
ಭಾರತದ ಕ್ಲೀನ್ ಸಿಟಿ ಇಂದೋರ್ ಆಹಾರ ಪ್ರಿಯರ ಸ್ವರ್ಗ
ಮಧ್ಯ ಪ್ರದೇಶದ ಇಂದೋರ್ ಶಹರಿ ಶಿಕ್ಷಣದ ಮೆಕ್ಕಾ ಅನ್ನುತ್ತಾರೆ. ಇದು ಭಾರತದಲ್ಲಿಯೇ ಸ್ವಚ್ಛ ಸಿಟಿ ಕೂಡ ಹೌದು. ಇಲ್ಲಿನ ಸರಾಫಾ ಬಜಾರ್ ಹಗಲಿನಲ್ಲಿ ಹಳದಿ ಲೋಹವನ್ನು ಮಾರುವ ಗಡಿಬಿಡಿಯಲ್ಲಿ ಮುಳುಗಿದರೆ ರಾತ್ರಿಯಾಯಿತೆಂದರೆ ಆಹಾರ ಪ್ರಿಯರ ಸ್ವರ್ಗವಾಗುತ್ತದೆ.
ಅಚ್ಚ ಬಿಳಿ ಕುರ್ತಾ-ಪೈಜಾಮ್ ಧರಿಸಿದ ಜೋಶಿ ಅವರು ಕಾಲು ಮಡಿಚಿ ಕುಳಿತಿದ್ದಾರೆ. ಅದು ಮಧ್ಯ ಪ್ರದೇಶದ ಇಂದೋರ್ ನಗರದಲ್ಲಿರುವ ಸರಾಫಾ ಬಝಾರ್ ನ ಪುಟ್ಟ ದುಖಾನು. ಅವರು ತೀರಾ ನಾಟಕೀಯ ಶೈಲಿಯಲ್ಲಿ ದಹಿ ವಡಾ (ಮೊಸರು ವಡೆ) ತಟ್ಟೆಯನ್ನು ಗಾಳಿಯಲ್ಲಿ ಚಿಮ್ಮಿದಂತೆ ಮುಂದಕ್ಕೆ ತಳ್ಳುತ್ತಾರೆ. ಕ್ಷಣಾರ್ಧದಲ್ಲಿ ಆ ತಟ್ಟೆಯ ಮೇಲೆ ಐದು ನಾನಾ ವಿಧದ ಮಸಾಲೆಗಳನ್ನು ಸಿಂಪಡಿಸುತ್ತಾರೆ-ಥೇಟ್ ಒಬ್ಬ ಪಾಕಶಾಲೆಯ ಮಾಂತ್ರಿಕನಂತೆ. ಆ ಐದು ಮಸಾಲೆಯದ್ದೂ ವಿಶಿಷ್ಟವಾದ ಟೇಸ್ಟು. ಹಾಗೆ ವಡೆಯನ್ನು ಬಾಯೊಳಗಿಟ್ಟರೆ ಸಾಕು ಕರಗಿಹೋಗುತ್ತದೆ ಮತ್ತು ಅದರ ಹುಳಿ-ಖಾರಾ ಸ್ವಾದದೊಂದಿಗೆ ಮೈಮರೆತುಬಿಡುತ್ತೀರಿ.
