ಆಂಡ್ರೆ ತಾರ್ಕೋವ್ಸ್ಕಿ ಚಿತ್ರಗಳಲ್ಲಿ ಸಮಯ ಮತ್ತು ನಂಬಿಕೆಗಳ ಅಭಿವ್ಯಕ್ತಿ -ಪ್ರಣವಿ ಶರ್ಮಾ


ಕಲೆಯನ್ನು ಪರಿಸರದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ, ಅದು ಒಂದು ರೀತಿಯ ಅಭಿವ್ಯಕ್ತಿಯನ್ನು ಬಯಸುತ್ತದೆ. ವಾಣಿಜ್ಯ ಸಿನಿಮಾ ಅಂತರ್ಗತವಾಗಿ ಪ್ರತಿಯೊಬ್ಬ ವೀಕ್ಷಕರ ಆಳವಾದ ಮತ್ತು ತಕ್ಷಣದ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ನಂಬಿದ್ದ ಆಂಡ್ರೆ ತರ್ಕೋವ್ಸ್ಕಿ, ಕೇಳುಗರು ಮತ್ತು ವೀಕ್ಷಕರ ಅವಶ್ಯಕತೆಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಅಗತ್ಯವನ್ನು ಒತ್ತಿಹೇಳುತ್ತಾರೆ.

ಆಲ್ ಯೂನಿಯನ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಸಿನಿಮಾಟೋಗ್ರಫಿಯಲ್ಲಿ ಅಧ್ಯಯನ ಮಾಡಿದ ಅವರು, ಅರ್ನೆಸ್ಟ್ ಹೆಮಿಂಗ್ವೇ ಅವರ ಸಣ್ಣ ಕಥೆ ʻದಿ ಕಿಲ್ಲರ್ಸ್ʼ (1927) ನ್ನು ತೆರೆಗೆ ಅಳವಡಿಸಿಕೊಳ್ಳಲು ನಿರ್ಧರಿಸಿದರು. ಕಥೆಯಲ್ಲಿ ಇಬ್ಬರು ಪುರುಷರು ತಾವು ಕೊಲ್ಲಬೇಕಿ ದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋಟೆಲ್ ಒಂದಕ್ಕೆ ಹೋಗುತ್ತಾರೆ. 1946 ರಲ್ಲಿ ರಾಬರ್ಟ್ ಸಿಯೋಡ್ಮಾಕ್ ಈ ಕಥೆಯನ್ನು ಯಶಸ್ವಿಯಾಗಿ ತೆಗೆಗೆ ಅಳವಡಿದ್ದರು. ತಾರ್ಕೊವ್ಸ್ಕಿ ಮಾಸ್ಕೋದ ಶಾಲೆಯಲ್ಲಿ ಕಲಿತಿದ್ದನ್ನು ಪ್ರಯೋಗಿಸಲು ಮುಂದಾದರು.

19 ನಿಮಿಷಗಳ ಈ ಕಿರುಚಿತ್ರ (1956) ಸಂಭಾಷಣೆ-ಕಥೆ ಹೇಳುವಿಕೆಗೆ ಮೀಸಲಾಗಿದೆ ಮತ್ತು ದೃಶ್ಯಗಳ ಮೂಲಕ ಮೂಲ ವಾತಾವರಣವನ್ನು ಕೌಶಲದಿಂದ ಚಿತ್ರಿಸುತ್ತದೆ. ತರ್ಕೋವ್ಸ್ಕಿ ಅವರಿಗೆ ಅಮೇರಿಕನ್ ನಿರೂಪಣೆಗೆ ಪರ್ಯಾಯಗಳನ್ನು ಸೃಷ್ಟಿಸಲು ಸಾಧ್ಯವಾಗದಿದ್ದರೂ, ತಮ್ಮ ವಿಶಿಷ್ಟ ಸಿನಿಮೀಯ ಭಾಷೆ ಮತ್ತು ನೈಸರ್ಗಿಕ ದೃಶ್ಯ ವ್ಯಾಕರಣವನ್ನು ಪ್ರದರ್ಶಿಸಿದರು. ಇದು ಅವರ ವೃತ್ತಿಜೀವನದ ವ್ಯಾಖ್ಯಾನದ ಆರಂಭಿಕ ಸೂಚನೆ ಆಯಿತು.

