ಗುರುದತ್‌ಗೆ ನೂರು: ಹಿಂದಿ ಸಿನೆಮಾಗಳಿಗೆ ವಿಷಾದದ ಮುದ್ರೆಯೊತ್ತಿದ ನಿರ್ದೇಶಕ
x
ತೇಜಸ್ವೀ ಹಾಗೂ ಏಕಾಂಗಿ ಸೊಗಸುಗಾರ: ಇಡೀ ಜಗತ್ತಿಗೆ ಗುರುದತ್ ಎಂದೇ ಜನಪ್ರಿಯರಾದ ಶಿವಶಂಕರ್ ಶಂಕರ್ ಭಾರತೀಯ ಸಿನೆಮಾ ರಂಗದಲ್ಲಿ ಅತ್ಯಂತ ದುರಂತ ನಾಯಕರಲ್ಲಿ ಒಬ್ಬರು. ದತ್ ಜನಿಸಿ ಜುಲೈ 9ಕ್ಕೆ ಬರೋಬ್ಬರಿ ನೂರು ವರ್ಷಗಳು ಸಂದಿವೆ.

ಗುರುದತ್‌ಗೆ ನೂರು: ಹಿಂದಿ ಸಿನೆಮಾಗಳಿಗೆ ವಿಷಾದದ ಮುದ್ರೆಯೊತ್ತಿದ ನಿರ್ದೇಶಕ

ಗುರುದತ್ ಅವರು ಗತಿಸಿ ಆರವತ್ತೊಂದು ವರುಷಗಳೇ ಸಂದಿವೆ. ಕಾವ್ಯಾತ್ಮಕ ವೇದನೆಯಿಂದ ತುಂಬಿದ ಪ್ಯಾಸಾದಿಂದ ಭವಿಷ್ಯದ ಅಂಧಕಾರವನ್ನು ಬಿಂಬಿಸುವ ಕಾಗಝ್ ಕೆ ಫೂಲ್ ವರೆಗೆ ಗುರು ನಮ್ಮನ್ನೆಂದೂ ತೊರೆದು ಹೋಗಿಯೇ ಇಲ್ಲ. ಅಸಲಿಗೆ ಅವರು ತಮ್ಮ ಬದುಕಿಗಿಂತ ಬೃಹತ್ತಾಗಿ ಬೆಳೆದಿದ್ದಾರೆ.


ಅದು 1964ನೇ ಇಸವಿ ಅಕ್ಟೋಬರ್ ಹತ್ತನೇ ತಾರೀಕು. ಅಂದು ಬೆಳಿಗ್ಗೆ ಬಾಂಬೆಯ ಪೆದ್ದಾರ್ ರಸ್ತೆಯಲ್ಲಿರುವ ಆರ್ಕ್ ರಾಯಲ್ ಅಪಾರ್ಟ್ಮೆಂಟ್ ಮುಂದೆ ಜನ ಜಮಾಯಿಸಿದ್ದರು. ಅವರಲ್ಲಿ ಬಹುತೇಕರು ಬಾಲಿವುಡ್ ಸಿನೆಮಾ ಮಂದಿ. ಅವರೆಲ್ಲ ಮುಖದಲ್ಲಿ ವಿಷಾದದ ಛಾಯೆ. ಅಂದು ಆ ಅಪಾರ್ಟ್ಮೆಂಟಿನ ತಮ್ಮ ಫ್ಲಾಟ್ ನಲ್ಲಿ ಉಸಿರು ಚೆಲ್ಲಿದವರು ಇನ್ಯಾರೂ ಅಲ್ಲ; ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಹಿಂದಿ ಚಿತ್ರರಂಗದ ತೇಜಸ್ವಿ ಹಾಗೂ ಒಂಟಿ ತಾರೆ ಗುರುದತ್. ಆಗ ಅವರಿಗಿನ್ನೂ 39 ವರ್ಷ ವಯಸ್ಸು.

ಹಿಂದಿನ ದಿನ ರಾತ್ರಿಯಷ್ಟೇ ಗುರುದತ್ ‘ಬಾಹಾರೇ ಫಿರ್ ಭಿ ಆಯೇಂಗಿ’ ಚಿತ್ರಕಥೆ ರಚನೆಯಲ್ಲಿ ತಲ್ಲೀನರಾಗಿದ್ದರು. ಮದ್ಯದ ಜೊತೆಗೆ ನಿದ್ರೆ ಮಾತ್ರೆಗಳನ್ನು ಸೇವಿಸಿ ಅವರು ಬದುಕಿಗೆ ಗುಡ್-ಬೈ ಹೇಳಿದರು ಎಂಬುದು ಅಧಿಕೃತ ವರದಿ. ಆದರೆ ಅವರ ಕಟ್ಟಾ ಅಭಿಮಾನಿಗಳು ಹೇಳುತ್ತಿದ್ದ ಅನಧಿಕೃತ ಕಾರಣ ಬೇರೆ; ಭಗ್ನಪ್ರೇಮ, ಒಂಟಿತನ ಮತ್ತು ಎದೆಯೊಳಗೆ ಮಾಗಿ ಹುಣ್ಣಾಗಿದ್ದ ದುಃಖ, ವಿಷಾದ. ಅದು ಅವರನ್ನು ಇಂಚಿಂಚೇ ಕೊಲ್ಲುತ್ತ ಹೋಯಿತು.

ಯಾಕೆ ಈಗ ಗುರುದತ್ ಅವರನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರೆ ಅವರು ಜನಿಸಿ ಈಗ ಭರ್ತಿ ನೂರು ವರ್ಷ. ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಸಮೀಪದ ಪುಟ್ಟ ಊರು ಪಡುಕೋಣೆ ಮೂಲದವರಾದ ಗುರುದತ್ ಜನಿಸಿದ್ದು 1925ರ ಜುಲೈ 9ರಂದು. ಅವರ ಮೂಲ ಹೆಸರು ಶಿವಶಂಕರ್ ಪಡುಕೋಣೆ.

ಗುರುದತ್ ಬದುಕಿಗೆ ಒಂದು ಶತಮಾನ ಕಳೆದರೂ ಕೂಡ ಭಾರತೀಯ ಚಿತ್ರರಂಗದ ಪಾಲಿಗೆ ಅತ್ಯಂತ ಪ್ರಭಾವಶಾಲಿ ದಂತಕಥೆಗಳಲ್ಲಿ ಒಬ್ಬರಾಗಿ ಚಿರಸ್ಥಾಯಿಯಾಗಿದ್ದಾರೆ. ಅವರ ಚಿತ್ರಗಳೆಂದರೆ ಹಾಗೆ, ಅವು ನೆರಳು-ಬೆಳಕಿನ ನಡುವಿನ, ಕಲೆ ಮತ್ತು ವಾಣಿಜ್ಯ, ಹೊಂದಿಕೆ ಮತ್ತು ಅಗಲಿಕೆ ನಡುವಿನ ಕಲಾಪಯಣ.

ಕಾವ್ಯ ಮತ್ತು ಕಾಡುವ ಸೌಂದರ್ಯ: ಗುರುದತ್ ಅವರ ಕೆಲಸಗಳು ನಮ್ಮೊಂದಿಗೆ ಇನ್ನೂ ಜೀವಂತವಾಗಿವೆ. ಅವರು ಗತಿಸಿ ಆರು ದಶಕಗಳು ಉರುಳಿ ಹೋದರೂ ಅವರ ಸಿನೆಮಾಗಳಿಗೆ ವಯಸ್ಸಾಗಿಲ್ಲ. ಅವು ಈಗಲೂ ಚಿರಯೌವನಿಯಂತೇ ನಮ್ಮ ನಡುವೆ ಇವೆ. ಅವರು ಕೊಟ್ಟಿರುವ ಸಿನೆಮಾಗಳೆಲ್ಲವೂ ಕಾಲಾತೀತವಾದವು. ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಸಾಹಿಬ್ ಬೀಬಿ ಔರ್ ಗುಲಾಮ್ ನಂತಹ ಚಿತ್ರಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಪ್ರತಿಯೊಂದು ಚಿತ್ರಗಳೂ ಕಾವ್ಯ ಮತ್ತು ಕಾಡುವ ಸೌಂದರ್ಯದಿಂದ ಅದ್ದಿ ತೆಗೆದಂತಿವೆ.

