ಕಬ್ಬಿನ ಬವಣೆ: Part-5| ರಿಕವರಿ, ತೂಕದಲ್ಲಿ ಮೋಸ; ಕಾರ್ಖಾನೆ ಮಾಲೀಕರು ಹೇಳಿದ್ದೇ ಸತ್ಯ! ನೀಡಿದ್ದೇ ದರ?
x

ಕಬ್ಬಿನ ಬವಣೆ: Part-5| ರಿಕವರಿ, ತೂಕದಲ್ಲಿ ಮೋಸ; ಕಾರ್ಖಾನೆ ಮಾಲೀಕರು ಹೇಳಿದ್ದೇ ಸತ್ಯ! ನೀಡಿದ್ದೇ ದರ?

ಕಬ್ಬಿನ ರಿಕವರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮೋಸ ಮಾಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಕಬ್ಬಿನ ರಿಕವರಿ ಮಾಪನದ ಮಾನದಂಡ ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎಂಬುದೇ ಕಬ್ಬು ಬೆಳೆಗಾರರಿಗೆ ತಿಳಿಯುವುದಿಲ್ಲ.


ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆಗೆ (ಎಫ್‌ಆರ್‌ಪಿ) ಒತ್ತಾಯಿಸಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡು, ರೈತರ ಕಣ್ಣೊರೆಸುವ ತಂತ್ರಗಳ ಮೊರೆ ಹೋಗಿವೆ.

ರೈತರ ಪ್ರತಿಭಟನೆಯ ಕಿಚ್ಚನ್ನು ತಣಿಸಲು ತಾತ್ಕಾಲಿಕವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆ ನಡೆಸಿ ಪರಿಹಾರವನ್ನೂ ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ, ಅರ್ಧದಷ್ಟು ರೈತರಿಗೆ ಸರ್ಕಾರ ಪರಿಹಾರ ಸೂತ್ರ ಒಪ್ಪಿಗೆಯಾಗಿಲ್ಲ. ಹಾಗಾದರೆ, ರೈತರ ಬವಣೆಗೆ ಶಾಶ್ವತ ಪರಿಹಾರ ಏನು, ಸರ್ಕಾರಗಳು ಕೈಗೊಳ್ಳಬೇಕಿರುವ ಕ್ರಮಗಳೇನು ಎಂಬುದರ ಬಗ್ಗೆ ರೈತ ನಾಯಕ ಹಾಗೂ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ ವಿವರಿಸಿದ್ದಾರೆ.

ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಬ್ಬು ಬೆಲೆ ನಿಗದಿಯಿಂದ ಮಾತ್ರ ರೈತರ ಸಮಸ್ಯೆ ಬಗೆಹರಿಯಲ್ಲ. ಬೇರೆ ಬೇರೆ ಸಮಸ್ಯೆಗಳು ಸಕ್ಕರೆ ಕಾರ್ಖಾನೆಗಳಿಂದ ಎದುರಾಗುತ್ತಿವೆ ಎಂದು ಹೇಳಿದ್ದಾರೆ.

