ಶ್ರಯಂತಿ ಹರಿಚರಣ್ ನಿರ್ದೇಶಿಸಿರುವ ಆಟೋ ಕ್ವೀನ್ಸ್ ಸಾಕ್ಷ್ಯಚಿತ್ರ ಭಾರತದ ಮೊದಲ ಮಹಿಳಾ ಚಾಲಕಿಯರ ಒಕ್ಕೂಟವಾದ ವೀರಾ ಪೆಂಗಳ್ ಮುನ್ನೇತ್ರ ಸಂಗಂ ರೂವಾರಿಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತದೆ.
ಚೆನ್ನೈನ ಪಟ್ಟಿನಪಾಕ್ಕಂ ಕಡಲತೀರದಲ್ಲಿ ಬೀಸುತ್ತಿರುವ ಸಮುದ್ರದ ತಣ್ಣನೆಯ ಗಾಳಿ ಮನಸ್ಸಿಗೆ ಮುದ ನೀಡುತ್ತಿದೆ. ನಗರದ ಸದ್ದು ಗದ್ದಲದಿಂದ ಬೇಸತ್ತವರಿಗೆ ಅಪರೂಪದಲ್ಲಿ ಅಪರೂಪ ಎಂಬಂತೆ ಪ್ರಶಾಂತ ಭಾವ ಮೂಡಿಸಿದೆ. ಈ ತೀರದ ಸೂರ್ಯಾಸ್ತದ ಸಮಯದಲ್ಲಿ ದಡದ ಮೇಲೆ ಖಾಕಿ ಶರ್ಟ್ ಧರಿಸಿದ ಇಬ್ಬರು ಮಹಿಳೆಯರು ಜೊತೆ ಜೊತೆಯಲ್ಲಿ ಕುಳಿತಿದ್ದಾರೆ, ಬಿಳ್ನೊರೆಯನ್ನು ಸವರಿಕೊಂಡು ಬಂದ ಗಾಳಿ ನಿರಂತರ ಬೀಸುತ್ತಲೇ ಇದೆ. ಅವರು ಕರಿದ ಮೀನು (ಮಾರ್ಕೆಲ್, ಆಂಚೋವಿ)ಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ, ಜೊತೆಗೆ ವಿನೋದ, ನಗು ಮತ್ತು ಜೀವನದ ಯೋಚನೆಗಳನ್ನೂ ವಿನಿಮಯ ಮಾಡಿಕೊಳ್ಳುತ್ತಾ ಖುಷಿಯಲ್ಲಿ ತೇಲಾಡುತ್ತಾರೆ.
ಸ್ರಯಂತಿ ಹರಿಚರಣ್ ನಿರ್ದೇಶನದ ಕಿರು ಸಾಕ್ಷ್ಯಚಿತ್ರ ‘ಆಟೋ ಕ್ವೀನ್ಸ್' ಚೆನ್ನೈನ ಮಹಿಳಾ ಆಟೋ-ರಿಕ್ಷಾ ಚಾಲಕರ ಜೀವನ ಚಿತ್ರಣವನ್ನು ತೆರೆದಿಡುವ ರೀತಿಯಿದು. ಇದು ಇತ್ತೀಚೆಗೆ ಆಮ್‌ಸ್ಟರ್‌ಡ್ಯಾಮ್‌ನ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವದಲ್ಲಿ (IDFA) ತನ್ನ ಮೊದಲ ಪ್ರದರ್ಶನವನ್ನು ಕಂಡಿತು. ಈ ಮಹಿಳೆಯರಿಗೆ ರಸ್ತೆ ಎಂಬುದು ತಮ್ಮ ಹಕ್ಕಿನ ಹಾದಿ, ಅವರ ಹಂಬಲದ ಸ್ಥಳ, ಅವರು ಒಟ್ಟಾಗಿ ಕಡೆದು ನಿಲ್ಲಿಸಲು ಹೊರಟಿರುವ ಒಂದು ಪ್ರದೇಶ.
