ಚಿರತೆ-ಮಾನವ ಸಹಬಾಳ್ವೆ ಮಾದರಿಗೆ ದಕ್ಕಿತು ರಾಷ್ಟ್ರೀಯ ಸಮ್ಮಾನ!
x
ತೆಲಂಗಾಣದ ಪೋಚರಂ ಪಟ್ಟಣದಲ್ಲಿ ಕಳೆದೊಂದು ದಶಕದಲ್ಲಿ ಸತ್ತಿರುವ ಚಿರತೆಗಳ ಸಂಖ್ಯೆ ಹದಿನೆಂಟು. ಇದನ್ನು ತಡೆಯಲು ಹೈದರಾಬಾದಿನ ಹುಲಿ ಸಂರಕ್ಷಣಾ ಸೊಸೈಟಿಯ ಸಂಶೋಧಕರಾದ ಪಾರಿಹಾ ಪಾತಿಮಾ ಕಂಡುಕೊಂಡಿದ್ದು ಮಾನವ-ಚಿರತೆ ಸಹಬಾಳ್ವೆ ಮಾದರಿಯನ್ನು.

ಚಿರತೆ-ಮಾನವ ಸಹಬಾಳ್ವೆ ಮಾದರಿಗೆ ದಕ್ಕಿತು ರಾಷ್ಟ್ರೀಯ ಸಮ್ಮಾನ!

ತೆಲಂಗಾಣದಲ್ಲಿ 18 ಚಿರತೆಗಳು ಸಾವನ್ನಪ್ಪಿದ್ದು, ಆ ಹಿನ್ನೆಲೆಯಲ್ಲಿ ಸಮುದಾಯ-ಚಾಲಿತ ಕ್ರಮವನ್ನು ಜಾರಿಗೆ ತಂದಿದ್ದಕ್ಕಾಗಿ ಟೈಗರ್ ಕನ್ಸರ್ವೇಶನ್ ಸೊಸೈಟಿ ರಾಷ್ಟ್ರೀಯ ವನ್ಯಜೀವಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


Click the Play button to hear this message in audio format

ಡೆಹ್ರಾಡೂನ್‌ನ ಹಳೆಯ ಸಾಲ್ ಮರಗಳ ತಪ್ಪಲಿನಲ್ಲಿ, ಗಾಳಿಯು ಸೌಮ್ಯವಾದ ಪೈನ್‌ನ ವಾಸನೆಯನ್ನು ಸೂಸುತ್ತಿದ್ದ ಹೊತ್ತಿನಲ್ಲಿ ಅರಣ್ಯ ಸಂಶೋಧನಾ ಸಂಸ್ಥೆಯ ಹರಿ ಸಿಂಗ್ ಆಡಿಟೋರಿಯಂನಲ್ಲಿ ಕರತಾಡನದ ಸದ್ದು ಮೊಳಗಿತು. ಅಲ್ಲಿ ವೇದಿಕೆ ಮೇಲೆ ಹೈದರಾಬಾದ್ ಯುವತಿಯೊಬ್ಬಳು ನಿಂತಿದ್ದಳು, ಆಕೆಯ ಶಾಂತ ಮುಖಭಾವವು ಮಂದ ಬೆಳಕಿನಿಂದ ಆವೃತವಾಗಿತ್ತು. ಕ್ಷೇತ್ರ ಸಂಶೋಧಕಿ ಮತ್ತು ಸಂರಕ್ಷಣಾಕಾರರಾದ ಫರಿಹಾ ಫಾತಿಮಾ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಯೋಜಿಸಿದ್ದ ವೈಲ್ಡ್‌ಲೈಫ್‌ ವೀಕ್ 2025ರ ಸಂದರ್ಭದಲ್ಲಿ, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಂದ ಹೈದರಾಬಾದ್ ಟೈಗರ್ ಕನ್ಸರ್ವೇಶನ್ ಸೊಸೈಟಿ (HYTICOS) ಪರವಾಗಿ ರಾಷ್ಟ್ರೀಯ ವನ್ಯಜೀವಿ ಪ್ರಶಸ್ತಿಯನ್ನು ಸ್ವೀಕರಿಸಿದರು.

