ದಲಿತ ನಾಯಕರ ʼಭೋಜನʼ ಸಭೆ; ರಾಜಕೀಯ ಪ್ರಾತಿನಿಧ್ಯ ಪ್ರಶ್ನೆ ಮತ್ತೆ ಮುನ್ನೆಲೆಗೆ
x

ದಲಿತ ನಾಯಕರ ʼಭೋಜನʼ ಸಭೆ; ರಾಜಕೀಯ ಪ್ರಾತಿನಿಧ್ಯ ಪ್ರಶ್ನೆ ಮತ್ತೆ ಮುನ್ನೆಲೆಗೆ


ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ, ದಲಿತ ಮುಖ್ಯಮಂತ್ರಿ ಕನಸು ಚಿಗುರೊಡೆಯುತ್ತದೆ. ಶತಮಾನಗಳಿಂದ ತುಳಿತಕ್ಕೊಳಗಾಗಿ, ಕರ್ನಾಟಕದ ರಾಜಕೀಯದಲ್ಲಿ ಎರಡು ಬಲಿಷ್ಠ ಸಮುದಾಯಗಳ ಮೇಲುಗೈನಿಂದಾಗಿ ತಮ್ಮ ಕೈ ಜಾರುತ್ತಿರುವ ಮುಖ್ಯಮಂತ್ರಿ ಸ್ಥಾನವನ್ನು ದಕ್ಕಿಸಿಕೊಳ್ಳುವ ಪ್ರಯತ್ನವನ್ನು ದಲಿತ ಸಮುದಾಯ ಕೈ ಬಿಡುವುದಿಲ್ಲ. ರಾಜಕೀಯ ಶಕ್ತಿ ಇದ್ದರೂ, ʼಸೂಕ್ತʼ ರಾಜಕೀಯ ಪ್ರಾತಿನಿಧ್ಯ ದೊರೆಯದ ಕಾರಣ, ದಲಿತ ನಾಯಕರು ತಮ್ಮ ಪಕ್ಷದ ಮೇಲೆ ಇನ್ನಿಲ್ಲದ ಒತ್ತಡ ತರಲು ಪ್ರಯತ್ನ ನಡೆಸುವುದು ಅನೂಚಾನವಾಗಿ ನಡೆದುಕೊಂಡೇ ಬಂದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ ಆರೇ ತಿಂಗಳಲ್ಲಿ ಪಕ್ಷದೊಳಗೆ ನಾಯಕತ್ವದ ಬಿಕ್ಕಟ್ಟು ತಲೆ ಎತ್ತಿತ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ನೆಲೆ-ಬೆಲೆ ಪಡೆದುಕೊಂಡಿತ್ತು. ಅದರಲ್ಲೂ ದಲಿತ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹೆಸರುಗಳು ಮುಂಚೂಣಿಯಲ್ಲಿದ್ದವು.

ಆದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಗೌರವ ತರಲು ಹಾಗೂ, ಅದಕ್ಕೆ ಅಗತ್ಯವಾದ ಸಂಖ್ಯೆಯಷ್ಟು ಸಂಸದರನ್ನು ಗೆಲ್ಲಿಸಿಕೊಂಡು ಬರಲು ಟೊಂಕ ಕಟ್ಟಿ ನಿಂತಿರುವ ಸಂದರ್ಭದಲ್ಲಿ, ಸಮುದಾಯಗ್ ಪ್ರಶ್ನೆ ಎತ್ತಿ ಅವರಿಗೆ ಮುಜುಗರ ಉಂಟುಮಾಡಬಾರದೆಂಬ ಕಾರಣದಿಂದ ತಣ್ಣಗಿದ್ದ, ದಲಿತರ ಪ್ರಾತಿನಿಧ್ಯದ ಪ್ರಶ್ನೆ ಮತ್ತೆ ರಾಜಕೀಯ ಚರ್ಚೆಯ ಮುನ್ನೆಲೆಗೆ ಬಂದಂತೆ ತೋರುತ್ತಿದೆ.

ಕಳೆದ ಮಂಗಳವಾರ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಲೋಕೋಪಯೋಗಿ ಇಲಾಖೆಯ ಮಂತ್ರಿ ಸತೀಶ್‌ ಜಾರಕಿಹೊಳಿ ಅವರು ಒಂದು ʻ ಭೊಜನʼ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರೂ ಭಾಗಿಯಾಗಿದ್ದರು. ಈ ಇಬ್ಬರು ಹಿರಿಯ ನಾಯಕರೊಂದಿಗೆ ಜಾರಕಿಹೊಳಿ ಮತ್ತು ಪರಮೇಶ್ವರ ಅವರನ್ನು ಗೌರವಿಸುವ ಕೆಲವು ಪ್ರಮುಖ ವಿಧಾನ ಸಭೆಯ ಸದಸ್ಯರು ಹಾಗೂ ಅತಿ ಮುಖ್ಯರೆನ್ನಿಸಿಕೊಂಡ ಕೆಲವರು ಪಾಲ್ಗೊಂಡಿದ್ದರು. ಈ ʻಭೋಜನʼ ಸಭೆಯಲ್ಲಿ, “ಸರ್ಕಾರದಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನದ ಬಗ್ಗೆ ಚರ್ಚೆ” ನಡೆಯಿತೆಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

