
ಒನಪು-ಒಯ್ಯಾರದ ಸೀರೆಗೆ ಮಾಡರ್ನ್ ಟಚ್: ಸಂಪ್ರದಾಯ-ದೈವಿಕತೆಯ ಬ್ಲೆಂಡ್
(ಒಂಬತ್ತು ಗಜಗಳ ಸಾಂಪ್ರದಾಯಿಕ ಸೀರೆಯಾಗಿರಲಿ ಅಥವಾ ಆರು ಗಜಗಳ ಆಧುನಿಕ ರೂಪವಾಗಿರಲಿ, ಸೀರೆಯ ಪ್ರತಿ ಮಡಿಕೆ, ನೆರಿಗೆ, ಪದರ ಮತ್ತು ಸುಕ್ಕುಗಳಿಗೆ ಅದರದ್ದೇ ಆದ ಸೌಂದರ್ಯವಿದೆ, ಒನಪಿದೆ, ಒಯ್ಯಾರವಿದೆ. ಹೊಸ ತಲೆಮಾರಿನ ವಿನ್ಯಾಸಕಾರರು ಇದನ್ನು ವಿನೂತನವಾಗಿ ರೂಪಿಸುತ್ತಿರುವುದು ಈಗಿನ ಟ್ರೆಂಡ್.
ನಂಬಿಕೆಯೊಂದಿಗೆ ತಳಕು ಹಾಕಿಕೊಂಡಿರುವ ಫ್ಯಾಶನ್ ಕೇವಲ ದೇಗುಲದ ಘಂಟಾನಾದಕ್ಕೆ ಅಥವಾ ಧರ್ಮಾಚರಣೆಯ ಪೋಷಾಕುಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದನ್ನೂ ಮೀರಿ ರನ್ವೇ ಮೇಲೆ ಗತ್ತು-ಗೈರತ್ತಿನ ಹೆಜ್ಜೆಯಿರಿಸಿದ್ದು ಇಲ್ಲಿಯೂ ಆಧ್ಯಾತ್ಮಿಕತೆಯನ್ನು ಬಣ್ಣ, ವಿನ್ಯಾಸ ಅಥವಾ ತೆಳ್ಳನೆಯ ನೆಯ್ಗೆಯಷ್ಟೇ ಘನ-ಗಾಂಭೀರ್ಯತೆಯಿಂದ ಪರಿಶೋಧಿಸಬೇಕಾದ ವಿಷಯವೆಂದು ಪರಿಗಣಿಸಲಾಗಿದೆ.
ಪ್ಯಾರಿಸ್ ಹೌಟ್ ಕೌಚರ್ ವೀಕ್ 2024ರಲ್ಲಿ ಭಾಗಿಯಾದ ವೈಶಾಲಿ ಎಸ್ ಅವರು 'ಸತೋರಿ' ಹೆಸರಿನ ಸಂಗ್ರಹವನ್ನು ಅನಾವರಣಗೊಳಿಸಿದರು. ಝೆನ್ ಬೌದ್ಧ ತತ್ವಶಾಸ್ತ್ರದ ಪ್ರೇರಣೆಯನ್ನು ಹೊಂದಿದ್ದ ಇದರಲ್ಲಿ ಸೀರೆಗಳೂ ಇದ್ದವು. ಈ ಸೀರೆಗಳನ್ನು ಶಾಂತಿ ಮತ್ತು ಪರಿವರ್ತನೆಯ ಸಂಕೇತಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಅವು ಸರಳತೆ ಮತ್ತು ಪಾರದರ್ಶಕ ತತ್ವಗಳನ್ನು ಪ್ರತಿಬಿಂಬಿಸುತ್ತಿದ್ದವು. ಇದು ಭಾರತೀಯ ಕೈಮಗ್ಗದ ಸಂಕೀರ್ಣ ಕರಕುಶಲತೆಯನ್ನು ಕೂಡ ಮುನ್ನೆಲೆಗೆ ತಂದಿತ್ತು.
ನ್ಯೂಯಾರ್ಕ್ನಲ್ಲಿ, ಬಿಭು ಮೊಹಾಪಾತ್ರ ಅವರು ತಮ್ಮ ಫಾಲ್-ವಿಂಟರ್ 2025ರ ಸಂಗ್ರಹಕ್ಕಾಗಿ ಸ್ಫೂರ್ತಿ ಪಡೆದಿದ್ದು ತೀರ್ಥಯಾತ್ರೆಯಿಂದ. ಇದು ಭಕ್ತರು ಪವಿತ್ರ ಯಾತ್ರಾಸ್ಥಳಗಳಿಗೆ ಕೈಗೊಳ್ಳುವ ಪ್ರಯಾಣವನ್ನು ನೆನಪಿಸುತ್ತದೆ. ಅವರ ವಿನ್ಯಾಸಗಳು ಕೇವಲ ಸಾಂಪ್ರದಾಯಿಕ ಸಂಕೇತಗಳನ್ನು ಮಾತ್ರ ಬಿಂಬಿಸುತ್ತಿರಲಿಲ್ಲ. ಬದಲಾಗಿ, ಒಂದು ಪುಣ್ಯಕ್ಷೇತ್ರದ ಕಡೆಗೆ ಕೈಗೊಳ್ಳುವ ಪ್ರಯಾಣದ ಲಯ ಮತ್ತು ಮೌನವನ್ನು ಸೂಚಿಸುವಂತಿದ್ದವು.