ಪ್ರಸಿದ್ಧ ಕವಿ ಆರ್ಸೆನಿ ತಾರ್ಕೊವ್ಸ್ಕಿ ಮತ್ತು ನಟಿ ಮಾರಿಯಾ ವಿಷ್ನ್ಯಾಕೋವಾ ದಂಪತಿ ಪುತ್ರ, 1932 ರಲ್ಲಿ ಜಾವ್ರೆ (ಈಗ ಬೆಲಾರಸ್ನಲ್ಲಿದೆ) ಯಲ್ಲಿ ಜನಿಸಿದರು. 20 ವರ್ಷದಲ್ಲಿ ಕೇವಲ ಏಳು ಚಲನಚಿತ್ರ ನಿರ್ಮಿಸಿ, ವಿಶ್ವ ಚಲನಚಿತ್ರ ಕ್ಷೇತ್ರದಲ್ಲಿ ಗಮನಾರ್ಹ ಪರಿಣಾಮ ಬೀರಿದರು. ರಾಬರ್ಟ್ ಬ್ರೆಸನ್, ಅಲೆಕ್ಸಾಂಡರ್ ಡೊವ್ಜೆಂಕೊ, ಕೆಂಜಿ ಮಿಜೋಗುಚಿ, ಇಂಗ್ಮರ್ ಬರ್ಗ್ಮನ್, ಲೂಯಿಸ್ ಬುನ್ಯುಯೆಲ್ ಮತ್ತು ಅಕಿರಾ ಕುರೊಸಾವಾ ಮತ್ತಿತರ ಚಲನಚಿತ್ರ ನಿರ್ಮಾಪಕರಿಂದ ಹೆಚ್ಚು ಪ್ರಭಾವಿತರಾದರು. ʻದಿ ಮಿರರ್ʼ (1975) ಚಿತ್ರದ ನಿರ್ದಿಷ್ಟ ದೃಶ್ಯಾವಳಿಯೊಂದು ಬರ್ಗ್ಮನ್ರ ಚಲನಚಿತ್ರದ ದೃಶ್ಯವನ್ನು ಹೋಲುತ್ತದೆ ಎಂದು ಒಪ್ಪಿಕೊಂಡರು.ತಮ್ಮ ಸ್ನೇಹಿತನನ್ನು ಗೌರವಿಸುವ ಸಲುವಾಗಿ ಅದನ್ನು ಬಳಸಿಕೊಂಡಿದ್ಧೇನೆ ಎಂದು ಹೇಳಿದರು.

ಚಲನಚಿತ್ರ ನಿರ್ಮಾಣವೆಂದರೆ ಆತ್ಮಹತ್ಯೆ: ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕವು ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಎರಡು ಪರಮಾಣು ಬಾಂಬುಗಳನ್ನು ಹಾಕಿತು. ಬಾಂಬ್ ದಾಳಿ ನಂತರ, ಪೈಲಟ್ ಉದ್ಯೋಗ ಎರಡನೇ ಅತ್ಯಂತ ಅಪಾಯಕಾರಿ ವೃತ್ತಿ ಎಂದು ಅಧ್ಯಯನಗಳು ಹೇಳಿದವು. ಒಂದು ಸಂದರ್ಶನದಲ್ಲಿ ತಾರ್ಕೋವ್ಸ್ಕಿ,ʻಚಲನಚಿತ್ರ ನಿರ್ಮಾಣ ಆತ್ಮಹತ್ಯಾತ್ಮಕ ವೃತ್ತಿʼ ಎಂದಿದ್ದಾರೆ. ವೈಜ್ಞಾನಿಕ ಥ್ರಿಲ್ಲರ್ ʻಸ್ಟಾಕರ್ʼ (1979) ನಲ್ಲಿ ಪರಮಾಣು ಸ್ಥಾವರಗಳ ಚಿತ್ರೀಕರಣದಲ್ಲಿ ದೀರ್ಘಕಾಲ ಕಳೆದರು.

