ಮಟ್ಟುಗುಳ್ಳ ಮಹಾತ್ಮೆ... ಇದರ ಸಾಂಬಾರ್‌ಗಿಲ್ಲ ʼಪರ್ಯಾಯʼ!

ಉಡುಪಿ ಜಿಲ್ಲೆಯ 'ಮಟ್ಟು' ಎಂಬ ಗ್ರಾಮದಲ್ಲಿ ಬೆಳೆಯುವ ಈ ಬದನೆಕಾಯಿಗೆ ವಿಶಿಷ್ಟ ರುಚಿ ಹಾಗೂ ಸುವಾಸನೆಯಿದೆ. ಇದನ್ನು ಮಟ್ಟುಗುಳ್ಳ, ಸಾಂಬಾರ್ ಬದನೆ ಅಥವಾ ಮಠದ ಗುಳ್ಳ ಎಂದೂ ಕರೆಯುತ್ತಾರೆ.


ಮಟ್ಟುಗುಳ್ಳ ಮಹಾತ್ಮೆ... ಇದರ ಸಾಂಬಾರ್‌ಗಿಲ್ಲ ʼಪರ್ಯಾಯʼ!
x

ಮಟ್ಟುಗಳ್ಳ ಸಾಂಬಾರ್ ಇದ್ದರೆ ಊಟದ ಎಲೆಯಲ್ಲಿ ಅಥವಾ ಅನ್ನದ ಬಟ್ಟಲಲ್ಲಿ ಬೇರೆ ಯಾವುದೇ ಖಾದ್ಯಗಳಿದ್ದರೂ ನಗಣ್ಯ ಎನ್ನುವ ರೀತಿಯ ರುಚಿಯುಳ್ಳದ್ದು ಈ ಬದನೆ.

Click the Play button to hear this message in audio format

ಮಟ್ಟುಗುಳ್ಳ ಸಾಂಬಾರ್ ಇದ್ದರೆ ಊಟದ ಎಲೆಯಲ್ಲಿ ಅಥವಾ ಅನ್ನದ ಬಟ್ಟಲಲ್ಲಿ ಬೇರೆ ಯಾವುದೇ ಖಾದ್ಯಗಳಿದ್ದರೂ ನಗಣ್ಯ ಎನ್ನುವ ರೀತಿಯ ರುಚಿಯುಳ್ಳದ್ದು ಈ ಬದನೆ.

ಕರ್ನಾಟಕ ಕರಾವಳಿಯ ಈ ಬದನೆಕಾಯಿ ಉಡುಪಿ ಗುಳ್ಳ, ಸಾಂಬಾರ್ ಬದನೆ, ಮಠದ ಗುಳ್ಳ ಎಂದೆಲ್ಲಾ ಹೆಸರಿನಿಂದ ಕರೆಯಲ್ಪಡುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಸಂದರ್ಭದಲ್ಲಂತೂ ಮಾರುಕಟ್ಟೆಯಲ್ಲಿ ಕೆ.ಜಿಗೆ ರೂ.200 ಹತ್ತಿರ ಮಾರಾಟವಾಗುತ್ತದೆ. ಹಾಗೆಯೇ ಉಡುಪಿ ಮಠಗಳಿಗೂ ಈ ಬದನೆಕಾಯಿಗೂ ವಿಶೇಷ ಸಂಬಂಧವಿದೆ.

ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನಲ್ಲಿ ಮುಖ್ಯವಾಗಿ ಬೆಳೆಯುವ ಈ ಬದನೆಕಾಯಿಗೆ ವಿಶೇಷ ರುಚಿ. ಅಲ್ಲಿನ ಮಣ್ಣಿನ ಗುಣವೋ ಅದನ್ನು ಬೆಳೆಯುವ ರೀತಿ ಕಾರಣವೋ ಎಂಬಂತೆ ಮಟ್ಟು ಎಂಬ ಹಳ್ಳಿಯಿಂದ ಬಹುದೂರ ಸಾಗಿ ಅಲ್ಲಿ ಬೆಳೆದ ಇದೇ ತಳಿಯ ಬೆಳೆಗೆ ಅದೇ ರುಚಿ ಬಂದಿಲ್ಲ. ಮಟ್ಟು ಎಂಬ ಊರಿನ ಸುತ್ತ ಮುತ್ತಲ ಊರುಗಳಾದ ಪಾಂಗಾಳ,ಕೋಟೆ, ಕೈಪುಂಜಾಲ್ ಮತ್ತು ಅಂಬಾಡಿಗಳಲ್ಲಿ ಕೂಡಾ ಇದನ್ನು ಬೆಳೆಯುತ್ತಾರೆ.

