ಏಕತಾನತೆಯ ಶೃತಿಯಲ್ಲಿ ಕರಗುವ ಶಕ್ತಿ-ಬುದ್ದಿಗಳ ನಡುವಿನ ʼಯುವʼ ಘರ್ಷಣೆ
x

ಏಕತಾನತೆಯ ಶೃತಿಯಲ್ಲಿ ಕರಗುವ ಶಕ್ತಿ-ಬುದ್ದಿಗಳ ನಡುವಿನ ʼಯುವʼ ಘರ್ಷಣೆ

ʼಯುವʼ ಆರಂಭವಾಗುವುದೇ ಒಂದು ಗ್ಯಾಂಗ್ ವಾರ್‌ ನಿಂದ. ಮಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿಯುವ ನಾಯಕನ ಕೋಪೋದ್ರಿಕ್ತ ದೃಶ್ಯದಿಂದ. ಕಥೆ ಮುಂದುವರಿದಂತೆ ನಾಯಕ ಮತ್ತು ಆತನ ತರಬೇತುದಾರೆ (ಕೋಚ್)‌ ತಾವು ಮಾಡದ ತಪ್ಪಿಗೆ ಬಲಿಯಾಗಿ ಎರಡು ವರ್ಷ ನಿಷೇಧಕ್ಕೊಳಗಾಗುತ್ತಾರೆ. ಆನಂತರ ನಡೆಯುವ ಗ್ಯಾಂಗ್ ವಾರ್‌ ನಿಂದಾಗಿ ಇಡೀ ಕಾಲೇಜಿನ ವಾತಾವರಣ ಹಿಂಸಾತ್ಮಕ ರೂಪ ಪಡೆಯುತ್ತದೆ.


ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಚಿತ್ರವೊಂದರ ಯಶಸ್ಸಿಗೆ ಕೆಜಿಎಫ್‌ ಎಂಬ ಮಂತ್ರದಂಡವೊಂದು ಸಿಕ್ಕಿದೆ. ಯಶ್‌ ಅಭಿನಯದ ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಮಾದರಿಯಲ್ಲಿ ಚಿತ್ರ ನಿರ್ಮಿಸಿದರೆ, ಚಿತ್ರ ಒಂದು ಹಂತಕ್ಕೆ ಯಶಸ್ಸು ಕಾಣುವುದು ಖಚಿತ ಎಂಬ ನಂಬಿಕೆ ಇದೆ. ಚಿತ್ರದಲ್ಲಿ ನಾಯಕನ ʼಪುರುಷಾಕಾರಂʼ ಎನ್ನುವಂಥ ಶಕ್ತಿ ಪ್ರದರ್ಶನದ ಜೋತೆಗೆ, ಒಂದು ಅಹಂಕಾರದ ಗತ್ತಿನಲ್ಲಿ ಪ್ರೇಕ್ಷಕರನ್ನು ಕುಣಿಸುವ ಸಾಲುಗಳನ್ನು ʼಹೊಸ ಶೈಲಿʼ ಯಲ್ಲಿ (ಪಂಚ್‌ ಸಂಭಾಷಣೆ ಎಂದು ಓದಿಕೊಳ್ಳಬಹುದು) ಅಸಹಜವಾಗಿ, ಅವೇದನೀಯವಾಗಿ ಪ್ರೇಕ್ಷಕರಿಗೆ ಅರೆಕತ್ತಲು ದೃಶ್ಯಗಳ ಮೂಲಕ ತಲುಪಿಸಿದರೆ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಬಂದು ಬಿಟ್ಟಿದೆ.

