
ಉನ್ನತ ಶಿಕ್ಷಣ ವಶಕ್ಕೆ ಪಡೆವ ಹುನ್ನಾರ: ಕೇಂದ್ರದ ವಿಧೇಯಕಕ್ಕೆ ಶಿಕ್ಷಕರು, ವಿದ್ಯಾರ್ಥಿಗಳ ಭಾರೀ ವಿರೋಧ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರತದ ಉನ್ನತ ಶಿಕ್ಷಣ ಆಯೋಗ ವಿಧೇಯಕವನ್ನು ಮಂಡಿಸುವ ಸಿದ್ಧತೆ ನಡೆದಿದೆ. ಇದು ಕೇಂದ್ರದ ಅಧಿಕಾರಿಗಳಿಂದ ಉನ್ನತ ಶಿಕ್ಷಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವೆಂಬ ಆರೋಪ ಕೇಳಿಬಂದಿದೆ
ಭಾರತದ ಉನ್ನತ ಶಿಕ್ಷಣ ಆಯೋಗ (HECI) ವಿಧೇಯಕ 2025 ಅನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಏತನ್ಮಧ್ಯೆ, 30ಕ್ಕೂ ಹೆಚ್ಚು ಶಿಕ್ಷಕ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ HECI ವಿರೋಧಿ ಸಮನ್ವಯ ಸಮಿತಿ ಸಂಸದರನ್ನು ಭೇಟಿಯಾಗಿ ವಿಧೇಯಕವನ್ನು ವಿರೋಧಿಸುವಂತೆ ಅಥವಾ ಕನಿಷ್ಠ ಅದನ್ನು ಸ್ಥಾಯಿ ಸಮಿತಿಗೆ ವರ್ಗಾವಣೆ ಮಾಡವಂತೆ ಒತ್ತಾಯಿಸಿದೆ. ಸಾರ್ವಜನಿಕ ಪರಿಶೀಲನೆಯಿಲ್ಲದೆ, ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ನಡೆಸಲು ಸರ್ಕಾರವು ತರಾತುರಿ ಮಾಡುತ್ತಿದೆ ಎಂಬುದು ಸಮಿತಿಯ ಆರೋಪ.
ಸಮಿತಿಯು ಈವರೆಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೊಳಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸಂಸದ ಜಾನ್ ಬ್ರಿಟ್ಟಾಸ್, ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸದ ಮನೋಜ್ ಕುಮಾರ್ ಝಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ-ಲೆನಿನಿಸ್ಟ್) ಲಿಬರೇಷನ್ನ ಸಂಸದ ದೀಪಂಕರ್ ಭಟ್ಟಾಚಾರ್ಯ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸಂಸದ ಪಿ ಸಂತೋಷ್ ಕುಮಾರ್ ಅವರನ್ನು ಭೇಟಿ ಮಾಡಿದೆ ಮತ್ತು ಇತರ ವಿರೋಧ ಪಕ್ಷಗಳ ಸಂಸದರಿಗೂ ಮನವಿ ಸಲ್ಲಿಸುವ ಕಾರ್ಯ ಚಾಲ್ತಿಯಲ್ಲಿದೆ.
ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ದೆಹಲಿ ವಿಶ್ವವಿದ್ಯಾಲಯದ ಬೋಧಕರಾದ ರುದ್ರಾಶೀಶ್ ಚಕ್ರವರ್ತಿ ಅವರು ಹೀಗೆ ಹೇಳಿದ್ದಾರೆ. "ಉನ್ನತ ಶಿಕ್ಷಣದ ಒಕ್ಕೂಟ ಸ್ವರೂಪದ ಮೇಲೆ, ವಿಶೇಷವಾಗಿ ರಾಜ್ಯಗಳ ಹಕ್ಕುಗಳ ಮೇಲೆ ಈ ವಿಧೇಯಕವು ಗಂಭೀರ ಪ್ರಹಾರ ನಡೆಸಲಿದೆ. ನಾವು ಟಿಡಿಪಿ ಮತ್ತು ಜೆಡಿ(ಯು) ಸೇರಿದಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳನ್ನು ಬೆಂಬಲ ನೀಡುವಂತೆ ಸಂಪರ್ಕಿಸುತ್ತಿದ್ದೇವೆ. ಈ ವಿಧೇಯಕವನ್ನು ವಿರೋಧಿಸುವ ಕುರಿತಂತೆ ಗರಿಷ್ಠ ವಲಯಗಳಿಂದ ಬೆಂಬಲ ಪಡೆಯುವ ಭರವಸೆ ನಮಗಿದೆ."