ಜಿಐ ಟ್ಯಾಗ್ ಹೊಂದಿರುವ ಮಟ್ಟುಗುಳ್ಳದ ರುಚಿ ಸವಿದವರಿಗಷ್ಟೇ ಗೊತ್ತಿರುತ್ತದೆ.

ಜಿಐ ಟ್ಯಾಗ್ ಹೊಂದಿರುವ ಮಟ್ಟುಗುಳ್ಳದ ರುಚಿ ಸವಿದವರಿಗಷ್ಟೇ ಗೊತ್ತಿರುತ್ತದೆ. ಎಲ್ಲಾ ಬದನೆ ಕಾಯಿಗಳೂ ಮಟ್ಟುಗುಳ್ಳ ಎಂದು ಕರೆಸಿಕೊಳ್ಳದಂತೆ ಜಿಯಾಗ್ರಾಫಿಕಲ್ ಐಡೆನ್ಟಿಫಿಕೇಶನ್‌ಗಾಗಿ ಮಟ್ಟುಗುಳ್ಳವನ್ನು ಗುರುತಿಸಲಾಗಿದೆ. ಮೈಸೂರ್ ಸಿಲ್ಕ್, ದಾರ್ಜಿಲಿಂಗ್ ಟೀ, ಕಾಶ್ಮೀರಿ ಕೇಸರಿ ಹಾಗೆಯೇ ಉಡುಪಿಯ ಮಟ್ಟುಗುಳ್ಳ ಈ ಜಿಐ ಟ್ಯಾಗ್ ಸಾಲಿನಲ್ಲಿ ಸೇರುತ್ತದೆ.

ಏನಿದು ಮಟ್ಟುಗುಳ್ಳ?

ಸಾಮಾನ್ಯವಾಗಿ ಬದನೆಕಾಯಿ ಎಂದು ಕರೆಯುವ ಬ್ರಿಂಜಾಲ್ ಅಥವಾ ಎಗ್‌ಪ್ಲಾಂಟ್‌ನ ಒಂದು ವಿಶಿಷ್ಟ ತಳಿ ಮಟ್ಟುಗುಳ್ಳ. ಕರಾವಳಿಯಲ್ಲಿ ಬದನೆಕಾಯಿಯನ್ನು ಗುಳ್ಳ ಎಂದು ಕರೆಯುತ್ತಾರೆ. ಗುಳ್ಳ ಎಂದರೆ ತುಳು ಭಾಷೆಯಲ್ಲಿ ಗುಚ್ಛ ಅಥವಾ ಪುಗ್ಗೆ ಎಂಬ ಶಬ್ದ ಪ್ರಯೋಗಗಳಿವೆ. ಹಾಗೆಯೇ ಬದನೆಕಾಯಿಯನ್ನು ಉಲ್ಟಾ ಹಿಡಿದಾಗ ತುಳುವಿನ ಪುಗ್ಗೆ ರೀತಿಯಲ್ಲಿ ಕಾಣುವ ಕಾರಣಕ್ಕಾಗಿ ಗುಳ್ಳ ಎನ್ನುವ ಹೆಸರು ಬಂದಿದೆ. ತುಳುಭಾಷೆ ಮಾತನಾಡುವ ಶಿವಳ್ಳಿ ಬ್ರಾಹ್ಮಣರು ಬದನೆಯನ್ನು ಗುಳ್ಳ ಎಂದೇ ಕರೆಯುತ್ತಾರೆ.

