ದಲಿತ ನಾಯಕರ ಸಭೆ|  ಎಚ್ಚೆತ್ತ ಕಾಂಗ್ರೆಸ್‌ ಹೈಕಮಾಂಡ್‌; ಪಕ್ಷದ ಆಂತರಿಕ ಅಸಮಾಧಾನ ಶಮನಕ್ಕೆ ಸಿಎಂಗೆ ಸೂಚನೆ?
x

ದಲಿತ ನಾಯಕರ ಸಭೆ| ಎಚ್ಚೆತ್ತ ಕಾಂಗ್ರೆಸ್‌ ಹೈಕಮಾಂಡ್‌; ಪಕ್ಷದ ಆಂತರಿಕ ಅಸಮಾಧಾನ ಶಮನಕ್ಕೆ ಸಿಎಂಗೆ ಸೂಚನೆ?


ಮಂಗಳವಾರ ನಡೆದ ದಲಿತ ನಾಯಕರ ಸಭೆ, ಚುನಾವಣೆ ನಂತರ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ʻಸೂಚನೆʼ, ರಾಜ್ಯ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಗೆ ಎಚ್ಚರಿಕೆಯ ಘಂಟೆಯಾಗಿ ಕೇಳಿಸಿದಂತಿದೆ. ಪಕ್ಷದೊಳಗಿನ ಆಂತರಿಕ ಅಸಮಾಧಾನವನ್ನು ಶಮನಗೊಳಿಸುವಂತೆ ಪಕ್ಷದ ರಾಷ್ಟ್ರೀಯ ನಾಯಕರಿಂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ಪಷ್ಟ ಸೂಚನೆ

ಕಳೆದ ಮಂಗಳವಾರ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಲೋಕೋಪಯೋಗಿ ಇಲಾಖೆಯ ಮಂತ್ರಿ ಸತೀಶ್‌ ಜಾರಕಿಹೊಳಿ ಯೋಜಿಸಿದ್ದʻ ಭೊಜನʼ ಸಭೆʼ, ಹಾಗೂ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಕಾಂಗ್ರೆಸ್‌ ಸರ್ಕಾರ ತನ್ನ ಭಾರಕ್ಕೆ ತಾನೇ ಕುಸಿಯುತ್ತದೆ ಎಂಬ ವಿರೋಧ ಪಕ್ಷಗಳ ಹೇಳಿಕೆ, ಕೇಂದ್ರದಲ್ಲಿ ʼಹೊಸʼ ಸರ್ಕಾರ ಅಧಿಕಾರವಹಿಸಿಕೊಂಡ ನಂತರ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ʻಸೂಚನೆʼ, ರಾಜ್ಯ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಗೆ ಎಚ್ಚರಿಕೆಯ ಘಂಟೆಯಾಗಿ ಕೇಳಿಸಿದಂತಿದೆ.

ಹೆಚ್ಚುತ್ತಿರುವ ಅಪರಾಧ ಪ್ರಕರಣ

ಈ ಬೆಳವಣಿಗೆಯೊಂದಿಗೆ, ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಹೆಣ್ಣು ಮಕ್ಕಳ ಭೀಕರ ಕೊಲೆ, ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಹೈ ಕಮಾಂಡ್‌, ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರುಗಳಿಗೆ ಸೂಚಿಸಿದೆ ಎನ್ನಲಾಗಿದೆ.

NCRB ಅಂಕಿ-ಅಂಶ

National Crime Records Bureau (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಮಹಿಳೆಯ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್‌ ಕ್ರೈಮ್‌ ಹಾಗೂ ಇತರೆ ಪ್ರಕಾರದ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್‌ ೩೦ ರವರೆಗೆ ರಾಜ್ಯದಲ್ಲಿ ಸುಮಾರು ೪೩೦ ಕೊಲೆ, ೧೯೮ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ.

ಈ ನಡುವೆ ರಾಜ್ಯದಲ್ಲಿ ಮಹಿಳೆಯರು ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ ಎಂದು ಆರೋಪಿಸಿರುವು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜಿನಾಮೆಗೆ ಆಗ್ರಹಿಸಿದ್ದಾರೆ. X ತಾಣದಲ್ಲಿ ತಮ್ಮ ಸಂದೇಶ ಹಂಚಿಕೊಂಡಿರುವ ವಿಜಯೇಂದ್ರ; “ಸುಭದ್ರತೆ ಹೆಸರಾಗಿದ್ದ ಕರ್ನಾಟಕವನ್ನು ಕಾಂಗ್ರೆಸ್‌ ಅಪರಾಧಿಗಳ ಅತ್ಯಾಚಾರಿಗಳ, ಕೊಲೆಗಡುಕರ ತಾಣವಾಗಿಸಿದೆ” ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು. ರಾಜ್ಯದ ಗೃಹ ಇಲಾಖೆಯ ಮೇಲೆ ಜನರು ತಮ್ಮ ನಂಬಿಕೆ ಕಳೆದುಕೊಂಡಿದ್ದಾರೆ. ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ವಿರೋಧ ಪಕ್ಷಗಳ ಕಟು ಟೀಕೆ

