ಶಾಮನೂರು ಬ್ಲ್ಯಾಕ್ ಮೇಲ್ ಮಾಡಿ, ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿದರು: ಜಿ.ಬಿ. ವಿನಯ್ ಕುಮಾರ್
x
ಜಿ.ಬಿ ವಿನಯ್‌ ಕುಮಾರ್‌

ಶಾಮನೂರು ಬ್ಲ್ಯಾಕ್ ಮೇಲ್ ಮಾಡಿ, ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿದರು: ಜಿ.ಬಿ. ವಿನಯ್ ಕುಮಾರ್

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ ವಿನಯ್‌ ಕುಮಾರ್‌ ದಾವಣಗೆರೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕುಟುಂಬ ರಾಜಕೀಯ, ಕಾಂಗ್ರೆಸ್‌ ಹೈಕಮಾಂಡ್‌ ಬಗ್ಗೆ ಮಾತನಾಡಿದ್ದಾರೆ.


ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಪಟ್ಟಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಜಿ. ಬಿ.ವಿನಯ್ ಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ʻದಾವಣಗೆರೆ ರಾಜಕೀಯ ನಿಮ್ಮ ಮನೆಯಲ್ಲಿ (ಶಾಮನೂರು ಶಿವಶಂಕರಪ್ಪ) ಇಲ್ಲ ನಮ್ಮ (ಜಿ.ಎಂ ಸಿದ್ದೇಶ್ವರ) ಮನೆಯಲ್ಲಿ ಎನ್ನುವಂತಿದೆ. ಎರಡು ಕುಟುಂಬಗಳು ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ನಡೆಸುತ್ತಿವೆ ಎಂದು ಹೇಳಿರುವ ಜಿ.ಬಿ ವಿನಯ್ ಕುಮಾರ್, ನನಗೆ ಟಿಕೆಟ್ ಕೈತಪ್ಪಲು ಬ್ಲ್ಯಾಕ್ ಮೇಲ್ ಕಾರಣವಿರಬಹುದುʼ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿ.ಬಿ ವಿನಯ್ ಕುಮಾರ್ ದ ಫೆಡರಲ್ ಕರ್ನಾಟಕ ಕ್ಕೆ ತಿಳಿಸಿದ್ದಾರೆ.

ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ನೀವು ಏಕಾಏಕಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರಣವೇನು ?

ಉತ್ತರ: ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಜನ ನನ್ನ ಮೇಲೆ ಇರಿಸಿರುವ ನಂಬಿಕೆ. ಯುವಕರು ರಾಜಕೀಯಕ್ಕೆ ಬರುತ್ತಾರೆ ಬದಲಾವಣೆ ತರುತ್ತಾರೆ ಎಂದು ಈ ಕ್ಷೇತ್ರದ ಜನ ನಂಬಿದ್ದಾರೆ. ನಾನು ಸ್ಪರ್ಧೆ ಮಾಡದೆ ಹೋದರೆ ಜನರ ನಂಬಿಕೆಗೆ ಮೋಸ ಮಾಡಿದಂತಾಗುತ್ತದೆ. ಮುಂದೆ ಯಾರೇ ಸ್ಪರ್ಧೆ ಮಾಡಲು ಮುಂದೆ ಬಂದರೂ ಜನ ನಂಬದ ಪರಿಸ್ಥಿತಿ ನಿರ್ಮಾಣವಾಗುತ್ತೆ.

ಪ್ರಶ್ನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಯಶಸ್ಸು ಕಾಣಲಿಲ್ಲ ?

ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನಿನ್ನನ್ನು ಬೆಳೆಸುತ್ತೇವೆ, ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಜನರಿಗೆ ನಾನು ನೀಡಿರುವ ಭರವಸೆ ಉಳಿಸಿಕೊಳ್ಳುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದೇನೆ.

ಪ್ರಶ್ನೆ: ಕಾಂಗ್ರೆಸ್‌ನಿಂದ ನಿಮಗೆ ಟಿಕೆಟ್ ಕೈತಪ್ಪಲು ಕಾರಣವೇನು ?

ಉತ್ತರ: ಕಾಂಗ್ರೆಸ್‌ನಿಂದ ಯಾವ ಕಾರಣಕ್ಕೆ ಟಿಕೆಟ್ ಕೈತಪ್ಪಿದೆ ಅಂತ ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರು ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲ್ಯಾಕ್ ಮೇಲ್ ಮಾಡಿರಬಹುದು. ಇಲ್ಲ ದಾವಣಗೆರೆ ಕ್ಷೇತ್ರ ಕೈತಪ್ಪುವ ಆತಂಕದಲ್ಲಿ ನನ್ನ ಬಗ್ಗೆ ತಪ್ಪು ಮೆಸೇಜ್ ನೀಡಿರಬೇಕು.