ಸಭೆ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳುವ ಸತೀಶ್‌ ಜಾರಕಿಹೊಳಿ; “ನಾವು ಒಟ್ಟಿಗೆ ಊಟ ಮಾಡಿದ್ದು ನಿಜ. ಆದರೆ ಅಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ, ಅದರಿಂದ ದೇಶದ ರಾಜಕಾರಣದಲ್ಲಾಗುವ ಪಲ್ಲಟಗಳ ಕುರಿತು ಮಾತನಾಡಿದೆವು” ಎನ್ನುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪರಮೇಶ್ವರ ಕೂಡ: “ಅಂಥದ್ದೇನೂ ಇಲ್ಲ. ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ. ರಾಜ್ಯ ಕಾಂಗ್ರೆಸ್‌ ಪಕ್ಷ ಅತಿಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ. ಹಾಗಾಗಿ ಈ ಭೋಜನ ಸಭೆಯಲ್ಲಿ ಆ ಕುರಿತು ಒಂದಷ್ಟು ಮಾತುಕತೆ ನಡೆಯಿತು” ಎಂದು ಹೇಳಿ ಈ ಭೋಜನ ಸಭೆಗೆ ಅಂಥ ಮಹತ್ವವೇನಿಲ್ಲ ಎಂಬುದನ್ನು ಸೂಚಿಸಿದ್ದಾರೆ.

ಆದರೆ, ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಹೆಚ್ಚಿನ ಸ್ಥಾನಮಾನದ ಬೇಡಿಕೆ ಇಟ್ಟಿರುವು ಪರಮೇಶ್ವರ್‌ ಮತ್ತು ಜಾರಕಿಹೊಳಿ ಅವರ ಈ ಭೋಜನ ಸಭೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎನ್ನುತ್ತವೆ ರಾಜ್ಯ ಕಾಂಗ್ರೆಸ್‌ ಪಕ್ಷದ ಮೂಲಗಳು. “ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ” ಎಂದು ಇನ್ನೊಬ್ಬ ಕಾಂಗ್ರೆಸ್‌ ನಾಯಕರು ಈ ಕುರಿತು ಮಾರ್ಮಿಕವಾಗಿ ಉತ್ತರಿಸುತ್ತಾರೆ.

ಆದರೆ ವಾಸ್ತವ ಸಂಗತಿ ಬೇರೆಯೇ ಇದೆ ಎನ್ನುವುದು ಪಕ್ಷದೊಳಗಿನ ಧ್ವನಿ. 2011ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ 17.5 ಪ್ರತಿಶತದಷ್ಟು ದಲಿತರಿದ್ದು, ಅವರಲ್ಲೂ ಪ್ರಬಲ ರಾಜಕೀಯ ನಾಯಕರು ಇದ್ದಾರೆ. ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯ ಸೋರಿಕೆಯಾದ ಭಾಗದಲ್ಲಿ, ದಲಿತರು ಈಗ ರಾಜ್ಯದ ಜನಸಂಖ್ಯೆಯ 19.5 ಪ್ರತಿಶತ, ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ; ಶೇ 14 ಮತ್ತು 11 ರಷ್ಟು ಇದ್ದಾರೆ ಎಂದು ಹೇಳಲಾಗಿದೆ.

ಆದರೆ ಈವರೆಗೂ ದಲಿತ ಸಮುದಾಯದಿಂದ ಯಾರೊಬ್ಬರೂ ಮುಖ್ಯಮಂತ್ರಿಯಾಗಿಲ್ಲ. ದಲಿತರಿಗೆ ಸಿಎಂ ಸ್ಥಾನ ನೀಡಲು ಹಿಂದೇಟು ಹಾಕಲು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ.

ಲಿಂಗಾಯತರು ಮತ್ತು ಒಕ್ಕಲಿಗರು ದಶಕಗಳಷ್ಟು ಹಳೆಯದಾದ ಜಾತಿ ಗಣತಿಯನ್ನು ಉಲ್ಲೇಖಿಸಿ ಕಳೆದ ಆರು ದಶಕಗಳಿಂದ ಉನ್ನತ ಹುದ್ದೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ, ಇಬ್ಬರು ಬ್ರಾಹ್ಮಣ ಸಮುದಾಯದ ನಾಯಕರಾದ ಆರ್ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಕೂಡ ಮುಖ್ಯಮಂತ್ರಿಗಳಾಗಿದ್ದರು. ಲಿಂಗಾಯತ-ಒಕ್ಕಲಿಗರೇ ಮುಖ್ಯಮಂತ್ರಿಯಾಗಬೇಕು ಎನ್ನುವ ಅಲಿಖಿತ ನಿಯಮವನ್ನು ಮುರಿದಿದ್ದು ಇತರೆ ಹಿಂದುಳಿದ ವರ್ಗ (ಒಬಿಸಿ)ಯನ್ನು ಪ್ರತಿನಿಧಿಸುವ ಸಿದ್ದರಾಮಯ್ಯ.

