ರಾಜ್ಯದಲ್ಲಿ ಮತ್ತೆ ಕ್ರಿಯಾಶೀಲವಾಗಿರುವ ಹೆಣ್ಣುಭ್ರೂಣ ಹತ್ಯೆ ಜಾಲ; ಮಂಡ್ಯದಲ್ಲಿ ತಲೆ ಎತ್ತಿದ ದಂಧೆ
x

ರಾಜ್ಯದಲ್ಲಿ ಮತ್ತೆ ಕ್ರಿಯಾಶೀಲವಾಗಿರುವ ಹೆಣ್ಣುಭ್ರೂಣ ಹತ್ಯೆ ಜಾಲ; ಮಂಡ್ಯದಲ್ಲಿ ತಲೆ ಎತ್ತಿದ ದಂಧೆ


ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಮಂಡ್ಯ ತಾಲ್ಲೂಕಿನ ಹಾಡ್ಯ ಎಂಬ ಗ್ರಾಮ ದೇಶದಾದ್ಯಂತ ಕೆಟ್ಟ ಕಾರಣಕ್ಕಾಗಿ ಸುದ್ದಿಮಾಡಿತು. ಈ ಹಾಡ್ಯ ಸಮೀಪದ ಆಲೆಮನೆಯೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆಯಾದದ್ದು ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ನೆನಪು ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮತ್ತೊಂದು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ವರದಿಯಾಗಿರುವುದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಈ ಅಮಾನವೀಯ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ಪ್ರಕರಣ ನಡೆದಿರುವುದು ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಆರು ಮಂದಿ ಮಹಿಳೆಯರು ಸ್ಪರ್ಧಿಸಿರುವ ಹೊತ್ತಿನಲ್ಲಿ. ʻಬಿಜೆಪಿ ಸರ್ಕಾರ ಬೇಟಿ ಬಚಾವೋʼ ಆಂದೋಲನವನ್ನು ಚುನಾವಣೆಯ ಮುಖ್ಯ ವಿಷಯ ಮಾಡಿಕೊಂಡಿರುವ ಸಂದರ್ಭದಲ್ಲಿ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾಗಿ ಐತಿಹಾಸಿಕ ಮಸೂದೆ ’ನಾರಿ ಶಕ್ತಿ ವಂದನಾ’ ಅಧಿನಿಯಮ ಅಂಗೀಕಾರಗೊಂಡ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಹೆಣ್ಣುತನಕ್ಕೆ ಆಘಾತಕಾರಿ-ಆತಂಕಕಾರಿ ಎನ್ನುವಂಥ ಭ್ರೂಣ ಲಿಂಗ ಪತ್ತೆ ಹಾಗೂ ಕಳೆದೆರಡು ವರ್ಷಗಳಲ್ಲಿ ೯೦೦ ಭ್ರೂಣಹತ್ಯೆಗಳಿಗೆ ಕಾರಣವಾದ ಪ್ರಕರಣ ವರದಿಯಾಯಿತು.

ಸ್ತ್ರೀಶಕ್ತಿ ಘೋಷಣೆಗಳ ನೆರಳಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದರಿಂದ ಒಂದು ರೀತಿಯಲ್ಲಿ ಭಾರೀ ಮುಜುಗರ ಅನುಭವಿಸುವಂತಾಯಿತು. ಮುಜುಗರ ತಪ್ಪಿಸಿಕೊಳ್ಳುವ ಯತ್ನದಲ್ಲಿ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತು. ರಾಮನಗರ, ಮಂಡ್ಯ ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿರುವುದು ಬಹಿರಂಗವಾಯಿತು. ಆರೋಪಿಗಳು ಕಳೆದ ಮೂರು ವರ್ಷಗಳಲ್ಲೀ ೯೦೦ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಸಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಈ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಬಯಲಾದ ಹಿಂದೆಯೇ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸಕ್ರೀಯ ವಾಗಿರುವ ಹಸುಗೂಸುಗಳ ಮಾರಾಟ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೇಧಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದರು. . ಇದೇ ವೇಳೆ ೨೦ ದಿನಗಳ ಹಸುಗೂಸೊಂದನ್ನು ರಕ್ಷಿಸಿ, ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಈ ಆರೋಪಿಗಳು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಣದ ವಿವಿಧೆಡೆ ಮಕ್ಕಳ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ಬಯಲಿಗೆ ಬಂದದ್ದು ಮದ್ಯವ್ಯಸನಿಯೊಬ್ಬ ನೀಡಿದ ಮಾಹಿತಿಯಿಂದ.