HYTICOS ತಂಡವನ್ನು ಪ್ರತಿನಿಧಿಸಿದ್ದ ಫಾತಿಮಾ ಅವರು, ತೆಲಂಗಾಣದ ಉಪನಗರವಾದ ಪೋಚಾರಂನಲ್ಲಿ ಸಮುದಾಯ-ಚಾಲಿತ ಪರಿಹಾರಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ ರಾಷ್ಟ್ರೀಯ ಫೈನಲಿಸ್ಟ್ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು. ಅಲ್ಲಿ ಕಳೆದೊಂದು ದಶಕದ ಅವಧಿಯಲ್ಲಿ ಸಂಘರ್ಷ-ಸಂಬಂಧಿತ ಘಟನೆಗಳಲ್ಲಿ 18 ಚಿರತೆಗಳು ಸಾವನ್ನಪ್ಪಿವೆ. ಈ ಪ್ರಶಸ್ತಿಯು ಅರಣ್ಯ ರಕ್ಷಕರು, ಫೀಲ್ಡ್ ಟ್ರ್ಯಾಕರ್, ಸಂಶೋಧಕರು ಮತ್ತು HYTICOSನ ಸ್ವಯಂಸೇವಕರ ಸಂಪೂರ್ಣ ಸಮುದಾಯಕ್ಕೆ ಸಂದಾಯವಾಗಿದೆ.

ಚಿರತೆಗಳು ಇನ್ನೂ ಕತ್ತಲೆಯಲ್ಲಿ ಪಾದರಸದಂತೆ ಚಲಿಸುವ ತೆಲಂಗಾಣದ ಪೊದೆ ಕಾಡುಗಳಿಂದ ಹಿಡಿದು ಈಗ ಈ ಪ್ರಶಸ್ತಿಯ ಮೂಲಕ ಗುರುತಿಸುತ್ತಿರುವ ಕ್ಷಣದವರೆಗೆ ಅವರು ಬಹಳ ದೂರ ಸಾಗಿ ಬಂದಿದ್ದಾರೆ. ವನ್ಯಜೀವಿ ಕಥೆಗಳು ಹೆಚ್ಚಾಗಿ ಸಂಘರ್ಷದಲ್ಲಿ ಕೊನೆಗೊಳ್ಳುವ ದೇಶದಲ್ಲಿ, HYTICOS ಬಹುತೇಕ ಮೂಲಭೂತವಾದ ಕೆಲಸವನ್ನು ನಿರ್ವಹಿಸಿದೆ: ಜನರು ಮತ್ತು ಪರಭಕ್ಷಕಗಳು ಒಂದೇ ಜಾಗವನ್ನು ಮತ್ತೆ ಹಂಚಿಕೊಳ್ಳುವಂತೆ ಮಾಡುವಲ್ಲಿ ಅವರು ಮನವೊಲಿಸುವ ಕೆಲಸ ಮಾಡಿದರು.

ಕಾಡಿನ ಹಾದಿ ಆಯ್ಕೆ ಮಾಡಿಕೊಂಡವರು

"ಮನುಷ್ಯ ಮತ್ತು ವನ್ಯಜೀವಿ ಸಹಬಾಳ್ವೆ" ಎಂಬ ವಿಷಯಾಧಾರಿತ ರಾಷ್ಟ್ರೀಯ ಹ್ಯಾಕಥಾನ್ನಲ್ಲಿ ಈ ಮನ್ನಣೆ ಲಭಿಸಿತು. ಭಾರತದಾದ್ಯಂತ ಇರುವ 120 ತಂಡಗಳು – 420 ಸಂರಕ್ಷಣಾ ತಜ್ಞರು, ಅರಣ್ಯ ಅಧಿಕಾರಿಗಳು ಮತ್ತು ಜೀವಶಾಸ್ತ್ರಜ್ಞರನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ, ಪರಿಸರ ಸಚಿವಾಲಯವು ಗೌರವಿಸಲು ಆರಿಸಿದ್ದು HYTICOS ತಂಡವನ್ನು. ಅವರ ಪ್ರಸ್ತಾವನೆಯು ಪೋಚರಂ ವನ್ಯಜೀವಿ ಧಾಮದ ಕೆಂಪು ಮಣ್ಣಿನಲ್ಲಿ ರೂಪ ತಳೆಯಿತು.