ಆದರೆ ಯುವರಾಜ್‌ ರಾಘವೇಂದ್ರ ರಾಜ್ ಕುಮಾರ್‌ ಅವರ ಯುವ ಚಿತ್ರವನ್ನು ವೀಕ್ಷಿಸಿದರೆ, ಈ ಕೆಜಿಎಫ್‌ ಮಾದರಿಯನ್ನು ಮೀರುವ ಅಲ್ಪ ಪ್ರಯತ್ನ ಮಾಡಿರುವುದು ಸ್ವಲ್ಪ ನೆಮ್ಮದಿ ಕೊಡುತ್ತದೆ. ಇಲ್ಲಿ ಚಿತ್ರದ ನಾಯಕ ತನ್ನ ವಿರೋದಿಗಳ ವಿರುದ್ಧ ಶಕ್ತಿಗಿಂತ ಹೆಚ್ಚು ಬುದ್ದಿವಂತಿಕೆ, ಚಾಣಾಕ್ಷತೆಯನ್ನು ಬಳಸಿ ಗೆಲ್ಲುವುದು ಒಂದು ರೀತಿಯಲ್ಲಿ ಪ್ರೇಕ್ಷಕರಿಗೆ ಮೆಚ್ಚಿಗೆಯಾಗುವ ಸಾಧ್ಯತೆಗಳಿವೆ.

ಚಿತ್ರದಲ್ಲಿ ಹಳೆಯ ಸೂತ್ರಬದ್ಧ ಕಥೆಯೊಂದನ್ನು ನಿರ್ದೇಶಕ ಸಂತೋಷ್‌ ಆನಂದ್ ರಾಮ್‌ ಹೊಸ ಮಾರ್ಗದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ʼಜೀವನದಲ್ಲಿ ಸಮಸ್ಯೆಗಳಿರಬೇಕೇ ಹೊರತು, ಜೀವನವೇ ಸಮಸ್ಯೆಯಾಗಬಾರದುʼ ಎಂಬ ಒಂದು ಸಾಲಿನ ನೀತಿಯನ್ನು ನಾಯಕನ ಜೀವನದ ಮೂಲಕ ಹೇಳುವ ಸಂಭ್ರಮಿತ ಪ್ರಯತ್ನ ʼಯುವʼ ಎಂದರೆ ತಪ್ಪಾಗಲಾರದು.

ಈ ಚಿತ್ರದಲ್ಲಿ ಸಮಸ್ಯೆಗಳ ಆಗರವೇ ತುಂಬಿದೆ. ನಾಯಕನ ಶಿಕ್ಷಣದಲ್ಲಿ ಕಲಿಕೆಯ ಸುತ್ತ ಸುತ್ತುವ ನೂರಾರು ಸಮಸ್ಯೆಗಳ ನಡುವೆ, ಶಿಕ್ಷಣ ವ್ಯವಸ್ಥೆಯಲ್ಲಿ ಅಶಿಕ್ಷೆ ವಾತಾವರಣದಲ್ಲಿ ಅವನಿಗೆದುರಾಗುವ ಸಮಸ್ಯೆಗಳ ಜತೆಗೆ ಬದುಕಿನ ಸಮಸ್ಯೆಗಳನ್ನು ನಿರ್ವಹಿಸುವ ಜವಾಬ್ದಾರಿಯ ನಿರ್ವಹಣೆಯೂ ಒಂದಾಗುತ್ತದೆ. ಕೆಲವು ಸಮಸ್ಯೆಗಳನ್ನು ನಾಯಕ ತನ್ನ ʼಅಹಂʼನಿಂದಾಗಿ ಸೃಷ್ಟಿಸಿಕೊಂಡರೆ, ಇನ್ನು ಕೆಲವು ಸಮಸ್ಯೆಗಳು ಅವನಿಗರಿವಿಲ್ಲದಂತೆಯೇ ಅವನನ್ನು ಆಕ್ರಮಿಸಿಕೊಳ್ಳುತ್ತದೆ. ಈ ಸಮಸ್ಯೆಗಳ ಮಹಾಪೂರವನ್ನು ಆತ ತನ್ನ ಆತ್ಮಗೌರವಕ್ಕೆ ಚ್ಯುತಿ ಬಾರದಂತೆ, ಎದುರಿಸುವ ಬಗೆಯನ್ನು ʼಯುವʼ ಪ್ರೇಕ್ಷಕರ ಮುಂದೆ ಅಚ್ಚುಕಟ್ಟಾಗಿ ಮಂಡಿಸುತ್ತದೆ. ʼಯುವʼದಲ್ಲಿ ದ್ವೇಶವಿದೆ. ಹೋರಾಟವಿದೆ. ಜೀವನ ಪ್ರೀತಿ ಇದೆ. ಸೋಲು, ಹತಾಶೆ, ನೋವು,…ಒಂದು ಸೂತ್ರಾಧಾರಿತ ಚಿತ್ರದ ಗೆಲುವಿಗೆ ಬೇಕರುವುದೆಲ್ಲವೂ ಇದೆ.

