Dating App Fraud| ಹುಷಾರು! ನೀವೂ ಮಾಯಾಂಗನೆಯ ಬಲೆಗೆ ಬಿದ್ದೀರಿ
x
ಡೇಟಿಂಗ್‌ ಆಯಪ್‌ಗಳಿಗೆ ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ.

Dating App Fraud| ಹುಷಾರು! ನೀವೂ ಮಾಯಾಂಗನೆಯ ಬಲೆಗೆ ಬಿದ್ದೀರಿ

ಡೇಟಿಂಗ್ ಆ್ಯಪ್‌ಗಳನ್ನು ಬಳಸಿಕೊಂಡು ಅಮಾಯಕರನ್ನು ವಂಚಿಸುವ ವಂಚಕರು ಕೂಡ ಬಹಳಷ್ಟು ಜನರಿದ್ದಾರೆ.


Click the Play button to hear this message in audio format

ಹದಿ ಹರೆಯದ ವಯಸ್ಸಿನಲ್ಲಿ ಪ್ರೀತಿ ಮೂಡುವುದು ಸಹಜ. ಈಗಿನ ಜನರೇಷನ್ ಅಂತೂ ಪ್ರೀತಿ ಪ್ರೇಮಗಳ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಏಕೆಂದ್ರೆ ಡಿಜಿಟಲ್‌ ಯುಗದಲ್ಲಿ ಯುವಜನತೆ ತಮ್ಮ ಸಂಗಾತಿಯರನ್ನು ಕೂಡ ಇಂಟರ್ನೆಟ್ ಮೂಲಕ ಹುಡುಕಷ್ಟು ಟೆಕ್ನಾಲಜಿ ಮುಂದುವರೆದಿದೆ. ಇದಕ್ಕಾಗಿಯೇ ಹಲವಾರು ಡೇಟಿಂಗ್ ಆ್ಯಪ್‌ಗಳಿವೆ. ಭಾರತದಲ್ಲೂ ಡೇಟಿಂಗ್ ಆ್ಯಪ್ ಬಳಕೆ ಮಾಡುವವರ ಸಂಖ್ಯೆ ಅಧಿಕವಿದೆ.

ಈ ಆ್ಯಪ್‌ಗಳಲ್ಲಿ ನೀವು ಇಷ್ಟಪಡುವ ಪ್ರೊಫೈಲ್‌ಗಳನ್ನು ಬಲಕ್ಕೆ ಸ್ವೈಪ್ ಮಾಡುವ ಮತ್ತು ಇಷ್ಟಪಡದವರಿಗೆ ಎಡಕ್ಕೆ ಸ್ವೈಪ್ ಮಾಡಬುದಾದ ಆಯ್ಕೆ ಇದೆ. ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಇಷ್ಟಪಟ್ಟರೆ, ಮ್ಯಾಚ್ ಆದರೆ ಚಾಟ್ ಮಾಡಲು ಆಯ್ಕೆಯನ್ನು ಪಡೆಯುತ್ತೀರಿ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಸ್ಕಾಮರ್‌ಗಳು ಡೇಟಿಂಗ್ ಆ್ಯಪ್‌ಗಳಲ್ಲಿ ನಕಲಿ ಫ್ರೊಫಲ್ ಸೃಷ್ಟಿಸಿ ಅಮಾಯಕರನ್ನು ಬಲೆಗೆ ಬೀಳಿಸಿ, ಲಕ್ಷಗಟ್ಟಲೆ ಹಣವನ್ನು ದೋಚುತ್ತಿದ್ದಾರೆ. ಇಂತಹ ಸ್ಕಾಮ್‌ಗಳಿಗೆ ಅತೀ ಹೆಚ್ಚು ಪುರುಷರೇ ಬಲಿಯಾಗುತ್ತಾರೆ. ಕೆಲವೊಂದು ಪ್ರಕರಣದಲ್ಲಿ ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳೂ ಬಲಿಯಾಗಿರುವ ಉದಾಹರಣೆಗಳೂ ಸಾಕಷ್ಟಿವೆ.