ಅಸಲಿಗೆ ಅದು ಪುಟ್-ಪುಟಾಣಿ ಅಂಗಡಿ. ಅದು ಜೋಶಿ ದಹಿ ವಡಾ ಅಂಗಡಿ ಅಂತಲೇ ಫೇಮಸ್ಸು. ನಗರದಲ್ಲಿರುವ ಅತ್ಯಂತ ಸಾಂಪ್ರದಾಯಿಕ ಆಹಾರ ಕೇಂದ್ರಗಳಲ್ಲಿ ಇದೂ ಒಂದು. ಭಾರತದಲ್ಲಿ ಯಾವುದಾದರೂ ಕ್ಲೀನ್ ಆ್ಯಂಡ್ ನೀಟ್ ಸಿಟಿ ಇದ್ದರೆ ಅದು ಇಂದೋರ್. ಭಾರತದ ಬೃಹತ್ ಸ್ವಚ್ಛತಾ ಸಮೀಕ್ಷೆಯಾದ ‘ಸ್ವಚ್ಛ ಸರ್ವೇಕ್ಷಣ’ ಅಭಿಯಾನವು ನಡೆಸಿದ ಸರ್ವೇಯಲ್ಲಿ ಇಂದೋರ್ ಸತತ ಏಳನೇ ವರ್ಷವೂ ಸ್ವಚ್ಛ ನಗರಿ ಎಂಬ ಹೆ್ಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಇದು ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಿಯೂ ಬೆಳೆಯುತ್ತಿದೆ. ಬಹಳಷ್ಟು ಮಂದಿಗೆ ಗೊತ್ತೇ ಇಲ್ಲದ ಇನ್ನೊಂದು ಸಂಗತಿ ಎಂದರೆ ಇದು ಆಹಾರ ಪ್ರಿಯರ ಸ್ವರ್ಗವೂ ಹೌದು. ಇಲ್ಲಿನ ಸ್ಟ್ರೀಟ್ ಫುಡ್ ಗಳು ಟೇಸ್ಟಿ ಟೇಸ್ಟಿ ಮತ್ತು ಭಿನ್ನ-ವಿಭಿನ್ನ.
ನಾನು ನನ್ನ ಇಂದೋರ್ ಜರ್ನಿಯನ್ನು ಆರಂಭಿಸಿದ್ದು ನಗರದ ಮೊಟ್ಟಮೊದಲ ಪಂಚತಾರಾ ಹೋಟೆಲ್ ಎಂಬ ಖ್ಯಾತಿಗೆ ಒಳಗಾಗಿರುವ ಸಯ್ಯಾಜಿ ಹೋಟೆಲ್ ಮೂಲಕ. ಉದ್ಯಮಿ ದಿವಂಗತ ಸಾಜಿದ್ ಧನಾನಿ ಅವರು ಈ ಹೋಟೆಲ್ ಸ್ಥಾಪನೆ ಮಾಡಿದ್ದು 1982ರಲ್ಲಿ. ಇಲ್ಲಿನ ಖಾಸಗಿ ಪ್ಲಂಜ್ ಪೂಲ್ ನಲ್ಲಿ ಉಪಹಾರ ಸೇವಿಸುವ ಮಜವೇ ಬೇರೆ. ಉಪಹಾರದಲ್ಲಿ ಅಚ್ಚುಮೆಚ್ಚಿನ ಸಂಗತಿ ಎಂದರೆ ಸೇವ್, ಕತ್ತರಿಸಿದ ಈರುಳ್ಳಿ ತುಣುಕುಗಳ ಮಿಶ್ರಣವನ್ನು ಹೊಂದಿದ ಪೋಹಾ (ಅವಲಕ್ಕಿ). ಜೊತೆಗೆ ಬಿಸಿಬಿಸಿ ಜಿಲೇಬಿಯೂ ಲಭ್ಯ. ಹೋಟೆಲಿನ ಬೆಳಗಿನ ಉಪಹಾರದ ಬಫೆಯಲ್ಲಿ ಮಹಾರಾಷ್ಟ್ರದ ಮೊಳಕೆ ಕಾಳುಗಳಿಂದ ಮಾಡಿದ ಉಸುಳಿ ಮತ್ತು ಖಸ್ಟಾ ಖಚೋರಿ ಕೂಡ ಸಿಗುತ್ತವೆ. ಇದಕ್ಕೆ ಖಾರ ಖಾರವಾದ ಬೇಳೆ ಮಿಶ್ರಣವನ್ನೂ ಹಾಕಿಕೊಳ್ಳಬಹುದು.
