ಎಂ.ಎಸ್‌. ಸತ್ಯು ಅವರಿಗೆ ಬಿಫ್ಫೆಸ್‌ ಜೀವಮಾನ ಪ್ರಶಸ್ತಿ
x

ಎಂ.ಎಸ್‌. ಸತ್ಯು ಅವರಿಗೆ ಬಿಫ್ಫೆಸ್‌ ಜೀವಮಾನ ಪ್ರಶಸ್ತಿ


ʻಸತ್ಯು ಭಾರತೀಯ ಅನುಭವದ ನೈಜತೆಗಳನ್ನು ಸರಳವಾಗಿ ಮತ್ತು ನೇರವಾಗಿ

ದಾಖಲಿಸುವ ತೀಕ್ಷ್ಣಕಣ್ಣೋಟವನ್ನು ಹೊಂದಿದ್ದಾರೆʼ

-ವೆರಿನಾ ಗ್ಲಾಸ್ನರ್, ಚಲನಚಿತ್ರ ಬುಲೆಟಿನ್ ಮಾಸಿಕ(ಯು.ಕೆ.), ಜುಲೈ 1977.

............................................................................

ವೆರಿನಾ ಗ್ಲಾಸ್ನರ್ ಅವರ ಈ ಅವಲೋಕನವು ಭಾರತೀಯರಿಂದ ಎಂ.ಎಸ್.ಸತ್ಯು ಎಂದು ಅಕ್ಕರೆಯಿಂದ ಕರೆಸಿಕೊಳ್ಳುವ, ಅಪ್ರತಿಮ ಚಲನಚಿತ್ರ ನಿರ್ಮಾಪಕ ಮೈಸೂರು ಶ್ರೀನಿವಾಸ ಸತ್ಯು ಅವರ ಸಿನಿಮೀಯ ಪ್ರಯಾಣದ 45 ವರ್ಷಗಳ ನಂತರವೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಸತ್ಯು ಅವರು ಮುಂಬರುವ ಜುಲೈನಲ್ಲಿ 94ನೇ ವರ್ಷಕ್ಕೆ ಕಾಲಿಡುತ್ತಾರೆ ಮತ್ತು ಐವತ್ತು ವರ್ಷಗಳ ಹಿಂದೆ ಗರಂ ಹವಾ (1973) ಮಾಡುವಾಗ ಇದ್ದ ಚೈತನ್ಯ ಮತ್ತು ಕಸುವನ್ನು ಈಗಲೂ ಹೊಂದಿದ್ದಾರೆ.

ಮಾರ್ಚ್ 6 ರಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಫೆಸ್)‌ ಎಂ.ಎಸ್‌. ಸತ್ಯು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿತು ಮತ್ತು ಅವರು ಅದಕ್ಕೆ ಅತ್ಯಂತ ಅರ್ಹರು. ಈ ಮನ್ನಣೆಗೆ ಅವರನ್ನು ಬಹಳ ಹಿಂದೆಯೇ ಪರಿಗಣಿಸಬೇಕಿತ್ತು. ಆದರೆ, ಹಲವರ ಪ್ರಕಾರ ʻಕೊಡದೆ ಇರುವುದಕ್ಕಿಂತ ಇದು ಉತ್ತಮʼ.

ಭಾರತೀಯ ಚಿತ್ರರಂಗದ 125 ವರ್ಷಗಳ ಇತಿಹಾಸದಲ್ಲಿ ಅಪ್ರತಿಮ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರೆಂದು ಪರಿಣಿಸಲ್ಪಟ್ಟಿರುವ ಎಂ.ಎಸ್.‌ ಸತ್ಯು, ಈಗಲೂ ಸಿನಿಮಾ ಕುರಿತು ಯೋಚಿಸುತ್ತಾರೆ ಮತ್ತು ಬದುಕುತ್ತಿದ್ದಾರೆ. ಅವರು ಚಲನಚಿತ್ರ ಕ್ಷೇತ್ರವನ್ನು ತೊರೆಯಲು ಸಿದ್ಧವಿಲ್ಲ ಮತ್ತು ಯಾರಾದರೂ ಹಣಕಾಸಿನ ನೆರವು ನೀಡಿದರೆ ಈಗಲೂ ಚಲನ ಚಿತ್ರ ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಮೃಣಾಲ್ ಸೇನ್, ಸತ್ಯಜಿತ್ ರೇ ಮತ್ತು ಋತ್ವಿಕ್ ಘಟಕ್ ಅವರೊಂದಿಗೆ ಭಾರತೀಯ ಚಿತ್ರರಂಗದ ದೆಸೆಯನ್ನೇ ಬದಲಿಸಿದರು.