ತಾಯ್ನಾಡಿನಿಂದ ದೂರವಿದ್ದ ಅವರಿಗೆ ಅಮೆರಿಕದ ಬಗ್ಗೆ ಅಸಮಾಧಾನ ಇತ್ತು. ತಮ್ಮ ದಿನಚರಿ ʻತಾರ್ಕೊವ್ಸ್ಕಿಸ್ ಡೈರೀಸ್, 1983) ಬರೆಯುತ್ತಾರೆ; ʻಬಡ ಅಮೆರಿಕನ್ನರು ಆತ್ಮ ಅಥವಾ ಬೇರುಗಳಿಲ್ಲದ ಅಧ್ಯಾತ್ಮಿಕ ಭೂಮಿಯಲ್ಲಿ ವಾಸಿಸುತ್ತಿದ್ದಾರೆ: ಈ ಭೂಮಿ ಅವರಿಗೆ ಅರ್ಥವಾಗುವುದಿಲ್ಲ ಮತ್ತು ಅದನ್ನು ಅವರು ಪ್ರಶಂಸಿಸುವುದಿಲ್ಲ. ನ್ಯೂಯಾರ್ಕ್ ಭಯಾನಕವಾಗಿದೆ.ʼ ದಮನ, ಸೆನ್ಸಾರ್ಶಿಪ್, ಭಯ ಮತ್ತು ಕಣ್ಗಾವಲಿನ ರಾಜಕೀಯ ವಾತಾವರಣದಲ್ಲಿ ಬೆಳೆದ ಅವರ ದಿ ಮಿರರ್, ಆಂಡ್ರೇ ರುಬ್ಲೆವ್ (1966), ಮತ್ತು ಸ್ಟಾಕರ್ ಚಲನಚಿತ್ರಗಳಲ್ಲಿ ದಬ್ಬಾಳಿಕೆಯ ರಾಜಕೀಯ ವ್ಯವಸ್ಥೆಗಳಲ್ಲಿ ಜನರ ಆಂತರಿಕ ಹೋರಾಟಗಳು ಮತ್ತು ಅಸ್ತಿತ್ವದ ಅನಿಶ್ಚಿತತೆಗಳು ಚಿತ್ರಿಸಲ್ಪಟ್ಟಿವೆ.

ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸರ್ಕಾರವು ಧರ್ಮದ ಬದಲು ತಾರ್ಕಿಕತೆಯನ್ನು ಆಧರಿಸಿದ ಬಲಶಾಲಿ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದರು. ಜೋಸೆಫ್ ಸ್ಟಾಲಿನ್ ಧರ್ಮದ ವಿರುದ್ಧ ವ್ಯಾಪಕ ಪ್ರಚಾರ ನಡೆಸಿದರು. ಹೀಗಿದ್ದರೂ, ರಶಿಯಾದ ಚರ್ಚುಗಳು ಮತ್ತು ತಾರ್ಕೊವ್ಸ್ಕಿ ಕ್ಯಾಥೋಲಿಕರಾಗೇ ಉಳಿದವು; ಇದು ಸ್ಟಾಲಿನ್ ಅವರ ಯೋಜನೆಯ ವೈಫಲ್ಯವನ್ನು ಸಾಬೀತುಪಡಿ ಸುತ್ತದೆ.