ಪ್ರಶ್ನೆ: ದಾವಣಗೆರೆ ಕ್ಷೇತ್ರಕ್ಕೆ ಕುಟುಂಬ ರಾಜಕೀಯ ಸಾಕು ಎನ್ನುತ್ತಿದ್ದೀರಿ ?

ಉತ್ತರ: ದಾವಣಗೆರೆ ಕ್ಷೇತ್ರ ಕುಟುಂಬ ರಾಜಕೀಯಕ್ಕೆ ಕನ್ನಡಿಯಂತೆ ಇದೆ. ಆರು ಚುನಾವಣೆಗಳಿಂದ ಈ ಕ್ಷೇತ್ರದಲ್ಲಿ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ ಅವರ ಕುಟುಂಬ ಮತ್ತು ಕಾಂಗ್ರೆಸ್‌ನ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕುಟುಂಬವೇ ಮುಖಾಮುಖಿಯಾಗಿದೆ. ಈ ಎರಡು ಕುಟುಂಬದವರೇ ಶಾಸಕರು, ಸಂಸದರು ಮತ್ತು ಮಂತ್ರಿಗಳಾಗುತ್ತಿದ್ದಾರೆ. ಎರಡು ಕುಟುಂಬದವರನ್ನು ಬಿಟ್ಟರೆ ಬೇರೆಯವರಿಗೆ ಅಧಿಕಾರ ಸಿಗುತ್ತಿಲ್ಲ. ನಾಗಪ್ಪ ಎನ್ನುವವರು ಒಮ್ಮೆ ಮಂತ್ರಿಯಾಗಿದ್ದರು. ಬೇರೆ ಯಾವ ಶಾಸಕರು ಮಂತ್ರಿಯಾಗಿಲ್ಲ, ಶಾಸಕರು ಎರಡು ಅಥವಾ ಮೂರನೇ ಅವಧಿಗೆ ಸ್ಪರ್ಧಿಸಲು ಬಿಡುವುದಿಲ್ಲ. ದಾವಣಗೆರೆ ರಾಜಕೀಯ ನಿಮ್ಮ ಮನೆಯಲ್ಲಿ (ಶಾಮನೂರು ಶಿವಶಂಕರಪ್ಪ) ಇಲ್ಲ ನಮ್ಮ (ಜಿ.ಎಂ ಸಿದ್ದೇಶ್ವರ) ಮನೆಯಲ್ಲಿ ಎನ್ನುವಂತಿದೆ.

ಪ್ರಶ್ನೆ: ಇಷ್ಟು ದಿನ ಕಾಂಗ್ರೆಸ್ ಪಕ್ಷದಲ್ಲಿದ್ದು, ಈಗ ಕುಟುಂಬ ರಾಜಕೀಯ ಇದೆ ಎನ್ನುತ್ತಿದ್ದೀರಿ ಕಾಂಗ್ರೆಸ್‌ನಲ್ಲಿದ್ದಾಗ ನಿಮಗೆ ಈ ವಿಷಯ ನೆನಪಿರಲಿಲ್ಲವೇ ?

ಉತ್ತರ: ಇಲ್ಲ, ನಾನು ಮೊದಲಿನಿಂದಲೂ ಕುಟುಂಬ ರಾಜಕೀಯವನ್ನು ವಿರೋಧಿಸಿಕೊಂಡು ಬಂದಿದ್ದೇನೆ. ನಿಮಗೆ ಅನುಮಾನವಿದ್ದರೆ, ನನ್ನ ಹಳೆಯ ಭಾಷಣಗಳನ್ನು ತೆಗೆದು ನೋಡಿ. ಕಾಂಗ್ರೆಸ್‌ನ ಒಳಗಿದ್ದುಕೊಂಡು ಹೋರಾಟ ಮಾಡಲು ಪ್ರಯತ್ನಿಸಿದ್ದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸಬರಿಗೆ ಟಿಕೆಟ್ ಸಿಗುತ್ತೆ ಎನ್ನುವ ನಿರೀಕ್ಷೆ ಇತ್ತು. ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿತ್ತು. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಧೈರ್ಯ ತೋರಿಸಿಲ್ಲ.

ಪ್ರಶ್ನೆ: ದಾವಣಗೆರೆಯಲ್ಲಿ ಪ್ರಾದೇಶಿಕ ಇದೆ ಎಂದು ಹೇಳಿದ್ದೀರಿ, ಅಸಮಾನತೆ ಇದೆಯೇ ?

