
ಸ್ಥಳೀಯ ಉದ್ಯಮ ಹಣಿದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ
ಹಲವು ಪಟ್ಟಣಗಳ ಜೀವನಾಡಿಯಾಗಿದ್ದ ವ್ಯಾಪಾರ ವಹಿವಾಟಿಗೆ ಮರ್ಮಾಘಾತ ನೀಡಿದ ಬಹುಕೋಟಿ ಹೆದ್ದಾರಿ ಯೋಜನೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಕ್ಕೆ ಕಡಿತಗೊಳಿಸಿ, ಪ್ರಯಾಣಿಕರಿಗೆ ವರದಾನವಾಗಿದೆ. ಆದರೆ, 119 ಕಿಮೀ ಉದ್ದದ, 8,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಎಕ್ಸ್‌ಪ್ರೆಸ್‌ವೇ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಐತಿಹಾಸಿಕ ಪಟ್ಟಣಗಳನ್ನು ಮಸುಕುಗೊಳಿಸಿದೆ. ಪ್ರಗತಿ ಎನ್ನುವುದು ಎಲ್ಲರನ್ನೂ ಒಳಗೊಳ್ಳುವುದಿಲ್ಲ ಎಂದು ಸಾಬೀತು ಮಾಡಿದೆ.
ಪ್ರಯಾಣಿಕರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನದ ಕಿಟಕಿ ಮೇಲೇರಿಸಿ, ಮುನ್ನಡೆಯುತ್ತಾರೆ. ಮಾರ್ಗಮಧ್ಯೆ ರಾಮಗರದ ಮೈಸೂರು ಪಾಕ್‌ನ ಸೇವನೆ ಅಥವಾ ಚನ್ನಪಟ್ಟಣದಲ್ಲಿ ಮಕ್ಕಳಿಗೆ ಬಣ್ಣಬಣ್ಣದ ಮರದ ಆಟಿಕೆಗಳನ್ನು ತೆಗೆದುಕೊಳ್ಳುವ ದಿನಗಳು ಕಳೆದುಹೋಗಿವೆ. ಇದರಿಂದ, ಮಾರ್ಗದುದ್ದ ಇರುವ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರ ಆದಾಯದಲ್ಲಿ ಶೇ. 70ರಷ್ಟು ಕುಸಿತ ಆಗಿದೆ. ಮದ್ದೂರು ವಡೆ, ಮೈಸೂರು ಪಾಕ್‌ನ ತಯಾರಿಕೆ ವಿಧಾನಗಳು ತಲೆಮಾರುಗಳಿಂದ ವರ್ಗಾವಣೆಯಾದಂಥವು. ಒಂದು ಕಾಲದಲ್ಲಿ ದಾರಿಹೋಕರ ಕಣ್ಣುಗಳನ್ನು ಸೆಳೆಯುತ್ತಿದ್ದ ವರ್ಣರಂಜಿತ ಚನ್ನಪಟ್ಟಣದ ಆಟಿಕೆಗಳು ಇಂದು ಮಂದಬೆಳಕಿನ ಅಂಗಡಿಗಳಲ್ಲಿ ಧೂಳು ಸಂಗ್ರಹಿಸುತ್ತಿವೆ.