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸರಿಯಾದ ಕಾರಣ ಹುಡುಕುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ NCRB ವರದಿ ʼವರʼವಾಗಿ ಪರಣಮಿಸಿದೆ. ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇದ್ದ ಉತ್ತರ ಪ್ರದೇಶದಂತೆ ಕರ್ನಾಟಕ ಕಾಣುತ್ತಿದೆ. ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶ ಗೂಂಡಾ ರಾಜ್ಯವಾಗಿತ್ತು. ಈಗ ಅಲ್ಲಿ ಶಾಂತಿ ನೆಲೆಸಿದೆ. ಮಾಜಿ ಮುಖ್ಯಮಂತ್ರಿ, ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿ ಮತ್ತೆ ಬಿಜೆಪಿಗೆ ಹಿಂದಿರುಗಿರುವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಸರ್ಕಾರಕ್ಕೆ ಬಿಸಿ ತಟ್ಟಿದೆ. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಕಳವಳಗೊಂಡಿದೆ. ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣ ಪ್ರಕರಣದಲ್ಲಿ ಸರ್ಕಾರ ಅನುಸರಿಸಿದ ಕ್ರಮಗಳ ಬಗ್ಗೆ ಕೂಡ ಹೈಕಮಾಂಡ್‌ ಗೆ ಅಸಮಾಧಾನವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಗಮನಹರಿಸುವುದಲ್ಲದೆ, ಅಸಮಾಧಾನಗೊಂಡಿರುವ ಶಾಸಕರ ಸಭೆ ಕರೆದು ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರಿಗೆ ಸೂಚಿಸಿದೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸಭೆ

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪಕ್ಷದ ಹಿರಿಯ ನಾಯಕರ, ಶಾಸಕರ ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಪ್ರತಿಯೊಂದು ಪ್ರಕರಣದ ಬಗ್ಗೆ ವಿವರಗಳನ್ನು ಪಡೆದುಕೊಂಡು, ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ, ಎಂದು ಸಭೆಯಲ್ಲಿ ಭಾಗವಹಿಸಿದ ಶಾಸಕರೊಬ್ಬರು ʼ ದ ಫೆಡರಲ್-ಕರ್ನಾಟಕʼ ಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು, ʼಅತೃಪ್ತʼ ರಾಗಿದ್ದಾರೆ ಎನ್ನಲಾದ ಶಾಸಕರ, ಸಚಿವರ ಸಭೆಯನ್ನು ಶೀಘ್ರವಾಗಿ ಕರೆದು, ಸರ್ಕಾರದ ಭದ್ರತೆ ಬಗ್ಗೆ ಗಮನ ಹರಿಸಲಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಇದೇ ರೀತಿ ಬಿ. ಅರ್‌. ಪಾಟೀಲ್‌, ಮತ್ತು ಬಸವರಾಜ ರಾಯರಡ್ಡಿ ಸೇರಿದಂತೆ ಕೆಲವು ಅತೃಪ್ತ ಶಾಸಕರು, ಸರ್ಕಾರದ ವಿರುದ್ಧ ಮುಗಿ ಬಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ರೀತಿ ಸಭೆ ಕರೆದು, ಅವರ ಮುನಿಸನ್ನು ಶಮನಗೊಳಿಸಿದ್ದರು.

ಕಾಂಗ್ರೆಸ್‌ ಪಕ್ಷದ ವಾಕ್ತಾರು ಮತ್ತು ಸಂಪುಟದ ಸದಸ್ಯರಾದ ಪ್ರಿಯಾಂಕ್‌ ಖರ್ಗೆ, “ಶುಕ್ರವಾರದ ಸಭೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿತು. ಉದ್ದೇಶಪೂರ್ವಕವಾಗಿಯೇ ರಾಜಕೀಯ ವಿಷಯಗಳನ್ನು ಚರ್ಚಿಸಲಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ

ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿಯ ಪ್ರಯತ್ನಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ. ಅದು ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುವುದರ ಬಗ್ಗೆ ನಿಮಗೆ ಸಂದೇಹ ಬೇಡ” ಎಂದು ಮಾರ್ಮಿಕವಾಗಿ ಕುಟುಕಿದ್ದಾರೆ. ತಮ್ಮ ಪಕ್ಷದ ಬಗ್ಗೆ ಗಮನಹರಿಸುವಂತೆ ಹೇಳಿರುವ ಸಿದ್ದರಾಮಯ್ಯ; “ಲೋಕಸಭಾ ಚುನಾವಣೆಯಲ್ಲಿ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ಬಗ್ಗೆ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಇವರೆಲ್ಲ ಕಾರ್ಯಪ್ರವೃತ್ತರಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣಾ ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟವಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸರ್ಕಾರ ವರ್ಷ ಪೂರೈಸಿದ ಸಂಭ್ರಮ

ಈ ನಡುವೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಮೇ ೩೦ ಕ್ಕೆ ಒಂದು ವರ್ಷವಾಗಿದ್ದು, ಈ ಕಾರ್ಯಕ್ರಮ ನಡೆಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾದ ಹಿನ್ನೆಲೆಯಲ್ಲಿ ಜೂನ್‌ ತಿಂಗಳ ಮಧ್ಯ ಭಾಗದಲ್ಲಿ ಅದ್ಧೂರಿಯಾಗಿ ಅಧಿಕಾರದ ಒಂದು ವರ್ಷದ ಸಮಾವೇಶ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಸಮಾರಂಭ ಹೇಗೆ ನಡೆಯಲಿದೆ ಎನ್ನುವುದು ಜೂನ್‌ ೪ ರಂದು ಹೊರಬರಲಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಆಧರಿಸಿದೆ ಎನ್ನಲಾಗಿದೆ. ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದ ಮೊದಲ ವರ್ಷದ ಸಂಭ್ರಮಾಚರಣೆಯನ್ನು ಜೂನ್‌ ತಿಂಗಳಿಗೆ ಮುಂದೂಡಲಾಗಿದೆ” ಎಂದು ಪ್ರಿಯಾಂಕ್‌ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. “ಸರ್ಕಾರವನ್ನು ದುರ್ಬಲಗೊಳಿಸುವ ವಿರೋಧ ಪಕ್ಷಗಳ ಪ್ರಯತ್ನವನ್ನು ಎದುರಿಸಲು ಪಕ್ಷ ಮತ್ತು ಸರ್ಕಾರ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಸರ್ಕಾರವನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಲು ಸಾಧ್ಯವಿಲ್ಲ” ಎಂದರು ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಚಂದ್ರಶೇಖರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲ ಕ್ರಮಗಳನ್ನೂ ನಿರ್ದಾಕ್ಷಿಣ್ಯವಾಗ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿರುವುದಾಗಿ ಗೃಹ ಸಚಿವಾಲಯದ ಮೂಲಗಳು ಹೇಳುತ್ತವೆ. “ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆಗಿರಬಹುದಾದ ಲೋಪದೋಶಗಳ ಬಗ್ಗೆ ಸರ್ಕಾರ ಪುನರ್‌-ವಿಮರ್ಶೆ ನಡೆಸಿದೆ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ. “ಮಹಿಳೆಯರ ಕೊಲೆಯಂಥ ಪ್ರಕರಣಗಳ ಮರುಘಟಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಯ ಮೂಲವನ್ನು ಹುಡುಕಿ, ಬೇರು ಸಹಿತ ಕಿತ್ತುಹಾಕಬೇಕಿದೆ” ಎಂದು ಪರಮೇಶ್ವರ್‌ ಅವರು ಹೇಳಿದ್ದಾರೆ. ಅಂಜಲಿ ಅಂಬಿಗಾರ್‌ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಈ ಪ್ರಕರಣವನ್ನು ಬೇಧಿಸಲು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ಹುಬ್ಬಳ್ಳಿಗೆ ಕಳುಹಿಸುವುದಾಗಿ ಹೇಳಿರುವ ಅವರು, ಅಗತ್ಯ ಬಿದ್ದಲ್ಲಿ, ತಾವು ಸ್ವತಃ ಹುಬ್ಬಳ್ಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಮಡಿಕೇರಿಯ ಹದಿಹರೆಯದ ಬಾಲಕಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ತೀವ್ರಗೊಳಿಸಲು ವಿಶೇಷ ನ್ಯಾಯಾಲಯದ ವ್ಯವಸ್ಥೆ ಮಾಡುವುದಾಗಿ ಪತ್ರಕರ್ತರಿಗೆ ತಿಳಿಸಿ, ಸರ್ಕಾರ ಯಾವುದೇ ಅಪರಾಧ ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story