ʻದಿ ಮಿರರ್ʼ ನಲ್ಲಿ ತಾರ್ಕೋವ್ಸ್ಕಿ ಅವರ ತಾಯಿ ಮರಿಯಾರನ್ನು ಆಧರಿಸಿದ ಪಾತ್ರವು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಸ್ಟಾಲಿನ್ ಹೆಸರನ್ನು ತಪ್ಪಾಗಿ ಬರೆದುದಕ್ಕೆ ಆತಂಕಕ್ಕೀಡಾಗುತ್ತದೆ. ಆಕೆಯ ಅಳುವನ್ನು ದಾಖಲಿಸುವ ಕ್ಯಾಮೆರಾ, ದೇಶ ಕಣ್ಗಾವಲ್ಲಿನಲ್ಲಿರುವ ಸೂಚನೆಯನ್ನು ಕೊಡುತ್ತದೆ.

'ವೈಯಕ್ತಿಕದ ಮೂಲಕ ಸಾರ್ವಜನಿಕ'ದ ಅನ್ವೇಷಣೆ: 1950 ರ ದಶಕದ ಮಧ್ಯಭಾಗದಲ್ಲಿ ಕ್ರುಶ್ಚೇವ್ ಅವಧಿಯಲ್ಲಿ ಸೆನಾರ್ಶಿಪ್ ಸಡಿಲಗೊಂಡು, ನಿರ್ದೇಶಕ ಮೈಖೇಲ್ ರಾಮ್ಮ್ ಅಡಿಯಲ್ಲಿ ʻವೈಯಕ್ತಿದ ಮೂಲಕ ಸಾರ್ವಜನಿಕʼ ವನ್ನು ಅನ್ವೇಷಿಸುವ ಅವಕಾಶ ಸಿಕ್ಕಿತು. ಸ್ಟಾಲಿನ್ ಮರಣದ ನಂತರ ಸೆನ್ಸಾರ್ಶಿಪ್ ಮತ್ತು ದಮನ ಪ್ರವೃತ್ತಿ ಕಡಿಮೆಯಾಯಿತು. ಮೊದಲ ಚಿತ್ರ ʻಇವಾನ್ಸ್ ಚೈಲ್ಡ್ಹುಡ್ʼ, ಜಾಗತಿಕ ಸಿನೆಮಾದಲ್ಲಿ ತಾರ್ಕೋವ್ಸ್ಕಿಯ ಹೆಜ್ಜೆ ಗುರುತುಗಳನ್ನು ದಾಖಲಿಸಿತು.

ʻಸೋಲಾರಿಸ್ʼ ಸ್ಟಾನ್ಲ್ಯಿ ಕುಬ್ರಿಕ್ ಅವರ ʻ2001: ಎ ಸ್ಪೇಸ್ ಒಡಿಸ್ಸಿʼ (1968)ಗೆ ಪ್ರತಿಯಾಗಿ ಬಂದ ವೈಜ್ಞಾನಿಕ ಕಾಲ್ಪನಿಕ ಚಿತ್ರ. ʻಸೋಲಾರಿಸ್ʼ ದುಃಖವನ್ನು ವೈಭವೀಕರಣಗೊಳಿಸುವ ಕಥನವಾದರೂ, ಅಸ್ಮಿತೆ ಮತ್ತು ಮನುಷ್ಯತ್ವ ಎಂದರೆ ಏನು ಎಂಬುದನ್ನು ಪ್ರಶ್ನಿಸುತ್ತದೆ, ಆದರೆ, ಸ್ಟ್ರಗತ್ಸ್ಕಿ ಸೋದರರ ಕಾಲ್ಪನಿಕ ಕಾದಂಬರಿ ʻರೋಡ್ಸೈಡ್ ಫಿಕ್ಷನ್ʼ ಆಧರಿಸಿದ ʻಸ್ಟಾಕರ್ʼ ಅಂತರಂಗ ಹಾಗೂ ಬಹಿರಂಗದ ಸೌಂದರ್ಯದ ಬಗ್ಗೆ ಶೋಧನೆ ನಡೆಸುತ್ತದೆ. ನಿಧಾನಗತಿಯ 160 ನಿಮಿಷಗಳ ಈ ಚಿತ್ರ ಲೇಖಕ, ವಿಜ್ಞಾನಿ ಮತ್ತು ಪರಮಾಣು ಅವಘಡದ ಬಳಿಕ ಬರಡಾದ ʻಜೋನ್ʼ ಎಂದು ಕರೆಯಲ್ಪಡುವ ಕಾಲ್ಪನಿಕ ಪ್ರದೇಶದ ಹುಡುಕಾಟದಲ್ಲಿರುವ ವ್ಯಕ್ತಿಯೊಬ್ಬನನ್ನು ಒಳಗೊಂಡಿದೆ.