ವೀರ ಪೆಣ್ಗಳ್ ಮುನ್ನೇತ್ರ ಸಂಗಂ ಜನನ
ಚೆನ್ನೈ ನಗರದಲ್ಲಿ ಈಗಲೂ ಪುರುಷ ಚಾಲಕರದ್ದೇ ಪಾರಮ್ಯ. ಆದರೆ ಕ್ರಮೇಣ ಈ ಚಿತ್ರಣ ಬದಲಾಗುತ್ತಿದೆ. ಏಪ್ರಿಲ್ 2024ರಲ್ಲಿ, ಆಟೋ-ರಿಕ್ಷಾ ಚಾಲನೆ ಮಾಡುವ ಮಹಿಳೆಯರ ಗುಂಪೊಂದು ಔಪಚಾರಿಕವಾಗಿ ಭಾರತದ ಮೊದಲ ಮಹಿಳಾ ಚಾಲಕರ ಸಂಘವನ್ನು ನೋಂದಣಿ ಮಾಡಿಕೊಂಡಿತು. ಅದರ ಹೆಸರು ವೀರ ಪೆಣ್ಗಳ್ ಮುನ್ನೇತ್ರ ಸಂಗಂ (VPMS). ಸಂಸ್ಥಾಪಕ ಸದಸ್ಯರಲ್ಲಿ ಮೊಹನಾ ಸುಂದರಿ (ಈಗ VPMS ಅಧ್ಯಕ್ಷರು) ಮತ್ತು ಸಂಘದ ಖಜಾಂಚಿ ಲೀಲಾ ರಾಣಿ ಸೇರಿದ್ದಾರೆ. ಈ ಸಂಘಟನೆ ಪ್ರಾರಂಭವಾಗಿದ್ದು ನಗರದಲ್ಲಿನ ಮಾರ್ಗಗಳು, ಆಟೋ ದರ, ಶಾಲಾ-ಕಾಲೇಜು ಮಕ್ಕಳನ್ನು ಬಿಡುವ ಸವಾರಿಗಳು ಮತ್ತು ರೈಲ್ವೆ ನಿಲ್ದಾಣದ ಪಿಕಪ್ಗಳ ಬಗ್ಗೆ ಸಲಹೆಗಳನ್ನು ಹಂಚಿಕೊಳ್ಳುವ ನೆವದೊಂದಿಗೆ. ಆಗ ಇದ್ದುದು ಆರು ಮಹಿಳೆಯರ ಒಂದು ಸಾಧಾರಣ ವಾಟ್ಸಾಪ್ ಗುಂಪು. ಈಗ ಕೇವಲ ಒಂದು ವರ್ಷದಲ್ಲಿ 400 ಸದಸ್ಯರ ಪ್ರಬಲ ಸಂಘಟನೆಯಾಗಿ ಬೆಳೆದಿದೆ.
ಈ ಮಹಿಳೆಯರಲ್ಲಿ ಹಲವರು ತೀರಾ ನಿರ್ಗತಿಕ ಹಿನ್ನೆಲೆಯಿಂದ ಬಂದವರು. ಕೆಲವರು ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ತಮ್ಮ ಜೀವನೋಪಾಯಕ್ಕೆ ದಾರಿ ಕಾಣದೆ ಕಂಗಾಲಾಗಿದ್ದರು. ಇತರರು ಏಕ ಪೋಷಕತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೋಹನಾ ಅವರ ವಿಷಯದಲ್ಲಿ ಹೇಳುವುದಾದರೆ, ಅವರು ಜೀವನ ಸಾಗಿಸಲು ಆಟೋ ಪರವಾನಗಿಯನ್ನು ಪಡೆಯುವುದಕ್ಕೂ ಮೊದಲು ಸಣ್ಣ ವ್ಯವಹಾರಗಳನ್ನು ಆರಂಭಿಸಲು ಪ್ರಯತ್ನಿಸಿದ್ದರು – ಟಿಫಿನ್ ಸೆಂಟರ್, ಫಾಸ್ಟ್-ಫುಡ್ ಸ್ಟಾಲ್, ಮತ್ತು ಬ್ಯೂಟಿ ಪಾರ್ಲರ್ ಕೂಡ ನಡೆಸಿದ್ದರು.