ವಿರೋಧ ಯಾಕೆ?
ಭಾರತದ ಉನ್ನತ ಶಿಕ್ಷಣ ಆಯೋಗ (HECI) ವಿಧೇಯಕ 2025ವನ್ನು ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲಾಗಿದೆ. ಇದು ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಕಾಯಿದೆ 1956, ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಕಾಯಿದೆ 1997 ಮತ್ತು ಎನ್‌ಸಿಟಿಇ (ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ) ಕಾಯಿದೆ 1993ಗಳನ್ನು ರದ್ದುಗೊಳಿಸುವ ಮೂಲಕ ಭಾರತದ ಉನ್ನತ ಶಿಕ್ಷಣ ನಿಯಂತ್ರಣಾ ರಚನೆಯನ್ನು ಸಮಗ್ರವಾಗಿ ಬದಲಾಯಿಸುವ ಉದ್ದೇಶವನ್ನು ಹೊಂದಿದೆ.
ಆದರೆ, ಈ ವಿಧೇಯಕದ ಕರಡು ಪ್ರತಿ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ. ಹಾಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿ ಸಂಘಗಳು, ಪಾರದರ್ಶಕತೆ ಅಥವಾ ಸಮಾಲೋಚನೆಯಿಲ್ಲದೆ ಇದನ್ನು ಜಾರಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿವೆ.
ಈಗ ಸಂಸದರಿಗೆ ಬರೆದಿರುವ ಪತ್ರದಲ್ಲಿ ಸಮಿತಿಯು ಹೀಗೆ ಹೇಳಿದೆ: “ಯಾವುದೇ ಪ್ರತಿಕ್ರಿಯೆಯನ್ನು ಕೂಡ ಪಡೆಯದೇ ತರಾತುರಿಯಲ್ಲಿ ಇದನ್ನು ಜಾರಿಗೆ ತರುವ ಹುನ್ನಾರ ನಡೆದಿದೆ. ಶಿಕ್ಷಣ ವ್ಯವಸ್ಥೆಯ ಪ್ರಮುಖ ಪಾಲುದಾರರಾದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ. ಅಲ್ಲದೆ, ಈ ವಿಧೇಯಕದ ಪರಿಣಾಮಗಳನ್ನು ಸಂಪೂರ್ಣವಾಗಿ ಚರ್ಚಿಸಲು ರಾಜ್ಯಗಳಿಗೂ ಸಾಕಷ್ಟು ಸಮಯ ನೀಡಿಲ್ಲ."
ಈ ಕರಡು HECI ವಿಧೇಯಕವನ್ನು ಯಾರೂ ಕೂಡ ನೋಡಿಲ್ಲವೆಂದಾದರೆ ಅದರಿಂದ ಸಮಸ್ಯೆ ಉಂಟಾಗುತ್ತದೆ ಎಂದು ಜನರು ಹೇಳುತ್ತಿರುವುದಾದರೂ ಹೇಗೆ?
ಇದಕ್ಕೆ ಕಾರಣ, 2018ರಲ್ಲಿ ಸಾರ್ವಜನಿಕಗೊಳಿಸಲಾಗಿದ್ದ ಹಿಂದಿನ ಒಂದು ಕರಡು ವಿಧೇಯಕ, ಅದರ ಬಗ್ಗೆ ಅನೇಕ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ನಂತರ ಕೈಬಿಡಲಾಗಿತ್ತು. ಆ ವಿಧೇಯಕದ ಹಲವು ವಿವಾದಾತ್ಮಕ ಅಂಶಗಳು ಈಗಲೂ ಇರಬಹುದು ಎಂಬುದು ಶೈಕ್ಷಣಿಕ ಸಮುದಾಯದ ಆತಂಕವಾಗಿದೆ.
