
ಸಾಂದರ್ಭಿಕ ಚಿತ್ರ
Work Hour Extension Part 5 | ಕೆಲಸದ ಅವಧಿ ವಿಸ್ತರಣೆ; ಸರ್ಕಾರಿ ನೌಕರರಿಗೆ ಏಕೆ ವಿನಾಯಿತಿ ?
ಕೆಲಸದ ಅವಧಿ ಹೆಚ್ಚಳದ ಪ್ರಸ್ತಾಪವು ಸರ್ಕಾರಿ ನೌಕರರಿಗೆ ಅನ್ವಯ ಆಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಉದ್ಯಮಿಗಳ ಒತ್ತಾಯಕ್ಕೆ ಸರ್ಕಾರ ಮಣಿಸಿದೆ ಎಂಬ ಟೀಕೆಗೂ ಸರ್ಕಾರ ಗುರಿಯಾಗಿದೆ.
ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 10 ಗಂಟೆಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವು ಖಾಸಗಿ ವಲಯಕ್ಕೆ ಸೀಮಿತವಾಗಿದ್ದು, ಸರ್ಕಾರಿ ನೌಕರರಿಗೆ ಏಕೆ ಅನ್ವಯಿಸಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅತಿ ಹೆಚ್ಚು ಕಾರ್ಮಿಕರು ದುಡಿಯುವ ಹೋಟೆಲ್, ಐಟಿ-ಬಿಟಿ, ಗಾರ್ಮೆಂಟ್ಸ್ ಗಳಲ್ಲಿ ಸಮಸ್ಯೆಗಳು, ಉದ್ದೇಶಿತ ತಿದ್ದುಪಡಿ ಮಸೂದೆಯ ಅನಾನುಕೂಲತೆಗಳ ಕುರಿತ ಚಿತ್ರಣವನ್ನು ʼದ ಫೆಡರಲ್ ಕರ್ನಾಟಕʼ ಸರಣಿ ಲೇಖನಗಳ ಮೂಲಕ ಪ್ರಕಟಿಸಿದೆ.
ಈ ಸರಣಿಯಲ್ಲಿ ಖಾಸಗಿ ವಲಯದ ಕಾರ್ಮಿಕರಿಂದ ಕೇಳಿ ಬಂದ ಪ್ರಮುಖ ಆಕ್ಷೇಪಣೆ ಎಂದರೆ ಕೆಲಸದ ಅವಧಿಯಲ್ಲಿ ಆಗುತ್ತಿರುವ ಸರ್ಕಾರಿ-ಖಾಸಗಿ ಎಂಬ ತಾರತಮ್ಯ. ರಾಜ್ಯ ಸರ್ಕಾರವು ಉದ್ಯಮಿಗಳ ಲಾಬಿಗೆ ಮಣಿದು ಖಾಸಗಿ ವಲಯದ ಕಾರ್ಮಿಕರಿಗಷ್ಟೇ ಕೆಲಸದ ಅವಧಿ ವಿಸ್ತರಿಸಿದೆ. ಸರ್ಕಾರಿ ನೌಕರರಿಗೆ ಎಂಟು ಗಂಟೆಗಳ ಯಥಾಸ್ಥಿತಿಯ ಕೆಲಸದ ಅವಧಿ ಉಳಿಸಿಕೊಂಡಿದೆ. ಇದು ಸರ್ಕಾರದ ಇಬ್ಬಗೆಯ ನೀತಿ ಎಂಬುದು ಕಾರ್ಮಿಕರ ಆರೋಪವಾಗಿದೆ.
