ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಂಚ ವಿಭಜನೆ?
x
ಬಿಬಿಎಂಪಿ ವಿಭಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಂಚ ವಿಭಜನೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜನೆ ಮಾಡುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ 1.50 ಕೋಟಿಗೂ ಹೆಚ್ಚು ಜನರಿದ್ದು, ಇಷ್ಟು ಜನರಿಗೆ ಮೂಲಸೌಕರ್ಯ ಕಲ್ಪಿಸಲು ಒಂದೇ ಮಹಾನಗರ ಪಾಲಿಕೆ ಇದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದಲೂ ಬಿಬಿಎಂಪಿ ವಿಭಜನೆಯ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, ಅದು ತಾರ್ಕಿಕ ಅಂತ್ಯ ಕಂಡಿಲ್ಲ. ಈ ಬಾರಿ 5 ಅಥವಾ 7 ಪಾಲಿಕೆಗಳ ರಚನೆಯ ಬಗ್ಗೆ ಚರ್ಚೆ ನಡೆದಿದೆ.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜನೆ ಮಾಡುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ 1.50 ಕೋಟಿಗೂ ಹೆಚ್ಚು ಜನರಿದ್ದು, ಇಷ್ಟು ಜನರಿಗೆ ಮೂಲಸೌಕರ್ಯ ಕಲ್ಪಿಸಲು ಒಂದೇ ಮಹಾನಗರ ಪಾಲಿಕೆ ಇದೆ. ಅಲ್ಲದೇ ಬಿಬಿಎಂಪಿಯೊಂದಿಗೆ ಬೆಂಗಳೂರಿನಲ್ಲಿ ಬಿಡಿಎ, ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಇವೆ. ಆದರೆ, ಈ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನಿರ್ದಿಷ್ಟವಾಗಿ ಒಂದು ಇಲಾಖೆ ಇಲ್ಲ. ಹೀಗಾಗಿ, ಈಗ ಪಾಲಿಕೆಯನ್ನು ವಿಭಜನೆ ಮಾಡಿದ ನಂತರ, ಎಲ್ಲ ಪಾಲಿಕೆ ಹಾಗೂ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಹ ಯೋಜನೆ ರೂಪಿಸಲಾಗುತ್ತಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದಲೂ ಬಿಬಿಎಂಪಿ ವಿಭಜನೆಯ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, ಅದು ತಾರ್ಕಿಕ ಅಂತ್ಯ ಕಂಡಿಲ್ಲ.

ಬೆಂಗಳೂರಿನ ಪ್ರಮುಖ ಸಮಸ್ಯೆಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯು 700 ಚದರ ಕಿ.ಮೀ ಇದೆ. ಪ್ರಸಕ್ತ (ಅಧಿಕೃತವಾಗಿ) 198 ವಾರ್ಡ್‌ಗಳಿವೆ. ಕಳೆದ ಮೂರು ವರ್ಷಕ್ಕೂ ಹೆಚ್ಚು ಅವಧಿಯಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಪಾಲಿಕೆಯ ಸದಸ್ಯರು ಇಲ್ಲದೆ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ. ಬೆಂಗಳೂರಿನಲ್ಲಿ ಪ್ರಮುಖವಾಗಿ ರಸ್ತೆಗುಂಡಿ, ಕಸ ವಿಲೇವಾರಿ, ರಸ್ತೆ ಹಾಗೂ ಅಂಡರ್‌ಪಾಸ್‌ಗಳ ನಿರ್ವಹಣೆ ಹಾಗೂ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ಇರುವುದರಿಂದ ಕಾಮಗಾರಿಗಳ ನಿರ್ವಹಣೆಯಲ್ಲೂ ಲೋಪವಾಗುತ್ತಿದ್ದು, ಜನ ಸಮಸ್ಯೆ ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ 7 ಪಾಲಿಕೆ ರಚನೆಗೆ ಅವಕಾಶ

ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ಕಾರ್ಯನಿರ್ವಹಣೆಯ ಬಗ್ಗೆ ಮೊದಲಿನಿಂದಲೂ ಜನರಲ್ಲಿ ಅಸಮಾಧಾನವಿದೆ. ಇದೀಗ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ಬೃಹತ್ ಬೆಂಗಳೂರು ಆಡಳಿತ ಮಸೂದೆ (Greater Bangalore Governance Bill)ಯನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜನೆ ಮಾಡುವ ಪ್ರಸ್ತಾವನೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ. ಇದೀಗ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯು 700 ಚದರ ಕಿ.ಮೀ ಇದ್ದು, ಇದಕ್ಕೆ 150 ರಿಂದ 200 ಚದರ ಕಿ.ಮೀ ಸೇರ್ಪಡೆ ಮಾಡಿ, ವಾರ್ಡ್‌ಗಳ ಸಂಖ್ಯೆಯನ್ನು ಒಟ್ಟಾರೆ 400ಕ್ಕೆ ಹೆಚ್ಚಳ ಮಾಡಬಹುದಾಗಿದೆ. ಈ ಮಸೂದೆಯ ಪ್ರಕಾರ 25 ಸಾವಿರದಿಂದ 30 ಸಾವಿರದ ವರೆಗೆ ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್‌ಗಳ ವಿಂಗಡಣೆ ಮಾಡಲಾಗುತ್ತದೆ. ಅಲ್ಲದೇ 3,5 ಅಥವಾ 7 ಪಾಲಿಕೆಗಳನ್ನು ರಚಿಸಲು ಅವಕಾಶ ಇದೆ. ಈ ರೀತಿ ವಿಭಜನೆಯಾಗುವ ಪಾಲಿಕೆಗಳ ನಿರ್ವಹಣೆಯನ್ನು ಮುಖ್ಯಪಾಲಿಕೆ ನೋಡಿಕೊಳ್ಳುತ್ತದೆ. ಇದರ ಮೇಲೆ (ಮೇಲ್ವಿಚಾರಣೆ) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬರಲಿದ್ದು, ಈ ಪ್ರಾಧಿಕಾರದಲ್ಲಿ ಬೆಂಗಳೂರಿನ ಎಲ್ಲ ಇಲಾಖೆಗಳು ಬರಲಿವೆ. ಇದು ಮೂರು ಹಂತದ (Tritier concept) ನಿರ್ವಹಣೆಯಾಗಿರಲಿದೆ ಎಂದು ತಿಳಿಸಿದರು.

ಹೊರವಲಯದಲ್ಲಿರುವ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ನೆಲಮಂಗಲ ವ್ಯಾಪ್ತಿಯ ಕೆಲವು ನಿರ್ದಿಷ್ಟ ಪ್ರದೇಶಗಳು ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಗೆ ಸೇರಿಲ್ಲ. ಹೀಗಾಗಿ ಈ ಪ್ರದೇಶಗಳನ್ನು ಸಹ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ಬೆಂಗಳೂರಿನ ಕಾಂಗ್ರೆಸ್ ಶಾಸಕರೊಂದಿಗೆ ಬೃಹತ್ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ 225 ವಾರ್ಡ್‌ಗಳಿಗೆ (ವಿಂಗಡಣೆ ನಂತರ ಸೇರ್ಪಡೆಯಾದ ಹೊಸ ವಾರ್ಡ್‌ಗಳಿಗೆ) ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು.


ಸರ್ಜಾಪುರ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನ ಹೊರ ವಲಯದ ಪ್ರದೇಶಗಳಲ್ಲು ಐಟಿ – ಬಿಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೆಚ್ಚಿನ ಆದಾಯವಿರುವ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವುದು ಪುರಸಭೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ ಐದು ಪಾಲಿಕೆಗಳನ್ನಾಗಿ ವಿಂಗಡಿಸಲು ಪ್ರದೇಶ ಪುನರ್ ವಿಂಗಡಣೆ ಸಮಿತಿ ಶಿಫಾರಸು ಮಾಡಿದೆ. ವಿಭಜನೆ ಮತ್ತು ವಿವರಣೆಗಾಗಿ ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಐದು ಭಾಗಗಳಾಗಿ ವಿಂಗಡಿಸಿ ಮೀಸಲಾತಿ ನಿರ್ಧರಿಸುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಬಗ್ಗೆಯೂ ಚರ್ಚಿಸಲಾಯಿತು. ಈ ಮೂಲಕ ಅಧಿಕಾರ ವಿಕೇಂದ್ರೀಕರಣವನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯೂ ಇದೆ.