ತಮ್ಮ 60 ಕ್ಕೂ ಅಧಿಕ ವರ್ಷಗಳ ಸೃಜನಶೀಲ ಪ್ರಯಾಣದಲ್ಲಿ ಎಂಟು ಚಲನಚಿತ್ರ, ಮೂರು ಟೆಲಿಫಿಲ್ಮ್‌, ನಾಲ್ಕು ಟೆಲಿ ಧಾರಾವಾಹಿ ಹಾಗೂ ಒಂಬತ್ತು ನಾಟಕಗಳನ್ನು ನಿರ್ದೇಶಿಸಿದ್ದರೂ, ದೇಶ ವಿಭಜನೆ ಕುರಿತ ಕ್ಲಾಸಿಕ್ ಸಿನೆಮಾ ʻ ಗರಂ ಹವಾʼ ದಿಂದ ಹೆಸರುವಾಸಿಯಾಗಿದ್ದಾರೆ. ಈ ಸಿನೆಮಾ ದೇಶದಲ್ಲಿ ಕಲಾತ್ಮಕ ಸಿನಿಮಾಗಳ ಹೊಸ ಅಲೆಗೆ ಕಾರಣ ವಾಯಿತು. ʻಗರಂ ಹವಾʼ ಇಂದಿನ ಧ್ರುವೀಕೃತ ವರ್ತಮಾನದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತ.

ಐತಿಹಾಸಿಕ ಮತ್ತು ರಾಜಕೀಯ ಹಿನ್ನೆಲೆಯೊಂದಿಗೆ ನೈಜ ಪ್ರಪಂಚವನ್ನು ಮರುಸೃಷ್ಟಿಸುವುದು ಸತ್ಯು ಅವರ ಶಕ್ತಿ. ಅವರನ್ನು ಮೃಣಾಲ್ ಸೇನ್‌ ಅವರಿಗೆ ಮಾತ್ರ ಹೋಲಿಸಬಹುದು (ಸೇನ್‌ ಅವರ ಸಿನೆಮಾಗಳ ಪ್ರದರ್ಶನ ಬಿಫ್ಫೆಸ್‌ನ 15 ನೇ ಆವೃತ್ತಿಯಲ್ಲಿ ನಡೆಯಿತು); ಸೇನ್‌ ಕೂಡ ರಾಜಕೀಯ ಕುರಿತು ಸಿನೆಮಾ ಮಾಡಿದ್ದಾರೆ. ಪ್ರಸಿದ್ಧ ಬರಹಗಾರ ಮತ್ತು ಚಲನಚಿತ್ರ ವಿಮರ್ಶಕ ಅರುಣ್ ಸಚ್‌ದೇವ್ ಅವರಿಗಿಂತ ಚೆನ್ನಾಗಿ ಸತ್ಯು ಅವರ ವ್ಯಕ್ತಿತ್ವವನ್ನು ವಿವರಿಸಲು ಯಾರಿಗೂ ಸಾಧ್ಯವಿಲ್ಲ. ಫಿಲ್ಮ್ ಇಂಡಿಯಾ-ದಿ ನ್ಯೂ ಜನರೇಷನ್ 1960-1980ರಲ್ಲಿ ಪ್ರಕಟವಾದ ಎಂ.ಎಸ್‌. ಸತ್ಯು ಕುರಿತ ಬರಹದಲ್ಲಿ ಸತ್ಯು ಅವರನ್ನು ಸಚ್‌ದೇವ್‌ ʻಒಬ್ಬ ವಿಕ್ಷಿಪ್ತ ನಿಗೂಢ ವ್ಯಕ್ತಿʼ ಎಂದು ವಿವರಿಸುತ್ತಾರೆ. ನಿಗೂಢ. ಒಂದು ವಿರೋಧಾಭಾಸ. ತೀವ್ರ ನಾಚಿಕೆಯ ವ್ಯಕ್ತಿ. ಆದರೆ, ಅತ್ಯಂತ ವಿವಾದಾತ್ಮಕ. ಅತ್ಯಂತ ಖಾಸಗಿ ವ್ಯಕ್ತಿಯಾಗಿದ್ದರೂ, ಸಾರ್ವಜನಿಕ ಕಾರಣಗಳನ್ನು ಸಮರ್ಥಿಸುತ್ತಾರೆʼ. ಇದು ಇಂದಿನ ಪೀಳಿಗೆಗೆ ಅವರ ಸಂಪೂರ್ಣ ಚಿತ್ರಣ ನೀಡುತ್ತದೆ.