ಇವರಷ್ಟೇ ಅಲ್ಲದೆ ಇನ್ನೂ ಕೆಲವು ಪ್ರಮುಖ ವಿನ್ಯಾಸಕಾರರು ಕೂಡ ಇದೇ ರೀತಿಯ ಮಾರ್ಗಗಳನ್ನು ಅನುಸರಿಸಿದ್ದಾರೆ. ರಾಹುಲ್ ಮಿಶ್ರಾ ಅವರು ದೇವತೆಗಳು ಮತ್ತು ಬ್ರಹ್ಮಾಂಡದ ಶಕ್ತಿಗಳನ್ನು ತಮ್ಮ ವಿನ್ಯಾಸಗಳಲ್ಲಿ ಬಳಸಿಕೊಂಡಿದ್ದಾರೆ, ಗೌರವ್ ಗುಪ್ತಾ ಅವರಿಗೆ ಪುರಾಣಗಳೇ ಸ್ಫೂರ್ತಿ. ಅಮಿತ್ ಅಗರ್ವಾಲ್ ಅವರು 'ಶೂನ್ಯ' ಅಥವಾ ಅಭಾವ ಸ್ಥಿತಿಯ ಪರಿಕಲ್ಪನೆಗಳನ್ನು ಪ್ರತಿನಿಧಿಸಲು ಶಿಲ್ಪಾಕೃತಿಯ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ
ಮೈದುಂಬಿಕೊಂಡ ಸಮಕಾಲೀನ ಶೈಲಿ
ಒಂಬತ್ತು ಗಜಗಳ ಸಾಂಪ್ರದಾಯಿಕ ಸೀರೆಯಾಗಿರಲಿ ಅಥವಾ ಆರು ಗಜಗಳ ಆಧುನಿಕ ರೂಪವಾಗಿರಲಿ, ಸೀರೆಯ ಪ್ರತಿ ಮಡಿಕೆ, ನೆರಿಗೆ, ಪದರ ಮತ್ತು ಸುಕ್ಕುಗಳಿಗೆ ಅದರದ್ದೇ ಆದ ಸೌಂದರ್ಯವಿದೆ, ಒನಪಿದೆ, ಒಯ್ಯಾರವಿದೆ. ಹೊಸ ತಲೆಮಾರಿನ ವಿನ್ಯಾಸಕಾರರು ಇದನ್ನು ವಿನೂತನವಾಗಿ ರೂಪಿಸುತ್ತಿದ್ದು, ಇಂದಿನ ಸೀರೆಗಳು ಸಂಪ್ರದಾಯ ಮತ್ತು ಸಮಕಾಲೀನ ಶೈಲಿಯನ್ನು ಮೈತುಂಬಿಕೊಂಡಿವೆ. ಈಗೀಗಂತೂ ಕಾಲದ ಎಲ್ಲೆಯನ್ನು ಮೀರಿ, ಕೈಮಗ್ಗ ಮತ್ತು ಯಂತ್ರದಿಂದ ತಯಾರಿಸಿದ ಸೀರೆಗಳು ಹೊಸ ಮಾದರಿ, ಶೈಲಿ, ವಸ್ತು ಮತ್ತು ತಂತ್ರಗಳೊಂದಿಗೆ ಜನಮನ ಸೂರೆಗೊಳ್ಳುತ್ತಿವೆ.
ಹಾಫ್ ಸಾರಿ ಕಲ್ಪನೆಯಿಂದ ಸ್ಫೂರ್ತಿ ಪಡೆದ ಲೆಹೆಂಗಾ ಇದಾಗಿದೆ. ಇದು ಧರ್ಮಪ್ರಚಾರಕ್ಕಾಗಿ ಇಸ್ರೇಲ್ನಿಂದ ಭಾರತಕ್ಕೆ ಬಂದು ಇಲ್ಲಿ ಮೊದಲ ಚರ್ಚ್ ನಿರ್ಮಿಸಿದ ಸೇಂಟ್ ಥಾಮಸ್ ಅವರ ಚಿತ್ರವನ್ನು ಒಳಗೊಂಡಿದೆ. ಈ ಉಡುಪು ಈ ನಾಡಿನ ಸಿರಿಯನ್ ಕ್ರಿಶ್ಚಿಯನ್ನರ ಮೂಲಕ್ಕೆ ಸಾಕ್ಷಿಯಾಗಿದೆ.