ಈ ಬಗ್ಗೆ ತೀವ್ರವಾಗಿ ತನಿಖೆ ನಡೆಸಿದ ಸಿಐಡಿ ಆರೋಗ್ಯ ಇಲಾಖೆಗೆ ತನ್ನ ವರದಿಯನ್ನು ಸಲ್ಲಿಸಿದೆ. ಏಕೆಂದರೆ ಸಿಐಡಿಗೆ ದೋಷಾರೋಪಣ ಪಟ್ಟಿ (charge sheet) ಸಲ್ಲಿಸುವ ಅಧಿಕಾರವಿಲ್ಲ ಎಂದು ಸಿಐಡಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ದ ಫೆಡರಲ್-ಕರ್ನಾಟಕಕ್ಕೆ ತಿಳಿಸಿದ್ದಾರೆ. ವರದಿ ನೀಡಿರುವ ಸಿಐಡಿ Preconception and Prenatal Diagnostic Techniques (PCPNDT) Act ನಲ್ಲಿರುವ ಲೋಪವೇ ಇಂಥ ಪ್ರಕರಣಗಳು ಹೆಚ್ಚಲು ಕಾರಣ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣ ಬೆಳಕಿಗೆ ಬಂದದ್ದು ಅಕ್ಟೋಬರ್‌ ೨೦೨೩ರಲ್ಲಿ ಬಯ್ಯಪ್ಪನಹಳ್ಳಿ ಪೊಲೀಸರ ಪ್ರಯತ್ನದಿಂದಾಗಿ ಎಂದು ಸಿಐಡಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮತ್ತೆ ಪಾಂಡವಪುರದಲ್ಲಿ ನಡೆದಿರುವ ಘಟನೆ

ಅತ್ಯಂತ ನೋವಿನ ಸಂಗತಿಯೆಂದರೆ, ಈ ಕೃತ್ಯ ಮತ್ತೆ ನಡೆದು, ಬೆಳಕಿಗೆ ಬಂದಿರುವುದು ಪಾಂಡವಪುರ ತಾಲ್ಲೂಕು ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ. ಎಂದಿನಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು. ಆಂಬ್ಯುಲೆನ್ಸ್‌ ಚಾಲಕ ಆನಂದ್‌, ಹೊರಗುತ್ತಿಗೆ ಡಿ ಗ್ರೂಪ್‌ ಸಿಬ್ಬಂದಿ ಅಶ್ವಿನಿ, ಆಕೆಯ ತಾಯಿ ಸತ್ಯಮ್ಮ, ಹಾಗೂ ಡಿ ಗ್ರೂಪ್‌ ಸಿಬ್ಬಂದಿ ಗಿರಿಜಮ್ಮ.