ಕಬ್ಬಿನ ರಿಕವರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮೋಸ ಮಾಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಕಬ್ಬಿನ ರಿಕವರಿ ಮಾಪನದ ಮಾನದಂಡ ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎಂಬುದೇ ಕಬ್ಬು ಬೆಳೆಗಾರರಿಗೆ ತಿಳಿಯುವುದಿಲ್ಲ. ಕಾರ್ಖಾನೆ ಮಾಲೀಕರೇ ರಿಕವರಿ ಪರೀಕ್ಷೆ ನಡೆಸಿ ಮಾಹಿತಿ ನೀಡುವುದರಿಂದ ಅವರು ಹೇಳಿದ್ದೇ ಸತ್ಯ, ನೀಡಿದ್ದೇ ದರ ಎನ್ನುವಂತಾಗಿದೆ. ಒಬ್ಬೊಬ್ಬ ರೈತರ ಕಬ್ಬಿನ ರಿಕವರಿ ಒಂದೊಂದು ರೀತಿ ಇರುತ್ತದೆ. ಹಾಗಾಗಿ ರಿಕವರಿ ಪಾರದರ್ಶಕವಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಉದಾಹರಣೆಗೆ 1 ಲಕ್ಷ ಟನ್ ಕಬ್ಬು ಅರೆದರೆ ಒಂದೇ ರಿಕವರಿ ದರ ನೀಡುತ್ತಾರೆ, ಆದರೆ ಒಂದು ಲಕ್ಷ ಟನ್ ನಲ್ಲಿ ಯಾವ ರೈತರದ್ದು ಯಾವ ಕಬ್ಬು ಅಂತಾ ಹೇಗೆ ಗೊತ್ತಾಗುತ್ತದೆ ಎಂಬುದೇ ಸಂಶಯ ಮೂಡಿಸುತ್ತದೆ. ಆದ್ದರಿಂದ ಸರ್ಕಾರವೇ ಪ್ರತಿ ಕಾರ್ಖಾನೆಯಲ್ಲಿ ರಿಕವರಿ ಲ್ಯಾಬ್‌ ಆರಂಭಿಸಬೇಕು. ಆಗ ಸರಿಯಾಗಿ ರಿಕವರಿ ಲೆಕ್ಕ ಸಿಗುತ್ತದೆ.‌ ಈ ಹಿಂದೆ ಸಿದ್ದರಾಮಯ್ಯ ಅವರೇ ತಮ್ಮ ಸರ್ಕಾರ ಬಂದರೆ ರಿಕವರಿ ಲ್ಯಾಬ್ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಈಗ ಆ ಭರವಸೆ ಏನಾಯಿತು ಎಂಬುದು ಅವರೇ ಉತ್ತರಿಸಬೇಕು ಎನ್ನುತ್ತಾರೆ ಶಹಜಹಾನ್‌ ಡೊಂಗರಗಾಂವ.

ಡಿಜಿಟಲ್‌ ವೇ ಬ್ರಿಡ್ಜ್ ಬೇಕು

ಈಗ ರೈತರ ಕಬ್ಬನ್ನು ಕಾರ್ಖಾನೆಯವರೇ ತೂಕ ಹಾಕುತ್ತಾರೆ. ಈ ತೂಕದಲ್ಲೂ ಮೋಸ ಆಗುವ ಸಾಧ್ಯತೆ ಇದೆ. ಸರ್ಕಾರವೇ ಪ್ರತಿ ಕಾರ್ಖಾನೆಯಲ್ಲಿ ಡಿಜಿಟಲ್‌ ವೇ ಬ್ರಿಡ್ಜ್ ಸ್ಥಾಪಿಸಬೇಕು. ಆಗ ತೂಕದಲ್ಲಿ ಆಗುವ ಮೋಸ ತಪ್ಪಲಿದೆ.

ನನ್ನ ಅನುಭವದ ಆಧಾರದ ಮೇಲೆ ಯಾವುದೇ ಸಕ್ಕರೆ ಕಾರ್ಖಾನೆಗಳಿಗೆ ನಷ್ಟ ಆಗುವುದಿಲ್ಲ. ಕಬ್ಬಿನ ಉಪ ಉತ್ಪನ್ನಗಳಲ್ಲೂ ಲಾಭವಿದೆ. ಮೊಲಾಸಿಸ್, ಎಥೆನಾಲ್, ವಿದ್ಯುತ್ ಸೇರಿದಂತೆ ಹಲವು ಉತ್ಪನ್ನಗಳು ಕಬ್ಬಿನಿಂದ ತಯಾರಾಗುತ್ತವೆ. ಈಗ ಎಥೆನಾಲ್ ಹಾಗೂ ಮೊಲಾಸಿಸ್ ನಿಂದ ಹೆಚ್ಚು ಲಾಭ ಬರುತ್ತಿದೆ. ಎಥೆನಾಲ್ ಬಳಕೆ ಹೆಚ್ಚಿಸಿರುವುದರಿಂದ ಕಾರ್ಖಾನೆಯವರಿಗೆ ಲಾಭವಾಗಿದೆ. ಪ್ರತಿ ಟನ್‌ಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮೊತ್ತ ಎಥೆನಾಲ್‌ ಒಂದರಿಂದಲೇ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಗುತ್ತದೆ.

