ರಾಷ್ಟ್ರ ಭಾಷಾ ಸಂಘರ್ಷಕ್ಕೆ ರೂಪು ನೀಡಿದ ಭಾರತದ ಭಾಷಾ ಒಕ್ಕೂಟ ವ್ಯವಸ್ಥೆ
x
ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ದೇವೇಶ್ ಕಪೂರ್ ಮತ್ತು ಅರವಿಂದ್ ಸುಬ್ರಮಣಿಯನ್ ವಿರಚಿತ ಕೃತಿ- 'A Sixth of Humanity: Independent India's Development Odyssey' (ಮನುಕುಲದ ಆರನೇ ಒಂದು ಭಾಗ: ಸ್ವತಂತ್ರ ಭಾರತದ ಅಭಿವೃದ್ಧಿ ಪಯಣ). ಪುಟ: 760, ಬೆಲೆ: 1299 ರೂ.

ರಾಷ್ಟ್ರ ಭಾಷಾ ಸಂಘರ್ಷಕ್ಕೆ ರೂಪು ನೀಡಿದ ಭಾರತದ ಭಾಷಾ ಒಕ್ಕೂಟ ವ್ಯವಸ್ಥೆ

ದೇವೇಶ್ ಕಪೂರ್ ಮತ್ತು ಅರವಿಂದ್ ಸುಬ್ರಮಣಿಯನ್ ತಮ್ಮ ‘A Sixth of Humanity’ ಕೃತಿಯಲ್ಲಿ ಬಹುರಾಷ್ಟ್ರೀಯತೆಯನ್ನು ಒಳಗೊಂಡ ದೇಶ ನಿರ್ಮಾಣ ಮಾಡುವಾಗಿನ ಸವಾಲುಗಳನ್ನು ಸೋದಾಹರಣವಾಗಿ ವಿಶ್ಲೇಷಿಸಿದ್ದಾರೆ.


Click the Play button to hear this message in audio format

ದೇಶ ನಿರ್ಮಾಣಕ್ಕೆ ಇರುವ ಅತ್ಯಂತ ಸಶಕ್ತವಾದ ಸಾಧನಗಳಲ್ಲಿ ಒಂದೆಂದರೆ ಸಾಮಾನ್ಯ ಸಂವಹನ ಮಾಧ್ಯಮವಾದ ‘ರಾಷ್ಟ್ರಭಾಷೆ.’ ಭಾರತದ ಭಾಷಾ ವೈವಿಧ್ಯತೆ, ಅದರ ಪ್ರಾದೇಶಿಕ ಭಾಷೆಗಳ ಸಮೃದ್ಧ ಇತಿಹಾಸವು ಅವುಗಳ ಸಂಸ್ಕೃತಿ ಮತ್ತು ಉಪ-ರಾಷ್ಟ್ರೀಯತೆಗೆ ಮೂಲವಾಗಿದ್ದರಿಂದ 1950ರ ದಶಕದಲ್ಲಿ ಕಠಿಣ ಸವಾಲನ್ನು ಒಡ್ಡಿತ್ತು. ಬಹುರಾಷ್ಟ್ರೀಯತೆ (ಬಹುಭಾಷೆ ಮತ್ತು ಬಹು ಸಂಸ್ಕೃತಿ)ಯನ್ನು ಒಳಗೊಂಡಿರುವ ದೇಶವನ್ನು ನಿರ್ಮಾಣ ಮಾಡುವ ಸವಾಲುಗಳು ಕಾಲಕಾಲಕ್ಕೆ ಮರುಕಳಿಸುತ್ತಲೇ ಇವೆ. ಇದಕ್ಕೆ ಕೇಂದ್ರ ಸರ್ಕಾರವು ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಕಷ್ಟು ಸಹನೆ ತೋರದೇ ಇರುವುದು ಕೂಡ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲದೆ ಇದು ಭಾರತದ ಒಕ್ಕೂಟ ವ್ಯವಸ್ಥೆಯ ಜೊತೆಗೆ ನಂಟು ಹೊಂದಿತ್ತು.