ʼದ ಫಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ ಹೆಸರು ಹೇಳಲು ಇಚ್ಛಿಸದ ಯುವಕನೋರ್ವ ತಾನು ಸ್ಕಾಮ್‌ಗೆ ಬಲಿಯಾದ ಬಗ್ಗೆ ವಿವರಿಸುತ್ತಾ, "ನನಗೆ ಡೇಟಿಂಗ್ ಆ್ಯಪ್ ಟಿಂಡರ್‌ನಲ್ಲಿ ಹುಡುಗಿಯೊಬ್ಬಳು ಮ್ಯಾಚ್‌ ಆಗುತ್ತಾಳೆ. ವೇರಿಫೇಕೇಶನ್‌ಗಾಗಿ ಇಸ್ಟಗ್ರಾಮ್‌ ಐಡಿಗಳನ್ನು ಪರಸ್ಪರ ಶೇರ್ ಮಾಡ್ಕೊಂಡೆವು. ನನಗೆ ಆಕೆ ವಿಡಿಯೋ ಕಾಲ್‌ ಮಾಡುವಂತೆ ಕೇಳ್ತಾಳೆ. ಕಾಲ್‌ ಮಾಡಿದ್ರೆ ಆ ಕಡೆಯಿಂದ ಹುಡುಗಿ ಅರೆಬೆತ್ತಲೆಯಾಗಿ ನಿಂತ್ತಿದ್ಲು. ವಿಡಿಯೋ ರೆಕಾರ್ಡ್‌ ಆಗಿದ್ದು ನನಗೆ ಗೊತ್ತೇ ಆಗಲಿಲ್ಲ. ವಿಡಿಯೋ ಕಾಲ್ ಕಟ್‌ ಮಾಡಿದೆ. ತಕ್ಷಣ ನನಗೆ ಮೆಸೇಸ್‌ ಬಂತು. ಕೆಲವೇ ಸೆಕೆಂಡುಗಳ ವಿಡಿಯೋವನ್ನು ಬಳಸಿಕೊಂಡು ಇಂತಿಷ್ಟು ಹಣ ಕೊಡಬೇಕು.ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಹರಿಯಬಿಡುವ ಬೆದರಿಕೆಯನ್ನು ನೀಡಿದ್ರು. ಮರ್ಯಾದೆಗೆ ಹೆದರಿ ಹಣ ಕೊಡಬೇಕಾಯಿತು" ಎಂದು ಹೇಳಿದರು. ಇಂಥಹ ಹಲವಾರು ಘಟನೆಗಳು ನಡೆದಿವೆ.

ಎಐಗಳ ಮೂಲಕ ನಕಲಿ ಫ್ರೊಫೈಲ್‌ ಸೃಷ್ಟಿ

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಾದ ಡೇಟಿಂಗ್‌ ಆ್ಯಪ್‌ಗಳನ್ನು ಬಳಸಿಕೊಂಡು ವಂಚನೆ ಮಾಡುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಫೇಕ್‌ ಪೋಟೋಗಳನ್ನು ಬಳಸಿ ವಂಚಕರು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿರುತ್ತಾರೆ. ನಾವು ಸೈಬರ್‌ ಫ್ಲಾಟ್‌ಫಾರ್ಮ್‌ಗಳನ್ನು ಕೇವಲವಾಗಿ ಕಾಣುತ್ತಿದ್ದೇವೆ. ಆದರೆ ವಂಚಕರು ನಮ್ಮ ಅರಿವಿಗೆ ಬಾರದಂತೆ ಸುಲಭವಾಗಿ ಮೋಸಗೊಳಿಸಬಹದು.

ಎಐ (ಆರ್ಟಿಫಿಶಲ್‌ ಇಂಟೆಲಿಜೆಂಟ್‌) ಗಳನ್ನು ಬಳಸಿಕೊಂಡು ಕಾಲ್‌, ವಾಯ್ಸ್‌ ರೆಕಾರ್ಟ್‌, ಫೋಟೋಗಳನ್ನು ನೀವು ನಂಬುವಂತೆ ಕಳಿಸಬಹುದು. ಇದರಿಂದ ಸಾಕಷ್ಟು ಮಂದಿ ಹಣವನ್ನು ಕಳೆದುಕೊಳ್ಳುವ ಅನೇಕ ನಿದರ್ಶನಗಳಿವೆ. ಎಐಗಳ ಮೂಲಕ ಏನು ಮಾಡಲು ಸಾಧ್ಯವಾಗುತ್ತದೆ ಎನ್ನುವ ಎಚ್ಚರಿಕೆ ನಮ್ಮಲ್ಲಿ ಇರಬೇಕು ಎಂದು ಸೈಬರ್‌ ಎಕ್ಸಪರ್ಟ್‌ ಆಗಿರುವ ಶ್ರೀನಿವಾಸ್‌ ಆಚಾರ್ಯ ದ ಫೆಡರಲ್‌ ಕರ್ನಾಟಕಕ್ಕೆ ಮಾಹಿತಿ ನೀಡಿದರು.