VPMS ಒಂದು ಸುರಕ್ಷತಾ ಜಾಲವಾಗಿದೆ. ಸದಸ್ಯರು ಸಣ್ಣ ಮೊತ್ತದ ಚಂದಾ ನೀಡುತ್ತಾರೆ, ಪ್ರತಿಯಾಗಿ ಅವರಿಗೆ ಕಡಿಮೆ ಬಡ್ಡಿದರದ ಸಾಲಗಳಿಗೆ ಪ್ರವೇಶ (ಪ್ರಾರಂಭದಲ್ಲಿ ರೂ. 10,000 – ನಂತರ ರೂ.50,000 ಕ್ಕೆ ಏರಿಕೆ), ಅಪಘಾತ ಮತ್ತು ಸಾವಿನ ವಿಮೆ ರಕ್ಷಣೆ, ಮತ್ತು ಅನಾರೋಗ್ಯ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಅಲ್ಪ ಹಣಕಾಸಿನ ನೆರವು ಸಿಗುತ್ತದೆ.
ಆದರೆ ಬಹಳಷ್ಟು ಸದಸ್ಯರು ಹೇಳುವಂತೆ, ನಿಜವಾದ ಪ್ರಯೋಜನವಿರುವುದು ಕೇವಲ ಹಣದಲ್ಲಿ ಅಲ್ಲ, ಬದಲಾಗಿ ಗೌರವದಲ್ಲಿ ಮತ್ತು ಚೆನ್ನೈ ನಗರದ ಪುರುಷ ಪ್ರಧಾನವಾದ ರಸ್ತೆಗಳಲ್ಲಿ ತಮ್ಮದೇ ಆದ ಒಂದು ಜಾಗವನ್ನು, ಸ್ವಾತಂತ್ರ್ಯವನ್ನು ಪಡೆಯುವುದರಲ್ಲಿ ಇದೆ.
ಮಾನವೀಯತೆಯ ಪ್ರತಿಬಿಂಬ
'ಆಟೋ ಕ್ವೀನ್ಸ್' (Auto Queens) ತನ್ನ ಪ್ರಮುಖ ಪಾತ್ರಗಳನ್ನು ಸಂತ್ರಸ್ತರ ರೀತಿಯಲ್ಲಿ ಪರಿಗಣಿಸುವುದಿಲ್ಲ, ಬದಲಿಗೆ ಮಹಾನಗರದ ದೈನಂದಿನ ಜೀವನದಲ್ಲಿ ಸಮ್ಮಿಳಿತವಾಗಿರುವ ಎಲ್ಲಾ ವೈರುಧ್ಯಗಳು, ಮನೋಭಾವನೆಗಳು ಮತ್ತು ಲಯಗಳೊಂದಿಗೆ ಅವರಲ್ಲಿರುವ ಸಂಪೂರ್ಣ ಮಾನವೀಯತೆಯನ್ನು ಬಿಂಬಿಸುವ ಪ್ರಯತ್ನ ಮಾಡುತ್ತದೆ. ಒಂದು ಕಡೆ ಲೀಲಾ ಅವರ ಉಗ್ರ ಪ್ರತಿರೋಧ, ಇನ್ನೊಂದು ಕಡೆ ಮೋಹನಾ ಅವರ ದೃಢ ಸಂಕಲ್ಪ ಈ ಚಿತ್ರದ ನಿಜವಾದ ಹೈಲೈಟ್. ಮೋಹನಾ ಅವರದ್ದು ನಿಜವಾಗಿ ಚಿಂತನಶೀಲ ಪಾತ್ರ. ಕೆಲವೊಮ್ಮೆ ಧ್ಯಾನಸ್ಥರಂತೆ ಕಾಣುತ್ತಾರೆ. ಲೀಲಾ ಅವರಂತೂ ಯಾವತ್ತೂ ಹೋರಾಟಕ್ಕೆ ಶಸ್ತ್ರಸಜ್ಜಿತರಂತೆ ಸದಾ ಸಿದ್ಧರಾಗಿರುತ್ತಾರೆ. ಅವರಿಬ್ಬರ ನಡುವಿನ ವ್ಯತ್ಯಾಸವು ತೀಕ್ಷ್ಣ ಸ್ವರೂಪದ್ದಾಗಿದೆ. ಆದರೆ ಸಾರ್ವಜನಿಕ ಸ್ಥಳವನ್ನು ತಮ್ಮ ಕಾರ್ಯಕ್ಷಮತೆಯ ಮೂಲಕ ಮರುವ್ಯಾಖ್ಯಾನಿಸುವ ಅವರ ಬದ್ಧತೆ ಒಂದೇ.