ʻಶೇ.70 ರಷ್ಟು ವ್ಯಾಪಾರ ಕುಸಿದಿದೆ. ದೀಪ ಬೆಳಗಿಸಲೂ ಹೆಣಗಾಡುತ್ತಿದ್ದೇವೆʼ ಎಂದು ಸ್ಥಳೀಯ ಆಹಾರ ಮಳಿಗೆಯ ಮಾಲೀಕ ಲೋಕೇಶ್ ಗೌಡ ಹೇಳುತ್ತಾರೆ. ಬಿಡದಿಯ 65 ಕ್ಕೂ ಹೆಚ್ಚು ತಟ್ಟೆ ಇಡ್ಲಿ ಹೋಟೆಲ್‌ಗಳಲ್ಲಿ 50 ಕ್ಕೂ ಹೆಚ್ಚು ಮುಚ್ಚಿವೆ. ʻಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಮೊದಲು ತಿಂಗಳಿಗೆ 1.75 ಲಕ್ಷ ರೂ. ಗಳಿಸುತ್ತಿದ್ದೆ. ಈ ತಿಂಗಳಿಗೆ 20,000 ರೂ. ಕೂಡ ಕಷ್ಟ. ತಟ್ಟೆ ಇಡ್ಲಿ ಬ್ರ್ಯಾಂಡ್ ನಿಧಾನವಾಗಿ ಸಾಯುತ್ತಿದೆ,; ಎನ್ನುತ್ತಾರೆ ಲೋಕೇಶ್
ಹೊಂಡಗಳು ಮತ್ತು ನಿರ್ಲಕ್ಷ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಸ್ಥಿತಿ ಘನಘೋರವಾಗಿದೆ. ಹೆದ್ದಾರಿ ಹೊಂಡಗಳಿಂದ ತುಂಬಿದೆ, ಮೂಲಭೂತ ನಿರ್ವಹಣೆ ಕೊರತೆಯಿಂದ ಎಕ್ಸ್‌ಪ್ರೆಸ್‌ವೇಯನ್ನು ತಪ್ಪಿಸಲು ಹೆದ್ದಾರಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಅಪಾಯಕಾರಿಯಾಗಿದೆ. ಈ ಹದಗೆಟ್ಟ ರಸ್ತೆಯನ್ನು ಬಳಸಬೇಕಾದ ಸ್ಥಳೀಯ ನಿವಾಸಿಗಳು, ಅದರ ದುಸ್ಥಿತಿ ಕುರಿತ ತಮ್ಮ ದೂರುಗಳು ಯಾರಿಗೂ ಕೇಳಿಸುತ್ತಿಲ್ಲ ಎಂದು ಆಕ್ಷೇಪಿಸುತ್ತಾರೆ. ಹಳೆಯ ಹೆದ್ದಾರಿಯ ಸ್ಥಿತಿಯನ್ನು ಸುಧಾರಿಸಬೇಕೆಂದು ಕಾಂಗ್ರೆಸ್ ಎಂಎಲ್‌ಸಿ ದಿನೇಶ್ ಗೂಳಿಗೌಡ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ʻಪ್ರಗತಿʼಯಿಂದ ಕುಶಲಕರ್ಮಿಗಳು ಮತ್ತು ಸಣ್ಣ ವ್ಯಾಪಾರಗಳ ಮಾಲೀಕರು, ಕೂಲಿ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ʻಕುಟುಂಬದ ಕಸುಬನ್ನು ತ್ಯಜಿಸಬೇಕಾದ ದಿನವನ್ನು ನೋಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲʼ ಎಂದು ಚನ್ನಪಟ್ಟಣದ ಆಟಿಕೆ ಅಂಗಡಿಯ ಮಾಲೀಕ ಪವನ್ ದೀಪ್ ಹೇಳುತ್ತಾರೆ. ಅವರ ಆದಾಯ ತೀವ್ರವಾಗಿ ಕುಸಿದಿದೆ.
ಚನ್ನಪಟ್ಟಣದ ಕುಶಲಕರ್ಮಿಗಳು ಎರಡು ಶತಮಾನಗಳಿಂದಲೂ ಆಟಿಕೆ ತಯಾರಿಕೆಯ ಪರ್ಷಿಯನ್ ಕಲಾ ಪ್ರಕಾರವನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ. 18 ನೇ ಶತಮಾನದಲ್ಲಿ ಮೈಸೂರು ಪ್ರಾಂತ್ಯದ ಆಡಳಿತಗಾರ ಟಿಪ್ಪು ಸುಲ್ತಾನ್ ಇಲ್ಲಿಗೆ ಗೊಂಬೆ ತಯಾರಿಕೆಯನ್ನು ತಂದರು. ಹಿಂದೂ-ಮುಸಲ್ಮಾನರು ಆಟಿಕೆಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದ್ದು, ಕೋಮು ಸೌಹಾರ್ದದ ಮಾದರಿಯಾಗಿದ್ದಾರೆ.