ಹಿನ್ನೆಲೆ: ಆರು ವರ್ಷಗಳ ಹಿಂದೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್ಜಿಎಂಎ) ಬೆಂಗಳೂರಿನಲ್ಲಿ ಒಂದು ವಾರ ಅವಧಿಯ ಚಲನಚಿತ್ರ, ಟೆಲಿಫಿಲ್ಮ್‌ ಮತ್ತು ದೂರದರ್ಶನ ಧಾರಾವಾಹಿಗಳ ಉತ್ಸವವನ್ನು ಆಯೋಜಿಸಿತ್ತು. ಸತ್ಯು ಅವರ ಸಂಪೂರ್ಣ ಸಂಗ್ರಹವಿದ್ದ ಈ ಉತ್ಸವದಲ್ಲಿ ಮಸೂದ್ ಅಖ್ತರ್ ನಿರ್ದೇಶಿಸಿದ ಸತ್ಯು ಅವರ ಜೀವನ ಮತ್ತು ಕೃತಿಗಳ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಸತ್ಯು ಅವರ ಮೊದಲ ಚಿತ್ರ-ಗರಂ ಹವಾ, ಹೆಸರಾಂತ ಉರ್ದು ಬರಹಗಾರ್ತಿ ಇಸ್ಮತ್ ಚುಗ್ತಾಯ್ ಅವರ ಅಪ್ರಕಟಿತ ಸಣ್ಣ ಕಥೆಯನ್ನು ಆಧರಿಸಿದೆ; ಕೈಫಿ ಅಜ್ಮಿ ಅವರ ಸಾಹಿತ್ಯ, ಶಮಾ ಜೈದಿ ಚಿತ್ರಕಥೆ ಇದೆ. ವಿಮರ್ಶಕರ ಪ್ರಕಾರ, ಇದು ದೇಶ ವಿಭಜನೆ ಕುರಿತ ಖಂಡಿತವಾದಿ ಸಿನೆಮಾ. ಸುಮಾರು ನಾಲ್ಕು ದಶಕಗಳ ನಂತರ ಮರುಸ್ಥಾಪಿಸಿದ ಗರಂ ಹವಾದ ಆವೃತ್ತಿಯನ್ನು 2013ರಲ್ಲಿ ದೇಶದಾದ್ಯಂತ 100 ಕ್ಕೂ ಹೆಚ್ಚು ಪರದೆಗಳಲ್ಲಿ ಮತ್ತೆ ಬಿಡುಗಡೆ ಮಾಡಲಾಯಿತು.

ʻಗರಂ ಹವಾʼ ಎಂದರೆ ಉಪಖಂಡದಿಂದ ಬೇರ್ಪಟ್ಟ ಭಾರತ ಮತ್ತು ಪಾಕಿಸ್ತಾನದ ಮೇಲೆ ಪರಿಣಾಮ ಬೀರುವ ಸುಡುವ ಗಾಳಿ. ಆಗ್ರಾದ ಮುಸ್ಲಿಂ ಕುಟುಂಬ ಕೇಂದ್ರವಾಗುಳ್ಳ ಚಲನಚಿತ್ರ ದೇಶಚ್ಚೇದ ಕುರಿತ ನಮ್ಮ ತಿಳಿವಳಿಕೆಗೆ

ಮಾನವೀಯ ಆಯಾಮವನ್ನು ನೀಡುತ್ತದೆ. ಭೂಮಿ ಮತ್ತು ಕುಟುಂಬಗಳ ವೈಯಕ್ತಿಕ ದುರಂತಗಳು, ನಿಷ್ಠೆಯ ಪ್ರಶ್ನೆ, ಆಳವಾಗಿ ಬೇರೂರಿರುವ ಪೂರ್ವಗ್ರಹಗಳ ಉರಿಯುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಶತಮಾನಗಳ ಹಳೆಯ ಬೇರುಗಳನ್ನು ಹರಿದು ಹಾಕುವಿಕೆಯನ್ನು ತೋರಿಸುತ್ತದೆ. ಹಿಂಸಾಚಾರವನ್ನು ತೋರಿಸದೆ, ಸಮುದಾಯದ ವೈಯಕ್ತಿಕ ವೇದನೆಯನ್ನು ಸೂಕ್ಷ್ಮವಾಗಿ ಪರಿಗಣಿಸುವ ʻಗರಂ ಹವಾʼದ ಅಂತ್ಯ ಆಶಾವಾದವಿದ್ದರೂ, ಅದು ವಿವೇಕದ ಏಕೈಕ ಮಾರ್ಗ ಎಂದು ತೋರುತ್ತಿದೆ.

ಕಾನ್‌ ಗೌರವ:

ʻಗರಂ ಹವಾʼ 1974ರಲ್ಲಿ ಕಾನ್ಸ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ಪ್ರವೇಶ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಇಂಥ ಮೊದಲ ಭಾರತೀಯ ಚಲನಚಿತ್ರ. ರಾಷ್ಟ್ರೀಯ ಏಕೀಕರಣ ವಿಷಯದಲ್ಲಿ ದೇಶದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಕಾನ್ಸ್‌ ನಲ್ಲಿ ಚಲನಚಿತ್ರ ಪ್ರದರ್ಶನಗೊಂಡಾಗ ಟಾಮ್ ಹಚಿನ್ಸನ್ ಸಂಡೇ ಟೆಲಿಗ್ರಾಫ್ (ಯುಕೆ) ನಲ್ಲಿ ಹೀಗೆ ಬರೆದಿದ್ದಾರೆ; ರಾಜಕೀಯ ಮತ್ತು ಸಿನಿಮೀಯವಾಗಿ ಗಮನಾರ್ಹವಾಗಿ ಪ್ರಬುದ್ಧವಾಗಿದೆ. ಚಿತ್ರವನ್ನು ಅಪರೂಪದ ಸೂಕ್ಷ್ಮತೆಯಿಂದ ನಿರ್ದೇಶಿಸಲಾಗಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದು: ಗರಂ ಹವಾ. ಚಿತ್ರವನ್ನು ನೋಡದೆಯೇ ಮುಸಲ್ಮಾನರ ಪರ ಎಂಬ ಹಣೆಪಟ್ಟಿ ಕಟ್ಟಲಾಯಿತು. ಮತಾಂಧ ಸಂಘಟನೆಯೊಂದು ಸತ್ಯು ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿತು. ಶಿವಸೇನೆಯು ಚಿತ್ರವನ್ನು ಬಾಂಬೆಯಲ್ಲಿ ಪ್ರದರ್ಶಿಸುವ ಮುನ್ನ ಬಿಡುಗಡೆ ಪೂರ್ವ ಪ್ರದರ್ಶನ ಏರ್ಪಡಿಸಬೇಕೆಂದು ಕೋರಿತು. ಕೋಮು ಗಲಭೆಯನ್ನು ನಿರೀಕ್ಷಿಸಿದ ನಿರ್ಮಾಪಕರು, ಚಿತ್ರದ ಬಿಡುಗಡೆ ಯನ್ನು ಸ್ವಲ್ಪ ಕಾಲ ತಡೆಹಿಡಿದರು. ಎಲ್.ಕೆ. ಆಡ್ವಾಣಿ, ಸತ್ಯು ಚಿತ್ರ ನಿರ್ಮಾಣಕ್ಕೆ ಪಾಕಿಸ್ತಾನಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.