ನೈತಿಕ ಸ್ವಾತಂತ್ರ್ಯ ಮತ್ತು ಅಸ್ತಿತ್ವದ ಅರ್ಥವನ್ನು ಅನ್ವೇಷಿಸಲು ತಾರ್ಕೊವ್ಸ್ಕಿ ʻಜೋನ್ʼ ನ್ನು ಸಾಂಕೇತಿಕವಾಗಿ ಬಳಸುತ್ತಾರೆ. ಅಲೆಕ್ಸಾಂಡರ್ ಕ್ನ್ಯಾಝಿನ್ಸ್ಕಿಯ ಸಿನಿಮಾಟೋಗ್ರಫಿಯು ಬಣ್ಣ ಮತ್ತು ಸೆಪಿಯಾಟೋನ್ ಮೂಲಕ ಸುಂದರ ದೃಶ್ಯ ಕಾವ್ಯವನ್ನು ರಚಿಸುತ್ತದೆ.

ಜೇಮ್ಸ್ ಜಾಯ್ಸ್ ಅವರಂತಹ ದೇಶಭ್ರಷ್ಟ ಕಲಾವಿದರ ಸಂಪ್ರದಾಯವನ್ನು ತಾರ್ಕೊವ್ಸ್ಕಿ ಅಪ್ರಜ್ಞಾಪೂರ್ವಕ ವಾಗಿ ಅನುಸರಿಸಿದರು ಎನ್ನಬಹುದು. ಜಾಯ್ಸ್ ತಮ್ಮ ಮೇರು ಕೃತಿ ʻಎ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್ʼ (1916) ನಲ್ಲಿ ಹೇಳುತ್ತಾರೆ: ʻಐರ್ಲೆಂಡ್ ತನ್ನ ಮರಿಗಳನ್ನು ತಿನ್ನುವ ಮುದಿ ಹಂದಿಯಂತೆʼ. ಬಯಸಿದಂತೆ ಬರೆಯಲು ಸಾಧ್ಯವಿಲ್ಲ ಎಂದು ಜಾಯ್ಸ್ 1904 ರಲ್ಲಿ

ಐರ್ಲೆಂಡ್ ಅನ್ನು ತೊರೆದರು. ಅದೇ ರೀತಿ ತಾರ್ಕೊವ್ಸ್ಕಿ ತಮ್ಮ ಕೊನೆಯ ಚಲನಚಿತ್ರ ʻನಾಸ್ಟಾಲ್ಜಿಯಾʼ (1983)ವನ್ನು ಚಿತ್ರೀಕರಿಸಲು ಸೋವಿಯತ್ ಒಕ್ಕೂಟ ಸಮ್ಮತಿಸದ ಕಾರಣ ಇಟಲಿ, ಸ್ವೀಡನ್ ಮತ್ತು ಫ್ರಾನ್ಸ್ ಗೆ ತೆರಳಬೇಕಾಯಿತು.