ಅವರು ತಮ್ಮ ಅಕಾಲಿಕ ಮರಣಕ್ಕೂ ಮೊದಲೇ, ಪ್ಯಾಸಾ ಚಿತ್ರದಲ್ಲಿ ತಮ್ಮ ಅಗಲಿಕೆಯನ್ನು, ಕಾಗಜ್ ಕೆ ಫೂಲ್ ನಲ್ಲಿ ತಮ್ಮ ವೈಫಲ್ಯವನ್ನು ಹಾಗೂ ಸಾಹಿಬ್ ಬೀಬಿ ಔರ್ ಗುಲಾಮ್ ನಲ್ಲಿ ಸಾಮಾಜಿಕ ಅವನತಿಯನ್ನು ಬಿಂಬಿಸಿದ್ದರು. ಒಮ್ಮೆ ಹಿಂದಿರುಗಿ ನೋಡಿದರೆ ಅವರ ಕಲೆಯೇ ಅವರ ಆತ್ಮಕಥನವೆಂದರೆ ತಪ್ಪಾಗದು.

ಗುರುದತ್ ಅವರ ಜನ್ಮಶತಮಾನೋತ್ಸವದ ಗೌರವಾರ್ಥ ಅವರ ಕ್ಲಾಸಿಕ್ ಸಿನೆಮಾಗಳಿಗೆ 4k ಸ್ಪರ್ಶ ನೀಡಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟಕ್ಕೆ ಅವುಗಳನ್ನು ಮರುಸ್ಥಾಪಿಸುವ ಮೂಲಕ ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿಸಲಾಗುತ್ತಿದೆ. 2025ರ ಕ್ಯಾನೇ ಚಿತ್ರೋತ್ಸವದಲ್ಲಿಯೂ ಈ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಗುರುದತ್ ಚಿತ್ರಗಳ ಪ್ರತೀ ಫ್ರೇಮ್-ಗೂ ಹೊಸ ರೂಪ ನೀಡುವ ಕೆಲಸವನ್ನು ಅಲ್ಟ್ರಾ ಮೀಡಿಯಾ ಮತ್ತು ಎಂಟರ್-ಟೈನ್-ಮೆಂಟ್ ಸಂಸ್ಥೆಯು ಮಾಡಿದೆ.

ಕ್ಯಾನೆ ಚಿತ್ರೋತ್ಸವದಲ್ಲಿ ಬಿಡುಗಡೆಯಾದ ಈ ನವೀನ ಪ್ರಿಂಟ್ ಗಳು ಈಗಾಗಲೇ ಮುಂಬೈ, ದೆಹಲಿ ಮತ್ತು ಇತರ ನಗರಗಳ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿವೆ. ಗುರುದತ್ ಹೆಸರನ್ನಷ್ಟೇ ಕೇಳಿರುವ ಅಥವಾ ಯೂಟ್ಯೂಬ್ ನಲ್ಲಿ ಅವರ ಅಸ್ಪಷ್ಟ ಕ್ಲಿಪ್ ಗಳನ್ನು ಕಂಡಿರುವ ಇತ್ತೀಚಿನ ತಲೆಮಾರಿನವರಿಗೆ ಅವರ ಮಾಂತ್ರಿಕತೆಯನ್ನು ವಿಶಾಲ ಪರದೆಯ ಮೇಲೆ ನೋಡುವ ಅಪರೂಪದ ಅವಕಾಶ ದೊರೆತಿದೆ.

ದತ್ ಬಯೋಪಿಕ್

ಇದೇ ವೇಳೆ ಗುರುದತ್ ಅವರ ಜೀವನಚರಿತ್ರೆ ಆಧಾರಿತ ಚಲನಚಿತ್ರ (ಬಯೋಪಿಕ್) ನಿರ್ಮಾಣ ಮಾಡುವ ಬಗ್ಗೆ ಮಾತುಕತೆಗಳು ಕೇಳಿಬಂದಿವೆ. ವಿಷಾದಮಯ ನಿರ್ದೇಶಕರ ಪಾತ್ರವನ್ನು ವಿಕಿ ಕೌಶಲ್ ನಿರ್ವಹಿಸುವ ಸಾಧ್ಯತೆಯಿದೆ. ಇದರ ಜೊತೆಗೇ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್-ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ದೆಹಲಿಯ ತ್ರಿವೇಣಿ ಕಲಾ ಸಂಗಮದಲ್ಲಿ ದತ್ ಶತಮಾನೋತ್ಸವ ಆಚರಣೆಗಳನ್ನು ಪ್ರಾರಂಭಿಸಿದೆ. ಬಾಝೀ ಚಿತ್ರದಲ್ಲಿನ ಥ್ರಿಲ್ ನಿಂದ ಕಾಗಝ್ ಕೆ ಫೂಲ್ ನಲ್ಲಿನ ಭಾವಪೂರ್ಣ ಮೌನದ ವರೆಗೆ ಅವರ ಚಿತ್ರದಲ್ಲಿನ ಸಂಗೀತಕ್ಕೆ ಹೆಚ್ಚು ಗಮನವನ್ನು ನೀಡಿ ಮಾಸಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

“ಗುರುದತ್ ಮಿತಭಾಷಿಯಾಗಿದ್ದರು. ಆದರೆ ಅವರ ಆಲೋಚನೆಗಳು ಗಾಢವಾಗಿದ್ದವು. ಅವರ ಅಂತರ್ಮುಖಿ ಸ್ವಭಾವದಿಂದಾಗಿ ಅವರನ್ನು ಖುಲ್ಲಂಖುಲ್ಲ ಅರ್ಥಮಾಡಿಕೊಳ್ಳುವುದಾಗಲಿ, ಅವರೊಂದಿಗೆ ಆಪ್ತ ಭಾವ ಹೊಂದುವುದಾಗಲಿ ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ನಿಕಟರಾಗಿದ್ದವರು ಕೂಡ ಅವರೊಳಗಿನ ನಿಗೂಢತೆಯನ್ನು ತಿಳಿದುಕೊಳ್ಳಲು ಕಷ್ಟಪಡುತ್ತಿದ್ದರು. ಗುರುದತ್ ಅವರನ್ನು ಆರಂಭದಿಂದಲೂ ಬಲ್ಲ, ಅವರ ಯೂನಿಟ್ಟಿನ ಕಾಯಂ ಸದಸ್ಯರಂತೆ ಕೆಲಸ ಮಾಡಿದ ರೆಹಮಾನ್ ಅವರಂತಹ ನಟರು ಕೂಡ ಈ ಮಾತನ್ನು ಒಪ್ಪುತ್ತಾರೆ ಮತ್ತು ಅವರು ತೀರಾ ಸೂಕ್ಷ್ಮ ಮನಸ್ಸಿನವರು ಮತ್ತು ಅವಸರದ ಮನುಷ್ಯ ಎನ್ನುತ್ತಾರೆ. ಅವರು ವಿಷಯಗಳಲ್ಲಿ ಎಷ್ಟು ಬೇಗ ಆಸಕ್ತಿ ಹೊಂದುತ್ತಿದ್ದರೋ ಅಷ್ಟೇ ಬೇಗ ಆಸಕ್ತಿ ಕಳೆದುಕೊಳ್ಳುತ್ತಿದ್ದರು. ಬಹುತೇಕ ತಮ್ಮ ಚಿಂತನೆಯ ಒಳಗೇ ಬದುಕುತ್ತಿದ್ದರು,” ಎಂದು ಫಿರೋಜ್ ರಂಗೂನ್ ವಾಲಾ ಅವರು ತಮ್ಮ ಗುರು ದತ್: ಎ ಮೊನೊಗ್ರಾಫ್ (1973) ಎಂಬ ಕೃತಿಯಲ್ಲಿ ಬರೆದಿದ್ದಾರೆ.