ಅವುಗಳಲ್ಲಿ ಪ್ರಮುಖ ಕಾರಣಗಳು ಹೀಗಿವೆ:
• ಹಣಕಾಸನ್ನು ನಿಯಂತ್ರಣದಿಂದ ಪ್ರತ್ಯೇಕಿಸುವುದು: ಇದು ಸಾರ್ವಜನಿಕ ನಿಧಿಯನ್ನು "ಅಧಿಕಾರಶಾಹಿ, ಅನಿಯಂತ್ರಿತ ಮತ್ತು ರಾಜಕೀಯ ಪರಿಗಣನೆಗಳಿಗೆ ಒಳಪಡುವಂತೆ" ಮಾಡುತ್ತದೆ ಎಂಬುದು ಅವರ ಆತಂಕ.
• ಹೆಚ್ಚು ಕೇಂದ್ರೀಕೃತ ಆಯೋಗ: ಹಿಂದಿನ ಕರಡಿನಲ್ಲಿ, ಆಯೋಗದ "12 ಸದಸ್ಯರಲ್ಲಿ 10 ಮಂದಿ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿದ್ದರು. ಇದರಲ್ಲಿ ಶಿಕ್ಷಕರಿಗೆ ಕನಿಷ್ಠ ಪ್ರಾತಿನಿಧ್ಯವಿತ್ತು ಮತ್ತು ದುರ್ಬಲ ಸಮುದಾಯಗಳಿಗೆ ಯಾವುದೇ ಪ್ರಾತಿನಿಧ್ಯ ಇರಲಿಲ್ಲ."
ತನ್ನ ಪತ್ರದಲ್ಲಿ ಸಮಿತಿಯು ಹೀಗೆ ಹೇಳಿದೆ: "HECI ವಿಧೇಯಕವು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಹಣಕಾಸು ಅಧಿಕಾರಗಳನ್ನು ಕಿತ್ತುಕೊಳ್ಳುತ್ತದೆ ಮತ್ತು ಅನುದಾನಗಳನ್ನು ವಿತರಿಸುವ ಜವಾಬ್ದಾರಿಯನ್ನು ಶಿಕ್ಷಣ ಸಚಿವಾಲಯ ಅಥವಾ ಮತ್ತೊಂದು ವಿಶೇಷ ಉದ್ದೇಶದ ವಾಹಕಕ್ಕೆ (SPV) ನೀಡುವ ಪ್ರಸ್ತಾಪವಿದೆ. ನೀತಿ ನಿರೂಪಣೆಯ ಕಾರ್ಯವನ್ನು ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಿಂದ ಪ್ರತ್ಯೇಕಿಸುವುದರಿಂದ, ಪ್ರಸ್ತಾವಿತ ವಿಧೇಯಕವು 'ಸಾರ್ವಜನಿಕ ನಿಧಿ'ಯನ್ನು ಸೈದ್ಧಾಂತಿಕ ನಿಷ್ಠೆಗಳಿಗಾಗಿ ಬಹುಮಾನ ಅಥವಾ ಶಿಕ್ಷೆಯಾಗಿ ಬಳಸುತ್ತದೆ. ಇದು ನಾನಾ ಹಂತದ ಸಂಸ್ಥೆಗಳ (ಕೇಂದ್ರ ಮತ್ತು ರಾಜ್ಯ, ಸಾಮಾನ್ಯ ಮತ್ತು ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ, ಸಂಶೋಧನೆ ಮತ್ತು ವೃತ್ತಿಪರ, ಮಹಾನಗರ ಮತ್ತು ಗ್ರಾಮೀಣ) ನಡುವಿನ ಶ್ರೇಣಿಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ."
ಉನ್ನತ ಶಿಕ್ಷಣ ವಶಕ್ಕೆ ಪಡೆವ ಹುನ್ನಾರ?