ಹಿಂದಿನ ಕಾಲದ ಸೀರೆಗಳಿಗೆ ಈಗ ಢಾಳಾದ ಬಣ್ಣಗಳು, ನವನವೀನ ಕಟ್ಟಿಂಗ್, ಪ್ರಯೋಗಾತ್ಮಕ ವಿನ್ಯಾಸಗಳು ಮತ್ತು ಕರಕುಶಲತೆ ಎಳೆಗಳ ಮೂಲಕ ಹೊಸ ರೂಪ ನೀಡಲಾಗುತ್ತಿದೆ. ಹಿಂದೆಲ್ಲ ಒಂದು ಸೊಗಸಾದ ಪೋಷಾಕಿನಂತೆ ಮಾತ್ರ ಕಾಣುತ್ತಿದ್ದ ಸೀರೆಗೆ ಇಂದು ಶೈಲಿಯ ಮೂಲಕ ಹೊಸ ವ್ಯಾಖ್ಯಾನ ನೀಡಲಾಗುತ್ತಿದೆ. ಅವೀಗ ಸೃಜನಶೀಲತೆಯ ಕ್ಯಾನ್ವಾಸ್ ಆಗಿವೆ ಮತ್ತು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕತೆಯ ಸ್ಪರ್ಶವನ್ನೂ ಅದಕ್ಕೆ ನೀಡಲಾಗುತ್ತಿದೆ.
ದೇವರ ಪೂಜೆ ಮತ್ತು ಹಬ್ಬ-ಹರಿದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸುವುದು ವಾಡಿಕೆಯಾಗಿದ್ದರೂ, ಜವಳಿ ಉದ್ಯಮವು ಹಳೆ ಕಾಲದ ಪವಿತ್ರ ಸಂವೇದನೆಗಳನ್ನು ಹೊಸ ಕಾಲದ ಅಭಿವ್ಯಕ್ತಿಗಳಾಗಿ ಪರಿವರ್ತಿಸುವ ಪ್ರಯತ್ನವಾಗಿ ಪ್ರಜ್ಞಾಪೂರ್ವಕ ರೀತಿಯಲ್ಲಿ ಹೊಸತನವನ್ನು ಅಳವಡಿಸಿಕೊಂಡಿದೆ. ಸೀರೆಯು ಕಾಲಾನಂತರದಲ್ಲಿ ಅತ್ಯಾಧುನಿಕ ವಿನ್ಯಾಸ, ಬಣ್ಣ ಮತ್ತು ನವೀನ ನೇಯ್ಗೆ ಹಾಗೂ ಕಸೂತಿ ತಂತ್ರಗಳೊಂದಿಗೆ ಗಮನಾರ್ಹ ರೂಪಾಂತರವನ್ನು ಕಂಡಿದೆ.
ಕಲಾತ್ಮಕ ಅಭಿವ್ಯಕ್ತಿಯ ಕ್ಯಾನ್ವಾಸ್
ಗ್ರಾಮೀಣ ಭಾರತದ ಜಾನಪದ ಸುರುಳಿ ಚಿತ್ರಕಲೆಗಳನ್ನು ನೆನಪಿಸುವ ರೀತಿಯಲ್ಲಿ, ಪುರಾಣ, ದಂತಕಥೆಗಳು, ಥೀಮ್ ಮತ್ತು ಕಲ್ಪನೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ಪೋಣಿಸುವುದರಿಂದ ಸೀರೆಯು ನಿರಂತರವಾಗಿ ಕಲಾತ್ಮಕ ಅಭಿವ್ಯಕ್ತಿಯ ಕ್ಯಾನ್ವಾಸ್ ಆಗಿ ವಿಕಸನಗೊಂಡಿದೆ. ನುರಿತ ಕುಶಲಕರ್ಮಿಗಳು ಮತ್ತು ಹೊಲಿಗೆಗಾರರಿಂದ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಇತ್ತೀಚಿನ ಆಕರ್ಷಣೆಯು ಅದಕ್ಕೆ ದೈವೀಕ ಉಡುಪಿನ ಸ್ವರೂಪವನ್ನು ನೀಡಿದೆ.
“ಧಾರ್ಮಿಕ ಸಂಕೇತ, ಪ್ರತಿಮಾಶಿಲ್ಪ, ರೇಖೀಯ ಮತ್ತು ಆಲಂಕಾರಿಕ ಚಿತ್ರಗಳನ್ನು ತುಂಬಿಕೊಂಡ ಸೀರೆಯು ಒಂದು ಪವಿತ್ರ ಉಡುಪಾಗಿ ತನ್ನ ಮೂಲಕ್ಕೆ ಮರಳುತ್ತಿದೆ. ಈ ಕಾಲದ ಸೀರೆಯು, ಮಾನವೀಯತೆಯೇ ತಮ್ಮ ಧರ್ಮವೆಂದು ಭಾವಿಸಿ, ಬಟ್ಟೆಯನ್ನೇ ಒಂದು ಶೈಲಿಯನ್ನಾಗಿ ಪರಿವರ್ತಿಸುವ ಇಂದಿನ ಯುವ ಪೀಳಿಗೆಗೆ, ಧ್ಯಾನದ ಒಂದು ರೂಪವೂ ಆಗಬಲ್ಲದು." ಎಂದು ಫ್ಯಾಷನ್ ಡಿಸೈನರ್ ಅಂಜಲಿ ಫೋಗಟ್ ಹೇಳುತ್ತಾರೆ.ಸಾಂಪ್ರದಾಯಿಕ ಕಡುಗೆಂಪು ಅಥವಾ ಹಳದಿ ಬಣ್ಣದ ಬಿಳಿ ಸೀರೆಗಳು, ಇಲ್ಲವೇ ಮಸುಕಾದ, ಕ್ರೋಮ್, ಕೇಸರಿ ಮತ್ತು ಸಾಸಿವೆ ಬಣ್ಣಗಳ ಸೀರೆಗಳನ್ನು ಮೀರಿ, ಸಮಕಾಲೀನ ವಿನ್ಯಾಸಕರು ವಿಭಿನ್ನ ಯೋಚನೆ ಮತ್ತು ಅಸಾಧಾರಣ ವ್ಯಾಖ್ಯಾನಗಳೊಂದಿಗೆ ಹೊಸತನದ ಮೆರಗು ನೀಡುತ್ತಿದ್ದಾರೆ.