ಭಾರತದಲ್ಲಿರುವ ಒಕ್ಕೂಟ ವ್ಯವಸ್ಥೆಯು ಅನೇಕ ವಿಧಗಳಲ್ಲಿ ವಿಭಿನ್ನವಾದುದಾಗಿದೆ. ಮೊಟ್ಟ ಮೊದಲನೆಯದಾಗಿ ಇದು ಅಮೆರಿಕದಂತೆ ‘ರಾಜ್ಯಗಳ ಒಕ್ಕೂಟ’ ಆಗಿರದೆ ಎಲ್ಲವನ್ನೂ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ‘ಒಕ್ಕೂಟ’ (ಯೂನಿಯನ್) ವ್ಯವಸ್ಥೆಯಾಗಿದೆ. ನಮ್ಮ ದೇಶವು ಒಂದು ‘ಸಮಗ್ರ ಘಟಕ’ವಾಗಿದ್ದು ಅದು ‘ಅವಿನಾಶಿ’ಯಾದ ಕಾರಣ ಒಂದು ಒಕ್ಕೂಟವಾಗಿದೆ ಎಂಬುದು ಸಂವಿಧಾನ ರಚನಾ ಸಭೆಗೆ ಸ್ಪಷ್ಟವಾಗಿತ್ತು. ಈ ‘ಸಮಗ್ರ ಘಟಕ’ಕ್ಕೆ ಕೆಲವು ಮೂಲಭೂತ ವಿಚಾರಗಳಲ್ಲಿ ಏಕರೂಪತೆಯನ್ನು ಆಧಾರವಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಾನೂನುಗಳು, ಏಕ ನ್ಯಾಯಾಂಗ ವ್ಯವಸ್ಥೆ ಮತ್ತು ಅಖಿಲ ಭಾರತ ನಾಗರಿಕ ಸೇವೆ ಅಡಕವಾಗಿವೆ.

ಹಿಂದಿ ಮತ್ತು ತಮಿಳು ಸಂಘರ್ಷ

ಸಂವಿಧಾನವು ಹೊಸ ರಾಜ್ಯಗಳನ್ನು ರಚಿಸಲು ಸಂಸತ್ತಿಗೆ ಅಧಿಕಾರ ನೀಡುವ ಮೂಲಕ ಒಕ್ಕೂಟಕ್ಕೆ ಅಸಮಾನ ಅಧಿಕಾರ ನೀಡಿದ್ದರೂ, ಇದರಿಂದ ಒಕ್ಕೂಟವು ಉಪ-ರಾಷ್ಟ್ರೀಯ ಆಕಾಂಕ್ಷೆಗಳಿಗೆ ಸ್ಪಂದಿಸಲು ಮತ್ತು ವಿಕಸನಗೊಳ್ಳಲು ಅವಕಾಶ ಉಂಟಾಯಿತು. ಇದು ಭಾರತದ ಆಂತರಿಕ ರಾಜಕೀಯ ಭೂಗೋಳದಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳಲ್ಲಿ ಸ್ಪಷ್ಟವಾಗಿದೆ.

1947, 1950, 1952ರಲ್ಲಿ ಆಗಿರುವ ಆರಂಭಿಕ ಬದಲಾವಣೆಗಳು ರಾಜಪ್ರಭುತ್ವದ ರಾಜ್ಯಗಳನ್ನು ಒಕ್ಕೂಟಕ್ಕೆ ಸೇರಿಸಿಕೊಂಡಿದ್ದಕ್ಕೆ ನೀಡಿದ ಪ್ರತಿಕ್ರಿಯೆಗಳಾಗಿದ್ದವು. 1953ರಲ್ಲಿ ಆಂಧ್ರ ರಾಜ್ಯದೊಂದಿಗೆ (ಮದ್ರಾಸ್ನಿಂದ ವಿಭಜಿಸಲಾಗಿದೆ) ಪ್ರಾರಂಭವಾದ 1956ರ ರಾಜ್ಯಗಳ ಮರು ಸಂಘಟನಾ ಕಾಯಿದೆಯು ಭಾರತೀಯ ಒಕ್ಕೂಟದ ಇಪ್ಪತ್ತೆಂಟು ಘಟಕಗಳನ್ನು (ಎ, ಬಿ ಮತ್ತು ಸಿ ಭಾಗದ ರಾಜ್ಯಗಳು ಮತ್ತು ಡಿ ಭಾಗದ ಪ್ರಾಂತ್ಯ-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ಇಪ್ಪತ್ತು ಘಟಕಗಳಾಗಿ, ಅಂದರೆ 14 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಾಗಿ ಸಂಯೋಜಿಸಲು ಕಾರಣವಾಯಿತು. 63 ವರ್ಷಗಳ ಬಳಿಕ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ, ಭಾರತದಲ್ಲಿ ಎರಡು ಪಟ್ಟು ಹೆಚ್ಚು ರಾಜ್ಯಗಳು (ಇಪ್ಪತ್ತೆಂಟು) ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳು ಇದ್ದವು.

