
ಲಕ್ಷಾಂತರ ಹದಿಹರೆಯದ ಪ್ರೇಮಕಾಂಕ್ಷೆಗೆ ಜೀವ ತುಂಬಿದ 1990ರ ದಶಕದ ಕ್ರಶ್, ಚಿರಯವ್ವನಿ ಶಾರೂಖ್-ಗೆ ಆರವತ್ತು
ಬಾಲಿವುಡ್ ಬಾದಷಾ ಶಾರೂಖ್ ಖಾನ್ ಅವರಿಗೆ ಆರವತ್ತು ತುಂಬಿದೆ. 1990ರ ದಶಕದಲ್ಲಿ ಅವರ ಚಿತ್ರಗಳನ್ನು ನೋಡುತ್ತ ಬೆಳೆದವರಿಗೆ ಈಗ ಥಿಯೇಟರ್ ಗಳಿಗೆ ಮರಳಿರುವ ಏಳು ಚಿತ್ರಗಳನ್ನು ಮತ್ತೊಮ್ಮೆ ವೀಕ್ಷಿಸಿದರೆ ತಮ್ಮದೇ ಜೀವನದ ಪಡಿಯಚ್ಚನ್ನು ಕಂಡಂತೆ ಭಾಸವಾದರೆ ಅಚ್ಚರಿಯಿಲ್ಲ...
1990ರ ದಶಕದಲ್ಲಿ ಬೆಳೆದ ನನಗೆ, ಶಾರೂಖ್ ಖಾನ್ ನನ್ನ ಜೀವನದ ಕಥೆಯನ್ನು ಪ್ರವೇಶಿಸಿದ ನಿಖರವಾದ ಕ್ಷಣವನ್ನು ಗುರುತಿಸಬಲ್ಲೆ. 1989ರಲ್ಲಿ, ಅಸ್ತವ್ಯಸ್ತವಾದ ಕೂದಲು ಮತ್ತು ಹಣೆಯನ್ನು ಮುಚ್ಚಿದ ಬ್ಯಾಂಗ್ಸ್, ಮುಗುಳ್ನಕ್ಕರೆ ಸಾಕು ಇಷ್ಟು ಆಳಕ್ಕೆ ಬೀಳುವ ಕುಳಿಗಳು ಮತ್ತು ಆಕರ್ಷಕ ಕಂದು ಬಣ್ಣದ ಕಣ್ಣುಗಳು...ಇಂತಹ ಯುವ ನಟನ ಚಿತ್ರ 'ಫೌಜಿ' ದೂರದರ್ಶನದಲ್ಲಿ ಪ್ರಸಾರವಾದಾಗ ಆತನಿಗೆ ಮಾರುಹೋಗದೇ ಇರಲು ಕಾರಣಗಳು ಇರಲಿಲ್ಲ. ಆಗ ನಾನಿನ್ನೂ ತುಂಬಾ ಚಿಕ್ಕವನಾಗಿದ್ದೆ.
'ದೀವಾನಾ' (1992), ಎಸ್.ಆರ್.ಕೆ ಮೊದಲ ಚಿತ್ರ ಬಿಡುಗಡೆಯಾಯಿತು. ಆಗ ನಾನು ಮತ್ತು ನನ್ನ ಶಾಲಾ ಗೆಳೆಯರು ಕಂಡಿದ್ದು ಹೊಸ ಕನಸಿನ ರಾಜಕುಮಾರನನ್ನು. ಹುಡುಗಿಯರು ತಮ್ಮ ಹೊಸ ಕ್ರಶ್ ಕಂಡುಕೊಂಡಿದ್ದರು, ಹುಡುಗರಿಗೊಬ್ಬ ರೋಲ್ ಮಾಡೆಲ್ ದಕ್ಕಿದ್ದ. ಎಸ್.ಆರ್.ಕೆ ಸಂಭಾಷಣೆ ಹೇಳುವ ರೀತಿ, ಅವರ ಉಡುಗೆ-ತೊಡುಗೆ, ಒಮ್ಮೆ ತಾಲೀಮು ಮಾಡಿದಂತೆ, ಇನ್ನೊಮ್ಮೆ ಸಹಜವಾಗಿಯೂ ತೋರುತ್ತಿದ್ದ ಅವರ ಆತ್ಮವಿಶ್ವಾಸದ ಮೋಡಿ - ಇವೆಲ್ಲವನ್ನೂ ನಾವು ಅನುಕರಿಸುತ್ತಿದ್ದೆವು. ಹಾಗೆ ನಾವು ವಿಶ್ವಾಸದ ಹೊಸ ವ್ಯಾಕರಣವನ್ನು ಕಲಿತೆವು. ಆಗೆಲ್ಲ ಒಂದು ಹುಡುಗಿಯನ್ನು ಮೆಚ್ಚಿಸುವುದೆಂದರೆ, ರಹಸ್ಯವಾಗಿ ಕನ್ನಡಿಯ ಮುಂದೆ ಅಭ್ಯಾಸ ಮಾಡುವ ಸನ್ನೆಗಳು ನಮಗೆ ಕರಗತವಾಗಿತ್ತು. ಅವೆಲ್ಲವೂ ಶಾರೂಖ್ ಖಾನ್ ಕಲಿಸಿದ ಪಾಠಗಳೇ ಆಗಿದ್ದವು. ದೀವಾನಾ ಗೋಲ್ಡನ್ ಜುಬಿಲಿ ಚಿತ್ರವಾಗಿತ್ತು, 50 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿತು.
'ದೀವಾನಾ' ಚಿತ್ರಕ್ಕಿದ್ದುದು ರಾಜ್ ಕನ್ವರ್ ನಿರ್ದೇಶನ. ಒಂದು ಕಡೆ ಪ್ರಜ್ವಲಿಸುವ ದಿವ್ಯಾ ಭಾರತಿ ಇನ್ನೊಂದು ಕಡೆ ಪ್ರಬುದ್ಧ ರಿಷಿ ಕಪೂರ್. ಇಂತಹ ಚಿತ್ರವನ್ನು ಖಾನ್ ಅವರ ಚೊಚ್ಚಲ ಚಿತ್ರವೆಂದು ರೂಪಿಸಲಾಗಿರಲಿಲ್ಲ. ಚಿತ್ರದಲ್ಲಿ ಅವರ ಪ್ರವೇಶವೇ ಮೊದಲ ಒಂದು ಗಂಟೆಯ ನಂತರ ಮತ್ತು ಪೋಸ್ಟರ್‌ಗಳಲ್ಲಿ ಅವರ ಹೆಸರು ಸಣ್ಣ ಅಕ್ಷರಗಳಲ್ಲಿ ಎಲ್ಲೋ ಹುದುಗಿ ಹೋಗಿತ್ತು. ಅಸಲಿಗೆ ಈ ಚಿತ್ರವು ಅದರ ಸ್ಥಾಪಿತ ಪುರುಷ ನಾಯಕ (ಕಪೂರ್) ಮತ್ತು ಪುಟಿಪುಟಿವ, ಉತ್ಸಾಹದ ಬುಗ್ಗೆ ದಿವ್ಯಾ ಅವರ ಮೋಡಿಯ ಮೇಲೆ ಮಾರಾಟವಾಗಬೇಕಿತ್ತು.
ಮುಜುಗರ ತುಂಬಿದ, ಕಿಂಚಿತ್ತೂ ನಯವಿನಯವಿಲ್ಲದ, ಹಸಿದ ಕಣ್ಣುಗಳ ಶಾರೂಖ್ ಫ್ರೇಮ್‌ಗೆ ಬಂದಾಗ, ಅವರು ಹಿಂದಿ ಚಿತ್ರಗಳಲ್ಲಿ ಪ್ರಣಯದ ಮಾದರಿಯನ್ನೇ ಬದಲಿಸಿ ಬಿಟ್ಟಿದ್ದರು. ಆಗೆಲ್ಲ ಭಾರತವು ಉಪಗ್ರಹ ಟಿವಿ ಜೊತೆ ಬದುಕಲು ಕಲಿಯುತ್ತಿದ್ದ ಸಮಯ, ಜೀನ್ಸ್ ಇನ್ನೂ ಆಕರ್ಷಣೆಯಾಗಿತ್ತು ಮತ್ತು ನದೀಮ್-ಶ್ರವಣ್ ಅವರ ಮನಮೋಹಕ ಸಂಗೀತವು ನಮ್ಮನ್ನು ಸೆಳೆದಿತ್ತು.
