Dengue Outbreak | ಬೆಂಗಳೂರಿನಲ್ಲಿ ಡೆಂಗ್ಯೂ ಉಲ್ಬಣ: ಕೇವಲ ಫಾಗಿಂಗ್‌, ಸಮೀಕ್ಷೆಯಲ್ಲಿ ಮುಳುಗಿರುವ ಬಿಬಿಎಂಪಿ
x
ಡೆಂಗ್ಯೂ - ಫಾಗಿಂಗ್‌

Dengue Outbreak | ಬೆಂಗಳೂರಿನಲ್ಲಿ ಡೆಂಗ್ಯೂ ಉಲ್ಬಣ: ಕೇವಲ ಫಾಗಿಂಗ್‌, ಸಮೀಕ್ಷೆಯಲ್ಲಿ ಮುಳುಗಿರುವ ಬಿಬಿಎಂಪಿ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಎರಡು ಪಟ್ಟು ಹೆಚ್ಚಳವಾಗಿದ್ದು, ರೋಗ ಬಹುತೇಕ ಸಾಂಕ್ರಾಮಿಕವಾಗಿದೆ. ಆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿಯು ಬೆಂಗಳೂರಿನ ಅರ್ಧದಷ್ಟು ಮನೆಗಳಲ್ಲಿ (14 ಲಕ್ಷದಷ್ಟು) ಲಾರ್ವಾ ಸಮೀಕ್ಷೆ ನಡೆಸಲು ಮುಂದಾಗಿದೆ.


ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷದ ಮೊದಲ ಆರು ತಿಂಗಳಲ್ಲೇ ದುಪಟ್ಟು ಹೆಚ್ಚಳವಾಗಿದೆ. ಡೆಂಗ್ಯೂ ಪ್ರಕರಣಗಳು ವ್ಯಾಪಕವಾಗಿದ್ದು, ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಕ್ಲಿನಿಕ್‌ಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮಹಾನಗರದಲ್ಲಿ ಸೋಂಕು ಸಾಂಕ್ರಾಮಿಕವಾಗಿದ್ದು, ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕಿದ್ದ ಬಿಬಿಎಂಪಿ, ಈಗಲೂ ಕೇವಲ ಫಾಗಿಂಗ್‌, ಲಾರ್ವ ಸಮೀಕ್ಷೆಯ ಮಾತನಾಡುತ್ತಿದೆ.

2023ನೇ ಸಾಲಿನಲ್ಲಿ ಜನವರಿಯಿಂದ ಜೂನ್‌ನ ವರೆಗೆ ಬೆಂಗಳೂರಿನಲ್ಲಿ 732 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಆದರೆ, 2024ನೇ ಸಾಲಿನ ಜನವರಿಯಿಂದ ಜೂನ್ (26ರ ವರೆಗೆ) 1,230 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ದ್ವಿಗುಣವಾಗಿದ್ದರೂ, ಡೆಂಗ್ಯೂನಿಂದ ಸಾವನ್ನಪ್ಪಿರುವುದು ವರದಿಯಾಗಿಲ್ಲ. ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿಯು ಬೆಂಗಳೂರಿನ ಅರ್ಧದಷ್ಟು ಮನೆಗಳಲ್ಲಿ (14 ಲಕ್ಷದಷ್ಟು) ಲಾರ್ವಾ ಸಮೀಕ್ಷೆ ನಡೆಸಲು ಮುಂದಾಗಿದೆ.

ಫಾಗಿಂಗ್, ಔಷಧಿ ಸಿಂಪಡಣೆಗೆ ಆದ್ಯತೆ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫಾಗಿಂಗ್ ಹಾಗೂ ಔಷಧಿ ಸಿಂಪಡಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಹಿಂದಿನಂತೆ ನಗರದಲ್ಲಿ ಫಾಗಿಂಗ್ ಹಾಗೂ ಔಷಧಿ ಸಿಂಪಡಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ಸಹ ಸಾರ್ವಜನಿಕರಿಂದ ಕೇಳಿಬಂದಿದೆ. ಬೆಂಗಳೂರಿನಲ್ಲಿ ವಿಧಾನಸಭಾ ಕ್ಷೇತ್ರವಾರು ಫಾಗಿಂಗ್ ಹಾಗೂ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಮೂರರಿಂದ ನಾಲ್ಕು ವಾರ್ಡ್‌ಗಳನ್ನು ವಿಂಗಡಣೆ ಮಾಡಿಕೊಂಡು, ಎರಡು ಆಟೋಗಳ ಮೂಲಕ ಫಾಗಿಂಗ್ ಮಾಡಲಾಗುತ್ತಿದೆ.

ಡೆಂಗ್ಯೂ ದೃಢ ಮತ್ತು ದೂರು ಬರುವ ಜಾಗದಲ್ಲಿ ಫಾಗಿಂಗ್

ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿರುವ ಪ್ರದೇಶದಲ್ಲಿ ಹಾಗೂ ಬಿಬಿಎಂಪಿಗೆ ದೂರು ಬರುವ ಪ್ರದೇಶಗಳಲ್ಲಿ ಆದ್ಯತೆಯ ಮೇಲೆ ಫಾಗಿಂಗ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ) ಡಾ. ಸೈಯದ್ ಸಿರಾಜುದ್ದೀನ್ ಮದಿನಿ ತಿಳಿಸಿದರು. ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಫಾಗಿಂಗ್ ಹಾಗೂ ಔಷಧಿ ಸಿಂಪಡಣೆ ಹೆಚ್ಚಿಸಲಾಗಿದೆ ಎಂದರು.