ವಾಹನ ದಟ್ಟಣೆ, ನಗರದ ಗಿಜಿಗುಡುವ ಜನಸಮೂಹವನ್ನು ಚಿತ್ರಿಸುವ ಡ್ರೋನ್ ಶಾಟ್ಗಳಿಂದ ಹಿಡಿದು, ಆಟೋ-ರಿಕ್ಷಾದ ಒಳಗಿನ ಸಂಕುಚಿತತೆಯನ್ನು ಹಿಡಿದಿಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಕಾರ್ಮಿಕ ಒಕ್ಕೂಟದ ಸಭೆಗಳು ಅಥವಾ ಚಲನಚಿತ್ರವು ಪ್ರಾರಂಭವಾದ ಸರಳ ಕಡಲತೀರದ ಪಿಕ್ನಿಕ್ನಲ್ಲಿ ಹೆಣೆಯಲಾಗಿರುವ ಆತ್ಮೀಯ, ಬೆಚ್ಚಗಿನ ಫ್ರೇಮ್ಗಳ ನಡುವೆ ದೃಶ್ಯಗಳು ಓಲಾಡುತ್ತವೆ. ಮಕ್ಕಳನ್ನು ಶಾಲೆಗೆ ಬಿಡುವ ಟ್ರಿಪ್ಗಳನ್ನು ಬುಕಿಂಗ್ ಮಾಡುವುದು, "ಆಟೋ-ಸ್ಟ್ಯಾಂಡ್ಗಳು" ತಮ್ಮ ಪ್ರದೇಶವೆಂದು ಹಕ್ಕು ಸಾಧಿಸುವ ಪುರುಷ ಚಾಲಕರೊಂದಿಗೆ ವಾದಕ್ಕಿಳಿಯುವುದು, ದಿಟ್ಟಿಸಿ ನೋಡುವ ಪ್ರಯಾಣಿಕರನ್ನು ಎದುರಿಸುವ ಛಲ, ಟ್ಯಾಕ್ಸಿಗಳನ್ನು ಮತ್ತು ಕೆಂಪು-ಟೇಪಿನ ರಾಶಿಗಳನ್ನು ದೃಢಚಿತ್ತ ಮತ್ತು ತಾಳ್ಮೆಯಿಂದ ನಿಭಾಯಿಸುವ ದೃಶ್ಯಗಳನ್ನು ಅತ್ಯಂತ ಜತನದಿಂದ ರೂಪಿಸಲಾಗಿದೆ.
ಖುಷಿ, ತಮಾಷೆ, ಕಿರಿಕಿರಿ...