ಸೀರೆ ಸಂಗ್ರಹಕ್ಕೆ ಚಿಹ್ನೆ ಮತ್ತು ಸಂಕೇತಗಳೊಂದಿಗೆ ಗಾಢತೆ ಮತ್ತು ಅರ್ಥವನ್ನು ನೀಡಿದಾಗ, ಸೀರೆಯ ಕಟ್ಟಾ ಪ್ರಿಯರು ರಾಧಾ-ಕೃಷ್ಣ, ಶಿವ ಶಕ್ತಿ, ಮತ್ತು ಸ್ವಸ್ತಿಕಗಳಂತಹ ನಮೂನೆಗಳ ಅಮರ ಆಕರ್ಷಣೆಯನ್ನು ಸುಲಭವಾಗಿ ಅಪ್ಪಿಕೊಳ್ಳಬಹುದು. ದೇವಸ್ಥಾನದ ವಿನ್ಯಾಸಗಳಿರುವ ಬಾರ್ಡರ್ ಮತ್ತು ಧಾರ್ಮಿಕ ಕಥೆಗಳನ್ನು ವಿವರಿಸುವ ಸೆರಗು ಆಕರ್ಷಕ, ಮೇಲ್ನೋಟದ ವಿನ್ಯಾಸಗಳ ಗೊಂದಲದಿಂದ ಹೊರತಾಗಿ ಎದ್ದು ಕಾಣುತ್ತವೆ. "ಪ್ರಪಂಚದಾದ್ಯಂತ, ಫ್ಯಾಷನ್ ಉತ್ಸಾಹಿಗಳು ಮತ್ತು ಕಲಾ ಪ್ರಿಯರು ಕಲಾತ್ಮಕ ವಿಕಸನವನ್ನು ಬಯಸಿ, ಅತಿಯಾದ ಬೇಡಿಕೆಗಳ ಗೊಂದಲ ಹಾಗೂ ವೇಗದ ಫ್ಯಾಷನ್ನ ಗಲಿಬಿಲಿಗಳಿಂದ ಮುಕ್ತಿ ಬಯಸುತ್ತಿದ್ದಾರೆ," ಎಂದು ಅಂಜಲಿ ಹೇಳುತ್ತಾರೆ.
ಗತಕಾಲದ ಪಿಸುಮಾತು
ತೀರ್ಥಯಾತ್ರಾ ಸ್ಥಳಗಳ ಗೋಡೆಗಳ ಮೇಲಿರುವ ಪುರಾಣ ದೃಶ್ಯಗಳು ಮತ್ತು ಆಧ್ಯಾತ್ಮಿಕ ತತ್ವಗಳನ್ನು ಬಿಂಬಿಸುವ ಹಸಿಚಿತ್ರಗಳು ಗತಕಾಲದ ಪಿಸುಮಾತುಗಳನ್ನು ಹೇಳುತ್ತವೆ. ವಿನ್ಯಾಸಕರು ಈಗ ಅಂತಹ ಚಿತ್ರಗಳನ್ನು ಸ್ಯಾಟಿನ್ ದಾರಗಳಲ್ಲಿ ನೇಯ್ದ ಸೀರೆಗಳ ಮೇಲೆ ಬಳಸುತ್ತಿದ್ದಾರೆ. ರಾಧಾ ಮತ್ತು ಕೃಷ್ಣರ ಸಂಬಂಧವನ್ನು ಮೃದುವಾದ ಬಣ್ಣಗಳಲ್ಲಿ ತೋರಿಸಲಾಗಿದ್ದು, ಕುಂಚದ ಬಣ್ಣಗಳು ಬೃಂದಾವನದ ಸೌಂದರ್ಯವನ್ನು ಸ್ಮರಿಸುತ್ತವೆ. ಜೊತೆಗೆ, ಹೊಳೆಯುವ ರೇಷ್ಮೆಯ ಮೇಲೆ ಸ್ಫಟಿಕದ ನಮೂನೆಗಳು ಮಿನುಗಿ, ದಿವ್ಯವಾದ ಹೊಳಪನ್ನು ಸೃಷ್ಟಿಸುತ್ತವೆ.