"HECIನ ಸಂಯೋಜನೆಯು (ಕರಡು ವಿಧೇಯಕದಲ್ಲಿ) ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ಉನ್ನತ ಶಿಕ್ಷಣವನ್ನು ವಶಕ್ಕೆ ತೆಗೆದುಕೊಳ್ಳುವ ಸಂಕೇತವನ್ನು ನೀಡುತ್ತದೆ. ಆಯೋಗದ 12 ಸದಸ್ಯರಲ್ಲಿ 10 ಮಂದಿ ಕೇಂದ್ರ ಸರ್ಕಾರದ ಅಧಿಕಾರಿಗಳು ಅಥವಾ ಅದರಿಂದ ನಾನಾ ಹುದ್ದೆಗಳಿಗೆ ನೇಮಕಗೊಂಡವರು. ಶಿಕ್ಷಕರ ಸಂಖ್ಯೆಯನ್ನೋ ಕೇವಲ ಎರಡಕ್ಕೆ ಇಳಿಸಲಾಗಿದೆ, ಇದು ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಮಾನದಂಡಗಳನ್ನು ನಿರ್ಧರಿಸುವ ಸಂಸ್ಥೆ ವಿಚಾರದಲ್ಲಿ ಸಂಪೂರ್ಣ ಆಕ್ಷೇಪಾರ್ಹ. ಆಯೋಗದ ಸಂಯೋಜನೆಯು ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು, ಮಹಿಳೆಯರು, ತೃತೀಯಲಿಂಗಿಗಳು, ವಿಕಲಚೇತನರು ಮತ್ತು ಅಲ್ಪಸಂಖ್ಯಾತರು ಮುಂತಾದ ದುರ್ಬಲ ಗುಂಪುಗಳಿಗೆ ಯಾವುದೇ ಪ್ರಾತಿನಿಧ್ಯವನ್ನು ನೀಡುವುದಿಲ್ಲ." ಎಂದು HECI ವಿರೋಧಿ ಸಮನ್ವಯ ಸಮಿತಿ ಮುಂದಿಡುವ ವಾದವಾಗಿದೆ.
ಒಂದು ವೇಳೆ ೨೦೧೮ರ ಎಚ್ಇ.ಸಿ.ಐ ಮಸೂದೆಯನ್ನೇನಾದರೂ ಜಾರಿಗೆ ತಂದರೆ ಅದು ಒಕ್ಕೂಟ ವ್ಯವಸ್ಥೆಯ ಸಿದ್ಧಾಂತಕ್ಕೂ ಗಂಡಾಂತರ ತಂದೊಡ್ಡುವುದು ನಿಶ್ಚಿತ ಎಂದು ಶಿಕ್ಷಣ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ.
ಸಾಂವಿಧಾನಿಕ ಪಾತ್ರದ ಅಪಮೌಲ್ಯ
ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ನಂದಿತಾ ನಾರಾಯಣ್ ಅವರು ಹೀಗೆ ಹೇಳುತ್ತಾರೆ: "ಹಿಂದಿನ HECI ಕರಡು ವಿಧೇಯಕವು ಎಲ್ಲಾ ಅಧಿಕಾರವನ್ನು ರಾಜ್ಯಗಳ ಪ್ರಾತಿನಿಧ್ಯವಿಲ್ಲದ, ಕೇವಲ ಕೇಂದ್ರದಿಂದ ಪ್ರಾಬಲ್ಯ ಹೊಂದಿರುವ ಆಯೋಗದ ಕೈಗೆ ನೀಡಿತ್ತು, ಹಾಗಿದ್ದೂ ಅದು ರಾಜ್ಯ ವಿಶ್ವವಿದ್ಯಾಲಯಗಳನ್ನು ಕೂಡ ನಿಯಂತ್ರಿಸುವಂತಿತ್ತು. ಹಣಕಾಸು, ಸಂಶೋಧನೆ ಮತ್ತು ಸಂಸ್ಥೆಗಳನ್ನು ಮುಚ್ಚುವ ನಿರ್ಧಾರಗಳನ್ನು ಕೂಡ ರಾಜ್ಯಗಳನ್ನು ಪರಿಗಣಿಸದೆ ತೆಗೆದುಕೊಂಡಾಗ, ಅದು ಮೂಲಭೂತವಾಗಿ ಅವುಗಳ ಸಾಂವಿಧಾನಿಕ ಪಾತ್ರವನ್ನು ಅಳಿಸಿಹಾಕುತ್ತದೆ. ಅದಕ್ಕಾಗಿಯೇ ಈ ವಿಧೇಯಕವು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಮ್ಮ ಅಭಿಮತ. ಕಳೆದ ಬಾರಿ ಈ ವಿಧೇಯಕಕ್ಕೆ ಪ್ರಮುಖವಾಗಿ ವಿರೋಧ ವ್ಯಕ್ತಪಡಿಸಿದ್ದವರಲ್ಲಿ ತಮಿಳುನಾಡು ಸರ್ಕಾರವೂ ಒಂದಾಗಿತ್ತು.”
