THE FEDERAL EXCLUSIVE | ಅವರಿಂದ ಬಹುಸಂಖ್ಯಾತರು ಬಲಿಯಾಗುತ್ತಿದ್ದಾರೆ: ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆರೋಪ
x

THE FEDERAL EXCLUSIVE | ಅವರಿಂದ ಬಹುಸಂಖ್ಯಾತರು ಬಲಿಯಾಗುತ್ತಿದ್ದಾರೆ: ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆರೋಪ

"ಎಲ್ಲ ಸಮಾಜದ ಹಿತ ಬಯಸುವಂತಹ ವ್ಯಕ್ತಿಗೆ ಟಿಕೆಟ್ ಮಾಡಬೇಕೆ ವಿನಃ ಸೇಡಿನ ರಾಜಕಾರಣ, ದಮನಕಾರಿ ನೀತಿ ಅನುಸರಿಸುವವನಿಗೆ ಟಿಕೆಟ್‌ ಕೊಡಬಾರದು. ಆ ವ್ಯಕ್ತಿ (ಜೋಷಿ)ಯಿಂದ ಬಹುಸಂಖ್ಯಾತರು ಬಲಿಯಾಗುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಬದಲಾವಣೆ ಮಾಡ್ಬೇಕು ಅನ್ನೋದು ನಮ್ಮ ಬೇಡಿಕೆ ಆಗೇದ. ಆ ಪಕ್ಷಕ್ಕೆ (ಬಿಜೆಪಿ) ನಾವು ಈಗಾಗಲೇ ಗಡುವು ಕೊಟ್ಟೀವಿ"


"ಪ್ರಲ್ಹಾದ ಜೋಷಿ ಅವರಿಂದ ಬಹುಸಂಖ್ಯಾತರು ತುಳಿತಕ್ಕೆ ಒಳಗಾಗಿದ್ದಾರೆ. ಅವರ ಕುತಂತ್ರಗಳಿಂದಾಗಿ ನಾವು ಸಹಿತ ನೊಂದಿದೀವಿ. ಆ ಕಾರಣಕ್ಕಾಗಿಯೇ ಅವರ ಪಕ್ಷದ ಹೈಕಮಾಂಡ್ ಗೆ ಅಭ್ಯರ್ಥಿಯಾಗಿ ಅವರನ್ನು ಬದಲಾಯಿಸುವಂತೆ ಬೇಡಿಕೆ ಇಟ್ಟೀವಿ" ಎಂದು ಬಾಳೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಗಂಭೀರ ಆರೋಪ ಮಾಡಿದರು.

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಈ ಕುರಿತು ಮಾತನಾಡಿದ ಸ್ವಾಮೀಜಿ, "ಎಲ್ಲ ಸಮಾಜದ ಹಿತ ಬಯಸುವಂತಹ ವ್ಯಕ್ತಿಗೆ ಟಿಕೆಟ್ ಮಾಡಬೇಕೆ ವಿನಃ ಸೇಡಿನ ರಾಜಕಾರಣ, ದಮನಕಾರಿ ನೀತಿ ಅನುಸರಿಸುವವನಿಗೆ ಟಿಕೆಟ್‌ ಕೊಡಬಾರದು. ಆ ವ್ಯಕ್ತಿ (ಜೋಷಿ)ಯಿಂದ ಬಹುಸಂಖ್ಯಾತರು ಬಲಿಯಾಗುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಬದಲಾವಣೆ ಮಾಡ್ಬೇಕು ಅನ್ನೋದು ನಮ್ಮ ಬೇಡಿಕೆ ಆಗೇದ. ಆ ಪಕ್ಷಕ್ಕೆ (ಬಿಜೆಪಿ) ನಾವು ಈಗಾಗಲೇ ಗಡುವು ಕೊಟ್ಟೀವಿ" ಎಂದು ತಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಿದರು.

ʼʼಅಭ್ಯರ್ಥಿಯ ಬದಲಾವಣೆ ಸಾಧ್ಯವೇ ಇಲ್ಲ ಅಂತ ಯಡಿಯೂರಪ್ಪನವರು ಹೇಳಿರಬಹುದು, ಆದ್ರ ಮತ್ತೊಬ್ಬ ಪ್ರಭಾವಿ ನಾಯಕ ನಮ್ಮ ಮನವೊಲಿಸೋಕೆ ಬಂದಿದ್ದರು. ಅವರಿಗೆ ನಮ್ಮ ನಿಲುವು ಸ್ಪಷ್ಟಪಡಿಸಿದ್ವಿ, ಅಭ್ಯರ್ಥಿ ಬದಲಾವಣೆಗೆ ಗಡುವು ಕೊಟ್ಟಿದ್ದೇವೆ, ಕಾದು ನೋಡ್ತೀವಿ. ಕೇಂದ್ರದ ನಿಲುವು ಕೂಡ ಯಡಿಯೂರಪ್ಪನವರ ನಿಲುವೇ ಆಗಿತ್ತು ಅಂದ್ರ ನಮ್ಮ ನಿಲುವು ಬದಲಾಗುವುದಿಲ್ಲ. ನಾವು ಪರ್ಯಾಯ ಹಾದಿಯತ್ತ ಸಾಗ್ತೀವಿʼʼ ಎಂದು ಹೇಳುವ ಮೂಲಕ ದಿಂಗಾಲೇಶ್ವರ ಸ್ವಾಮೀಜಿಗಳು, ಸಚಿವ ಜೋಷಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದರು.

Also Read: ಧಾರವಾಡದಲ್ಲಿ ಬ್ರಾಹ್ಮಣ V/s ಲಿಂಗಾಯತ ದಂಗಲ್? ಜೋಶಿಗೆ ದಂಗುಬಡಿಸಿದ ದಿಂಗಾಲೇಶ್ವರ ಸ್ವಾಮೀಜಿ

"ಆ ಪಕ್ಷ ಬದಲಾವಣೆ ಮಾಡಲಿಕಂದ್ರ ಮುಂದಿನ ನಿರ್ಧಾರ ಯಾವಾಗ ತಗೋತಿವಿ ಅಂತ ಈಗಾಗಲೇ ಹೇಳಿದ್ದೇವೆ. ಈ ಹೋರಾಟದಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಯಾವ ಪ್ರಭಾವ, ಆಮೀಷಕ್ಕ ಒಳಗಾಗುವವರಲ್ಲ ಅನ್ನೋದು ಇಡೀ ನಾಡಿನ ಜನತೆಗೆ ಗೊತ್ತಿದೆ. ನಮ್ಮ ಹೋರಾಟ ಕೇವಲ ಲಿಂಗಾಯತರ ಪರವಾಗಿ ಅಲ್ಲ, ತುಳಿತಕ್ಕೆ ಒಳಗಾಗಿರುವ ಬಹಳಷ್ಟು ಸಮುದಾಯಗಳು ಇದಾವ. ಅವರೆಲ್ಲರ ಪರವಾಗಿ ನಾವು ಧ್ವನಿ ಎತ್ತಿದೀವಿ. ಸಾಮಾಜಿಕ ನ್ಯಾಯಕ್ಕಾಗಿ, ವ್ಯಕ್ತಿಯ ಬದಲಾವಣೆ ಮುಖ್ಯ, ವ್ಯಕ್ತಿಯ ಹಿತಕ್ಕಾಗಿ ಇಡೀ ನಾಡನ್ನು ಬಲಿ ಕೊಡೋದು ಸರಿಯಲ್ಲ" ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

"ತಿಳಿದು ರಾಜಕಾರಣ ಮಾಡಬೇಕೆ ವಿನಃ ತುಳಿದು ರಾಜಕಾರಣ ಮಾಡಬಾರದುʼ. ನಾವು ಯಾವುದೇ ಪಕ್ಷದ ಅಭಿಮಾನಿಗಳೂ ಅಲ್ಲ, ವಿರೋಧಿಗಳೂ ಅಲ್ಲ. ನಾನು ಯಾವುದೇ ಪಕ್ಷಕ್ಕೆ ಅಂಟಿಕೊಂಡವನಲ್ಲ. ಅದು ಎಲ್ಲಾ ಜನತೆಗೂ ಗೊತ್ತಿರೋ ವಿಚಾರ. ಆದ್ರ ಯಾವ ವ್ಯಕ್ತಿಯಿಂದ ಸಮಾಜಕ್ಕೆ ಅನ್ಯಾಯ ಆಗತಿರತ್ತೋ ಅಂತಹ ದುಷ್ಟರ ವಿರುದ್ಧ ಧ್ವನಿ ಎತ್ತುವುದು ನನ್ನ ಕರ್ತವ್ಯ ಅಂತ ನಾನು ಭಾವಿಸಿದೀನಿ. ನಾನು ಒಬ್ಬ ವ್ಯಕ್ತಿಯ ವಿರೋಧಿ ಮೊದಲೇ ಅಲ್ಲ, ವ್ಯಕ್ತಿತ್ವದ ವಿರೋಧಿ ಅಷ್ಟೇ ನಾನು.. ಸಮಾಜಕ್ಕೆ ಕಂಟಕವಾಗಿರುವ ವ್ಯಕ್ತಿಯ ವಿರುದ್ಧ ನಮ್ಮ ಹೋರಾಟ ಯಾವಾಗಲೂ ಮುಂದುವರಿತೈತಿʼ ಎಂದು ಮಾರ್ಮಿಕವಾಗಿ ನುಡಿದರು.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಜೋಷಿ ಸ್ಪರ್ಧೆ ವಿರೋಧಿಸಿ ತಾವು ಕಣಕ್ಕಿಳಿಯುವ ಬಗ್ಗೆ ಅವರಿನ್ನೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

Read More
Next Story