ಜನರ ಹಿತ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ: ರಾಮಲಿಂಗಾ ರೆಡ್ಡಿ

ʻಜನರ ಹಿತ ದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ನಿರ್ವಹಣೆಗಾಗಿ ಬಿಬಿಎಂಪಿಯನ್ನು ವಿಭಜನೆ ಮಾಡಲು ಚಿಂತನೆ ನಡೆದಿದೆ. ಇಷ್ಟು ದೊಡ್ಡ ಪಾಲಿಕೆಯನ್ನು ಒಬ್ಬರೇ ಆಯುಕ್ತರು ನಿರ್ವಹಿಸುವುದು ಕಷ್ಟವಿದೆ. ಹೀಗಾಗಿ, ಬಿಬಿಎಂಪಿಯ ವಿಭಜನೆಯ ಮಾಡುವ ಪ್ರಸ್ತಾವನೆ ಇದೆʼ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಈ ಸಂಬಂಧ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಈ ಹಿಂದೆಯೂ ಬಿಬಿಎಂಪಿ ವಿಭಜನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ, ಬಿಜೆಪಿಯ ನಾಯಕರು ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಅವರಿಗೆ ಚುನಾವಣೆಯಷ್ಟೇ ತಿಳಿದಿದೆ. ಜನರ ಹಿತದ ಬಗ್ಗೆ ಅವರು ವಿಚಾರ ಮಾಡುವುದಿಲ್ಲʼ ಎಂದು ದೂರಿದರು.

ʻಬಿಬಿಎಂಪಿ ವಿಭಜನೆ ಮಾಡುವ ಪ್ರಸ್ತಾವನೆಯನ್ನು ಹೈಕೋರ್ಟ್‌ ಮುಂದೆ ಇರಿಸಲಿದ್ದೇವೆ. ಕೋರ್ಟ್‌ನ ನಿರ್ದೇಶನದಂತೆ ಮುಂದುವರಿಯಲಿದ್ದೇವೆ. ವಿಭಜನೆ ಮಾಡಿ ಬಿಬಿಎಂಪಿ ಚುನಾವಣೆ (ಎಲ್ಲ ಪಾಲಿಕೆಗಳಿಗೂ) ನಡೆಸುವುದು ಅಥವಾ ಚುನಾವಣೆಯ ನಂತರವೂ ವಿಭಜನೆ ಮಾಡುವುದಕ್ಕೂ ಅವಕಾಶ ಇದೆ. ಹೊಸ ಪ್ರದೇಶಗಳನ್ನೂ ಸಹ ಸೇರಿಸಬಹುದು. ಎರಡು ಅಥವಾ ಮೂರು ಪಾಲಿಕೆಗಳನ್ನು ಮಾಡಲು ಅವಕಾಶ ಇದೆʼ ಎಂದು ಹೇಳಿದರು.

ವಿಭಜನೆ ಮಾಡುವುದು ಉತ್ತಮ

ʻಈ ಹಿಂದಿನಿಂದಲೂ ಬಿಬಿಎಂಪಿ ಆಡಳಿತ ವಿಕೇಂದ್ರೀಕರಣ ಮಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ವಿಭಜನೆ ಮಾಡುವುದರಿಂದ ಸ್ಥಳೀಯವಾಗಿ ಆಸ್ತಿ ಹಾಗೂ ಅದಕ್ಕೆ ತೆರಿಗೆ ವಿಧಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸ್ಥಳೀಯವಾಗಿ ಜನರಿಗೆ ಅಗತ್ಯವಿರುವ ಸೇವೆಗಳ ಬಗ್ಗೆ ತಿಳಿಯಲಿದೆʼ ಎಂದು ಹವಾಮಾನ ನೀತಿ ಹಾಗೂ ಜಲ ತಜ್ಞ ಡಾ. ಕ್ಷಿತಿಜ್ ಅರಸ್ ಹೇಳಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಬಿಬಿಎಂಪಿಯ ಆಡಳಿತ ವಿಕೇಂದ್ರೀಕರಣ ಮಾಡುವುದರಿಂದ ಸ್ಥಳೀಯರಿಗೆ ಯಾವ ಅಧಿಕಾರಿ ಇದ್ದಾರೆ, ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ಸಿಗಲಿದೆ. ಅಲ್ಲದೇ ವಾರ್ಡ್ ಕಮಿಟಿಯ ಸದಸ್ಯರಿಗೂ ಅವರ ಪ್ರಸ್ತಾವನೆಯನ್ನು ಸ್ಥಳೀಯ ಹಂತದಲ್ಲೇ ಮಂಡಿಸಿ, ಬಗೆಹರಿಸಿಕೊಳ್ಳಬಹುದಾಗಿದೆʼ ಎಂದರು.

