The Federal Investigation Part- 4| ಧರೆಗುರುಳಿದ ಏರ್ ಇಂಡಿಯಾ ಡ್ರೀಮ್-ಲೈನರ್ ಹುಳುಕುಗಳು...
x

The Federal Investigation Part- 4| ಧರೆಗುರುಳಿದ ಏರ್ ಇಂಡಿಯಾ ಡ್ರೀಮ್-ಲೈನರ್ ಹುಳುಕುಗಳು...

ಅಹಮದಾಬಾದ್ ಭೀಕರ ದುರಂತ ಸಂಭವಿಸಿದ ಬಳಿಕ ಏರ್ ಇಂಡಿಯಾ ಬೋಯಿಂಗ್ 787ಗೆ ಸೇರಿದ ಅನೇಕ ವಿಮಾನಗಳು ಧರೆಗಳಿದು ನಿಷ್ಕ್ರಿಯವಾಗಿ ಕುಂತಿವೆ. ವಿಮಾನದ ವ್ಯವಸ್ಥೆಯೊಳಗೆ ಅನೇಕ ದೋಷಗಳಿವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ. ಫೆಡರಲ್ ನಡೆಸಿದ ತನಿಖೆಯ ಮೂರನೇ ಭಾಗ ಇಲ್ಲಿದೆ...


Click the Play button to hear this message in audio format

‘ದ ಫೆಡರಲ್’ನ ತನಿಖಾ ವರದಿಗಳ ಭಾಗ 1, 2 ಮತ್ತು ಭಾಗ 3 ರಲ್ಲಿ, ಏರ್ ಇಂಡಿಯಾದ AI 171 ವಿಮಾನದ ಕೋರ್ ನೆಟ್‌ವರ್ಕ್-ನಲ್ಲಿ ಉಂಟಾಗಿರುವ ಕುಸಿತವು ಹೇಗೆ ಹಲವು ಘಟಕಗಳ ವೈಫಲ್ಯಕ್ಕೆ ಕಾರಣವಾಯಿತು, ಮತ್ತು ಅದರಿಂದಲೇ 2025ರ ಜೂನ್ 12ರಂದು ಸಂಭವಿಸಿದ ಮಾರಣಾಂತಿಕ ಅಹಮದಾಬಾದ್ ವಿಮಾನ ಅಪಘಾತಕ್ಕೆ ದಾರಿ ಮಾಡಿಕೊಟ್ಟಿರಬಹುದು ಎಂಬುದನ್ನು ನಾವು ಗಮನಿಸಿದ್ದೇವೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಪ್ರಯಾಣಿಕರು ಮತ್ತು ಅಪಘಾತ ಸಂಭವಿಸಿದ ಪ್ರದೇಶದಲ್ಲಿದ್ದ 19 ಜನರು ಮೃತಪಟ್ಟಿದ್ದರು.

3ನೇ ಭಾಗದಲ್ಲಿ, ಏರ್ ಇಂಡಿಯಾ ತನ್ನ ಬೋಯಿಂಗ್ ಡ್ರೀಮ್‌ಲೈನರ್ಗಳ ಇಡೀ ವಿಮಾನದಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆಯನ್ನು ಕೂಡ ನಾವು ಗಮನಿಸಿದ್ದೇವೆ. ಅಹಮದಾಬಾದ್ ಅಪಘಾತ ಸಂಭವಿಸಿದ ನಂತರ, ಜಾಗತಿಕವಾಗಿ 787-8 ವಿಮಾನಗಳಲ್ಲಿ ಆರು ಘಟನೆಗಳು ನಡೆದಿರುವುದು ವರದಿಯಾಗಿವೆ. ಆದರೆ, ‘ದಿ ಫೆಡರಲ್’ ಸಂಸ್ಥೆಯ ಬಳಿ ಇರುವ ವಿಶೇಷ ಪುರಾವೆಗಳ ಪ್ರಕಾರ, ವಿಮಾನ ಸಂಸ್ಥೆಯು ಈಗಾಗಲೇ ಮೂರು ಡ್ರೀಮ್‌ಲೈನರ್ಗಳ ಕಾರ್ಯವನ್ನು ಸ್ಥಗಿತಗೊಳಿಸಿದೆ.

AI 171 ವಿಮಾನವು ಟೇಕಾಫ್‌ಗೆ ಹದಿನೈದು ನಿಮಿಷಗಳಿಗೂ ಮೊದಲು, ಭಾರತೀಯ ಕಾಲಮಾನ ಮಧ್ಯಾಹ್ನ 1:23 ಕ್ಕೆ, ತನ್ನ ಪವರ್‌ಲೈನ್‌ಗಳಲ್ಲಿ ಉಂಟಾಗಿದ್ದ ದೋಷಗಳ ಬಗ್ಗೆ ವರದಿ ಮಾಡಿತ್ತು ಎಂಬ ಬ್ರೇಕಿಂಗ್ ನ್ಯೂಸ್ ಕೂಡ ಫೆಡರಲ್ ಬಳಿ ಇದೆ. ಇದು RAT (Ram Air Turbine) ತಕ್ಷಣ ನಿಯೋಜನೆಗೊಳ್ಳಲು ಕಾರಣವಾಗಿರಬಹುದು. ಎಂಜಿನ್‌ಗಳು ಸ್ಥಗಿತಗೊಳ್ಳುವುದಕ್ಕೂ ಮೊದಲೇ RAT ನಿಯೋಜನೆಗೊಂಡರೆ, ಅದು ವಿಮಾನದಲ್ಲಿ ಈಗಾಗಲೇ ಇರುವ ವಿದ್ಯುತ್ ದೋಷಗಳ ಸೂಚಕವಾಗಿದೆ ಮತ್ತು ಇದರಲ್ಲಿ ಪೈಲಟ್ಗಳ ದೋಷವೇನೂ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ವಿಸ್ತೃತ ತಪಾಸಣೆಗಳು