ಕಲ್ಕತ್ತಾ ಬೀರಿದ ಕಲಾಪ್ರಭಾವ

ಗುರು ಜನಿಸಿದ್ದು ಮಂಗಳೂರಿನ ಸಾರಸ್ವರ ಬ್ರಾಹ್ಮಣ ಕುಟುಂಬದಲ್ಲಿ. ಅವರು ಚಿಂತನಶೀಲ, ಶಾಂತ ಹಾಗೂ ಅಂತರ್ಮುಖಿ ಸ್ವಭಾವದವರಾಗಿದ್ದರು. ಅವರ ತಾಯಿ ವಸಂತಿ ಪಡುಕೋಣೆ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದರು. ಆಕೆ ಮಗನಲ್ಲಿ ಅದಮ್ಯವಾದ ಕಲಾಪ್ರೀತಿಯನ್ನು ತುಂಬಿದರು. ಅವರ ಕುಟುಂಬ ಕಲ್ಕತ್ತಾ ನಗರಕ್ಕೆ ಸ್ಥಳಾಂತರಗೊಂಡಾಗ ಗುರು ಇನ್ನೂ ಪುಟ್ಟ ಹುಡುಗ. ಆದರೆ ಕಲ್ಕತ್ತಾ ಅವರ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿತು. ಆತ ಬಂಗಾಲಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದುದು ಮಾತ್ರವಲ್ಲದೆ ಅದು ಅವರ ಮನೋಧರ್ಮದ ಮೇಲೂ ಪರಿಣಾಮ ಬೀರಿತು.

ತಮ್ಮ ಶಿಕ್ಷಣದ ವಿಚಾರದಲ್ಲಿ ಅವರು ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ. ಶಾಲಾ ಶಿಕ್ಷಣದ ಬಳಿಕ ಗುರುದತ್ ಅಲ್ಮೋರಾದಲ್ಲಿರುವ ಉದಯ್ ಶಂಕರ್ ನೃತ್ಯ ಅಕಾಡೆಮಿಯನ್ನು ಸೇರಿಕೊಂಡರು. ಅಲ್ಲಿ ಅವರು ಕಲಿತಿದ್ದು ಶಾಸ್ತ್ರೀಯ ನೃತ್ಯವನ್ನು. ಆದರೆ ಈ ಮಾಧ್ಯಮವೇ ಅವರನ್ನು ಚಿತ್ರರಂಗಕ್ಕೆ ಎಳೆದು ತಂದಿತು. 1944ರಲ್ಲಿ ಅವರು ಪುಣೆಯಲ್ಲಿರುವ ಪ್ರಭಾತ್ ಚಿತ್ರ ನಿರ್ಮಾಣ ಸಂಸ್ಥೆಗೆ ಟ್ರೈನಿಯಾಗಿ ಸೇರ್ಪಡೆಗೊಂಡರು. ಆಗ ಅಲ್ಲಿದ್ದ ಸಹೋದ್ಯೋಗಿಗಳೆಂದರೆ ದೇವ್ ಆನಂದ್ ಮತ್ತು ವಹೀದಾ ರೆಹಮಾನ್ ಅವರಂತಹ ಘಟಾನುಘಟಿ ಕಲಾವಿದರು. ನಿರ್ದೇಶಕರಿಗೆ ಸಹಕರಿಸುವುದು, ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸುವುದು, ಕ್ಯಾಮರಾ ನಿರ್ವಹಣೆ ಕರಗತಮಾಡಿಕೊಳ್ಳುವುದು, ಸಂಕಲನ, ನೃತ್ಯ ಸಂಯೋಜನೆಯನ್ನು ಕಲಿಯುವುದು ಹೀಗೆ ಪ್ರಭಾತ್ ಅವರಿಗೆ ಸಮಗ್ರ ಶಿಕ್ಷಣವನ್ನೇ ನೀಡಿತು.

ಗುರು ಮಾತ್ರ ಆರಂಭದಿಂದಲೂ ತೀರಾ ಅಂತರ್ಮುಖಿಯಾಗಿಯೇ ಇರುತ್ತಿದ್ದರು. ಅವರ ನಿರ್ಮಾಣದ ಹೊಣೆಯನ್ನು ಹೊತ್ತಿದ್ದ ಅತ್ಯಂತ ನಿಷ್ಠಾವಂತರೆಂದೇ ಪರಿಗಣಿಸಲಾಗಿದ್ದ ಗುರುಸ್ವಾಮಿ ಮತ್ತು ಸಂಭಾಷಣೆ ಬರೆಯುತ್ತಿದ್ದ ಅಬ್ರಾರ್ ಅಲ್ವಿ ಕೂಡ ಈ ಮಾತನ್ನು ಅನುಮೋದಿಸುತ್ತಾರೆ. ಹತ್ತಾರು ಪ್ರಾಜೆಕ್ಟ್ ಗಳನ್ನು ಒಮ್ಮೆಗೇ ಕೈಗೆತ್ತಿಕೊಳ್ಳುವುದು ಮತ್ತು ಅದನ್ನು ಅರ್ಧದಲ್ಲೇ ಕೈಬಿಡುವುದು ಅವರಿಗೆ ರೂಢಿಯಾಗಿ ಹೋಗಿತ್ತು. ಕೆಲವೊಂದು ವಿಚಾರಗಳಲ್ಲಿ ಕಲಾತ್ಮಕವಾದ ಅನುಮಾನ ಅವರಿಗಿದ್ದುದು ನಿಜವಾದರೂ ಅನೇಕ ಬಾರಿ ಅವರು ತೀರಾ ಚಡಪಡಿಕೆಗೆ ಒಳಗಾಗುತ್ತಿದ್ದರು ಎನ್ನುತ್ತಾರೆ ನಿಕಟವರ್ತಿಗಳು.

ಅವರೊಳಗಿನ ‘ಖಾಸಗಿತನ’ವನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಅನೇಕ ಮೂಢನಂಬಿಕೆಗಳ ಸುತ್ತ ಅವರ ಮನಸ್ಸು ಗಿರಕಿ ಹೊಡೆಯುತ್ತಿತ್ತು. ಮಂಗಳವಾರದಂದು ಶೂಟಿಂಗ್ ಮಾಡಲು ಅವರು ಬಿಲ್-ಕುಲ್ ಒಪ್ಪುತ್ತಿರಲಿಲ್ಲ. ಒಮ್ಮೆ ಅವರು ಗಂಗಾ ನದಿಯಲ್ಲಿ ಮುಳುಗು ಹಾಕುವವನ ಕುರಿತು ಸಿನೆಮಾ ಮಾಡುವೆ ಅನ್ನುತ್ತಿದ್ದರು, ಇನ್ನೊಮ್ಮೆ ಟಾಗೋರ್, ಉಮರ್ ಖಯ್ಯಾಮ್ ಬಗ್ಗೆ ಚಿತ್ರ ಮಾಡುವುದಾಗಿ ಹೇಳುತ್ತಿದ್ದರು, ಬ್ರಿಟಿಷ್ ಚಿತ್ರ ನಿರ್ದೇಶಕ ಜಾಕ್ ಕಾರ್ಡಿಫ್ ಜೊತೆ ಕೆಲಸ ಮಾಡುವ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದರು. ಆದರೆ ಇವುಗಳಲ್ಲಿ ಕೆಲವು ಮಾತ್ರ ಅವರಿಗೆ ಕೈಗೂಡುತ್ತಿತ್ತು. ಮಾಧ್ಯಮದ ಮಂದಿಗೂ ಅವರ ಬಗ್ಗೆ ಗೊತ್ತಿದ್ದುದು ಅಲ್ಪಮಾತ್ರ.