'ದೀವಾನಾ' ಚಿತ್ರದ ಹಾಡುಗಳಾದ - 'ಐಸಿ ದೀವಾನಗಿ ದೇಖಿ ನಹೀ ಕಹೀ' (ಇಂತಹ ಪ್ರೀತಿಯ ಹುಚ್ಚನ್ನು ನಾನೆಲ್ಲೂ ನೋಡಿಲ್ಲ), 'ತೇರೆ ದರ್ದ್ ಸೆ ದಿಲ್ ಆಬಾದ್ ರಹಾ' (ನಿನ್ನ ನೋವಿನಿಂದ ನನ್ನ ಹೃದಯ ಜೀವಂತವಾಗಿದೆ), ಮತ್ತು 'ಸೋಚೇಂಗೆ ತುಮ್ಹೆ ಪ್ಯಾರ್ ಕರೆಂಗೆ ಕೆ ನಹೀ' (ನಿನ್ನನ್ನು ಪ್ರೀತಿಸಬೇಕೇ ಬೇಡವೇ ಎಂದು ಯೋಚಿಸುತ್ತಿದ್ದೇನೆ) - ರೇಡಿಯೋ ಮತ್ತು ಕ್ಯಾಸೆಟ್ ಡೆಕ್‌ಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಾ, ಮಧ್ಯಮ ವರ್ಗದ ಮನೆಗಳಲ್ಲಿ ವ್ಯಕ್ತಪಡಿಸಲಾಗದ ಪ್ರೀತಿಯ ವಿಚಿತ್ರ ನೋವಿನ ದನಿಯೇ ತುಂಬಿರುತ್ತಿದ್ದವು.
ಶಾರೂಕ್ ಮೇಲೆ ಚಿತ್ರೀಕರಿಸಿದ ಮತ್ತು ವಿನೋದ್ ರಾಥೋಡ್ ಹಾಡಿದ ಈ ಹಾಡು ನನಗೆ ವಿಶೇಷ ಕಾರಣಕ್ಕೆ ಇಷ್ಟವಾಗಿತ್ತು: 'ಕೋಯಿ ನಾ ಕೋಯಿ ಚಾಹಿಯೇ ಪ್ಯಾರ್ ಕರ್ನೆ ವಾಲಾ' (ಪ್ರೀತಿಸಲು ಯಾರಾದರೊಬ್ಬರು ಬೇಕೇ ಬೇಕು). 'ತೇರಿ ಉಮ್ಮೀದ್ ತೇರಾ ಇಂತೆಜಾರ್ ಕರ್ತೆ ಹೇ' (ಪ್ರೇಮದಲ್ಲಿ, ಭರವಸೆಯಲ್ಲಿ, ಕಾಯುವಿಕೆಯಲ್ಲಿ ನಿನ್ನನ್ನು ಸದಾ ನೆನೆಯುತ್ತಿರುತ್ತೇನೆ).
ಮೂಗಿನಿಂದಲೇ ಉಚ್ಛರಿಸಿದಂತಿದ್ದ ಕುಮಾರ್ ಸಾನು ಅವರ ಧ್ವನಿ ಮತ್ತು ಸಾಧನಾ ಸರಗಮ್ ಅವರ ಕಂಪಿಸುವ ಮಾಧುರ್ಯವು ಇಳಿ ಸಂಜೆಗಳಲ್ಲಿ ಟೆರೇಸ್‌ಗಳ ಮೇಲೆ, ಪ್ರೆಷರ್ ಕುಕ್ಕರ್‌ಗಳ ಶಬ್ದದ ಜೊತೆಗೆ, ಟೀ ಅಂಗಡಿಗಳ ಮುಂಭಾಗದಲ್ಲಿಯೆ ಇಡುತ್ತಿದ್ದ ಟ್ರಾನ್ಸಿಸ್ಟರ್ ಮೂಲಕ ತೇಲಿ ತೇಲಿ ಬರುತ್ತಿದ್ದ ದಿನಗಳವು. ನದೀಮ್ ಶ್ರವಣ್ ಅವರ ಯುಗದ ಈ ಚಿತ್ರದ ಸಂಗೀತವನ್ನು ಪೂರ್ಣ ವೈಭವದಲ್ಲಿ ಕಂಪೋಸ್ ಮಾಡಲಾಗಿತ್ತು. ನಮ್ಮ ಪಾಲಿಗೆ, ಈ ಹಾಡುಗಳು ಅವ್ಯಕ್ತ ಭಾವಗಳನ್ನು ಧ್ವನಿಸುತ್ತಿದ್ದವು. ಶಾಲೆಯ ಕಾರಿಡಾರ್‌ಗಳಲ್ಲಿ, ಹುಡುಗಿಯ ದುಪ್ಪಟ್ಟಾ ಅತಿ ಸನಿಹದಿಂದ ಸೋಕಿದಾಗ ಅಥವಾ ಹಿಂಜರಿಕೆ, ಮುಜುಗರ ತುಂಬಿದ ನಗುವಿನೊಂದಿಗೆ ನೋಟ್‌ಬುಕ್‌ಗಳನ್ನು ವಿನಿಮಯ ಮಾಡಿಕೊಂಡಾಗ... ನೈಜ ಭಾವನೆಗಳು ತಮ್ಮ ಪದಕೋಶದಲ್ಲಿ ಸ್ಥಾನ ಪಡೆದುಕೊಳ್ಳುವ ಮೊದಲೇ, 'ದೀವಾನಾ'ದ ಆ ಟ್ರ್ಯಾಕ್‌ಗಳು ನಮ್ಮ ಮನಸ್ಸಿನಲ್ಲಿ ಆ ದೃಶ್ಯಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದವು.
'ದೀವಾನಾ' ಬಿಡುಗಡೆಯಾದ ಕೇವಲ ಒಂದು ವರ್ಷದಲ್ಲಿ ದಿವ್ಯಾ ಭಾರತಿ ನಿಧನರಾದಾಗ, ಆ ಚಿತ್ರಕ್ಕೆ ಒಂದು ವಿಚಿತ್ರ ತಿರುವು ಪ್ರಾಪ್ತವಾಯಿತು. ಅಷ್ಟರಲ್ಲಾಗಲೇ 'ರಾಜು ಬನ್ ಗಯಾ ಜೆಂಟಲ್‌ಮನ್' ಮತ್ತು 'ಬಾಜಿಗರ್' ನಂತಹ ಚಿತ್ರಗಳಿಗೆ ಸಹಿ ಹಾಕಿದ್ದ ಶಾರೂಖ್ ಖಾನ್ ಶೀಘ್ರದಲ್ಲೇ ಸೂಪರ್ ತಾರಾಗಣಕ್ಕೆ ಜಿಗಿಯುವ ಸನ್ನಾಹದಲ್ಲಿದ್ದರು, ಆದರೆ 'ದೀವಾನಾ' ನಮ್ಮ ಹದಿಹರೆಯದ ಕಾಂಕ್ಷೆಗಳಿಗೆ ಕಸುವು ತುಂಬಿದ ಚಿತ್ರವಾಗಿ ನಮ್ಮ ನೆನಪಿನಲ್ಲಿ ಸ್ಥಿರವಾಗಿ ಉಳಿಯುತ್ತದೆ.
ಈಗಲೂ ಆ ಚಿತ್ರವನ್ನು ನೋಡುವುದು (ಇದು ಯೂಟ್ಯೂಬ್ನಲ್ಲಿ ಲಭ್ಯವಿದೆ) ಹಳೆಯ ದಿನಚರಿಗಳನ್ನು ಮತ್ತೆ ತೆರೆದಂತೆ ಭಾಸವಾಗುತ್ತದೆ - ಕಥೆಯು ಅತಿ ನಾಟಕೀಯತೆಯಿಂದ ಕೂಡಿದೆ ಮತ್ತು ಎಸ್.ಆರ್.ಕೆ ಅದರಲ್ಲಿ 'ಓವರ್ ಆಕ್ಟಿಂಗ್' ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಏನೋ ಒಂದು ಸಹಜ ಮತ್ತು ಪುನರಾವರ್ತನೆ ಮಾಡಲಾಗದ ಅಂಶವಿದೆ. ಚಿತ್ರದಲ್ಲಿ ಅವರು ಎಂಟ್ರಿ ಕೊಡುವ ದೃಶ್ಯದಲ್ಲಿ, ತನ್ನ ಹುಡುಗರ ಗುಂಪಿನೊಂದಿಗೆ Yamaha RT 180 ಬೈಕ್ ಮೇಲೆ ಅನೇಕ ಸಾಹಸಗಳನ್ನು ಮಾಡುತ್ತಾರೆ, ಹುಡುಗಿಯರ ಹೃದಯವನ್ನು ಗೆಲ್ಲುವ ಪ್ರಯತ್ನ ಮಾಡಿರುತ್ತಾರೆ.
