ರಾಜಕೀಯದಿಂದ ದೂರ, ಆದರೆ ಚುನಾವಣಾ ರಾಯಭಾರಿಯಾದ ರಮೇಶ್‌ ಅರವಿಂದ್‌
x

ರಾಜಕೀಯದಿಂದ ದೂರ, ಆದರೆ ಚುನಾವಣಾ ರಾಯಭಾರಿಯಾದ ರಮೇಶ್‌ ಅರವಿಂದ್‌


ರಾಜಕೀಯ ಪಕ್ಷದಿಂದ ಎಂಥಹುದೆ ಒತ್ತಡ ಬಂದರೂ, ಕೆಲವು ಸೂಕ್ಷ್ಮ ಮನಸ್ಸಿನ, ಸಮಾಜಮುಖಿ ಕಲಾವಿದರು ರಾಜಕೀಯದಿಂದ, ವಿಶೇಷವಾಗಿ ಚುನಾವಣಾ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಈ ಸಾಲಿನಲ್ಲಿ ವಿಶೇಷವಾಗಿ ನಿಲ್ಲುವವರು ಕನ್ನಡದ ವರನಟ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಡಾ. ರಾಜ್‌ಕುಮಾರ್. ‌ ಈಗ ಇವರ ಸಾಲಿಗೆ ಸೇರಿರುವವರು ರಮೇಶ್‌ ಅರವಿಂದ್. ‌

ರಾಜಕೀಯ ಪಕ್ಷವೊಂದರಿಂದ ರಮೇಶ್‌ ಗೆ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನವಿತ್ತು. ಆದರೆ ರಮೇಶ್‌ ಅವರು ನಯವಾಗಿ ಅದನ್ನು ತಿರಸ್ಕರಿಸಿದರು ಎಂದು ರಮೇಶ್‌ ಅರವಿಂದ್‌ ಅವರ ಸಮೀಪವರ್ತಿಗಳು ʼದ ಫೆಡರಲ್-ಕರ್ನಾಟಕʼ ಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ತುರ್ತು ಸ್ಥಿತಿಯ ನಂತರ, ಅಂದರೆ 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಪ್ರಧಾನಿ ಇಂದಿರಾಗಾಂಧಿ ಕಣಕ್ಕಿಳಿದಾಗ ಅವರ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅಂದಿನ ಜನತಾ ಪಕ್ಷ ತೀರ್ವ ಪ್ರಯತ್ನ ನಡೆಸಿತ್ತು. ಅಂಥ ಸಂದರ್ಭದಲ್ಲಿ ಸಮಾಜವಾದಿ ನಾಯಕರಾದ ಜೆ. ಎಚ್. ‌ ಪಟೇಲ್‌ ಮತ್ತು ಜಾರ್ಜ್‌ ಫರ್ನಾಂಡೀಸ್‌ ಡಾ. ರಾಜ್ ಕುಮಾರ್‌ ಅವರನ್ನು ಕೋರಿದ್ದರು. ಆದರೆ ಈ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದ ರಾಜ್‌ ಕುಮಾರ್‌ ಅವರು ತಾವು ಸಕ್ರೀಯ ರಾಜಕಾರಣದಿಂದ ದೂರವುಳಿದು, ಸಮಾಜಕ್ಕೆ ಅಗತ್ಯವಾದ ಕ್ರಿಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಆ ಮೂಲಕ ಸಮಾಜಕ್ಕೆ ಪ್ರಸ್ತುತರಾಗಿರಲು ಇಚ್ಚೆ ಪಡುವುದಾಗಿ ಹೇಳಿದರು. ಅವರ ಮೇಲೆ ಒತ್ತಡ ಹೆಚ್ಚಿದಾಗ ಅವರು ಯಾರ ಸಂಪರ್ಕಕ್ಕೂ ಸಿಕ್ಕದೇ ಅಜ್ಞಾತರಾಗಿ ಕೆಲವು ಕಾಲ ಉಳಿದರು. ಚಿಕ್ಕಮಗಳೂರಿಗೆ ಅಭ್ಯರ್ಥಿ ನಿಷ್ಕರ್ಷೆಯಾದ ನಂತರವೇ ಅವರು ಬೆಂಗಳೂರಿಗೆ ಹಿಂದಿರುಗಿದರು ಎನ್ನುವುದು ಅವರನ್ನು ಸಮೀಪದಿಂದ ಕಂಡವರ ತಿಳುವಳಿಕೆ.

ಡಾ. ರಾಜ್‌ ಕುಮಾರ್‌ ರಂತೆಯೇ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸುವುದು ಮುಖ್ಯ, ರಾಜಕೀಯದಿಂದ ದೊರೆಯುವ ಅಧಿಕಾರದ ಸ್ಥಾನ ಮುಖ್ಯವಲ್ಲ ಎಂದು ನಂಬಿ ಅದರಂತೆ ನಡೆದವರು ಡಾ. ವಿಷ್ಣುವರ್ಧನ್. ‌ ಅವರು ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮಾಡಿದ್ದು ತಮ್ಮ ಕುಚ್ಚಿಕ್ಕು ಗೆಳೆಯ ಅಂಬರೀಶ್‌ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಿದಾಗ. ಆಗ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ʼಅಂಬರೀಶ್‌ ಗೆ ಮತಕೊಡಿʼ ಎಂದು ಅವರು ಯಾಚಿಸಿದ್ದು ಎಲ್ಲ ಕನ್ನಡಿಗರಿಗೂ ನೆನಪಿದೆ.