ಜೂನ್ 12ರಂದು ಸಂಭವಿಸಿದ ದುರಂತದಲ್ಲಿ 241 ವಿಮಾನ ಪ್ರಯಾಣಿಕರು ಮತ್ತು ಘಟನಾ ಸ್ಥಳದಲ್ಲಿದ್ದ 19 ಜನರ ಸಹಿತ ಒಟ್ಟು 260 ಜನ ಮೃತಪಟ್ಟ ನಂತರದ ವಾರಗಳಲ್ಲಿ, ಏರ್ ಇಂಡಿಯಾ ಮೂರು ಬೋಯಿಂಗ್ 787-8 ಡ್ರೀಮ್‌ಲೈನರ್‌ಗಳನ್ನು (ಎರಡು ವಿದೇಶದಲ್ಲಿ ಮತ್ತು ಒಂದು ಭಾರತದಲ್ಲಿ) ವಿಸ್ತೃತ ತಪಾಸಣೆಯ ಉದ್ದೇಶದಿಂದ ರಹಸ್ಯವಾಗಿ ‘ಹಾರಾಟ ಸ್ಥಗಿತಗೊಳಿಸಿತು.’

ವಿಶೇಷ ಬೃಹತ್ ನಿರ್ವಹಣಾ ಕೇಂದ್ರಗಳಲ್ಲಿ ಈ ಮೂರು ದೂರ ಪ್ರಯಾಣದ ಜೆಟ್ಗಳನ್ನು ಸದ್ದಿಲ್ಲದೆ ‘ಧರೆಗಿಳಿಸಿದ ಪ್ರಕ್ರಿಯೆ’ಯು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಅಕ್ಟೋಬರ್ 29ರಂದು ದೆಹಲಿಯಲ್ಲಿ ನಡೆದ 'ಏವಿಯೇಷನ್ ಇಂಡಿಯಾ 2025' ಕಾರ್ಯಕ್ರಮದಲ್ಲಿ ಮಾಡಿದ ಹೇಳಿಕೆಗಳಿಗಿಂತ ಮುಂಚೆಯೇ ಆಗಿತ್ತು. ವಿಮಾನ ಅಪಘಾತ ತನಿಖಾ ದಳದ (AAIB) ಮಧ್ಯಂತರ ವರದಿಯನ್ನು ಉಲ್ಲೇಖಿಸಿದ ಅವರು, “ವಿಮಾನದ ಕಾರ್ಯಾಚರಣೆ ಅಥವಾ ಕಾರ್ಯವಿಧಾನಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲೇಬೇಕಾದ ದೋಷ ಇರಲಿಲ್ಲ" ಎಂದು ಹೇಳಿದ್ದರು.

ಆದರೆ, ಈ ಧರೆಗಿಳಿಸುವ ಪ್ರಕ್ರಿಯೆಯು ಸುಖಾಸಮ್ಮನೇ ಶೂನ್ಯದಲ್ಲಿ ಸಂಭವಿಸಿದ್ದಲ್ಲ. ಅಕ್ಟೋಬರ್ 9ರಂದು, ವಿಯೆನ್ನಾ-ದೆಹಲಿ ಮಾರ್ಗದ ಏರ್ ಇಂಡಿಯಾದ AI 154 ವಿಮಾನವು ಆಕಾಶ ಮಾರ್ಗದಲ್ಲಿ ಹಲವಾರು ಆಟೋ-ಫ್ಲೈಟ್ ಮತ್ತು ಆಟೋಪೈಲಟ್ ವೈಫಲ್ಯಗಳನ್ನು ಅನುಭವಿಸಿದ್ದರಿಂದ ದುಬೈಗೆ ಪ್ರಯಾಣ ಬೆಳೆಸಿತು.

ಆರು ತಿಂಗಳಲ್ಲಿ ಆರು ಘಟನೆಗಳು

ಅಕ್ಟೋಬರ್‌ನಲ್ಲಿ ದುಬೈನಲ್ಲಿ ಭೂಸ್ಪರ್ಶ ಮಾಡಿದ ಘಟನೆ ಮತ್ತು ಮಾರಣಾಂತಿಕ AI 171 ಘಟನೆಯೂ ಸೇರಿದಂತೆ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್‌ಗಳನ್ನು ಒಳಗೊಂಡ ಹಾರಾಟದ ಸಮಯದಲ್ಲಿ ಸಂಭವಿಸಿದ ಗಂಭೀರ ತಾಂತ್ರಿಕ ಘಟನೆಗಳ ಸಂಖ್ಯೆ ಈಗ ನಾಲ್ಕಕ್ಕೆ ಏರಿದೆ.

