
ಅಮೆರಿಕದ ಸುಂಕದಾಟಕ್ಕೆ ಕಂಗೆಟ್ಟ ದೇಸೀ ಉಪ್ಪಿನಕಾಯಿ: ನೂರಾರು ಕೋಟಿ ವ್ಯವಹಾರಕ್ಕೆ ಬ್ರೇಕ್!
ವಿದೇಶದಲ್ಲಿರುವ ತೆಲುಗು ಮೂಲದ ವಿದ್ಯಾರ್ಥಿಗಳಿಗೆ ಒಂದು ಕಾಲದಲ್ಲಿ ರುಚಿ ಮತ್ತು ನೆನಪಿನ ಸಂಜೀವಿನಿಯಾಗಿದ್ದ, ನೂರಾರು ಕೋಟಿ ರೂಪಾಯಿಗಳಷ್ಟು ಮೌಲ್ಯದ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ವ್ಯಾಪಾರಕ್ಕೆ, ಅಮೆರಿಕದ ಸುಂಕಗಳ ಏರಿಕೆ, ನಿಷೇಧ ಮತ್ತು ಕಸ್ಟಮ್ಸ್ ಕಠಿಣ ಕ್ರಮಗಳಿಂದ ಭಾರಿ ಹೊಡೆತ ಬಿದ್ದಿದೆ.
“ಗೊಂಗುರಾ ಚಿಕನ್!! ನಿಮಗೆ ಬೇರೇನು ಪ್ಯಾಕ್ ಮಾಡಲಿ? ಕೋಳಿ ನಮ್ಮ ಹಿತ್ತಲಿನಲ್ಲಿಯೇ ಸಾಕಿದ್ದು - ಒಂದು ಕೆಜಿಗೆ ₹900, ಬೋನ್ ಲೆಸ್ ₹1,400. ಅರ್ಧ ಕೆಜಿ ಗೊಂಗುರಾಕ್ಕೆ ₹650... ಅರಿಸಾಲು ಒಂದು ಕೆಜಿಗೆ ₹900. ಎಲ್ಲವೂ ತಾಜಾ ತಾಜಾ ಸರ್…” ಎಂದು ವಿಜಯವಾಡದ (ಆಂಧ್ರಪ್ರದೇಶ) ಗುಣಾದಲ ರಿಂಗ್ ರೋಡ್ ಬಳಿಯ ಅಂಗಡಿಯಾತ ಗ್ರಾಹಕನೊಂದಿಗೆ ಚೌಕಾಶಿ ಮಾಡುತ್ತಾ ಹೇಳುತ್ತಿದ್ದಾನೆ.
"ಯಾವ ರೀತಿಯ ಪ್ಯಾಕಿಂಗ್ ಮಾಡಬೇಕು ನಿಮಗೆ? ಮೇಡಂ ಇದು ಅಮೇರಿಕಕ್ಕೋ ಅಥವಾ ಇಂಗ್ಲಂಡಿಗೋ? ಅಮೆರಿಕಕ್ಕಾದರೆ ನಮ್ಮಲ್ಲಿ ವಿಶೇಷ ಪ್ಯಾಕೇಜ್ ಇದೆ," ಎಂದು ಹೈದರಾಬಾದಿನ ಎಸ್.ಆರ್. ನಗರದ ಒಬ್ಬ ಸಣ್ಣ ವ್ಯಾಪಾರಿ ಗೃಹಿಣಿಯೊಬ್ಬರಿಗೆ ಹೇಳುತ್ತಾರೆ.