ಚರ್ಚೆಗೆ ಕಾರಣವಾದ ತಾರತಮ್ಯ
ಕೆಲಸದ ಅವಧಿ ಹೆಚ್ಚಳದ ಪ್ರಸ್ತಾಪವು ಸರ್ಕಾರಿ ನೌಕರರಿಗೆ ಅನ್ವಯ ಆಗದಿರುವುದು ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಉತ್ಪಾದನೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯ ಕಾರಣ ನೀಡಿ ಕೆಲಸದ ಅವಧಿ ಹೆಚ್ಚಿಸುವ ಉದ್ಯಮಿಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರದ ಧೋರಣೆ ಟೀಕೆಗೂ ಗುರಿಯಾಗಿದೆ. ಖಾಸಗಿ ಕಂಪನಿಗಳು ಲಾಭ ಗಳಿಕೆಯ ಉದ್ದೇಶದಿಂದ ಪ್ರಸ್ತಾಪಿಸಿದ ಕ್ರಮಗಳಿಗೆ ಸರ್ಕಾರ ಕಾನೂನು ಸಮ್ಮತಿ ನೀಡಲು ಹೊರಟಿರುವುದು ಕಾರ್ಮಿಕರ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿವೆ.
ಕಾರ್ಮಿಕರ ಒತ್ತಡದ ಕೆಲಸ, ಜೀವನ ಶೈಲಿ, ಮಾನಸಿಕ ಆರೋಗ್ಯ ಮತ್ತು ಉದ್ಯೋಗ ಭದ್ರತೆ ವಿಚಾರಗಳು ಕಳವಳಕಾರಿಯಾಗಿವೆ. ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಒಕ್ಕೂಟ (KITU) ಸರ್ಕಾರದ ಪ್ರಸ್ತಾವವನ್ನು "ಆಧುನಿಕ ಗುಲಾಮಗಿರಿ" ಎಂದು ಕರೆಯುವ ಮೂಲಕ ತನ್ನ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರಿ-ಖಾಸಗಿ ವಲಯ ಹೋಲಿಕೆ ಸರಿಯಲ್ಲ
ಕೆಲಸದ ಅವಧಿ ಹೆಚ್ಚಳದ ಪ್ರಸ್ತಾಪದಲ್ಲಿ ತಾರತಮ್ಯ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹೋಲಿಕೆಯೇ ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರಿ ನೌಕರರು ಸಾರ್ವಜನಿಕ ಕೆಲಸಗಾರರು. ಅವರಿಗೆ ತಮ್ಮದೇ ಆದ ನೀತಿ ನಿಯಮಗಳಿವೆ. ಖಾಸಗಿ ಕಂಪನಿಗಳಂತೆ 12 ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಉತ್ಪಾದನೆ ಹೆಚ್ಚಿಸಲು ಆಗುವುದಿಲ್ಲ. ಬದಲಾಗಿ, 24 ಗಂಟೆ ಲಭ್ಯವಿರಬೇಕು. ಯಾವುದೇ ತುರ್ತು ಕೆಲಸ ಬಂದಾಗ ತಕ್ಷಣ ಹಾಜರಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರಿ ನೌಕರರು ಕೂಡ ಹೆಚ್ಚುವರಿ ಕೆಲಸ ಮಾಡುತ್ತಾರೆ ಎಂದು ಹೈಕೋರ್ಟ್ ವಕೀಲ ಎಸ್.ಉಮಾಪತಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಖಾಸಗಿ ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರು ಹೆಚ್ಚುವರಿ ಕೆಲಸ ಮಾಡಿದರೂ ಉದ್ಯೋಗ ಭದ್ರತೆ ಇರುವುದಿಲ್ಲ. ಕಾರ್ಮಿಕರು ಕೆಲಸಕ್ಕೆ ಸೇರುವಾಗಲೇ ಕೆಲ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಕಂಪನಿಯು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರಿಂದ ಕಾರ್ಮಿಕರನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದುಹಾಕುವ ಅಧಿಕಾರ ಹೊಂದಿರುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಹಾಗಾಗಿ, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಕಾರ್ಮಿಕರ ಮಧ್ಯೆ ಕೆಲಸದ ಅವಧಿಯನ್ನು ಹೋಲಿಕೆ ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
