Dengue Outbreak | ಐದು ವರ್ಷದಲ್ಲಿ ಡೆಂಗ್ಯೂ ಪ್ರಕರಣ ನಿರಂತರ ಏರಿಕೆ!
ಬೆಂಗಳೂರಿನಲ್ಲಿ ಪ್ರತಿ ಮಳೆಗಾಲದಲ್ಲೂ ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿವೆ. ಆದರೆ, ಇದರಿಂದ ಬಿಬಿಎಂಪಿ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಈ ವರ್ಷವೂ ಬಿಬಿಎಂಪಿ ನಿರ್ಲಕ್ಷ್ಯ ಮುಂದುವರಿದಿದೆ.
ಪ್ರತಿ ವರ್ಷವೂ ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದರಿಂದ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ (ಬಿಬಿಎಂಪಿ) ವರದಿಯಾಗುತ್ತಿರುವ ಡೆಂಗ್ಯೂ ಪ್ರಕರಣಗಳೇ ಸಾಕ್ಷಿ.
ಕಳೆದ ಐದು ವರ್ಷಗಳಿಂದಲೂ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಬೆಂಗಳೂರಿನಲ್ಲಿ 2019ರಿಂದಲೂ ಡೆಂಗ್ಯೂ ಪ್ರಕರಣಗಳು ಎರಡಂಕಿ ದಾಟುತ್ತಲ್ಲೇ ಇದೆ. ಅಲ್ಲದೇ, ಪ್ರತಿ ವರ್ಷವೂ ಜನ ಡೆಂಗ್ಯೂವಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಇದರಿಂದ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ.
ಪ್ರತಿ ವರ್ಷವೂ ಡೆಂಗ್ಯೂ ಪ್ರಕರಣಗಳು ಉಲ್ಬಣವಾದ ಮೇಲೆ ಬಿಬಿಎಂಪಿ ತುರ್ತು ಕ್ರಮ ಕೈಗೊಳ್ಳುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ತಡೆಯುವಲ್ಲಿ ಬಿಬಿಎಂಪಿ ವಿಫಲವಾಗುತ್ತಿದೆ. ಈ ವಿಫಲತೆ 2024ನೇ ಸಾಲಿನಲ್ಲೂ ಮುಂದುವರಿದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯ ವರೆಗೆ 1,230 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. 5,142 ಡೆಂಗ್ಯೂ ಶಂಕಿತ ಪ್ರಕರಣಗಳು ವರದಿಯಾಗಿವೆ.
ವರ್ಷವಾರು ಡೆಂಗ್ಯೂ ಪ್ರಕರಣಗಳು
ವರ್ಷ ಡೆಂಗ್ಯೂ ಪ್ರಕರಣ ದೃಢ ಸಾವು
2019 | 9,434 | 12 |
2020 | 1127 | 5 |
2021 | 1629 | 11 |
2022 | 2335 | 7 |
2023 | 11,136 | 9 |
2024 (ಜೂನ್) | 1,230 | 01 |
ಎರಡು ವರ್ಷದಿಂದ ಈ ವಲಯದಲ್ಲಿ ಹೆಚ್ಚು ಪ್ರಕರಣ
ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯದಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯ ಪೂರ್ವ ಹಾಗೂ ಮಹದೇವಪುರ ವಲಯದಲ್ಲೇ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿವೆ.
2023ನೇ ಸಾಲಿನಲ್ಲಿ ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಅನುಕ್ರಮವಾಗಿ 3022 ಹಾಗೂ 1726 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಈ ವರ್ಷ ಜನವರಿಯಿಂದ ಜೂನ್‌ನ ವರೆಗೆ ಪೂರ್ವ ವಲಯದಲ್ಲಿ 2018 ಹಾಗೂ ಮಹದೇವಪುರ ವಲಯದಲ್ಲಿ 386 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.
ʻಬಿಬಿಎಂಪಿಯ ಮಹದೇವಪುರ ಹಾಗೂ ಪೂರ್ವ ವಲಯದಲ್ಲಿ ಕಳೆದ ಎರಡು ವರ್ಷದಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಈ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆʼ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರು ತಿಳಿಸಿದರು.
ʻಪ್ರತಿ ವರ್ಷವೂ ಈ ಎರಡು ವಲಯದಲ್ಲಷ್ಟೇ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿವೆ ಎನ್ನಲು ಸಾಧ್ಯವಿಲ್ಲ. ಇದಕ್ಕೆ ಆ ಭಾಗದಲ್ಲಿ ಮಳೆಯ ಪ್ರಮಾಣ, ಫಾಗಿಂಗ್ ಪ್ರಮಾಣ ಹಾಗೂ ಜಾಗೃತಿ ಎಲ್ಲವೂ ಗಣನೆಗೆ ಬರಲಿದೆ. ಒಟ್ಟಾರೆ ಎಲ್ಲ ವಲಯದಲ್ಲೂ ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿವೆ. ಹೀಗಾಗಿ ಎಲ್ಲ ವಲಯದಲ್ಲೂ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆʼ ಎಂದು ಹೇಳಿದರು.
ಅನುಮಾನಾಸ್ಪದ ಸಾವು: ಡೆತ್ ಆಡಿಟ್ ನಡೆಸಿದ ಬಿಬಿಎಂಪಿ
ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಒಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ. ಶುಕ್ರವಾರ (ಜೂನ್ ಇಬ್ಬರು ಡೆಂಗ್ಯೂವಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಬಿಬಿಎಂಪಿ ಡೆತ್ ಆಡಿಟ್ ನಡೆಸಿದ್ದು, ಒಬ್ಬರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಅಭಿಲಾಷ್ (24) ಎನ್ನುವ ಯುವಕ ಮೃತಪಟ್ಟಿರುವು ದೃಢಪಟ್ಟಿದೆ. ಡೆಂಗ್ಯೂವಿನಿಂದ ಸಾವನ್ನಪ್ಪಿರುವ ಯುವಕನಿಗೂ ಆರೋಗ್ಯದ ಸಮಸ್ಯೆಗಳು ಇದ್ದವು. ಆದರೆ, ಡೆಂಗ್ಯೂ ಲಕ್ಷಣಗಳು ಇದ್ದವು ಹಾಗೂ ಡೆಂಗ್ಯೂ ಸೋಂಕು ಇರುವುದು ದೃಢಪಟ್ಟಿದೆ. ಡೆತ್ ಆಡಿಟ್ ವರದಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜನವರಿಯಿಂದಲೂ ಡೆಂಗ್ಯೂ ದೃಢ
ಬೆಂಗಳೂರಿನಲ್ಲಿ 2024ನೇ ಸಾಲಿನ ಜನವರಿಯಿಂದಲೂ ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿದ್ದು, ಬಿಬಿಎಂಪಿ ಎಚ್ಚೆತ್ತುಕೊಂಡಿರಲಿಲ್ಲ ಎನ್ನುವುದು ಅಂಕಿ - ಅಂಶಗಳಿಂದ ಸಾಬೀತಾಗಿದೆ. ಬೆಂಗಳೂರಿನಲ್ಲಿ ಈ ವರ್ಷ ಪ್ರಾರಂಭಿದಿಂದಲೂ ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿವೆ.