ಮೈತ್ರಿ ಬಿಕ್ಕಟ್ಟು | ದಳದೊಳಗೆ ದಳ-ದಳ: ಕಾಂಗ್ರೆಸ್ ನತ್ತ ನಾಯಕರ ದಂಡು
x

ಮೈತ್ರಿ ಬಿಕ್ಕಟ್ಟು | ದಳದೊಳಗೆ ದಳ-ದಳ: ಕಾಂಗ್ರೆಸ್ ನತ್ತ ನಾಯಕರ ದಂಡು


ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಅತ್ಯುತ್ಸಾಹದಲ್ಲಿಯೇ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿದ್ದರು. ಆದರೆ ದಿನ ಕಳೆದಂತೆ ಮೈತ್ರಿ ನಾಯಕರ ಮಧ್ಯೆ ಅಸಮಾಧಾನ ಭುಗಿಲೆದ್ದಿದ್ದು, ಜೆಡಿಎಸ್ ಪಕ್ಷದ ನಾಯಕರು ಇದೀಗ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.

ಜೆಡಿಎಸ್ ನ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ವಿಧಾನಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ ನೀಡುವ ಮೂಲಕ ದಳಪತಿಗಳಿಗೆ ಶಾಕ್ ನೀಡಿದ್ದು, ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಜೆಡಿಎಸ್ ನಿಂದ ಹೊರ ಬಂದಿರುವ ಪ್ರಮುಖ ನಾಯಕರಾದ ಮರಿತಿಬ್ಬೇಗೌಡ, ಎಂ ಶ್ರೀನಿವಾಸ್ ಮತ್ತು ಅಪ್ಪಾಜಿ ಗೌಡ ಅವರು ಶುಕ್ರವಾರ(ಮಾ. 22 ) ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಇದು ಮೈತ್ರಿ ನಾಯಕರಲ್ಲಿ ತಳಮಳ ಉಂಟುಮಾಡಿದೆ.

ಲೋಕಸಭಾ ಚುನಾವಣೆಯ ಆರಂಭದಲ್ಲಿಯೇ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಬಿರುಕು ಉಂಟಾಗಿದೆ. ಇಪ್ಪತ್ತು ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿದ್ದಾರೆ ಎಂಬುದು ಜೆಡಿಎಸ್ ಕೋರ್ ಕಮಿಟಿ ಸದಸ್ಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಆ ಬಳಿಕ ಹೆಚ್‌ ಡಿ ಕುಮಾರಸ್ವಾಮಿ ಅವರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಎರಡು ಸೀಟಿಗಾಗಿ ನಾವು ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಎನ್ನುವ ಪ್ರಶ್ನೆಗಳನ್ನು ಎತ್ತಿದ್ದರು.

ʼʼಈ ಮೈತ್ರಿಯಿಂದ ನಮಗೇನು ಲಾಭ ಇಲ್ಲ. ಈ ಹೊಂದಾಣಿಕೆ ಜೆಡಿಎಸ್ಗೆ (JDS) ಹೆಚ್ಚು ಅನುಕೂಲ ಆಗಿಲ್ಲ. 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಶೇ.3ರಷ್ಟಿದ್ದು, ವೋಟ್ ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗಲಿದೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಅಂತ ನಮ್ಮ ಮುಖಂಡರು ಹೇಳಿದ್ದಾರೆʼʼ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಾಧ್ಯಮದ ಎದುರು ವಾರದ ಹಿಂದಷ್ಟೇ ಹೇಳಿದ್ದರು. ಈ ಮೂಲಕ ದೋಸ್ತಿ ಪಕ್ಷದ ಬಗ್ಗೆ ಕುಮಾರಸ್ವಾಮಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದವು.

ಈ ಹಿನ್ನೆಲೆ ಕಳೆದ ಸೋಮವಾರ (ಮಾ. 18)ರಂದು ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ್ದ ಕುಮಾರಸ್ವಾಮಿ ಅವರು, ʼʼಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಯಾವ ರೀತಿ ಬಳಸಿಕೊಳ್ಳಬೇಕು ಅನ್ನೋದರ ಬಗ್ಗೆ ಚರ್ಚಿಸಬೇಕಿದೆʼʼ ಎಂದರು.

ʼʼಕ್ಷೇತ್ರ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಅಗುವವರೆಗೂ ನಾನು ಮಾತನಾಡಲ್ಲ. ನಾನು 6-7 ಸೀಟ್ ಕೇಳಿಲ್ಲ, ಕೇಳಿರೋದೆ ಮೂರರಿಂದ ನಾಲ್ಕು ಸೀಟ್. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. ಎರಡು ಸೀಟ್ ಪಡೆಯಲು ನಾನು ಇಷ್ಟು ಪ್ರಯತ್ನ ಹೊಂದಾಣಿಕೆ ಬೇಕಾ? ಹಾಸನ ಮತ್ತು ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳು ಸ್ವತಂತ್ರವಾಗಿ ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆ ಆದರೆ ನಾವು ಸುಲಭವಾಗಿ ಗೆಲ್ಲುತ್ತೇವೆ" ಎಂದು ಮೈತ್ರಿಯ ಬಗ್ಗೆಯೇ ಬೇಸರದ ಮಾತುಗಳನ್ನಾಡಿದ್ದರು.