ನನಗೆ ಪ್ರೇಮಭಾಷ್ಯೆ ಕಲಿಸಿದ, ಆಗಿನ್ನೂ 26ರ ಹರಯದಲ್ಲಿದ್ದ ಆ ತಾರೆಗೆ ಈಗ ಆರವತ್ತು ವರ್ಷ. ಈ ವಾರ ಅವರ ಏಳು ಚಿತ್ರಗಳು – ಕಭಿ ಹಾ ಕಭಿ ನಾ, ದಿಲ್ ಸೆ, ದೇವದಾಸ್, ಮೈ ಹೂ ನಾ, ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಜವಾನ್ – ಚಿತ್ರಮಂದಿರಗಳಿಗೆ ಮರು ಪ್ರವೇಶ ಮಾಡುತ್ತಿವೆ, ಇಂತಹ ಘಳಿಗೆಯಲ್ಲಿಯೇ 'ದೀವಾನಾ'ದ ನೆನಪು ಮರುಕಳಿಸಿದೆ;, ನನ್ನ ಮೊದಲ ಮುಖಾಮುಖಿಯಾದ ಈ ಚಿತ್ರದ ಬಳಿಕ ಶಾರೂಖ್ ಬಾಲಿವುಡ್‌ನ ಬಾದ್‌ಷಾ ಆಗಿ ಬೆಳೆದ ರೀತಿ ನಿಜಕ್ಕೂ ಅನನ್ಯವಾದುದು. ಇನ್ನು ಈಗ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗುತ್ತಿರುವ ಏಳೂ ಚಿತ್ರಗಳು, ಒಬ್ಬ ಮನುಷ್ಯ ಮತ್ತು ಒಂದು ರಾಷ್ಟ್ರ ತನ್ನದೇ ಕಥೆಯಲ್ಲಿ ಪ್ರೀತಿಯಲ್ಲಿ ಬೀಳಲು ಕಲಿಯುತ್ತಿರುವ ಒಂದು ದೇಶದ ಏಳು ಚೆಕ್‌ಪಾಯಿಂಟ್‌ಗಳಾಗಿವೆ.
ಕಭಿ ಹಾಂ ಕಭಿ ನಾ (1994): ಸೋಲಿನಲ್ಲಿರುವ ಸುಖ
ಕುಂದನ್ ಷಾ ನಿರ್ದೇಶನದ ಈ ‘ಪ್ರೌಢಾವಸ್ಥೆಯ ಪೊರೆ ಕಳಚುತ್ತಿರುವ’ ರೋಮ್ಯಾಂಟಿಕ್ ಕಾಮಿಡಿ-ನಾಟಕ ಚಿತ್ರ-‘ಕಭಿ ಹಾಂ ಕಭಿ ನಾ’, ಈ ಚಿತ್ರದಲ್ಲಿ 'ಕೆಡೆಟ್ ಕ್ಯಾಪ್'ನ್ನು ಪ್ರಚಲಿತಕ್ಕೆ ತರಲಾಯಿತು, ಪ್ರೀತಿಗೆ ಪಾತ್ರನಾಗುವ ಆದರೆ ಅಂತಿಮವಾಗಿ ಹುಡುಗಿಯನ್ನು ಗೆಲ್ಲಲು ವಿಫಲನಾಗುವ 'ಸೋತವನ' ಪಾತ್ರದಲ್ಲಿ ಎಸ್.ಆರ್.ಕೆ. ನಟಿಸಿದ್ದಾರೆ. ಚಿತ್ರದಲ್ಲಿ ಸುನೀಲ್ (ಖಾನ್) ಮಧ್ಯಮವರ್ಗದ, ಸಂಗೀತಕ್ಕೆ ಗಾಢಾನುರಕ್ತನಾದ ಯುವಕ. ಆತ ತನ್ನ ಬ್ಯಾಂಡ್‌ನ ಪ್ರಮುಖ ಗಾಯಕಿ ಅನ್ನಾ (ಸುಚಿತ್ರಾ ಕೃಷ್ಣಮೂರ್ತಿ)ಳನ್ನು ಗಾಢವಾಗಿ ಪ್ರೀತಿಸುತ್ತಿರುತ್ತಾನೆ, ಆಕೆ ಮಾತ್ರ ಆಕೆಯನ್ನು ಕೇವಲ ಸ್ನೇಹಿತನಾಗಿ ಮಾತ್ರ ಪರಿಗಣಿಸುತ್ತಾಳೆ. ಅನ್ನಾ ಇನ್ನೊಬ್ಬ ಬ್ಯಾಂಡ್ ಸದಸ್ಯ ಕ್ರಿಸ್ (ದೀಪಕ್ ತಿಜೋರಿ)ನನ್ನು ಪ್ರೀತಿಸುತ್ತಾಳೆ, ಹಾಗಾಗಿ ಸುನೀಲ್, ಅವಳ ಪ್ರೀತಿಯನ್ನು ಗೆಲ್ಲುವ ಹತಾಶೆಗೆ ಬಿದ್ದು ದಂಪತಿ ನಡುವೆ ಬಿರುಕು ಮೂಡಿಸಲು ನಾನಾ ತಂತ್ರ ಮತ್ತು ಸುಳ್ಳುಗಳನ್ನು ಪೋಣಿಸುತ್ತಾನೆ.
ಅವನ ಮೋಸ ಬಯಲಾದ ಬಳಿಕ ಅನ್ನಾ ಆತನನ್ನು ದೂರವಿಡುತ್ತಾಳೆ. ಜೊತೆಗೆ ಬ್ಯಾಂಡ್-ನಿಂದಲೂ ತಾತ್ಕಾಲಿಕವಾಗಿ ಅವನನ್ನು ದೂರವಿಡುತ್ತಾರೆ. ಆದರೂ ಅಂತಿಮವಾಗಿ ಅವನನ್ನು ಕ್ಷಮಿಸುತ್ತಾರೆ ಮತ್ತು ಕ್ರಿಸ್‌ನ ಪೋಷಕರು ಅವರ ಸಂಬಂಧವನ್ನು ವಿರೋಧಿಸಿದ ನಂತರ ಅನ್ನಾಳ ಕುಟುಂಬವೂ ಅವನನ್ನು ಸಂಭಾವ್ಯ ವರನಾಗಿ ಪರಿಗಣಿಸುತ್ತದೆ. ಪ್ರೀತಿಯ ನಿಸ್ವಾರ್ಥ ಕಾಯಕದಲ್ಲಿ ಸುನೀಲ್ ಅಂತಿಮವಾಗಿ ಅನ್ನಾ ಮತ್ತು ಕ್ರಿಸ್ ಅವರನ್ನು ಮತ್ತೆ ಒಗ್ಗೂಡಿಸಲು ನಿರ್ಧರಿಸುತ್ತಾನೆ, ಅವರ ಮದುವೆಯ ದಿನದಂದೇ ಅದನ್ನು ನೆರವೇರಿಸುತ್ತಾನೆ, ಚಿತ್ರದ ಕೊನೆಯಲ್ಲಿ ಹೃದಯ ಒಡೆದು ಚೂರಾಗಿದ್ದರೂ ಜೀವನ ಮತ್ತು ಪ್ರೀತಿಯ ಬಗೆಗೆ ಅಮೂಲ್ಯವಾದ ಪಾಠವನ್ನು ಕಲಿತು, ಇನ್ನೊಬ್ಬ ಹುಡುಗಿಯನ್ನು (ಜೂಹಿ ಚಾವ್ಲಾ ಅತಿಥಿ ಪಾತ್ರದಲ್ಲಿ) ಭೇಟಿಯಾಗುವುದರ ಮೂಲಕ ಮುಕ್ತಾಯಗೊಳ್ಳುತ್ತದೆ.
'ಕಭಿ ಹಾ ಕಭಿ ನಾ' ಸೋಲುವುದರಲ್ಲಿ ಇರುವ ಸುಖವನ್ನು ಸೊಗಸಾಗಿ ಬಣ್ಣಿಸುವ ಚಿತ್ರ. ಆಗಿನ ದಶಕದಲ್ಲಿ ಪ್ರಬುದ್ಧರಾಗುತ್ತಿದ್ದ ಅನೇಕ ಮಂದಿ ಮಧ್ಯಮವರ್ಗದ ಪುರುಷರು ಮೊದಲ ಬಾರಿಗೆ ಪರದೆಯ ಮೇಲೆ ತಮ್ಮನ್ನು ತಾವು ಕಂಡುಕೊಂಡಿದ್ದರು- ಅದು ತೊದಲು ನುಡಿಯ, ಸುಳ್ಳು ಹೇಳುತ್ತಿದ್ದ, ಆದರೂ ತನ್ನ ಮುಗ್ಧತೆಯಿಂದ ಆಪ್ತನಾಗಿದ್ದ ಒಬ್ಬ ನಾಯಕ ರೂಪದಲ್ಲಿ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ನ ಸಣ್ಣ ಸಣ್ಣ ಪಟ್ಟಣಗಳಲ್ಲಿ ಅಥವಾ ಬೇರೆಲ್ಲಿಯೇ ಆಗಿರಲಿ ಈ ಚಿತ್ರದ ಪಾತ್ರಗಳು ಅನೇಕ ಸಂಬಂಧಗಳಿಗೆ ಸಮೀಕರಿಸುವಂತಿದ್ದವು. ಯಾಕೆಂದರೆ ಕಾಲೇಜಿನ ಹಿಂಬದಿಯ ಬೆಂಚ್‌ಗಳಲ್ಲಿ ಕುಳಿತು, ಡೆನಿಮ್ ಜಾಕೆಟ್ ಧರಿಸಿ, ಸಾಲದ ಗಿಟಾರ್‌ಗಳ ಮೇಲೆ ಕನಸುಗಳನ್ನು ಕಟ್ಟುತ್ತಿದ್ದ ಸುನೀಲ್‌ನಂತಹ ಹುಡುಗರು ಎಲ್ಲೆಡೆಯೂ ಇದ್ದರು.