ʼಯುವʼ ಆರಂಭವಾಗುವುದೇ ಒಂದು ಗ್ಯಾಂಗ್ ವಾರ್‌ ನಿಂದ. ಮಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿಯುವ ನಾಯಕನ ಕೋಪೋದ್ರಿಕ್ತ ದೃಶ್ಯದಿಂದ. ಕಥೆ ಮುಂದುವರಿದಂತೆ ನಾಯಕ ಮತ್ತು ಆತನ ತರಬೇತುದಾರೆ (ಕೋಚ್)‌ ತಾವು ಮಾಡದ ತಪ್ಪಿಗೆ ಬಲಿಯಾಗಿ ಎರಡು ವರ್ಷ ನಿಷೇಧಕ್ಕೊಳಗಾಗುತ್ತಾರೆ. ಆನಂತರ ನಡೆಯುವ ಗ್ಯಾಂಗ್ ವಾರ್‌ ನಿಂದಾಗಿ ಇಡೀ ಕಾಲೇಜಿನ ವಾತಾವರಣ ಹಿಂಸಾತ್ಮಕ ರೂಪ ಪಡೆಯುತ್ತದೆ. ಚಿತ್ರದಲ್ಲಿ ಬರುವ ಕಾಲೇಜಿನ ಪ್ರಿನ್ಸಿಪಾಲರ ಹಿತನುಡಿಗಳು ಯಾರ ಕಿವಿಗೂ ನಾಟುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯವಾಗಿ ಕಾಲೇಜು ಚಿತ್ರಗಳೆಂದರೆ ಇರುವ ಪೇಲವ ತರಲೆ, ತಮಾಷೆ ಯಾವುದೂ ಇಲ್ಲ.

ಚಿತ್ರದ ಮೊದಲರ್ಧ ಕಲಿಕಾ ಕಾಲದ ಹೋರಾಟ, ದ್ವಿತಿಯಾರ್ಧ ಜೀವನದ ಜತೆಗಿನ ಸಂಘರ್ಷ. ಕಾಣೆಯಾಗುವ ತಂದೆ ಮಾಡಿದ ಸಾಲ ತೀರಿಸುವಲ್ಲಿ ಎದುರಿಸಬೇಕಾದ ಸವಾಲುಗಳು, ಸಾಲ ವಸೂಲಿಗೆ ಬರುವ ಗೂಂಡಾಗಳಿಂದ ಕುಟುಂಬವನ್ನು ಕಾಪಾಡುವ ಹೊಣೆ. ಈ ನಡುವೆ ನಾಯಕನ ದೈಹಿಕ ಶಕ್ತಿ, ಅವನ ಬೌದ್ಧಿಕ ಶಕ್ತಿಯನ್ನು ಮೀರಿ ವಿಜೃಂಭಿಸುತ್ತದೆ. ಈ ನಡುವೆ ನಾಯಕಿ ಸಪ್ತಮಿ ಗೌಡ ಜೊತೆಗಿನ ಸಣ್ಣ ಪ್ರೇಮ ಗೀತೆಯಂಥ ದೃಶ್ಯಗಳು ಮತ್ತು ಆಕೆ ಅವನ ಹೋರಾಟದಲ್ಲಿ ಜೊತೆಗೆ ನಿಲ್ಲುವುದು ಎಂದಿನ ಏಕತಾನ ಕಥನ ಎನ್ನದೆ ವಿಧಿಯಿಲ್ಲ.