ಅಲ್ಲಿ ಕೆಲವು ವರ್ಷಗಳಿಂದ ಕಾಡಿನ ಮಧ್ಯೆ ಹಾದುಹೋಗುವ ಹೆದ್ದಾರಿಗಳಲ್ಲಿ ವಾಹನಗಳಿಗೆ ಸಿಲುಕಿ ಚಿರತೆಗಳು ಸಾಯುತ್ತಿದ್ದವು; ಇನ್ನು ಕೆಲವು ಜಾನುವಾರುಗಳನ್ನು ಕೊಂದ ನಂತರ ವಿಷಪ್ರಾಶನದಿಂದಲೂ ಪ್ರಾಣ ಕಳೆದುಕೊಳ್ಳುತ್ತಿದ್ದವು. ಈ ಸಂಘರ್ಷ ಅನಿವಾರ್ಯವಲ್ಲ, ಬದಲಿಗೆ ತಪ್ಪು ತಿಳುವಳಿಕೆಯಿಂದ ಹೀಗೆಲ್ಲ ಆಗುತ್ತಿದೆ ಎಂಬುದನ್ನು HYTICOS ಕಂಡುಕೊಂಡಿತು.

HYTICOS ತಂಡವನ್ನು ಸ್ಥಾಪಿಸಿದ್ದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science, Bengaluru) ತರಬೇತಿ ಪಡೆದ ವಿಜ್ಞಾನಿಗಳಾದ ಇಮ್ರಾನ್ ಮತ್ತು ಆಸಿಫ್ ಸಿದ್ದಿಕಿ ಎಂಬ ಸಹೋದರರು. ಅವರು ಸಂಶೋಧನಾ ಅನುದಾನ ಮತ್ತು ಶೈಕ್ಷಣಿಕ ವೃತ್ತಿಜೀವನದಂತಹ ಮಾರ್ಗವನ್ನು ಆರಿಸಬಹುದಿತ್ತು. ಅದರ ಬದಲಿಗೆ, ಅವರು ಕಾಡಿನತ್ತ ಹೆಜ್ಜೆ ಹಾಕಿದರು.

"ನಾವೇನಾದರೂ ಹುಲಿಗಳು, ಅರಣ್ಯ ಮತ್ತು ನದಿಗಳನ್ನು ರಕ್ಷಿಸಿದರೆ, ಅವು ನಮ್ಮನ್ನು ರಕ್ಷಿಸುತ್ತವೆ," ಎಂಬ ಧ್ಯೇಯದೊಂದಿಗೆ, ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಹುಲಿಗಳ ಜಾಡು ಹಿಡಿಯಲು ಶುರುಮಾಡಿಕೊಂಡರು. ಸ್ಥಳೀಯವಾಗಿ ಲಭ್ಯವಿರುವ ದತ್ತಾಂಶವನ್ನು ನೀತಿ ಕಲ್ಪನೆಗಳು ಮತ್ತು ಕ್ಷೇತ್ರದಲ್ಲಿನ ಮಧ್ಯಸ್ಥಿಕೆಗಳಾಗಿ ಪರಿವರ್ತಿಸುವ ಕೆಲಸ ಮಾಡಿದರು. ಕಾಲಾನಂತರದಲ್ಲಿ, ಅವರ ಸಣ್ಣ ಸಂಘಟನೆಯೇ ಒಂದು ಶಾಂತವಾದ ಚಳವಳಿಯಾಯಿತು, ಮುಂದೆ ಇದು ವಿದ್ಯಾರ್ಥಿಗಳು, ಜೀವಶಾಸ್ತ್ರಜ್ಞರು ಮತ್ತು ಯುವ ವೃತ್ತಿಪರರನ್ನು ಆಕರ್ಷಿಸಿತು. ಇವರೆಲ್ಲ ನಗರ ಜೀವನವನ್ನು ತೊರೆದು ಇಂತಹ ಅಪರೂಪದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು.