"ಹಲೋ, ಇದು ಫೆಡ್ಎಕ್ಸ್ ಏಜೆನ್ಸಿಯಾ? ನಾನು ನನ್ನ ವಿಳಾಸವನ್ನು ಕಳುಹಿಸುತ್ತಿದ್ದೇನೆ... ನಾನು ಅಮೆರಿಕಕ್ಕೆ ಏನೋ ಒಂದಷ್ಟು ಕೊರಿಯರ್ ಮಾಡಬೇಕು. ನೀವು ಯಾವಾಗ ಬರಬಹುದು?" ಎಂದು ಹೈದರಾಬಾದ್ನ ಕೆಪಿಎಚ್ಬಿ IVನೇ ಹಂತದಿಂದ ಒಬ್ಬ ಗೃಹಸ್ಥರು ಮನವಿ ಮಾಡಿಕೊಳ್ಳುತ್ತಾರೆ. ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ ನಂತರ ಇದೆಲ್ಲವೂ ಈಗ ಭೂತಕಾಲದ ಭಾಗವಾಗಿದೆ.
ಪ್ರತಿ ಮನೆಯಿಂದ ಆಹಾರದ ಪೊಟ್ಟಣ
2024ರ ಹೊತ್ತಿಗೆ, ಅಮೆರಿಕದಲ್ಲಿನ ತೆಲುಗು ಮಾತನಾಡುವ ಜನರ ಸಂಖ್ಯೆ 12ಲಕ್ಷ 30 ಸಾವಿರ ಮೀರಿತ್ತು - ಇದು 2016ರಲ್ಲಿ ದಾಖಲಾದ 3,20,000 ಜನಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು. 2019ರ ಕರೋನಾ ವರ್ಷವೊಂದರಲ್ಲೇ 150,000ಕ್ಕೂ ಹೆಚ್ಚು ಮಂದಿ ತೆಲುಗು ವಿದ್ಯಾರ್ಥಿಗಳು ಅಮೆರಿಕಕ್ಕೆ ಹಾರಿದ್ದರು. ಹೀಗೆ ಹೊರಟ ಪ್ರತಿ ವಿದ್ಯಾರ್ಥಿಗೂ, ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಮ್ಮೆಯಾದರೂ ತೆಲಂಗಾಣ ಅಥವಾ ಆಂಧ್ರಪ್ರದೇಶದ ಪ್ರತಿ ಮನೆಯಿಂದ ಆಹಾರದ ಪೊಟ್ಟಣ ತಲುಪುತ್ತಿತ್ತು.

ಹೈದರಾಬಾದ್ ಏರ್ ಕಾರ್ಗೋ ದಾಖಲೆಗಳ ಪ್ರಕಾರ, 2018-19ರಲ್ಲಿ ಅಮೆರಿಕಕ್ಕೆ 120,000 ಆಹಾರ ಪೊಟ್ಟಣಗಳು ರವಾನೆಯಾಗಿವೆ. 2021-22ರ ಹೊತ್ತಿಗೆ, ಈ ಸಂಖ್ಯೆ ದ್ವಿಗುಣವಾಗಿ 2,45,000 ತಲುಪಿದೆ. ದೊಡ್ಡ ಕೊರಿಯರ್ ಕಂಪನಿಗಳು ಈ ವ್ಯಾಪಾರದ ಸುತ್ತಲೇ ತಮ್ಮ ವ್ಯವಹಾರಗಳನ್ನು ಗಟ್ಟಿಯಾಗಿ ಕುದುರಿಸಿಕೊಂಡವು, ವಿಶೇಷ ಆಹಾರ ಪ್ಯಾಕೇಜಿಂಗ್ ಸೇವೆಗಳನ್ನು ಸೃಷ್ಟಿಸಿ, ಉಪ್ಪಿನಕಾಯಿಗಳ ರಫ್ತನ್ನು ಪೂರ್ಣ ಪ್ರಮಾಣದ ಆರ್ಥಿಕತೆಯಾಗಿ ಪರಿವರ್ತಿಸಿದವು.