ಶಿಕ್ಷಕರ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಂಸದರು ಕೂಡ ಇಷ್ಟೊಂದು ಪ್ರಮಾಣದ ಸುಧಾರಣೆಯು ಸಾರ್ವಜನಿಕ ಚರ್ಚೆ ಮತ್ತು ಒಕ್ಕೂಟದ ಸಮಾಲೋಚನೆಗೆ ಒಳಗಾಗಬೇಕು ಎಂದು ವಾದಿಸುತ್ತಾರೆ, ಏಕೆಂದರೆ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಒಳಗೊಂಡಿರುವ ವಿಷಯವಾಗಿದೆ.
ಜೆಪಿಸಿ ಪರಿಶೀಲನೆ ನಡೆಸಿ
ರಾಜ್ಯಸಭಾ ಸಂಸದರಾದ ಜಾನ್ ಬ್ರಿಟ್ಟಾಸ್ ಅವರು ಡಿಸೆಂಬರ್ 8ರಂದು ಕೇಂದ್ರ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ, ವಿಧೇಯಕವನ್ನು "ತಕ್ಷಣವೇ ಮಂಡಿಸುವ ವಿಚಾರದಲ್ಲಿ ಮುಂದುವರಿಯದಂತೆ" ಸರ್ಕಾರವನ್ನು ಒತ್ತಾಯಿಸಿದರು ಮತ್ತು ಈ ಮಾತನ್ನು ಅತ್ಯಂತ ಜವಾಬ್ದಾರಿಯಿಂದ ಹಾಗೂ ತೀವ್ರ ಕಳವಳದಿಂದ ಹೇಳುತ್ತಿರುವುದಾಗಿ ತಿಳಿಸಿದ್ದರು. ಒಂದು ವೇಳೆ ಈ ಮಸೂದೆಯನ್ನು ಮಂಡಿಸಿದರೆ, ಅದನ್ನು ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಮೂಲಕ ಪರಿಶೀಲನೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು.