ಇಂದು, ಅವರ ತಂಡದಲ್ಲಿ ನೀಲಾಂಜನ್ ಬಸು, ಇಮ್ಯಾನುಯೆಲ್ ಸಂಪತ್, ರೇವತಿ ಕೆ, ಮತ್ತು ವಂಶಿ ತಲಾರಿ ಅವರಂತಹ ಸಂಶೋಧಕರು ಸೇರಿಕೊಂಡಿದ್ದಾರೆ. ಇದರ ಜೊತೆಗೆ, ಭೀಮರಾವ್, ಶಂಕರಯ್ಯ, ಸೋಮಯ್ಯ ಮತ್ತು ಇತರ ಕ್ಷೇತ್ರ ಸಹಾಯಕರೂ ಇದ್ದಾರೆ. ಪ್ರಾಣಿಗಳ ಜಾಡು ಮತ್ತು ಗ್ರಾಮಗಳ ಪರಿಸ್ಥಿತಿಯ ಬಗ್ಗೆ ಇವರಲ್ಲಿರುವ ಜ್ಞಾನವು ಉಪಗ್ರಹ ಮತ್ತು ಸಂವೇದಕಗಳ ಜ್ಞಾನವನ್ನು ಮೀರಿಸುತ್ತದೆ. ಒಟ್ಟಿನಲ್ಲಿ ಅವರು HYTICOS ಮಾಡುವ ಕೆಲಸಗಳಿಗೆ ಆಧಾರಸ್ತಂಭವಾದರು.

ಚಿರತೆಗಳ ಸಾವಿನ ಜಾಡು ಹಿಡಿದು

ಫಾತಿಮಾ ಅವರು ವೈಜ್ಞಾನಿಕ, ಸ್ಥಳೀಯ ಮತ್ತು ಸಹಾನುಭೂತಿಯಿಂದ ಕೂಡಿದ ಹೊಸ ಸಂರಕ್ಷಣಾ ನೀತಿಯ ಶೋಧವಾಗಿದ್ದಾರೆ; ಅದು ಕಾಗಜ್ನಗರ ಮತ್ತು ಪೋಚರಂ ನಲ್ಲಿ ಅವರು ಸಮುದಾಯ-ಆಧಾರಿತ ಸಂಘರ್ಷಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮುನ್ನಡೆಸಿದ ಅನುಭವವನ್ನು ಅವರ ಡೆಹ್ರಾಡೂನ್ ಪ್ರಸ್ತುತಿಗಳಲ್ಲಿ ವಿವರಿಸಿದರು.

ಫಾರಿಹಾ ಒಂದು ಸರಳ, ಆದರೆ ವಿನಾಶಕಾರಿಯಾದ ಮಾದರಿಯನ್ನು ಗಮನಿಸಿದರು: ಸಾಕಷ್ಟು ಸಂಖ್ಯೆಯ ಚಿರತೆಗಳು ದಟ್ಟಾರಣ್ಯದೊಳಗೆ ಸಾಯುತ್ತಿರಲಿಲ್ಲ, ಬದಲಿಗೆ ರಸ್ತೆಗಳ ಬಳಿ ಸಾಯುತ್ತಿದ್ದವು. "ಅವು ಕೇವಲ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದವು," ಎಂದು ಅವರು ತಮ್ಮ ಕ್ಷೇತ್ರ ವರದಿಗಳಲ್ಲಿ ಒಂದರಲ್ಲಿ ಹೇಳಿದ್ದರು. ಇನ್ನು ಕೆಲವು ವಿಷಪ್ರಾಶನದಿಂದ ಸಾಯುತ್ತಿದ್ದವು–ಕೆಲವೊಮ್ಮೆ ಉದ್ದೇಶಪೂರ್ವಕವಾಗಿ, ಕೆಲವೊಮ್ಮೆ ಆಕಸ್ಮಿಕವಾಗಿ, ಕಾಡುಹಂದಿಗಳಿಗೆ ಮೀಸಲಾದ ಕೀಟನಾಶಕಗಳನ್ನು ತುಂಬಿದ ಪ್ರಾಣಿಗಳ ಕಳೇಬರಗಳನ್ನು ತಿಂದಾಗ ಹೀಗಾಗುತ್ತಿತ್ತು. “ಈ ಪ್ರಾಣಿಗಳು ತಮ್ಮ ತಪ್ಪು ತಿಳುವಳಿಕೆಯಿಂದ ಸಾಯುತ್ತಿವೆ, ಆದರೆ ಅವುಗಳ ತಪ್ಪನ್ನು ಮನವರಿಕೆ ಮಾಡಲು ಯಾರೂ ಅಲ್ಲಿ ಇಲ್ಲದೇ ಇರುವುದು ಮುಖ್ಯ ಸಮಸ್ಯೆ" ಎಂದು ಅವರು ಹೇಳಿದರು,