ಎಲ್ಲಾ ಬದನೆಕಾಯಿಗಳ ಹೊರಗಿನ ಸಿಪ್ಪೆ ಪದರ ನಾಜೂಕಾಗಿ ಹೊಳೆಯುವಂತಿದ್ದರೆ, ಮಟ್ಟುಗುಳ್ಳದ ಸಿಪ್ಪೆ ಮ್ಯಾಟ್ ಫಿನಿಶಿಂಗ್ ತರಹಾ ಇರುತ್ತದೆ. ಇನ್ನು ಸಾಮಾನ್ಯ ಬದನೆಕಾಯಿಯನ್ನು ಕತ್ತರಿಸಿದಾಗ ಅದರೊಳಗೆ ಬೀಜ ತುಂಬಾ ಇದ್ದರೆ ಮಟ್ಟುಗುಳ್ಳದಲ್ಲಿ ಕಡಿಮೆ ಇರುತ್ತದೆ. ಬದನೆಯ ಬೀಜ ಸಾಂಬಾರಿಗೆ ಹೆಚ್ಚಿನ ರುಚಿಕೊಟ್ಟರೂ, ಮಟ್ಟುಗುಳ್ಳದಂತೆ ಕಡಿಮೆ ಬೀಜಗಳು ಆರೋಗ್ಯಕ್ಕೂ ಒಳ್ಳೆಯದಾಗಿರುತ್ತವೆ. ಯಾಕೆಂದರೆ ಬೀಜ ಸಾಂಬಾರಿನಲ್ಲಿ ತನ್ನ ರಸವನ್ನು ಮಾತ್ರಬಿಟ್ಟು, ಗಟ್ಟಿ ಭಾಗವನ್ನು ಹಾಗೇ ಉಳಿಸುತ್ತದೆ. ಇದು ಬಹುತೇಕ ಮಂದಿಯ ಹೊಟ್ಟೆಯಲ್ಲಿ ಕರಗದೇ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಎರಡೂವರೆ ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವದ ಊಟಕ್ಕೆ ಮಟ್ಟುಗುಳ್ಳ ಸಾಂಬಾರ್ ಪ್ರಮುಖ ಆಕರ್ಷಣೆ

ಪಾಂಗಾಳದ ಕೃಷಿಕ ಮತ್ತು ಮಟ್ಟುಗುಳ್ಳ ಬೆಳೆಗಾರರ ಸಂಘದ ರವೀಂದ್ರ ಅವರ ಪ್ರಕಾರ ಈ ವರ್ಷದ ಅಕಾಲಿಕ ಮಳೆಯ ಕಾರಣ ಮಟ್ಟುಗುಳ್ಳ ಫಸಲು ಕಡಿಮೆ ಇದೆ. ಆದರೂ ಶ್ರೀ ಕೃಷ್ಣ ಮಠದ ಪರ್ಯಾಯ ಉತ್ಸವಕ್ಕೆ 100-150 ಟನ್ ಬದನೆಕಾಯಿ ನೀಡಲು ಸಂಘ ನಿರ್ಧರಿಸಿದೆ. ಎರಡೂವರೆ ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವದ ಊಟಕ್ಕೆ ಮಟ್ಟುಗುಳ್ಳ ಸಾಂಬಾರ್ ಪ್ರಮುಖ ಆಕರ್ಷಣೆ ಎಂದು ಅವರು ಹೇಳುತ್ತಾರೆ.