ಮಹಾದೇವ ಎಂದೂ ಕರೆಯಲ್ಪಡುವ ಪರಮೇಶ್ವರ ಪುರುಷ ಮತ್ತು ಸ್ತ್ರೀ ಶಕ್ತಿಗಳ ಸಮತೋಲನದ ಸಂಕೇತ. ಫೋಗಟ್ ಅವರ ಬಳಿ ಇಂತಹ ಅನೇಕ ಅಪರೂಪದ ಸಂಗ್ರಹಗಳಿವೆ. ಜಟಿಲವಾದ ತಾಂತ್ರಿಕ ರೇಖಾಗಣಿತ ಮತ್ತು ಪವಿತ್ರ ಸಂಕೇತಗಳು ವೈದಿಕ ಮಂತ್ರಗಳ ಹುರುಪಿನ ಬ್ರಷ್ಸ್ಟ್ರೋಕ್ಗಳು ಮತ್ತು ಸೂಕ್ಷ್ಮವಾದ ಕ್ಯಾಲಿಗ್ರಫಿಯೊಂದಿಗೆ ಮಿಳಿತವಾದ ಸಂಗ್ರಹವು ಇದಕ್ಕೆ ಸಾಕ್ಷಿ ಹೇಳುತ್ತವೆ.
ಡಿಸೈನರ್ ಶಿಲ್ಪಿ ಗುಪ್ತಾ ಅವರು ಕಮಲ, ಧ್ಯಾನದ ಘಂಟೆಗಳು, ಪಾರಿವಾಳ, ತ್ರಿಶೂಲ, ಶಿಲುಬೆ, ಭಗವಾನ್ ಗೌತಮ ಬುದ್ಧನ ಚಿತ್ರ ಅಥವಾ ಬೃಂದಾವನದಲ್ಲಿ ರಾಧಾ-ಕೃಷ್ಣರ ಪ್ರೀತಿಯ ಚಿತ್ರಣದಿಂದ ಅಲಂಕರಿಸಿದ ಸೀರೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. "ಸೀರೆಯು ತನ್ನ ಗಾಂಭೀರ್ಯವನ್ನು ತಗ್ಗಿಸದೆ ಆಧ್ಯಾತ್ಮಿಕ ಚಿಹ್ನೆಗಳನ್ನು ಸಲೀಸಾಗಿ ಹೊಂದಿರಬಲ್ಲದು. ಸೀರೆಯು ಭಾವನೆಗಳು, ಇತಿಹಾಸ ಮತ್ತು ಸಂಪ್ರದಾಯಗಳ ಅಭಿವ್ಯಕ್ತಿ, ಎಲ್ಲವನ್ನೂ ಅಡ್ಡ ಮತ್ತು ನೇರ ಎಳೆಗಳೊಂದಿಗೆ ನೇಯಲಾಗುತ್ತದೆ," ಎಂದು ಅವರು ಹೇಳುತ್ತಾರೆ.
ಬೈಬಲ್‌ನ ಪದ್ಯದ ಸಾಲುಗಳು
ಕ್ರಿಶ್ಚಿಯನ್ ಸಂಕೇತಗಳನ್ನು ಪ್ರಿಂಟ್ ಮಾಡಿದ ಸೀರೆಗಳಿಗೆ ಮದುವೆ ಸೀಸನ್ನಲ್ಲಿ ಅಪಾರ ಬೇಡಿಕೆ ಇರುತ್ತದೆ. ಇ-ಕಾಮರ್ಸ್ ಮತ್ತು ಆನ್ಲೈನ್ ಶಾಪಿಂಗ್ನಿಂದಾಗಿ, ವಧುಗಳು ಪವಿತ್ರ ಶಿಲುಬೆ, ಬಿಳಿ ಪಾರಿವಾಳ ಮತ್ತು ಬೈಬಲ್ನ ಪದ್ಯದ ಸಾಲುಗಳನ್ನು ಹೊಂದಿರುವ ಸೀರೆಗಳಿಗಾಗಿ ಆರ್ಡರ್ ಮಾಡುತ್ತಿದ್ದಾರೆ.
"ನಿಮ್ಮ ಸಂಭ್ರಮದ ದಿನದಲ್ಲಿ ನೀವು ಹಜಾರದಲ್ಲಿ ನಡೆಯುವಾಗ, ಆಕರ್ಷಕವಾಗಿ ಕಾಣಲು ಮತ್ತು ನಿಮಗಾಗಿ ಜತನದಿಂದ ಆಯ್ಕೆಮಾಡಿದ ಅತ್ಯಂತ ಸೂಕ್ತವಾದ ಉಡುಪಿನಲ್ಲಿ ಖುಷ್ ಆಗಿರಲು ಬಯಸುತ್ತೀರಿ. ನಿಮ್ಮ ಆಪ್ತರು ಮತ್ತು ಆತ್ಮೀಯರು ಸುರಿಸುವ ಪ್ರೀತಿ, ವಾತ್ಸಲ್ಯ ಮತ್ತು ಶುಭಾಶಯಗಳ ಜೊತೆಗೆ, ನೀವು ಅನುಗ್ರಹಕ್ಕೆ ಒಳಗಾದವರಂತೆ ಇರಲು ಇಷ್ಟಪಡುತ್ತೀರಿ. ಆ ವಿಶೇಷ ದಿನದಂದು ದೈವತ್ವವು ನಿಮ್ಮ ಕಡೆಗಿರುವಂತೆ ಆಶಿಸುವುದಕ್ಕಿಂತ ಹೆಚ್ಚಿನದೇನನ್ನು ಬಯಸಲು ಸಾಧ್ಯ? ಗೌರವದ ಚಿತ್ರಗಳು ಮತ್ತು ಚಿಹ್ನೆಗಳು ನಮಗಾಗಿಯೇ ಮಾತನಾಡುತ್ತವೆ," ಎಂದು ಇಷ್ಟರಲ್ಲೇ ಮದುವೆಯಾಗಲಿರುವ 25 ವರ್ಷದ ಶಾಲಾ ಶಿಕ್ಷಕಿ ಜೆನ್ನಿ ಸ್ಮಿತ್ ಹೇಳುತ್ತಾರೆ.