ಚಿತ್ರರಂಗಕ್ಕೆ ಮುನ್ನುಡಿ

1950ರ ದಶಕದ ಆರಂಭದಲ್ಲಿ ಗುರುದತ್ ತಮ್ಮ ನಿರ್ದೇಶನ ವೃತ್ತಿಗೆ ನಾಂದಿಹಾಡಿದ್ದು ಬಾಝೀ (1951) ಚಿತ್ರದ ಮೂಲಕ. ಸೊಗಸಾದ ಥ್ರಿಲ್ಲರ್ ಟಚ್ ಇರುವ ಈ ಸಿನೆಮಾ ಹಿಂದಿ ಪ್ರೇಕ್ಷಕರಿಗೆ ಹೊಸ ರೀತಿಯ ಆಧುನಿಕ ಜೀವನಶೈಲಿಯನ್ನು ಪರಿಚಯಿಸಿತು. ಗೆಳೆಯ ದೇವ್ ಆನಂದ್ ಮತ್ತು ಬಾಲ್-ರಾಜ್ ಸಾಹ್ನಿ ಅವರ ಚಿತ್ರಕಥೆಯನ್ನು ಹೊಂದಿದ್ದ ಚಿತ್ರ ತನ್ನ ಚುರುಕುತನ, ಭಾವತೀವ್ರತೆ ಮತ್ತು ರೊಮ್ಯಾಂಟಿಕ್ ಸ್ವರೂಪದಿಂದಾಗಿ ಒಂದು ಆಧುನಿಕ ಶೈಲಿಯನ್ನು ತುಂಬುವಲ್ಲಿ ಯಶಸ್ವಿಯಾಯಿತು.

ಇದಾದ ಬಳಿಕ ಜಾಲ್, ಬಾಝ್, ಆರ್ ಪಾರ್, ಮಿಸ್ಟರ್ & ಮಿಸಸ್ 55 ಹೀಗೆ ಒಂದರ ಹಿಂದೆ ಒಂದು ಚಿತ್ರಗಳನ್ನು ನಿರ್ದೇಶಿಸುತ್ತ ಬಂದರು. ಈ ಚಿತ್ರಗಳಲ್ಲೆಲ್ಲ ತುಂಬಿದ್ದುದು ಸಾಮಾಜಿಕ ವಿಮರ್ಶೆ. ಕೆಲವೊಮ್ಮೆ ಇದಕ್ಕೆ ವಿಷಾದದ ಲೇಪನವಿರುತ್ತಿತ್ತು. ಹಾಗಿದ್ದರೂ ಅವೆಲ್ಲ ಜನಪ್ರಿಯ ಮನರಂಜನೆಯ ಚೌಕಟ್ಟಿನೊಳಗೇ ಇರುತ್ತಿದ್ದವು. ಆದರೆ 1957ರಲ್ಲಿ ತೆರೆಕಂಡ ಪ್ಯಾಸಾ ಮಾತ್ರ ಗುರುದತ್ ಅವರ ಆತ್ಮ ಸಾಂಗತ್ಯಕ್ಕೆ ಭಾಷ್ಯ ಬರೆದಂತಿತ್ತು.

‘ಪ್ಯಾಸಾ’ ಕಾಲೇಜು ದಿನಗಳಿಂದಲೂ ಗುರು ದತ್ ಅವರ ಮನಸ್ಸಿನಲ್ಲಿ ಕಾವುಕೊಡುತ್ತಿದ್ದ ಕಥೆ. ಆ ಹೊತ್ತಿಗೆ ಅವರು ಅನೇಕ ಚಿತ್ರಗಳನ್ನು ಅರ್ಧಕ್ಕೆ ನಿಲ್ಲಿಸಿ ಹತಾಶರಾಗಿದ್ದರು. ಅಂತಿಮವಾಗಿ ಕೈಯಿಟ್ಟಿದ್ದು ಈ ಚಿತ್ರಕಥೆಗೆ. ಇದರಲ್ಲಿ ವಿಫಲ ಕವಿ ವಿಜಯ್ ಪ್ರಪಂಚದಿಂದ ತಿರಸ್ಕೃತನಾಗಿರುತ್ತಾನೆ. ಕೊನೆಗೆ ಪ್ರೀತಿ ಮತ್ತು ಕಲೆ ಅವನನ್ನು ಗೆಲ್ಲಿಸುತ್ತದೆ. ಇಂತಹುದೊಂದು ಗಂಭೀರ ವಿಷಯವನ್ನು ಪ್ರೇಕ್ಷಕರು ಒಪ್ಪಿಕೊಳ್ಳುವ ಬಗ್ಗೆ ಗುರುದತ್ ಗೆ ಅನುಮಾನವಿತ್ತು. ಆದರೆ ಅದನ್ನು ಹೇಳಲೇಬೇಕು ಎಂಬ ಒತ್ತಡಕ್ಕೆ ಅವರು ಸಿಲುಕಿದ್ದರು ಎಂದು ರೆಹಮಾನ್ ಸಂದರ್ಶನದ ವೇಳೆ ಹೇಳಿಕೊಂಡಿದ್ದರು.

ಈ ಚಿತ್ರದ ಕಥೆ ಧೂಳಿನಿಂದ ಆವರಿಸಿದ ಕನಸಿನಂತೆ ತೆರೆದುಕೊಳ್ಳುತ್ತದೆ. ಕಥೆಯ ಹೀರೋ ಬಡಕವಿ ವಿಜಯ್. ಈತನ ಕಾವ್ಯವನ್ನು ಜನ ಕಡೆಗಣಿಸಿರುತ್ತಾರೆ. ಆತನ ಹಿಂದಿನ ಪ್ರೀತಿ (ಮೀನಾ) ಹಣ ಮತ್ತು ಮದುವೆಯ ನೆವದಲ್ಲಿ ಮುರಿದುಬಿದ್ದಿರುತ್ತದೆ. ಅವನ ಗೆಳೆಯರು ಮತ್ತು ಕುಟುಂಬದವರು ಅವಕಾಶವಾದಿಗಳಾಗಿ ಕಾಣುತ್ತಾರೆ. ನಿರ್ದಯಿ ಸಮಾಜ ದುಡ್ಡಿಗಷ್ಟೇ ಬೆಲೆಕೊಡುತ್ತದೆ. ಅವನ ಕಾವ್ಯದ ಮೌಲ್ಯವನ್ನು ಗುರುತಿಸುವವರು ಯಾರೂ ಇಲ್ಲದೇ ಹೋದಾಗ ಆಶಾಕಿರಣದಂತೆ ಬಂದಾಕೆ ಗುಲಾಬೊ (ವಹೀದಾ ರೆಹಮಾನ್). ವೇಶ್ಯಾ ವೃತ್ತಿಯ ಈಕೆ ವಿಜಯ್ ನಲ್ಲಿರುವ ಕಾವ್ಯದ ಶಕ್ತಿಯನ್ನು ಗುರುತಿಸುತ್ತಾಳೆ, ಮೆಚ್ಚುತ್ತಾಳೆ. ಪೋಷಿಸುತ್ತಾಳೆ.