ಧೂಳು ತುಂಬಿದ ಮಳಿಗೆಗಳು
ಅಂಗಡಿಗಳ ಹೊರಗೆ ಇರಿಸಿರುವ ಮರದ ರಾಕಿಂಗ್ ಕುದುರೆಗಳು ಜನರನ್ನು ಕೈಬೀಸಿ ಕರೆಯುತ್ತವೆ. ಎಕ್ಸ್‌ಪ್ರೆಸ್‌ವೇ ಆರಂಭಗೊಂಡ ಬಳಿಕ ಚನ್ನಪಟ್ಟಣದ ಆಟಿಕೆ ಅಂಗಡಿಗಳು ಮಂಕಾಗಿವೆ. ʻಎಕ್ಸ್‌ಪ್ರೆಸ್‌ವೇ ನಮ್ಮ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ. ಆಟಿಕೆ ವ್ಯಾಪಾರದ ಸರಾಸರಿ ವಾರ್ಷಿಕ ವಹಿವಾಟು 10 ಕೋಟಿಯಿಂದ 12 ಕೋಟಿ ರೂ. ನಾನು ತಿಂಗಳಿಗೆ 5 ಲಕ್ಷ ರೂ. ಸಂಪಾದಿಸುತ್ತಿದ್ದೆ. ಈಗ ಸಂಪಾದನೆ 50 ಸಾವಿರ ರೂ.ಗೆ ಇಳಿದಿದೆ’ ಎನ್ನುತ್ತಾರೆ ಪವನ್ ದೀಪ್.
ʻಈ ಹಿಂದೆ ಅಂಗಡಿಯಲ್ಲಿ ಆರು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಒಬ್ಬರು ಮಾತ್ರ ಇದ್ದಾರೆʼ ಎಂದು ಹೇಳಿದರು. ಚನ್ನಪಟ್ಟಣದ 150ಕ್ಕೂ ಅಧಿಕ ದೊಡ್ಡ ಆಟಿಕೆ ಅಂಗಡಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆರು ದಶಕಗಳಷ್ಟು ಹಳೆಯದಾದ ದೊಡ್ಡ ಆಟಿಕೆ ಮಳಿಗೆ ಶ್ರೀ ಮೀನಾಕ್ಷಿ ಮಳಿಗೆಯ ಮಾಲೀಕ ಕೆ.ವಿ. ಶೇಖರ್, ʻಸಿಬ್ಬಂದಿ ಸಂಖ್ಯೆ 15ರಿಂದ ಎರಡಕ್ಕೆ ಇಳಿದಿದೆ. ಲಕ್ಷಗಟ್ಟಲೆ ಮೌಲ್ಯದ ಮರದ ಆಟಿಕೆಗಳು ಮಾರಾಟವಾಗದೆ ಬಿದ್ದಿವೆʼ ಎಂದು ನಿಟ್ಟುಸಿರು ಬಿಡುತ್ತಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ದೊಡ್ಡ ತಂಗುದಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಬಗ್ಗೆ ಕೂಡ ಸಂದೇಹಾಸ್ಪದವಾಗಿವೆ. ಪವನ್ ದೀಪ್ ಹೇಳುವಂತೆ, ʻಒಂದು ವಿಷಯ ನಿಶ್ಚಿತ: ಅಭಿವೃದ್ಧಿಗೆ ಬೆಲೆ ತೆರಬೇಕಾಗುತ್ತದೆ ಮತ್ತು ನಾವು ಅದನ್ನು ತೆರುತ್ತಿದ್ದೇವೆ.ʼ