"ಒಮ್ಮೆ ನಾನು 'ನಸ್ರಾನಿ' ಎಂಬ ಶೀರ್ಷಿಕೆಯ ಸಂಗ್ರಹವನ್ನು ಮಾಡಿದ್ದೆ, ಅದು ಕೇರಳದ ಸಿರಿಯನ್ ಕ್ಯಾಥೋಲಿಕರ ಕಥೆಯನ್ನು ಹೇಳುತ್ತಿತ್ತು. ನಾನು ಸ್ವತಃ ನಸ್ರಾನಿ (ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಸಮುದಾಯದ ಸದಸ್ಯ) ಮತ್ತು ನನ್ನ ಎಲ್ಲ ಪೂರ್ವಜರು ಇಸ್ರೇಲ್ (ಯಹೂದಿಗಳು) ಮತ್ತು ಇತರ ಪಕ್ಕದ ದೇಶಗಳಿಂದ ಬಂದವರು. ಚಿತ್ರಗಳು ಹಾಗೂ ಕ್ಯಾಥೋಲಿಕ್ ಸಂಕೇತಗಳನ್ನು ಒಳಗೊಂಡಿರುವ ಈ ಸಂಗ್ರಹಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು." ಎಂದು ಡಿಸೈನರ್ ಜೆಬಿನ್ ಜಾನಿ ನೆನಪಿಸಿಕೊಳ್ಳುತ್ತಾರೆ.
ಧಾರ್ಮಿಕ ಅಂಶಗಳು ಮತ್ತು ನಂಬಿಕೆಗಳನ್ನು ಬಣ್ಣಗಳು, ಉಲ್ಲೇಖಗಳು ಮತ್ತು ದೈವಿಕ ಶ್ಲೋಕಗಳ ಮೂಲಕ ಉಡುಪುಗಳಲ್ಲಿ ಬಿಂಬಿಸಲು ಸಾಧ್ಯವಿದೆ. "ಈಸ್ಟರ್ ಆಚರಣೆಗಳ ಸಂದರ್ಭದಲ್ಲಿ, ನಾವು ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಧರಿಸುತ್ತೇವೆ, ಏಕೆಂದರೆ ಇದು ಶಾಂತಿ, ಮುಗ್ಧತೆ, ಪರಿಶುದ್ಧತೆ ಮತ್ತು ಹೊಸ ಆರಂಭದ ಸಂಕೇತ. ಕ್ರಿಸ್ಮಸ್ನಲ್ಲೂ ಇಂತಹ ಸಂಭ್ರಮಕ್ಕಾಗಿ ಆಧ್ಯಾತ್ಮಿಕ ಉಡುಪುಗಳನ್ನು ಧರಿಸುತ್ತಾರೆ" ಎಂದು ಅವರು ಹೇಳುತ್ತಾರೆ.
ಇತ್ತೀಚೆಗೆ ಬೌದ್ಧ ಧರ್ಮದ ಚಿಹ್ನೆಗಳು ಮದುವೆ ಮತ್ತು ಹಬ್ಬದ ಉಡುಪುಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಮದುಮೆ ಸಮಾರಂಭಗಳಿಗೆ ಅಥವಾ ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಗುರುತಿಸುವ ಉಡುಪುಗಳನ್ನು ಬುದ್ಧ ಪೂರ್ಣಿಮೆಯಂದು ಧರಿಸಿದರೂ, ಬೌದ್ಧ ತತ್ವಗಳಿಂದ ಪ್ರೇರಿತವಾದ ವಸ್ತ್ರಗಳು ಶಾಂತ ಮತ್ತು ಅರ್ಥಪೂರ್ಣವೆಂದು ಕಾಣುತ್ತವೆ. "ಬೌದ್ಧಧರ್ಮದ ಬೋಧನೆಗಳು ಹತಾಶ ಮನಸ್ಸಿಗೆ ಅಮೃತದಂತೆ ಕೆಲಸ ಮಾಡುತ್ತವೆ," ಎಂದು ಸನ್ಯಾಸಿಗಳು ಹೇಳುತ್ತಾರೆ, "ಅವರು ನೊಂದ ಮನಸ್ಸು ಮತ್ತು ಜೀವನಕ್ಕೆ ಸಮತೋಲನವನ್ನು ಮರುಪೂರಣ ಮಾಡಲು ನೆರವಾಗಬಹುದು." "ಸಮಾಧಾನದಿಂದ ಕೂಡಿದ ಮನಸ್ಸು, ಸಹಾನುಭೂತಿ ಮತ್ತು ದಯೆ ಸೀರೆ ವಿನ್ಯಾಸಗಳಿಗೆ ಇನ್ನಷ್ಟು ಗಹನತೆಯನ್ನು ತುಂಬುತ್ತವೆ, ಅವುಗಳನ್ನು ಚಿಂತನಶೀಲ ಉಡುಗೊರೆಯನ್ನಾಗಿ ಮಾಡುತ್ತವೆ," ಎಂದು ಕೊಲ್ಕತ್ತಾದ ಕಲಾ ಮತ್ತು ಕಲಾಕೃತಿಗಳ ಅಂಗಡಿಯಲ್ಲಿರುವ ಕ್ಯುರೇಟರ್ ಹೇಳುತ್ತಾರೆ.