ಇಂತಹ ಸಂದರ್ಭದಲ್ಲಿ ಚಿತ್ರದಲ್ಲಿ ತಿರುವು ಕಾಣಿಸಿಕೊಳ್ಳುತ್ತದೆ. ಚಿತ್ರದ ಹೀರೊ ವಿಜಯ್ ಸತ್ತಿದ್ದಾನೆಂದು ಭಾವಿಸಿ ಇಡೀ ಜಗತ್ತು ಆತನನ್ನು ಪ್ರಶಂಸಿಸಲು ಆರಂಭಿಸುತ್ತದೆ. ಆತನ ಸ್ಮರಣಾರ್ಥ ಒಂದು ಕಾರ್ಯಕ್ರಮ ಏರ್ಪಾಡಾಗುತ್ತದೆ. ಅಲ್ಲಿಗೆ ಕವಿ ನಡೆದುಬರುತ್ತಾನೆ. ಎಲ್ಲವನ್ನೂ ಆಲಿಸುತ್ತಾನೆ. ಅಂತಿಮವಾಗಿ ಅಲ್ಲಿಂದ ನಿರ್ಗಮಿಸುತ್ತಾನೆ ಮತ್ತು ಗುಲಾಬೊ ಜೊತೆಗೆ ಅನಾಮಧೇಯನಾಗಿ ಉಳಿಯುತ್ತಾನೆ.

ಹೃದಯಸ್ಪರ್ಶಿ ಸಾಹಿರ್ ಗೀತೆಗಳು

‘ಪ್ಯಾಸಾ’ ಚಿತ್ರದ ಹೈಲೈಟ್ ಎಂದರೆ ಸಾಹಿರ್ ಲುಧಿಯಾನ್ವಿಯವರ ಗೀತೆಗಳು. ಅವು ನೇರವಾಗಿ ನಮ್ಮ ಹೃದಯಕ್ಕೆ ತಟ್ಟುತ್ತವೆ. ‘ಪ್ಯಾಸಾ’ವನ್ನು ಕಣ್ತುಂಬಾ ನೋಡಿದ ಇನ್ನೊಬ್ಬ ಕವಿ, ಗೀತೆರಚನೆಕಾರ ಫೈಜ್ ಅಹ್ಮದ್ ಫೈಜ್, ಸಾಹಿರ್ ಸಾಹಿತ್ಯವನ್ನು ಮನಃಪೂರ್ವಕ ಶ್ಲಾಘಿಸಿದ್ದರು. ಗುರುದತ್ ಅವರ ಕಾಲವು ಆಶಾವಾದಿ ನೆಹರು ಯುಗವಾಗಿತ್ತು. ಆದರೆ ದತ್ ಮಾತ್ರ ಆ ಕಾಲದ ಮೌನ ಮತ್ತು ನಿರಾಶೆಯನ್ನು ವ್ಯಕ್ತಪಡಿಸಲು ತಮ್ಮ ಸಿನೆಮಾವನ್ನು ಬಳಸಿಕೊಂಡರು.

‘ಜಿನ್ಹೆ ನಾಝ್ ಹೆ ಹಿಂದ್ ಪರ್ ವೋ ಕಹಾಂ ಹೆ?’ ಎಂಬ ಸಾಹಿರ್ ಸಾಲುಗಳು ಮನಮುಟ್ಟುವಂತಿವೆ. ದೇಶದಲ್ಲಿ ಇಷ್ಟೊಂದು ಬಡತನ, ದುಃಖ, ಸಂಕಟ ವ್ಯಾಪಕವಾಗಿರುವಾಗ ದೇಶದ ಬಗ್ಗೆ ಹೆಮ್ಮೆಯಿಂದ ಬೀಗುವ ಆದರ್ಶವಾದಿಗಳೆಲ್ಲ ಎಲ್ಲಿ ಹೋದರು ಎಂದು ಆ ಕವಿತೆಯ ಸಾಲುಗಳು ಬೊಟ್ಟುಮಾಡುತ್ತವೆ. ಮೊಹಮ್ಮದ್ ರಫಿ ಅವರು ಹಾಡಿರುವ ಇನ್ನೊಂದು ಗೀತೆ ‘ಸರ್ ಜೋ ತೇರಾ ಚಕ್ರಾಯೆ’ ಸಿಹಿ-ಕಹಿಯ ಲೇಪನವನ್ನು ಹೊಂದಿದೆ. ಇವೆಲ್ಲದರ ನಡುವೆ ಜಾನಿ ವಾಕರ್ ಅವರ ಡ್ಯಾನ್ಸ್ ಎಲ್ಲ ಹತಾಶೆಗಳ ನಡುವೆ ಕಣ್ಣು ಮಿಟುಕಿಸುವಂತೆ ಮಾಡುತ್ತದೆ.

ಪ್ಯಾಸಾ ಚಿತ್ರದಲ್ಲಿ ವಹೀದಾ ರೆಹಮಾನ್ ಜೊತೆ ದತ್

‘ಪ್ಯಾಸಾ’ ಮತ್ತು ಅವರ ಇತರ ಚಿತ್ರಗಳಲ್ಲಿ ಸಂಗೀತವು ಭಾವನಾತ್ಮಕವಾಗಿ, ಗುಪ್ತಗಾಮಿನಿಯಾಗಿ ಹರಿಯುವಂತೆ ನೋಡಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿತ್ರದ ಪಾತ್ರಗಳ ಅವ್ಯಕ್ತ ಹಂಬಲಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನವರು ಮಾಡಿದ್ದಾರೆ. ಬಹುಷಃ ಇದು ಅದ್ಭುತ ಫಲಿತಾಂಶಗಳನ್ನು ಸೃಷ್ಟಿಸಿದೆ.

“ಪ್ಯಾಸಾ ನನ್ನ ವೃತ್ತಿ ಜೀವನದ ಶ್ರೇಷ್ಠ ಪ್ರತಿಫಲ. ಚಿತ್ರದ ಕಥಾವಸ್ತು ಗಂಭೀರವಾಗಿತ್ತು, ತೂಕದಿಂದ ಕೂಡಿತ್ತು. ಅದನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ಖಾತರಿ ನನಗೆ ಇರಲಿಲ್ಲ” ಎಂದು ಗುರುದತ್ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟರು ಮತ್ತು ಗೆಲ್ಲಿಸಿದರು. ಈ ಚಿತ್ರ ಅಂದಿನ ದಿನಗಳಲ್ಲಿ ಮದ್ರಾಸ್ ನಲ್ಲಿ ಕೂಡ ಹದಿನೈದು ವಾರ ಪ್ರದರ್ಶನ ಕಂಡಿತ್ತು. ಪ್ಯಾಸಾ ತಂದುಕೊಟ್ಟ ಯಶಸ್ಸು ಗುರುದತ್ ಅವರಲ್ಲಿ ಭಂಡ ಧೈರ್ಯವನ್ನು ತುಂಬಿತು. ಅದು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಿತು ಎಂದರೆ ತಪ್ಪಾಗಲಿಕ್ಕಿಲ್ಲ.

‘ಕಾಗಜ್ ಕೆ ಫೂಲ್’ ಎಂಬ ಸಿನೆಮಾಸ್ಕೋಪ್

ಹೀಗೆ ಪ್ಯಾಸಾ ಚಿತ್ರದ ಯಶಸ್ಸಿನಿಂದ ಬೀಗಿದ ಗುರು, ಗಂಭೀರ ಚಲನಚಿತ್ರ ಮತ್ತು ಲಘುಚಿತ್ರಗಳನ್ನು ಪರ್ಯಾಯವಾಗಿ ಮಾಡುವ ತಮ್ಮ ಎಂದಿನ ಲಯದಿಂದ ಹೊರಬಂದು ಭಾರತದ ಮೊದಲ ಕಪ್ಪು-ಬಿಳುಪು ಸಿನಿಮಾಸ್ಕೋಪ್ ಚಿತ್ರವಾದ ‘ಕಾಗಜ್ ಕೆ ಫೂಲ್’ ಪ್ರಾರಂಭಿಸಿಬಿಟ್ಟರು. ಈ ಉದ್ದೇಶದಿಂದಲೇ ಅವರು ತಮ್ಮ ಛಾಯಾಗ್ರಾಹಕ ವಿ.ಕೆ.ಮೂರ್ತಿ (ಅವರು ಕೂಡ ಕರ್ನಾಟಕದವರು) ಅವರನ್ನು ಜಾಕ್ ಕಾರ್ಡಿಫ್ ಬಳಿ ತರಬೇತಿ ಪಡೆಯಲು ವಿದೇಶಕ್ಕೆ ಕಳುಹಿಸಿದರು. ಸಿನೆಮಾ ಶೂಟಿಂಗ್ ಗೆ ಬೇಕಾದ ಲೆನ್ಸ್ ಗಳನ್ನು ಆಮದುಮಾಡಿಕೊಂಡರು. ಸಿನೆಮಾದ ಪ್ರತಿ ಫ್ರೇಮ್ ನಲ್ಲಿಯೂ ಅವರು ತನ್ಮಯರಾದರು. ಇದರ ಪರಿಣಾಮವಾಗಿ ಅವರು ಮಾನಸಿಕವಾಗಿ ಜರ್ಝರಿತರಾದರು.