ಸಂವಹನದ ಒಂದು ಸಾಮಾನ್ಯ ಮಾಧ್ಯಮ –ಯಾವಾಗಲೂ ರಾಷ್ಟ್ರೀಯತೆ ಮತ್ತು ರಾಷ್ಟ್ರ-ನಿರ್ಮಾಣದ ಅತ್ಯಂತ ಪ್ರಬಲ ಸಾಧನಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಭಾಷೆ ಗಣ್ಯರು ಮಾತನಾಡುವ ಭಾಷೆಯಾಗಿತ್ತು (1951 ರ ಜನಗಣತಿಯಲ್ಲಿ ಕೇವಲ ಶೇ. 1 ರಷ್ಟು ಜನಸಂಖ್ಯೆ ಮಾತ್ರ ಇಂಗ್ಲಿಷ್ ಮಾತನಾಡುತ್ತಿದ್ದರು), ಮತ್ತು ಈ ಗಣ್ಯರು ಹೆಚ್ಚಾಗಿ ಮೇಲ್ಜಾತಿಯವರಾಗಿದ್ದರು. ಇಷ್ಟು ಮಾತ್ರವಲ್ಲದೆ, ಅಂತಹ ಶ್ರೀಮಂತ ಭಾಷಾ ಸಂಪ್ರದಾಯಗಳನ್ನು ಹೊಂದಿರುವ ದೇಶಕ್ಕೆ, ವಸಾಹತುಶಾಹಿಗಳ ಭಾಷೆಯನ್ನೇ ಅಧಿಕೃತ ಭಾಷೆಯಾಗಿ ಮಾಡುವುದು ಕೆಲವರು ಮಾತ್ರ ಒಪ್ಪುವ ವಿಷಯವಾಗಿತ್ತು. ಮುಂದೆ ಕೀನ್ಯಾದ ಶ್ರೇಷ್ಠ ಬರಹಗಾರ ನಗುಗಿ ವಾ ಥಿಯಾಂಗ್ ’ಓ (Ngũgĩ wa Thiong'o) ಹೇಳಿದಂತೆ, “ವಸಾಹತುಶಾಹಿಗಳ ಭಾಷೆಯನ್ನು ತಮ್ಮದೆಂದು ಹೇಳಿಕೊಳ್ಳಲು ವಸಾಹತೀಕರಣಕ್ಕೆ ಒಳಗಾದವರು ಪ್ರಯತ್ನಿಸುವುದು, ಯಶಸ್ವಿ ಗುಲಾಮಗಿರಿಯ ಸಂಕೇತವಾಗಿದೆ.”