ತಾರ್ಕೊವ್ಸ್ಕಿ ರಷ್ಯದ ಪೌರತ್ವವನ್ನು ತ್ಯಜಿಸುತ್ತಾರೆ ಎಂದು ಗೊತ್ತಾದ ಬಳಿಕ ಅವರನ್ನು ಭೇಟಿಯಾಗಲು ಮಗನಿಗೆ ಅವಕಾಶ ನಿರಾಕರಿಸ ಲಾಯಿತು. ಆದರೆ, 1986 ರಲ್ಲಿ ಮಿಖಾಯಿಲ್ ಗೋರ್ಬಚೇವ್, ತಾರ್ಕೊವ್ಸ್ಕಿ ಮತ್ತು ಮಗ ಆಂಡ್ರೇ ಭೇಟಿಗೆ ಕ್ರಮ ತೆಗೆದುಕೊಂಡರು. ಫ್ರೆಂಚ್ ಲೇಖಕ ಮತ್ತು ಚಿತ್ರ ನಿರ್ಮಾಪಕ ಕ್ರಿಸ್ ಮಾರ್ಕರ್, ಕ್ಯಾನ್ಸರ್ ಪೀಡಿತ ತಾರ್ಕೊವ್ಸ್ಕಿ ಮಗನನ್ನು ಅಪ್ಪಿಕೊಳ್ಳುವ ಕ್ಷಣವನ್ನು ತಮ್ಮ 1999 ರ ಸಾಕ್ಷ್ಯಚಿತ್ರ ʻಒನ್ ಡೇ ಇನ್ ದಿ ಲೈಫ್ ಆಫ್ ಆಂಡ್ರೇ ಆರ್ಸೆನೆವಿಚ್ʼನಲ್ಲಿ ಸೆರೆಹಿಡಿದಿದ್ದಾರೆ.

ಸಂದರ್ಶನವೊಂದರಲ್ಲಿ ʻದ ಮಿರರ್ʼ ಬಗ್ಗೆ ಕೇಳಿದಾಗ, ʻಈ ಪರಿಕಲ್ಪನೆಯ ಅಭಿವ್ಯಕ್ತಿ ಕಷ್ಟಕರವಾಗಿತ್ತು. ಆದರೆ, ಚಿತ್ರ ಜಟಿಲ ವಾಗಿಲ್ಲ.ಏಕೆಂದರೆ, ಅದು ಜೀವನಚರಿತ್ರೆಯಂತಿದೆ; ನಿಜವಾದ ಮತ್ತು ನಿಖರ ಪ್ರತಿಬಿಂಬ. ಅಧಿಕೃತ ಮತ್ತು ಕಲ್ಪನೆಯಿಂದ ಮುಕ್ತವಾಗಿದೆ. ಪ್ರತಿ ಸಂಚಿಕೆಯೂ ನೆನಪುಗಳ ಮರುಸ್ಮರಣೆ ಮಾತ್ರʼ.

ಉದ್ಯೋಗಿಗಳ ಕ್ಲಬ್ನ ಶುಚಿಗೊಳಿಸುವ ಮಹಿಳೆಯೊಬ್ಬರು ತರ್ಕೊವ್ಸ್ಕಿಗೆ ಹೇಳಿದರು; ʻಚಲನಚಿತ್ರ ಸ್ಪಷ್ಟವಾಗಿದೆ; ಹೆಚ್ಚಿನ ಚರ್ಚೆ ಅಗತ್ಯವಿಲ್ಲ.ʼ ಆಕೆ ಪ್ರಕಾರ, ʻಚಿತ್ರ ಬಹಳ ಸರಳವಾಗಿದೆ. ವ್ಯಕ್ತಿಯೊಬ್ಬ ಸಾಯಬೇಕೆಂದು ಯೋಚಿಸಿದಾಗ, ತನ್ನ ಹತ್ತಿರದವರಿಗೆ ಮಾಡಿದ ಕೆಟ್ಟ ಮತ್ತು ಒಳ್ಳೆಯ ಕೆಲಸಗಳನ್ನು ನೆನಪಿಸಿಕೊಳ್ಳುತ್ತಾನೆ. ಇದು ಆತನನ್ನು ಸಂಕಟಕ್ಕೆ ಸಿಲುಕಿಸುತ್ತದೆ. ಆತ ಎಲ್ಲರಿಂದಲೂ ಕ್ಷಮೆಯನ್ನು ಕೋರುತ್ತಾನೆ. ಆದರೆ, ಅಷ್ಟರಲ್ಲಿ ತುಂಬ ತಡವಾಗಿರುತ್ತದೆʼ.