ದಿ.‌ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಂಡಿರಲಿಲ್ಲ. ಡಾ. ರಾಜ್‌ಕುಮಾರ್‌ ಮಾದರಿಯಲ್ಲಿಯೇ ರಾಜಕೀಯದಲ್ಲಿ ತಟಸ್ಥ ನಿಲುವು ಅನುಸರಿಸಿದ್ದರು. ಪುನೀತ್‌ ಅವರ ಅತ್ತಿಗೆ ಗೀತಾ ಶಿವರಾಜ್‌ಕುಮಾರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅವರ ಪರವಾಗಿ ಪ್ರಚಾರ ಮಾಡಲಿಲ್ಲ. ಚುನಾವಣಾ ರಾಯಭಾರಿ ಆಗಿದ್ದ ಅವರು, ತಮ್ಮ ಜವಾಬ್ದಾರಿಯನ್ನು ಮರೆಯಲಿಲ್ಲ.

ಇದೇ ರೀತಿ ಸ್ಟಾರ್‌ ನಟರಾದ ದರ್ಶನ್‌, ಯಶ್‌ ಮತ್ತು ಸುದೀಪ್‌ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೆ, ತಮ್ಮ ಗೆಳೆಯರು, ಚಿತ್ರರಂಗದ ಪ್ರಮುಖರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಚಿತ್ರರಂಗದ ಒಳಿತಿನ ದೃಷ್ಟಿಯಿಂದ ಚಿತ್ರರಂಗದ ಪ್ರತಿನಿಧಿಗಳ ಪರವಾಗಿ ಪ್ರಚಾರಕ್ಕಿಳಿದಿದ್ದಿದೆ. ೨೦೧೯ ರಲ್ಲಿ ಸುಮಲತಾ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಪರವಾಗಿ ದರ್ಶನ್‌ ಮತ್ತ್ ಯಶ್‌ ಬೀದಿಗಿಳಿದು ಹೋರಾಡಿದ್ದು, ʼಜೋಡೆತ್ತುʼ ಎಂದು ಜನ ಗುರುತಿಸಿದ್ದು ಎಲ್ಲರಿಗೂ ನೆನಪಿದೆ.

ಈ ಬಾರಿ ಸುಮಲತಾ ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರ ಬೆನ್ನಿಗೆ ತಾವು ನಿಲ್ಲುವುದಾಗಿ ದರ್ಶನ್‌ ಮೊನ್ನೆಯಷ್ಟೇ ಹೇಳಿದ್ದರು. ಸುಮಲತಾ ಬಿಜೆಪಿ ಸೇರಿದ್ದಾರೆ. ಅವರ ಬೆಂಬಲಕ್ಕೆ ದರ್ಶನ್‌ ನಿಂತಿದ್ದಾರೆ ಎಂದು ಹೇಳಲಡ್ಡಿಯಿಲ್ಲ.

ಇತ್ತೀಚೆಗೆ ರಮೇಶ್‌ ಅರವಿಂದ್‌ ಅವರಿಗೆ ಅಂಥ ಒತ್ತಾಯ ಇತ್ತು. ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಬಹುಭಾಷಾ ನಟ ರಮೇಶ್‌ ಅರವಿಂದ್‌ ಅವರು ತಿರಸ್ಕರಿಸಿ, ದೃಶ್ಯ ಮಾಧ್ಯಮದೊಂದಿಗಿನ ಸಂಬಂಧದಲ್ಲಿ, ತಾವು ನಂಬಿರುವ ಸಾಮಾಜಿಕ ಸೇವೆಯ ಕೆಲಸಗಳಲ್ಲಿ ಆತ್ಮ ಸಂತೋಷವನ್ನು ಕಂಡುಕೊಳ್ಳುತ್ತಿರುವುದಾಗಿ ತಮಗೆ ಆಹ್ವಾನ ನೀಡಿದವರಿಗೆ ಹೇಳಿದರೆಂದು ಅವರ ಸಮೀಪವರ್ತಿಗಳು ಹೇಳಿದ್ದಾರೆ.

ಇದೇ ವೇಳೆಗೆ ಅವರಿಗೆ ಬೆಂಗಳೂರು ಜಿಲ್ಲೆಯ ೨೦೨೪ರ ಚುನಾವಣಾ ರಾಯಭಾರಿಯಾಗಲು ಕೋರಿಕೆ ಬಂತು. ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು, ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮಹತ್ವ, ಮತದಾನದ ಹಿರಿಮೆ ಎಲ್ಲವನ್ನೂ ಜನರಿಗೆ ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗದ ಆಹ್ವಾನಕ್ಕೆ ಒಪ್ಪಿಗೆ ನೀಡಿದ್ದಾರೆ.

Read More
Next Story