
ಪ್ಯಾನಿಕ್ ಬಟನ್ ಒತ್ತಿದ ಚುನಾವಣಾ ಆಯೋಗ: ರಾಜಸ್ತಾನದಲ್ಲೀಗ ನಡುಕ ಸೃಷ್ಟಿಸಿದ SIR !
ರಾಜಸ್ತಾನದಲ್ಲಿ ಮತದಾರರ ಪರಿಷ್ಕರಣೆ ಸಾವಿರಾರು ಜನರಲ್ಲಿ ಆತಂಕ ಸೃಷ್ಟಿಸಿದೆ. ಪ.ಬಂಗಾಳದಿಂದ ಬಂದು ದಶಕಗಳಿಂದ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ಪಾಲಿಗೆ ಚುನಾವಣಾ ಆಯೋಗ ಅಕ್ಷರಶಃ ಪ್ಯಾನಿಕ್ ಬಟನ್ ಒತ್ತಿದೆ...
ಈಕೆಯ ಹೆಸರು ಮಾಲ್ತಿ ಬರ್ಮನ್. 55 ವರ್ಷ ವಯಸ್ಸಿನ ಈಕೆಯ ಊರು ಪಶ್ಚಿಮ ಬಂಗಾಳದ ಕೂಚ್‌ಬೆಹಾರ್. ಆದರೆ ಮಾಲ್ತಿ ಕಳೆದ 40 ವರ್ಷಗಳಿಂದ ದುಡಿಯುತ್ತಿರುವುದು ಜೈಪುರದಲ್ಲಿ. ಅವರು ಬಹಳ ಹಿಂದೊಮ್ಮೆ ಇಲ್ಲಿ ಮತ ಚಲಾಯಿಸಿದ್ದರು, ಆದರೆ ರಾಜಸ್ಥಾನದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕಿತ್ತು ಹಾಕಿದರು. ಯಾಕೆಂದರೆ ಯಾವಾಗಲೂ ತಮ್ಮ ಮೂಲ ನೆಲೆಯಾದ ಬಂಗಾಳಕ್ಕೆ ಮರಳುತ್ತೇನೆ ಎಂಬುದು ಆಕೆಯ ನಂಬಿಕೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯತ್, ಅಸೆಂಬ್ಲಿ ಅಥವಾ ಲೋಕಸಭಾ ಹೀಗೆ ಯಾವುದೇ ಚುನಾವಣೆ ನಡೆದರೂ, ಮಾಲ್ತಿ ತಪ್ಪದೇ ಅಲ್ಲಿ ತೆರಳಿ ಮತ ಚಲಾಯಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿಯೇ ಮತ ಚಲಾಯಿಸಬೇಕು ಎಂಬುದು ಆಕೆಯ ಒತ್ತಾಸೆ, ಯಾಕೆಂದರೆ ಇದರಿಂದಾಗಿ ತಮ್ಮ ಊರಾದ ಬಸಂತಪುರ ಗ್ರಾಮದಲ್ಲಿ ಜಮೀನು ಅಥವಾ ಆಸ್ತಿ ಖರೀದಿಸಲು ಅವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕಾರಣ, ಬಸಂತಪುರ ಪಂಚಾಯತ್ ಪ್ರಧಾನರು ಅವರ ಮತದಾನದ ಸ್ಥಿತಿಯ ಬಗ್ಗೆ ಪ್ರಶ್ನಿಸುತ್ತಿರುತ್ತಾರೆ –ವಲಸೆಯ ಬಳಿಕ ಜೈಪುರದಲ್ಲಿ ಮತ ಚಲಾಯಿಸುತ್ತಿದ್ದಾರೆಯೇ ಅಥವಾ ತಮ್ಮ ಹಳ್ಳಿಯಲ್ಲಿಯೇ? ಎಂಬುದು ಅವರ ಕಳಕಳಿ.
ಕೆಲಸ ಹುಡುಕಿಕೊಂಡು ಇಲ್ಲಿಗೆ ವಲಸೆ ಬಂದ ಕೂಚ್‌ಬೆಹಾರ್ನ ಅನೇಕ ಮಂದಿ ಇಲ್ಲಿಯೇ ನೆಲೆಸಿದ್ದಾರೆ ಮತ್ತು ಇಲ್ಲೂ ಹಾಗೂ ಪಶ್ಚಿಮ ಬಂಗಾಳ ಎರಡೂ ಕಡೆ ಆಸ್ತಿಗಳನ್ನು ಖರೀದಿಸಿದ್ದಾರೆ. ಅವರ ಎರಡನೇ ಮತ್ತು ಮೂರನೇ ತಲೆಮಾರು ಇಲ್ಲಿನ ನಗರ ಜೀವನಕ್ಕೆ ಒಗ್ಗಿಹೋಗಿದೆ. ಹಾಗಾಗಿ ಬಂಗಾಳಕ್ಕೆ ಹಿಂದಿರುಗಲು ಅವರು ಬಯಸುವುದಿಲ್ಲ. ಇದಲ್ಲದೆ, ಇಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ.