ಕಾಗಝ್ ಕೆ ಫೂಲ್ ಚಿತ್ರದಲ್ಲಿ ವಹೀದಾ ರೆಹಮಾನ್ ಜೊತೆ ಗುರುದತ್

ಈ ಚಿತ್ರವು ಒಂದು ಕಾಲದ ಪ್ರಸಿದ್ಧ ನಿರ್ದೇಶಕ ಸುರೇಶ್ ಸಿನ್ಹಾ (ಗುರು ದತ್) ಅವರ ಕಥೆಯನ್ನು ಹೇಳುತ್ತದೆ. ಈತನ ವೃತ್ತಿ ಮತ್ತು ವೈಯಕ್ತಿಕ ಜೀವನ ಏಕಕಾಲದಲ್ಲಿ ಕುಸಿದುಬೀಳುತ್ತದೆ. ಇಂತಹ ಸಂದರ್ಭದಲ್ಲಿ ಯುವ ನಟಿಯ (ವಹೀದಾ ರೆಹಮಾನ್) ಭೇಟಿಯಾಗುತ್ತದೆ. ಆಕೆಯನ್ನು ಪ್ರೀತಿಸುತ್ತಾರೆ. ಆದರೆ, ಗಾಸಿಪ್, ಸ್ನೇಹಭಂಗ, ಕಳೆಕುಂದುವ ಖ್ಯಾತಿಯ ಸುಳಿಯಲ್ಲಿ ಸಿಲುಕುವ ನಿರ್ದೇಶಕ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ; ಆಕೆಯನ್ನು ಕೂಡ. ನಿರ್ದೇಶಕನ ಕುರ್ಚಿಯಲ್ಲಿ ಕುಳಿತಿದ್ದಂತೆ ಏಕಾಂಗಿಯಾಗಿ, ಯಾರಿಗೂ ಗುರುತಿಸಲಾಗದ ರೀತಿಯಲ್ಲಿ ಆತ ಸಾವಿನ ದಾರಿ ಹಿಡಿಯುತ್ತಾನೆ.

ಇದು ಥೇಟ್ ಗುರುದತ್ ಆತ್ಮಕಥೆಯನ್ನೇ ಹೇಳಿದಂತಿತ್ತು. ಭವಿಷ್ಯ ನುಡಿಯುವ ರೀತಿಯಲ್ಲಿ ಚಿತ್ರದ ಕಥೆಯನ್ನು ಬಿಂಬಿಸಲಾಗಿತ್ತು. ಆದರೆ ಪ್ರೇಕ್ಷಕರು ಅದನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಚಿತ್ರದಲ್ಲಿ ಹಾಸ್ಯದ ಲೇಪವಿರಲಿಲ್ಲ. ಅದರ ತುಂಬ ತುಂಬಿಕೊಂಡಿದ್ದು ವಿಷಾದಭಾವ. ಅದೇ ಕೊನೆ, ಗುರು ಮತ್ತೆ ಯಾವುದೇ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಗಲಿಲ್ಲ.

ಮಾಯದ ಗಾಯ: “ನಾನೇ ನಿರ್ಮಾಪಕನೂ ನಿರ್ದೇಶಕನೂ ಆಗಿರುವುದರಿಂದ ಎಂದಿಗೂ ನೆಮ್ಮದಿಯಿಂದ ನಿದ್ರೆ ಮಾಡಲಿಲ್ಲ” ಎಂದು ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು. ಆ ಬಳಿಕ ಗುರುದತ್ ಚಿತ್ರಗಳನ್ನು ನಿರ್ದೇಶಿಸಿದರಾದರೂ ತಮ್ಮನ್ನು ತಾವು ನಿರ್ದೇಶಕ ಎಂದು ಬಿಂಬಿಸಿಕೊಳ್ಳಲು ನಿರಾಕರಿಸಿದರು. ಯಾಕೆಂದರೆ ಕಾಗಝ್ ಕೆ ಫೂಲ್ ಅವರ ಎದೆಯಲ್ಲಿ ಆಳವಾದ ಗಾಯಮಾಡಿತ್ತು. ಅದು ಮಾಯಲೇ ಇಲ್ಲ.

“ಈ ಚಿತ್ರದ ಭಾರೀ ವೈಫಲ್ಯ ಗುರು ಅವರಲ್ಲಿದ್ದ ಕಲಾತ್ಮಕತೆಗೆ ಮಂಕು ಕವಿಯುವಂತೆ ಮಾಡಿತು. ತಂತ್ರಜ್ಞನ ಉತ್ಸಾಹವೇ ಮಾಯವಾಯಿತು. ವಿಶಿಷ್ಟ ವಸ್ತುಗಳೊಂದಿಗೆ ಆಟವಾಡುವ ಅವರ ಪ್ರಯೋಗದ ಮನಸ್ಸು ಜಡವಾಯಿತು. ಅವರು ಹೊಸ ಪ್ರಯತ್ನಗಳನ್ನೇ ಮಾಡದಾದರು. ಗಲ್ಲಾ ಪೆಟ್ಟಿಗೆಯನ್ನು ಸೂರೆ ಹೊಡೆಯುತ್ತಿದ್ದ ಗುರುದತ್ ಚಿತ್ರಗಳು ಎರಡರಿಂದ ನಾಲ್ಕು ವಾರಗಳ ಕಡಿಮೆ ಪ್ರದರ್ಶನವನ್ನು ಕಂಡ ಉದಾಹರಣೆಯೇ ಇರಲಿಲ್ಲ. ಈ ಚಿತ್ರವಂತೂ ಉತ್ತಮ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತ್ತು. ದೆಹಲಿಯಲ್ಲಿ ಪ್ರೀಮಿಯರ್ ಪ್ರದರ್ಶನವನ್ನು ಅಂದಿನ ಉಪರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರೇ ವೀಕ್ಷಿಸಿದ್ದರು. ಆದರೆ ಚಿತ್ರದಲ್ಲಿ ಅದೇನು ತಪ್ಪಿತ್ತೋ ತಿಳಿಯದು, ಜನ ಮಾತ್ರ ಥೀಯೇಟರ್ ಕಡೆಗೆ ಸುಳಿಯಲೇ ಇಲ್ಲ. ಪ್ರೇಕ್ಷಕರ ಈ ಪರಿಯ ತಿರಸ್ಕಾರ ಅವರ ಮೇಲೆ ಅದೆಂಥ ಪರಿಣಾಮ ಬೀರಿತೆಂದರೆ ಅದರಿಂದ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ” ಎಂದು ರಂಗೂನ್ ವಾಲಾ ಅವರು ಬರೆಯುತ್ತಾರೆ.