ಜನಮಾನಸದ ನಡುವೆ ಸಾಮಾನ್ಯ ಸಂವಹನ ಸಾಧನವು ಅಪೇಕ್ಷಣೀಯ. ಹಾಗಾಗಿಯೇ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡಲು ಅಸಾಧಾರಣವಾದ ಒತ್ತಡವಿತ್ತು. 2011ರ ಜನಗಣತಿಯ ಪ್ರಕಾರ ಹಿಂದಿ ಮತ್ತು ಅದಕ್ಕೆ ನಿಕಟವಾಗಿ ಸಂಬಂಧವನ್ನು ಹೊಂದಿದ ಭಾಷೆಗಳು ಸುಮಾರು ಶೇ.44ರಷ್ಟು ಜನರ ಮಾತೃಭಾಷೆಯಾಗಿದೆ. ಆದರೆ, ಇತರ ಭಾಷೆಗಳ ಸಮೃದ್ಧವಾದ ಇತಿಹಾಸವನ್ನು ಹೊಂದಿರುವ ಬಹುಭಾಷಾ ಹಿನ್ನೆಲೆಯ ರಾಷ್ಟ್ರದಲ್ಲಿ ಒಂದೇ ಒಂದು ಭಾಷೆಯನ್ನು ಬಲವಂತವಾಗಿ ಹೇರುವುದರಿಂದ ಪ್ರಾದೇಶಿಕ ರಾಷ್ಟ್ರೀಯತೆಯನ್ನು ಭಾಷಾ ಅಸ್ತಿತ್ವದಲ್ಲಿ ಬೇರೂರುವಂತೆ ಮಾಡಿ ವಿಘಟನೆಗೆ ಸಂಭಾವ್ಯ ಸಾಧನವಾಗಿಯೂ ಪರಿಣಮಿಸಬಹುದು. (ಪಾಕಿಸ್ತಾನದಲ್ಲಿ ಉರ್ದುವಿಗೆ ಆದ ಸ್ಥಿತಿ).

ಹಿಂದಿಯನ್ನು ಸಾಮಾನ್ಯ ಭಾಷೆಯಾಗಿ ಮಾಡುವ ಪ್ರಯತ್ನವನ್ನು ಬಂಗಾಲವೂ ಸೇರಿದಂತೆ ದಕ್ಷಿಣದ ರಾಜ್ಯಗಳು ಖಂಡತುಂಡವಾಗಿ ವಿರೋಧಿಸಿದವು. ಇಂತಹ ಸಂದರ್ಭದಲ್ಲಿ ಹಿಂದಿಯ ಅತ್ಯುತ್ಸಾಹಿ ಪ್ರತಿಪಾದಕರು ವಿಶಾಲವಾದ ವ್ಯವಹಾರ ಭಾಷೆಯಾದ ಹಿಂದುಸ್ತಾನಿಯನ್ನು ಸ್ವೀಕರಿಸಲು ಜಿದ್ದಿಗೆ ಬಿದ್ದವರಂತೆ ನಿರಾಕರಿಸಿದರು. ಹಾಗೆ ಮಾಡುವ ಮೂಲಕ ಏನೇನು ಮಾಡಿದರು? ಪರ್ಷಿಯನ್ ಭಾಷೆಯ ಶಬ್ಧಕೋಶವನ್ನು ಉತ್ಸಾಹದಿಂದ ಶುದ್ಧೀಕರಿಸಿದರು, ಕೇವಲ ದೇವನಾಗರಿ ಲಿಪಿಯನ್ನು ಬಳಸುವಂತೆ ಒತ್ತಾಯ ಮಾಡಿದರು ಮತ್ತು ದೇಶಾದ್ಯಂತ ಹೆಚ್ಚು ಸಮಾನ ಅವಕಾಶಗಳನ್ನು ಒದಗಿಸುವ ಸಾಧ್ಯತೆಯನ್ನು ಹೊಂದಿದ್ದ ಹಿಂದಿ ಮತ್ತು ಇತರ ಭಾಷಿಕರಿಗಾಗಿ ಸರಳೀಕೃತ ರೋಮನ್ ಲಿಪಿಯನ್ನು ಪರಿಗಣಿಸಲು ನಿರಾಕರಿಸಿದರು. ಇವೆಲ್ಲದರ ಮೂಲಕ ತಮ್ಮದೇ ಉದ್ದೇಶಕ್ಕೆ ಧಕ್ಕೆಯನ್ನು ತಂದರು.