ಸಂಘರ್ಷದ ಸಮಯದಲ್ಲಿ ಕಲೆ: ನ್ಯೂಯಾರ್ಕರ್ ನಲ್ಲಿ ಪ್ರಕಟವಾದ ʻದ ಡ್ರೆಂಚಿಂಗ್ ರಿಚ್ ನೆಸ್ ಆಫ್ ಆಂಡ್ರೆ ಟಾರ್ಕೊವ್ಸ್ಕಿʼ ಲೇಖನದಲ್ಲಿ ಅಲೆಕ್ಸ್ ರಾಸ್ ಬರೆಯುತ್ತಾರೆ: ʻಯುಲಿಸಿಸ್ ಅಥವಾ ವೇಸ್ಟ್ ಲ್ಯಾಂಡ್ ನಂತೆ ದ ಮಿರರ್, ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸುತ್ತದೆ.ʼ ವಿಮರ್ಶಕರು ತಮ್ಮ ಸಿನಿಮಾದಲ್ಲಿ ರೂಪಕಗಳು ಅಥವಾ ಸಂಕೇತಗಳನ್ನು ನೋಡಲು ವಿಮರ್ಶಕರು ಮಾಡಿದ ಎಲ್ಲಾ ಪ್ರಯತ್ನಗಳನ್ನು ತಾರ್ಕೋವ್ಸ್ಕಿ ತಳ್ಳಿಹಾಕಿದರು. ತಮ್ಮ ಪುಸ್ತಕ ʻಸ್ಕಲ್ಪ್ಟಿಂಗ್ ಇನ್ ಟೈಮ್ ʼ(1985) ನಲ್ಲಿ ತಮ್ಮ ಆಲೋಚನೆಗಳು ಮತ್ತು ನೆನಪುಗಳನ್ನು ದಾಖಲಿಸಿದ್ದಾರೆ. ತಮ್ಮ ಚಲನಚಿತ್ರಗಳಾದ ಇವಾನ್ಸ್ಸ್ ಚೈಲ್ಡ್ಹುಡ್, ಆಂಡ್ರೇ ರುಬ್ಲೆವ್, ಸೋಲಾರಿಸ್, ದಿ ಮಿರರ್, ಸ್ಟಾಕರ್, ನಾಸ್ಟಾಲ್ಜಿಯಾ ಮತ್ತು ದಿ ಸ್ಯಾಕ್ರಿಫೈಸ್ ಸ್ಫೂರ್ತಿ ಏನು ಎಂಬುದನ್ನು ವಿವರಿಸಿದ್ದಾರೆ; ಸಿನೆಮಾದ ನಿರ್ದಿಷ್ಟ ಶಕ್ತಿ ಇರುವುದು ಕಾಲದ ಗ್ರಹಿಕೆಯನ್ನುಕೌಶಲದಿಂದ ನಿರ್ವಹಿಸುವಲ್ಲಿ. ಕಚ್ಚಾ ರೀಲ್ಗಳು ಸಮಯವನ್ನು ಸೆರೆ ಹಿಡಿಯುತ್ತವೆ. ವಿಸ್ತೃತ ದೃಶ್ಯಗಳು ಮತ್ತು ಕನಿಷ್ಠ ಎಡಿಟಿಂಗ್ ಮೂಲಕ ಪ್ರೇಕ್ಷಕರು ಕಳೆದುಹೋಗುತ್ತಿರುವ ಕ್ಷಣಗಳನ್ನು ಗ್ರಹಿಸುವಂತೆ ಮತ್ತು ಸಮಯದ ವಿವಿಧ ಬಿಂದುಗಳನ್ನು ಜೋಡಿಸುವಂತೆ ಮಾಡುತ್ತಿದ್ದರು.