ಬಿಬಿಎಂಪಿ ವಿಭಜನೆಯಿಂದ ಮತ್ತಷ್ಟು ಗೊಂದಲ

ʻಬಿಬಿಎಂಪಿಯ ವಿಭಜನೆಯಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗಲಿದೆʼ ಎಂದು ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅಭಿಪ್ರಾಯಪಟ್ಟರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಬಿಬಿಎಂಪಿಯ ಪುನರ್ ರಚನಾ ಸಮಿತಿಯ ಸಲಹೆಯಂತೆ ಬಿಬಿಎಂಪಿಯನ್ನು ವಿಭಜಿಸಲು ಮಾಡುವುದು ಸೂಕ್ತವಲ್ಲ. ಬಿಬಿಎಂಪಿಯನ್ನು ಪ್ರತ್ಯೇಕ ಪಾಲಿಕೆಗಳಾಗಿ ವಿಭಜಿಸುವುದರಿಂದ ಪ್ರತ್ಯೇಕ ಪಾಲಿಕೆಗಳ ನಡುವೆ ಸಮನ್ವಯದ ಕೊರತೆ ಸೃಷ್ಟಿಯಾಗಲಿದೆ. ಪ್ರತಿಯೊಂದು ಪಾಲಿಕೆಯಲ್ಲೂ ವಿವಿಧ ಪಕ್ಷದ ಮೇಯರ್ ಆಯ್ಕೆಯಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಬಿಬಿಎಂಪಿ ಕಾಯ್ದೆ 2020ರ ಅನುಸಾರ ವಲಯದ ಕಮಿಷನರ್ ನೇತೃತ್ವದ ವಲಯ ಸಮಿತಿಗಳನ್ನು ರಚಿಸಬೇಕು. ಈ ಸಮಿತಿ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಯನ್ನು ಮುಂದುವರಿಸುವುದೇ ಸೂಕ್ತʼ ಎಂದರು.

ಬಿಬಿಎಂಪಿ ಪ್ರದೇಶವಾರು ವಿಭಜನೆ ಸಾಧ್ಯತೆ ಇರುವ ಪ್ರದೇಶಗಳು

* ಪಶ್ಚಿಮ: ರಾಜಾಜಿನಗರ, ಮಲ್ಲೇಶ್ವರಂ ಮತ್ತು ವಿಜಯನಗರದಂತಹ ಪ್ರದೇಶಗಳನ್ನು ಒಳಗೊಂಡಿರಲಿದೆ.

* ಪೂರ್ವ: ವೈಟ್‌ಫೀಲ್ಡ್‌, ಮಾರತಹಳ್ಳಿ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರದೇಶಗಳು ಈ ವಲಯದ ಅಡಿಯಲ್ಲಿ ಬರಲಿವೆ.

* ಉತ್ತರ: ಹೆಬ್ಬಾಳ, ಯಲಹಂಕ, ಜಕ್ಕೂರು ಮತ್ತು ದೇವನಹಳ್ಳಿಯನ್ನು ಸೇರಿಸುವ ಸಾಧ್ಯತೆ ಇದೆ.