ಈ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ? ಆಂಬ್ಯುಲೆನ್ಸ್‌ ಚಾಲಕನಾದ ಆನಂದ್‌ ಈ ವಸತಿ ಗೃಹದಲ್ಲಿ ವಾಸಮಾಡುತ್ತಿದ್ದ. ಅವನ ಹೆಂಡತಿ ಅಶ್ವಿನಿ, ಅಶ್ವಿನಿಯ ತಾಯಿ ಸತ್ಯಮ್ಮ ಅಲ್ಲಿ ವಾಸವಿದ್ದರು. ಪೊಲೀಸ್‌ ಮೂಲಗಳ ಪ್ರಕಾರ ವಸತಿ ಗೃಹದಲ್ಲಿ ವಾಸವಾಗಿದ್ದ ಆನಂದ್‌ ಮತ್ತು ಅಶ್ವಿನಿ ರಹಸ್ಯವಾಗಿ ಹೊರಗಿನಿಂದ ಗರ್ಭಿಣಿಯರನ್ನು ಕರೆತಂದು ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದರು. ಕಳೆದ ಆರು ತಿಂಗಳಿಂದ ಈ ಇಬ್ಬರು ಇಂಥ ಹೀನ ಕೃತ್ಯದಲ್ಲಿ ತೊಡಗಿದ್ದರು. ಇವರ ನೆರವಿಗೆ ನಿಂತಿದ್ದವರು ಗಿರಿಜಮ್ಮ. ಈಕೆ ಖಾಸಗಿ ನರ್ಸಿಂಗ್‌ ಹೋಮ್‌ವೊಂದರಲ್ಲಿ ಡಿ ಗುಂಪಿನ ನೌಕರರಾಗಿದ್ದು, ಅವರು ಗರ್ಭಿಣಿಯರನ್ನು ಕರೆತರುತ್ತಿದ್ದರು, ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಮಯ ಪ್ರಜ್ಞೆ ಮೆರೆದ ಸ್ಥಳೀಯರು

ಈ ಪ್ರಕರಣ ಬಯಲಿಗೆ ಬೆಳಕಿಗೆ ಬರಲು ಸ್ಥಳೀಯರ ನೆರವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಭಾನುವಾರ ತಡರಾತ್ರಿ ಮೈಸೂರು ಮೂಲದ ಗರ್ಭಿಣಿಯೊಬ್ಬರು ಪಾಂಡವಪುರದ ಆರೋಗ್ಯ ಇಲಾಖೆ ವಸತಿ ಗೃಹಕ್ಕೆ ತೆರಳುತ್ತಿರುವುದನ್ನು ಸ್ಥಳೀಯರು ಗಮನಿಸಿ ಜಿಲ್ಲಾ ಆರೋಗ್ಯಾಧಿಕಾರಿ ಕೆ. ಮೋಹನ್‌ ಅವರಿಗೆ ತಿಳಿಸಿದರು. ಕೂಡಲೇ ದಾಳಿ ನಡೆಸುವಂತೆ ಮೋಹನ್‌ ಅವರು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅರವಿಂದ್‌ ಅವರಿಗೆ ತಿಳಿಸಿದರು. ಅರವಿಂದ್‌ ಅವರು ಸ್ಥಳೀಯ ಪೊಲೀಸ್‌ ಅಧಿಕಾರಿಗಳೊಂದಿಗೆ ತೆರಳಿದಾಗ ಅಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಕ್ರಿಯೆ ನಡೆಯುತ್ತಿತ್ತು ಎಂದು ಜಿಲ್ಲಾ ಪೊಲೀಸ್‌ ಮೂಲಗಳು ದ ಫೆಡರಲ್-ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ಭ್ರೂಣಹತ್ಯೆ ಉಪಕರಣಗಳು ಪತ್ತೆ

ಪೊಲೀಸ್‌ ಅಧಿಕಾರಿಗಳ ಪ್ರಕಾರ ವಸತಿ ಗೃಹದ ಪರಿಶೀಲನೆಯ ಸಂದರ್ಭದಲ್ಲಿ ಗರ್ಭಪಾತದ ಮಾತ್ರೆಗಳು, ಸಿರಿಂಜ್‌, ಡ್ರಿಪ್‌ ಸೇರಿದಂತೆ, ಭ್ರೂಣ ಸುಲಭವಾಗಿ ಹೊರತೆಗೆಯಲು ಅಗತ್ಯವಾದ ಎಲ್ಲ ಉಪಕರಣಗಳೂ ಪತ್ತೆಯಾಗಿವೆ.