ಈ ಹೋಟೆಲ್ ನಲ್ಲಿ ಇನ್ನೊಂದು ವಿಶೇಷತೆ ಏನೆಂದರೆ ಅತಿಥಿಗಳು ಇಲ್ಲಿರುವ ಎಂಟು ರೆಸ್ಟೋರಂಟ್ ಗಳ ಪಾಕಶಾಲೆಗೂ ಭೇಟಿ ನೀಡಿ ಪರಿಶೀಲಿಸಬಹುದು. ಇದರಿಂದ ಇಂದೋರ್ ನ ವಿಭಿನ್ನ ಆಹಾರ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬಹುದು. ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೂಡ ಇಂತಹ ಸಂಪ್ರದಾಯವಿದೆ.
ಸಾಂಚಿಯಲ್ಲಿರುವ ಸಯ್ಯಾಜಿ ಅವರ ಪ್ಯಾನ್ ಇಂಡಿಯಾ ರೆಸ್ಟೋರಂಟ್ ನಲ್ಲಿಯೂ ನನ್ನ ಆಹಾರದ ಪಯಣ ಮುಂದುವರಿಯುತ್ತದೆ. ಥಂಡಾ ಥಂಡಾ ನಿಂಬೂ ಜೂಸ್ (ಫ್ರೋಝನ್ ಶಿಕಂಜಿ), ಘೇವರ್ ಚಾಟ್ ಮತ್ತು ದಾಲ್ ಬಾಫ್ಲಾ ಚುರ್ಮಾ ನಮಗಾಗಿ ಕಾದಿರುತ್ತದೆ. ಅದರಲ್ಲೂ ರಾಜಸ್ಥಾನದ ಮಾಲ್ವಾ ಪ್ರದೇಶದ ವಿಶೇಷ ತಿಂಡಿ ದಾಲ್ ಬಾಟಿ ಚುರ್ಮಾ ಕೂಡ ಸವಿಯಬಹುದು. ಸಾಮಾನ್ಯವಾಗಿ ಬಾಫ್ಲಾ ಕಣಕವನ್ನು ಮೊದಲು ಕುದಿಸಿ ಆ ಬಳಿಕ ಬೇಕ್ ಮಾಡಲಾಗುತ್ತದೆ. ಹಾಗೆ ಮಾಡುವುದರಿಂದ ಅವು ಇನ್ನಷ್ಟು ಮೃದುವಾಗುತ್ತವೆ ಮತ್ತು ತುಪ್ಪದಿಂದ ಸಮೃದ್ಧ ದಾಲ್ ಜೊತೆಗೆ ರುಚಿಕಟ್ಟಾಗಿರುತ್ತದೆ.
ಇದೇ ಹೋಟೆಲ್ ನ ಏಷಿಯನ್ ರೆಸ್ಟೋರಂಟ್ ಚಾಪ್-ಸ್ಟಿಕ್ ಸಿಟಿಗೆ ಭೇಟಿ ನೀಡುವುದರಿಂದ ಮತ್ತೊಂದು ತಾಜಾ ಅನುಭವಕ್ಕೆ ನೀವು ಸಾಕ್ಷಿಯಾಗುತ್ತೀರಿ. ಡಿಮ್ ಸಮ್, ಕ್ಲೀಯರ್ ಸೂಪ್ ಮತ್ತು ಮಪೋ ತೋಫು ಲೇಪಿಸಿದ ಗರಿಗರಿಯಾದ ‘ಚಾಪ್-ಸ್ಟಿಕ್ ನೂಡಲ್’ –ಹೀಗೆ ಇದು ಹೊಸತನಗಳನ್ನು ಬಯಸುವವರಿಗೆ ಹಬ್ಬ.