* ದಕ್ಷಿಣ: ಜಯನಗರ, ಬಸವನಗುಡಿ, ಜೆಪಿ ನಗರ, ಮತ್ತು ಬನ್ನೇರುಘಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಈ ವಲಯದಲ್ಲಿ ಸೇರ್ಪಡೆ ಆಗಲಿದೆ.

* ಕೇಂದ್ರ: ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಶಿವಾಜಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಈ ವಲಯಕ್ಕೆ ಬರುವ ಸಾಧ್ಯತೆ ಇದೆ.

ಬ್ರ್ಯಾಂಡ್‌ ಬೆಂಗಳೂರು…

ರಾಜ್ಯ ಕಾಂಗ್ರೆಸ್ ಸರ್ಕಾರವು ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಬೆಂಗಳೂರಿನ ವಿವಿಧ ಇಲಾಖೆಗಳನ್ನು ಒಂದೇ ಸೂರಿನಡಿ ತಂದು, ಬೆಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ "ಬ್ರ್ಯಾಂಡ್‌ ಬೆಂಗಳೂರು" ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದರ ಮೂಲಕ ಬೆಂಗಳೂರಿನ ಮೂಲಸೌಕರ್ಯ, ಪರಿಣಾಮಕಾರಿ ನಗರ ಯೋಜನೆ, ಸುಸ್ಥಿರ ಸೌಲಭ್ಯಗಳು ಮತ್ತು ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳು ಸೇರಿವೆ.

ಸೋಲಿನ ಬೆನ್ನಲ್ಲೇ ವಿಭಜನೆಯ ಪ್ರಸ್ತಾವನೆ

ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸೋಲುತ್ತಿದ್ದಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ಮಹಾನಗರ ಪಾಲಿಕೆಗಳಾಗಿ ವಿಂಗಡಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ಒಟ್ಟು 29 ವಿಧಾನಸಭಾ ಕ್ಷೇತ್ರಗಳಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 15 ಮತ್ತು ಕಾಂಗ್ರೆಸ್ 14 ಕ್ಷೇತ್ರಗಳನ್ನು ಗೆದ್ದಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಗಳಿಕೆ ಹೆಚ್ಚಿದ್ದರೂ, ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2015ರಲ್ಲಿ 198 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ 76, ಬಿಜೆಪಿ 100, ಜೆಡಿಎಸ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2018ರ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸುವ ಚಿಂತನೆ ನಡೆಸಿದ್ದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಅದೇ ಸೂತ್ರವನ್ನು ಸರ್ಕಾರದ ಮಟ್ಟದಲ್ಲಿ ರೂಪಿಸಲಾಗುತ್ತಿದ್ದು, ಕೋರ್ಟ್ ಅನುಮತಿ ನೀಡಿದರೆ ಮಾತ್ರ ಇದು ಕಾರ್ಯರೂಪಕ್ಕೆ ಬರಲಿದೆ.

ಕೋರ್ಟ್ ತೀರ್ಪುನ ಮೇಲೆ ಮುಂದಿನ ನಡೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಂಬಂಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿ, ವಿಚಾರಣೆ ನಡೆದಿದೆ. ವಾರ್ಡ್‌ಗಳ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಸೇರಿದಂತೆ ಹಲವು ವಿಷಯಗಳು ಇತ್ಯಾರ್ಥವಾಗಬೇಕಿದೆ. ಎಲ್ಲವೂ ಇತ್ಯಾರ್ಥವಾಗಿ ಇದೇ ವರ್ಷ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದೀಗ ಪಾಲಿಕೆಯ ವಿಭಜನೆ ಪ್ರಕ್ರಿಯೆ ಪ್ರಾರಂಭವಾದರೆ, ಮತ್ತೆ 6ರಿಂದ 8 ತಿಂಗಳು ಪಾಲಿಕೆ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಆದರೆ, ಪಾಲಿಕೆ ವಿಭಜನೆ ಅಥವಾ ಯಥಾಪ್ರಕಾರ ಮುಂದುವರಿಯಬೇಕೇ ಎನ್ನುವುದು ಕೋರ್ಟ್‌ ತೀರ್ಪಿನ ಮೇಲೆ ನಿರ್ಧಾರವಾಗಲಿದೆ.

Read More
Next Story