ಆತಂಕದಲ್ಲಿ ಕೂಚ್ಬೆಹಾರಿಗಳು
ಯಾವತ್ತು ಎರಡೂ ರಾಜ್ಯಗಳಲ್ಲಿ ಏಕಕಾಲಕ್ಕೆ ‘ವಿಶೇಷ ತೀವ್ರ ಪರಿಷ್ಕರಣೆ' (SIR) ಘೋಷಣೆಯಾಯಿತೋ ಅಂದಿನಿಂದ ಕೂಚ್ಬೆಹಾರ್ನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮಾಲ್ತಿ ಅವರು ಅಕ್ಷರಶಃ ಅಪಾಯದ ಗುಂಡಿ ಒತ್ತಿದ್ದಾರೆ. ಪಶ್ಚಿಮ ಬಂಗಾಳದ ಪರಿಷ್ಕರಣೆ ಪಟ್ಟಿಯಲ್ಲಿ ತಮ್ಮ ಹೆಸರು ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆಯೇ, ಅಥವಾ ಅವರು ಹಳ್ಳಿಗೆ ಭೇಟಿ ನೀಡಿ ಎಣಿಕೆ ಫಾರ್ಮ್ಗಳನ್ನು ಭರ್ತಿ ಮಾಡಬೇಕೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಹಳ್ಳಿಯಲ್ಲಿ ವಾಸಿಸುವ ಅವರ ಮಗಳು ಸಪ್ನಾ, ಮಾಲ್ತಿಯವರ ಭೂ ಮಾಲೀಕತ್ವದ ದಾಖಲೆಗಳನ್ನು ಪಶ್ಚಿಮ ಬಂಗಾಳದಲ್ಲಿ ಗುರುತಿನ ಪುರಾವೆಯಾಗಿ ಸಲ್ಲಿಸಿದ್ದಾರೆ. ಹಾಗೆ ಅವರು ಹೇಳಿದ್ದರೂ, ಅವರಿಗಿನ್ನೂ ಆ ಬಗ್ಗೆ ಆತಂಕವಿದೆ. ಒಂದು ವೇಳೆ ಪರಿಷ್ಕರಣೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ, ಪಶ್ಚಿಮ ಬಂಗಾಳದಲ್ಲೂ ಇರುವುದಿಲ್ಲ, ರಾಜಸ್ಥಾನದಲ್ಲೂ ಇರುವುದಿಲ್ಲ ಎಂಬುದು ಅವರ ಚಿಂತೆ.
ಇಂತಹ ಸಂದಿಗ್ಧತೆಯನ್ನು ರಾಜಸ್ಥಾನದಲ್ಲಿರುವ ಸಾವಿರಾರು ಮಂದಿ ವಲಸೆ ಕಾರ್ಮಿಕರು ಎದುರಿಸುತ್ತಿದ್ದಾರೆ, ವಿಶೇಷವಾಗಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಿಂದ ಬಂದವರು. ಇಲ್ಲಿ ಜನಿಸಿ ಇಲ್ಲಿಯೇ ಬೆಳೆದ ಯುವ ಪೀಳಿಗೆಯಲ್ಲಿ ಅನೇಕರಿಗೆ ತಮ್ಮ ಮೂಲ ತಾಣಕ್ಕೆ ಹಿಂತಿರುಗುವ ಇರಾದೆ ಇಲ್ಲ. ಹಾಗಾಗಿ, ರಾಜ್ಯದ (ರಾಜಸ್ಥಾನದ) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರಬೇಕೆಂಬುದು ಅವರ ಬಯಕೆ. ಕೂಚ್ಬೆಹಾರ್ನವರು ಬಾಂಗ್ಲಾದೇಶಿಯರು ಎಂಬ ಹಣೆಪಟ್ಟಿ ಕಟ್ಟುವ ಸವಾಲೂ ಅವರ ಮುಂದಿದೆ. ಜೊತೆಗೆ ದಿಗ್ಬಂಧನ ಶಿಬಿರದ (detention camp) ಆತಂಕವೂ ಅವರ ಮನಸ್ಸಿನಲ್ಲಿ ಸ್ಥಿರವಾಗಿದೆ.
ಆಸ್ತಿ ಜಪ್ತಿ ಮಾಡುವರೇ?
‘ದಿ ಫೆಡರಲ್’ ಜೊತೆ ಮಾತನಾಡಿದ ಮತ್ತೊಬ್ಬ ಸಹಾಯಕಿ ರೇಣು ಬರ್ಮನ್, “ಒಂದು ವೇಳೆ ನಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ, ನಮ್ಮ ಆಸ್ತಿಗಳನ್ನು ಜಪ್ತಿ ಮಾಡಬಹುದು ಎಂದೂ ಹೇಳುತ್ತಿದ್ದಾರೆ. ನಾವು ಇಲ್ಲಿ ಕಷ್ಟಪಟ್ಟು ಕೆಲಸ ಮಾಡಿ, ನಮ್ಮ ಊರಿನಲ್ಲಿ ಜಮೀನು ಖರೀದಿಸಲು ಹಣ ಉಳಿಸುತ್ತೇವೆ, ಇದರಿಂದ ನಾವು ಹಿಂದಿರುಗಿದಾಗ, ಉಳುಮೆ ಮಾಡಲು ಭೂಮಿ ಸಿಗುತ್ತದೆ ಮತ್ತು ನಮ್ಮ ವೃದ್ಧಾಪ್ಯದ ಹೊತ್ತಿಗೆ ಮನೆಗಳನ್ನು ಕಟ್ಟಿಕೊಂಡು ಜೀವಿಸಬಹುದು. ಈ ತೀವ್ರ ಪರಿಷ್ಕರಣೆಯ ದೆಸೆಯಿಂದ ಇವೆಲ್ಲವನ್ನೂ ನಮ್ಮಿಂದ ಕಸಿದುಕೊಂಡರೆ, ನಮ್ಮ ಹೆಸರುಗಳನ್ನು ಅಳಿಸಿಹಾಕುವ ಸಾಧ್ಯತೆ ನಿಜವಾಗಬಹುದು. ಹಾಗಾದರೆ ನಮಗೆ ಉಳಿಯುವುದಾದರೂ ಏನು? ನಮ್ಮನ್ನು ಇಲ್ಲಿನ ಬಂಧನ ಶಿಬಿರಗಳಿಗೆ ಸ್ಥಳಾಂತರಿಸುವರೇ? ಈ ಜನರಲ್ಲಿ ಹೆಚ್ಚಿನವರು ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 68 ಲಕ್ಷ ಹೆಸರುಗಳನ್ನು ಅಳಿಸಿಹಾಕಿದ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ ಮತ್ತು ತಮ್ಮ ಸ್ಥಳೀಯ ಅಥವಾ ವಾಸದ ರಾಜ್ಯಗಳಲ್ಲಿ ಇದೇ ರೀತಿಯ ಭವಿಷ್ಯ ಎದುರಾಗಬಹುದೆಂದು ಭಯಪಡುತ್ತಿದ್ದಾರೆ,” ಎಂದು ತಿಳಿಸಿದರು.
ರಾಜಸ್ಥಾನವು ನವೆಂಬರ್ 4ರಿಂದ ತನ್ನ ಎಸ್‌ಐಆರ್ ಆರಂಭಿಸಿದಾಗಿನಿಂದ, ಇಲ್ಲಿ ದೀರ್ಘಕಾಲ ನೆಲೆಸಿರುವ ಮತ್ತು 2002ರಲ್ಲಿ ಮತ ಚಲಾಯಿಸದೇ ಇರಬಹುದಾದ ನಾನಾ ರಾಜ್ಯಗಳ ಅನೇಕ ವಲಸಿಗರು, ತಾವು ಇಲ್ಲಿನ ನಿಜವಾದ ಮತದಾರರು ಎಂದು ಸಾಬೀತುಪಡಿಸಲು ಒದ್ದಾಟ ನಡೆಸಿದ್ದಾರೆ. ಅದಕ್ಕಾಗಿ ಬೇಕಾದ ಅಗತ್ಯ ದಾಖಲೆಗಳು ಮತ್ತು ಮತದಾರರ ಗುರುತಿನ ಚೀಟಿ ಸಂಖ್ಯೆಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಎಣಿಕೆ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ದಾಖಲೆಗಳು ಅಗತ್ಯವಿಲ್ಲದಿದ್ದರೂ, ಡಿಸೆಂಬರ್ 9ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ ಹೊರಗಿಡುವ ಭಯವು ಹೆಚ್ಚಿನವರನ್ನು ಕಾಡುತ್ತಿದೆ. ಹಾಗಾಗಿ ಕನಿಷ್ಠ 11 ದಾಖಲೆಗಳಲ್ಲಿ ಒಂದನ್ನಾದರೂ ಸಂಗ್ರಹಿಸಿ ಸುರಕ್ಷಿತವಾಗಿ ಇರಿಸಲು ಹೋರಾಟ ನಡೆಸಿದ್ದಾರೆ. .