ಸರ್ಕಾರವನ್ನು ನಿಯಂತ್ರಿಸುವ ಸಕ್ಕರೆ ಲಾಬಿ

ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕೀಯ ವ್ಯಕ್ತಿಗಳಿಗೆ ಸೇರಿವೆ.‌ ಸಕ್ಕರೆ ಲಾಬಿ ಸರ್ಕಾರವನ್ನು ನಿಯಂತ್ರಿಸುತ್ತಿದೆ. ಪ್ರತಿಭಟನೆ ಆರಂಭದಲ್ಲಿ ಸಿಎಂ‌ ಸಿದ್ದರಾಮಯ್ಯ ಅವರು ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು. ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮಾತನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಕೇಳಲಿಲ್ಲ, ಅದಕ್ಕೆ ಪ್ರತಿಭಟನೆ ಜೋರಾಯಿತು.‌

ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾದರೆ ಸಿಎಂ ಕುರ್ಚಿ ಅಲುಗಾಡುವ ಆತಂಕದಿಂದ ಸಿಎಂ ಸಿದ್ದರಾಮಯ್ಯ ಅವರು ರೈತರ ಪರವಾದ ನಿರ್ಧಾರ ಕೈಗೊಳ್ಳುವಲ್ಲಿ ಎಡವುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ಭಾಗವಾಗಿರುವುದರಿಂದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕಡಿಮೆ ಇವೆ.

ಬೆಲೆ ನಿಗದಿ ವಿಚಾರ ಕೇಂದ್ರಕ್ಕೆ ಸಂಬಂಧಿಸಿದ್ದರೂ ಅನುಷ್ಠಾನವೂ ಸಂಪೂರ್ಣ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಪ್ರತಿಭಟನೆ ನಡೆಸುವ ಒಂದು ರಾಜ್ಯಕ್ಕೆ ಸೀಮಿತವಾಗಿ ಸಹಾಯಧನ ನೀಡಿದರೆ ಬೇರೆ ರಾಜ್ಯಗಳಿಗೂ ನೀಡಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ ರಾಜ್ಯ ಸಲಹಾ ಬೆಲೆ ನೀಡಬಹುದು.‌ ಬೇರೆ ರಾಜ್ಯಗಳು ಇದನ್ನು ನೀಡಿವೆ ಎಂದು ಶಹಜಹಾನ್‌ ಡೊಂಗರಗಾಂವ ಹೇಳಿದ್ದಾರೆ.

ಸರ್ಕಾರದ ನಿರ್ಧಾರ ಪಾಲಿಸಲೇಬೇಕು

ಕಬ್ಬಿನ ಟನ್‌ಗೆ ರಾಜ್ಯ ಸರ್ಕಾರ 50 ರೂ ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ ನೀಡಬೇಕೆಂಬುದು ಸರ್ಕಾರದ ನಿರ್ಧಾರವಾಗಿದೆ. ಆದರೆ ಕೆಲ ಕಾರ್ಖಾನೆಗಳು ಅಪಸ್ವರ ಎತ್ತಿವೆ ಎಂಬ ಸುದ್ದಿಗಳು ಬರುತ್ತಿವೆ. ಸರ್ಕಾರದ ನಿರ್ಧಾರವನ್ನು ಕಾರ್ಖಾನೆಗಳು ಪಾಲಿಸಬೇಕು, ಇಲ್ಲದಿದ್ದರೆ ಕಾರ್ಖಾನೆಗಳನ್ನು ಬಂದ್ ಮಾಡಿಸಬಹುದು. ಈಗ ಸರ್ಕಾರ ಮೇಲ್ವಿಚಾರಣಾ ಮಾಡಬೇಕು ಎಂದು ಹೇಳಿದ್ದಾರೆ.

ಸಂದರ್ಶನದ ಪೂರ್ಣಪಾಠಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Read More
Next Story