ಗರಂ ಹವಾ ಮತ್ತು ಸಿಎಎ: ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುನ್ನೆಲೆಗೆ ಬಂದಾಗಲೆಲ್ಲ ʻಗರಂ ಹವಾʼ ಕುರಿತು ಚರ್ಚೆ ನಡೆಯುತ್ತವೆ. ಪೌರತ್ವ (ತಿದ್ದುಪಡಿ) ಕಾಯಿದೆ 2019 ಯನ್ನು ಸಂಸತ್ತು ಅಂಗೀಕರಿಸಿದಾಗ, ಸತ್ಯು ಅವರು ʻಅಲ್ಪಸಂಖ್ಯಾತ ಸಮುದಾಯದ ವಿರುದ್ಧ, ವಿಶೇಷವಾಗಿ ಮುಸ್ಲಿಮರ ವಿರುದ್ಧ ಹೆಚ್ಚು ಪೂರ್ವಗ್ರಹಪೀಡಿತ ಮತ್ತು ತಾರತಮ್ಯʼ ಎಂದು ಹೇಳಿದ್ದರು. ಆದರೆ, ಚಲನಚಿತ್ರ ಪ್ರೇಕ್ಷಕರನ್ನು ಪ್ರಶ್ನಿಸುವಂತೆ ಮಾಡಿತು ಮತ್ತು ಕೋಮು ಸಂವೇದನೆ ಬಗ್ಗೆ ಅರಿವು ಮೂಡಿಸಿತು.

ಈ ಬರಹಗಾರನಿಗೆ, ʻಗರಂ ಹವಾʼ ಸಿನೆಮಾದ ಆರಂಭ ಇನ್ನೂ ನೆನಪಿದೆ: ಸಲೀಂ ಮಿರ್ಜಾ (ಬಾಲರಾಜ್ ಸಾಹ್ನಿ) ನಿಲ್ದಾಣದಲ್ಲಿ ರೈಲಿಗೆ ಕೈ ಬೀಸುತ್ತಾ ಕುದುರೆ ಎಳೆಯುವ ಬಂಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರನ್ನು ಕರೆದುಕೊಂಡು ಹೋಗುವ ಟಾಂಗಾವಾಲಾ ಹಫೀಜ್ ಜಲಂಧರಿ ದ್ವಿಪದ್ಯವನ್ನು ವಾಚಿಸುತ್ತಾನೆ;

ʻನಿಮ್ಮ ನಿಷ್ಠೆಗೆ ಪ್ರತಿಯಾಗಿ ನೀವು ಏನು ಮಾಡುತ್ತಿದ್ದೀರಿ/ನಾನು ಈಗ ಏನು

ಮಾಡುತ್ತಿದ್ದೇನೆ, ನೀವು ಏನು ಮಾಡುತ್ತಿದ್ದೀರಿ?ʼ

ʻನನ್ನ ನಿಷ್ಠೆಗೆ ಬದಲಾಗಿ ನೀವು ನನ್ನನ್ನು ಹಿಂಸಿಸುತ್ತೀರಿ, ನಾನು ಏನು ಮಾಡುತ್ತಿದ್ದೇನೆ

ಮತ್ತು ನೀವು ಏನು ಮಾಡುತ್ತಿದ್ದೀರಿʼ

ಈ ಸಂಭಾಷಣೆ ಯೋಚಿಸುವಂತೆ ಮಾಡುತ್ತದೆ.