ʻಬಿಬಿಎಂಪಿಯ ಹೊರ ವಲಯದ ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ನಲ್ಲಿ ನಾಲ್ಕು ಜನ ಹ್ಯಾಂಡ್ ಪಂಪ್‌ನ ಮೂಲಕ (ಕೈಯಿಂದ ಔಷಧಿ ಸಿಂಪಡಣೆ ಮಾಡುವ ಸಾಧನ) ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಔಷಧಿ ಸಿಂಪಡಣೆ ಮಾಡುತ್ತಿದ್ದು, ಉಳಿದ ವಾರ್ಡ್‌ಗಳಲ್ಲಿ ಮೂರು ಜನ ಔಷಧಿ ಸಿಂಪಡಣೆ ಮಾಡಲು ನಿಯೋಜಿಸಲಾಗಿದೆʼ ಎಂದರು.

ಎಲ್ಲೆಲ್ಲಿ ಫಾಗಿಂಗ್‌ ?

ಬೆಂಗಳೂರಿನ ಪ್ರಮುಖ ಪಾರ್ಕ್‌ಗಳು, ನೀರು ನಿಲ್ಲುವ ಪ್ರದೇಶ, ರಾಜಕಾಲುವೆಯ ಸುತ್ತಮುತ್ತ, ಕೊಳಗೇರಿ ಹಾಗೂ ಜನನಿಬಿಡ ಜಾಗಗಳಲ್ಲಿ ಫಾಂಗಿಗ್‌ ಮಾಡಲಾಗುತ್ತಿದೆ. ಅಲ್ಲದೇ ಡೆಂಗ್ಯೂ ಹೆಚ್ಚಾಗಿ ವರದಿಯಾಗುತ್ತಿರುವ ಪ್ರದೇಶ ಹಾಗೂ ದೂರು ಬರುವ ಜಾಗದಲ್ಲೂ ಫಾಗಿಂಗ್‌ ನಡೆದಿದೆ.

ಬಿಬಿಎಂಪಿ ಸಹಾಯವಾಣಿ ಹಾಗೂ ಸಹಾಯ ಆ್ಯಪ್ ಮೂಲಕ ದೂರು

ನಗರದಲ್ಲಿ ಡೆಂಗ್ಯೂ ಸೇರಿದಂತೆ ಸೊಳ್ಳೆಗಳಿಂದ ಹಬ್ಬುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ದೂರಿನ ಆಧಾರದ ಮೇಲೆಯೂ ಫಾಗಿಂಗ್ ಮಾಡಲಾಗುತ್ತಿದೆ. ವಾರ್ಡ್‌ವಾರು ಸಮಿತಿಗಳಿಂದಲೂ ದೂರು ಬರುತ್ತಿದ್ದು, ದೂರಿನ ಆಧಾರದ ಮೇಲೆಯೂ ಫಾಗಿಂಗ್ ಮಾಡಲಾಗುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಇರುವುದು ಅಥವಾ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವನಿಕರು ಬಿಬಿಎಂಪಿ ಸಹಾಯವಾಣಿ: 1533 / 08022221188 ಗೆ ಕರೆ ಮಾಡಬಹುದಾಗಿದೆ ಅಥವಾ ಬಿಬಿಎಂಪಿಯ ಸಹಾಯ ಆ್ಯಪ್‌ನ ಮೂಲಕವೂ ದೂರು ದಾಖಲಿಸಬಹುದಾಗಿದೆ.

ಮನೆ – ಮನೆ ಸಮೀಕ್ಷೆ

ನಗರದಲ್ಲಿ ಡೆಂಗ್ಯೂ ಪ್ರಕಣಗಳನ್ನು ತಡೆಯುವ ಉದ್ದೇಶದಿಂದ ಮನೆ- ಮನೆ ಸಮೀಕ್ಷೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಲಯವಾರು ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿ ಸೇರಿದಂತೆ ಪ್ರತಿ ಒಂದು ಸಾವಿರ ಮನೆಗಳಿಗೆ ಒಂದು ಬ್ಲಾಕ್ ರಚಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ತಂಡಗಳು ಲಾರ್ವಾ ಇರುವ ತಾಣಗಳನ್ನು ಗುರುತಿಸಲಿವೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಹಾಗೂ ಯಾರಿಗಾದರೂ, ಜ್ವರವಿದ್ದರೆ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

14 ಲಕ್ಷ ಮನೆಗಳಲ್ಲಿ ಸರ್ವೇ

ಬೆಂಗಳೂರಿನಲ್ಲಿರುವ ಮನೆಗಳ ಪೈಕಿ ಅರ್ಧದಷ್ಟು ಮನೆಗಳಲ್ಲಿ ಜಾಗೃತಿ ಹಾಗೂ ಡೆಂಗ್ಯೂ ಮೂಲ ನಾಶಕ್ಕೆ ಬಿಬಿಎಂಪಿ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ 28 ಲಕ್ಷ ಮನೆಗಳ ಪೈಕಿ 14 ಲಕ್ಷ ಮನೆಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಬಡವರು ಇರುವ ಪ್ರದೇಶ, ಜನಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಿಬಿಎಂಪಿಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮನೆ-ಮನೆ ಸಮೀಕ್ಷೆ ನಡೆಸಲು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಸೂಚಿಸಲಾಗಿದೆ.

Read More
Next Story