ʼʼರಾಜ್ಯದ 18ಕ್ಕೂ ಹೆಚ್ಚು ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಕ್ತಿ ಧಾರೆ ಎರೆದ್ರೆ ಬಿಜೆಪಿಗೆ ಪ್ಲಸ್ ಆಗುತ್ತದೆ. ಕರ್ನಾಟಕದ ರಾಜಕಾರಣವೇ ಬೇರೆ, ದೇಶದ ರಾಜಕಾರಣವೇ ಬೇರೆಯಾಗಿದೆ. ಹಾಸನ , ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಸ್ಪರ್ಧಿಸೋದು ಖಚಿತ ಎಂದರು.

ʼʼಆರಂಭದಲ್ಲಿಯೇ ಬಿಜೆಪಿ ನಮ್ಮನ್ನು, ನಮ್ಮ ಪಕ್ಷವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿ ನಾಯಕರು ಕರೆಯುತ್ತಿಲ್ಲ. ಬಿಜೆಪಿ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲʼʼ ಎಂದು ಜೆಡಿಎಸ್ ನಾಯಕರು ಅಸಮಾಧಾನ ಹೊರಹಾಕಿದ್ದರು.

ಮಂಡ್ಯ, ಕೋಲಾರ ಸೀಟು ಹಂಚಿಕೆಯ ಹಗ್ಗಜಗ್ಗಾಟದ ಮಧ್ಯೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವಿನ ಗೊಂದಲ ತಾರಕಕ್ಕೇರಿದೆ. ಬಿಜೆಪಿ ಮೈತ್ರಿ ಧರ್ಮ ಪಾಲನೆಯ ಬಗ್ಗೆ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈತ್ರಿಯಲ್ಲಿನ ಮುನಿಸಿಗೆ ಪ್ರಮುಖ ಕಾರಣಗಳು?

1. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಬಿಜೆಪಿ ಪಟ್ಟಿಯನ್ನು ಘೋಷಿಸುವಾಗ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತಗೊಂಡಿಲ್ಲ ಎನ್ನುವ ಬೇಸರ.

2. ಮೊದನಿಂದಲೂ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ಘೋಷಿಸಿದ್ದಾರೆ. ಆದರೆ, ಹಾಸನದ ಸ್ಥಳೀಯ ಬಿಜೆಪಿ ನಾಯಕ ಪ್ರೀತಂಗೌಡ ಅವರು ಬಹಿರಂಗವಾಗಿಯೇ ರೇವಣ್ಣ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಕಂಟ್ರೋಲ್ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ಜೆಡಿಎಸ್ ನಾಯಕರು ಕೋಪಗೊಂಡಿದ್ದಾರೆ.

3. ಮೈತ್ರಿ ಮಾಡಿಕೊಂಡ ಬಳಿಕ ಚುನಾವಣೆಗೆ ಒಟ್ಟಾಗಿ ಪ್ರಚಾರ ಮಾಡಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಕಲಬುರಗಿ, ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶಗಳಿಗೆ ಜೆಡಿಎಸ್ ನಾಯಕರನ್ನು ಆಹ್ವಾನಿಸಿರಲಿಲ್ಲ. ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲೂ ಜೆಡಿಎಸ್ ತನ್ನದೇ ಆದ ಪ್ರಾಬಲ್ಯವನ್ನ ಹೊಂದಿದೆ ಎಂದು ಜೆಡಿಎಸ್ ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ.

4. ಆರಂಭದಿಂದಲೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವಂತೆ ದಳಪತಿಗಳು ಬೇಡಿಕೆ ಇಟ್ಟಿದ್ದರು. ಅದಕ್ಕೆ ಬಿಜೆಪಿ ಹೈಕಮಾಂಡ್ ಸಹ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿತ್ತು. ಹಾಗಾಗಿ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಚುನಾವಣಾ ತಯಾರಿ ನಡೆಸಿದ್ದಾರೆ. ಆದರೆ, ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಕರೆದು ಮಾತಾಡಿ ಮಂಡ್ಯದಲ್ಲಿ ಗೊಂದಲ ಮಾಡುತ್ತಿದ್ದಾರೆ ಎನ್ನುವ ಬೇಸರವನ್ನು ಜೆಡಿಎಸ್ ನಾಯಕರು ಹೊರಹಾಕಿದ್ದಾರೆ.

5. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 25 ಬಿಜೆಪಿಗೆ ಮೂರು ಕ್ಷೇತ್ರಗಳು ಜೆಡಿಎಸ್ ಗೆ ಎಂದು ಹಲವು ಸರಣಿ ಸಭೆಗಳು ಮೈತ್ರಿ ನಾಯಕರ ನಡುವೆ ನಡೆದಿವೆ ಎಂದು ಹೇಳಲಾಗಿತ್ತು, ಆದರೆ, ಕ್ಷೇತ್ರ ಹಂಚಿಕೆ ಕುರಿತು ಅಧಿಕೃತವಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿಲ್ಲ. ಅಲ್ಲದೇ ಈವರೆಗೂ ಬಿಜೆಪಿ-ಜೆಡಿಎಸ್ ನಾಯಕರ ಜೊತೆಗೆ ಸಮನ್ವಯ ಸಭೆಗಳನ್ನೂ ನಡೆಸಿಲ್ಲ ಎನ್ನುವುದು ಜೆಡಿಎಸ್ ನಾಯಕರ ಆರೋಪ.

6. ಕೋಲಾರ ಜೆಡಿಎಸ್ ಪಕ್ಷಕ್ಕೆ ಬೇಸ್ ಇರುವ ಕ್ಷೇತ್ರ. ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ನಮಗೆ ಬೇಕು ಅಂತ ಪಟ್ಟು ಹಿಡಿದಿದೆ. ಈಗಾಗಲೇ ಕೋಲಾರ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಹೈಕಮಾಂಡ್ ಜೊತೆಗೆ ಮಾತುಕತೆಯಾಗಿದೆ. ಆದರೂ ಸಹ ಬಿಜೆಪಿ ಕೊನೆ ಗಳಿಗೆಯಲ್ಲಿ ಕೋಲಾರಕ್ಕಾಗಿ ಪಟ್ಟು ಹಿಡಿದಿದೆ. ಇದು ಜೆಡಿಎಸ್ ನಾಯಕರಲ್ಲಿ ಅಸಮಧಾನ ಹೆಚ್ಚಾಗಲು ಕಾರಣವಾಗಿದೆ.

ಜೆಡಿಎಸ್‌ನ ಹಲವು ನಾಯಕರು ಬಿಜೆಪಿಯೊಂದಿಗಿನ ಮೈತ್ರಿ ಕುರಿತು ಅಸಮಧಾನವನ್ನು ಕೋರ್ ಕಮಿಟಿ ಸಭೆಯಲ್ಲಿ ವರಿಷ್ಠರ ಮುಂದೆ ಹೇಳಿಕೊಂಡ ಬಳಿಕ ಕುಮಾರಸ್ವಾಮಿ ಅವರು ತಮ್ಮ ಅಸಮಧಾನವನ್ನೂ ಹೊರಹಾಕಿದರು.

ಸೋಮವಾರ (ಮಾ. 18)ರಂದು ಸೀಟು ಹಂಚಿಕೆ ಮತ್ತು ಪ್ರಚಾರದ ವಿಚಾರದಲ್ಲಿ ಬಿಜೆಪಿ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಧಾನ ಹೊರಹಾಕಿದ್ದ ಮರುದಿನವೇ ಉಲ್ಟಾ ಹೊಡೆದರು. ʼಮೈತ್ರಿಕೂಟದಲ್ಲಿ ಯಾವ ಸಮಸ್ಯೆಯೂ ಇಲ್ಲʼ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮೈತ್ರಿಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿದರೂ ಕೂಡ ಜೆಡಿಎಸ್ನ ಇನ್ನುಳಿದ ನಾಯಕರಲ್ಲಿ ಇನ್ನೂ ಅಸಮಾಧಾನ ಕಡಿಮೆ ಆಗಿಲ್ಲ. ಹಾಗಾಗಿಯೇ ಇದೀಗ ಜೆಡಿಎಸ್ನ ಪ್ರಮುಖ ನಾಯಕರಾದ ಮರಿತಿಬ್ಬೇ ಗೌಡ , ಎಂ ಶ್ರೀನಿವಾಸ್ ಮತ್ತು ಅಪ್ಪಾಜಿ ಗೌಡ ಅವರು ಶುಕ್ರವಾರ(ಮಾ. 22 ) ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನೂ ಅನೇಕ ನಾಯಕರ ದಂಡು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ʼʼನದಿಗಳು ಎಲ್ಲೇ ಹುಟ್ಟಿದರೂ ಸಮುದ್ರಕ್ಕೇ ಸೇರುತ್ತವೆ. ಅದೇ ರೀತಿ ಬೇರೆ ಪಕ್ಷಗಳ ನಾಯಕರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಾನಸ ಸರೋವರ ಇದ್ದಂತೆ. ಇನ್ನೂ ಜೆಡಿಎಸ್ ಹಾಗೂ ಬಿಜೆಪಿಯಿಂದ ಅನೇಕ ನಾಯಕರು ಕಾಂಗ್ರೆಸ್ ಸೇರುತ್ತಾರೆ ಎಂದು ಈ ಹಿಂದೆಯೇ ಹೇಳಿದ್ದರು.

Read More
Next Story