ಇತಿಹಾಸ

ಮಟ್ಟುಗುಳ್ಳದ ಇತಿಹಾಸ ಸುಮಾರು 400ವರ್ಷಗಳ ಹಿಂದಿನದ್ದಾಗಿದ್ದು, ಶ್ರೀಕೃಷ್ಣ ಮಠದ ಅಂದಿನ ಯತಿಗಳಾದ ವಾದಿರಾಜ ತೀರ್ಥರು ಸ್ಥಳೀಯ ರೈತರಿಗೆ ಬದನೆಯ ಬೀಜ ನೀಡಿ ಬೆಳೆಯಲು ಹೇಳಿದ್ದರಂತೆ. ಅದೇ ಬದನೆಕಾಯಿ ಉಳಿದ ಬದನೆಗಳಿಗಿಂತ ವಿಭಿನ್ನವಾಗಿ ಅಂದರೆ ಬೀಜ ಕಡಿಮೆ ಇದ್ದು ಪಲ್ಪ್ ಭಾಗ ಹೆಚ್ಚಾಗಿ ಮತ್ತು ವಿಶೇಷ ಪರಿಮಳದೊಂದಿಗೆ ಜನಪ್ರಿಯವಾಯಿತು. ಹಾಗಾಗಿ ಇದನ್ನು ಮಠದ ಗುಳ್ಳ ಎಂದೂ ಕರೆಯಲಾಗುತ್ತದೆ.

ಪ್ರಸ್ತುತ ಮಟ್ಟು ಮತ್ತು ಪಕ್ಕದ ಊರುಗಳಲ್ಲಿ ಸುಮಾರು 200 ರೈತರು ಮಟ್ಟುಗುಳ್ಳ ಬೆಳೆಯುತ್ತಿದ್ದು, ತಮ್ಮ ಗದ್ದೆಯಲ್ಲಿ ಮೊದಲ ಸೀಸನ್ ಭತ್ತ ಬೆಳೆದ ಬಳಿಕ ಅದೇ ಗದ್ದೆಯಲ್ಲಿ ಬದನೆ ಬೀಜ ಬಿತ್ತುತ್ತಾರೆ. ಇದು ಡಿಸೆಂಬರ್-ಮಾರ್ಚ್‌ವರೆಗೆ ಫಸಲು ಕೊಯ್ಯಲು ಅನುಕೂಲಕರವಾಗಿರುತ್ತದೆ. ಕೆಲವೊಂದು ರೈತರು ವರ್ಷವಿಡೀ ಬೆಳೆಯುತ್ತಾರೆ.

ಪ್ರಸ್ತುತ ಶಿರಸಿಯಲ್ಲಿರುವ ಉಡುಪಿ ಮೂಲದ ವೆಂಕಟರಮಣ ಭಟ್ಟ, ಮಟ್ಟುಗುಳ್ಳದ ಬೀಜ ತನ್ನೂರಿಗೆ ತೆಗೆದು ಕೊಂಡು ಹೋಗಿ ಸಸಿ ಮಾಡಿ ಬೆಳೆತೆಗೆದರೂ ಉಡುಪಿ ಗುಳ್ಳದ ರುಚಿ ಬಂದಿಲ್ಲ. `` ನಾವು ನಮ್ಮೂರಿನಲ್ಲಿ ಬೆಳೆಸಿದ್ದೇವೆ. ಆದರೆ ಅದೇ ರುಚಿ ನಮಗೆ ಬಂದಿಲ್ಲ. ಹೆಚ್ಚಿನಂಶ ಉಡುಪಿಯ ಮಣ್ಣಿನ ಗುಣವೇ ಕಾರಣವಿರಬೇಕು. ಹಾಗಾಗಿ ನಾವು ಮಟ್ಟುಗುಳ್ಳದ ರುಚಿಯನ್ನು ಉಡುಪಿಯಲ್ಲಿಯೇ ಸವಿಯುತ್ತೇವೆ. ವರ್ಷಕ್ಕೊಮ್ಮೆ ಊರಿಗೆ ಬಂದಾಗ ಮಟ್ಟುಗುಳ್ಳದ ವಿಶೇಷ ಖಾದ್ಯಗಳನ್ನು ಸವಿಯುತ್ತೇವೆ’’ ಎನ್ನುತ್ತಾರೆ.