'ಮಾಡೆಸ್ಟ್ ಫ್ಯಾಷನ್' ಟ್ರೆಂಡ್‌ಗಳು ಕೂಡ ಸೀರೆಯನ್ನು ಹಿಜಾಬ್ನೊಂದಿಗೆ ಧರಿಸುವಂತೆ ಪ್ರೇರೇಪಿಸುತ್ತದೆ. ಕೆಲವು ಮಹಿಳೆಯರು ಸೀರೆಯ ಸೆರಗನ್ನೇ (ಪಲ್ಲು) ತಲೆ ಕವಚವಾಗಿ ಬಳಸುತ್ತಾರೆ, ಆದರೆ ಉಳಿದವರಿಗೆ ಪ್ರತ್ಯೇಕ ಹಿಜಾಬ್ ಇಷ್ಟ. ದೆಹಲಿ ಮೂಲದ ಸಾರ್ವಜನಿಕ ಸಂಪರ್ಕ ವೃತ್ತಿಪರರಾದ ರೇಷ್ಮಾ ಹುಸೇನ್ ಅವರದ್ದು ಯಾವತ್ತಿದ್ದರೂ ಎರಡನೆಯ ಆಯ್ಕೆ. ಯಾಕೆಂದರೆ ಅದು "ಹೆಚ್ಚು ಆರಾಮದಾಯಕ ಮತ್ತು ಅದನ್ನು ಧರಿಸಿದಾಗ ಆಕರ್ಷಕವಾಗಿ ಕಾಣುತ್ತದೆ", ಎನ್ನುತ್ತಾರೆ ಅವರು.
ವಿನ್ಯಾಸಕಾರರು ಸೀರೆ ಮತ್ತು ಹಿಜಾಬ್ ಅನ್ನು ಪಿನ್ ಮತ್ತು ಇತರ ಬಿಡಿ ಉಪಕರಣಗಳೊಂದಿಗೆ ಭದ್ರಪಡಿಸಿಕೊಳ್ಳಲು ಸಲಹೆ ನೀಡುತ್ತಾರೆ, ಹಿಜಾಬ್ಗಳನ್ನು ಎಂದಿಗೂ ಸೀರೆಗೆ ಹೊಲಿಯಲು ಸಾಧ್ಯವಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಮುಸ್ಲಿಂ ಮಹಿಳೆಯರು ಸಾಮಾನ್ಯವಾಗಿ ಧಾರ್ಮಿಕ ಸ್ಥಳಗಳಲ್ಲಿ, ಮಾರ್ಗಸೂಚಿಗಳ ಪ್ರಕಾರ ಅಥವಾ ಈದ್ನಂತಹ ಹಬ್ಬಗಳ ಸಮಯದಲ್ಲಿ ಹಿಜಾಬ್ ಧರಿಸುತ್ತಾರೆ.
“ನಾನು ಪ್ರಯಾಣ ಮಾಡುವ ಸಂದರ್ಭದಲ್ಲಿ ಹಿಜಾಬ್ ಧರಿಸುತ್ತೇನೆ. ಮನೆಯಲ್ಲಿ, ನಾನು ಹೆಚ್ಚಾಗಿ ನನ್ನ ತಲೆಯನ್ನು ದುಪಟ್ಟಾ ಅಥವಾ ಸೀರೆ ಸೆರಗಿನಿಂದ ಮುಚ್ಚಿಕೊಳ್ಳುತ್ತೇನೆ. ಅಜಾನ್ (ಪ್ರಾರ್ಥನೆಗೆ ಕರೆ) ಸಮಯದಲ್ಲಿ, ನಾವು ಯಾವಾಗಲೂ ನಮ್ಮ ತಲೆ ಭಾಗವನ್ನು ಮುಚ್ಚಿಕೊಳ್ಳುತ್ತೇವೆ. ಮಹಿಳೆಯರು ಸಾಮಾನ್ಯವಾಗಿ ಖಾಸಗಿಯಾಗಿ ಪ್ರಾರ್ಥನೆ ಮಾಡುತ್ತಾರೆ, ಮಸೀದಿಗಳಲ್ಲಿ ಅಲ್ಲ, ಮತ್ತು ತಲೆಯನ್ನು ಸರಿಯಾಗಿ ಮುಚ್ಚುವ ಮೂಲಕ ಸಂಯಮವನ್ನು ಪಾಲಿಸಲಾಗುತ್ತದೆ" ಎಂದು ರೇಷ್ಮಾ ಸೇರಿಸುತ್ತಾರೆ.