56 ಅಂಗಡಿಗಳಿರುವ ಇಂದೋರ್ ನಗರದ ಚಪ್ಪನ್ ದುಕಾನ್
ಛಪ್ಪನ್ ದುಖಾನ್
56 ಬಗೆಯ ಆಹಾರ-ಒಂದೇ ಬೀದಿ: ಇಂದೋರ್ ಗೆ ಭೇಟಿ ಕೊಟ್ಟವರು ಛಪ್ಪನ್ ದುಖಾನ್ ಗೆ ಎಂಟ್ರಿ ಕೊಡದೇ ಹೋದರೆ ಅವರ ಆಹಾರ ಯಾತ್ರೆಯು ಅಪೂರ್ಣವೇ ಆಗುತ್ತದೆ. ಇದು ಭರೋಬ್ಬರಿ 56 ಅಂಗಡಿಗಳನ್ನು ಹೊಂದಿರುವ ಒಂದು ಸ್ಟ್ರೀಟ್ ಫುಡ್ ಸಂಕೀರ್ಣ. ಮೊದಲಿಗೆ ಇದೊಂದು ತರಕಾರಿ ಮಾರುಕಟ್ಟೆಯಾಗಿತ್ತು. ಬಳಿಕ ಇದನ್ನು 2020ರಲ್ಲಿ ಸ್ವಚ್ಛ ಸ್ಮಾರ್ಟ್ ಫುಡ್ ಝೋನ್ ಆಗಿ ಮರುವಿನ್ಯಾಗೊಳಿಸಲಾಗಿತ್ತು. ಜೊತೆಗೆ ತನ್ನದೇ ಆದ ರೇಡಿಯೋ ಕೇಂದ್ರವನ್ನು ಕೂಡ ತೆರೆಯಲಾಗಿರುವುದು ವಿಶೇಷ.
ತೆಂಗಿನಕಾಯಿ, ಶುಂಠಿ, ಒಣ ದ್ರಾಕ್ಷಿ ಮತ್ತು ಬಾದಾಮಿ ಮಿಶ್ರಣವನ್ನು ಒಳಗೊಂಡ ಆಲೂಗಡ್ಡೆಯ ಕರಿದ ಪ್ಯಾಟಿಯನ್ನು ಎಲೆಗಳಿಂದ ಮಾಡಿದ ತಟ್ಟೆಯಲ್ಲಿ ಹಾಕಿ ಸರ್ವ್ ಮಾಡುತ್ತಾರೆ. ಅದಕ್ಕೊಂದಿಷ್ಟು ಹುಳಿಹುಳಿ ಚಟ್ನಿಯನ್ನು ಬೆರೆಸಿ ತಿನ್ನಲು ಕುಳಿತಿರೆಂದರೆ ಕಳೆದೇ ಹೋಗುತ್ತೀರಿ.
ಮೊಟ್ಟೆ-ಮಟನ್ ಬೆಂಜೋ
ಇಂದೋರ್ ಮುಖ್ಯವಾಗಿ ಸಸ್ಯಾಹಾರಿ ಆಹಾರ ಸಂಸ್ಕೃತಿಯನ್ನು ತುಂಬಿಕೊಂಡಿದ್ದರೂ ಮಾಂಸಾಹಾರಿ ಖಾದ್ಯಗಳೂ ನಿಮ್ಮನ್ನು ಅಚ್ಚರಿಗೊಳಿಸದೇ ಇರದು. ಸ್ಥಳೀಯವಾಗಿ ಖ್ಯಾತಿ ಹೊಂದಿರುವ ಜಾನೀಸ್ ಹಾಟ್ ಡಾಕ್ ನಲ್ಲಿ ಮೊಟ್ಟೆ ಮತ್ತು ಮಟನ್ ಬೆಂಬೋ ಹಾಗೂ ಆಮ್ಲೇಟ್ ಅಥವಾ ಮಸಾಲೆಭರಿತ ಮಾಂಸದಿಂದ ತುಂಬಿದ ಬೆಣ್ಣೆಯ ಬನ್ ಗಳನ್ನು ಸವಿಯದೇ ನಿರ್ಗಮಿಸುವುದಿಲ್ಲ.