ತರಕಾರಿ ವ್ಯಾಪಾರಿ,ಅಸಾದುಲ್ಲಾ ಮಟ್ಟುಗುಳ್ಳ ಎಲ್ಲಾ ಸೀಸನ್‌ಗಳಲ್ಲಿಯೂ ಬೆಲೆಬಾಳುತ್ತದೆ. ಈ ಬದನೆ ಸುಂದರವಾಗಿ ಇರಬೇಕೇಂದಿಲ್ಲ. ಅದು ಸಣ್ಣದಾಗಿ, ವಕ್ರವಾಗಿ ಹೇಗಿದ್ದರೂ ಮಟ್ಟುಗುಳ್ಳ ಅಂತ ತಿಳಿದೊಡನೆ ಜನ ಖರೀದಿಸುತ್ತಾರೆ. ಉಡುಪಿ ಪರ್ಯಾಯ ಸಮಯದಲ್ಲಿ ಬೆಲೆ ಒಂದು ಕೆಜಿಗೆ ರೂ.180ರಿಂದ ರೂ.200ವರೆಗೆ ಮಾರುಕಟ್ಟೆಯಲ್ಲಿ ವ್ಯಾಪಾರವಾಗುತ್ತದೆ. ಯಾಕೆಂದರೆ ಮಟ್ಟುಗುಳ್ಳ ಬೆಳೆಗಾರರು ತಮ್ಮ ಮಟ್ಟುಗುಳ್ಳದ ಬೆಳೆಯನ್ನು ಪರ್ಯಾಯ ಮಹೋತ್ಸವದ ಸಂದರ್ಭ ಅನ್ನದಾನದ ಜೊತೆಗೆ ಸಾಂಬಾರು ತಯಾರಿಸಲು ಕೃಷ್ಣ ಮಠಕ್ಕೆ ಅರ್ಪಿಸುತ್ತಾರೆ. ಹಾಗಾಗಿ ಬೆಲೆ ಜಾಸ್ತಿ ಇರುತ್ತದೆ ಎನ್ನುತ್ತಾರೆ.

ಹ್ಯಾಂಡ್ ಪಿಕ್ಡ್ ಎಂಬ ನಂಬುಗೆ!

ಮಟ್ಟುಗುಳ್ಳಕ್ಕೆ ಇತ್ತೀಚಿನ ಕೆಲವು ವರ್ಷಗಳಿಂದ ಉಡುಪಿ ಮಟ್ಟುಗುಳ್ಳ ವ್ಯಾಪಾರಿಗಳ ಸಂಘ ಎಂಬ ಅಕ್ಷರಗಳುಳ್ಳ ಸ್ಟಿಕರ್ ಅನ್ನು ಅಂಟಿಸಲಾಗುತ್ತದೆ. ಇದು ಆಮದು ಮಾಡಲಾದ ಮತ್ತು ಒಂದಿಷ್ಟು ದುಬಾರಿ ಅನಿಸುವ ಹಣ್ಣುಗಳ ಮೇಲೆ ಅಂಟಿಸಲಾಗುತ್ತಿತ್ತು. ಆದರೆ ಇದೀಗ ಮಟ್ಟುಗುಳ್ಳಕ್ಕೂ ಅದೇ ರೀತಿ ಸ್ಟಿಕರ್ ಅಂಟಿಸುವ ಕಾರಣ ಗ್ರಾಹಕರಿಗೆ ಇದರ ಮೇಲೆ ಒರಿಜಿನಲ್ ಎಂಬ ಭಾವನೆ ಬರುತ್ತಿದೆ. ಹಾಗೆಯೇ ಪ್ರತಿಯೊಂದನ್ನೂ ಕೈಯಿಂದ ಆಯ್ದು ಸ್ಟಿಕರ್ ಅಂಟಿಸುವ ಕಾರಣ ಕಳಪೆ ದರ್ಜೆಯ ಕಾಯಿಗಳು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ.

ವಿದೇಶಕ್ಕೆ ರಫ್ತಾಗುವ ಮಟ್ಟುಗುಳ್ಳ!