ಸ್ವಿಜರ್ಲೆಂಡ್ ಮತ್ತು ಯುಗೊಸ್ಲಾವಿಯಾದಂತಹ ಇತರ ದೇಶಗಳು ಕೂಡ ಬಹುಭಾಷಾ ಸಂಸ್ಕೃತಿಯನ್ನು ಹೊಂದಿವೆ. ಆದರೆ ಭಾರತವು ಅದಕ್ಕಿಂತ ಭಿನ್ನ. ಯಾಕೆಂದರೆ ಇಲ್ಲಿನ ನಾನಾ ಭಾಷೆಗಳು ತಮ್ಮದೇ ಆದ ಪ್ರತ್ಯೇಕ ಲಿಪಿಗಳನ್ನು ಹಾಗೂ ಸಮೃದ್ಧ ಸಾಹಿತ್ಯ ಇತಿಹಾಸಗಳನ್ನು ಹೊಂದಿದ್ದವು. 12950ರ ದಶಕದಲ್ಲಿ ಮದ್ರಾಸ್-ನಲ್ಲಿ (ತಮಿಳು ವಿರುದ್ಧ ತೆಲುಗು) ಮತ್ತು ಅಸ್ಟಾಂನಲ್ಲಿ ಭಾಷೆಗೆ ಸಂಬಂಧಿಸಿದ ಸಂಘರ್ಷಗಳು ಹೊತ್ತಿಕೊಂಡವು. ಅಸ್ಟಾಂನಲ್ಲಿ ಬೆಂಗಾಲಿ ಮಾತನಾಡುವ ಭಾರೀ ಸಂಖ್ಯೆಯ ಜನರ ವಿರುದ್ಧ ಸಂಘರ್ಷವು ನಿರ್ದೇಶಿತವಾಗಿತ್ತು.

ಆದರೆ ಅತ್ಯಂತ ಗಂಭೀರ ಕದನ ನಡೆದಿದ್ದು ಹಿಂದಿ ಮತ್ತು ತಮಿಳಿನ ನಡುವೆ. ಮೊದಲು ಮದ್ರಾಸಿನಲ್ಲಿ ಮೊಳಕೆಯೊಡೆದ ಸಂಘರ್ಷವು ಬಳಿಕ ತಮಿಳು ನಾಡಿನಾದ್ಯಂತ ವ್ಯಾಪಿಸಿಕೊಂಡಿತು. ಅಲ್ಲಿ ದ್ರಾವಿಡ ಕಳಗಂ (DK ಮತ್ತು ಆ ಬಳಿಕ ಅದರ ಅಂಗಸಂಸ್ಥೆಯಾದ ಡಿಎಂಕೆ) ನೇತೃತ್ವದ ದ್ರಾವಿಡ ಚಳವಳಿಯು ತನ್ನ ಗುರುತನ್ನು ಮೊದಲು ಆರಂಭಿಸಿದ್ದು ದಕ್ಷಿಣ ಭಾರತದ ಬ್ರಾಹ್ಮಣರ ವಿರೋಧದಿಂದ. ತರುವಾಯ ಅದು ಹಿಂದಿ ವಿರೋಧಕ್ಕೆ ತಿರುಗಿ ಅಂತಿಮವಾಗಿ ಉತ್ತರ ಭಾರತೀಯರ ವಿರುದ್ಧ ತನ್ನ ಅಸ್ತ್ರವನ್ನು ಬಳಸಿತು. ಈ ಮೊದಲ ವಿರೋಧವನ್ನು ಆ ಬಳಿಕ ಹುಟ್ಟಿಕೊಂಡ ಎರಡು ಚಳವಳಿಗಳ ಜೊತೆಗೆ ಬುದ್ಧಿವಂತಿಕೆಯಿಂದ ಜೋಡಿಸಲಾಯಿತು. ‘ಭಾಷಾ ಅಭಿಮಾನ’ವು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿತ್ತು. ಇದನ್ನು ಕಾಲೇಜು ವಿದ್ಯಾರ್ಥಿಗಳು ಮುನ್ನಡೆಸಿದರು ಮತ್ತು ಮಹತ್ವಾಕಾಂಕ್ಷೆಯ ಪ್ರಾದೇಶಿಕ ಮುಖಂಡರು ಪ್ರಚೋದನೆ ನೀಡಿದರು.