ತಂದೆ –ತಾಯಿಯರ ಅನಾರೋಗ್ಯ ನೆಪ ಹೇಳಿ ಅರ್ಜೆಂಟಾಗಿ ಹಣ ಟ್ರಾನ್ಸ್‌ಫಾರ್‌ ಮಾಡುವಂತೆ ಚಾಟಿಂಗ್, ಹನಿಟ್ರಾಪ್‌ ಮಾಡುವ ಮೂಲಕ ಅನೇಕ ಸ್ಕಾಮ್‌ಗಳು ನಡೆಯುತ್ತಿವೆ. ನಾವು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಚಾಟಿಂಗ್‌ ಮಾಡುತ್ತಿದ್ದೇವೆ ಅಂದ್ರೆ 50% ನಾವು ಒಬ್ಬ ಸ್ಟ್ರೇಂಜರ್‌ ಜೊತೆ ಮಾತನಾಡುತ್ತಿದ್ದೇವೆ ಎಂಬುವುದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು.

ಈ ವಂಚಕರು ವಂಚನೆಗಾಗಿ ಎರಡು ವಿಧಾನಗಳನ್ನು ಬಳಸುತ್ತಾರೆ. ಒಂದು ಅರ್ಜಂಟಾಗಿ ಹಣ ಬೇಕು ಎನ್ನುವ ಒಂದು ಕೆಟಗೆರಿ ಇದ್ದರೆ, ಇನ್ನೊಂದು ತಮ್ಮ ಐಡೆಂಟಿಗಳನ್ನು ಎಐಗಳನ್ನು ಬಳಸಿ ಅಮಾಯಕರನ್ನು ತಮ್ಮ ಮೋಸದ ಜಾಲಕ್ಕೆ ಬೀಳಿಸುತ್ತಾರೆ. ಎಐಗಳ ಮೂಲಕ ನೀವು ಹುಡುಗ ಇದ್ದು ಹುಡುಗಿ ವಾಯ್ಸ್‌ನಲ್ಲಿ ವಾಯ್ಸ್‌ಮೆಸೇಜ್‌ ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.

ಡೇಟಿಂಗ್ ಆ್ಯಪ್ ವಂಚನೆಗೆ ಬಲಿಯಾಗಿ ಹಣವನ್ನು ಕಳೆದುಕೊಂಡರೆ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬಹುದು. ಆದರೆ ಹಣವನ್ನು ರಿಕವರಿ ಮಾಡುವುದು ಕೆಲವೊಂದು ಸಂದರ್ಭದಲ್ಲಿ ಕಷ್ಟಸಾಧ್ಯ. ಏಕೆಂದರೆ ವಂಚಕ ಆಗಲೇ ಹಣ ವಿಥ್‌ಡ್ರಾ ಮಾಡಿಬಹುದು ಆ ಸಂದರ್ಭದಲ್ಲಿ ಹಣವನ್ನು ವಸೂಲಿ ಮಾಡುವುದು ಸ್ಪಲ್ಪ ಕಷ್ಟಕರವಾಗಬಹುದು. ನೀವು ಈ ಕೃತ್ಯಕ್ಕೆ ಒಳಗಾಗಿದ್ರಿ ಎಂದಾದರೆ, ತಕ್ಷಣ ಸೈಬರ್‌ ಪೊಲೀಸ್‌ಗೆ ಕಂಪ್ಲೇಟ್‌ ಕೊಡಬೇಕು ಎಂದರು.

ಡೇಟಿಂಗ್‌ ಸ್ಕಾಮ್‌ಗಳ ಬಗ್ಗೆ ಡಿಸಿಪಿಯ ಸಲಹೆ ಏನು?