ಮಟ್ಟುಗುಳ್ಳವನ್ನು ವಿದೇಶಕ್ಕೆ ರಫ್ತುಮಾಡುವ ಉಡುಪಿ ರೈತರ ಯೋಜನೆಗಳು ಭಾರೀ ಪ್ರಮಾಣವನ್ನು ತಲುಪಿಲ್ಲ. ಆದರೂ ಉಡುಪಿ, ಕೇರಳ, ಗುಜರಾತ್ ಮೂಲದವರಾಗಿದ್ದು ವಿದೇಶದಲ್ಲಿ ನೆಲೆಸಿರುವವರು ಉಡುಪಿಯವರನ್ನು ಸಂಪರ್ಕಿಸಿ ವ್ಯವಹಾರ ಮಾಡುತ್ತಾರೆ. ಇನ್ನು ಕರ್ನಾಟಕ ಕರಾವಳಿಯಲ್ಲಿ ಬ್ರಾಹ್ಮಣರ ಮನೆಗಳಲ್ಲಿನ ಸಮಾರಂಭದ ಅಡುಗೆಗೆ ಉಡುಪಿಗುಳ್ಳ ಅತ್ಯಗತ್ಯ ಎನ್ನುವಷ್ಟು ಬೇಡಿಕೆ ಇದೆ.

ಉಡುಪಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಅವರು ಮಟ್ಟುಗುಳ್ಳ ಬೆಳೆ ಹೆಚ್ಚುತ್ತಿದೆ. ಆದರೆ ಅಕಾಲಿಕ ಮಳೆ ತೊಂದರೆ ಕೊಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹದೊಂದಿಗೆ ಬೆಳೆ ಬೆಳೆದು ಎಲ್ಲೆಡೆ ಎಲ್ಲಾ ಸೀಸನ್ ಗಳಲ್ಲಿ ಮಟ್ಟುಗುಳ್ಳ ದೊರೆಯುವ ಹಾಗೆ ಮಾಡುವ ಉದ್ದೇಶವಿದೆ. ʻʻಪರ್ಯಾಯ ಮಹೋತ್ಸವ ಸಂದರ್ಭ ಮಟ್ಟುಗುಳ್ಳಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ, ಹಾಗೆಯೇ ಉಳಿದ ದಿನಗಳಲ್ಲಿಯೂ ಕನಿಷ್ಠ ವೆಂದರೆ ಮಾರುಕಟ್ಟೆಯಲ್ಲಿ ಕಿಲೋ ಒಂದರ ರೂ.140-150 ಇರುತ್ತದೆ’’ ಎನ್ನುತ್ತಾರೆ.

ಜಿಐ ಟ್ಯಾಗ್ ಹೊಂದಿರುವ ಕಾರಣ ಮತ್ತು ವಿಶೇಷ ಪ್ರಯೋಗಗಳು ಜೈವಿಕ ತಂತ್ರಜ್ಞಾನ ಲ್ಯಾಬ್‌ಗಳಲ್ಲಿ ನಡೆದಿರುವ ಕಾರಣ ಮಟ್ಟುಗುಳ್ಳ ವಿಶ್ವದಾದ್ಯಂತ ಬೆಳೆಯುವಂತಾಗುವ ದಿನಗಳು ದೂರವಿಲ್ಲ.

ಉಡುಪಿ ಪರ್ಯಾಯ

ಉಡುಪಿಯಲ್ಲಿ ಅಷ್ಟಮಠಗಳಿದ್ದು, ಎಲ್ಲಾ ಮಠಗಳ ಯತಿಗಳಿಗೆ ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಎರಡೂವರೆ ವರ್ಷಗಳಿಗೆ ಒಂದೊಂದು ಮಠದ ಯತಿಗಳಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಪುತ್ತಿಗೆ ಮಠದಿಂದ ಶಿರೂರು ಮಠದ ಯತಿಗಳಿಗೆ ಪರ್ಯಾಯ ನಡೆಯಲಿದ್ದು ಇನ್ನು ಎರಡೂವರೆ ವರ್ಷಗಳ ಕಾಲ ಶಿರೂರು ಮಠದ ಯತಿಗಳಾದ ವೇದವರ್ಧನ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ದೈನಂದಿನ ಪೂಜೆ ಸಲ್ಲಿಸಲಿದ್ದಾರೆ.

Next Story