ಸತ್ಯು ಅವರ ವೈಯಕ್ತಿಕ ಜೀವನ ಚಲನಚಿತ್ರವಾಗಲು ಯೋಗ್ಯವಾದ ಕಥೆಯಾಗಿದೆ. ತಂದೆ ಅವರು ವಿಜ್ಞಾನಿ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ, ಸತ್ಯುಗೆ ಶೈಕ್ಷಣಿಕ ಆಸಕ್ತಿ ಇರಲಿಲ್ಲ. ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಿ, ವಿಜ್ಞಾನ ಪದವಿ ಓದುತ್ತಿರುವಾಗ ಕಾಲೇಜು ತೊರೆದರು ಮತ್ತು ಚಲನಚಿತ್ರ ನಿರ್ಮಾಣದ ಕನಸು ನನಸಾಗಿಸಲು ಬಾಂಬೆಗೆ ಹೊರಟರು. ಸ್ವಲ್ಪ ಕಾಲ ನಿರುದ್ಯೋಗಿಯಾಗಿದ್ದ ಅವರು ಆನಿಮೇಟರ್ ಆಗಿ ಕೆಲಸ ಮಾಡಿದರು; ಆನಂತರ ನಿರ್ಮಾಪಕ ಚೇತನ್ ಆನಂದ್ ಅವರ ಜೊತೆಯಾದರು. ʻಸ್ವಲ್ಪ ಕಾಲ ಚರ್ಚ್ ಗೇಟ್ ನಿಲ್ದಾಣದ ಮುಂದೆ ಬಾಂಬೆ ಯೂತ್ ಪತ್ರಿಕೆಯನ್ನು ಮಾರಾಟ ಮಾಡಿದರು. ಚೇತನ್ ಆನಂದ್ ನಿರ್ದೇಶನದ ಹಕೀಕತ್ ನ ಕಲಾ ನಿರ್ದೇಶನಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಬಂದಿತು ಮತ್ತು ಬಾಂಬೆ ಚಿತ್ರರಂಗದಲ್ಲಿ ಸ್ಥಾನ ದೊರಕಿಸಿಕೊಟ್ಟಿತು. ರಂಗಭೂಮಿ ಅವರ ಆದ್ಯತೆಯಾದ್ದರಿಂದ, ಸತ್ಯು ಎಡ ಚಿಂತನೆಯ ಒಲವು ಇರುವ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಕಾಡೆಮಿ(ಇಪ್ಟಾ) ಸೇರಿದರು. ಆದರೆ, ಅವರ ಮನಸ್ಸು ಸಿನಿಮಾದಲ್ಲಿತ್ತು. ʻಗರಂ ಹವಾʼ ಮೂಲಕ ತಮ್ಮನ್ನು ಸಾಬೀತುಪಡಿಸಿಕೊಂಡರು. ಅವರ ಎರಡನೇ ಚಿತ್ರ ʻಕನ್ನೇಶ್ವರ ರಾಮʼ, ಬ್ರಿಟಿಷರಿಗೆ ಸವಾಲು ಹಾಕುವ ರಾಬಿನ್ ಹುಡ್‌ ಆಗಿ ರೂಪಾಂತರಗೊಂಡ ಸರಳ ರೈತನ ಪ್ರಕ್ಷುಬ್ಧ ಜೀವನವನ್ನು ತೋರಿಸುತ್ತದೆ. ನಾಡಗೀತೆ ಮೂಲಕ ಕಥೆಯನ್ನು ನಿರೂಪಿಸುವ ಜಾನಪದ ತಂತ್ರ ಚಿತ್ರದ

ಶಕ್ತಿಯಾಗಿದೆ. (ನರವೀರ ಕನ್ನೇಶ್ವರ ರಾಮನೆಂಬ ಕಾಡು ಶೂರ/ ಸಮದ್‌ ಸಾಹೇಬ್).