ಪ್ಯಾಸಾ ಅವರ ಆತ್ಮವಾಗಿದ್ದರೆ ಕಾಗಝ್ ಕೆ ಫೂಲ್ ಅವರ ಪಾಲಿನ ಭವಿಷ್ಯವಾಣಿಯಾಗಿತ್ತು. ಸಾಹಿಬ್ ಬೀಬಿ ಔರ್ ಗುಲಾಮ್ (1962) ಸಮಾಜ, ಸಂಪ್ರದಾಯ ಮತ್ತು ಸ್ತ್ರೀ ಬಗೆಗಿನ ಅವರ ಅನ್ವೇಷಣೆಗೆ ಕನ್ನಡಿ ಹಿಡಿದಿತ್ತು. ಬಿಮಲ್ ಮಿತ್ರ ಅವರ ಬಂಗಾಲಿ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಊಳಿಗಮಾನ್ಯ ಪದ್ಧತಿಯ ಕಥಾಹಂದರವನ್ನು ಹೊಂದಿತ್ತು. ಮದ್ಯವ್ಯಸನಿ ಬಹು (ಛೋಟಿ ಬಹು ಪಾತ್ರವನ್ನು ಮೀನಾ ಕುಮಾರಿ ನಿರ್ವಹಿಸಿದ್ದರು), ಆಕೆಯ ಅವನತಿಯನ್ನು ಗಮನಿಸುವ ಸಾಮಾನ್ಯ ಗುಮಾಸ್ತ(ಗುರು). ಇಂತಹ ಕಥಾಸಾರವನ್ನು ಅದು ಹೊಂದಿತ್ತು.

ತನ್ನ ಪತಿಯ ಪ್ರೀತಿಗಾಗಿ ಇನ್ನಿಲ್ಲದೇ ಹಂಬಲಿಸುವ ಛೋಟಿ ಬಹು ಆತನನ್ನು ಮರಳಿ ಪಡೆಯಲು ಮದ್ಯದ ದಾಸಳಾಗುತ್ತಾಳೆ. ಆಕೆಯ ವೇದನೆ ಎಷ್ಟು ಹಸಿಹಸಿಯಾಗಿತ್ತು ಎಂದರೆ ಅದರ ಅಭಿವ್ಯಕ್ತಿಯಿಂದಾಗಿಯೇ ಭಾರತೀಯ ಚಿತ್ರರಂಗದಲ್ಲಿ ಅದೊಂದು ಅಚ್ಚಳಿಯದ ಪಾತ್ರವಾಗಿ ಉಳಿದುಬಿಟ್ಟಿತು. ಸಮಾಜ ಹೇಗೆ ನೈತಿಕ ಅಧಃಪತನದ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಈ ಚಿತ್ರ ಸಶಕ್ತವಾಗಿ ಬಿಂಬಿಸಿದೆ. ಕಥೆಯ ಮೂಲ ಸತ್ವವನ್ನು ಉಳಿಸಿಕೊಳ್ಳುವಲ್ಲಿ ಗುರುದತ್ ವಹಿಸಿರುವ ಶ್ರಮ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೂ ಅವರು ಕೆಲವು ಜನಪ್ರಿಯ ಹಾಡುಗಳು ಮತ್ತು ಹಾಸ್ಯಮಯ ಸನ್ನಿವೇಶಗಳನ್ನು ಸೇರಿಸಬೇಕಾಯಿತು. ಈ ಚಿತ್ರವು ಅತ್ತ ಸಂಪೂರ್ಣವಾಗಿ ಕಲಾತ್ಮಕವೂ ಆಗಿರಲಿಲ್ಲ, ಇತ್ತ ಆದ್ಯಂತವಾಗಿ ವಾಣಿಜ್ಯಿಕವೂ ಆಗಿರಲಿಲ್ಲ. ಗುರುದತ್ ಅವರನ್ನು ಈ ಚಿತ್ರ ತಲ್ಲಣಗೊಳಿಸಿದರೂ ಅದಕ್ಕೆ ಅವರು ನೀಡಿರುವ ಸ್ತ್ರೀವಾದಿ ಸ್ಪರ್ಶದಿಂದಾಗಿ ಅದು ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ಉಳಿದಿದೆ.

ಅರ್ಥವಾಗದ ಸಂಕಟ

ಒಬ್ಬ ನಿರ್ದೇಶಕನಾಗಿ ಗುರುದತ್ ಕೈಗೆತ್ತಿಕೊಂಡ ಯೋಜನೆಗಳು ಅನೇಕ. ಆದರೆ ಮುಕ್ತಾಯಗೊಳಿಸಿದ್ದು ಕೆಲವೇ ಕೆಲವು. ಒಂದು ಚಿತ್ರದಲ್ಲಿ ಅವರು ಮುಳುಗುಗಾರನ ಪಾತ್ರವನ್ನು ನಿರ್ವಹಿಸಿದ್ದರು. ಅದು ತೆರೆಯ ಮೇಲೆ ಬರಲೇ ಇಲ್ಲ. ಉಮರ್ ಖಯ್ಯಾಮ್ ಬಯೋಪಿಕ್ ಮಾಡುವ ಕನಸು ಕಂಡಿದ್ದರು. ಆದರದು ಈಡೇರಲೇ ಇಲ್ಲ. ಶರತ್ ಚಂದ್ರ ಪಾತ್ರದ ರೂಪಾಂತರಕ್ಕಾಗಿ ಅವರು ತಲೆ ಬೋಳಿಸಿಕೊಂಡಿದ್ದರು. ಚಿತ್ರರಂಗವು ಅವರ ಯಶಸ್ಸನ್ನೇನೋ ಪ್ರೀತಿಸಿತು. ಆದರೆ ಅವರ ಸಂಕಟವನ್ನು ಅರ್ಥಮಾಡಿಕೊಳ್ಳಲಿಲ್ಲ. ಜನ ಅವರ ಕೆಲವು ಚಿತ್ರಗಳ ಸೌಂದರ್ಯ, ಕಲಾತ್ಮಕತೆಗೆ ಬೆರಗಾಗಿದ್ದರು, ಆದರೆ ಅವರ ಒಡೆದ ಮನಸ್ಸನ್ನು ಕಾಣದಾದರು.

ಗುರುದತ್ ಅವರ ದುರಂತವಿದ್ದುದು ವೈಫಲ್ಯದಲ್ಲಿ ಅಲ್ಲ, ಬದಲಾಗಿ ಅವರ ಅಶಾಂತ ದೃಷ್ಟಿಕೋನದಲ್ಲಿ. ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಜನಪ್ರಿಯ ಚಿತ್ರಗಳ ಮೂಲಕ. ಆದರೆ ಅವರು ಗಂಭೀರ ಕಥಾವಸ್ತುವನ್ನಿಟ್ಟುಕೊಂಡು ಕೆಲಸಮಾಡುವಾಗ ಆ ತಂತ್ರಗಳನ್ನು ಬಿಟ್ಟು ಈಚೆಗೆ ಬರುವುದು ಕಷ್ಟವಾಯಿತು. ಅವರು ಯಾವತ್ತೂ ಹಂಬಲಿಸುತ್ತಿದ್ದುದು ಪರಿಶುದ್ಧತೆಗಾಗಿ, ಆದರೆ ಪ್ಯಾಕೇಜಿಂಗ್ ನ್ನು ತ್ಯಜಿಸಲು ಸಾಧ್ಯವಾಗಲಿಲ್ಲ. ಅವರು ಬಯಸಿದ್ದು ಕಲಾವಿದನ ಸತ್ಯವನ್ನು. ಆದರೆ ಬದುಕಿದ್ದು ಶುದ್ಧ ಶೋಮ್ಯಾನ್ ಆಗಿ. 1960ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ಅವರು ತಮ್ಮ ಕಾಲಕ್ಕೆ ಮೀರಿದ ವ್ಯಕ್ತಿಯಾಗಿದ್ದರು. ದತ್ ಚಿತ್ರಗಳು ಮಾತ್ರ ಮಾರುಕಟ್ಟೆಗೆ ಹೆಚ್ಚು ಸೊಗಸಾಗಿದ್ದವು. ಆದರೆ ಆಶಾವಾದದ ಹಂಬಲದಲ್ಲಿದ್ದ ಪೀಳಿಗೆಗೆ ಅವು ಹೆಚ್ಚು ವಿಷಣ್ಣತೆಯಿಂದ ಕೂಡಿದ್ದವು.