ಇದೇ ರೀತಿ ಇನ್ನೊಂದು ಆಯ್ಕೆ-ಸೀಗಡಿ ದೋಸೆ-ಚೀಸ್ ಮತ್ತು ಸ್ಥಳೀಯವಾದ ಮಸಾಲೆಗಳಿಂದ ತುಂಬಿದ ಉದ್ದನೆಯ ಸಿಲಿಂಡರ್ ಆಕಾರದ ದೋಸೆಗಳು ಎಲ್ಲರನ್ನೂ ಆಕರ್ಷಿಸದೇ ಇದ್ದರೆ ಕೇಳಿ. ಜೊತೆಗೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಾಬುದಾನ್ ವಡಾವನ್ನು ಟೇಸ್ಟ್ ಮಾಡಲೇಬೇಕು.

ಇಂದೋರ್ ಆಹಾರ ಸಂಸ್ಕೃತಿಯ ಮೇಲೆ ರಾಜಸ್ತಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸಂಪ್ರದಾಯಗಳ ಪ್ರಭಾವವಿದೆ.
“ಇಂದೋರ್ ನಲ್ಲಿ ಪ್ರತಿಯೊಂದೂ ಹೊಸ ಲೇಪನದೊಂದಿಗೆ ಬರುತ್ತವೆ” ಎನ್ನುತ್ತಾರೆ ಸ್ಥಳೀಯ ಗೈಡ್ ಹರೀಶ್ ರಾಜ್. ಇದಕ್ಕೆ ಇಲ್ಲಿ ಸರ್ವ್ ಮಾಡುವ ಪಾನಿ ಪುರಿ ಕೂಡ ಒಂದು ಉದಾಹರಣೆ. ಯಾಕೆಂದರೆ ಇದನ್ನು ಪುದಿನಾ ಮತ್ತು ಹುಣಸೆ ರಸವನ್ನು ಹೊರತುಪಡಿಸಿ ಹತ್ತು ಬಗೆಯ ತರಾವರಿ ಪಾನಿಗಳೊಂದಿಗೆ ನೀಡುತ್ತಾರೆ.
ಹಗಲು ಹೊಳೆವ ಆಭರಣ, ರಾತ್ರಿ ಫುಡ್ ಜಾತ್ರೆ
ಸರಾಫಾ ಬಜಾರ್ ಹಗಲಿನಲ್ಲಿ ಆಭರಣ ಮಾರಾಟದ ಗಡಿಬಿಡಿಯಲ್ಲಿ ಮುಳುಗಿರುತ್ತದೆ. ರಾತ್ರಿಯಾಯಿತೆಂದರೆ ಗಿಜಿಗುಡುವ ಫುಡ್-ಬಜಾರ್ ಆಗಿ ಪರಿವರ್ತನೆಗೊಳ್ಳುತ್ತದೆ. ಶತಮಾನದಷ್ಟು ಹಳೆಯದಾದ ಈ ಪ್ರದೇಶವು ಬೆಳಕು ಹರಿಯುವ ತನಕವೂ ತೆರೆದಿರುತ್ತದೆ. ಸ್ಥಳೀಯರಿಗೆ ರಾತ್ರಿಯೂಟದ ಬಳಿಕ ಅಚ್ಚುಮೆಚ್ಚಿನ ತಾಣವಾಗಿದೆ.
ತುರಿದ ಜೋಳವನ್ನು ಹಾಲಿನಲ್ಲಿ ಬೇಯಿಸಿ ಮಾಡಿದ ಖಾರದ ಪದಾರ್ಥ ಭುಟ್ಟೆ ಕಾ ಖೀಸ್. ಇದನ್ನು ತೆಂಗಿನ ತುರಿ ಮತ್ತು ನಿಂಬೆಯ ರಸದೊಂದಿಗೆ ಬೆರಿಸಿ ತಿನ್ನಬೇಕು. ಇಂದೋರ್ ನ ವಿಜಯ್ ಚಾಟ್ ಹೌಸ್ ನಲ್ಲಿ ಸಿಗುವ ಈ ಖೀಸ್ ಖಂಡಿತವಾಗಿ ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ.