ದಾಖಲೆಗಳಿಗಾಗಿ ತಡಕಾಟ
ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಬೆಳೆದು, ಕಳೆದ 25 ವರ್ಷಗಳಿಂದ ಜೈಪುರದಲ್ಲಿ ನೆಲೆಸಿರುವ 50 ವರ್ಷದ ಅಮಲ್ ರಾಯ್, ಒಂದು ವೇಳೆ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ಏನು ಮಾಡುವುದು ಎಂದು ಚಿಂತಿತರಾಗಿದ್ದಾರೆ. ಮತ್ತು ಮುಂಜಾಗ್ರತೆಯ ಕ್ರಮವಾಗಿ ತಮ್ಮ ಮೊದಲ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
"ನಾನು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧನಿಲ್ಲ. ಪಾಸ್ಪೋರ್ಟ್ ಮತ್ತು ಮಾರ್ಕ್-ಶೀಟ್ ಸೇರಿದಂತೆ ಉಲ್ಲೇಖಿಸಲಾದ ಹನ್ನೊಂದು ದಾಖಲೆಗಳಲ್ಲಿ ಹಲವಾರು ನನ್ನ ಬಳಿ ಇವೆ, ಆದರೆ ನಾನು ಮೊದಲು ಯಾವಾಗ ಮತ್ತು ಎಲ್ಲಿ ಮತ ಚಲಾಯಿಸಿದೆ ಅಥವಾ 2002 ಕ್ಕಿಂತ ಮೊದಲು ಎಲ್ಲಿ ನನ್ನ ಹೆಸರು ನೋಂದಾಯಿಸಲಾಗಿತ್ತು ಎಂದೂ ಅಧಿಕಾರಿಗಳು ಕೇಳಬಹುದು ಯಾರು ಬಲ್ಲರು?" ಎನ್ನುತ್ತಾರೆ ಅಮಲ್.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭವಾಗಿರುವ ಎಸ್‌ಐಆರ್‌ನಲ್ಲಿ ಉಲ್ಲೇಖಿಸಲಾದ 11 ದಾಖಲೆಗಳಿಗಾಗಿ ತೀವ್ರವಾದ ಹುಡುಕಾಟ ನಡೆದಿದೆ.
"ಗುರುತಿನ ಚೀಟಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾದ ಪಿಂಚಣಿ ಪಾವತಿ ಆದೇಶಗಳು ಅಥವಾ ಭಾರತೀಯ ಸರ್ಕಾರ, ಬ್ಯಾಂಕ್‌ಗಳು, ಸ್ಥಳೀಯ ಅಧಿಕಾರಿಗಳಿಂದ ನೀಡಲಾದ ಪ್ರಮಾಣಪತ್ರಗಳು, ಅಥವಾ ಜನನ ಪ್ರಮಾಣಪತ್ರಗಳು ಅಥವಾ ಪಾಸ್‌ಪೋರ್ಟ್‌ಗಳು, ಅಥವಾ ಮಾಧ್ಯಮಿಕ ಅಥವಾ ಮಾನ್ಯತೆ ಪಡೆದ ಮಂಡಳಿಗಳಿಂದ ನೀಡಲಾದ ಶೈಕ್ಷಣಿಕ ಪ್ರಮಾಣಪತ್ರಗಳು, ಅಥವಾ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಕಾಯಂ ನಿವಾಸಿ ಪ್ರಮಾಣಪತ್ರ ಹೀಗೆ ಉಲ್ಲೇಖಿಸಲಾದ 11 ದಾಖಲೆಗಳಲ್ಲಿ, ಮನೆಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಅಥವಾ ಚಾಲಕರಾಗಿ ಕೆಲಸ ಮಾಡುವ ನಮ್ಮಂತಹ ಸಮಾಜದ ಕೆಳಸ್ತರದ ಬಹುತೇಕ ಜನರಲ್ಲಿ ಇವು ಇರುವುದು ಅಸಂಭವ. ನಮಗೆ ಯಾರು ಪ್ರಮಾಣಪತ್ರಗಳನ್ನು ನೀಡುತ್ತಾರೆ? ನಮ್ಮಲ್ಲಿ ಬಹಳಷ್ಟು ಮಂದಿಗೆ ಬ್ಯಾಂಕ್ ಖಾತೆಗಳೇ ಇಲ್ಲ, ಏಕೆಂದರೆ ಉಳಿಸುವಷ್ಟು ನಾವು ಸಂಪಾದಿಸುವುದಿಲ್ಲ. ನಾವು ಸಂಪಾದಿಸಿದ್ದನ್ನೆಲ್ಲಾ, ಇಲ್ಲಿನ ಬಾಡಿಗೆ ಮತ್ತು ಆಹಾರಕ್ಕಾಗಿ ಇಟ್ಟುಕೊಂಡು, ನಮ್ಮ ಕುಟುಂಬಗಳಿಗೆ ಕಳುಹಿಸಿಬಿಡುತ್ತೇವೆ," ಎಂದು ಕಳೆದ 12 ವರ್ಷಗಳಿಂದ ಜೈಪುರದಲ್ಲಿ ಕೆಲಸ ಮಾಡುತ್ತಿರುವ 35 ವರ್ಷದ ಚಂದ್ರಾಣಿ ರಾಯ್ ಎಂಬ ಮನೆಕೆಲಸದಾಕೆ ಹೇಳುತ್ತಾರೆ.