ದಿಲ್ ಸೆ (1998): ಗೀಳಿನ ಯುಗ
1998ರ ಹೊತ್ತಿಗೆ, ಭಾರತ ಸಾಕಷ್ಟು ಬದಲಾಗಿತ್ತು. ಆಲ್ ಇಂಡಿಯಾ ರೇಡಿಯೋ ಬದಲಿಗೆ ಎಫ್‌ಎಂ ರೇಡಿಯೋಗಳು ಬಂದಿದ್ದವು. ಮಧ್ಯಮ ವರ್ಗದವರು ಆತ್ಮವಿಶ್ವಾಸದಿಂದ ತುಂಬಿತುಳುಕುತ್ತಿದ್ದರು. ಮಣಿರತ್ನಂ ನಿರ್ದೇಶನದ, ಉತ್ಕಟ ಮತ್ತು ಅಸಾಂಪ್ರದಾಯಿಕ ರೋಮ್ಯಾಂಟಿಕ್ ಥ್ರಿಲ್ಲರ್ ಆಗಿರುವ ಈ ಚಿತ್ರ, ಈಶಾನ್ಯ ಭಾರತದ ಸೂಕ್ಷ್ಮ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಬಂಡಾಯದ ವಿರುದ್ಧ ಪ್ರೀತಿ ಮತ್ತು ಸಿದ್ಧಾಂತದ ನಡುವಿನ ಸಂಘರ್ಷವನ್ನು ಪರಿಶೋಧಿಸುವ ಕೆಲಸ ಮಾಡಿತು. ಆಲ್ ಇಂಡಿಯಾ ರೇಡಿಯೋ ಪತ್ರಕರ್ತ ಅಮರ್‌ಕಾಂತ್ ವರ್ಮಾ (ಖಾನ್), ತನ್ನ ನಿಯೋಜನೆಯ ಸಮಯದಲ್ಲಿ ಪದೇ ಪದೇ ಎದುರಾಗುವ ನಿಗೂಢ ಮಹಿಳೆ ಮೇಘ್ನಾ (ಮನಿಶಾ ಕೊಯಿರಾಲಾ) ಬಗ್ಗೆ ಅತೀವವಾದ ಗೀಳು ಬೆಳೆಸಿಕೊಳ್ಳುತ್ತಾನೆ. ಅಮರ್ ಬಿಟ್ಟೂಬಿಡದೆ ಬೆನ್ನು ಬಿದ್ದಿದ್ದರೂ, ಮೇಘ್ನಾ ಅವನನ್ನು ನಿರಂತರವಾಗಿ ತಿರಸ್ಕರಿಸುತ್ತಾಳೆ. ಅದಕ್ಕೆ ಮುಖ್ಯ ಕಾರಣ-ದೆಹಲಿಯಲ್ಲಿ ಆತ್ಮಹತ್ಯಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪಿನ ಸದಸ್ಯೆಯಾಗಿರುವ ಆಕೆ ರಹಸ್ಯಮಯ ಜೀವನವನ್ನು ಅನುಸರಿಸುತ್ತಿರುವುದು.
ಅಮರ್ ಪ್ರೀತಿ (ಚೊಚ್ಚಲ ಪಾತ್ರದಲ್ಲಿ ಪ್ರೀತಿ ಝಿಂಟಾ)ಯನ್ನು ಮದುವೆಯಾಗಲು ತಯಾರಿ ನಡೆಸುತ್ತಿರುವಾಗಲೇ ಮೇಘ್ನಾ ಮತ್ತೆ ಆತನ ಜೀವನ ಪ್ರವೇಶಿಸುತ್ತಾಳೆ. ಇದು ದುರಂತದ ಪರಾಕಾಷ್ಠೆಗೆ ಕಾರಣವಾಗುತ್ತದೆ, ಅಲ್ಲಿ ಅವನ ಸರ್ವಸ್ವವನ್ನೂ ಆವರಿಸಿರುವ ಪ್ರೀತಿಯು ಅವರ ಸಾವಿನಲ್ಲಿ ಕೊನೆಗೊಳ್ಳುತ್ತದೆ, ಅವರು ಪರಸ್ಪರ ಅಪ್ಪಿಕೊಂಡಿರುವಾಗಲೇ ಆಕೆಯ ಸೊಂಟದಲ್ಲಿ ಕಟ್ಟಿಕೊಂಡಿದ್ದ ಸ್ಫೋಟಕ ಸ್ಫೋಟಗೊಳ್ಳುತ್ತದೆ. ರೋಜಾ ಮತ್ತು ಬಾಂಬೆ ಚಿತ್ರದ ನಂತರ ರತ್ನಂ ಅವರ ರಾಜಕೀಯ ಕೃತಿತೃಯದ ಅಂತಿಮ ಭಾಗವೆಂದು ಗುರುತಿಸಲ್ಪಟ್ಟಿರುವ ಈ ಚಿತ್ರದಲ್ಲಿ ಸಂತೋಷ್ ಶಿವನ್ ಅವರ ಅದ್ಭುತ ಛಾಯಾಗ್ರಹಣವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಚಲಿಸುತ್ತಿರುವ ರೈಲಿನ ಮೇಲೆ ಚಿತ್ರೀಕರಿಸಲಾಗಿರುವ 'ಛಯ್ಯಂ ಛಯ್ಯಂ'ನಂತಹ ಹಿಟ್ ಹಾಡುಗಳಿಗೆ ಎ.ಆರ್. ರೆಹಮಾನ್ ಅವರ ಐಕಾನಿಕ್ ಸಂಗೀತವಿದೆ.
ದೇವದಾಸ್ (2002): ದುರಂತ ಕಾವ್ಯ
2002ರ ಹೊತ್ತಿಗೆ, 'ದೀವಾನಾ' ಚಿತ್ರವನ್ನು ನೋಡಿ ಪ್ರೀತಿಯೆಂಬ ಹುಚ್ಚಿಗೆ ಪರಿಚಿತನಾದ ಹುಡುಗ, ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಅಗತ್ಯದಿಂದ ತುಂಬಿದ ಪ್ರಬುದ್ಧ ಮನುಷ್ಯನಾಗಿದ್ದ. ಪ್ರೀತಿಯ ಪರಾಕಾಷ್ಠೆ ಏನು ಎಂಬುದನ್ನು ಅನಾವರಣ ಮಾಡುವ ಚಿತ್ರ 'ದೇವದಾಸ್'. ಸಂಜಯ್ ಲೀಲಾ ಬನ್ಸಾಲಿ ಅವರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ 1917ರ ಬಂಗಾಳಿ ಕಾದಂಬರಿಯ ಈ ಭವ್ಯ ರೂಪಾಂತರವು, ಜಮೀನ್ದಾರನ ಶ್ರೀಮಂತ, ಆದರೆ ದುರ್ಬಲ ಮನಸ್ಸಿನ ಮಗನಾದ ದೇವದಾಸ್ ಮುಖರ್ಜಿ (ಖಾನ್) ಸುತ್ತ ಗಿರಕಿ ಹೊಡೆಯುತ್ತದೆ. ಅವನು ತನ್ನ ಅಧ್ಯಯನವನ್ನು ಮುಗಿಸಿ ಹಿಂದಿರುಗಿದ ಬಳಿಕ ತನ್ನ ಚುರುಗುಟ್ಟುವ ಬಾಲ್ಯದ ಗೆಳತಿ, ಕಡಿಮೆ ಸಾಮಾಜಿಕ ವರ್ಗದ ಹುಡುಗಿಯಾದ ಪಾರ್ವತಿ ಅಥವಾ 'ಪಾರೋ' (ಐಶ್ವರ್ಯಾ ರೈ) ಯನ್ನು ಮದುವೆಯಾಗಲು ಬಯಸುತ್ತಾನೆ.