ಇಷ್ಟಾದ ಮೇಲೆ ಸಿಹಿತಿಂಡಿ ತಿನ್ನಬೇಕಲ್ಲ? ನೀವು ಊಹಿಸಿರದಷ್ಟು ದೊಡ್ಡ ಗಾತ್ರದ ಗುಲಾಬ್ ಜಾಮೂನು, ಕ್ರೀಮ್-ಯುಕ್ತವಾದ ರಬಡಿ ಹಾಗೂ ಬಿಸಿಬಿಸಿ ಹೆಸರುಬೇಳೆ ಹಲ್ವಾ ಚಪ್ಪರಿಸದೇ ಈಚೆ ಬರುವಂತಿಲ್ಲ.
ಕೊನೆ ಸಿಡಿಯ ಹಾಗೆ ಒಂದು ಬೀಡಾ? ಅದೂ ವಿಶಿಷ್ಟ ಟೇಸ್ಟಿನದ್ದು? ಯಸ್. ಅದಕ್ಕೆ ಇವರು ಇಟ್ಟಿರುವ ಹೆಸರು ಪೇಠಾ ಪಾನ್. ಈ ಪಾನ್ ಒಳಗೆ ಏನೇನಿದೆ? ಗುಲ್ಕನ್, ಡ್ರೈಪ್ರೂಟು ಮತ್ತು ಹಸಿರು ಕುಂಬಳಕಾಯಿ ತುಂಡುಗಳು. ಇಷ್ಟನ್ನೂ ಹಾಕಿ ಹೊರಗಿನಿಂದ ಲವಂಗವನ್ನು ಚುಚ್ಚಿ ಸೀಲ್ ಮಾಡಲಾಗಿರುತ್ತದೆ. ಇದರ ಜೊತೆಗೆ ಗರಿಗರಿಯಾದ, ಮಸಾಲೆಭರಿತ, ಎಣ್ಣೆಯಲ್ಲಿ ಕರಿದ ಗೆಣಸಿನಂತಹ (ಗರಡು) ಕೆಲವು ಖಾದ್ಯಗಳು ಆಯಾ ಕಾಲಕ್ಕೆ ಸೂಕ್ತ. ಚಳಿಗಾಲಕ್ಕಂತೂ ಬೆಸ್ಟ್.
ಹೊರಡುವ ಮುನ್ನ
ಇಂದೋರ್ ನಿಂದ ಹೊರಡುವ ಮೊದಲು ಒಮ್ಮೆ ಯೋಚಿಸಿ; ಈ ಸ್ವಚ್ಛ ಶಹರಿಯಿಂದ ಏನು ಕೊಂಡೊಯ್ಯಬಹುದು ಎಂದು. ಅದಕ್ಕಾಗಿ ರತ್ಲಂ ಸೇವ್, ಮಸಾಲೆಯುಕ್ತ ಮಿಕ್ಸರ್ ಮತ್ತು ಈ ನಗರದ ಹೆಮ್ಮೆ ಎನಿಸಿದ ಜೀರವಾನ್ ಮಸಾಲಾ. ಇಷ್ಟನ್ನು ಸಂಗ್ರಹಿಸುವುದನ್ನು ಮರೆಯದಿರಿ. ಒಂದು ಹಾಟ್ ಹಾಟ್ ಚಹಾದೊಂದಿಗೆ ಇವು ಚೆಂದಗೆ ಕೂಡಿಕೊಳ್ಳುತ್ತವೆ ಮತ್ತು ಇಂದೋರ್ ನೆನಪನ್ನು ಶಾಶ್ವತಗೊಳಿಸುತ್ತವೆ ಕೂಡ.