ಅಮೆರಿಕಕ್ಕೆ ಜಿಗಿಯುವ ಪ್ರತಿ ಪೆಟ್ಟಿಗೆಯಲ್ಲೂ ಏನಾದರೂ ವಿಶೇಷವಾದುದು ಇದ್ದೇ ಇರುತ್ತಿತ್ತು: ಗೊಂಗುರಾ, ಮಾವಿನಕಾಯಿ ಉಪ್ಪಿನಕಾಯಿ, ತೆಂಗಿನಕಾಯಿ-ಮಸಾಲಾ ಪುಡಿಗಳು, ಶೇಂಗಾ ಪುಡಿಗಳು, ಮಟನ್ ಉಪ್ಪಿನಕಾಯಿ, ಅರಿಸೇಲು, ಒಬ್ಬಟ್ಲು, ಮುರುಕುಲು. “ಹೈದರಾಬಾದ್‌ನಿಂದ ಒಂದು ಜಾರ್ ಗೊಂಗುರಾ ಅಥವಾ ಮಟನ್ ಉಪ್ಪಿನಕಾಯಿ ಬಂದ ಕೂಡಲೇ, ಇಡೀ ಕೊಠಡಿ ಹಬ್ಬದ ವಾತಾವರಣದಿಂದ ತುಂಬಿ ಹೋಗುತ್ತಿತ್ತು,” ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ವರ್ಷಕ್ಕೆ ಐನೂರು ಕೋಟಿ ರೂ. ಉಪ್ಪಿನಕಾಯಿ ವ್ಯಾಪಾರ
ಒಂದು ಕಾಲದಲ್ಲ ತೆಲುಗು ರಾಜ್ಯಗಳಿಂದ ಅಮೆರಿಕಕ್ಕೆ ಆಗುತ್ತಿದ್ದ ಉಪ್ಪಿನಕಾಯಿ ವ್ಯಾಪಾರವು ವಾರ್ಷಿಕವಾಗಿ 400-500 ಕೋಟಿ ರೂಪಾಯಿಗಳಷ್ಟಿತ್ತು ಎಂದು ತೆಲುಗು ಸಂಘಗಳು ಹೇಳುತ್ತವೆ. 2015 ಮತ್ತು 2020ರ ನಡುವೆ, ಹೈದರಾಬಾದ್, ವಿಜಯವಾಡ, ಗುಂಟೂರು, ರಾಜಮಂಡ್ರಿ, ಭೀಮಾವರಂ, ವಿಶಾಖಪಟ್ಟಣಂಗಳಲ್ಲಿ ಕನಿಷ್ಠ 1,500 ರಿಂದ 2,000 ಸಣ್ಣ ಪ್ಯಾಕಿಂಗ್ ಘಟಕಗಳು ತಲೆ ಎತ್ತಿದ್ದವು. ಪ್ರತಿ ಘಟಕದಲ್ಲಿ ದಿನಕ್ಕೆ 50ರಿಂದ 100 ಜಾರ್ ಉಪ್ಪಿನಕಾಯಿ ತಯಾರಾಗುತ್ತಿತ್ತು. 2019ರ ICMR-NIN ಅಧ್ಯಯನದ ಪ್ರಕಾರ, 10,000-12,000 ಮಹಿಳೆಯರು ಈ ಗುಡಿ ಕೈಗಾರಿಕೆಯಲ್ಲಿ ನೇರವಾಗಿ ಉದ್ಯೋಗ ಪಡೆದಿದ್ದರು.
ಆದರೆ ಯಾವಾಗ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (FDA) ಕಠಿಣ ಆಹಾರ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿತೋ ಅಲ್ಲಿಂದ ಪರಿಸ್ಥಿತಿ ಬದಲಾಯಿತು. ಈ ನಿಯಮಗಳಲ್ಲಿ ಮಾಂಸಾಧಾರಿತ ಉಪ್ಪಿನಕಾಯಿಗಳ ಮೇಲೆ ಸಂಪೂರ್ಣ ನಿಷೇಧ, ಆಹಾರ ಪದಾರ್ಥಗಳಿಗೆ ಕಡ್ಡಾಯ ಪ್ರಯೋಗಾಲಯ ಪ್ರಮಾಣೀಕರಣ, ಮತ್ತು ಅಮೆರಿಕದ ಪೋಸ್ಟಲ್ ಸರ್ವೀಸ್ (USPS) ಮೂಲಕ ಮನೆಯಲ್ಲಿ ತಯಾರಿಸಿದ ಆಹಾರ ಪೊಟ್ಟಣಗಳ ರವಾನೆಗೆ ನಿರ್ಬಂಧ ಸೇರಿದ್ದವು. ಕೊರಿಯರ್ ಶುಲ್ಕಗಳು ಗಗನಕ್ಕೇರಿ, ಪ್ರತಿ ಪೊಟ್ಟಣದ ರವಾನೆಗೆ ₹5,000ಕ್ಕೂ ಹೆಚ್ಚು ವೆಚ್ಚವಾಗತೊಡಗಿತು.