ಈ ಬಾರಿ ಮತ ಹಾಕೋದು ಖಚಿತ
ಕಳೆದ 20 ವರ್ಷಗಳಿಂದ ಇಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ 40 ವರ್ಷದ ರತನ್ ಬರ್ಮನ್, ಇದುವರೆಗೆ ಎಂದಿಗೂ, ಎಲ್ಲಿಯೂ ಮತ ಚಲಾಯಿಸಿಲ್ಲ. ಚುನಾವಣೆ ನಡೆದಾಗಲೆಲ್ಲಾ ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ನ ಪುಂಡಿಬಾರಿಯಲ್ಲಿರುವ ತಮ್ಮ ಮನೆಗೆ ಹಿಂತಿರುಗುವ ತೊಂದರೆಯನ್ನು ಅವರು ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ, 2026ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಹೋಗಿ ಮತ ಚಲಾಯಿಸಲು ಅವರು ಯೋಜಿಸುತ್ತಿದ್ದಾರೆ. ಆದರೆ ಇದು ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡರೆ ಮಾತ್ರ ಸಾಧ್ಯ.
"ನನ್ನ ದಿವಂಗತ ಪಾಲಕರ ಹೆಸರುಗಳು ಮತ್ತು ನನ್ನ ಸಹೋದರರ ಹೆಸರುಗಳು ಪಟ್ಟಿಯಲ್ಲಿ ಇರುತ್ತವೆ, ಹಾಗಾಗಿ ಅವರು ನನ್ನ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾವಾಗಲೂ ಹೀಗೆ ಇರುತ್ತಿತ್ತು. ಹಾಗಾಗಿ ನಾನು ಎಂದಿಗೂ ಹೋಗಿ ಮತ ಚಲಾಯಿಸುವ ಕಷ್ಟ ತೆಗೆದುಕೊಂಡಿರಲಿಲ್ಲ, ಏಕೆಂದರೆ ಪ್ರಯಾಣಕ್ಕೆ ಹೆಚ್ಚು ಹಣ ಬೇಕು. ಆದರೆ ಈ ಬಾರಿ, ನನ್ನ ತಿಂಗಳ ಖರ್ಚು ಹೆಚ್ಚಾದರೂ ನಾನು ಖಂಡಿತ ಹೋಗುತ್ತೇನೆ. ಚುನಾವಣಾ ಆಯೋಗವು ನಮ್ಮ ಭಾರತೀಯ ಪೌರತ್ವದ ಪುರಾವೆಯಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಂನರೇಗಾ ಜಾಬ್ ಕಾರ್ಡ್, ರೇಷನ್ ಕಾರ್ಡ್-ಗಳನ್ನು ಏಕೆ ಸ್ವೀಕರಿಸುವುದಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳುವ ಭಾರತೀಯ ನಾಗರಿಕರು ನಾವೇ ಎಂದು ಸಾಬೀತುಪಡಿಸುವ ಜವಾಬ್ದಾರಿ ಈಗ ನಮ್ಮ ಮೇಲಿದೆ. ನಮ್ಮಂತಹ ಬಡ ಜನರಿಗೆ, ಈ ದಾಖಲೆಗಳನ್ನು ಸಂಗ್ರಹಿಸಲು ನಮ್ಮ ಕೆಲಸವನ್ನು ಬಿಡಬೇಕಾಗಿದೆ. ಇದು ಕಿರುಕುಳಕ್ಕಿಂತ ಬೇರೇನೂ ಅಲ್ಲ,” ಎನ್ನುತ್ತಾನೆ ರತನ್ ಬರ್ಮನ್.