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಡೇಟಿಂಗ್ ಆ್ಯಪ್ ಸ್ಕಾಮ್‌ಗಳ ಬಗ್ಗೆ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡುತ್ತಾ, ಡೇಟಿಂಗ್‌ ಆಪ್‌ಗಳಲ್ಲಿ ಫ್ರಾಡ್‌ಕಾಸ್ಟ್‌ ಮಾಡುವವರು ಹೆಚ್ಚಿನವರು ಯುವತಿಯರೇ ಆಗಿರುತ್ತಾರೆ. ಸುಂದರವಾದ ಫೋಟೋಗಳನ್ನು ಬಳಸಿಕೊಂಡು ಪುರುಷರನ್ನು ಆಕರ್ಷಿಸುತ್ತಾರೆ. ಆದರೆ ಇಂಥ ಪ್ರೊಫೈಲ್‌ಗಳು ಇಂಟರ್‌ನೆಟ್‌ ಮೂಲಕನೇ ಸಂಭಾಷಣೆ ನಡೆಸುತ್ತಾರೆ. ಯಾವತ್ತೂ ರೆಗ್ಯುಲರ್‌ ನಂಬರ್‌ಗಳನ್ನು ಬಳಸಿ ಫೋನ್‌ ಮಾಡುವುದಿಲ್ಲ. ಯಾರು ಫೇಕ್‌ ಫೋಟೋಗಳನ್ನು ಬಳಸಿಕೊಂಡು, ಇಂಟರ್‌ನೆಟ್‌ಗಳನ್ನು ಬಳಸಿ ನಿಮ್ಮೊಂದಿಗೆ ಕಾಲ್‌ ಮಾಡುತ್ತಾರೆ ಎಂದಾದರೆ ಇದೊಂದು ಸ್ಕಾಮ್‌ ಎನ್ನುವುದು ಕ್ಯಾಚೀ ಪಾಯಿಂಟ್.

ಇದು ಒಂದು ರೀತಿಯ ಸ್ಕಾಮ್‌. ಆದರೆ ಕೆಲವು ವಂಚಕರು ಹುಡುಗಿಯೊಂದಿಗೆ ಕಾಂಪ್ರಮೈಸ್‌ ಆಗಿ ಸಲುಗೆ ಬೆಳಿಸಿಕೊಂಡು ವಿಡಿಯೋ ಕಾಲ್‌ಗಳು, ಪೋಟೋಗಳನ್ನು ಕಳಿಸುವಂತೆ ಮಾಡುತ್ತಾರೆ. ಬಳಿಕ ಅವುಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಾರೆ.

ಡೇಟಿಂಗ್‌ ಆ್ಯಪ್‌ಗಳ ಮೂಲಕ ಡೇಟ್ ಮಾಡಲು ಬಯಸುವವರು ಇಂಟರ್‌ನೆಟ್‌ ಕಾಲ್‌ಗಳ ಬದಲು ರೆಗ್ಯೂಲರ್‌ ಕಾಲ್‌ಗಳಿಗೆ ಆದ್ಯತೆ ನೀಡಿ. ನಿಮಗೆ ಮ್ಯಾಚ್‌ ಆಗುವ ವ್ಯಕ್ತಿಯ ಪ್ರೊಫೈಲ್‌, ಸ್ಥಳ, ಯಾರು ಏನು ಎಂಬುವುದನ್ನು ಮೊದಲು ಖಚಿತ ಪಡಿಸಿಕೊಂಡು ಮುಂದುವರಿಯಬೇಕು. ಒಟ್ಟಿನಲ್ಲಿ ಯಾವುದೇ ಇಂಟರ್‌ನೆಟ್‌ ಕಾಲ್‌, ವಿಡಿಯೋ ಕಾಲ್‌ಗಳು ಮತ್ತು ಪೋಟೋಗಳನ್ನು ಹಂಚಿಕೊಳ್ಳದೇ ಇರುವುದು ಉತ್ತಮ ಎನ್ನುವುದು ಡೇಟಿಂಗ್ ಆ್ಯಪ್‌ ಬಳಕೆದಾರರಿಗೆ ಡಿಸಿಪಿ ಅವರು ಸಲಹೆ ನೀಡುತ್ತಾರೆ.

ಆನ್‌ಲೈನ್‌ ಡೇಟಿಂಗ್ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

ಡೇಟಿಂಗ್ ಆ್ಯಪ್ ಬಳಸುವವರು ಇಂಥ ಸ್ಕಾಮ್‌ಗಳಿಂದ್ ಬಹಳಷ್ಟು ಸುರಕ್ಷಿತರಾಗಿರಬೇಕು.