ಅಲ್ಲಿಂದಾಚೆಗೆ ಜನರ ನಡುವೆ ನಡೆಯುತ್ತಿದ್ದ ಮಾತಿನ ಧಾಟಿಯೂ ಬದಲಾದವು: “ನೀರಜಾಗೆ ಗುಂಟೂರಿನಿಂದ ಮೆಣಸಿನಕಾಯಿ ಉಪ್ಪಿನಕಾಯಿ ಸಿಕ್ಕಿದೆ, ನಿನಗೆ ಏನು ಕಳುಹಿಸಲಿ?” ಎಂದು ತಾಯಿಯೊಬ್ಬರು ಕೇಳುತ್ತಾರೆ. “ಬೇಡ ಅಮ್ಮ, ಇಲ್ಲಿ ಪರಿಸ್ಥಿತಿ ತುಂಬಾ ಕಷ್ಟವಾಗಿದೆ. ನಿಜಕ್ಕೂ ಬೇಕು ಅಂತ ಅನ್ನಿಸಿದರೆ ತಿಳಿಸುತ್ತೇನೆ. ಇಲ್ಲಿಯೇ ಸ್ವಲ್ಪ ದುಬಾರಿ ಬೆಲೆ ತೆತ್ತು ಖರೀದಿಸುವುದು ಉತ್ತಮ,” ಎಂದು ಅಮೆರಿಕದಲ್ಲಿರುವ ಆಕೆಯ ಮಗಳು ಉತ್ತರಿಸುತ್ತಾಳೆ.
ಮಕಾಡೆ ಮಲಗಿದ ಕೊರಿಯರ್ ವ್ಯವಹಾರ
ಕಳೆದ ಐದು ಅಥವಾ ಆರು ತಿಂಗಳಿಂದ ಉಪ್ಪಿನಕಾಯಿ ರವಾನೆ ಕಡಿಮೆಯಾಗಿದೆ. ತೆರಿಗೆ, ತಪಾಸಣೆ ಕಾರಣದಿಂದ ಗ್ರಾಹಕರು ಆರ್ಡರ್ ಮಾಡುವುದನ್ನು ನಿಲ್ಲಿಸಿದ್ದಾರೆ, ಪ್ಯಾಕರ್ಸ್ ಕೂಡ ಬಂದ್ ಆಗಿವೆ," ಎಂದು ತಿರುಪತಿಯ ಒಬ್ಬ ಉಪ್ಪಿನಕಾಯಿ ಮಾರಾಟಗಾರ ನಿಟ್ಟುಸಿರು ಬಿಡುತ್ತಾರೆ. "ಕೊರಿಯರ್ ವ್ಯವಹಾರ ಕುಸಿದಿದೆ. ಈಗ ತುಂಬಾ ಕಟ್ಟುನಿಟ್ಟಿನ ನಿಯಮಗಳಿವೆ. ಅಮೆರಿಕದ ಮಾರುಕಟ್ಟೆ ಕುಸಿಯುತ್ತಿದೆ," ಎಂದು ಗಚ್ಚಿಬೌಲಿಯ ಕೊರಿಯರ್ ಏಜೆಂಟ್ ಒಪ್ಪಿಕೊಳ್ಳುತ್ತಾರೆ.