ಮತದಾರರ ಎಣಿಕೆ ಕಾರ್ಯ ತೀವ್ರ
ರಾಜಸ್ಥಾನದಲ್ಲಿ ಒಟ್ಟು 5,48,84,827 ಮತದಾರರಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳಿಂದ 52,469 ಬೂತ್‌ಗಳಲ್ಲಿ ಅವರ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ.
ಕನಿಷ್ಠ 2.61 ಕೋಟಿ ಮತದಾರರು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರಲ್ಲಿ ಶೇ.77 ರಷ್ಟು ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 2.88 ಕೋಟಿ ಮತದಾರರ ಪರಿಶೀಲನೆ ಮತ್ತು ಮ್ಯಾಪಿಂಗ್ ನಡೆಯುತ್ತಿದೆ.
ಕನಿಷ್ಠ 2.61 ಕೋಟಿ ಮತದಾರರು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರಲ್ಲಿ 77% ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 2.88 ಕೋಟಿ ಮತದಾರರ ಪರಿಶೀಲನೆ ಮತ್ತು ಮ್ಯಾಪಿಂಗ್ ನಡೆಯುತ್ತಿದೆ.
ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಎಸ್‌ಐಆರ್ ಪ್ರಾರಂಭವಾದ ಮೊದಲ ಐದು ದಿನಗಳಲ್ಲಿ ರಾಜ್ಯದಾದ್ಯಂತ 1.56 ಕೋಟಿಗೂ ಹೆಚ್ಚು ಮತದಾರರ ಎಣಿಕೆ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ. ಬಾರ್ಮರ್, ಚಿತ್ತೋರ್‌ಗಢ್ ಮತ್ತು ಅಲ್ವಾರ್ ಜಿಲ್ಲೆಗಳಲ್ಲಿ ಅತ್ಯಧಿಕ ವಿತರಣೆಯಾಗಿದೆ, ಆದರೆ ಬಿಕಾನೇರ್, ಜೋಧ್‌ಪುರ, ಝಾಲಾವಾರ್, ಹನುಮಾನ್‌ಗಢ, ಸಿರೋಹಿ, ಕೋಟಾ, ಬಾಲೋತ್ರಾ, ಪಾಲಿ ಮತ್ತು ಜೈಸಲ್ಮೇರ್ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಶೇ.25ಕ್ಕಿಂತ ಕಡಿಮೆ ವಿತರಣೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ನವೀನ್ ಮಹಾಜನ್ ಅವರು ಹೇಳುತ್ತಾರೆ.
ಜೈಪುರದಲ್ಲಿಯೂ ಎಣಿಕೆ ಫಾರ್ಮ್‌ಗಳನ್ನು ಎಲ್ಲಾ ಪ್ರದೇಶಗಳಲ್ಲಿ ವಿತರಿಸಲಾಗಿಲ್ಲ. ಕೆಲವರಿಗೆ ಇದರ ಬಗ್ಗೆ ಚಿಂತೆ ಇಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಉಮೇದ್ ಸಿಂಗ್ ಹೀಗೆ ಹೇಳುತ್ತಾರೆ, "ಈ ಸರ್ಕಾರಿ ಕೆಲಸಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಎನ್‌ಡಿಎ ಸರ್ಕಾರವು ನಮ್ಮನ್ನು ಹೆಚ್ಚು ಜಾಗೃತರಾಗುವಂತೆ ಮಾಡಿದೆ. ನಾವು ಈಗ ದಾಖಲೆಗಳನ್ನು ಸಂಗ್ರಹಿಸಲು ಒಗ್ಗಿಕೊಂಡಿದ್ದೇವೆ."