ಮೊದಲ ಘಟನೆಯು AI 171 ದುರ್ಘಟನೆ ಸಂಭವಿಸಿದ ಕೇವಲ ಒಂದು ವಾರದ ಬಳಿಕ ಸಂಭವಿಸಿತು. ಆಗ ಹಾಂಗ್ ಕಾಂಗ್‌ನಿಂದ ದೆಹಲಿಗೆ ಹೊರಟಿದ್ದ AI 310 ವಿಮಾನವು ತಾಂತ್ರಿಕ ದೋಷದಿಂದಾಗಿ ತನ್ನ ಮೂಲ ವಿಮಾನ ನಿಲ್ದಾಣಕ್ಕೆ ವಾಪಾಸಾಯಿತು. ನಂತರ, ಅಕ್ಟೋಬರ್ 4ರಂದು, ಅಮೃತಸರ-ಬರ್ಮಿಂಗ್‌ಹ್ಯಾಮ್ ಮಾರ್ಗದಲ್ಲಿ ಹಾರಾಟ ಕೈಗೊಂಡಿದ್ದ AI 117 ವಿಮಾನವು ಇಳಿಯುವ ಸಮಯದಲ್ಲಿ ಸುಮಾರು 1,600 ಅಡಿ ಎತ್ತರದಲ್ಲಿ ಅನಿಯಂತ್ರಿತವಾದ RAT ನಿಯೋಜನೆಗೆ ಒಳಗಾಯಿತು.

ಈ ಅಪಘಾತ ಸಂಭವಿಸಿದ ಬಳಿಕ ಇತರ ವಿಮಾನಯಾನ ಸಂಸ್ಥೆಗಳಿಗೂ ಕೂಡ ತಮ್ಮ ಡ್ರೀಮ್‌ಲೈನರ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಉದಾ: ಜುಲೈ 31ರಂದು, ಲಾಸ್ಏಂಜಲೀಸ್‌ನಿಂದ ಸ್ಯಾಂಟಿಯಾಗೋಗೆ ಪ್ರಯಾಣ ಕೈಗೊಂಡಿದ್ದ LATAM ಏರ್‌ಲೈನ್ಸ್ಗೆ ಸೇರಿದ ವಿಮಾನ LA 603, ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ವಿದ್ಯುತ್ ಸಮಸ್ಯೆಗಳನ್ನು ಅನುಭವಿಸಿತು ಮತ್ತು ಅನಿಯಂತ್ರಿತವಾದ RAT ನಿಯೋಜನೆಗೆ ಒಳಗಾಯಿತು. ಜುಲೈ 25 ರಂದು, ವಾಷಿಂಗ್ಟನ್ ಡಲ್ಲೆಸ್-ನಿಂದ ಮ್ಯೂನಿಚ್ ಕಡೆಗೆ ಯಾನ ಕೈಗೊಂಡಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನ UA 108, ಹಾರಾಟದ ಮಧ್ಯದಲ್ಲಿ ಎಂಜಿನ್ ಸ್ಥಗಿತಗೊಂಡಿದ್ದನ್ನು ವರದಿ ಮಾಡಿತು.

ಆತಂಕಕಾರಿ ಪ್ರವೃತ್ತಿ

ಕಳೆದ ತಿಂಗಳು ಬೋಯಿಂಗ್ ಸಂಸ್ಥೆಯೇ ಒಂದು ಹೇಳಿಕೆಯನ್ನು ನೀಡಿ ಡ್ರೀಮ್‌ಲೈನರ್ ಉತ್ಪಾದನೆ ಆರಂಭ ಆದಾಗಿನಿಂದ ಅನಿಯಂತ್ರಿತ RAT ನಿಯೋಜನೆಯ 31 ಘಟನೆಗಳು ಸಂಭವಿಸಿವೆ ಎಂದು ತಿಳಿಸಿತ್ತು. ಈಗ ಆಗುತ್ತಿರುವುದು ಆತಂಕಕಾರಿ ಪ್ರವೃತ್ತಿ: VT-ANB (AI 171)ನಲ್ಲಿ ಕಂಡುಬಂದ ವಿದ್ಯುತ್ ವೈಫಲ್ಯದ ಸಮಸ್ಯೆ ಕೇವಲ ಆ ಒಂದು ವಿಮಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇವೆಲ್ಲವೂ ಅಪಾಯದ ಗಂಟೆಗಳಾಗಿವೆ. ಇದು ಏರ್ ಇಂಡಿಯಾದೊಳಗೆ ಡ್ರೀಮ್‌ಲೈನರ್ ವಿಮಾನಕ್ಕೇ ಇರುವ ಒಂದು ದೋಷವಾಗಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಮೂರು ಸದ್ದಿಲ್ಲದೇ “ಧರೆಗಿಳಿದ” ಪ್ರಕರಣಗಳು, ಮೂರು ವಿಭಿನ್ನ ಕೂಲಂಕಷ ತಪಾಸಣೆ ಹಬ್‌ಗಳು. ಒಂದು ಅಹಿತಕರ ಮಾದರಿ ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಗಳಾಗಿವೆ. ಇತ್ತೀಚಿನ ತಿಂಗಳುಗಳಲ್ಲಿ, ವಿಶ್ವದಾದ್ಯಂತ ಇರುವ ನಾನಾ ರೀತಿಯ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ತಪಾಸಣೆ (MRO) ಸೌಲಭ್ಯಗಳು ಏರ್ ಇಂಡಿಯಾ ವಿಮಾನಗಳು ಅನುಭವಿಸುತ್ತಿರುವ ನಿಷ್ಕ್ರಿಯ ಅವಧಿಗೆ ಸಾಕ್ಷಿಯಾಗಿವೆ.