ಎಂಟು ಗಂಟೆ ವೈಜ್ಞಾನಿಕ ಅವಧಿ
ಮನುಷ್ಯನ ಮನಸ್ಥಿತಿ, ಕಾರ್ಯ ದಕ್ಷತೆ ಇತ್ಯಾದಿ ವಿಚಾರಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ ಎಂಟು ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯನ್ನೇ ಸಮರ್ಪಕವಾಗಿ ಬಳಸಿಕೊಂಡರೆ ಪರಿಣಾಮಕಾರಿ ಕೆಲಸ ಮಾಡಬಹುದು. ಆದರೆ, ಕೆಲಸದ ಅವಧಿಯನ್ನು 10 -12 ಗಂಟೆಗಳಿಗೆ ಏರಿಕೆ ಮಾಡುವುದು ಅತ್ಯಂತ ಅವೈಜ್ಞಾನಿಕ. ಸಮಯ ವಿಸ್ತರಿಸಿದ ಮಾತ್ರಕ್ಕೆ ಉತ್ಪಾದನೆ ಹೆಚ್ಚಬಹುದು ಎಂಬುದು ಹಲವರ ತಪ್ಪುಕಲ್ಪನೆ. ಕಾರ್ಮಿಕರ ಕಾರ್ಯದಕ್ಷತೆಯೂ ಇಲ್ಲ ಮುಖ್ಯವಾಗಲಿದೆ. ಖಾಸಗಿಯವರ ಲಾಭಕ್ಕಾಗಿ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಕಾಯ್ದೆಗೆ ದುಡಿಯುವ ವರ್ಗವಾಗಿ ನಮ್ಮ ವಿರೋಧವಿದೆ ಎಂದು ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ತೇಜಾ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸರ್ಕಾರಿ ನೌಕರರಿಗೆ ಇಲ್ಲದ ಕೆಲಸದ ಅವಧಿ ಹೆಚ್ಚಳ ನಮಗೇಕೆ ಎಂಬ ಖಾಸಗಿ ವಲಯದವರ ಆಕ್ಷೇಪಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮಗೆ ಸಿಗದಿರುವ ಸೌಲಭ್ಯ ಬೇರೆಯವರಿಗೂ ಬೇಡ ಎನ್ನುವ ಮನಸ್ಥಿತಿ ಯಾರಿಗೂ ಬರಬಾರದು. ನಾವೆಲ್ಲರೂ ಇಲ್ಲಿ ದುಡಿಯುವ ವರ್ಗ. ಸರ್ಕಾರಿ ನೌಕರ, ಖಾಸಗಿ ನೌಕರ ಎಂಬ ಬೇಧ ಇಲ್ಲ. ವೈಜ್ಞಾನಿಕವಾಗಿ ರೂಪಿಸಿದ ಕೆಲಸದ ಅವಧಿಯೇ ಎಲ್ಲರಿಗೂ ಅನ್ವಯಿಸಬೇಕು. ಕೆಲಸದ ಅವಧಿ ಹೆಚ್ಚಳದ ಕಾಯ್ದೆಗೆ ನಮ್ಮ ವಿರೋಧವಿದೆ. ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ನಮ್ಮ ಸಹಮತವೂ ಇದೆ ಎಂದು ಶಾಂತಾರಾಮ್ ತಿಳಿಸಿದರು.
ಲಾಭದ ಉದ್ದೇಶದಿಂದ ಅವಧಿ ಹೆಚ್ಚಳ
ಕೆಲಸದ ಅವಧಿ ಹೆಚ್ಚಳದಿಂದ ಲಾಭದ ಉದ್ದೇಶವಿದೆ. ಸಾಮರ್ಥ್ಯವಿದ್ದವರು ಹೆಚ್ಚು ಕೆಲಸ ಮಾಡಲಿ ಎಂದು ಹೇಳುವುದರಲ್ಲಿ ಒಂದು ಅರ್ಥವಿದೆ. ಆದರೆ, ಎಲ್ಲರೂ 10ಗಂಟೆ ಕೆಲಸ ಮಾಡಲೇಬೇಕು ಎಂದು ಬಲವಂತವಾಗಿ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರಿ ನೌಕರರು ಟೇಬಲ್ ವರ್ಕ್, ಸ್ಮಾರ್ಟ್ ಮಾಡಬಹುದು, ಖಾಸಗಿ ಕಾರ್ಮಿಕರು ಪರಿಶ್ರಮ ವಹಿಸಿ ಕೆಲಸ ಮಾಡಬಹುದು. ಆದರೆ, ಇಲ್ಲಿ ಇಬ್ಬರ ಶ್ರಮವೂ ಒಂದೇ ಎಂದು ಅಭಿಪ್ರಾಯಪಟ್ಟರು.