ಗುರುದತ್ ಅವರ ಆಪ್ತ ವಲಯದಲ್ಲಿದ್ದವರಿಗೆ ಈ ಬದಲಾವಣೆಯ ಅರಿವಿತ್ತು. ದತ್ ಮಾತ್ರ ಗೀಳಿಗೆ ಬಿದ್ದಿದ್ದರು. ಮದ್ಯ ಸೇವನೆಯನ್ನು ವ್ಯಸನವನ್ನಾಗಿ ಮಾಡಿಕೊಂಡರು. ಅವರ ವರ್ತನೆಗಳು ವಿಚಿತ್ರವಾಗಿರುತ್ತಿದ್ದವು. ಗೀತಾ ದತ್ ಜೊತೆಗಿನ ಮದುವೆ ಮುರಿದುಬಿದ್ದಿತ್ತು. ಇದರಿಂದ ಅವರು ಎಲ್ಲರಿಂದ ಮತ್ತಷ್ಟು ದೂರವಾಗುತ್ತ, ಮೌನಕ್ಕೆ ಶರಣಾದರು. ಅವರ ಪಾಲಿಗೆ ಒಂದಷ್ಟು ಸೃಜನಶೀಲತೆ ಅಂತ ಉಳಿದುಕೊಂಡಿದ್ದು ಅಬ್ರಾರ್ ಅಲ್ವಿ ಅವರೊಂದಿಗಿನ ಸಹಯೋಗ.

ದತ್ ಅವರ ಕೊನೆಯ ಸಂಜೆಯನ್ನು ಅಲ್ವಿ ನೆನಪುಮಾಡಿಳ್ಳುತ್ತಾರೆ. ಆವತ್ತು ಅವರು ಬಹಾರೆಂ ಫಿರ್ ಭೀ ಆಯೇಂಗೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆ ಕೆಲಸ ಮಾಡುತ್ತಿದ್ದರು. ಅದು ಚಿತ್ರದ ನಾಯಕಿ ಏಕಾಂಗಿತನದ ಕೊರಗಿನಿಂದ ಸಾಯುವ ದೃಶ್ಯವಾಗಿತ್ತು. ಆ ಹೊತ್ತಿಗೆ ದತ್ ಕುಡಿತವನ್ನು ಅಕ್ಷರಶಃ ಹೃದಯಕ್ಕೇ ಅಂಟಿಸಿಕೊಂಡಿದ್ದರು. ಅವರಿಗದು ಅಸಾಮಾನ್ಯವಾಗಿರಲಿಲ್ಲ. ಆದರೆ ಅವರು ಹೇಳಿದ ಮಾತು ಅಸಾಮಾನ್ಯವಾಗಿತ್ತು. ಅವರು ಮಾನಸಿಕ ಚಿಕಿತ್ಸೆಯನ್ನು ಪಡೆಯುತ್ತಿರುವ ತಮ್ಮ ಗೆಳೆಯನ ಬಗ್ಗೆ ಮಾತನಾಡಿದರು. ಪತ್ರಗಳಲ್ಲಿ ಆ ಸ್ನೇಹಿತ ಎಷ್ಟು ಸಾಮಾನ್ಯನಂತೆ ಕಾಣುತ್ತಾನೆ ಎಂದರು. “ಕೆಲವೊಮ್ಮೆ ನನಗೆ ಹುಚ್ಚೇ ಹಿಡಿಯುತ್ತದೆ ಎಂದು ಅನಿಸುತ್ತಿದೆ” ಎಂದರು. ಇದನ್ನು ಕೇಳಿ ಅಲ್ವಿ ಆ ಕ್ಷಣಕ್ಕೆ ವಿಚಲಿತರಾದರೂ ಅದೂ ಒಂದು ವಿಚಿತ್ರ ವರ್ತನೆ ಎಂದು ನಿರ್ಲಕ್ಷ್ಯ ಮಾಡಿದರು. ಎಲ್ಲರೊಂದಿಗೆ ಅತ್ಯಂತ ಸಂಯಮದಿಂದ ವರ್ತಿಸುತ್ತಿದ್ದ ದತ್ ತಮ್ಮ ಆಂತರ್ಯದ ಬೇಗುದಿಯನ್ನು ಹೊರಹಾಕಲಿಲ್ಲ. ಗಂಟೆಗಳ ಬಳಿಕ ಕೊಠಡಿಯ ಒಳಗೆ ತೆರಳಿದರು. ಒಳಗಿನಿಂದ ಲಾಕ್ ಮಾಡಿಕೊಂಡರು. ಅದರೊಳಗೆ ಬಂದಿಯಾದರು. ಅಲ್ಲಿಂದ ಅವರು ಹೊರಜಗತ್ತಿಗೆ ಬರಲೇ ಇಲ್ಲ.

ಗುರುದತ್ ಹುಟ್ಟಿ ನೂರು ವರುಷಗಳು ಸರಿದುಹೋಗಿವೆ. ಆದರೆ ಅಲ್ಲಿಂದೀಚೆಗೆ ಭಾರತದಲ್ಲಿ ಯಾವೊಬ್ಬ ಚಿತ್ರ ನಿರ್ಮಾಪಕನೂ ಗುರುದತ್ ಅವರಿಗೆ ಸರಿಸಾಟಿಯಾಗುವ ರೀತಿಯಲ್ಲಿ ವಿಷಾದಭಾವವನ್ನು ಅಥವಾ ಆ ಸೊಗಸುಗಾರಿಕೆಯನ್ನು ತೆರೆಗೆ ತರುವಲ್ಲಿ ಸಮರ್ಥರಾಗಿಲ್ಲ ಎನ್ನುವುದು ನೂರಕ್ಕೆ ನೂರು ಸತ್ಯ. ದತ್ ಗತಿಸಿ ಆರವತ್ತೊಂದು ವರ್ಷಗಳು ಸಂದರೂ ಅವರ ಬದುಕಿಗಿಂತ ಬೃಹತ್ತಾಗಿ ಅವರ ಖ್ಯಾತಿ ಬೆಳೆದುನಿಂತಿದೆ. ಮಾತುಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇ ಇದ್ದುದನ್ನು ಗುರು ಅಂದೇ ನೆರಳು-ಬೆಳಕುಗಳ ಮೂಲಕ ಸಶಕ್ತವಾಗಿ ವ್ಯಕ್ತಪಡಿಸಿದ್ದರು. ಸಿನೆಮಾ ಮಾಧ್ಯಮ ಅವರಿಗೊಂದು ದನಿಯನ್ನು ಕೊಟ್ಟಿತು. ಆದರೆ ಆ ದನಿ ನಿರೀಕ್ಷೆಗಿಂತ ಮೊದಲೇ ಮೌನವಾಯಿತು ಎಂಬುದು ವಿಷಾದನೀಯ. ಹಾಗಂತ ನಾವು ಅವರ ದನಿಯನ್ನು ಆಲಿಸುವುದನ್ನು ನಿಲ್ಲಿಸಿಲ್ಲ. ಅದು ಭಾರತೀಯ ಚಿತ್ರರಂಗದ ಹಾದಿಯುದ್ದಕ್ಕೂ ಪ್ರತಿಧ್ವನಿಸುತ್ತಿರುತ್ತದೆ.

Read More
Next Story