ಆತನ ಕುಟುಂಬದ ಪ್ರತಿಷ್ಠೆ ಮತ್ತು ಜಟಿಲವಾದ ವರ್ಗ ರಚನೆಗಳಿಂದಾಗಿ ವಿವಾಹ ಪ್ರಸ್ತಾಪ ಮುರಿದು ಬೀಳುತ್ತದೆ. ಇದರಿಂದ ದೇವದಾಸ್ ದಿಕ್ಕೆಟ್ಟು ಹೋಗುತ್ತಾನೆ ಮತ್ತು ಅಂತಿಮವಾಗಿ ತನ್ನ ಹೆತ್ತವರ ವಿರುದ್ಧ ನಿಲ್ಲಲು ವಿಫಲನಾಗುತ್ತಾನೆ. ಇದರಿಂದ ಮನನೊಂದ ಮತ್ತು ಅವಮಾನಿತಳಾದ ಪಾರೋ, ತನಗಿಂತ ತುಂಬಾ ವಯಸ್ಸಾದ, ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಈ ಎಲ್ಲ ಬೆಳವಣಿಗಳಿಂದ ಸಂಪೂರ್ಣ ಛಿದ್ರನಾದ ದೇವದಾಸ್ ಸ್ವಯಂ-ವಿನಾಶ ಮತ್ತು ದೀರ್ಘಕಾಲದ ಮದ್ಯಪಾನದ ಜೀವನದಲ್ಲಿ ಮುಳುಗುತ್ತಾನೆ, ಅಲ್ಲಿ ಆತನಿಗೆ ಪರಿಚಿತಳಾಗುವವಳು ಬಂಗಾರದ ಹೃದಯದ ವೇಶ್ಯೆ ಚಂದ್ರಮುಖಿ (ಮಾಧುರಿ ದೀಕ್ಷಿತ್). ಆಕೆಯಲ್ಲಿ ಸಂಕೀರ್ಣ ಆಶ್ರಯವನ್ನು ಕಂಡುಕೊಳ್ಳುತ್ತಾನೆ. ಆಕೆಯೋ ದೇವದಾಸನ ಪ್ರೀತಿಯಲ್ಲಿ ಬೀಳುತ್ತಾಳೆ ಮತ್ತು ಅವನ ಆರೋಗ್ಯ ಹದಗೆಟ್ಟಾಗ ಆತನನ್ನು ಉಪಚರಿಸುತ್ತಾಳೆ.
ಸಾಯುವುದಕ್ಕೂ ಮುನ್ನ ಪಾರೋಳನ್ನು ಕೊನೆಯ ಬಾರಿಗೆ ನೋಡುವ ಪ್ರತಿಜ್ಞೆ ಪೂರ್ತಿಗೊಳಿಸುವ ಹತಾಶ ಪ್ರಯತ್ನದಲ್ಲಿ, ದೇವದಾಸ್ ಅವಳ ಮದುವೆ ಮನೆ ಕಡೆಗೆ ಪ್ರಯಾಣಿಸುತ್ತಾನೆ, ಅಲ್ಲಿ ಆಕೆಯನ್ನು ಭೇಟಿಯಾಗಲು ಓಡಿ ಬರುತ್ತಿರುವಾಗಲೇ ಅವಳ ಮನೆಯ ಹೊಸ್ತಿಲಲ್ಲಿ ಕುಸಿದು ಬಿದ್ದು ಸಾಯುತ್ತಾನೆ. ಸಾಮಾಜಿಕ ನಿರ್ಬಂಧಗಳು, ಹೆಮ್ಮೆ ಮತ್ತು ತನ್ನದೇ ಭಾವನಾತ್ಮಕ ವೈಫಲ್ಯಗಳಿಗೆ ಅವನು ಬಲಿಯಾಗುತ್ತಾನೆ. ದುರಂತ ಭಾವನೆಯನ್ನು ಮೋಹವಾಗಿ ಪರಿವರ್ತಿಸಿದವನು ಈ ಬಾದಷಾ. ಈತ ತನ್ನ 'ಕಭಿ ಹಾ ಕಭಿ ನಾ'ದಲ್ಲಿನ ತನ್ನ ಪಾತ್ರದ ದೌರ್ಬಲ್ಯದ ಎಳೆಯನ್ನು ತೆಗೆದುಕೊಂಡು ಅದನ್ನು ಮುರಿಯುವ ಹಂತಕ್ಕೆ ಬೆಳೆದಿದ್ದ. ಆಶಾವಾದ ಕಮರಿಹೋದಾಗ ಪ್ರೀತಿ ಹೇಗೆ ಒಂದು ರೀತಿಯ ರೋಗವಾಗುತ್ತದೆ ಎಂಬುದನ್ನು ಅನಾವರಣ ಮಾಡುವಲ್ಲಿ ಆತ ಯಶಸ್ವಿಯಾಗಿದ್ದ.
ಮೈ ಹೂ ನಾ (2004): ಕೂಲ್ ಕೂಲ್ ದೇಶಭಕ್ತ
ಫರಾ ಖಾನ್ ಅವರ ಚೊಚ್ಚಲ ನಿರ್ದೇಶನದ ಈ ಆಕ್ಷನ್-ಕಾಮಿಡಿ ಚಿತ್ರದಲ್ಲಿ ಶಾರೂಖ್ ಮೇಜರ್ ರಾಮ್ ಪ್ರಸಾದ್ ಶರ್ಮಾ ಪಾತ್ರ. ಎರಡು ಉದ್ದೇಶಗಳಿಗಾಗಿ ಡಾರ್ಜಿಲಿಂಗ್‌ನ ಸೇಂಟ್ ಪಾಲ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ರಹಸ್ಯವಾಗಿ ಕೆಲಸ ಮಾಡಲು ಶರ್ಮಾ ಹೋಗಿರುತ್ತಾನೆ: ಒಂದು ಪಾಕಿಸ್ತಾನ ಜೊತೆಗಿನ 'ಪ್ರಾಜೆಕ್ಟ್ ಮಿಲಾಪ್' ಎಂಬ ಶಾಂತಿ ಉಪಕ್ರಮ ತಡೆಯಲು ಬಯಸುವ ರಾಘವನ್ (ಸುನೀಲ್ ಶೆಟ್ಟಿ) ಎಂಬ ವಿಧ್ವಂಸಕ ಉಗ್ರಗಾಮಿಯಿಂದ ಸೇನಾ ಜನರಲ್‌ನ ಮಗಳು ಸಂಜನಾ (ಅಮೃತಾ ರಾವ್)ಳನ್ನು ರಕ್ಷಿಸುವುದು. ಅದೇ ಸಮಯದಲ್ಲಿ, ತನ್ನ ಪರಿತ್ಯಕ್ತ ಪತ್ನಿ ಮತ್ತು ತನ್ನ ಮಲ-ಸಹೋದರ ಲಕ್ಷ್ಮಣ್ ಲಕ್ಕಿ (ಜಾಯೆದ್ ಖಾನ್)ಯೊಂದಿಗೆ ಮತ್ತೆ ಒಂದಾಗಲು ಬಯಸುವ ತನ್ನ ಸಾಯುತ್ತಿರುವ ತಂದೆಯ ಕೊನೆಯ ಆಸೆಯನ್ನು ಪೂರೈಸುವುದು ರಾಮ್ ಬಯಕೆ. ವಿಧಿಲಿಖಿತ, ಲಕ್ಕಿ ಕೂಡ ಅದೇ ಕಾಲೇಜಿನಲ್ಲಿ ಓದುತ್ತಿರುತ್ತಾನೆ ಮತ್ತು ಸಂಜನಾಳ ಆಪ್ತ ಗೆಳೆಯನಾಗಿರುತ್ತಾನೆ.