ಗಂಭೀರ ಪರಿಣಾಮಗಳು

ಏರ್ ಇಂಡಿಯಾ ಮೂರು ಬೋಯಿಂಗ್ 787 ವಿಮಾನಗಳನ್ನು ‘ಧರೆಗಿಳಿಸಿದ್ದು’ ನಿಜಕ್ಕೂ ಗಂಭೀರ ಪ್ರಕರಣಗಳಾಗಿವೆ. ಆದರೆ ಈ ವಿಮಾನಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅದು ತುಟಿಬಿಚ್ಚುತ್ತಿಲ್ಲ. ಮೊದಲ ವಿಮಾನವಾದ VT-ANA, ಮಧ್ಯಪ್ರಾಚ್ಯದ ಅತಿದೊಡ್ಡ ಸ್ವತಂತ್ರ ವೈಡ್-ಬಾಡಿ ಹೆವಿ-ನಿರ್ವಹಣಾ ಸೌಲಭ್ಯಗಳಲ್ಲಿ ಒಂದಾದ ಜೋರಾಮ್ಕೋನಲ್ಲಿ, ಆಗಸ್ಟ್ 5 ರಿಂದ 2025ರ ಅಕ್ಟೋಬರ್ 11ರವರೆಗೆ ಜೋರ್ಡಾನ್ನ ಅಮ್ಮಾನ್‌ನಲ್ಲಿ ‘ಧರೆಗಿಳಿಸಿತು.’

ಜೋರ್ಡಾನ್‌ನಲ್ಲಿ ಡ್ರೀಮ್‌ಲೈನರ್ ನಿಲುಗಡೆಯಾಗಿರುವುದು ಗಂಭೀರ ಪರಿಣಾಮಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಏರ್ ಇಂಡಿಯಾವು ದೀರ್ಘಾವಧಿಯ ರಚನಾತ್ಮಕ ತಪಾಸಣೆಗಳು, ಹೆವಿ ಚೆಕ್‌ಗಳು ಮತ್ತು ಮಾರ್ಪಾಡು ಕೆಲಸಗಳಿಗಾಗಿ ಮಾತ್ರ ವಿಮಾನಗಳನ್ನು ಅಲ್ಲಿಗೆ ಕಳುಹಿಸುತ್ತದೆ.

ಎರಡನೇ ಡ್ರೀಮ್‌ಲೈನರ್, VT-ANE, ಜುಲೈ 15ರಿಂದ ಸೆಪ್ಟೆಂಬರ್ 24 ರವರೆಗೆ ಅಬುಧಾಬಿಯಲ್ಲಿರುವ ಎತಿಹಾಡ್ ಇಂಜಿನಿಯರಿಂಗ್ನ ವೈಡ್-ಬಾಡಿ MRO ಸಂಕೀರ್ಣದಲ್ಲಿ ನಿಲುಗಡೆಯಾಗಿತ್ತು. ಈ ಸಂಕೀರ್ಣವು ಸಂಯೋಜಿತ ರಚನಾತ್ಮಕ ದುರಸ್ತಿ ಮತ್ತು ಹೆವಿ ಚೆಕ್‌ಗಳಲ್ಲಿ ಪರಿಣತಿ ಹೊಂದಿದೆ. ಮತ್ತು ಮೂರನೇ ವಿಮಾನವಾದ VT-ANG, ಜುಲೈ 25 ರಿಂದ ಮುಂಬೈ MROನಲ್ಲಿ ನಿಲುಗಡೆಯಾಗಿದ್ದು, ಪುನರಾವರ್ತಿತ ತಾಂತ್ರಿಕ ಸಮಸ್ಯೆಗಳಿಗಾಗಿ ವಿಸ್ತೃತ ದೋಷನಿವಾರಣೆ ಪ್ರಕ್ರಿಯೆಗೆ ಒಳಗಾಗಿದೆ.

