನು ತೆಲಂಗಾಣವೆಂಬ ರಾಜ್ಯ ಪ್ರತಿದಿನವೂ ಸಾಬೀತುಮಾಡುತ್ತಿದೆ.