ದ ಫೆಡರಲ್-ಕರ್ನಾಟಕದೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲೆ ಪೊಲೀಸ್‌ ಸಿಬ್ಬಂದಿಯ ಮಾಹಿತಿಯ ಪ್ರಕಾರ ಗರ್ಭಪಾತ ಮಾಡಿಸಿಕೊಳ್ಳಲು ಬಂದಿದ್ದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ನಿರಾಸೆಯಾಗಿದೆ. ಕಾನೂನು ವಿರುದ್ಧವಾಗಿ ಸ್ಥಳೀಯ ನರ್ಸಿಂಗ್‌ ಹೋಮ್‌ ವೊಂದರಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಂಡಾಗ ಗರ್ಭದಲ್ಲಿರುವುದು ಹೆಣ್ಣೆಂದು ಪತ್ತೆಯಾಗಿದೆ. ಹಾಗಾಗಿ ಆಕೆ ಗರ್ಭಪಾತಕ್ಕೆ ಬಂದಿದ್ದರು. ಅರೆಬರೆ ಗರ್ಭಪಾತ ಪ್ರಕ್ರಿಯೆಯಿಂದ ನರಳುತ್ತಿದ್ದ ಆಕೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಸುಲಭವಾಗಿ ಗರ್ಭಪಾತ ಪ್ರಕ್ರಿಯೆ ಮುಗಿಯುವಂತೆ ಮಾಡಲಾಯಿತು.

ಘಟನೆ ಬಗ್ಗೆ ವಿವರ ದೊರೆಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪಾಂಡವಪುರದ ಆರೋಗ್ಯ ಇಲಾಖೆಯ ವಸತಿ ಗೃಹಕ್ಕೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಂಡರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕುರಿತು ಮಂಡ್ಯ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು: “ಮೇಲುಕೋಟೆಯ ಜಕ್ಕನಹಳ್ಳಿಯ ಮನೆಯೊಂದರಲ್ಲಿ ಭ್ರೂಣದ ʼಲಿಂಗʼ ಪತ್ತೆ ಮಾಡಿ, ನಂತರ ಪಾಂಡವಪುರದಲ್ಲಿ ಗರ್ಭಪಾತ ಮಾಡಿಸಲು ಮಹಿಳೆಯನ್ನು ಕರೆತರಲಾಗಿತ್ತು. ಈ ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಜಾಲ ವಿಶಾಲವಾಗಿ ಹರಡಿಕೊಂಡಿರುವಂತೆ ಕಾಣುತ್ತಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ”.

ಈ ಪ್ರಕರಣ ಹೊರಬಂದಿರುವುದರಿಂದ ಸರ್ಕಾರ ಮತ್ತೆ ಬೆಚ್ಚಿಬಿದ್ದಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಎನ್‌ ಚಲುವರಾಯಸ್ವಾಮಿ ಅವರು; “ಸರ್ಕಾರದ ಸರ್ವ ಪ್ರಯತ್ನದ ನಡುವೆಯೂ ಭ್ರೂಣ ಹತ್ಯೆ ನಡೆಯುತ್ತಿದೆ. ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದರು.

ಹೆಣ್ಣು ಭ್ರೂಣ ಹಂತಕರಿಗೆ ಶಿಕ್ಷೆಯಾಗಬೇಕು. ಸ್ತ್ರೀ ಭಾಗ್ಯದ ಸರ್ಕಾರ ಸ್ತ್ರೀ ಕುಲದ ಉಳಿವಿಗಾಗಿ ಪ್ರಯತ್ನಿಸಬೇಕು. ಈ ಸಾಮಾಜಿಕ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಬೇಕೆನ್ನುವುದು ಹಕ್ಕೊತ್ತಾಯವಾಗಬೇಕು ಎಂದು ಪಾಂಡವಪುರದ ನಿವಾಸಿ, ಕೆ. ಮಾದೇಗೌಡ ಅವರು ಒತ್ತಾಯಿಸಿದ್ದಾರೆ.

Read More
Next Story