ಹಾಗಂತ ಚಿತ್ರದಲ್ಲಿ ಸಂತೋಷ, ಖುಷಿ, ವಿನೋದವೂ ಇಲ್ಲವೆಂದಲ್ಲ. ಹಾಡುಗಳನ್ನು ಆಲಿಸುತ್ತ, ತಮಾಷೆ ಮಾಡುತ್ತ ಕಾಲಕಳೆಯುವ ದೃಶ್ಯದ ಜೊತೆಗೆ ಟಿಕ್ಟಾಕ್ ವೀಡಿಯೊ ಶೂಟ್ ಮಾಡಲು ಯೋಜಿಸುವುದು, ಸವೆದ ಕಪ್ಗಳಲ್ಲಿ ಚಹಾ ಹೀರುತ್ತ ತಮ್ಮ ದಿನದ ಘಟನೆಗಳನ್ನು ವಿನಿಮಯ ಮಾಡಿಕೊಳ್ಳುವ ಇಬ್ಬರು ಗೆಳತಿಯರು... ಚಿತ್ರದೊಂದಿಗೆ ನಾವೂ ತನ್ಮಯರಾಗುವಂತೆ ಮಾಡುತ್ತದೆ. ಅವರ ಬಾಂಧವ್ಯವು ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ದಿನ ನಿತ್ಯದ ಕಷ್ಟ ಕೋಟಲೆಗಳು ಮತ್ತು ಗೆಲುವು ಸಾಧಿಸಿದ ಘಟನೆಗಳು, ಸೌಹಾರ್ದತೆ ಮತ್ತು ಸಹಯೋಗದ ಸಂಗತಿಗಳೂ ಇಬ್ಬರ ನಡುವೆ ಬಂದು ಹೋಗುತ್ತವೆ. ಅವರು ನಿಟ್ಟುಸಿರು ಬಿಡುವುದೂ ದೈನಂದಿನ ಕಿರಿಕಿರಿಗಳ ಬಗ್ಗೆ ತಮಾಷೆ ಮಾಡುವುದನ್ನೂ ನಾವು ಕಾಣುತ್ತೇವೆ.
ದಿನ ಯಾವುದೇ ಆಗಿದ್ದರೂ ಒಬ್ಬ ಮಹಿಳಾ ಆಟೋ ಚಾಲಕಿ ಕ್ಯೂನಲ್ಲಿ ನಿಲ್ಲುವ ತನ್ನ ಹಕ್ಕನ್ನು ಸಮರ್ಥಿಸಿಕೊಳ್ಳಬೇಕು, ಅಪಹಾಸ್ಯಕ್ಕೊಳಗಾಗದೆ ನ್ಯಾಯಯುತ ದರವನ್ನು ಕೇಳಬೇಕು ಮತ್ತು ತನ್ನ ಲಿಂಗವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ತನಗಾಗಿ ವಿನ್ಯಾಸಗೊಳಿಸಲಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯನ್ನೂ ಸಶಕ್ತವಾಗಿ ಚಿತ್ರಿಸಲಾಗಿದೆ.
ಚಿತ್ರದಲ್ಲಿ ಹೊರಹೊಮ್ಮಿರುವುದು ವ್ಯಕ್ತಿಗತವಾದ ಧೈರ್ಯ-ಸಾಹಸದ ಕಥೆಯಲ್ಲ, ಬದಲಿಗೆ ಸಾರ್ವಜನಿಕ ರೂಢಿಗಳ ಸಾಮೂಹಿಕ ಮರುಹೊಂದಾಣಿಕೆ: ರಸ್ತೆಗಳು ತಮ್ಮ ಇರುವಿಕೆಗೆ ಹೊಂದಿಕೊಳ್ಳಬೇಕೇ ಹೊರತು, ತಾವಲ್ಲ ಎಂಬ ಪ್ರತಿಪಾದನೆಯನ್ನು ಮಹಿಳೆಯರು ಮಾಡುತ್ತಾರೆ. ಆ ಇಬ್ಬರು ಚಾಲಕಿಯರ ನಡುವಿನ ಸಂಬಂಧ ಯಾವುದೇ ಮುಚ್ಚುಮರೆಯಿಲ್ಲದೆ, ಥಳಕು-ಬಳಕುಗಳಿಲ್ಲದೆ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅವರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರಿತಿರುತ್ತಾರೆಂದರೆ, ಅವರ ನಡುವಿನ ಮೌನವೂ ತುಂಬಿಕೊಂಡಂತೆ ಭಾಸವಾಗುತ್ತದೆ. ಇಂತಹ ಆತ್ಮೀಯ ದೃಶ್ಯಗಳೇ ಸಾಮೂಹಿಕ ಶಕ್ತಿಯನ್ನು ತುಂಬುತ್ತದೆ.