ಕಥೆ ಹೇಳುವ ರೀತಿಯಲ್ಲಿ ನೋಡಿದರೆ, ʼಯುವʼ ಎರಡು ಪ್ರತ್ಯೇಕ ಚಿತ್ರಗಳಂತೆ ಕಾಣುತ್ತದೆ. ಮೊದಲರ್ಧ ಶೈಕ್ಷಣಿಕ ಹೋರಾಟ, ದ್ವಿತಿಯಾರ್ಧ ಜೀವಜ ಹೋರಾಟ. ಹಾಗೆ ನೋಡಿದರೆ ಚಿತ್ರ ತನ್ನ ಗತಿಯನ್ನು ಪಡೆದುಕೊಳ್ಳುವುದೇ ದ್ವಿತಿಯಾರ್ಧದಲ್ಲಿ. ಆದರೆ ಜೀವನದ ಹೋರಾಟ ಕಥನ ತೆಳುವಾಗಿದೆ. ಅಪ್ಪ ಅಮ್ಮನಾಗಿ ಅಚ್ಯುತ್‌ ಕುಮಾರ್‌, ತಾಯಿಯಾಗಿ ಸುಧಾರಾಣಿ ಒಂದು ಮಿತಿಯೊಳಗೆ ತಮ್ಮ ಸಹಜಾಭಿನಯದಿಂದ ಪ್ರೇಕ್ಷಕರ ಮೆಚ್ಚಿಗೆ ಗಳಿಸುತ್ತಾರೆ. ಆದರೆ ಇಷ್ಟಪಟ್ಟು ಕಷ್ಟಪಟ್ಟಿದ್ದರೆ, ಪಾತ್ರಗಳಿಗೆ ಇನ್ನಷ್ಟು ಜೀವ ತುಂಬ ಬಹುದಿತ್ತೇನೋ ಎಂಬ ಭಾವವನ್ನೂ ಮೂಡಿಸುತ್ತಾರೆ.

ಒಂದು ಕಾರಣಕ್ಕೆ ಚಿತ್ರ ಇಷ್ಟವಾಗುತ್ತದೆ. ಸಂತೋಷ್‌ ಆನಂದರಾಮ್‌ ಅವರು ಸಿದ್ಧ ಸೂತ್ರಗಳಿಗೆ ಪೂರ್ತಿಯಾಗಿ ಅಂಟಿಕೊಳ್ಳದೆ ತಮ್ಮದೆ ಶೈಲಿಯನ್ನು ಕಂಡುಕೊಂಡಿರುವುದು. ಈ ಚಿತ್ರದಲ್ಲಿ ನಾಯಕ-ನಾಯಕಿ ಕೈ-ಕೈ ಹಿಡಿದುಕೊಂಡು ವೃಂದ ನೃತ್ಯ ಮಾಡುವುದಿಲ್ಲ. ಯುವರಾಜ್‌ ಅವರ ಶಕ್ತಿ ದೌರ್ಬಲ್ಯಗಳೆರಡನ್ನೂ ಆನಂದ್ ರಾಮ್‌ ಶಕ್ತವಾಗಿ ದುಡಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಯುವರಾಜ್‌ ಚಿಕ್ಕಪ್ಪ ಪುನೀತ್‌ ರಾಜಕುಮಾರ್‌ ಅವರನ್ನು ನೆನಪಿಸಿಕೊಳ್ಳಲಾಗಿದೆ. ಬಳಸಿಕೊಳ್ಳಲಾಗಿದೆ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಚಿತ್ರ ಸಹಜವಾಗಿದೆ. ಕಥೆಗೆ ಬೇಕಾದಷ್ಟನ್ನು ಮಾತ್ರ ಆನಂದರಾಮ್‌ ದುಡಿಸಿಕೊಂಡಿದ್ದಾರೆ. ಯುವರಾಜ್‌ ಮಾಸ್‌ ಹೀರೋ ಆಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳಿವೆ. ಆದರೆ ಮುಂದಿನ ಚಿತ್ರಗಳ ನಿರ್ದೇಶಕ ಚಿತ್ರಕಥೆಯನ್ನು ಇನ್ನಷ್ಟು ಹರಿತಗೊಳಿಸಿ ಅವರ ಆಭಿನಯ ಶಕ್ತಿಗೆ ಒತ್ತು ಕೊಡುವಂಥ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

Read More
Next Story