ತೆಲುಗು ರಾಜ್ಯದಾದ್ಯಂತ ನೂರಾರು ಸಣ್ಣ ಉಪ್ಪಿನಕಾಯಿ ಘಟಕಗಳು ಮುಚ್ಚಿವೆ. “ನಮ್ಮ ವ್ಯವಹಾರದಲ್ಲಿ ಶೇಕಡಾ ಆರವತ್ತರಷ್ಟು ಭಾಗ ಕಣ್ಮರೆಯಾಗಿದೆ. ನಮಗೀಗ ಘಟಕಗಳನ್ನು ಮುಚ್ಚುವುದನ್ನು ಬಿಟ್ಟು ಬೇರೆ ದಾರಿ ಇಲ್ಲ,” ಎಂದು ವಿಜಯವಾಡದ ಉಪ್ಪಿನಕಾಯಿ ತಯಾರಕರು ನೋವಿನಿಂದ ನುಡಿಯುತ್ತಾರೆ.

2025ರ ಆಗಸ್ಟ್ 27ರಿಂದ, ಭಾರತೀಯ ಸರಕುಗಳ ಮೇಲೆ ಅಮೆರಿಕದ ಸುಂಕವು ಶೇ. 25ರಿಂದ ಶೇ. 50ಕ್ಕೆ ಏರಿದೆ. ಈಗ ಸಣ್ಣ ಪೊಟ್ಟಣಗಳ ಮೇಲೂ ತೆರಿಗೆ ವಿಧಿಸಲಾಗುತ್ತಿದೆ. ಆಗಸ್ಟ್ 29ರಂದು, $800ವರೆಗಿನ ಸರಕುಗಳಿಗೆ ಸುಂಕ ರಹಿತವಾಗಿದ್ದ "ಡಿ ಮಿನಿಮಿಸ್" ವಿನಾಯಿತಿಯನ್ನು ಕೂಡ ರದ್ದುಗೊಳಿಸಲಾಗಿದೆ. ಇದರಿಂದ, ಒಂದು ಸಣ್ಣ ಆಹಾರ ಪೊಟ್ಟಣದ ಮೇಲೂ ಈಗ ಸುಂಕ ವಿಧಿಸಲಾಗುತ್ತಿದೆ.
ಅಮೆರಿಕದ ಕಸ್ಟಮ್ಸ್ ನಿಯಮಗಳ ಪ್ರಕಾರ, ಉಪ್ಪಿನಕಾಯಿಗಳು ಸೇರಿದಂತೆ ಆಮ್ಲೀಯಯುಕ್ತ ಆಹಾರ ಪದಾರ್ಥಗಳ ಮೇಲೆ ಕಠಿಣ ನಿಗಾ ಇಡಲಾಗಿದೆ - ಯಾವುದೇ ರೀತಿಯಲ್ಲಿ ಲೇಬಲ್ ಅಂಟಿಸಿದ್ದರೆ ಅವುಗಳನ್ನು ವಶಪಡಿಸಿಕೊಳ್ಳಬಹುದು ಅಥವಾ ನೇರವಾಗಿ ತಿರಸ್ಕರಿಸಬಹುದು.
“ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಕಳುಹಿಸಬೇಡಿ. ಇದು ತುಂಬಾ ಅಪಾಯಕಾರಿ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ.” ಎಂದು ಅಮೆರಿಕದಲ್ಲಿರುವ ಮಕ್ಕಳು ಭಾರತದಲ್ಲಿರುವ ತಮ್ಮ ಪೋಷಕರಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ.