ಉತ್ತರ: ಹೌದು, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮಾನತೆ ಇದೆ. ಇದಕ್ಕೆ ಮೂಲ ಕಾರಣ ಶಿಕ್ಷಣ ಕ್ಷೇತ್ರದಲ್ಲಿರುವ ಅಸಮಾನತೆ. ಕ್ಷೇತ್ರದ ಜನರಿಗೆ ಶಿಕ್ಷಣ ಸಿಗದಂತೆ ಮಾಡಿದ್ದಾರೆ. ಕೆಲವರ ಜೇಬಿನಲ್ಲಿ ಶಿಕ್ಷಣ ಕ್ಷೇತ್ರ ಇದೆ. ದಾವಣಗೆರೆಯಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯಾಗಿ, ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಹಂತಕ್ಕೆ ಬೆಳೆಯಬೇಕು. ಆಸ್ಪತ್ರೆ ವ್ಯವಸ್ಥೆಯೂ ಇದೇ ರೀತಿ ಇದೆ. ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಹಿಡಿತದಲ್ಲೇ ಆಸ್ಪತ್ರೆಗಳಿದ್ದು, ಬೇರೆ ಆಸ್ಪತ್ರೆಗಳನ್ನು ಬೆಳೆಯಲು ಬಿಡುತ್ತಿಲ್ಲ. ದಾವಣಗೆರೆಗೆ ಒಂದು ಸರ್ಕಾರಿ ಆಸ್ಪತ್ರೆ ಅವಶ್ಯಕತೆ ಇದೆ. ಪ್ರಾಥಮಿಕ ಹಾಗೂ ತಾಲ್ಲೂಕು ಹಂತದ ಆಸ್ಪತ್ರೆಗಳು ಶಿಥಿಲಾವಸ್ಥೆಯಲ್ಲಿವೆ.

ಪ್ರಶ್ನೆ: ನೀವು ಸಹ ಇನ್ಸೈಟ್ಸ್ ಐಎಎಸ್ ಸಂಸ್ಥೆ ನಡೆಸುತ್ತಿದ್ದೀರಿ, ಬೇರೆಯವರನ್ನು ಹೇಗೆ ಪ್ರಶ್ನೆ ಮಾಡುತ್ತೀರಿ ?

ಉತ್ತರ: ನಾನು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇನೆ. ಇನ್ಸೈಟ್ಸ್ ಐಎಎಸ್ ಸಂಸ್ಥೆಯಿಂದ ನೂರಾರು ಜನ ಬಡ ವಿದ್ಯಾರ್ಥಿಗಳಿಗೆ, ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಆದರೆ, ಅವರದ್ದು ಸಂಪೂರ್ಣ ಕಮರ್ಷಿಯಲ್ ವ್ಯವಸ್ಥೆ.

ಪ್ರಶ್ನೆ: ದಾವಣಗೆರೆಯಲ್ಲಿ ನಿಮಗೆ ಜನ ಬೆಂಬಲ ಇದೆಯೇ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪ್ರಬಲ ಸ್ಪರ್ಧೆ ಇದೆ. ಅವರಿಗೆ ಬೆಂಬಲವೂ ಇದೆ ?

ಉತ್ತರ: ನನ್ನದು ಸ್ಟ್ರಾಂಗ್ ಫೈಟ್ ಇದೆ. ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳು ವೀಕ್ ಇದ್ದಾರೆ. ಗೆಲವು ನನ್ನದೇ. ಹಳ್ಳಿ ಹಾಗೂ ಗ್ರಾಮೀಣ ಭಾಗದಲ್ಲಿ ಜನ ಬೆಂಬಲ ಇದೆ. ಹಳ್ಳಿಗಳಲ್ಲಿ ಜನ ಅಭಿಮಾನದಿಂದ ಭಾಗವಹಿಸುತ್ತಿದ್ದಾರೆ.

ಪ್ರಶ್ನೆ: ಸಂಸದರಾಗಿ ಆಯ್ಕೆಯಾದರೆ ನಿಮ್ಮ ಮುಂದಿನ ಆಯ್ಕೆ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದಾಗಿರಲಿದೆ ?

ಉತ್ತರ: ಸಂಸದನಾಗಿ ಆಯ್ಕೆಯಾದ ಮೇಲೂ ನಾನು ಪಕ್ಷೇತರ ಅಭ್ಯರ್ಥಿಯಾಗಿಯೇ ಉಳಿಯಲಿದ್ದೇನೆ.

Read More
Next Story