ಅವರು ಅನುಸರಿಸಿದ ವಿಧಾನವು ಅದರ ವಿನಮ್ರತೆಯ ಹಿನ್ನೆಲೆಯಲ್ಲಿ ಎದ್ದು ಕಾಣುತ್ತಿತ್ತು: ಅವರು ಜನರೊಂದಿಗೆ ಮಾತನಾಡಿದರು. ಚಿರತೆಗಳು ಯಾಕೆ ಪರಿಸರ ವ್ಯವಸ್ಥೆಯ ಭಾಗವಾಗಿದೆ, ಅವುಗಳನ್ನು ಕಳೆದುಕೊಂಡರೆ ಕೇವಲ ಅರಣ್ಯಕ್ಕೆ ಮಾತ್ರವಲ್ಲದೆ ಹಳ್ಳಿಯ ಆರ್ಥಿಕತೆಗೂ ಏಕೆ ಹಾನಿಯಾಗುತ್ತದೆ ಎಂಬುದನ್ನು ಅವರು ವಿವರಿಸಿದರು. ನಿಧಾನವಾಗಿ, ಪ್ರತಿರೋಧ ಕಡಿಮೆಯಾಯಿತು. ಗ್ರಾಮಸ್ಥರು ಚಿರತೆಯನ್ನು ನೋಡಿದಾಗ ತಾವೇ ಪ್ರತೀಕಾರ ತೀರಿಸಿಕೊಳ್ಳುವ ಬದಲು, ಅವರ ತಂಡಕ್ಕೆ ಮಾಹಿತಿ ನೀಡಲು ಪ್ರಾರಂಭಿಸಿದರು.

HYTICOS ಸಂಸ್ಥೆಯನ್ನು ಸ್ಥಾಪಿಸಿದ ಸಹೋದರರಾದ ಇಮ್ರಾನ್ ಮತ್ತು ಆಸಿಫ್ ಸಿದ್ದಿಕಿ. ಇಬ್ಬರೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆದ ವಿಜ್ಞಾನಿಗಳು.

ಸಹಬಾಳ್ವೆಯ ವ್ಯವಸ್ಥೆ

“ಸಹಬಾಳ್ವೆ ಒಂದು ಘೋಷಣೆ ಅಲ್ಲ, ಅದು ಒಂದು ವ್ಯವಸ್ಥೆ," ಎಂದು ಫಾರಿಹಾ ಅವರು 'ಫೆಡರಲ್’ಗೆ ತಿಳಿಸಿದರು. HYTICOS ತಂಡವು ಅರಣ್ಯದಂಚಿನ ಗ್ರಾಮಗಳಲ್ಲಿ ಸಮುದಾಯ ಜಾಗೃತಿ ವಲಯಗಳನ್ನು ರಚಿಸಲು ಪ್ರಾರಂಭಿಸಿತು. ಚಿರತೆ ಕಂಡಾಗ ಶಾಂತವಾಗಿ ಪ್ರತಿಕ್ರಿಯಿಸುವುದು ಹೇಗೆ, ಹೆಜ್ಜೆಗುರುತುಗಳನ್ನು ಗುರುತಿಸುವುದು ಹೇಗೆ, ಮತ್ತು ಯಾವಾಗ ಸಹಾಯಕ್ಕಾಗಿ ಕರೆ ಮಾಡಬೇಕು ಎಂಬುದರ ಬಗ್ಗೆ ಅವರು ಅಲ್ಲಿನ ನಿವಾಸಿಗಳಿಗೆ ತರಬೇತಿ ನೀಡಿದರು.

ಈ ಕಾರ್ಯಕ್ರಮಗಳು ಜನರಿಗೆ ಭಯವನ್ನೇ ಪರಿಚಯವನ್ನಾಗಿ ಪರಿವರ್ತಿಸಿದವು. ಒಂದು ಕಾಲದಲ್ಲಿ ಚಿರತೆಗಳನ್ನು ಬೆದರಿಕೆ ಎಂದು ನೋಡುತ್ತಿದ್ದ ಜನರೇ ಅವುಗಳನ್ನು ನೆರೆಹೊರೆಯವರಂತೆ ನೋಡಲು ಶುರುಮಾಡಿದರು. ಚಿರತೆಯು ಜಾನುವಾರುಗಳನ್ನು ಕೊಂದಾಗ, ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರವು ಯಾವುದೇ ವಿಳಂಬವಿಲ್ಲದೆ ರೈತನಿಗೆ ತಲುಪಲು ಸಾಧ್ಯವಾಯಿತು. ಇದರಿಂದಾಗಿ ಜನರಿಗೆ ಕೋಪದ ಬದಲು ನಂಬಿಕೆ ಮೂಡಿತು.