"ಈ ಮೂರೂ ಡ್ರೀಮ್‌ಲೈನರ್ ವಿಮಾನಗಳನ್ನು ಸುಮಾರು 2012-13ರ ಸುಮಾರಿಗೆ ಸೇವೆಗೆ ನಿಯೋಜಿಸಲಾಗಿತ್ತು. VT-ANA ಒಂದು ಪ್ರಮುಖ ವಿಮಾನವಾಗಿತ್ತು – ಇದು ಏರ್ ಇಂಡಿಯಾ ಹಾರಾಟದಲ್ಲಿದ್ದ ಮೊದಲ ಡ್ರೀಮ್‌ಲೈನರ್ ಆಗಿದ್ದು, ನವೆಂಬರ್ 2012ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು," ಎಂದು ಹೆಸರು ಹೇಳಲಿಚ್ಛಿಸದ ವಿಮಾನ ಎಂಜಿನಿಯರ್ ಒಬ್ಬರು ‘ದಿ ಫೆಡರಲ್’ಗೆ ತಿಳಿಸಿದರು.

"VT-ANE 2013ರ ಮಧ್ಯ ಭಾಗದಲ್ಲಿ ಮತ್ತು VT-ANG 2013ರ ಕೊನೆಯಲ್ಲಿ ಸೇವೆಗೆ ಬಂದವು. ಸಾಮಾನ್ಯವಾಗಿ, 787 ವಿಮಾನದ ಮೊದಲ ಹೆವಿ ರಚನಾತ್ಮಕ ತಪಾಸಣೆಯ ಚಕ್ರವು ಆರು ಮತ್ತು 10 ವರ್ಷಗಳ ನಡುವೆ ನಡೆಯಬೇಕು. ಇದರರ್ಥ ಈ ವಿಮಾನಗಳ ತಪಾಸಣೆ 2019 ಮತ್ತು 2023ರ ನಡುವೆ ಆಗಿರಬೇಕು. ಅದರ ಬದಲಾಗಿ, ಏರ್ ಇಂಡಿಯಾವು AI 171 (ಅಪಘಾತ) ಸಂಭವಿಸಿದ ತಕ್ಷಣ, ಈಗ, 2025ರಲ್ಲಿ, ಹಲವಾರು ತಿಂಗಳುಗಳ ಹೆವಿ ಚೆಕ್‌ಗಳನ್ನು ಜೊತೆಯಲ್ಲಿ ಮಾಡಿಸುತ್ತಿದೆ," ಎಂದು ಅವರು ಸೇರಿಸಲು ಮರೆಯಲಿಲ್ಲ.

ಅಸಾಮಾನ್ಯ ತಪಾಸಣೆಗಳು

ಇದು ಸಾಮಾನ್ಯವಾದ ಹಂತ ಹಂತದ ಫ್ಲೀಟ್ ನಿರ್ವಹಣಾ ಯೋಜನೆಯಂತೆ ಕಾಣುತ್ತಿಲ್ಲ, ಬದಲಿಗೆ "ಕೇಂದ್ರೀಕೃತ ವಿಶ್ವಾಸಾರ್ಹತಾ ಹಸ್ತಕ್ಷೇಪ"ದಂತೆ ಇದೆ ಎಂದು ಅವರು ಹೇಳಿದ ಮಾತು ತೂಕಬದ್ಧವಾದದು. "ಅಲ್ಲದೆ, ವಿಮಾನಗಳು ದೀರ್ಘಾವಧಿ ನಿಷ್ಕ್ರಿಯವಾಗಿದ್ದರೆ, ಅದರಿಂದ ಉಂಟಾಗುವ ವೆಚ್ಚ ಅಪಾರವಾದುದು. ವಿಮಾನಯಾನ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಹಣವನ್ನು ಕಳೆದುಕೊಳ್ಳುತ್ತಿರುತ್ತವೆ," ಎಂದು ಅವರು ವಿವರಿಸಿದರು.

"ಈ ನಿರ್ವಹಣಾ ತಪಾಸಣೆಗಳು ನಿಯಮಿತವಾಗಿರುವ ಸಾಧ್ಯತೆಯೂ ಇದೆ, ಏಕೆಂದರೆ ಪ್ರತಿ ಆರರಿಂದ ಹತ್ತು ವರ್ಷಗಳಿಗೊಮ್ಮೆ ನಿಗದಿತ ತಪಾಸಣೆ ಇದ್ದರೂ, ವಿಮಾನಯಾನ ಸಂಸ್ಥೆಗಳು ಅದನ್ನು ನಂತರ ಮಾಡುವ ಉದ್ದೇಶದಿಂದ ವಿನಾಯ್ತಿಯನ್ನು ಪಡೆಯಬಹುದು. ನಿಖರವಾಗಿ ಯಾವ ದೋಷಗಳಿಗಾಗಿ ವಿಮಾನಗಳನ್ನು ನಿಲುಗಡೆ ಮಾಡಲಾಗಿದೆ ಎಂದು ನಮಗೆ ತಿಳಿದರೆ ಮಾತ್ರ ಏನಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ಸಾಧ್ಯ," ಎಂದು ಇಂಡಿಯನ್ ಪೈಲಟ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಸ್ಯಾಮ್ ಥಾಮಸ್ ಹೇಳಿದರು.