ಉಪ್ಪಿನಕಾಯಿ ಜಾಡಿಗಳಿಗಿಲ್ಲ ಬೇಡಿಕೆ
ವಿಜಯವಾಡದ ಗುಂಡಾದಲ ರಿಂಗ್ ರೋಡ್ನಿಂದ ಅನತಿ ದೂರದಲ್ಲಿ, ನಾಮಫಲಕ ಇಲ್ಲದ ಒಂದು ಅಂಗಡಿಯಿತ್ತು, ಅಲ್ಲಿ ಕೇವಲ ಜಾಡಿಗಳು ಮತ್ತು ಪೆಟ್ಟಿಗೆಗಳು ರಾಶಿ ರಾಶಿಯಾಗಿ ಇರುತ್ತಿದ್ದವು. ಕೆಲ ತಿಂಗಳುಗಳ ಹಿಂದಿನವರೆಗೂ, ಅಲ್ಲಿ ಅಮೆರಿಕಕ್ಕೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಉಪ್ಪಿನಕಾಯಿಗಳು, ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಕಳುಹಿಸಲು ಯಾವತ್ತೂ ಗ್ರಾಹಕರ ಗೌಜಿ-ಗದ್ದಲವಿರುತ್ತಿತ್ತು. ಸಾಮಾನ್ಯವಾಗಿ ಇಲ್ಲಿ ಖರೀದಿಸಿದರೆ ಉಳಿದ ಕಡೆಗಿಂತ ಕಡಿಮೆ ಪ್ಯಾಕಿಂಗ್ ವೆಚ್ಚ ತಗಲುತ್ತಿತ್ತು. ಇಂದು, ಆ ಜನಸಂದಣಿ ಮಾಯವಾಗಿದೆ, ಖಾಲಿ ಖಾಲಿ ಜಾಡಿಗಳು ಬಿದ್ದುಕೊಂಡಿವೆ. ಅಂಗಡಿ ಬಿಕೋ ಅನ್ನುತ್ತಿದೆ.
ಒಂದು ಕಾಲದಲ್ಲಿ ಪ್ರತಿ ಬೀದಿ ಮೂಲೆಯಲ್ಲೂ "ಪಾರ್ಸೆಲ್ ಸರ್ವೀಸ್" ಅಂಗಡಿಗಳಿದ್ದವು. ಈಗ ಅವೆಲ್ಲವೂ ಬಾಗಿಲು ಮುಚ್ಚಿವೆ. "ಆಂಧ್ರ ಪಿಕಲ್ಸ್," "ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು," "ಪರ್ಫೆಕ್ಟ್ ಪ್ಯಾಕಿಂಗ್" ಎಂಬ ಘೋಷಣೆಗಳನ್ನು ಹೊತ್ತ ನಾಮಫಲಕಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವ್ಯಾಪಾರ ಟ್ರಂಪ್ ಯುಗದ ಸುಂಕಗಳು ಮತ್ತು ಅಮೆರಿಕದ ನಿಯಮಗಳ ನೆರಳಿನಲ್ಲಿ ಮಂಕುಬಡಿದು ಕುಳಿತಿವೆ.
2024ರ ಹೊತ್ತಿಗೆ, ಶೇ.60ರಷ್ಟು ಸಣ್ಣ ಘಟಕಗಳು ಮುಚ್ಚಿದ್ದವು. ಔಪಚಾರಿಕ ರಫ್ತು ದಾಖಲೆಗಳು ಇನ್ನೂ ಭಾರತದಿಂದ ಅಮೆರಿಕಕ್ಕೆ ಹೋಗಬೇಕಾದ "ಉಪ್ಪಿನಕಾಯಿ/ಚಟ್ನಿಗಳ" ದೊಡ್ಡ ಪ್ರಮಾಣದ ಶಿಪ್-ಮೆಂಟ್ (ರವಾನೆ) ಪಟ್ಟಿ ತೋರಿಸುತ್ತವೆ - 2025ರ ಆಗಸ್ಟ್ ವರೆಗೆ 21,445 ರವಾನೆಗಳು ದಾಖಲಾಗಿವೆ - ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಕುಸಿತ ತೀವ್ರವಾಗಿದೆ.

ಗೊಂಗುರಾ ಉಪ್ಪಿನಕಾಯಿ ಜಾಡಿಗಳ ಯುಗಾಂತ್ಯವೇ?