ಇಮ್ರಾನ್ ಸಿದ್ದಿಕಿ ಅವರು ತಮ್ಮ ಉದ್ದೇಶವನ್ನು ಸರಳವಾಗಿ ವಿವರಿಸುತ್ತಾರೆ: “ನಾವು ಮನುಷ್ಯರಿಗೆ ಮತ್ತು ವನ್ಯಜೀವಿಗಳಿಗೆ ಮತ್ತೆ ಸಹಬಾಳ್ವೆ ಮಾಡಲು ಕಲಿಸುತ್ತಿದ್ದೇವೆ.” ಈ ಸಂಘರ್ಷ ಹೆಚ್ಚಾಗಿ ಪ್ರಾಣಿಗಳಿಂದ ಉದ್ಭವಿಸುವುದಿಲ್ಲ, ಬದಲಿಗೆ ತಪ್ಪು ಮಾಹಿತಿಯಿಂದ ಉಂಟಾಗುತ್ತದೆ ಎಂದು ಅವರು ಹೇಳುತ್ತಾರೆ: ವೈರಲ್ ಕ್ಲಿಪ್ಗಳು, ಸಾಮಾಜಿಕ ಮಾಧ್ಯಮದ ಭೀತಿ, ಮತ್ತು ಉದ್ರೇಕಕಾರಿ ಶೀರ್ಷಿಕೆಗಳಿಂದ ಹೀಗಾಗುತ್ತದೆ. "ನಾವು ಭಯವನ್ನು ತಿಳುವಳಿಕೆಯಿಂದ ಬದಲಾಯಿಸಬೇಕು," ಎಂದು ಅವರು ಒತ್ತಿ ಹೇಳುತ್ತಾರೆ.

ರಾತ್ರಿ ಕಾಡಿನ ರಕ್ಷಕರು

ಇನ್ನೊಬ್ಬ ಸಹ-ಸಂಸ್ಥಾಪಕರಾದ ಆಸಿಫ್ ಸಿದ್ದಿಕಿ ಅವರ ನಂಬಿಕೆಯೇನೆಂದರೆ, ಶಿಕ್ಷೆಗಳನ್ನು ವಿಧಿಸುವುದಕ್ಕಿಂತ ಯೋಜನೆಯಲ್ಲಿ ತೊಡಗಿಸಿಕೊಂಡರೆ ಉತ್ತರ ಲಭ್ಯವಾಗುತ್ತದೆ ಎಂಬುದು. ಅವರು ವನ್ಯಜೀವಿಗಳಿಗಾಗಿ ಭೂಗತ ಮಾರ್ಗಗಳು, ಅರಣ್ಯ ರಸ್ತೆಗಳಲ್ಲಿ ವೇಗ ತಡೆಗಳು ಮತ್ತು ಅರಣ್ಯನಾಶದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕಾಗಿದೆ ಎಂದು ಪ್ರತಿಪಾದಿಸುತ್ತಾರೆ. "ಚಿರತೆಗಳಿಗೂ ಬದುಕುವ ಹಕ್ಕಿದೆ," ಎಂಬುದು ಅವರ ಗಟ್ಟಿ ನಿಲುವು. "ಒಂದು ಚಿರತೆ ನಿಮ್ಮ ಹಳ್ಳಿ ಬಳಿ ಬಂತೆಂದರೆ ಕಲ್ಲುಗಳಿಂದ ಅದನ್ನು ಓಡಿಸಲು ಹೋಗಬೇಡಿ. ಅದು ಒಳನುಗ್ಗುವ ಛಾತಿಯದ್ದಲ್ಲ, ನಿಮ್ಮದೇ ಭೂಭಾಗದ ಸಹಜೀವಿ ಎಂದು ಪರಿಗಣಿಸಿ," ಎನ್ನುತ್ತಾರವರು.