ಆದರೆ ನಿರ್ವಹಣಾ ಇಂಜಿನಿಯರ್‌ಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. 787-8 ಸರಣಿಯ ಈ ಸಬ್‌ಫ್ಲೀಟ್‌ನಲ್ಲಿ ಏರ್ ಇಂಡಿಯಾವು VT-ANA ನಿಂದ VT-ANZ ನೋಂದಣಿಗಳೊಂದಿಗೆ ಒಟ್ಟು 26 ವಿಮಾನಗಳನ್ನು ಹೊಂದಿದೆ. ದೀರ್ಘ-ಪ್ರಯಾಣದ ಸಬ್‌ಫ್ಲೀಟ್‌ಗೆ, ಮೂರು ಡ್ರೀಮ್‌ಲೈನರ್‌ಗಳನ್ನು ಹೆವಿ MRO ನೆಲೆಗಳಲ್ಲಿ ಕಟ್ಟಿಹಾಕಿರುವುದು ಮತ್ತು ಇನ್ನೂ ಎರಡನ್ನು ಕಾರ್ಯಾಚರಣೆಯಿಂದ ಹೊರಗಿಡುವುದು ಸ್ವಲ್ಪ ಅಸಾಮಾನ್ಯ ಸಂಗತಿ. ಇದು ಸಾಮಾನ್ಯವಾದ ಹಂತ ಹಂತದ ನಿರ್ವಹಣಾ ಯೋಜನೆಯಂತೆ ಕಾಣುತ್ತಿಲ್ಲ, ಆದರೆ ಹೆಚ್ಚು ಕೇಂದ್ರೀಕೃತ ವಿಶ್ವಾಸಾರ್ಹತಾ ಹಸ್ತಕ್ಷೇಪದಂತೆ ಕಾಣುತ್ತಿದೆ ಎಂದು ಅವರು ಹೇಳುತ್ತಾರೆ.

ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರಿಗೆ ಈ ನಿಲುಗಡೆಗಳ ಬಗ್ಗೆ ಮತ್ತು VT-ANB ವಿಮಾನದಲ್ಲಿ ಟೇಕ್-ಆಫ್‌ಗೆ ಮುನ್ನ ವರದಿಯಾಗಿದ್ದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಖಂಡಿತವಾಗಿಯೂ ತಿಳಿದಿರಲೇಬೇಕು.

ದ ಫೆಡರಲ್ ಜೊತೆಗೆ ಮಾತನಾಡಿದ ಪೈಲಟ್‌ಗಳು ಮತ್ತು ಎಂಜಿನಿಯರಿಂಗ್ ಸಿಬ್ಬಂದಿ, ಏರ್ ಇಂಡಿಯಾವು ಮೂರು ಬೋಯಿಂಗ್ 787 ಡ್ರೀಮ್‌ಲೈನರ್‌ಗಳನ್ನು ಗಹನವಾದ ತಪಾಸಣೆಯ ಉದ್ದೇಶದಿಂದ ರಹಸ್ಯವಾಗಿ ಕಾರ್ಯಾಚರಣೆಯಿಂದ ಹೊರಗಿಟ್ಟಿರುವುದರಿಂದ, ಪ್ಲಾಟ್‌ಫಾರ್ಮ್-ವ್ಯಾಪಿ ವ್ಯವಸ್ಥೆಗಳ ನೈಜ ದೋಷವಿರುವ ಸಾಧ್ಯತೆ ಇದೆ ಕೂಡ ಎಂದು ಹೇಳುತ್ತಾರೆ.

ನವೀಕರಣ ಯೋಜನೆ

ಇದರಲ್ಲಿ ಪುನರಾವರ್ತಿತ ವೈಫಲ್ಯದ ಮಾದರಿಯೇ ಹೆಚ್ಚು ಢಾಳಾಗಿ ಕಾಣಿಸುತ್ತಿದೆ. ಇದು ಬೋಯಿಂಗ್ ಮತ್ತು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ಭಾರತದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA)ನಂತಹ ನಿಯಂತ್ರಕ ಸಂಸ್ಥೆಗಳೆರಡರಿಂದಲೂ ಪಾರದರ್ಶಕ ನಿಲುವನ್ನು ಬಯಸುತ್ತದೆ ಎಂದು ಅವರು ಹೇಳುತ್ತಾರೆ. 2027ರ ವೇಳೆಗೆ ಏರ್ ಇಂಡಿಯಾ 26 ಬೋಯಿಂಗ್ 787-8 ವಿಮಾನಗಳನ್ನು ನವೀಕರಿಸುವ ಯೋಜನೆಯನ್ನು ಕೂಡ ಹೊಂದಿದೆ ಎಂದು ವರದಿಗಳು ಹೇಳುತ್ತವೆ.