ಹೊಸ ನಿರ್ಬಂಧಗಳು ಈಗಷ್ಟೇ ಜಾರಿಗೆ ಬಂದಿವೆ. ಅವುಗಳ ಸಂಪೂರ್ಣ ಪರಿಣಾಮ ಇನ್ನೂ ಏನೆಂಬುದು ತಿಳಿಯುತ್ತಿಲ್ಲ. ಆದರೂ ಈಗಾಗಲೇ, ವಿದೇಶಕ್ಕೆ ರವಾನೆಯಾಗುತ್ತಿದ್ದ ಉಪ್ಪಿನಕಾಯಿಗಳ ದೊಡ್ಡ ಪ್ರವಾಹ ಒಂದು ಸಣ್ಣ ಹನಿಯಂತಾಗಿದೆ. "ವಿದೇಶದಲ್ಲಿರುವಾಗ, ನಿಜಕ್ಕೂ ಏನೂ ಸಮಸ್ಯೆ ಇಲ್ಲದೇ ಇದ್ದರೂ, ಒಂದು ರೀತಿಯ 'ಮಾನಸಿಕ ಭಯ' ಆವರಿಸುತ್ತದೆ, ಜನ ಹಿಂದೆ ಏನಾದರೂ ಕಳಿಸುತ್ತಿದ್ದರು. ಈಗ ನಿಂತುಹೋಗಿದೆ," ಎಂದು ಸ್ವಗೃಹ ಫುಡ್ಸ್ ಮಾಲೀಕ ಸಿ. ಹೆಚ್. ಮಧು ಬಾಬು ಹೇಳುತ್ತಾರೆ. "ಹಿಂದಿನಂತೆ, ಜನರು ಸುಮ್ಮನೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.”
ಉಪ್ಪಿನಕಾಯಿ ಜಾಡಿಗಳು ಇನ್ನು ಮುಂದೆ ಕೇವಲ ನೆನಪುಗಳಾಗಿ ಉಳಿಯಬಹುದು. ಒಂದು ಕಾಲದಲ್ಲಿ ಮನೆರುಚಿ ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಜೀವನಾಧಾರವಾಗಿತ್ತು. ಇಂತಹ ಉಪ್ಪಿನಕಾಯಿ ವ್ಯಾಪಾರ ಈಗ ಅಂತಾರಾಷ್ಟ್ರೀಯ ಅಡೆತಡೆಗಳಿಂದಾಗಿ ಕುಸಿದಿದೆ. ಸುಂಕ, ಪ್ರಮಾಣೀಕರಣ, ಕೊರಿಯರ್ ಮಿತಿಗಳಿಂದಾಗಿ, ಒಂದು ಕಾಲದಲ್ಲಿ ಸಾಗರವನ್ನು ದಾಟಿ ಅಮೆರಿಕದ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ತಲುಪುತ್ತಿದ್ದ ಗೊಂಗುರಾ ಉಪ್ಪಿನಕಾಯಿ ಜಾಡಿಗಳು ಈಗ ಕನಸಿನಂತೆ ಕಾಣುತ್ತಿವೆ.
ಇನ್ನು ಮುಂದೆ ತರಹೇವಾರಿ ಉಪ್ಪಿನಕಾಯಿಗಳು ಮನೆಯಿಂದ ಬರುವ ಉಡುಗೊರೆಗಳಾಗಿ ಪ್ರಯಾಣ ಬೆಳೆಸುವುದಿಲ್ಲ. ಅವು ಕಾರ್ಖಾನೆಯಲ್ಲಿ ಮೊಹರು ಮಾಡಿದ, ಪ್ರಮಾಣೀಕೃತ "ವಾಣಿಜ್ಯ ಉತ್ಪನ್ನಗಳಾಗಿ" ಮಾತ್ರ ಹೋಗುತ್ತವೆ. ವಿದೇಶದಲ್ಲಿ ನೆಲೆಸಿರುವ ಈ ತೆಲುಗು ವಲಸಿಗ ಸಮುದಾಯ ಉಪ್ಪಿನಕಾಯಿಗಳ ಯುಗದ ಅಂತ್ಯವನ್ನು ಕಾಣುವುದು ಬಹುತೇಕ ನಿಶ್ಚಿತ.