ಸಂಬಂಧಗಳಿಗೆ ಹೆಚ್ಚು ಆದ್ಯತೆ
ಒಗ್ಗಟ್ಟು ಎನ್ನುವುದು ಕೇವಲ ಸಿದ್ಧಾಂತಕ್ಕೆ ಕಟ್ಟುಬೀಳುವುದರೊಂದಿಗೆ ಆರಂಭವಾಗುವುದಿಲ್ಲ, ಬದಲಿಗೆ ತಮ್ಮ ಜಾಗದ ಹಂಚಿಕೆ, ಆಯಾಸವನ್ನು ಹಂಚಿಕೊಳ್ಳುವುದು ಮತ್ತು ಸಣ್ಣ ಸಣ್ಣ ಗೆಲುವುಗಳನ್ನು ಹಂಚಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಈ ಚಲನಚಿತ್ರ ಪ್ರತಿಪಾದಿಸಿದ ರೀತಿ ಭಿನ್ನವಾಗಿದೆ. ವ್ಯವಸ್ಥಿತ ಬದಲಾವಣೆ ಏನಿದ್ದರೂ ಮೊದಲು ಸಂಬಂಧಗಳ ಮೇಲೆ ರೂಪಿತವಾಗಿದೆ ಎಂಬ ವಾದ ಇಲ್ಲಿದೆ.
ಬೋರ್ನ್-ಮೌತ್ ವಿಶ್ವವಿದ್ಯಾಲಯದಲ್ಲಿ ತರಬೇತಿಯನ್ನು ಪಡೆದ ಛಾಯಾಗ್ರಾಹಕಿ, ನಿರ್ದೇಶಕಿ ಶ್ರಯಂತಿ ಅವರು ಪುರುಷ ಪ್ರಧಾನ ಪರಿಸರದಲ್ಲಿ ಕಾರ್ಯನಿರ್ವಹಿಸಿದ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು 'ಗಾರ್ಗಿ' ಮತ್ತು 'ದಿ ಫೀಸ್ಟ್' ನಂತಹ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದವರು. ಅನೇಕ ಸೆಟ್ಗಳಲ್ಲಿ ಕಾಣಸಿಗುವ ಕೆಲವೇ ಕೆಲವು ಮಹಿಳಾ ಛಾಯಾಗ್ರಾಹಕರಲ್ಲಿ ಅವರೂ ಒಬ್ಬರು.
ಶ್ರಯಂತಿ ಅವರ ಹಿಂದಿನ ಕಿರುಚಿತ್ರ 'ತಂಬ್ರಮ್ ಕುಕಿಂಗ್' ತಮಿಳು ಬ್ರಾಹ್ಮಣರ ಅಸ್ಮಿತೆಯನ್ನು ಚಿತ್ರಿಸಿದೆ, ಆದರೆ 'ಆಟೋ ಕ್ವೀನ್ಸ್'ನಲ್ಲಿ ಅವರು ಚೆನ್ನೈನ ಕಾರ್ಮಿಕ ವ್ಯವಸ್ಥೆಯಲ್ಲಿ ಜಾತಿ, ವರ್ಗ ಮತ್ತು ಲಿಂಗದ ವಿಚಾರಗಳಿಗೆ ಬದಲಾಗುತ್ತಾರೆ. ಜನರಿಗಿಂತ ಅನುಭವಗಳಲ್ಲಿ ಅವರ ಆಸಕ್ತಿ ಸ್ಥಾಯಿರೂಪ ಪಡೆದುಕೊಳ್ಳುತ್ತದೆ.