ಆನ್‌ಲೈನ್ ಏವಿಯೇಷನ್ ಟ್ರ್ಯಾಕರ್ ಆಗಿರುವ ಫ್ಲೈಟ್‌ರಾಡಾರ್ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಇನ್ನೂ ಎರಡು ವಿಮಾನಗಳು, VT-ANT ಮತ್ತು VT-ANP ಯಾವುದೇ ಹಾರಾಟ ನಡೆಸಿಲ್ಲ. ಅವುಗಳು ಕ್ರಮವಾಗಿ ಅಕ್ಟೋಬರ್ ಒಂದು ಮತ್ತು ಅಕ್ಟೋಬರ್ 29ರಂದು ಕ್ಯಾಲಿಫೋರ್ನಿಯಾದ ವಿಕ್ಟರ್‌ವಿಲ್ಲೆಯ ಬೋಯಿಂಗ್ನ MROಗೆ ಹಾರಾಟ ನಡೆಸಿವೆ ಎಂಬ ಅನುಮಾನವಿದೆ.

ಡ್ರೀಮ್-ಲೈನರ್ ಎಂಬ ಕನಸಿನ ವಿಮಾನ ಮಾರ್ಗವನ್ನು ಹಾರಾಟಕ್ಕೆ ಅನುವುಗೊಳಿಸಿದ ಬಳಿಕ ಸುಮಾರು 31 ಬಾರಿ ಅನಿಯಂತ್ರಿತ RAT ನಿಯೋಜನೆ ಘಟನೆ ವರದಿಯಾಗಿವೆ ಎಂದು ಬೋಯಿಂಗ್ ವರದಿಯೇ ಹೇಳುತ್ತದೆ.

ಈ ಎರಡು ಕ್ರಮಗಳು ಬೋಯಿಂಗ್ನ ವಿಕ್ಟರ್‌ವಿಲ್ಲೆ ಸೌಲಭ್ಯದಲ್ಲಿ 787-8 ವಿಮಾನಗಳಿಗಾಗಿ ಏರ್ ಇಂಡಿಯಾ ಘೋಷಿಸಿದ ರೆಟ್ರೋಫಿಟ್ (ಮರುಮಾರ್ಪಾಡು) ಕಾರ್ಯಕ್ರಮಕ್ಕೆ ಅನುಗುಣವಾಗಿವೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ. ಇದು ಬೋಯಿಂಗ್ನ ವಿಕ್ಟರ್‌ವಿಲ್ಲೆ ಸೌಲಭ್ಯದಲ್ಲಿ ಎಲ್ಲಾ 26 ಬೋಯಿಂಗ್ 787-8 ಡ್ರೀಮ್‌ಲೈನರ್‌ಗಳಿಗಾಗಿ ಯೋಜಿಸಲಾದ 400 ಮಿಲಿಯನ್ ಡಾಲರ್ ಮೌಲ್ಯದ ರೆಟ್ರೋಫಿಟ್ ಆಗಿದ್ದು, 2027ರ ಮಧ್ಯ ಭಾಗದ ವೇಳೆಗೆ ನವೀಕರಣಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.

ಅನಿರೀಕ್ಷಿತ ಹೊರಚಿಮ್ಮಿದ RAT

AAIB ವರದಿಯಲ್ಲಿ ಪ್ರಕಟವಾದ ಸಿಸಿಟಿವಿ ದೃಶ್ಯಾವಳಿಗಳು AI 171 ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ RAT ನಿಯೋಜನೆಯನ್ನು ತೋರಿಸುತ್ತವೆ. RAT ಎಂಬುದು ಒಂದು ಸಣ್ಣ ತುರ್ತು ಗಾಳಿಯಂತ್ರವಾಗಿದ್ದು, ಬ್ಯಾಕಪ್ ವಿದ್ಯುತ್ ಉತ್ಪಾದಿಸಲು ಜೆಟ್ನ ಕೆಳಭಾಗದಿಂದ ಹೊರಬರುತ್ತದೆ. ಮುಖ್ಯ ಎಂಜಿನ್‌ನಿಂದ ಚಾಲಿತವಾಗುವ ವಿದ್ಯುತ್ ಶಕ್ತಿ ವಿಫಲವಾದಾಗ ಮಾತ್ರ ಇದು ಪ್ರಾಥಮಿಕವಾಗಿ ನಿಯೋಜನೆಗೆ ಒಳಗಾಗಬೇಕು.

ಆದರೆ, ಕೇವಲ 4 ತಿಂಗಳ ಅವಧಿಯಲ್ಲಿ, ಬೋಯಿಂಗ್ 787 ವಿಮಾನಗಳಲ್ಲಿ ಮೂರು ಅನಿಯಂತ್ರಿತ RAT ನಿಯೋಜನೆಗಳು ನಡೆದಿವೆ—ಒಂದು ಮಾರಣಾಂತಿಕವಾದ ಮತ್ತು ಎರಡು ಮಾರಣಾಂತಿಕವಲ್ಲದ ಘಟನೆಗಳು. ಮೊದಲನೆಯದು ಏರ್ ಇಂಡಿಯಾ AI 171 ದುರಂತ ಹಾಗೂ ಎರಡನೆಯದು LATAM LA 603 ಲಾಸ್ಏಂಜಲೀಸ್-ಸ್ಯಾಂಟಿಯಾಗೋ ಮತ್ತು ಮೂರನೆಯದು ಏರ್ ಇಂಡಿಯಾ AI 117 ಅಮೃತಸರ-ಬರ್ಮಿಂಗ್‌ಹ್ಯಾಮ್.