ವಿಮೋಚನೆಯ ಭಾಷೆಯಾಗಿ ಇಂಗ್ಲಿಷ್

ಮೂಲಭೂತ ಸಮಸ್ಯೆ ಅಧ್ಯಾಯ IIರಲ್ಲಿ ಉಲ್ಲೇಖಿಸಿದಂತೆಯೇ ಇತ್ತು: ಅದು ಉದ್ಯೋಗಗಳಲ್ಲಿ ಅನುಗುಣವಾದ ವಿಸ್ತರಣೆಯಿಲ್ಲದೆ ಉನ್ನತ ಶಿಕ್ಷಣದ ಕ್ಷಿಪ್ರ ವಿಸ್ತರಣೆ. ಭಾಷೆಗೆ ನೀಡಿದ ಒತ್ತಡವು ಕೇವಲ ಅವರ ಸಾಂಸ್ಕೃತಿಕ ಪರಂಪರೆಯ ಜೀವಂತಿಕೆಯನ್ನು ಕಳೆದುಕೊಳ್ಳುವ ಭಯದಿಂದ ಮಾತ್ರವಲ್ಲದೆ, ಪ್ರವೇಶದ ಅಡೆತಡೆಗಳನ್ನು ಹೆಚ್ಚಿಸಲು ಮತ್ತು ಸ್ಪರ್ಧೆಯನ್ನು ಸೀಮಿತಗೊಳಿಸುವ ಉದ್ದೇಶದಿಂದಲೂ ಇತ್ತು. 1956ರಲ್ಲಿ ಕೈಗೊಳ್ಳಲಾದ ಭಾಷಾ ಆಧಾರಿತ ಮರುಸಂಘಟನೆಯು ಈ ಸಮಸ್ಯೆಯನ್ನು ಭಾಗಶಃ ಮಾತ್ರ ಪರಿಹರಿಸಲು ಶಕ್ತವಾಯಿತು. ಆ ಬಳಿಕ 1961ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಭಾರತದಲ್ಲಿ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಹನ್ನೆರಡಕ್ಕಿಂತ ಕಡಿಮೆ ಮಾತೃಭಾಷೆಗಳು (ಅಂದರೆ ಮಾತೃಭಾಷೆಗಳ ಸಂಖ್ಯೆಯು 12ರಿಂದ 410ರ ವರೆಗೂ ಇತ್ತು) ಇರಲಿಲ್ಲ. ಹೀಗಾಗಿ, ರಾಜ್ಯದ ಗಡಿಗಳನ್ನು ಏಕ ಅಥವಾ ದ್ವಿಭಾಷಾ ಮಾನದಂಡಗಳ ಆಧಾರದಲ್ಲಿ ರಚಿಸಿದ್ದರೂ ಕೂಡ ಮೂಲತಃ ಎಲ್ಲಾ ರಾಜ್ಯಗಳು ಬಹುಭಾಷಾ ಘಟಕಗಳಾಗಿದ್ದವು.

ಆದರೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಪ್ರಬಲ ಧ್ವನಿಗಳು ಕೇಳಿಬಂದವು. ಹಾಗಾಗಿ ಆಡಳಿತ ಭಾಷೆಯಾಗಿ ಇಂಗ್ಲಿಷ್ಗೆ ಆದ್ಯತೆ ನೀಡಿದ್ದರೆ, ಉತ್ತರ ರಾಜ್ಯಗಳಲ್ಲಿ ಇಂಗ್ಲಿಷ್ ವಿರುದ್ಧವೂ ಅಷ್ಟೇ ಉಗ್ರ ಪ್ರತಿಭಟನೆಗಳು ಕಂಡುಬಂದವು. ಏಕೆಂದರೆ, ಅಲ್ಲಿನ ಹಿಂದುಳಿದ ಜಾತಿಗಳು ಇಂಗ್ಲಿಷ್ ಅನ್ನು ಮೇಲ್ಜಾತಿಗಳ ಪ್ರಬಲ ಅಧಿಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾಷೆ ಎಂಬ ಕಾರಣದಿಂದ ವಿರೋಧಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಾಮಾಜಿಕ ಕ್ರಾಂತಿಕಾರಿ ಸಾವಿತ್ರಿಬಾಯಿ ಫುಲೆಯವರಿಂದ ಹಿಡಿದು, ಒಂದು ಶತಮಾನದ ನಂತರದ ದಲಿತ ಚಿಂತಕ ಚಂದ್ರ ಭಾನ್ ಪ್ರಸಾದ್ ಅವರವರೆಗೆ, ಇಂಗ್ಲಿಷ್ ಅನ್ನು ದಲಿತರ ಪಾಲಿನ ವಿಮೋಚನೆಯ ಭಾಷೆಯಾಗಿ ನೋಡಲಾಯಿತು.