ಚಿತೆಗೂ ಚಿಂತೆ(ದಿ ರೆಸ್ಟ್‌ಲೆಸ್ ಕಾರ್ಪ್ಸ್) ಒಂದು ರಾಜಕೀಯ ವ್ಯಾಖ್ಯಾನ ಮತ್ತು ವಿಡಂಬನೆ ಚಿತ್ರ. ನಿರೂಪಣೆ ಸಂಕೀರ್ಣವಾಗಿದ್ದರೂ, ವಿನೋದಮಯವಾಗಿದೆ. ಜ್ಞಾನಪೀಠ ಪುರಸ್ಕೃತ ಲೇಖಕ ಮತ್ತು ಸಾರ್ವಜನಿಕ ಚಿಂತಕ ಯು.ಆರ್. ಅನಂತಮೂರ್ತಿಯವರ ಸಣ್ಣ ಕಥೆಯನ್ನು ಆಧರಿಸಿದ ʻಬರʼ ಅಧಿಕಾರಶಾಹಿ ಮತ್ತು ರಾಜಕಾರಣಿಗಳ ನಡುವಿನ ಸಂಘರ್ಷವನ್ನು ಚಿತ್ರಿಸಿದ ರೀತಿಯು ಸತ್ಯು ಅವರನ್ನು ಮತ್ತೆ ಮುನನೆಲೆಗೆ ತಂದಿತು. ಬೀದರ್‌ನ ಬರಪೀಡಿತ ಪ್ರದೇಶಗಳಲ್ಲಿ ಆಹಾರ ವಿತರಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವನ್ನು ಹಾಗೂ ಸಂಘರ್ಷದಲ್ಲಿ ಸಿಲುಕಿದ ಆದರ್ಶವಾದಿ ಡೆಪ್ಯುಟಿ ಕಮಿಷನರ್(ಅನಂತ್ ನಾಗ್) ಅವರ ಮಾನಸಿಕ ಪ್ರಕ್ಷುಬ್ಧತೆಯನ್ನು ಸಮರ್ಥವಾಗಿ ನಿಭಾಯಿಸಿದರು. ಇದು ವಾಣಿಜ್ಯಿಕವಾಗಿ ಹಿಟ್ ಆದ ಚಿತ್ರ. ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ 14 ವಾರ ಕಾಲ ಓಡಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಉಪಸ್ಥಿತರಿದ್ದರು. ಚಲನಚಿತ್ರವನ್ನು ನೋಡಿದ ನಂತರ, ʻ ಚಿತ್ರ ನಿರ್ಮಿಸುವ ಮೊದಲು ತಮ್ಮನ್ನು ಸಂಪರ್ಕಿಸಿದ್ದರೆ, ಕೆಲವು ಆಸಕ್ತಿಕರ ಮಾಹಿತಿ ನೀಡುತ್ತಿದ್ದೆʼ ಎಂದು ಹೇಳಿದ್ದರು! ಈ ಚಿತ್ರ ಮಾಡಲು ಶಶಿ ಕಪೂರ್ ಅವರು 25,000 ರೂ. ನೆರವು ನೀಡಿದ್ದರು. ಕೋಲ್ಕತ್ತಾದಲ್ಲಿ ಚಿತ್ರೀಕರಿಸಿದ ʻಕಹಾನ್ ಕಹಾನ್ ಸೆ ಗುಜರ್ ಗಯಾʼ ಚಿತ್ರದಲ್ಲಿ ಅನಿಲ್ ಕಪೂರ್, ಶರೋನ್ ಪ್ರಭಾಕರ್, ನಿತಿನ್ ಸೇಥಿ, ನಿಶಾ ಸಿಂಗ್ ಮತ್ತು ರೀತಾ ರಾಣಿ ಕೌಲ್ ನಟಿಸಿದ್ದಾರೆ. ಚಿತ್ರಕ್ಕಾಗಿ ಅವರು ಪಶ್ಚಿಮ ಬಂಗಾಳ ಸರ್ಕಾರದ ನೆರವು ಪಡೆದರು. ಚಿತ್ರ ಯೌವನದ ಅಸಹಾಯಕತೆ, ಜವಾಬ್ದಾರಿಯಿಂದ ದೂರ ಸರಿಯುವಿಕೆ, ಇದಕ್ಕೆ ವ್ಯವಸ್ಥೆಯನ್ನು ದೂಷಿಸುವುದು ಇತ್ಯಾದಿಯನ್ನು ತೋರಿಸುತ್ತದೆ. ಸತ್ಯು ತಮ್ಮ ಇಷ್ಟದ ವಿಷಯವಾದ ಜಾತ್ಯತೀತತೆಗೆ ಮರಳಿದ್ದಾರೆ. ಖಲಿಸ್ತಾನ್ ಸಮಸ್ಯೆಯನ್ನು ಜಾತಿ ಮತ್ತು ಧರ್ಮದ ಪಟ್ಟಕದ ಮೂಲಕ ಪ್ರಸ್ತಾಪಿಸಿದರು. ಚಿತ್ರದಲ್ಲಿ ದೇವದಾಸಿಯರ ಸಮಸ್ಯೆಯನ್ನು ನಿರ್ವಹಿಸಿದರು; ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಚಿತ್ರ ಪರಿಶೋಧಿಸುತ್ತದೆ. ಚಲನಚಿತ್ರವು ಅಹಮದಾಬಾದ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲಿಗೆ ಹಾಗೂ ಆನಂತರ ಬೆಲಾರಸ್‌ನಲ್ಲಿ ನಡೆದ ಮಿನ್ಸ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ಕಾದಂಬರಿಯನ್ನು ಆಧರಿಸಿ ʻಕೊಟ್ಟʼ ಚಿತ್ರವನ್ನೂ ನಿರ್ಮಿಸಿದ್ದಾರೆ.

ಸತ್ಯು ಅವರ ಮೊದಲ ಪ್ರೀತಿ ರಂಗಭೂಮಿ. ಚಲನಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ, ರಂಗಭೂಮಿಯನ್ನು ನಿರ್ಲಕ್ಷಿಸಿಲ್ಲ. ಕಲಾ ನಿರ್ದೇಶಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿ, ಇಂಡಿಯನ್ ಪೀಪಲ್ಸ್ ಥಿಯೇಟರ್