ಅವರ ಕೊನೆಯ ಚಿತ್ರ ʻದ ಸ್ಯಾಕ್ರಿಫೈಸ್ʼ ಸಾವಿಗೆ ಸ್ವಲ್ಪ ಮೊದಲು ಪೂರ್ಣಗೊಂಡಿತು ಮತ್ತು ಅದು ಅವರು ನಂಬಿದ ಮತ್ತು ನಿರ್ದೇಶಿಸಿದ ಎಲ್ಲಾ ಚಲನಚಿತ್ರಗಳ ಸಂಗ್ರಹವೆಂದು ಪರಿಗಣಿಸಲ್ಪಟ್ಟಿದೆ. ನಂಬಿಕೆ ಮತ್ತು ಅಧ್ಯಾತ್ಮಿಕತೆಯನ್ನು ಮರುಶೋಧಿಸುತ್ತದೆ; ಕಥೆಯಲ್ಲಿ ಪರಮಾಣು ದುರಂತವನ್ನು ನಿಲ್ಲಿಸಲು ದೇವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುವ ನಾಸ್ತಿಕ ಮಧ್ಯ ವಯಸ್ಕ ವಿಮರ್ಶಕ (ಬರ್ಗ್ಮನ್ನ ಚಿತ್ರಗಳ ನಟ ಎರ್ಲ್ಯಾಂಡ್ ಜೋಸೆಫ್ಸನ್) ಇದ್ದಾನೆ. ನಾಸ್ತಿಕನಾಗಿದ್ದರೂ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾನೆ ಮತ್ತು ಸ್ವಂತ ಮಗನನ್ನೇ ಅರ್ಪಿಸಲು ಮುಂದಾಗುತ್ತಾನೆ. ಮಾಟಗಾತಿಯೊಂದಿಗೆ ಅತಿವಾಸ್ತವ ಮುಖಾಮುಖಿ ನಂತರ, ಇದೆಲ್ಲವೂ ಕನಸೇ ಎಂದು ಪ್ರೇಕ್ಷಕ ಪ್ರಶ್ನಿಸಿಕೊಳ್ಳುವಂತೆ ಆಗುತ್ತದೆ.

ಅವರಲ್ಲಿ ನ್ಯೂನತೆಗಳೂ ಇದ್ದವು. ಮಹಿಳೆಯರ ʻನಿಜವಾದ ಉದ್ದೇಶ ಪ್ರೀತಿಯ ಹೆಸರಿನಲ್ಲಿ ಶರಣಾಗತಿ ಮತ್ತು ಅವಮಾನʼ ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಸಂಘರ್ಷದ ಸಮಯದಲ್ಲಿ ಕಲೆಯ ಮಹತ್ವವೇನು ಎಂಬುದನ್ನು ಅವರ ಚಲನಚಿತ್ರಗಳು ತೋರಿಸುತ್ತವೆ; ಅವರು ಅಂತರಂಗದ ಬೆಳಕನ್ನು ತೋರಿಸಿದರೇ ಹೊರತು ಸುತ್ತಮುತ್ತಲಿನ ಕತ್ತಲೆಯನ್ನಲ್ಲ.

ಶ್ವಾಸಕೋಶದ ಕ್ಯಾನ್ಸರ್ನಿಂದ ಡಿಸೆಂಬರ್ 29, 1986 ರಂದು ನಿಧನರಾದರು.

Read More
Next Story