ಕಳೆದ ಮೇ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತ ನಾಯಕರು, ವಿಶೇಷವಾಗಿ ಡಾ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಭಾರಿ ಪೈಪೋಟಿಯಿಂದಾಗಿ ದಲಿತ ಸಿಎಂ ಕೂಗು ಗಟ್ಟಿಯಾಗಿ ಕೇಳಿಬರಲಿಲ್ಲ. ಆದರೆ ದಲಿತ ಮುಖ್ಯಮಂತ್ರಿಯ ಕೂಗು ಮಾತ್ರ ನಿಂತಿಲ್ಲ. ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ಜಾತಿಗಣತಿಯನ್ನು ಒಪ್ಪಿಕೊಂಡರೆ ಮತ್ತು ಸೋರಿಕೆಯಾದ ವರದಿಯ ದತ್ತಾಂಶವು ಸರಿ ಎಂದು ಸಾಬೀತಾದರೆ, ದಲಿತರು ಇತರ ಸಮುದಾಯಗಳಿಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಹಕ್ಕು ಪ್ರತಿಪಾದನೆ ಮಾಡುವಲ್ಲಿ ಯಾವುದೇ ತಪ್ಪಿಲ್ಲ, ಎನ್ನುವ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಸರ್ಕಾರದ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಲ್ಪನೆಯ ತಾರ್ಕಿಕತೆಯ ಹಿನ್ನೆಲೆಯಲ್ಲಿ ಈ ಸಾಧ್ಯತೆಯಿಂದ ದಲಿತ ಮುಖಂಡ ಪರಮೇಶ್ವರ್ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರಿಗೆ ಬಹಳ ಆಪ್ತರಾಗಿದ್ದ ಬಿ.ಕೆ. ಹರಿಪ್ರಸಾದ್ ಅವರು ಇತ್ತೀಚೆಗೆ ದಲಿತರ ವಿಚಾರ ಪ್ರಸ್ತಾಪಿಸಿ ಡಾ ಪರಮೇಶ್ವರ್ ಪರ ವಕಾಲತ್ತು ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸರ್ಕಾರದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಕಣಕ್ಕೆ ಇಳಿದಿದ್ದಾರೆ. ಚುನಾವಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ನಿರ್ದೇಶನ ನೀಡಿದರೆ ಮುಖ್ಯಮಂತ್ರಿ ಸ್ಥಾನಕ್ಕೇರಲು ನನ್ನ ಅಭ್ಯಂತವೇನಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದನ್ನೂ ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು.

ಇದೇ ರೀತಿ ದಲಿತರು, ಒಬಿಸಿಗಳು, ವಿಶೇಷವಾಗಿ ವಾಲ್ಮೀಕಿ ಸಮುದಾಯವೂ ಅಸಮಾಧಾನಗೊಂಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಉನ್ನತ ಸ್ಥಾನ ನೀಡುವಂತೆ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಕೆಲವು ದಿನಗಳ ಹಿಂದೆ ಸರ್ಕಾರವನ್ನು ಕಾಂಗ್ರೆಸ್‌ ಪಕ್ಷವನ್ನು ಒತ್ತಾಯಿಸಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಈ ಬಗ್ಗೆ ಸತೀಶ್‌ ಜಾರಕೀಹೊಳಿ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ, ಈ ʻ ಭೋಜನʼ ಸಭೆಗೆ ಮಹತ್ವ ಬರಲು ಮತ್ತೊಂದು ಪ್ರಮುಖ ಕಾರಣವೆಂದರೆ, ಲೋಕಸಭಾ ಚುನಾಣೆಯ ಫಲಿತಾಂಶ ಪ್ರಕಟವಾದ ನಂತರ ಕರ್ನಾಟಕದ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ನೀಡಿರುವ ಹೇಳಿಕೆ.

ಸತಾರಾದಲ್ಲಿ ನಡೆದ ಸಭೆಯೊಂದರಲ್ಲಿ ಶಿಂಧೆ, ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಲೋಕಸಭಾ ಚುನಾವಣೆಯ ನಂತರ ಕುಸಿಯಲಿದೆ. ಮಹಾರಾಷ್ಟ್ರದಲ್ಲಿ ನಡೆದಂತೆ ರಾಜಕೀಯ ಬೆಳವಣಿಗೆಯೊಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ನಂತರ ನಡೆಯಲಿದೆ ಎಂದು ಹೇಳಿರುವ ವಿಡಿಯೋವೊಂದು ವೈರಲ್‌ ಆದ ಹಿನ್ನೆಲೆಯಲ್ಲಿ, ಈ ʻಭೋಜನʼ ರಾಜಕಾರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ.

Read More
Next Story