ಅಕಾಡೆಮಿ(ಇಪ್ಟಾ)ಯ ಮುಂಚೂಣಿಯಲ್ಲಿದ್ದರು. ದಾರಾ ಶಿಕೋಹ್, ಮುದ್ರಾರಾಕ್ಷಸ, ಆಖ್ರಿ ಶಾಮ, ರಶೋಮನ್, ಬಕ್ರಿ (ಕನ್ನಡದಲ್ಲಿ ಕುರಿ), ಗಿರಿಜಾ ಕೆ ಸಪ್ನೆ, ಮೋಟೆ ರಾಮ್ ಕಾ ಸತ್ಯಾಗ್ರಹ್, ಎಮಿಲ್ಸ್ ಎನೆಮೀಸ್(ಅಡಾಲ್ಫ್ ಹಿಟ್ಲರ್-ಎಮಿಲ್ ಅವರ ಹತ್ಯೆ‌ ಪ್ರಯತ್ನ ಕುರಿತದ್ದು) ಸೇರಿದಂತೆ ಒಂಬತ್ತು ನಾಟಕ ನಿರ್ದೇಶಿಸಿದ್ದಾರೆ. ದಾರಾ ಶಿಖೋ ನಾಟಕವು ಯುವ ಮೊಘಲ್ ರಾಜಕುಮಾರ ಮತ್ತು ಷಹಜಹಾನ್‌ನ ಉತ್ತರಾಧಿಕಾರಿಯ ಚಿತ್ರಣವಾಗಿದೆ. ಡ್ಯಾನಿಶ್ ಇಕ್ಬಾಲ್ ಅವರ ಕೃತಿಯನ್ನು ಆಧರಿಸಿದ ʻಅಮೃತʼ ಅವರ ಮತ್ತೊಂದು ಹೆಗ್ಗುರುತು. ಈ ನಾಟಕವು ಅಮೃತಾ ಪ್ರೀತಂ ಅವರ ಪ್ರಸಿದ್ಧ ಪಂಜಾಬಿ ಕಥೆ ಆಧರಿಸಿದೆ. ಅವರ ರಂಗ ವಿನ್ಯಾಸಗಳು ರಂಗಭೂಮಿ ಮತ್ತು ಸಿನಿಮಾಕ್ಕೆ ಹೊಸ

ಮಾನದಂಡಗಳನ್ನು ರೂಪಿಸಿತು. ಅವರು ಚಲನಚಿತ್ರಗಳಲ್ಲೂ ರಾಜಕೀಯ ವ್ಯಾಖ್ಯಾನಗಳನ್ನು ನೀಡಲು ರಂಗಕಲೆಯನ್ನು ಬಳಸುತ್ತಾರೆ. ರಂಗಭೂಮಿಗೆ ಸತ್ಯು ಅವರ ಕೊಡುಗೆಯನ್ನು ಗಮನಿಸಿ, ಸಂಗೀತ ನಾಟಕ ಅಕಾಡೆಮಿ ಅವರಿಗೆ ಪ್ರಶಸ್ತಿ ಮತ್ತು ಫೆಲೋಶಿಪ್ ನೀಡಿ ಗೌರವಿಸಿದೆ.

ಕಲಾತ್ಮಕ ಚಿತ್ರಗಳ ಮೇಲಿನ ಅವರ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಉರ್ದು ಕವಿ ಗಾಲಿಬ್ ಕುರಿತ ಸಾಕ್ಷ್ಯಚಿತ್ರವನ್ನು ನೋಡಬೇಕು. ಚಿತ್ರ ಗಾಲಿಬ್‌ನ ಹತಾಶೆಯನ್ನು, ಬಡತನದಿಂದ ಅನಿಯಂತ್ರಿತ ಅಲೆದಾಡುವಿಕೆಗೆ ತಪ್ಪಿಸಿಕೊಳ್ಳುವ ಪುನರಾವರ್ತಿತ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಕಿರು ತೆರೆಯಲ್ಲಿ ಜ್ಞಾನಪೀಠ ಪುರಸ್ಕೃತ ಲೇಖಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕವೀರ ರಾಜೇಂದ್ರ, ಕಯರ್ ಕಥೆಗಳನ್ನು ಆಧರಿಸಿ ಧಾರಾವಾಹಿಗಳನ್ನು ಮಾಡಿದರು.