ಅಂದಿನಿಂದ, ವಾಯುಯಾನ ನಿಯಂತ್ರಕ ಸಂಸ್ಥೆ (DGCA) 787 ವಿಮಾನಗಳಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ "ಅನಿಯಂತ್ರಿತ" RAT ನಿಯೋಜನೆಗಳ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದೆ. ಬೋಯಿಂಗ್ ಸಂಸ್ಥೆಯು ಜಾಗತಿಕವಾಗಿ 31 ಡ್ರೀಮ್‌ಲೈನರ್‌ಗಳಲ್ಲಿ ಇದೇ ರೀತಿಯ ಮಾದರಿಯನ್ನು ಗಮನಿಸಿರುವುದಾಗಿ ಡಿಜಿಸಿಎಗೆ ತಿಳಿಸಿದೆ. ಈ ಘಟನೆಗಳು ಬಹುತೇಕ RAT ನಿರ್ವಹಣೆ ಅಥವಾ ವಿದ್ಯುತ್ ಮರುಹೊಂದಿಸುವಿಕೆ ಮಾಡಿದ ಆರು ತಿಂಗಳೊಳಗೆ ಸಂಭವಿಸಿವೆ.


2025ರ ಜೂನ್ 12ರಂದು ಸಂಭವಿಸಿದ ಮಾರಣಾಂತಿಕ ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ದ ಫೆಡರಲ್‌ ತನಿಖಾ ವರದಿಗಳನ್ನು ಮತ್ತು ವಿಶೇಷ ವರದಿಗಳನ್ನು ಪ್ರಕಟಿಸುತ್ತಿದ್ದು, ಅವುಗಳ ಮಾಹಿತಿಯನ್ನು ಕೆಳಗೆ ನೀಡಲಾಗಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಓದಬಹುದಾಗಿದೆ.

ಈ ಹಿಂದೆ ಪ್ರಕಟವಾದ ತನಿಖಾ ವರದಿಯ ಮೊದಲ ಭಾಗ: The Federal Investigation Part -1: ಬೋಯಿಂಗ್ ವಿನ್ಯಾಸದಲ್ಲೇ ದೋಷ: ಲಯನ್ ಏರ್ ಮತ್ತು ಏರ್ ಇಂಡಿಯಾ 171 ದುರಂತಗಳಲ್ಲಿ ಇದೆ ಸಾಮ್ಯತೆ

ಈ ಹಿಂದೆ ಪ್ರಕಟವಾದ ತನಿಖಾ ವರದಿಯ ಎರಡನೇ ಭಾಗ: The Federal Investigation Part-2| ಏರ್ ಇಂಡಿಯಾ 171 ದುರಂತ: ದೋಷಪೂರಿತ ಬೋಯಿಂಗ್ ಯಂತ್ರವೇ ವಿಲನ್? ಇಲ್ಲಿದೆ ಕ್ಷಣ ಕ್ಷಣದ ಚಿತ್ರಣ

ಈ ಹಿಂದೆ ಪ್ರಕಟವಾದ ತನಿಖಾ ವರದಿಯ ಮೂರನೇ ಭಾಗ: The Federal Investigation Part-3| ಏರ್ ಇಂಡಿಯಾ 171 ದುರಂತ: ಬೋಯಿಂಗ್‌ ವಿಮಾನದ ಮುಂಚಲನೆ ಪವನಯಂತ್ರ ಮರುಚಾಲನೆ ಆಗಲಿಲ್ಲ!

ಈ ಹಿಂದೆ ಪ್ರಕಟವಾದ ವಿಶೇಷ ವರದಿಗಳ ಲಿಂಕ್‌ ಇಲ್ಲಿವೆ.

Exclusive: Part -1: ಏರ್‌ ಇಂಡಿಯಾ ದುರಂತ: ಪೈಲಟ್‌ಗಳತ್ತ ಬೊಟ್ಟು ಮಾಡಿತೇ ವರದಿ? ಬ್ಲಾಕ್ ಬಾಕ್ಸ್ ಮಾಹಿತಿಯೇನು?

Exclusive: Part - 2| ಏರ್‌ ಇಂಡಿಯಾ ದುರಂತ: ಇನ್ನೂ ಉತ್ತರಿಸಲಾರದ ಯಕ್ಷ ಪ್ರಶ್ನೆಗಳು

(ಈ ತನಿಖಾ ವರದಿಯ ಮುಂದಿನ ಭಾಗ ಭಾನುವಾರ (16/11/2025) ಪ್ರಕಟವಾಗಲಿದೆ. ಇದುವರೆಗೆ ನಾಲ್ಕು ಸರಣಿಗಳಲ್ಲಿ ಈ ತನಿಖಾ ವರದಿ ಪ್ರಕಟವಾಗಿದ್ದು, ಇದು ನಾಲ್ಕನೆಯ ಭಾಗವಾಗಿದೆ.)

Read More
Next Story