ರಾಮ್ ಕಾಲೇಜು ಜೀವನ ನಿಭಾಯಿಸಲು, ಕುಟುಂಬದ ಸಂಬಂಧಗಳನ್ನು ಸರಿಪಡಿಸಲು ಮತ್ತು ಭಯೋತ್ಪಾದಕ ಪಿತೂರಿಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಾನೆ, ಅಂತಿಮವಾಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಮಿಷನ್‌ಗಳಲ್ಲಿ ಯಶಸ್ವಿಯಾಗುತ್ತಾನೆ. ಎಸ್.ಆರ್.ಕೆಯ ಮೇಜರ್ ರಾಮ್ ಪ್ರಸಾದ್ ಶರ್ಮಾ ಒಬ್ಬ ಯೋಧ ಮತ್ತು ವಿದ್ಯಾರ್ಥಿ, ರಕ್ಷಕ ಮತ್ತು ಪ್ರಣಯಿ, ಒಡ್ಡುಒಡ್ಡಾದ ಆದರ್ಶವಾದಿ. ಒಮ್ಮೆ ಪ್ರೀತಿಯಲ್ಲಿ ಸೋಲುವುದನ್ನು ನೋಡಿದ ಪೀಳಿಗೆಗೆ, ಇಲ್ಲಿ ಆತ ನಗು ಮತ್ತು ಕಣ್ಣೀರಿನಿಂದ ದಿನವನ್ನು ದೂಡುತ್ತಿದ್ದ. 'ಮೈ ಹೂ ನಾ'ದಲ್ಲಿ ಶಾರೂಖ್-ನನ್ನು ನೋಡುವುದೆಂದರೆ ಪುಕ್ಕಲು ಹದಿಹರೆಯದ ಹುಡುಗರು ವಯಸ್ಕರಾಗಿ ಪವರ್ತನೆ ಹೊಂದುವುದನ್ನು ನೋಡಿದಂತೆ. ಇನ್ನೂ ಸ್ವಲ್ಪ ತಡವರಿಸುತ್ತಿದ್ದರೂ, ಉದ್ದೇಶದ ಬಗ್ಗೆ ಖಚಿತತೆಯಿತ್ತು. ಆ ಕಾಲಘಟ್ಟದಲ್ಲಿ ಅನೇಕರಿಗೆ, ಇದು ಮುಗ್ಧತೆಯು ಕೊನೆಗೊಳ್ಳುತ್ತಿರುವ ಕಾಲ ಎಂಬಂತೆ ಕಾಣಿಸಿತು. ಜಗತ್ತು ವಿಶಾಲವಾಗಿತ್ತು, ಶಾರೂಖ್ ಸೀದಾಸಾದ ಅದಕ್ಕೆ ಹೊಂದಿಕೊಂಡಿದ್ದ.
ಚೆನ್ನೈ ಎಕ್ಸ್-ಪ್ರೆಸ್ ಚಿತ್ರದಲ್ಲಿ ‘ಬಾಚಿಕೊಳ್ಳುವ ತೋಳು’ ತೋರಿಸುತ್ತಿರುವ ಎಂದಿನ ಶೈಲಿಯಲ್ಲಿ ಶಾರೂಕ್ ಖಾನ್
ಓಂ ಶಾಂತಿ ಓಂ (2007): ತಾರಾಗಣದ ಪುನರ್ಜನ್ಮ
ಫರಾ ಖಾನ್ ಮತ್ತೆ ಪ್ರಣಯ ಫ್ಯಾಂಟಸಿಯೊಂದಿಗೆ ರೀ ಎಂಟ್ರಿ ಕೊಟ್ಟಿದ್ದರು. ಶಾರೂಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದು, ದೀಪಿಕಾ ಪಡುಕೋಣೆ ಅವರ ಚೊಚ್ಚಲ ಚಿತ್ರ. ಬಾಲಿವುಡ್‌ಗೆ ಅರ್ಪಣೆಯಾದ ಈ ಕಥೆ ಆರಂಭವಾಗುವುದು 1970ರ ದಶಕದಲ್ಲಿ. ದೊಡ್ಡ ನಟನಾಗಬೇಕು ಎಂಬ ಕನಸು ಕಂಡಿದ್ದ ಜೂನಿಯರ್ ಕಲಾವಿದ ಓಂ ಪ್ರಕಾಶ್ ಮಖಿಜಾ (ಖಾನ್), ಸೂಪರ್‌ಸ್ಟಾರ್ ನಟಿ ಶಾಂತಿಪ್ರಿಯಾ (ಪಡುಕೋಣೆ)ಳಲ್ಲಿ ಪ್ರೀತಿಯಲ್ಲಿ ಬೀಳುತ್ತಾನೆ. ಒಂದು ಚಿತ್ರೀಕರಣದ ಸೆಟ್‌ನಲ್ಲಿ ಆಕೆಯ ಜೀವ ಉಳಿಸುತ್ತಾನೆ ಮತ್ತು ಅವರು ಸ್ನೇಹಿತರಾಗುತ್ತಾರೆ. ಆದರೆ, ಆಕೆ ರಹಸ್ಯವಾಗಿ ದುರಹಂಕಾರಿ ನಿರ್ಮಾಪಕ ಮುಕೇಶ್ ಮೆಹ್ರಾ (ಅರ್ಜುನ್ ರಾಂಪಾಲ್)ನನ್ನು ಮದುವೆಯಾಗಿದ್ದಾಳೆ ಎಂಬ ಸಂಗತಿಯನ್ನು ಪತ್ತೆ ಹಚ್ಚುತ್ತಾನೆ. ಮುಕೇಶ್ ತನ್ನ ವೃತ್ತಿಯನ್ನು ಉಳಿಸಿಕೊಳ್ಳಲು, ಗರ್ಭಿಣಿ ಶಾಂತಿಯನ್ನು ಬೆಂಕಿ ಹೊತ್ತಿಕೊಂಡಿರುವ ಸ್ಟುಡಿಯೋದಲ್ಲಿ ಸಿಲುಕಿಸಿ, ಆಕೆ ಮತ್ತು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ ಓಂ ಪ್ರಕಾಶ್ ಇಬ್ಬರೂ ಸಾಯುವಂತೆ ಮಾಡುತ್ತಾನೆ.
ಮೂವತ್ತು ವರ್ಷಗಳ ಬಳಿಕ, ಓಂ ಪ್ರಕಾಶ್ ಯಶಸ್ವಿ ಸೂಪರ್‌ಸ್ಟಾರ್ ಓಂ ಕಪೂರ್ ಆಗಿ ಪುನರ್ಜನ್ಮ ಪಡೆಯುತ್ತಾನೆ. ಆತನಿಗೆ ತನ್ನ ಹಿಂದಿನ ಜೀವನ ಮತ್ತು ದುರಂತದ ಅಂತ್ಯದ ಬಗ್ಗೆ ನೆನಪು ಮರುಕಳಿಸುತ್ತದೆ. ಈ ಫ್ಲಾಶ್-ಬ್ಯಾಕ್ ನಿಂದ ಪ್ರೇರಿತನಾದ ಕಪೂರ್ ತನ್ನ ಹಿಂದಿನ ಜೀವನದ ಗೆಳತಿ ಮತ್ತು ಶಾಂತಿಯ ಭೂತದ ಸಹಾಯದಿಂದ, ಮುಕೇಶ್‌ನ ಅಪರಾಧಗಳನ್ನು ಬಯಲಿಗೆಳೆದು ಮತ್ತು ಅಂತಿಮವಾಗಿ ಶಾಂತಿಯ ಆತ್ಮವು ಶಾಂತಿಯನ್ನು ಕಂಡುಕೊಳ್ಳಲು ಓಂ ಒಂದು ಯೋಜನೆ ರೂಪಿಸುತ್ತಾನೆ.
ಚೆನ್ನೈ ಎಕ್ಸ್‌ಪ್ರೆಸ್ (2013): ಬದಲಾವಣೆ ದಾರಿ
ರೋಹಿತ್ ಶೆಟ್ಟಿ ಅವರ ಈ ಪ್ರಣಯ ಆಕ್ಷನ್-ಕಾಮಿಡಿ ಚಿತ್ರವು ಮುಂಬೈನ 40 ವರ್ಷದ ಬ್ಯಾಚುಲರ್ ರಾಹುಲ್ ಮಿಠಾಯಿವಾಲಾ (ಶಾರೂಖ್) ಸುತ್ತ ಕೇಂದ್ರೀಕೃತವಾಗಿದೆ. ಅವನು ಮನಸ್ಸಿಲ್ಲದಿದ್ದರೂ, ತನ್ನ ದಿವಂಗತ ಅಜ್ಜನ ಚಿತಾಭಸ್ಮವನ್ನು ರಾಮೇಶ್ವರಂನಲ್ಲಿ ವಿಸರ್ಜಿಸಲು ತಮಿಳುನಾಡಿನ ಒಂದು ಸಣ್ಣ ಪಟ್ಟಣಕ್ಕೆ ತೆರಳುತ್ತಾನೆ. ರೈಲಿನಲ್ಲಿ, 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಚಿತ್ರದ ಪ್ರಸಿದ್ಧ ದೃಶ್ಯವನ್ನು ವಿಡಂಬನೆ ಮಾಡುತ್ತಾ, ಆತ ಯುವತಿ ಮೀನಾಲೋಚನಿ ಮೀನಮ್ಮ ಅಳಗುಸುಂದರಂ (ಪಡುಕೋಣೆ) ರೈಲು ಏರಲು ಸಹಾಯ ಮಾಡುತ್ತಾನೆ. ಆಗ ಅವಳು ಸ್ಥಳೀಯ ಡಾನ್ ದುರ್ಗೇಶ್ವರ ಅಳಗುಸುಂದರಂನ ಮಗಳು, ಮತ್ತು ತಂಗಬಲ್ಲಿ ಎಂಬ ಬಲಿಷ್ಠನ ಜೊತೆಗೆ ನಿಶ್ಚಯವಾದ ಮದುವೆಯನ್ನು ತಪ್ಪಿಸಿಕೊಳ್ಳಲಲು ಪಲಾಯನ ಮಾಡಿರುತ್ತಾಳೆ ಎಂಬುದನ್ನು ಪತ್ತೆ ಮಾಡುತ್ತಾನೆ.
ರಾಹುಲ್ ಅನಿವಾರ್ಯವಾಗಿ ಅವಳ ಸಂಕಷ್ಟದೊಳಗೆ ತಾನೂ ಸಿಕ್ಕಿಹಾಕಿಕೊಳ್ಳುತ್ತಾನೆ ಮತ್ತು ಆಕೆಯ ಹಳ್ಳಿಗೆ ಹೋಗಬೇಕಾಗುತ್ತದೆ. ಅಲ್ಲಿ ಆತನಿಗಿರುವ ಭಾಷೆಯ ತೊಂದರೆ ಸೇರಿದಂತೆ ಹಾಸ್ಯಮಯ ಮತ್ತು ಅಪಾಯಕಾರಿ ಸನ್ನಿವೇಶಗಳ ಸರಣಿಗೆ ಮುಖಾಮುಖಿಯಾಗುತ್ತಾರೆ. ಚೇಸ್ ಮಾಡುತ್ತಿರುವ ಮೀನಮ್ಮಳ ಸೋದರ ಸಂಬಂಧಿಗಳು ಮತ್ತು ಭಾವೀ ಪತಿಯಿಂದ ತಪ್ಪಿಸಿಕೊಳ್ಳುತ್ತಾ ಇಬ್ಬರೂ ದಕ್ಷಿಣ ಭಾರತದಾದ್ಯಂತ ಸಾಹಸಮಯ ಪ್ರಯಾಣ ಕೈಗೊಳ್ಳುತ್ತಾರೆ. ಆಗ ರಾಹುಲ್ ಮತ್ತು ಮೀನಮ್ಮ ನಡುವೆ ಪ್ರೀತಿ ಅಂಕುರಿಸುತ್ತದೆ. ಅಂತಿಮವಾಗಿ, ರಾಹುಲ್ ಮೀನಮ್ಮ ಜೊತೆಗೆ ಆಕೆಯ ಹಳ್ಳಿಗೆ ಹಿಂತಿರುಗುತ್ತಾನೆ, ಅಲ್ಲಿ ಆತ ತಂಗಬಲ್ಲಿ ಜೊತೆ ಸವಾಲು ಹಾಕಿ ಜಯಶಾಲಿಯಾಗುತ್ತಾನೆ, ಪ್ರೀತಿಗೆ ಯಾವುದೇ ಪ್ರಾದೇಶಿಕ ಅಥವಾ ಭಾಷೆಯ ಅಡೆತಡೆಗಳಿಲ್ಲ ಎಂದು ಅವಳ ತಂದೆಗೆ ಮನವರಿಕೆ ಮಾಡಿ, ಅವರ ಮದುವೆಗೆ ಅನುಮತಿ ನೀಡುತ್ತಾನೆ. ಈ ಚಿತ್ರವು ಬಹುದೊಡ್ಡ ವಾಣಿಜ್ಯಿಕ ಯಶಸ್ಸನ್ನು ಕಂಡಿತು ಮತ್ತು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿತು. 'ಚೆನ್ನೈ ಎಕ್ಸ್‌ಪ್ರೆಸ್' ಹಾಸ್ಯಮಯ, ಗದ್ದಲದಿಂದ ಕೂಡಿದ ಮತ್ತು ಅಸಂಬದ್ಧ ಪ್ರಲಾಪವಾಗಿತ್ತು, ಆದರೆ ಎಸ್.ಆರ್.ಕೆ ಅದನ್ನೂ ನಿಭಾಯಿಸಿದ್ದ. ಜನರ ಸಂಸ್ಕೃತಿ ಬದಲಾಗಿದೆ ಮತ್ತು ಪ್ರೇಕ್ಷಕರು ಜಿಗುಪ್ಸೆಗೊಂಡಿದ್ದಾರೆ ಎಂದು ಆತನಿಗೆ ತಿಳಿದಿತ್ತು, ಆದರೆ ಆತ ಪ್ರಾಮಾಣಿಕ ಮತ್ತು ಹಾಸ್ಯಮಯ ಎರಡೂ ಆಗಿರುವ ಪಥದಲ್ಲಿ ಸಾಗಿದ್ದ..
ಜವಾನ್ (2023): ಬಂಡಾಯಗಾರನ ಮರುಪ್ರವೇಶ
ಹಿಂದಿನ ದಶಕಗಳು ಪ್ರೀತಿಯ ಸುತ್ತ ಗಿರಕಿ ಹೊಡೆಯುತ್ತಿತ್ತು, 'ಜವಾನ್' ದೇಶದಲ್ಲಿ ಆಗಿರುವ ತಪ್ಪನ್ನು ಬಿಂಬಿಸುವ ಬಗ್ಗೆ ಇತ್ತು. 1990ರ ದಶಕದ ಹುಡುಗ ಮಧ್ಯವಯಸ್ಸಿನವನಾಗಿದ್ದ, ದುಃಖ ಮತ್ತು ವಿನಾಶದಿಂದ ತುಂಬಿದ ಸುದ್ದಿ ಫೀಡ್‌ಗಳನ್ನು ಸ್ಕ್ರಾಲ್ ಮಾಡುತ್ತಿದ್ದ, ಕೋಪೋದ್ರಿಕ್ತನಾಗಿದ್ದರೂ ಅಸಹಾಯಕನಾಗಿದ್ದ. ಹೆಚ್ಚು ಬೂದುಬಣ್ಣದ ಕೂದಲುಳ್ಳವನ ಆತ್ಮದಲ್ಲಿ ಬೆಂಕಿ ಮತ್ತು ಕೋಪ ಸ್ಥಿರವಾಗಿತ್ತು. ಅಟ್ಲೀ ನಿರ್ದೇಶನದ ಈ ಹೈ-ಆಕ್ಷನ್ ಥ್ರಿಲ್ಲರ್‌ನಲ್ಲಿ, ಖಾನ್ ತಂದೆ ಮತ್ತು ಮಗ - ವಿಕ್ರಮ್ ಮತ್ತು ಆಜಾದ್ ರಾಥೋಡ್ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಭ್ರಷ್ಟ ವ್ಯವಸ್ಥೆ ಮತ್ತು ಕಾಳಿ ಗಾಯಕ್ವಾಡ್ (ವಿಜಯ್ ಸೇತುಪತಿ) ಎಂಬ ಅಪಾಯಕಾರಿ ಶಸ್ತ್ರಾಸ್ತ್ರ ವ್ಯಾಪಾರಿಯ ವಿರುದ್ಧ ಹೋರಾಡುವ ವೀರರಾಗುತ್ತಾರೆ. ಈ ಕಥೆಯು ಮಹಿಳಾ ಜೈಲಿನ ಜೈಲರ್ ಆಜಾದ್‌ನನ್ನು ಅನುಸರಿಸುತ್ತದೆ. ಆತ ಮಹಿಳಾ ಕೈದಿಗಳ ತಂಡದೊಂದಿಗೆ ಸೇರಿಕೊಳ್ಳುತ್ತಾನೆ. ದೋಷಪೂರಿತ ಮಿಲಿಟರಿ ಶಸ್ತ್ರಾಸ್ತ್ರಗಳಿಂದ ಹಿಡಿದು ರೈತರ ಆತ್ಮಹತ್ಯೆಗಳ ದುರಂತ ಸಮಸ್ಯೆ ಮತ್ತು ಆರೋಗ್ಯ ರಕ್ಷಣಾ ಹಗರಣಗಳವರೆಗೆ - ಕಾರ್ಪೊರೇಟ್ ಮತ್ತು ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಧೈರ್ಯಶಾಲಿಯಾಗಿ ಕಾಣಿಸಿಕೊಳ್ಳುತ್ತಾನೆ.