ಅವರ ಬಹುತೇಕ ಚಲನಚಿತ್ರಗಳು ರಾಜಕೀಯ ಸ್ವರೂಪದವು:ʻ ನನ್ನನ್ನು ರಾಜಕೀಯ ಚಲನಚಿತ್ರ ನಿರ್ಮಾಪಕ ಮತ್ತು ರಾಜಕೀಯ ರಂಗಭೂಮಿ ವ್ಯಕ್ತಿ ಎಂದು ಗುರುತಿಸಲಾಗಿದೆʼ. ಒಂದರ್ಥದಲ್ಲಿ, ʻಸತ್ಯು ಭಾರತೀಯ ಅನುಭವದ ನೈಜತೆಗಳನ್ನು ಸರಳವಾಗಿ ಮತ್ತು ನೇರವಾಗಿ ದಾಖಲಿಸುವ ತೀಕ್ಷ್ಣಕಣ್ಣೋಟವನ್ನು ಹೊಂದಿದ್ದಾರೆʼ. ತಮ್ಮ ತೊಂಬತ್ತರ ಹರೆಯದಲ್ಲೂ ನಿಗೂಢ ವ್ಯಕ್ತಿಯಾಗಿಯೇ ಉಳಿದಿದ್ದಾರೆ. ಉದ್ದ ಗಡ್ಡ ಮತ್ತು ತೀವ್ರವಾದ, ಧ್ಯಾನಸ್ಥ ಕಣ್ಣುಗಳಿಂದ ಸಾರ್ವಜನಿಕ ಸಮಸ್ಯೆ ಕುರಿತು ಮಾತನಾಡಿ, ಪ್ರಚೋದಿಸುತ್ತಾರೆ. ಪ್ರದರ್ಶನ ಕಲೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ; ಪ್ರದರ್ಶಕ ಕಲೆಗಳು ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡುವ ಜವಾಬ್ದಾರಿಯನ್ನು ಹೊಂದಿವೆ ಎನ್ನುತ್ತ ಸುತ್ತ ನಡೆಯುತ್ತಿರುವ ಸಂಗತಿಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಇಲ್ಲದಿದ್ದರೆ, ದೇಶ ಎದುರಿಸುತ್ತಿರುವ ಸಮಸ್ಯೆಗೆ ನಾವು ನಿರೋಧಕರಾಗುತ್ತೇವೆ ಎಂದು ನಗುತ್ತಾರೆ. ಸೃಜನಾತ್ಮಕ ಮನಸ್ಸಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರುವ ರಾಜಕೀಯ ವ್ಯವಸ್ಥೆಯನ್ನು ಎದುರಿಸುವ ಮಾತು ಆಡುತ್ತಾರೆ.

ಸತ್ಯು ಅವರಿಗೆ ಬಿಫ್ಫೆಸ್‌ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಪತ್ರಕರ್ತೆ ಪ್ರೀತಿ ನಾಗರಾಜ್, ʻಮೊದಲ ಬಾರಿಗೆ ಸತ್ಯು ಅವರ ಹೆಸರನ್ನು ಕೇಳಿದಾಗ, ಮೊಟಕುಗೊಳಿಸಿದ ಅಡ್ಡ ಹೆಸರಿನಂತಿದೆ. ‘ಸತ್ಯು’? ಅಲ್ಲ, ಇದು ಸತ್ಯಾ ಆಗಿರಬೇಕೆ? ಸತ್ಯು ದಂತಕಥೆಯಾಗೇ ಮುಂದುವರಿದಿದ್ದಾರೆ. ಅವರು ಸಿನಿಮಾ ಅಥವಾ ರಂಗಭೂಮಿಗೆ ಸೇರಿದವರೆ? ಮೈಸೂರು ಅಥವಾ ಬೆಂಗಳೂರಿಗೆ ಸೇರಿದ್ದಾರೋ ಅಥವಾ ಮುಂಬೈಗೆ ಸೇರಿದವರೋ?ಭಾರತ ಅಥವಾ ಅಂತಾರಾಷ್ಟ್ರೀಯ? ಅವರು ಯಾವ ಸ್ಥಾನದಲ್ಲಿ ನಿಂತಿದ್ದಾರೆ? ಅವರನ್ನು ಒಂದು ಸ್ಥಾನಕ್ಕೆ ನಿಗದಿಗೊಳಿಸಲು ಪ್ರಯತ್ನಿಸಿದಾಗಲೆಲ್ಲ ಕಲಾತ್ಮಕತೆಯ ಇನ್ನೊಂದು ಬದಿಗೆ ಹಾರಿ, ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ತಮ್ಮ ಸಿನಿಮಾದಲ್ಲಿ ಬದುಕಿದ ಕೆಲವು ಮರೆಯಲಾಗದ ಚೌಕಟ್ಟುಗಳನ್ನು ನೀಡಿದ ಮತ್ತು ದಿಗ್ಭ್ರಮೆಗೊಳಿಸುವ ಕೃತಿಗಳನ್ನು ನೀಡಿದವರು; ಅವರು ತಮ್ಮ ಪ್ರಯತ್ನಗಳನ್ನು ಮೀರಿದ ನಿಗೂಢ. ʻಅವರ ವ್ಯಕ್ತಿತ್ವ ಮತ್ತು ಕೃತಿಗಳನ್ನು ವಿವರಿಸುವುದು ಕತ್ತಲೆಯಲ್ಲಿ ಆನೆಯನ್ನು ವಿವರಿಸಿದಂತೆ. ನಿಮ್ಮ ಸ್ಪರ್ಶವು ನಿಮ್ಮ ಗ್ರಹಿಕೆಗಗಳಿಗೆ ಅನುಗುಣವಾಗಿರುತ್ತದೆ. ಆ ಅಗಾಧ ಗಾತ್ರದ ಆನೆಯ ಅಪಾರ ಅಂಶಗಳು ನಿಮ್ಮ ಗ್ರಹಿಕೆಯನ್ನೂ ಮೀರಿ ಅಸ್ತಿತ್ವ ಉಳಿಸಿಕೊಂಡಿರುತ್ತವೆʼ. ಇದು ಸತ್ಯು ಸೃಷ್ಟಿಸಿದ ಮತ್ತು ಬದುಕಿದ ಜಗತ್ತಿನ ಕಣ್ಣಿಗೆ ಕಾಣುವ ಸತ್ಯು ಅವರ ನೋಟ.

Read More
Next Story