ಜಾಗತಿಕ ಮಾನ್ಯತೆ
'ಆಟೋ ಕ್ವೀನ್ಸ್' ಚಿತ್ರವನ್ನು IDFA ಆಯ್ಕೆ ಮಾಡಿರುವುದು ತಮಿಳು ಸಾಕ್ಷ್ಯಚಿತ್ರ ನಿರ್ಮಾಣದ ವಿಚಾರದಲ್ಲಿ ಒಂದು ಮಹತ್ವದ ಕ್ಷಣವಾಗಿದೆ, ಯಾಕೆಂದರೆ ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವಗಳಲ್ಲಿ ಇದಕ್ಕೆ ವಿಶೇಷವಾದ ಸ್ಥಾನವಿದೆ. ಈ ಪ್ರದರ್ಶನವು ತಮ್ಮದೇ ನಗರದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ದೀರ್ಘಕಾಲ ಹೋರಾಡಿದ ಮಹಿಳೆಯರಿಗೆ ಜಾಗತಿಕ ಮಾನ್ಯತೆಯನ್ನು ನೀಡುತ್ತದೆ.
ಈ ಸಮೂಹದ ದೂರಗಾಮಿ ದೃಷ್ಟಿಕೋನವೆಂದರೆ ಗಿಗ್-ಆರ್ಥಿಕತೆಯ ಪಾತ್ರಗಳಲ್ಲಿ ಮಹಿಳೆಯರು ಒಳಗೊಳ್ಳುವುದನ್ನು ಇನ್ನಷ್ಟು ವಿಸ್ತರಿಸುತ್ತದೆ ಮತ್ತು ನಗರಾದ್ಯಂತ ಮಹಿಳಾ ಕಾರ್ಮಿಕರ ಅಗತ್ಯಗಳಿಗೆ ತಕ್ಕಂತೆ ಮೂಲಸೌಕರ್ಯಗಳಲ್ಲಿ ಬದಲಾವಣೆ ತರುವಂತೆ ಒತ್ತಾಯಿಸುವುದು ಕೂಡ ಸೇರಿದೆ. ಇಲ್ಲಿಯವರೆಗೆ, ವೀರ ಪೆಣ್ಗಳ್ ಮುನ್ನೇತ್ರ ಸಂಗಂ (VPMS) ಆಶ್ರಯದಲ್ಲಿ 100 ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದಿದ್ದಾರೆ. ಕಾಗದಪತ್ರಗಳು, ಸಾಲ ಸೌಲಭ್ಯಗಳು, ಸಬ್ಸಿಡಿ ಮತ್ತು ಡಿಜಿಟಲ್ ವೇದಿಕೆಗಳನ್ನು ನಿರ್ವಹಿಸುವ ಆತ್ಮವಿಶ್ವಾಸವನ್ನು ಅವರು ಬೆಳೆಸಿಕೊಂಡಿದ್ದಾರೆ.
'ಆಟೋ ಕ್ವೀನ್ಸ್' ಸಾಕ್ಷ್ಯಚಿತ್ರವು ಅಂತಿಮವಾಗಿ ಚಲನಶೀಲತೆ ಎಂದರೆ ಒಬ್ಬರ ಅಸ್ತಿತ್ವವನ್ನು ಗುರುತಿಸುವುದು, ಸುರಕ್ಷತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಯಾವುದೇ ವಾದ-ವಿವಾದವಿಲ್ಲದೆ ಸಾರ್ವಜನಿಕ ಸ್ಥಳವನ್ನು ಪಡೆದುಕೊಳ್ಳುವ ಹಕ್ಕು. ಮೋಹನಾ ಮತ್ತು ಲೀಲಾ, ಅವರ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ...
ಯಾವುದೇ ಒಂದು ಚಳವಳಿಗೆ ಸಂಪೂರ್ಣ ಒಮ್ಮತದ ಅಗತ್ಯವಿರುವುದಿಲ್ಲ, ಅದು ಮೊದಲಿನಿಂದಲೂ ತಮಗೆ ಸೇರಿದ ಸ್ಥಳವನ್ನು ಧೈರ್ಯದಿಂದ ಪ್ರತಿಪಾದಿಸುವ ದಿಟ್ಟತನವನ್ನು ಹೊಂದಿರಬೇಕು ಎಂಬುದನ್ನು ತೋರಿಸುತ್ತದೆ.