ಟೂಲ್ಸ್, ಔಷಧ ತಯಾರಿಕೆ ಹಾಗೂ ಐಟಿ ಸೇರಿ ಹಲವು ವೃತ್ತಿಪರ ಉದ್ಯಮಗಳಲ್ಲಿ ತೊಡಗಿಸಿಕೊಂಡವರು ನಿರಂತರ 10 ಗಂಟೆ ಕೆಲಸ ಮಾಡಬೇಕು ಎಂಬುದು ಅಮಾನವೀಯ. ಇಂತಹ ಅಮಾನವೀಯ ಹಾಗೂ ಅವೈಜ್ಞಾನಿಕ ನಿರ್ಧಾರಗಳನ್ನು ಎಲ್ಲರೂ ಪ್ರಶ್ನಿಸಬೇಕು ಎಂದು ಹೇಳಿದರು.
ಉದ್ಯಮಿಗಳು ಕಾರ್ಮಿಕರಿಗೆ ಷೇರು ನೀಡಲಿ
ಐಟಿ ಉದ್ಯಮಿಗಳಾದ ಇನ್ಪೋಸಿಸ್ ನಾರಾಯಣ ಮೂರ್ತಿ ಹಾಗೂ ಎಲ್ ಅಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರು ವಾರಕ್ಕೆ 70 ರಿಂದ 90 ಗಂಟೆಗಳ ಕೆಲಸ ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಅವರ ಚಿತ್ತ ಬರೀ ಲಾಭದತ್ತಲೇ ಇರುತ್ತದೆ. ದಿನಕ್ಕೆ 10 ಗಂಟೆ ಕೆಲಸ ಮಾಡಬೇಕು ಎಂದು ಹೇಳುವವರು ಅವರ ಕಂಪೆನಿಗಳಲ್ಲಿ ಕಾರ್ಮಿಕರಿಗೆ ಷೇರು ನೀಡಲಿ, ಆದಾಯದಲ್ಲಿ ಪಾಲು ನೀಡಲಿ, ಆಗ ಬೇಕಾದರೆ ಕಾರ್ಮಿಕರು 12 ಗಂಟೆ ದುಡಿಯಲು ಸಿದ್ಧರಿರುತ್ತಾರೆ ಎಂದು ಶಾಂತಾರಾಮ್ ತೇಜಾ ಹೇಳಿದರು.
ಕೆಲಸದ ಅವಧಿ ಹೆಚ್ಚಿಸುವ ಸರ್ಕಾರದ ತೀರ್ಮಾನ ಒಪ್ಪಲಾಗದು. ಇಂದು ಖಾಸಗಿ ಅವರಿಗೆ ಆಗಿರುವುದು ನಾಳೆ ನಮಗೂ ಆಗಬಹುದು. ಅವೈಜ್ಞಾನಿಕವಾದ ಈ ಪ್ರಸ್ತಾಪವನ್ನು ಪ್ರತಿಯೊಬ್ಬರು ವಿರೋಧಿಸಬೇಕು. ಯಾವುದೇ ಕಾರಣಕ್ಕೂ ತಿದ್ದುಪಡಿ ಕಾಯ್ದೆ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.
ಒಟ್ಟಾರೆ, ಖಾಸಗಿ ವಲಯದಲ್ಲಿ ಕೆಲಸದ ಅವಧಿ ಹೆಚ್ಚಳ ಕುರಿತಂತೆ ರಾಜ್ಯ ಸರ್ಕಾರದ ಪ್ರಸ್ತಾಪದಿಂದ ನೌಕರರ ಹಕ್ಕುಗಳು ಹಾಗೂ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತವಾಗಿದೆ. ಸರ್ಕಾರದ ನೀತಿ ನಿರೂಪಣೆಯಲ್ಲಿನ ದ್ವಂದ್ವ ಮತ್ತು ವಿವಿಧ ವಲಯಗಳ ಪ್ರಭಾವವನ್ನೂ ಪ್ರತಿಬಿಂಬಿಸುತ್ತಿದೆ.