HYTICOS ಕೇವಲ ಮಾತಿನಲ್ಲಿ ನಂಬಿಕೆ ಇಟ್ಟವರಲ್ಲ. ಅವರ ತಂಡಗಳು ರಾತ್ರಿಯಿಡೀ ಪ್ರಾಣಿಗಳ ಚಲನೆಯನ್ನು ಟ್ರ್ಯಾಕ್ ಮಾಡುತ್ತವೆ. ಕ್ಯಾಮೆರಾ ಟ್ರ್ಯಾಪ್ನ ದೃಶ್ಯಾವಳಿಗಳನ್ನು ಅಧ್ಯಯನ ಮಾಡುತ್ತವೆ ಮತ್ತು ಸುರಕ್ಷಿತ ಕಾರಿಡಾರ್ಗಳನ್ನು ನಿರ್ಮಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತವೆ. ಬೇಲಿಗಳನ್ನು ನಿರ್ಮಿಸುವುದರಿಂದ ಯಶಸ್ಸು ಸಿಗುವುದಿಲ್ಲ, ಬದಲಿಗೆ ಸೇತುವೆಗಳನ್ನು ನಿರ್ಮಿಸುವುದರಲ್ಲಿದೆ ಎಂಬುದು ಅವರ ನಂಬಿಕೆ– ವಿವಿಧ ಇಲಾಖೆಗಳ ನಡುವೆ, ಜಾತಿಗಳ ನಡುವೆ, ಮತ್ತು ಮನುಷ್ಯರು ಹಾಗೂ ಅವರದೇ ಭಯದ ನಡುವೆ ಸೇತುವೆ ನಿರ್ಮಿಸಬೇಕಾಗಿದೆ ಎಂಬುದು ಅವರ ನಂಬಿಕೆ.

ರಾಷ್ಟ್ರದ ಮಾದರಿ ಸಂಸ್ಥೆ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, HYTICOS ಒಂದು ಸ್ವಯಂಸೇವಕ ಸಂಘಟನೆಯಿಂದ ವಿಜ್ಞಾನ-ಚಾಲಿತ ಸಹಾನುಭೂತಿಯ ಮಾದರಿ ಸಂಸ್ಥೆಯಾಗಿ ಬೆಳೆದಿದೆ. ಭಾರತದಲ್ಲಿನ ಸಂರಕ್ಷಣಾ ಕಾರ್ಯವು ದತ್ತಾಂಶ-ಆಧಾರಿತ ಮತ್ತು ಮಾನವೀಯ ಎರಡೂ ಆಗಿರಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಆಸಿಫ್ ಹೇಳುವಂತೆ, ಕಾಡುಗಳು ಕೇವಲ ಮರಗಳ ಸಂಗ್ರಹವಲ್ಲ, ಅವು ನಮ್ಮೆಲ್ಲರಿಗಾಗಿ ಉಸಿರಾಡುವ ಜೀವಂತ ವ್ಯವಸ್ಥೆಗಳು.

ಹುಲಿಯ ಗರ್ಜನೆ ಅಥವಾ ಚಿರತೆಯ ರಹಸ್ಯ ನಡಿಗೆ ಅಪಾಯದ ಬಗ್ಗೆ ಅಲ್ಲ, ಬದಲಿಗೆ ಸಮತೋಲನವನ್ನು ನೆನಪಿಸಬೇಕು ಎಂದು ಅವರು ಹೇಳುತ್ತಾರೆ; “ಒಂದು ಕಾಡು ಪರಭಕ್ಷಕವನ್ನು ಪೋಷಿಸುವಷ್ಟು ಜೀವಂತವಾಗಿದ್ದರೆ ಮಾತ್ರ ಆ ಭೂಮಿ ಇನ್ನೂ ಅಖಂಡವಾಗಿದೆ ಎಂದು ಅರ್ಥ.” ಹೈದರಾಬಾದ್ನ ನಗರದ ಅಂಚಿನಿಂದ ಹಿಡಿದು ಡೆಹ್ರಾಡೂನ್ನ ದೊಡ್ಡ ಅರಣ್ಯ ಸಭಾಂಗಣದವರೆಗೆ, ಆ ಕಲ್ಪನೆಯು ಈಗ ಒಂದು ಸುತ್ತನ್ನು ಪೂರ್ಣಗೊಳಿಸಿದೆ.

Read More
Next Story