ಜವಾನ್ ಕಥೆಯ ತುಂಬ ತುಂಬಿಕೊಂಡಿದ್ದು ಆಕ್ಷನ್ ಸನ್ನಿವೇಶಗಳು, ಭಾವನಾತ್ಮಕ ನಾಟಕ ಮತ್ತು ದೀಪಿಕಾ ಪಡುಕೋಣೆಯ ವಿಸ್ತೃತ ಅತಿಥಿ ಪಾತ್ರ ಸೇರಿದಂತೆ ಹತ್ತು-ಹಲವು ತಿರುವುಗಳಿಂದ ಕೂಡಿತ್ತು, ಅಂತಿಮವಾಗಿ ತಂದೆ ಮತ್ತು ಮಗನ ಜೋಡಿ ದಮನಿತರಿಗೆ ನ್ಯಾಯ ಒದಗಿಸಲು ಮತ್ತು ಪ್ರಜೆಗಳು ತಮ್ಮ ಮತವನ್ನು ವಿವೇಕದಿಂದ ಬಳಸುವಂತೆ ಒತ್ತಾಯಿಸಲು ಕಾರಣವಾಗುತ್ತದೆ. ಮೊದಲ ಬಾರಿಗೆ, ಶಾರೂಖ್ ಪ್ರಣಯಕ್ಕಿಂತ ಹೊರತಾದ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ. ತಾನು ಪ್ರೀತಿಸಲು ಕಲಿಸಿದ ದೇಶದ ಮನಸ್ಸಾಕ್ಷಿಯ ಪಾಲಕನಾಗಿ ಆತ ಕೆಲಸಮಾಡುತ್ತಾನೆ. ಎಸ್.ಆರ್.ಕೆ ತೋಳುಗಳು ಇಡೀ ದೇಶವನ್ನು ಬಾಚಿಕೊಳ್ಳುವಷ್ಟು ವಿಸ್ತರಿಸಿದ್ದವು. ಇದು ಹಲವು ವಿಧಗಳಲ್ಲಿ, 1990ರ ದಶಕದ ಪ್ರೇಮಿ-ಹುಡುಗನ ಅಂತಿಮ ವಿಕಾಸವಾಗಿತ್ತು. ಪ್ರೀತಿಯನ್ನು ಹುಡುಕುತ್ತಿದ್ದ 'ಚಾಕೊಲೇಟ್ ಬಾಯ್' ಈಗ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ. ಅವನ ಮೋಡಿ ಮಾಯವಾಗಿರಲಿಲ್ಲ, ಅದು ಕೇವಲ ದಿಕ್ಕನ್ನು ಬದಲಿಸಿತ್ತು.
ಅರವತ್ತು ವರ್ಷಗಳು, ಮತ್ತು ಈಗಲೂ ನಮ್ಮವನು
ಇದನ್ನು ‘ನಾಸ್ಟಾಲ್ಜಿಯಾ’ ಎಂದು ಕರೆಯುವುದು ಸುಲಭ ಮತ್ತು ಆಕರ್ಷಕವಾದೀತು. ಆದರೆ ಈ ಏಳು ಚಿತ್ರಗಳನ್ನು ಮತ್ತೆ ವೀಕ್ಷಿಸುವುದರಿಂದ ಹೊರಹೊಮ್ಮುವುದು ನಿರಂತರತೆ ಒಂದು ದೇಶದ ಭಾವನಾತ್ಮಕ ಶಿಕ್ಷಣ ಮತ್ತು ಒಬ್ಬ ಮನುಷ್ಯನ ಚಲನಚಿತ್ರಗಳ ನಡುವಿನ ಅದೃಶ್ಯ ಎಳೆ. 70 ಎಂಎಂ ಪರದೆಯ ಮೇಲೆ ಪ್ರೇಮ ಮತ್ತು ಹಂಬಲದ ಭಾಷೆಯನ್ನು ಶಾರೂಖ್ ಜೀವಂತವಾಗಿ ಇರಿಸಿದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆಳೆದವರು ಎಸ್.ಆರ್.ಕೆ ಮೂಲಕ ತಮ್ಮದೇ ಆತ್ಮಚರಿತ್ರೆಯ ಪುಟಗಳಲ್ಲಿ ಗುರುತಿಸಬಹುದು: ನಂಬಿಕೆ, ಪ್ರಣಯ, ವಿಘಟನೆ, ಪುನರುತ್ಥಾನ, ದಾರಿ ತಪ್ಪಿದ ದೇಶದ ತಪ್ಪಿನ ತಿದ್ದುಪಡಿಗಾಗಿ ಹೋರಾಟ. ಪ್ರತಿ ದಶಕಕ್ಕೂ ಅನುಗುಣವಾದ ಸಿನೆಮಾವನ್ನು ನಮಗೆ ಕೊಟ್ಟಿದ್ದಾರೆ. ಅವರ 60ನೇ ಹುಟ್ಟುಹಬ್ಬವು ನಮ್ಮದೇ ವೈಯಕ್ತಿಕ ಎಂಬಂತೆ ಭಾಸವಾಗುತ್ತದೆ, ಯಾಕೆಂದರೆ ಅವರ ಮೂಲಕ ನಾವು ನಮ್ಮ ಬದುಕಿನ ಚಿತ್ರಗಳನ್ನು ಕಂಡಕೊಂಡಿದ್ದೇವೆ, ಅವರ ಚಿತ್ರಗಳು ನಮ್ಮ ದಾರಿಗೆ ಬೆಳಕಾಗಿವೆ ಕೂಡ.
ಒಮ್ಮೆ 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ' ನೋಡಲು ಶಾಲೆ ಬಿಟ್ಟು ಬಂದಿದ್ದ ಅದೇ ಹುಡುಗರು ಈಗ ತಮ್ಮ ಮಕ್ಕಳನ್ನು 'ಜವಾನ್' ಚಿತ್ರ ವೀಕ್ಷಿಸಲು ಕರೆತರುತ್ತಾರೆ. ಚಿತ್ರಮಂದಿರದಲ್ಲಿ ಆವರಿಸಿಕೊಂಡ ಕತ್ತಲಲ್ಲಿ ತಮ್ಮ ಮೊದಲ ಹೃದಯ ವೈಫಲ್ಯವನ್ನು ನೆನೆಯುತ್ತಾರೆ, ದೇನಿಸುತ್ತಾರೆ, ಒಮ್ಮೆ ಮಾತ್ರ ಹಿಂದಿರುಗಿ ನೋಡಿದ ಸಹಪಾಠಿಯ ಬಗ್ಗೆ, 'ಕಭಿ ಹಾ ಕಭಿ ನಾ' ನೋಡಿದ ನಂತರ ಮನೆಗೆ ನಡೆದ ಹಾದಿಯ ಬಗ್ಗೆ, 'ಸತರಂಗಿ ರೇ' ಹಾಡಿಗೆ ದನಿಯಾಗುತ್ತ ಕಣ್ಣೀರಾದ ರಾತ್ರಿಯ ಬಗ್ಗೆ, ಮತ್ತು ತಾನು ಇಷ್ಟಪಟ್ಟ ಪ್ರತಿ ಹುಡುಗಿಗೂ "ಪಲಟ್?" ಎಂದು ಮತ್ತೆ ಮತ್ತೆ ಹೇಳುತ್ತ ಮೂರ್ಖ ರೋಮಾಂಚನದಲ್ಲಿ ಮುಳುಗಿ ಹೋದ ಬಗ್ಗೆ ಯೋಚಿಸುತ್ತಾರೆ. ಮೈಮರೆಯುತ್ತಾರೆ.
ಶಾರೂಖ್ ಖಾನ್‌ಗೆ 60 ವರ್ಷ. ಆದರೆ, ಅವನಿಂದಾಗಿಯೇ ಪ್ರೀತಿಸಲು ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತ ತಲೆಮಾರಿಗೆ, ಅವನಂತೆ ವಯಸ್ಸಾಗುತ್ತಿಲ್ಲ. ಅದು ಚಿತ್ರದ ರೀಲ್ ಮತ್ತೆ ಆರಂಭವಾದಂತೆ, ವಿಶಾಲ ಪರದೆಯ ಮೇಲೆ ಮತ್ತೆ ತೆರೆದುಕೊಂಡಂತೆ ಮೈನವಿರೇಳಿಸುತ್ತದೆ. 'ದೀವಾನಾ' ಬಿಡುಗಡೆಯಾದಾಗ ಪ್ರೇಕ್ಷಕರಲ್ಲಿದ್ದ ಹುಡುಗ ಇಂದಿಗೂ ನಮ್ಮೊಳಗೆಲ್ಲೋ ಅಡಗಿದ್ದಾನೆ. ಇಂದಿಗೂ ಪರದೆಯ ಮೇಲಿನ ಆ ಮುಖವನ್ನು ನೋಡಿ, ನಮ್ಮ ವೈಭವದ ದಿನಗಳಲ್ಲಿ ಪ್ರೀತಿ ಹೀಗಿತ್ತು ಎಂದು ಯೋಚಿಸುತ್ತಾನೆ. ಅವರ ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಆತ ಇಂದಿಗೂ ಹಾಗೇ ಇದ್ದಾನೆ. ಚಿರಯವ್ವನಿಯಾಗಿ.