1. ನೀವು ಡೇಟಿಂಗ್ ಆ್ಯಪ್‌ನಲ್ಲಿ ಮ್ಯಾಚ್ ಆದವರೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಬಹಳಷ್ಟು ಜಾಗರೂಕರಾಗಿರಿ.

2. ನಿಮ್ಮ ಮನೆಯ ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಇದನ್ನು ನಂತರ ದುರುಪಯೋಗಪಡಿಸಿಕೊಳ್ಳಬಹುದು.

3. ಡೇಟಿಂಗ್ ಅಪ್ಲಿಕೇಶನ್‌ ಮೂಲಕ ಪರಿಚಯವಾಗುವವರಿಗೆ ಭೇಟಿಯಾಗುವ ಮೊದಲು ಯಾರಿಗೂ ಹಣವನ್ನು ಕಳುಹಿಸಬೇಡಿ.

4. ಹಣವನ್ನು ಕೇಳುವ ಜನರ ಬಗ್ಗೆ ಸಂಶಯವಿರಲಿ. ನಿಮ್ಮಿಂದ ಯಾರಾದರು ಹಣವನ್ನು ಕೇಳಲು ಆರಂಭಿಸಿದ್ರೆ ನೀವು ವಂಚನೆಗೆ ಒಳಗಾಗುತ್ತೀರಿ ಎಂಬುವುದನ್ನು ನೆನಪಿಟ್ಟುಕೊಳ್ಳಿ.

5. ವ್ಯಕ್ತಿಯ ಪ್ರೊಫೈಲ್ ಚಿತ್ರವನ್ನು ಪರಿಶೀಲಿಸಲು ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿ- ಚಿತ್ರವನ್ನು ಇತರ ವೆಬ್ಸೈಟ್ಗಳು ಅಥವಾ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಬಳಸಲಾಗುತ್ತಿದೆಯೇ ಎಂದು ನೋಡಲು ಇದು ನಿಮಗೆ ಸಹಾಯ ಮಾಡುತ್ತದೆ ಮತ್ತು ಇದು ನಕಲಿ ಪ್ರೊಫೈಲ್ ಆಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಕೂಡ ಸಿಗಬಹುದು.

6. ವ್ಯಕ್ತಿಯ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ. ಇದರಿಂದ ವ್ಯಕ್ತಿಯ ಬಗ್ಗೆ ಏನಾದರೂ ಅಪರಾಧ ಇದೆಯೇ ಎಂಬುವುದನ್ನು ತಿಳಿದುಕೊಳ್ಳಬಹುದು.

ಎಷ್ಟು ಡೇಟಿಂಗ್ ಆ್ಯಪ್‌ಗಳಿವೆ?

ವಿಶ್ವದಾದ್ಯಂತ ಒಟ್ಟು 1,500 ಡೇಟಿಂಗ್ ಅಪ್ಲಿಕೇಶನ್ಗಳು ಮತ್ತು ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ . ಈ ಮಾರುಕಟ್ಟೆಯು 2025 ರ ವೇಳೆಗೆ $9.2 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ.

ಭಾರತದಲ್ಲಿ ಡೇಟಿಂಗ್ ಅಪ್ಲಿಕೇಶನ್ ಮಾರುಕಟ್ಟೆ ಎಷ್ಟು ದೊಡ್ಡದಾಗಿದೆ?

ಡೇಟಿಂಗ್ ಸೇವೆಗಳ ಮಾರುಕಟ್ಟೆಯಲ್ಲಿನ ಆದಾಯವು 2023 ರಲ್ಲಿ $397.90m ತಲುಪಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸರಿಸುಮಾರು 35 ಮಿಲಿಯನ್ ಬಳಕೆದಾರರನ್ನು ಈ ವಲಯ ಹೊಂದಿದೆ. ಭಾರತೀಯರು ಡೇಟಿಂಗ್ ಅಪ್ಲಿಕೇಶನ್‌ಗಳಿಗಾಗಿ ಸುಮಾರು $400 ಮಿಲಿಯನ್ ಖರ್ಚು ಮಾಡುತ್ತಾರೆ. ಭಾರತವು 2027 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಡೇಟಿಂಗ್ ಸೇವೆಗಳ ಮಾರುಕಟ್ಟೆಯಾಗಲಿದೆ. ಇದು ಕೇವಲ ನಾಲ್ಕು ವರ್ಷಗಳ ಹಿಂದೆ $270 ಮಿಲಿಯನ್ ಆಗಿತ್ತು.

Read More
Next Story