“ಭಾರತದಲ್ಲಿ ಉನ್ನತ ಶಿಕ್ಷಣವು ಕೇವಲ ಆಡಳಿತಾತ್ಮಕ ಕ್ಷೇತ್ರವಲ್ಲ; ನಮ್ಮ ಪ್ರಜಾಪ್ರಭುತ್ವ, ವೈಜ್ಞಾನಿಕ ಪ್ರಗತಿ, ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಏಕತೆ ತಳಕಚ್ಚಿ ನಿಲ್ಲುವ ಬೌದ್ಧಿಕ ಅಡಿಪಾಯವಾಗಿದೆ. ಆದ್ದರಿಂದ, ಈ ಪ್ರಮಾಣದ ಯಾವುದೇ ರಚನಾತ್ಮಕ ಮರು-ಸಂಘಟನೆಯು ಸಮಗ್ರ ಸಮಾಲೋಚನೆ, ಪಾರದರ್ಶಕ ಚರ್ಚೆ ಮತ್ತು ವ್ಯಾಪಕ ಒಕ್ಕೂಟ ಒಮ್ಮತದ ನಂತರವಷ್ಟೇ ಮುಂದುವರಿಯಬೇಕು. ಕರಡು ವಿಧೇಯಕವು ಇನ್ನೂ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ, ಅಲ್ಲದೆ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು, ಶಿಕ್ಷಕರ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಅಥವಾ ಇತರ ಪಾಲುದಾರರೊಂದಿಗೆ ಅರ್ಥಪೂರ್ಣವಾಗಿ ಸಮಾಲೋಚನೆ ನಡೆಸಿಲ್ಲ ಎಂಬುದು ಕಳವಳದ ಸಂಗತಿ," ಎಂದು ಅವರು ಪತ್ರದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಇನ್ನಷ್ಟು ಉಲ್ಭಣವಾಗಲಿದೆ ಬಿಕ್ಕಟ್ಟು
“2020ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದಾಗಿ ಉಂಟಾದ ಸರಣಿ ಅಡೆತಡೆಗಳಿಂದ ದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳು ಈಗಾಗಲೇ ತತ್ತರಿಸುತ್ತಿರುವಾಗ—ಬದಲಾದ ಪಠ್ಯಕ್ರಮಗಳು ಮತ್ತು ವಿಳಂಬಿತ ಪ್ರವೇಶಗಳಿಂದ ಆರಂಭಿಸಿ ಕುಗ್ಗುತ್ತಿರುವ ಸಂಶೋಧನಾ ಬೆಂಬಲ ಮತ್ತು ಬೋಧನಾ ಸಿಬ್ಬಂದಿಯ ಗುತ್ತಿಗೆ ಆಧಾರದ ನೇಮಕಾತಿಯವರೆಗೆ—ಮತ್ತೊಂದು ಕೇಂದ್ರೀಕೃತ ಸುಧಾರಣೆಯನ್ನು ಪರಿಚಯಿಸುವುದರಿಂದ ಭಾರತೀಯ ಉನ್ನತ ಶಿಕ್ಷಣದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕವನ್ನು ವ್ಯಾಪಕವಾಗಿ ವ್ಯಕ್ತಪಡಿಸಲಾಗಿದೆ." ಎಂದು ಬ್ರಿಟ್ಟಾಸ್ ಅವರು ತಿಳಿಸಿದ್ದಾರೆ.
ಈ ಎಲ್ಲ ಆತಂಕದ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಎಲ್ಲಾ ಪಕ್ಷಗಳ ಸಂಸದರಿಗೆ ವಿಧೇಯಕದ ಮಂಡನೆಯನ್ನು ವಿರೋಧಿಸುವಂತೆ ಮತ್ತು ವ್ಯಾಪಕ ಸಮಾಲೋಚನೆಗಾಗಿ ಅದನ್ನು ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿವೆ.
"ನಮ್ಮ ಚಿಂತಿತ ಅಭಿಪ್ರಾಯವನ್ನು ನೀವು ಸಂಸತ್ತಿನಲ್ಲಿ ಮಂಡಿಸುತ್ತೀರಿ ಮತ್ತು ವಿಧೇಯಕದ ವಿರುದ್ಧದ ಚರ್ಚೆಯಲ್ಲಿ ಮಾತನಾಡುತ್ತೀರಿ ಎಂದು ನಾವು ಆಶಿಸುತ್ತೇವೆ. ಅಲ್ಲದೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರಿಗೆ ತಮ್ಮ ವಾದವನ್ನು ಮಂಡಿಸಲು ಸಾಕಷ್ಟು ಅವಕಾಶ ದೊರೆಯುವಂತೆ, ವಿಧೇಯಕವನ್ನು ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಕೋರಬೇಕು ಎಂದು ನಾವು ವಿನಂತಿಸುತ್ತೇವೆ" ಎಂದು ಸಮಿತಿಯು ಬರೆದ ಪತ್ರದಲ್ಲಿ ತಿಳಿಸಿದೆ.