ಭಾರತದ ಆಡಳಿತ ನಡೆಸುವ ಗಣ್ಯರ ಮೂರು ಪ್ರಮುಖ ಗುಣಲಕ್ಷಣಗಳೆಂದರೆ ಜಾತಿ ಸ್ಥಾನಮಾನ, ಸಂಪತ್ತು ಮತ್ತು ಇಂಗ್ಲಿಷ್ ಶಿಕ್ಷಣ ಎಂಬುದು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ನಂಬಿಕೆಯಾಗಿತ್ತು. ಅದಾದ ನಂತರ ಅವರ ಶಿಷ್ಯ ಕರ್ಪೂರಿ ಠಾಕೂರ್ ಅವರು ಬಿಹಾರದಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಲು ಇಂಗ್ಲಿಷ್ ಕಡ್ಡಾಯ ವಿಷಯ ಎಂಬ ನಿಯಮವನ್ನು ರದ್ದುಪಡಿಸಿದರು. ಆ ಬಳಿಕ ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳ ಗ್ರಾಮೀಣ ವಿದ್ಯಾರ್ಥಿಗಳ ಪ್ರಾತಿನಿಧ್ಯವು ತೀವ್ರವಾಗಿ ಹೆಚ್ಚಾಯಿತು.

ವಿಷಭರಿತ ಪಾತ್ರೆಗೆ ಬದಲು ಖಾಲಿ ಪಾತ್ರೆ!

ಆದರೆ, ಬಿಹಾರದಲ್ಲಿ ಹಿಂದುಳಿದ ಜಾತಿಗಳಿಗೆ ಉನ್ನತ ಶಿಕ್ಷಣದ ಪ್ರವೇಶಾವಕಾಶವನ್ನು ನೀಡಿದರೂ, ಅಲ್ಲಿನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವು ತೀವ್ರವಾಗಿ ಹದಗೆಟ್ಟು ಹೋಗಿದ್ದರ ಫಲವಾಗಿ ಅದು ಯಾವುದೇ ರೀತಿಯಲ್ಲಿ ನೈಜ ಪ್ರಯೋಜನವನ್ನು ನೀಡಲಿಲ್ಲ. ಪ್ರವೇಶ ದೊರೆತರೂ, ದೊರೆತ ಶಿಕ್ಷಣವು ಅಷ್ಟು ಕಳಪೆ ಗುಣಮಟ್ಟದ್ದಾಗಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಲಾಭವಾಗಲಿಲ್ಲ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ‘ವಿಷಭರಿತ ಪಾತ್ರೆ ಸಿಗುವ ಬದಲು ಖಾಲಿ ಪಾತ್ರೆ ಸಿಕ್ಕಿತು.’ ಭಾಷೆಗಳು ಪ್ರವರ್ಧಮಾನಕ್ಕೆ ಬರಬೇಕಾದರೆ, ಅವು ಯಾವತ್ತೂ ಚಲನಶೀಲವಾಗಿರಬೇಕು. ಉತ್ತರ ಭಾರತದಲ್ಲಿ ವಿಶ್ವವಿದ್ಯಾಲಯಗಳ ನಾಶವು ಸಮೃದ್ಧ ಹಿಂದಿ ಸಾಹಿತ್ಯದ ಪರಂಪರೆಯ ಮೂಲವನ್ನೇ ಬರಿದು ಮಾಡಿತು.

STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳಲ್ಲಿನ ಅತ್ಯುತ್ತಮ ಪಠ್ಯಪುಸ್ತಕಗಳನ್ನು ಇಂಗ್ಲಿಷ್ನಿಂದ ಹಿಂದಿಗೆ ಭಾಷಾಂತರಿಸುವ ಪ್ರಯತ್ನಗಳು ಕೂಡ ಅತ್ಯಂತ ಕನಿಷ್ಠ ಮಟ್ಟದ್ದಾಗಿದ್ದವು. ಹಿಂದಿ ಭಾಷೆಯೇನೋ ಹರಡಿತು, ಆದರೆ ಇದು ಮುಖ್ಯವಾಗಿ ಸರ್ಕಾರೇತರ ಪ್ರಸರಣ ಮಾರ್ಗಗಳ ಮೂಲಕ ನಡೆಯಿತು. ಇವುಗಳಲ್ಲಿ ಬಾಲಿವುಡ್ ಚಲನಚಿತ್ರಗಳು ಮತ್ತು ಸಂಗೀತ, ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಭಾರತದಿಂದ ಉತ್ತರಕ್ಕೆ ಉದ್ಯೋಗಗಳಿಗಾಗಿ ಹೋದ ವಲಸಿಗರು, ಮತ್ತು ನಂತರದ ಶತಮಾನದಲ್ಲಿ ಇದರ ವಿರುದ್ಧ ದಿಕ್ಕಿನಲ್ಲಿ ಆದ ವಲಸೆ, ಹಾಗೂ ನಾಗರಿಕ ಸಮಾಜ ಸಂಸ್ಥೆಗಳ ಪ್ರಯತ್ನಗಳು ಸೇರಿವೆ. ಆದಾಗ್ಯೂ, ಈ ಪ್ರವೃತ್ತಿಗಳನ್ನು ಪ್ರೋತ್ಸಾಹಿಸುವ ಬದಲು, ಕೇಂದ್ರ ಸರ್ಕಾರದ ಕಡೆಯಿಂದ ಒತ್ತಾಯದ ಹೊಸ ಗ್ರಹಿಕೆ ಮತ್ತೆ ಭಾಷಾ ವಿವಾದಗಳ ಬೆಂಕಿಯನ್ನು ಹೊತ್ತಿಸುವ ಬೆದರಿಕೆಯನ್ನು ಮುನ್ನೆಲೆಗೆ ತಂದಿತು.


(ಈ ಲೇಖನದ ಭಾಗವನ್ನು ದೇವೇಶ್ ಕಪೂರ್ ಮತ್ತು ಅರವಿಂದ್ ಸುಬ್ರಮಣಿಯನ್ ಅವರು ಬರೆದಿರುವ 'A Sixth of Humanity: Independent India's Development Odyssey' ಎಂಬ ಕೃತಿಯಿಂದ, ಹಾರ್ಪರ್ ಕಾಲಿನ್ಸ್ ಇಂಡಿಯಾದ ಅನುಮತಿಯೊಂದಿಗೆ ಆಯ್ದು ಪ್ರಕಟಿಸಲಾಗಿದೆ. ಲೇಖಕರು 'The Federal' ಪತ್ರಿಕೆಯ ಸಂಪಾದಕೀಯ ಮುಖ್ಯಸ್ಥರಾದ ಎಸ್. ಶ್ರೀನಿವಾಸನ್ ಅವರೊಂದಿಗೆ ಡಿಸೆಂಬರ್ 3 ರಂದು ಚೆನ್ನೈನ ಗ್ರೇಟ್ ಲೇಕ್ಸ್ ಕ್ಯಾಂಪಸ್‌ನಲ್ಲಿ ನಡೆದ ಹೊಸ ವಿಚಾರಗಳ ಸರಣಿ, 'Voices That Count' ನ ಭಾಗವಾಗಿ ಸಂವಾದ ನಡೆಸಿದರು.)

Read More
Next Story