ವಿನ್ಯಾಸಕಿ ಹಾಗೂ ಉದ್ಯಮಿ ದೀಪ್ತಿ ಸಿಂಗ್, ಅವರು ತಮ್ಮ ಮನೆಯಿಂದಲೇ 'ಸಂಸ್ಕೃತಿ' ಬ್ರ್ಯಾಂಡ್ ಹೆಸರಿನಲ್ಲಿ ಸೀರೆ ವ್ಯಾಪಾರ ನಡೆಸುತ್ತ ಬಂದವರು. ಅವರು ಬಲುಚಾನಿ ಮತ್ತು ಬಿಷ್ಣುಪುರಿ ರೇಷ್ಮೆ ಸೀರೆಗಳಲ್ಲಿ ಇರುವ ಆಕರ್ಷಣೆಯನ್ನು ವಿವರಿಸುತ್ತಾರೆ, ಇವೆರಡೂ ಸೀರೆಗಳು ಪೌರಾಣಿಕ ದೃಶ್ಯಗಳ ಚಿತ್ರಣದಿಂದ ಕೂಡಿದ್ದು, ಜನಪ್ರಿಯವಾಗಿವೆ. "ಕುಶಲ ನೇಕಾರರು ತಯಾರಿಸಿದ ಮೀನಾಕೈ ಕುಸುರಿಯನ್ನು ಹೊಂದಿರುವ ಬಲುಚಾರಿ ಸೀರೆಗಳು ಕಣ್ಣಿಗೆ ಮುದ ನೀಡುತ್ತವೆ. ಅವುಗಳ ಜಟಿಲ ವಿನ್ಯಾಸ ಮತ್ತು ಕರಕುಶಲದ ಕಾರಣದಿಂದಾಗಿಯೇ ಅವುಗಳಿಗೆ ಅಪಾರ ಬೇಡಿಕೆ ಇದೆ" ಎಂದು ಅವರು ಹೇಳುತ್ತಾರೆ.
ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಯಂತಹ ಮಹಾಕಾವ್ಯಗಳ ಕಥೆಗಳನ್ನು ಸಾಮಾನ್ಯವಾಗಿ ಈ ಸೀರೆಗಳಲ್ಲಿ ನೇಯಲಾಗುತ್ತದೆ, ಇದರಿಂದ ಯಾವುದೇ ಸಂದರ್ಭದಲ್ಲೂ ಅವು ಆಕರ್ಷಣೀಯ ವಿಶಿಷ್ಟ ಕಲಾಕೃತಿಗಳಾಗಿ ಕಾಣುತ್ತವೆ. ಇನ್ನು ಅನೇಕ ಸೀರೆಗಳಲ್ಲಿ ಬಾವನ್ ಬುಟಿ (52 ಮೋಟಿಫ್‌ಗಳು), ಬಿಹಾರದ ಮಧುಬನಿ ವರ್ಣಚಿತ್ರಗಳು, ಹಾಗೂ ಕಲಂಕರಿ, ಫುಲ್ಕಾರಿ, ಝರಿ ಕುಸುರಿ ಮತ್ತು ಸ್ಥಳೀಯ ಜಾನಪದ ಕಥೆಗಳನ್ನು ಚಿತ್ರಿಸುವ ಬ್ಲಾಕ್ ಪ್ರಿಂಟ್ಗಳಂತಹ ಸಾಂಪ್ರದಾಯಿಕ ಕರಕುಶಲತೆಗಳನ್ನು ಕಾಣಬಹುದು.
ರೇಷ್ಮೆ ಬಟ್ಟೆಗೆ ಯಾವತ್ತೂ ಅಪರೂಪದ ಕಿಮ್ಮತ್ತು. ಈ ವಿನ್ಯಾಸಗಳನ್ನು ವಿಶೇಷವಾಗಿ ಪರಿಣತರು ಹೆಚ್ಚು ಮೆಚ್ಚುತ್ತಾರೆ. "ಕಾಂಚೀಪುರಂ, ಬನಾರಸಿ ಮತ್ತು ಮಹೇಶ್ವರಿ ರೇಷ್ಮೆ ಸೀರೆಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆಯಿದೆ, ಗ್ರಾಹಕರು ಅವುಗಳನ್ನು ಖರೀದಿಸಲು ಉತ್ಸುಕರಾಗಿರುತ್ತಾರೆ" ಎಂದು ದಕ್ಷಿಣ ಕೊಲ್ಕತ್ತಾದ ಸೀರೆ ಮಾರಾಟ ಮಳಿಗೆಯ ವ್ಯಾಪಾರಿ ಹೇಳುತ್ತಾರೆ.